I
ಮಹಾಕವಿ ಕಾಳಿದಾಸನ ಮಹಾಕೃತಿ ಕುಮಾರಸಂಭವವನ್ನು ಕುರಿತು ಜಗತ್ತಿನ ಅನೇಕಭಾಷೆಗಳಲ್ಲಿ ಅಸಂಖ್ಯಗ್ರಂಥಗಳೂ ಲೇಖನಗಳೂ ಬಂದಿವೆ. ಆಂಶಿಕವಾಗಿ, ಸಮಗ್ರವಾಗಿ, ಗದ್ಯ-ಪದ್ಯಾತ್ಮಕವಾಗಿ ನೂರಾರು ಅನುವಾದಗಳೂ ಸಾವಿರಾರು ಅನುಕರಣಗಳೂ ಇದಕ್ಕುಂಟು. ಹೀಗೆ ಬೃಹತ್ತಾದ ಗ್ರಂಥಾಲಯಕ್ಕೂ ಹೆಚ್ಚಾಗಬಲ್ಲಷ್ಟು ಸಾಹಿತ್ಯವಿರುವ ಕುಮಾರಸಂಭವವನ್ನು ಕುರಿತು ಹೊಸತೆನ್ನುವುದನ್ನು ಹೇಳಬಯಸುವವರಿಗೆ ಎಂಟೆದೆ ಬೇಕು. ಆದರೆ ಇಂಥ ಮಹಾಕಾವ್ಯವನ್ನು ಕುರಿತು ಪುನರುಕ್ತಿಪ್ರಾಯವಾದ ಮಾತುಗಳನ್ನಾಡುವ ಬರೆಹವೂ ಮೂಲಾಶ್ರಯದ ಮಾಹಾತ್ಮ್ಯದ ಕಾರಣ ಅಷ್ಟಿಷ್ಟಾದರೂ ಸ್ವಾರಸ್ಯವನ್ನು ತಳೆಯದಿರಲಾರದೆಂಬ ನಚ್ಚಿನಿಂದ ಈ ಲಘುಲೇಖನವನ್ನು ಮೊದಲಿಡುವುದಾಗಿದೆ.
ಕುಮಾರಸಂಭವಮಹಾಕಾವ್ಯದ ಕಥಾವಿಸ್ತರವನ್ನು ಹೀಗೆ ಸಂಗ್ರಹಿಸಬಹುದು:
ದಕ್ಷಾಧ್ವರದಲ್ಲಿ ದಗ್ಧಳಾದ ಸತೀದೇವಿಯು ಮತ್ತೆ ತನ್ನ ಪತಿ ಪರಮೇಶ್ವರನನ್ನು ಸೇರಲು ಮೇನಾ-ಹಿಮವಂತರ ಮಗಳಾಗಿ ಜನಿಸುತ್ತಾಳೆ; ಲೋಕೋತ್ತರಸುಂದರಿಯಾಗಿ, ವಿದ್ಯಾಪ್ರಬುದ್ಧೆಯಾಗಿ ಬೆಳೆಯುತ್ತಾಳೆ. ಎಳವೆಯಿಂದಲೇ ಶಿವನಲ್ಲಿ ತ್ರಿಕರಣಪೂರ್ವಕವಾದ ಪ್ರೀತಿ-ಭಕ್ತಿಗಳನ್ನುಳ್ಳ ಪಾರ್ವತಿಯು ಆತನನ್ನೇ ಪರಿಣಯಿಸಲು ನಿಶ್ಚಯಿಸಿ ತನ್ನ ತಂದೆ-ತಾಯ್ಗಳ ಅನುಮತಿಯಿಂದ ತನ್ನದೇ ಹಾದಿಯಲ್ಲಿ ಸಾಗುತ್ತಾಳೆ. ಸತೀದೇವಿಯನ್ನು ಕಳೆದುಕೊಂಡ ಶಿವನು ವಿರಕ್ತನಾಗಿ ತಪೋಮಗ್ನನಾಗಿದ್ದಾನೆ. ಇಂಥವನನ್ನು ಉಮೆಯು ಮತ್ತೆ ಸಂಸಾರಕ್ಕೆ ಸೆಳೆಯಬೇಕಾಗಿದೆ (ಸರ್ಗ ೧). ಇತ್ತ ಶಿವನ ವೈರಾಗ್ಯವನ್ನು ದುರುಪಯೋಗಿಸಿಕೊಳ್ಳಲೆಳಸಿದ ರಾಕ್ಷಸ ತಾರಕಾಸುರನು ಶಿವಪುತ್ರನಿಂದಲ್ಲದೆ ತನಗೆ ಮತ್ತಾರಿಂದಲೂ ಸಾವು ಬರದಂತೆ ಬ್ರಹ್ಮನಿಂದ ವರವನ್ನು ಗಳಿಸಿ ಲೋಕಕಂಟಕನಾಗಿದ್ದಾನೆ. ಇದರಿಂದ ನೊಂದು ನಿಸ್ಸಹಾಯರಾದ ದೇವತೆಗಳೂ ಋಷಿಗಳೂ ಜಗದ್ಧಿತಚಿಂತಕರೂ ಆದವರೆಲ್ಲ ಬ್ರಹ್ಮನನ್ನು ಪರಿಹಾರಕ್ಕಾಗಿ ಬೇಡಿದ್ದಾರೆ. ವಿಧಾತನು ತಪೋಮಗ್ನನಾದ ಶಿವನನ್ನು ಬಹಿರ್ಮುಖನನ್ನಾಗಿಸಿ ಪಾರ್ವತಿಯೊಡನೆ ಒಂದಾಗಿಸುವುದೊಂದೇ ಇದಕ್ಕೆ ತರುಣೋಪಾಯವೆಂದು ಸೂಚಿಸಿದ್ದಾನೆ (ಸರ್ಗ ೨). ಇದನ್ನರಿತು ಅತ್ಯುತ್ಸಾಹದಿಂದ ದೇವೇಂದ್ರನು ಅಚಿರದಲ್ಲಿಯೇ ಶಿವನು ಗೌರಿಯಲ್ಲಿ ಆಸಕ್ತನಾಗುವಂತೆ ಮಾಡಲು ಬಯಕೆಯ ದೇವತೆ ಕಾಮನನ್ನು ಪ್ರೇರಿಸಿ ನಿಯೋಜಿಸಿದ್ದಾನೆ. ಶಿವನಂಥ ಶಿವನನ್ನೂ ಮರುಳುಗೊಳಿಸುವ ಹಠದಿಂದ ಸಪತ್ನೀಕನಾದ ಮನ್ಮಥನು ತನ್ನ ಗೆಳೆಯ ವಸಂತನ ಪರಿವಾರದೊಡಗೂಡಿ ಹರನ ಮೇಲೆಯೇ ಸುಕುಮಾರಮನೋಹರವಾದ ಜೈತ್ರಯಾತ್ರೆಗೆ ತೊಡಗಿದ್ದಾನೆ. ಕಾಮನ ಪ್ರಭಾವದಿಂದ ಶಿಶಿರರ್ತುವು ಮುಗಿಯುವ ಮೊದಲೇ ಕೈಲಾಸದ ಪರಿಸರಕ್ಕೆಲ್ಲ ವಸಂತವೈಭವವು ದಾಳಿಯಿಟ್ಟಿದೆ. ಇಂಥ ಪ್ರಣಯಾನುಕೂಲಿಯಾದ ಸಮಯದಲ್ಲಿ ಮನ್ಮಥನು ಕಠೋರತಪೋಮೂರ್ತಿ ಕಪರ್ದಿಯನ್ನು ಕಂಡು ಕ್ಷಣಕಾಲ ಕಂಗೆಟ್ಟರೂ ಅವನಿಗೆ ಜಯವಾಗಲೆಂದು ಆಶ್ವಾಸನೆಯೀಯುವಂತೆ ಶೃಂಗಾರಸಾಕಾರೆಯಾಗಿ ಗೌರಿಯು ಶಿವನ ಪರಿಚರ್ಯೆಗೆಂದು ಅತ್ತ ಸುಳಿದಿದ್ದಾಳೆ. ಇದರಿಂದ ಹುರುಪುಗೊಂಡ ಕಾಮನು ಸಮಯವನ್ನು ಸಾಧಿಸಿ ತನ್ನ ಸುಮಸಾಯಕಗಳನ್ನು ಮುಕ್ಕಣ್ಣನತ್ತ ಬೀರಿದಾಗ ಕಿಂಚಿತ್ತಾಗಿ ವಿಚಲಿತನಾಗಿದ್ದ ಹರನು ತನ್ನೀ ಕ್ಷೋಭೆಗೆ ಕಾರಣನಾದ ಮಾರನನ್ನು ಕಂಡು ಕುಪಿತನಾಗಿ ಕೆಂಡಗಂಣ್ಣಿಂದಲೇ ಸುಟ್ಟು ಬೂದಿಮಾಡಿ ಮಾಯವೇ ಆದನು. ತನ್ನ ಸೇವೆ-ಸೌಜನ್ಯ, ಒನಪು-ವಯ್ಯಾರಗಳಿಂದಲೇ ಶಿವನು ತನ್ನವನಾಗುವನೆಂದು ಆವರೆಗೆ ನಚ್ಚಿಕೊಂಡಿದ್ದ ಪಾರ್ವತಿಗೆ ಹರನ ಈ ವೈಮುಖ್ಯವು ನುಂಗಲಾರದ ತುತ್ತಾಗಿ, ತನ್ನ ಹೆಣ್ತನಕ್ಕೇ ಒಡ್ಡಿದ ಸವಾಲಾಗಿ, ಹತಾಶೆ-ಅಪಮಾನಗಳಿಂದ ಕಂಗೆಟ್ಟು ಮನೆಸೇರುತ್ತಾಳೆ (ಸರ್ಗ ೩). ಇತ್ತ ತನ್ನ ಕಣ್ಣೆದುರೇ ಭಸ್ಮಾವಶಿಷ್ಟನಾದ ಪತಿ ಮನ್ಮಥನನ್ನು ಕಳೆದುಕೊಂಡ ರತಿದೇವಿ ಹೃದಯವಿದ್ರಾಕವಕವಾಗಿ ದುಃಖಿಸುತ್ತಾಳೆ. ಬಯಕೆಯ ಭಗವಂತನೇ ಅಳಿದ ಬಳಿಕ ಸಮಸ್ತಸುಖಭೋಗದ ಸಾಕಾರವೆನಿಸಿದ ರತಿಗೆ ಬಾಳೆಲ್ಲಿ? ಆದರೆ ಅವಳಿಗೆ ದೈವವು ಗಿರಿಜಾ-ಶಂಕರರ ವಿವಾಹದ ಬಳಿಕ ಮದನನು ಮತ್ತೆ ಮೈದಳೆವನೆಂದೂ ಆಗ ಅವನು ಕೇವಲ ರತಿಗೆ ಮಾತ್ರ ತೋರಿಕೊಳ್ಳುವ, ಉಳಿದವರ ಪಾಲಿಗೆ ಅನಂಗನಾಗಿರುವ ಪರಿಯಲ್ಲಿ ಮತ್ತಷ್ಟು ಅರ್ಥಪೂರ್ಣನಾಗುವನೆಂದೂ ಆಶ್ವಾಸನೆಯನ್ನೀಯುವುದು (ಸರ್ಗ ೪). ಬಳಿಕ ತಪೋಮೂರ್ತಿಯನ್ನೊಲಿಸಿಕೊಳ್ಳಲು ತಪಸ್ಸೊಂದೇ ದಾರಿಯೆಂದು ತಿಳಿದು, ತಾನೊಲಿದವರಿಗೆ ಅವರ ಬಗೆಯಲ್ಲಿ ಸೊಗಸಾಗಿ ತೋರುವುದೇ ದಿಟವಾದ ಚೆಲುವಿನ ಪರಿಯೆಂಬ ನಿಶ್ಚಯದಿಂದ ಉಗ್ರತಪಸ್ಸಿನಲ್ಲಿ ಮಗ್ನಳಾಗುತ್ತಾಳೆ.
ದೇಹಸೌಂದರ್ಯಕ್ಕಿಂತ ಆತ್ಮಸೌಂದರ್ಯವೇ ಮಿಗಿಲೆಂಬ ಮೌಲ್ಯವನ್ನು ಅನುಸಂಧಿಸಿ ಪರಿಪಾಕಗೊಂಡ ಆಕೆಯನ್ನು ಶಿವನು ಒಂದು ಸಂವತ್ಸರದ ಬಳಿಕ ಸಕಾಲವಸಂತದ ಹೊತ್ತಿಗೆ ತಾನೇ ವಸಂತನೆಂಬಂತೆ ವಟುವೇಷಧಾರಿಯಾಗಿ ಬಂದು ಹೃದ್ಯವಿಧಿಯಿಂದ ಪರೀಕ್ಷಿಸಿ ಅವಳ ಪ್ರೇಮವು ಪವಿತ್ರ ಮತ್ತು ಲೋಕೋತ್ತರವೆಂದರಿತು ಆಕೆಗೆ ತನ್ನನ್ನೇ ಸಮರ್ಪಿಸಿಕೊಳ್ಳುತ್ತಾನೆ (ಸರ್ಗ ೫).
ತನ್ನ ತಪೋನಿಷ್ಠೆಗೆ ತಾನಾಗಿ ಒಲಿದುಬಂದ ನಲ್ಲನೊಡನೆ ಒಡನೆಯೇ ಲಲ್ಲೆಗೆರೆಯದ ಗಿರಿಜೆಯು ಆತನು ತನ್ನನ್ನು ವಿಧಿವತ್ತಾಗಿ ಪರಿಣಯಿಸಲು ತನ್ನ ತಾಯ್ತಂದೆಯರನ್ನು ಶಿಷ್ಟಾಚಾರದಂತೆ ಅಭ್ಯರ್ಥಿಸಬೇಕೆಂದು ನಿವೇದಿಸಿ ಮನೆಗೆ ತೆರಳುವಳು. ಜಗದೀಶ್ವರನಾದರೂ ಸಾಮಾನ್ಯಜಗತ್ತಿನ ಸಂಪ್ರದಾಯವನ್ನು ಬಿಡದೆ ಅರುಂಧತೀದೇವಿಯೊಡನೆ ಸಪ್ತರ್ಷಿಗಳನ್ನು ಜೂತೆಮಾಡಿ ಹಿಮವಂತನ ಬಳಿಗೆ ಕನ್ಯಾರ್ಥಿತ್ವಕ್ಕಾಗಿ ಕಳುಹುವನು. ಇವರೆಲ್ಲರ ಮಾತಿಗೆ ಮಿಗಿಲಾಗಿ ಮುದವಾಂತ ಹಿಮವಂತನು ತನ್ನ ಪತ್ನಿ ಮೇನೆಯ ಒಪ್ಪಿಗೆಯನ್ನೂ ಪಡೆದು ಶಿವ-ಶಿವೆಯರ ಮದುವೆಗೆ ಮುಹೂರ್ತವನ್ನು ನಿಶ್ಚಯಿಸುವನು (ಸರ್ಗ ೬). ಬಳಿಕ ಮಹಾದೇವನು ಹಿಮವಂತನ ರಾಜಧಾನಿ ಓಷಧಿಪ್ರಸ್ಥಕ್ಕೆ ಮೆರವಣಿಗೆಯಲ್ಲಿ ಬಂದು ಉಮಾದೇವಿಯನ್ನು ಬ್ರಾಹ್ಮವಿವಾಹಪದ್ಧತಿಯಿಂದ ಆರ್ಷವೈಭವದೊಡನೆ ಪರಿಣಯಿಸುವನು. ಇದಕ್ಕೆ ಸಾಕ್ಷಿಯಾದ ಹಿಮವಂತನ ಪ್ರಜೆಗಳೂ ದೇವತೆಗಳೂ ಮಿಗಿಲಾಗಿ ಹರ್ಷಿಸುವರು (ಸರ್ಗ ೭). ಅನಂತರ ಪಾರ್ವತಿಯು ಶಿವನೊಡನೆ ಕ್ರಮಕ್ರಮವಾಗಿ ತನ್ನ ಕನ್ಯಾಸಹಜವಾದ ಲಜ್ಜೆಯನ್ನು ನೀಗಿ ಪ್ರಣಯಕೇಲಿಯಲ್ಲಿ ತೊಡಗುವಳು. ಶಂಕರನು ಅವಳೊಡನೆ ಆನಂದದಿಂದ ಮಧುಚಂದ್ರದ ಪ್ರವಾಸವನ್ನು ಕಯ್ಕೊಂಡು ಕೊನೆಗೆ ಕೈಲಾಸಕ್ಕೆ ಬರುವನು. ಹೀಗೆ ಕುಮಾರನ ಜನನದ ಸೂಚನೆಯೊಡನೆ ಕಾವ್ಯವು ಮುಗಿಯುವುದು (ಸರ್ಗ ೮). ಈಗ ಕುಮಾರಸಂಭವಕಾವ್ಯವು ಹದಿನೇಳು ಸರ್ಗಗಳಷ್ಟು ವಿಸ್ತೃತವಾಗಿ ದೊರಕುತ್ತಿದ್ದರೂ ಎಂಟು ಸರ್ಗಗಳ ವ್ಯಾಪ್ತಿಗೆ ಬರುವ ಇದಿಷ್ಟನ್ನು ಮಾತ್ರ ಇಡಿಯ ಸಂಸ್ಕೃತಸಾಹಿತ್ಯದ ವಿದ್ವತ್ಪರಂಪರೆಯು ಕಾಳಿದಾಸನ ಮೂಲಕೃತಿಯೆಂದು ಒಕ್ಕೊರಲಿನಿಂದ ಒಪ್ಪಿದೆ. ಇದು ಸರ್ವಥಾ ವಿಚಾರಸಹವೇ ಆಗಿದೆ. ಮಾತ್ರವಲ್ಲ, ಇನ್ನುಳಿದ ಕಾವ್ಯಭಾಗವು ನೀರಸವೂ ಹೌದು, ಮತ್ತಾವುದೋ ಅಲ್ಪಪ್ರತಿಭಾಶಾಲಿಯ ರಚನೆಯೂ ಹೌದು. ಹೀಗಾಗಿ ಕುಮಾರಸಂಭವವನ್ನು ಕುರಿತ ಯಾವುದೇ ವಿವೇಚನೆಗೂ ಅದು ಬಹಿರ್ಭೂತವಾಗಿದೆ.
II
ಕೇವಲ ಎಂಟು ಸರ್ಗಗಳ, ಆರುನೂರ ಒಂಬತ್ತು ಪದ್ಯಗಳಷ್ಟೇ ಹರಹಿನ (೬೦+೬೪+೭೬+೮೬+೯೫+೯೫+೯೧) ಕುಮಾರಸಂಭವಕೃತಿಯು ಅಭಿಜಾತಸಂಸ್ಕೃತದ ಸರ್ವೋಚ್ಚಮಹಾಕಾವ್ಯಗಳ ಪೈಕಿ ಅಗ್ರಗಣ್ಯವೆನಿಸಿ ಆದರಪಾತ್ರವಾಗಿರುವುದೊಂದು ರಸವಿಸ್ಮಯ. ಜಗತ್ಸಾಹಿತ್ಯದಲ್ಲಿ ಇದಕ್ಕಿಂತ ಚಿಕ್ಕ ಗಾತ್ರದ ಮತ್ತೊಂದು ಮೌಲಿಕಮಹಾಕಾವ್ಯವಿಲ್ಲವೆಂದರೂ ಸರಿ. ಹಾಗೆಂದ ಮಾತ್ರಕ್ಕೆ ಇದರ ಗುಣಕ್ಕೆ ಯಾವುದೇ ಚ್ಯುತಿಯಿಲ್ಲ. ಪ್ರತ್ಯುತ ಅದು ಮತ್ತೆಷ್ಟೋ ಬೃಹದಾಕಾರದ ಮಹಾಕಾವ್ಯಗಳಿಗಿಂತ ಮಿಗಿಲೇ ಎಂಬಂತಿದೆಯೆಂದರೂ ಯುಕ್ತ. ಅಂತಯೇ ಇಲ್ಲಿಯ ಚ್ಛಂದೋವೈವಿಧ್ಯವೂ ಹೆಚ್ಚಿನದಲ್ಲ. ಕೇವಲ ಎಂಟೇ ವೃತ್ತಗಳನ್ನು ಕವಿಯು ಬಳಸಿದ್ದಾನೆ. ಇವುಗಳ ಪೈಕಿ ಐದು ಸರ್ಗವಿನ್ಯಾಸಕ್ಕೂ (ಶ್ಲೋಕ – ಎರಡನೆಯ ಮತ್ತು ಆರನೆಯ ಸರ್ಗಗಳಲ್ಲಿ, ಉಪಜಾತಿ – ಮೊದಲನೆಯ, ಮೂರನೆಯ ಮತ್ತು ಏಳನೆಯ ಸರ್ಗಗಳಲ್ಲಿ, ವಂಶಸ್ಥ – ಐದನೆಯ ಸರ್ಗದಲ್ಲಿ, ವಿಯೋಗಿನೀ – ನಾಲ್ಕನೆಯ ಸರ್ಗದಲ್ಲಿ, ಮತ್ತು ರಥೋದ್ಧತಾ – ಎಂಟನೆಯ ಸರ್ಗದಲ್ಲಿ) ಮೂರು ಸರ್ಗಾಂತ್ಯಕ್ಕೂ ಬಳಕೆಯಾಗಿವೆ (ಮಾಲಿನೀ – ಆರು ಪದ್ಯಗಳು, ವಸಂತತಿಲಕ – ನಾಲ್ಕು ಪದ್ಯಗಳು ಮತ್ತು ಪುಷ್ಪಿತಾಗ್ರ – ಎರಡು ಪದ್ಯಗಳು). ಅಂತೆಯೇ ದುರೂಹ್ಯವಾದ, ವೈಯಾಕರಣವೈಶಿಷ್ಟ್ಯಕಟಾಕ್ಷಿತವಾದ ಯಾವುದೇ ಬಗೆಯ ಪದಪ್ರಯೋಗಗಳನ್ನೂ ದುಷ್ಕರವೆನಿಸಬಲ್ಲ ಎಂಥದ್ದೇ ಶಬ್ದಾರ್ಥಾಲಂಕಾರಗಳ ಬಳಕೆನ್ನೂ ಕವಿಯು ಮಾಡಿಲ್ಲದಿರುವುದು ಆತನ ಸಹಜಸಂಯಮ ಮತ್ತು ಸಾರಳ್ಯಭವ್ಯತೆಗಳನ್ನೇ ಸಾರಿವೆ. ಈ ವಿವರಗಳೆಲ್ಲ ಪರ್ಯಾಯವಾಗಿ ಕವಿಯ ಸ್ವರೂಪನಿಷ್ಠೆಯನ್ನೇ ಧ್ವನಿಸುತ್ತಿವೆ.
ಪುರಾಣೇತಿಹಾಸಗಳಲ್ಲಿ ಈ ಕಥೆಯ ಕೆಲವೊಂದು ವಿವರಗಳಿದ್ದರೂ ಅಲ್ಲಿಯ ಸ್ಥೂಲವೂ ಸಂಕ್ಷಿಪ್ತವೂ ಆದ ಅಲ್ಲಿಯ ಹಂದರವನ್ನು ಇಷ್ಟು ಸ್ವಾರಸ್ಯಕಾರಿಯೂ ಧ್ವನಿಪೂರ್ಣವೂ ಆದ ನಿತ್ಯಜೀವತ್ಕಲೆಯನ್ನಾಗಿಸಿದ ಶ್ರೇಯಸ್ಸು ಸರ್ವಥಾ ಕಾಳಿದಾಸನದೇ. ಹೆಚ್ಚೇನು, ಅವೆಷ್ಟೋ ಪುರಾಣೋಪಪುರಾಣಗಳು ಕುಮಾರಸಂಭವಕಾವ್ಯದಿಂದಲೇ ತಮ್ಮ ತಮ್ಮ ಕಥಾನಕಗಳನ್ನೂ ಹೆಚ್ಚಿನ ವಿವರಗಳನ್ನೂ ಗ್ರಹಿಸಿವೆಯೆಂದರೆ ತಪ್ಪಲ್ಲ. ಮುಖ್ಯವಾಗಿ ಆರುನೂರ ಮೂರು ಪದ್ಯಗಳಷ್ಟು ವಿಸ್ತರದ ಈ ಕೃತಿಯಲ್ಲಿ ಅದೆಷ್ಟು ನಿರ್ದಯವಿಮರ್ಶೆಯನ್ನು ಮಾಡಿದರೂ ಅದೆಂಥ ನಿಶಿತಪರೀಕ್ಷೆಯನ್ನು ನಡಸಿದರೂ ಕನಿಷ್ಠ ಐನೂರು ಪದ್ಯಗಳಾದರೂ ಅಜರಾಮರವಾಗಬಲ್ಲ ಸತ್ತ್ವ-ಸ್ವಾರಸ್ಯ-ಸೌಂದರ್ಯಗಳನ್ನು ಹೊಂದಿವೆ. ಈ ಮಟ್ಟದ ರಸಸಾಂದ್ರತೆ-ಧ್ವನಿದೀಪ್ತತೆಗಳನ್ನು ನಾವು ವಿಶ್ವಸಾಹಿತ್ಯದ ಇನ್ನಿತರಮಹಾಕೃತಿಗಳಲ್ಲಿ ಕಾಣುವುದು ಕಷ್ಟ. ಹೀಗೆ ಅಡಕವೂ ಅಚ್ಚುಕಟ್ಟೂ ಆದ ಪ್ರಕೃತ ಕಾವ್ಯದಲ್ಲಿ ಕವಿಪ್ರತಿಭೆಯು ತನ್ನೆಲ್ಲ ಸಾಧ್ಯತೆಗಳನ್ನೂ ಔಚಿತ್ಯವರಿತು ಸೂರೆಗೊಂಡಿರುವುದು ಸ್ಪಷ್ಟ.
ಕುಮಾರಸಂಭವವು ನೇರವಾದ ಕಥೆ. ಇಲ್ಲಿ ಮುಖ್ಯೇತಿವೃತ್ತವಾದ ಪಾರ್ವತೀ-ಪರಮೇಶ್ವರರ ವಿವಾಹಕ್ಕೆ ಪೂರಕವಲ್ಲದ ಯಾವುದೇ ಶಾಖಾಚಂಕ್ರಮಣವಿಲ್ಲ. ಸುಮಾರು ಒಂದೂವರೆ ಸರ್ಗಗಳಷ್ಟು ವಿಸ್ತರಿಸಿಕೊಳ್ಳುವ ತಾರಕಾಸುರಸಂತ್ರಸ್ತದೇವತೆಗಳ ವೃತ್ತಾಂತವೂ ಆದ್ಯಂತವಾಗಿ ಗಿರಿಜಾ-ಶಂಕರರ ವಿವಾಹಕ್ಕೇ ನಡಸುವ ಯತ್ನವಾಗುವ ಕಾರಣ ಪ್ರಧಾನಕಥಾನಕವು ಯಾವುದೇ ರಸವಿಘ್ನಗಳಿಲ್ಲದೆ ಸಾಗುತ್ತದೆ. ಮಾತ್ರವಲ್ಲ, ಯಾವುದೇ ಅಭಿಜಾತಕಾವ್ಯಕ್ಕೆ ಅನಿರ್ವಾರ್ಯವೆನಿಸಿದ ವರ್ಣನೆಗಳ ಪೈಕಿ ಯಾವೊಂದನ್ನೂ ಕೇವಲ ಶಾಸ್ತ್ರಪೂರ್ತಿಗಾಗಿ ಎಳೆದು ತರದೆ, ಇತಿವೃತ್ತಕ್ಕೆ ಯಾವುದೆಲ್ಲ ಎಷ್ಟೆಲ್ಲ ಪ್ರಮಾಣದಲ್ಲಿ ಬೇಕೋ ಅದನ್ನೆಲ್ಲ ಅಷ್ಟೇ ಪ್ರಮಾಣದಲ್ಲಿ ಹವಣಿಸಿರುವ ಕಾರಣ ಅನೌಚಿತ್ಯಕ್ಕೆ ಸ್ವಲ್ಪವೂ ಎಡೆಯಾಗಿಲ್ಲ; ರಚನೆಯ ಅಡಕಕ್ಕೆ ತುಸುವೂ ಎರವಾಗಿಲ್ಲ. ಇದು ನಿಜಕ್ಕೂ ಹಿರಿದಾದ ಸಾಧನೆಯೇ ಸರಿ.
ಇನ್ನು ಆನುಷಂಗಿಕವಾಗಿ ಮತ್ತೊಂದು ಅಂಶವನ್ನು ಗಮನಿಸಬಹುದಾದರೆ ಕುಮಾರಸಂಭವವು ಪ್ರಾಯಶಃ ಇದಂಪ್ರಥಮ ಹಾಗೂ ಅದ್ವಿತೀಯವಾದ ನಾಯಿಕಾಕೇಂದ್ರಿತಮಹಾಕಾವ್ಯವೆನಿಸಿದೆ. ವ್ಯಾಸ-ವಾಲ್ಮೀಕಿ-ಹೋಮರ್ ಮುಂತಾದ ಕವೀಶ್ವರರ ಮಹಾಕೃತಿಗಳಲ್ಲಿ ಸ್ತ್ರೀಪಾತ್ರಗಳಿಗೆ ಪ್ರಾಮುಖ್ಯವಿದ್ದರೂ ಅಲ್ಲಿಯ ನಾಯಿಕೆಯರಿಂದಲೇ ಕಥಾನಕದ ಎಷ್ಟೋ ಬೆಳವಳಿಗೆಗಳಾದರೂ ಅಲ್ಲಿ ಕಾಣದ ವಿಶಿಷ್ಟತೆಯನ್ನು ನಾವು ಕುಮಾರಸಂಭವದಲ್ಲಿ ನೋಡಬಹುದು. ಇದು ಸಂಪೂರ್ಣವಾಗಿ ಪಾರ್ವತಿಯನ್ನು ಕೇಂದ್ರೀಕರಿಸಿದ ಕಾವ್ಯ. ಇಲ್ಲಿ ಆಕೆಯ ಹುಟ್ಟಿನಿಂದ ಮೊದಲ್ಗೊಂಡು ಮಧುಚಂದ್ರದ ವರೆಗೆ ಕಥಾನಕವು ಹಬ್ಬಿದೆ ಮತ್ತು ಇಲ್ಲಿಯ ಪ್ರತಿಯೊಂದು ಕ್ರಿಯೆಯೂ ಪ್ರತಿಯೊಂದು ಘಟನೆಯೂ ಆಕೆಯನ್ನು ನೇರವಾಗಿ ಕೇಂದ್ರೀಕರಿಸಿದೆ. ಹೆಚ್ಚೇನು, ಇದು ಪಾರ್ವತಿಯದೇ ಜೀವಕಾವ್ಯ.
ನಾಯಕನಾದ ಶಿವನು ಬಲುಮಟ್ಟಿಗೆ ಸ್ಥಾಣುವೇ ಹೌದು; ಸಾಕ್ಷಿಯೇ ಹೌದು. ಕೇವಲ ಇಲ್ಲಿಯ ಸರ್ಗಗಳ ಹೆಸರುಗಳನ್ನು ಗಮನಿಸಿದರೂ ಇದು ನಾಯಿಕಾಪ್ರಧಾನವಾದ ಕಾವ್ಯವೆಂಬ ಸಂಗತಿಯು ನಮಗೆ ಸ್ಫುರಿಸದಿರದು (ಉಮೋತ್ಪತ್ತಿ, ತಪಃಫಲೋದಯ, ಉಮಾಪ್ರದಾನ, ಉಮಾಪರಿಣಯ, ಉಮಾಸುರತ). ಇಲ್ಲಿ ನಾಯಕನಾದ ಶಿವನು ಓರ್ವ ವ್ಯಕ್ತಿಯೆನ್ನುವುದಕ್ಕಿಂತ ಒಂದು ತತ್ತ್ವವಾಗಿದ್ದಾನೆ. ಆತನಲ್ಲಿ ಮೂರ್ತತೆಗಿಂತ ಅಮೂರ್ತತೆಯೇ ಮಿಗಿಲಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಅವನಲ್ಲಿ ಮಾನುಷಕ್ಕಿಂತ ಅತಿಮಾನುಷವೇ ಹೆಚ್ಚಾಗಿದೆ. ವಾಲ್ಮೀಕಿ-ವ್ಯಾಸರ ರಾಮ-ಕೃಷ್ಣರಿಗಿಂತಲೂ ಕಾಳಿದಾಸನ ಶಿವನು ಮಿಗಿಲಾಗಿ ಅಮೂರ್ತ-ಅತಿಮಾನುಷಗಳ, ಸಾಕ್ಷಿ-ಸತ್ತ್ವಗಳ ನೆಲೆಯಲ್ಲಿ ನಿಲ್ಲುತ್ತಾನೆ. ಇಂಥ ಪಾತ್ರವನ್ನು ಚಿತ್ರಿಸುವುದಿರಲಿ, ಕಲ್ಪಿಸುವುದೂ ಸಹ ಯಾವುದೇ ಕಲಾವಿದನಿಗೆ ಹಿರಿದಾದ ಸವಾಲು. ಇನ್ನಿದನ್ನು ಹದವರಿತು ನಿರ್ವಹಿಸುವುದು ಮಹಾಕವಿಗಷ್ಟೇ ಸಾಧ್ಯ.
ಆದರೆ ಪಾರ್ವತಿಯು ಹೀಗಲ್ಲ. ಕಾಳಿದಾಸನ ಈ ಮಹಾಕೃತಿಯಲ್ಲಿ ಆಕೆಯು ಅಪ್ಪಟವಾಗಿ ಮಾನವಿ. ಅವಳ ಆಶೆ-ಆದರ್ಶಗಳು, ನೋವು-ನಲಿವುಗಳು, ಮಾನ-ಅಪಮಾನಗಳು ಹಾಗೂ ಕ್ರಿಯೆ-ಪ್ರತಿಕ್ರಿಯೆಗಳು ಸಂಪೂರ್ಣವಾಗಿ ಮಾನುಷದ ಸಹಜವೂ ಸುಂದರವೂ ಆದ ಅಭಿವ್ಯಕ್ತಿಗಳಾಗಿವೆ; ಅನುಭವಗಳೂ ಆಗಿವೆ. ಅವಳಲ್ಲಿ ನಾವು ನರತ್ವದ ಸರ್ವೋಚ್ಚಸಾಧನೆಯನ್ನು ಕಾಣುತ್ತೇವೆ. ಹೆಚ್ಚೇನು, ಪರಮಾರ್ಥದಲ್ಲಿ ಕಾಳಿದಾಸನ ಪಾರ್ವತಿಯು ಜೀವಸಾಮಾನ್ಯದ ಮಹಾಮಾತೃಕೆಯೆನಿಸಿ ಲಿಂಗಾತೀತಳೂ ಆಗುತ್ತಾಳೆ. ಆದರೆ ಕಾವ್ಯದ ಆದ್ಯಂತವೂ ಆಕೆಯದೇ ಕಥೆ, ಆಕೆಯದೇ ವ್ಯಥೆ, ಆಕೆಯದೇ ಶೋಧನೆ, ಆಕೆಯದೇ ಸಾಧನೆ. ಶಿವ, ಬ್ರಹ್ಮ, ಇಂದ್ರಾದಿದೇವತೆಗಳು, ಕಾಮ, ರತಿ, ವಸಂತ, ಸಪ್ತರ್ಷಿಗಳು ಮುಂತಾದ ಮಿಕ್ಕೆಲ್ಲ ಪಾತ್ರಗಳೂ ಸಂಕೇತಸ್ತರದಲ್ಲಿ , ತತ್ತ್ವೈಕಪರಿಧಿಯಲ್ಲಿ ಹೆಚ್ಚಾಗಿ ತೋರಿಕೊಳ್ಳುತ್ತಾರೆ. ಆದರೆ ಪಾರ್ವತಿಯ ತಂದೆ-ತಾಯ್ಗಳ ಪ್ರಪಂಚ ಮಾತ್ರ ಅಪ್ಪಟ ಮಾನವರದು. ಹಿಮವಂತನನ್ನು ದೇವತಾತ್ಮನೆಂದರೂ ಅವನು ಈ ಕಾವ್ಯದಲ್ಲಿ ಕೇವಲ ಮುದ್ದುಮಗಳ ಮೇಲಣ ಕಟ್ಟೊಲ್ಮೆಯುಳ್ಳ ತಂದೆಯಾಗಿಯೇ, ಅವಳ ಯಾವೊಂದು ಬಯಕೆಯನ್ನೂ ಮೀರಲಾಗಾದ ಮನುಜನಾಗಿಯೇ ಕಾಣಿಸಿಕೊಳ್ಳುತ್ತಾನೆ. ಇನ್ನು ಆಕೆಯ ತಾಯಿ ಮೇನಾದೇವಿಯಾದರೂ ಅಷ್ಟೆ, ಸುತೆಯ ಮೇಲಿನ ಮಮತೆ ಮಿಗಿಲಾಗಿ ಅವಳ ಒಳಿತು-ಕೆಡುಕುಗಳ ಬಗೆಗೆ ತಲೆಕೆಡಿಸಿಕೊಳ್ಳುವ ಅಕ್ಕರೆ-ಕಳವಳಗಳ ಮೂಟೆಯಾಗಿಯೇ ತೋರುತ್ತಾಳೆ. ಉಳಿದಂತೆ ಪಾರ್ವತಿಯ ಸಖಿಯರಾಗಲಿ, ಅವಳ ತವರೂರಾದ ಓಷಧಿಪ್ರಸ್ಥಪುರದ ಅಶೇಷಜನತೆಯಾಗಲಿ ನಿರಪವಾದವಾಗಿ ಸಾಮಾನ್ಯಸಜ್ಜನರಾದ ಮಾನವರೇ. ಇಂಥ ಈ ಲೋಕದಲ್ಲಿ ಕೇವಲ ಪಾರ್ವತಿಯಷ್ಟೇ ತನ್ನ ಆದರ್ಶಗಳಿಗೆ ತನ್ನನ್ನು ತೆತ್ತುಕೊಂಡು ಅದರ ಸಿದ್ಧಿಗಾಗಿ ಧೀರೋದಾರವಿಧಿಯಿಂದ ದುಡಿದು ಸಾಫಲ್ಯವನ್ನು ಗಳಿಸಬಲ್ಲ ಜೀವೋತ್ತಮೆ. ಅವಳಲ್ಲಿ ಮಾನುಷವು ಪರಿಪೂರ್ಣತೆಯನ್ನು ಕಂಡಿದೆ; ದೇವತ್ವವೂ ಆಕೆಯ ಸತ್ತ್ವಕ್ಕೆ, ಸಂಕಲ್ಪಸತ್ಯತ್ವಕ್ಕೆ ತಲೆಬಾಗಿ ಭುವಿಗಿಳಿಯುತ್ತದೆ. ತಾರಕಾಸುರನಂಥ ಲೋಕಮಾರಕನನ್ನು ನಿಟ್ಟೊರೆಸಲಾಗದ ದೇವತೆಗಳಿಗೆ ಬಂದೊದಗಿದ ಅಸಹಾಯತೆಯನ್ನು ದೂರಮಾಡಬಲ್ಲ ಹಾಗೂ ಪರ್ಯಾಯವಾಗಿ ಅವರ ಪಾಲಿಗೆ ತಾರಕಶಕ್ತಿಯೇ (ದಾಟಿಸುವ ಬಲ) ಆಗಬಲ್ಲ ಬಲ್ಮೆ ಪಾರ್ವತಿಯದು. ಈ ಅರ್ಥದಲ್ಲಿ ಅವಳೇ ತಾರಕಾಸುರನಾಶಿನಿಯಾದ ತಾಯಿ, ಜಗದಂಬೆ. ಏಕೆಂದರೆ ಮುಂದೆ ಜನಿಸುವ ತಾರಕಾರಿ ಕುಮಾರನಿಗೂ ಆಕೆಯೇ ಮಾತೆ; ಅವಳ ಮಾತೃತ್ವದಿಂದಲೇ ಸ್ಕಂದನಿಗೆ ಗೆಲ್ಮೆ-ಬಲ್ಮೆ. ಹೀಗೆ ಓರ್ವ ಹೆಣ್ಣಿನ ಸಂಕಲ್ಪಬಲದಲ್ಲಿ ಸಮಸ್ತಲೋಕಗಳ ಸೌಖ್ಯವಡಗಿದೆಯೆಂಬ ಮಹಾಸಂದೇಶವನ್ನಿಲ್ಲಿ ಕವಿಯು ನಮಗೆ ನೀಡುತ್ತಿದ್ದಾನೆ. ಮಾತ್ರವಲ್ಲ, ಮಾನುಷದ ಸುಪ್ತಮಹಿಮೆಯನ್ನೂ ಸಾರುತ್ತಿದ್ದಾನೆ. ಹೀಗೆಂದ ಮಾತ್ರಕ್ಕೆ ಪಾರ್ವತಿಗೆ ಸುಖ-ದುಃಖಗಳಾಗಲಿ, ಮಾನಾಪಮಾನಗಳಾಗಲಿ, ನೋವು-ನಲಿವುಗಳಾಗಲಿ ಇಲ್ಲವೆಂದಲ್ಲ. ವಸ್ತುತಃ ಅವಳು ತನ್ನ ಈ ತೆರನಾದ ಮೃದು-ಪರುಷಮಾನುಷಭಾವಗಳಿಗೆಲ್ಲ ಮುಕ್ತವಾಗಿ ತೆರೆದುಕೊಂಡಿದ್ದಾಳೆ, ತೆತ್ತುಕೊಂಡಿದ್ದಾಳೆ; ಹೆಚ್ಚೇನು, ಅವುಗಳ ಹೊಯ್ಲಿನಲ್ಲಿ ಕೊಚ್ಚಿಯೇ ಹೋಗಿದ್ದಾಳೆ. ಇಂತಿದ್ದರೂ ಆಕೆ ತನ್ನ ಕುಟುಂಬ, ಕೆಳದಿಯರು, ಕೇರಿಯವರು ಹಾಗೂ ಊರಿನವರ ಹಾಗೆ ಅಲ್ಪಕ್ಕೆ ತೃಪ್ತಳಾದವಳಲ್ಲ, ಪ್ರೇಯಸ್ಸಿಗೆ ಪರ್ಯಾಪ್ತಿಯನ್ನು ಹೊಂದುವವಳಲ್ಲ. ಅವಳೇನಿದ್ದರೂ ಛಾಂದೋಗ್ಯೋಪನಿಷತ್ತು ತಿಳಿಸುವಂತೆ ಭೂಮಕ್ಕೆ ಮಾತ್ರ ಮಾರುಹೋದವಳು; ಕಠೋಪನಿಷತ್ತು ಕಲಿಸುವಂತೆ ಶ್ರೇಯಸ್ಸಿಗೆ ಮಾತ್ರ ಸೋರೆಹೋದವಳು. ಹೀಗಾಗಿ ಆಕೆಯು ವಿಶ್ವಾಮಿತ್ರಪ್ರಜ್ಞೆಗೂ ಪ್ರೇರಕವಾಗುವ ಚೈತನ್ಯವುಳ್ಳ, ದೇವಾತೀತವೂ ಎಂದೆನಿಸಬಲ್ಲ ಬ್ರಾಹ್ಮಸತ್ತ್ವದ ಸಾಕಾರ. ಆದುದರಿಂದಲೇ ಅವಳು ಲಿಂಗಾತೀತವಾಗಿ ಸಕಲಸೃಷ್ಟಿಗೂ ಆದರ್ಶೆವೆನಿಸುವ ಮಹಾಮೌಲ್ಯ.
ಹೀಗೆ ಎಂಥ ಅತಿಮಾನುಷತೆಯನ್ನೂ ಕುಬ್ಜವಾಗಿಸಬಲ್ಲ ಪಾರ್ವತಿಯ ವಿಶುದ್ಧಮಾನುಷವನ್ನು ಈ ತೆರನಾದ ಸೂಕ್ಷ್ಮಗಳಿಂದ ಚಿತ್ರಿಸದಿದ್ದ ಪಕ್ಷದಲ್ಲಿ ಕಾಳಿದಾಸನ ಮಹಾಕೃತಿಯು ಕನ್ನಡದ ಕವಿ ಹರಿಹರನ ’ಗಿರಿಜಾಕಲ್ಯಾಣ’ದ ಹಾಗೆ ಬರಿಯ ಭಕ್ತಿ-ಶ್ರದ್ಧೆಗಳ, ಆವೇಶ-ಆರಾಧನೆಗಳ ಅಲೌಕಿಕಾಭಾಸಮಾತ್ರವಾಗುತ್ತಿತ್ತು. ಅಲ್ಲಿಯ ನಾಯಿಕೆ ಗಿರಿಜೆಯಲ್ಲಿ ಮಾನುಷದ ಲೇಶವೂ ಕಾಣದ ಕಾರಣ ಆಕೆಯ ದೈವತ್ವವೂ ಕಾವ್ಯಭಾವತ್ವಕ್ಕೆ ಎರವಾಗುತ್ತದೆ; ಸ್ತ್ರೀಸೂಕ್ಷ್ಮತೆಗಳ ಸ್ವಾರಸ್ಯಗಳನ್ನು ಉಪೇಕ್ಷಿಸುತ್ತದೆ. ಹೀಗಾಗಿ ಹರಿಹರನಲ್ಲಿ ಯಾವುದೇ ಸ್ತ್ರೀವಾದದ ಸೋಂಕಿಲ್ಲ; ಮಾತ್ರವಲ್ಲ, ಮಾನುಷವಾದದ ಮಾಧುರ್ಯವೂ ಇಲ್ಲ. ಆದರೆ ಕಾಳಿದಾಸನಲ್ಲಿ ಹೀಗಲ್ಲ. ಆತನ ದರ್ಶನವು ಜೀವಜೀವಿತ, ಭಾವಭರಿತ. ಈ ಅರ್ಥದಲ್ಲಿ ಕಾಳಿದಾಸನ ಸ್ತ್ರೀವಾದವು ನಿರ್ವಿವಾದ, ವಾದಾತೀತ. ಒಟ್ಟಿನಲ್ಲಿ ಕುಮಾರಸಂಭವದ ಪಾರ್ವತಿಯು ಆರ್ಷಕಾವ್ಯಗಳ ಪ್ರಮುಖಸ್ತ್ರೀಪಾತ್ರಗಳಾದ ಸೀತೆ ಮತ್ತು ದ್ರೌಪದಿಯರಂತೆ ದುರಂತಜೀವನೆಯಾಗದೆ ಸಾಫಲ್ಯಸೌಖ್ಯವನ್ನು ಕಾಣುವುದು ಸಂತಸದ ಸಂಗತಿಯೂ ಹೌದು.
ಸಾಮಾನ್ಯವಾಗಿ ವ್ಯಕ್ತಿಪಾರಮ್ಯವಾದದ ಅಬ್ಬರದಲ್ಲಿ ಕೌಟುಂಬಿಕಮೌಲ್ಯಗಳು ಕೊಚ್ಚಿಹೋಗುತ್ತವೆ. ಪಾರ್ವತಿಯ ಆದರ್ಶಸಾಧನೆಯ ಅನನ್ಯಲಕ್ಷ್ಯದಲ್ಲಿ, ತಾನೊಲಿದವನನ್ನು ಮೆಚ್ಚಿಸಿ ಕೈಹಿಡಿಯುವ ಹವಣಿನಲ್ಲಿ ಆಕೆಯು ತನ್ನ ಕುಟುಂಬದ ಘನತೆ-ಗೌರವಗಳನ್ನಾಗಲಿ, ಪ್ರೀತಿ-ವಾತ್ಸಲ್ಯಗಳನ್ನಾಗಲಿ ಎಳ್ಳಷ್ಟೂ ಹಗುರವಾಗಿ ಕಾಣುವುದಿಲ್ಲ. ದಿಟವೇ, ಅವಳ ನಿಶ್ಚಯ ದೊಡ್ಡದು, ಹಠಯೋಗವೇ ಎನ್ನಬಹುದಾದ ಮಟ್ಟದ ಸಾಧನೆಯೂ ಹಿರಿದು. ಆದರೆ ಇದನ್ನೇ ಸರ್ವತ್ರ ಮುಂದುಮಾಡಿಕೊಂಡು ತನ್ನವರ ಭಾವನೆಗಳಿಗೆ ಯಾವುದೇ ತೆರನಾದ ಧಕ್ಕೆಯನ್ನವಳು ತರುವುದಿಲ್ಲ. ಹೀಗಾಗಿಯೇ ತನ್ನ ತಪಸ್ಸಿಗೊಲಿದು ಬಳಿಬಂದ ನಲ್ಲನೊಡನೆ ಒಡನೊಡನೆಯೇ ಮಧುಮಂಚಕ್ಕೆ ಹಾರಿಹೋಗದೆ ತನ್ನನ್ನು ಬ್ರಾಹ್ಮವಿಧಿಯಿಂದ ಅವನಿಗೆ ಧಾರೆಯೆರೆದುಕೊಡಬೇಕಾದ ಬಾಧ್ಯತೆ ಮತ್ತು ಬಲ್ಮೆಗಳನ್ನೂ ಕರ್ತವ್ಯ ಮತ್ತು ಕೃತಾರ್ಥತೆಗಳನ್ನೂ ತನ್ನ ನಚ್ಚಿನ ತಂದೆ-ತಾಯ್ಗಳಿಗೇ ಬಿಟ್ಟುಕೊಡುತ್ತಾಳೆ. ಇದು ಮಗಳ ಆಶೆ-ಆದರ್ಶಗಳಿಗೆ ಹಾರ್ದಿಕವಾಗಿ ಸ್ಪಂದಿಸಿದ, ಆಕೆಯ ಕಠೋರತರಸಾಧನೆಗೆ ಪ್ರಾಮಾಣಿಕವಾಗಿ ಕಾಳಜಿ-ಕಳವಳಗಳನ್ನು ತೋರಿದ ಜನನೀ-ಜನಕರಿಗೆ ಅವಳು ಸಲ್ಲಿಸಿದ ಪ್ರೀತಿಪೂಜನ, ಗೌರವನೀರಾಜನ. ಇದೇ ರೀತಿ ಇನಿಯಳ ಮಾತಿಗೆ ಮೆಚ್ಚಿದ ಜಗದೀಶ್ವರನು ತತ್ತ್ವತಃ ತನಗಿಂತ ಹಿರಿಯರಿಲ್ಲದ ತಾನು ತನ್ನ ಮದುವೆಗೆ ತಾನೇ ಮುಂದಾಗದೆ ಸಪ್ತರ್ಷಿಗಳನ್ನೂ ಅವರೊಟ್ಟಿಗೆ ಜ್ಯೋತೀರೂಪಣಿಯಾದ ಅರುಂಧತಿಯನ್ನೂ ವಿವಾಹನಿಶ್ಚಯಕ್ಕಾಗಿ ಕಳುಹುವುದೂ ಅವರೆಲ್ಲ ಹಿಮವಂತ ಮತ್ತು ಮೇನೆಯರೊಡನೆ ಹಾರ್ದಿಕವಾಗಿ ಮೆಚ್ಚಿ ಮಾತನಾಡಿಕೊಂಡು ಹಿಗ್ಗಿನಿಂದ ಬರುವುದೂ ಕೌಟುಂಬಿಕಮೌಲ್ಯಗಳು ವ್ಯಕ್ತಿಮೌಲ್ಯಗಳೊಡನೆ ಯಾವುದೇ ತೆರನಾದ ಸಂಘರ್ಷಣೆಗೆ ತೊಡಗದಂಥ ನೆಮ್ಮದಿಯ ನೆಲೆಯ ಧ್ವನಿಗಳಾಗಿವೆ. ಇವೆಲ್ಲ ದಿಟಕ್ಕೂ ಸ್ವಸ್ಥಸಮಾಜವೊಂದರ ದಾರಿದೀವಿಗೆಗಳು.
III
ಎಲ್ಲಕ್ಕಿಂತ ಮಿಗಿಲಾಗಿ ಕುಮಾರಸಂಭವವು ಮಿಕ್ಕೆಷ್ಟೋ ಮಹಾಕಾವ್ಯಗಳಂತೆ ಯಾವುದೋ ರಾಷ್ಟ್ರದ, ಜನಾಂಗದ, ಮತದ ಮಹತ್ತ್ವವನ್ನು ಸಾರುವ ಕೃತಿಯಾಗದೆ ಜಗತ್ತಿನ ಸಮಸ್ತಮಾನವರಿಗೂ ಮುಖ್ಯತಮವೆನಿಸುವ ಸಾರ್ವತ್ರಿಕಮೌಲ್ಯವಿವೇಚನೆಯನ್ನು ಮಾಡಿದೆ. ಮಾತ್ರವಲ್ಲ, ಇವುಗಳಲ್ಲಿ ಅತ್ಯಂತಮೂಲಭೂತವೆನಿಸಿದ ಪುರುಷಾರ್ಥಮೀಮಾಂಸೆಯನ್ನು ರಸೋದಾರಧೀರತೆಯಿಂದ ಧ್ವನಿಮಾರ್ಗದಲ್ಲಿ ಮಾಡಿರುವ ಈ ಮಹಾಕೃತಿಯು ಧರ್ಮ-ಅರ್ಥ-ಕಾಮಗಳೆಂದು ಹೆಸರಾದ ತ್ರಿವರ್ಗದಲ್ಲಿ ತುಂಬ ಮೂಲಭೂತವೂ ಅರ್ಥಗ್ರಹಣೆಗೆ ಅತ್ಯಂತಕಷ್ಟವೂ ಎನಿಸಿದ ಕಾಮದ ಆಮೂಲಾಗ್ರಮೀಮಾಂಸೆಯನ್ನು ಅನಿತರಸಾಧಾರಣವಾಗಿ ನಡಸಿದೆ. ತನ್ಮೂಲಕ ಅಪವರ್ಗವೆನಿಸಿದ ಮೋಕ್ಷಕ್ಕೇ ಸೋಪಾನವನ್ನು ಕಟ್ಟಿದೆಯೆಂದರೂ ಅತಿಶಯವಲ್ಲ. ಭಗವದ್ಗೀತೆಯಲ್ಲಿ (೭-೧೧) ಶ್ರೀಕೃಷ್ಣನು ಒಕ್ಕಣಿಸಿರುವ “ಧರ್ಮಾವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ” ಎಂಬ ಮಹಾವಾಕ್ಯಕ್ಕೆ ಪ್ರಕೃತಕಾವ್ಯವು ವ್ಯಾಖ್ಯಾನಸದೃಶವೆಂದರೆ ಯುಕ್ತವಾದೀತು. ಅಲ್ಲದೆ ಆದರ್ಶಪ್ರೇಮವು ಆದರ್ಶದಾಂಪತ್ಯವೂ ಹೌದೆಂದು ಸಾರಿರುವ ಈ ಕಾವ್ಯವು ತಪಃಪರಿಪೂತವಾದ ಪ್ರೀತಿಯ ಬುನಾದಿಯ ಮೇಲೆ ನಿಂತ ಗಾರ್ಹಸ್ಥ್ಯವು ಜಗತ್ತಿಗೇ ಕ್ಷೇಮಂಕರವೆಂಬುದನ್ನೂ ಧ್ವನಿಸಿದೆ. ಜೊತೆಗೆ ಯಾರೇ ಆಗಲಿ ತಮ್ಮ ಆತ್ಮಧರ್ಮ ಅಥವಾ ಸ್ವಧರ್ಮವಾವುದುಂಟೋ ಅದನ್ನು ಸಾಕ್ಷಾತ್ಕರಿಸಿಕೊಂಡು ನಡೆದಲ್ಲಿ ಅವರ ಜೀವನಪಥವೆಷ್ಟು ಕಲ್ಲು-ಮುಳ್ಳುಗಳಿಂದ ತುಂಬಿದ್ದರೂ ಅದು ಒಳ್ಳೆಯ ಪಾದರಕ್ಷೆಯನ್ನು ತೊಟ್ಟು ನಡೆದವನ ಕಾಲ್ಗಳನ್ನು ಹೆಚ್ಚಾಗಿ ನೋಯಿಸದಂತೆ ನೆಮ್ಮದಿಯನ್ನೀಯುವುದೆಂಬ ಸಾರ್ವತ್ರಿಕಸತ್ಯವನ್ನು ಪಾರ್ವತಿಯ ಪಾತ್ರದ ಮೂಲಕ, ಮುಖ್ಯವಾಗಿ ಅವಳ ಈ ಕೆಲವು ಮಾತುಗಳ ಮೂಲಕ ಮನದಟ್ಟಾಗಿಸಿದೆ. ಇದನ್ನು ಈ ಕಾವ್ಯದ ದರ್ಶನವೆಂದೂ ಹೇಳಬಹುದು:
ಅಲಂ ವಿವಾದೇನ ಯಥಾ ಶ್ರುತಸ್ತ್ವಯಾ ತಥಾವಿಧಸ್ತಾವದಶೇಷಮಸ್ತು ಸಃ|
ಮಮಾತ್ರ ಭಾವೈಕರಸಂ ಮನಸ್ಸ್ಥಿತಂ ನ ಕಾಮವೃತ್ತಿರ್ವಚನೀಯಮೀಕ್ಷತೇ|| (೫-೮೨)
ಪರಸ್ಪರ ಸಮರ್ಪಣೆಯಿಲ್ಲದ ಪ್ರೇಮ-ದಾಂಪತ್ಯ-ಸ್ನೇಹ-ಸಂಸಾರಗಳಿಗೆ ಅರ್ಥವೇ ಇಲ್ಲ. ಅಹಂಕಾರವು ಅಳಿಯದೆ ಇದು ಸಾಧ್ಯವಿಲ್ಲ. ಇದಾದರೋ ದೇಹಮಾತ್ರದೃಷ್ಟಿಯನ್ನು ದಾಟಿದಾಗ ಮಾತ್ರ ಸಂಭಾವ್ಯ. ಇದನ್ನೇ ಆಸುರಮಾರ್ಗದಿಂದ ಸುರಮಾರ್ಗಕ್ಕೆ ಸಾಗುವ ಪ್ರಕ್ರಮವೆನ್ನಬಹುದು. ಈ ಸತ್ಯವೇ ಛಾಂದೋಗ್ಯೋಪನಿಷತ್ತಿನಲ್ಲಿ ಬರುವ ಇಂದ್ರ-ವಿರೋಚನರ ಬ್ರಹ್ಮವಿದ್ಯಾಸಾಧನಾಖ್ಯಾನದಲ್ಲಿ ಸೂಚಿತವಾಗಿದೆ. ಇದೇ ಕಠೋಪನಿಷತ್ತಿನಲ್ಲಿ ಬರುವ ಶ್ರೇಯಸ್ಸು-ಪ್ರೇಯಸ್ಸುಗಳ ತೌಲನಿಕಾಧ್ಯಯನದ ನೆಲೆಯೂ ಆಗಿದೆ.
ಇಂಥ ರಸಸಂಕ್ರಮಣಕ್ಕೆ ತಪಸ್ಸು ಆತ್ಯಾವಶ್ಯಕ. ಶಿವನಾಗಲಿ,ಉಮೆಯಾಗಲಿ ಮಾಡಿದ್ದು ಇಂಥ ತಪಸ್ಸನ್ನು. ಅದೊಂದು ಬಗೆಯ ನಿಷ್ಕಾಮಕರ್ಮ, ಪ್ರೇಮೈಕಧರ್ಮ. ಕವಿಯ ಮಾತಿನಲ್ಲಿಯೇ ಹೇಳುವುದಾದರೆ ಅದು ಹೀಗೆ:
ತತ್ರಾಗ್ನಿಮಾಧಾಯ ಸಮಿತ್ಸಮಿದ್ಧಂ ಸ್ವಮೇವಮೂರ್ತ್ಯಂತರಮಷ್ಟಮೂರ್ತಿಃ|
ಸ್ವಯಂ ವಿಧಾತಾ ತಪಸಃ ಫಲಾನಾಂ ಕೇನಾಪಿ ಕಾಮೇನ ತಪಶ್ಚಚಾರ|| (೧-೫೭)
ಇದು ಶಿವನ ಪರಿಯಾದರೆ ಪಾರ್ವತಿಯದು ಇನ್ನೊಂದು:
ತಥಾ ಸಮಕ್ಷಂ ದಹತಾ ಮನೋಭವಂ
ಪಿನಾಕಿನಾ ಭಗ್ನಮನೋರಥಾ ಸತೀ|
ನಿನಿಂದ ರೂಪಂ ಹೃದಯೇನ ಪಾರ್ವತೀ
ಪ್ರಿಯೇಷು ಸೌಭಾಗ್ಯಫಲಾ ಹಿ ಚಾರುತಾ||ಇಯೇಷ ಸಾ ಕರ್ತುಮವಂಧ್ಯರೂಪತಾಂ
ಸಮಾಧಿಮಾಸ್ಥಾಯ ತಪೋಭಿರಾತ್ಮನಃ|
ಅವಾಪ್ಯತೇ ವಾ ಕಥಮನ್ಯಥಾ ದ್ವಯಂ
ತಥಾವಿಧಂ ಪ್ರೇಮ ಪತಿಶ್ಚ ತಾದೃಶಃ|| (೫-೧,೨)
ಹೀಗಾಗಿಯೇ ಶಿವನು ನಿಸ್ಸಂಕೋಚವಾಗಿ ಪಾರ್ವತಿಗೆ ತಾನವಳ ದಾಸನೆಂದೂ ಆಕೆಯ ತಪಸ್ಸಿನಿಂದ ಕೊಳ್ಳಲ್ಪಟ್ಟವನೆಂದೂ ಹೇಳಲು ಸಾಧ್ಯವಾಯಿತು:
ಅದ್ಯಪ್ರಭೃತ್ಯವನತಾಂಗಿ ತವಾಸ್ಮಿ ದಾಸಃ
ಕ್ರೀತಸ್ತಪೋಭಿಃ (೫-೮೬)
ಹಾಗೆಯೇ ಇವನಿಗಾಗಿ ಹಂಬಲಿಸಿ ತಪಿಸಿ ಕಡೆಗೆ ಸಾಫಲ್ಯವನ್ನು ಗಳಿಸಿದ ಗೌರಿಯು ತಾನಿನ್ನೂ ತನ್ನ ತಂದೆಯ ಸೊತ್ತೆಂದೂ ಆತನನ್ನೇ ಶಿವನು ಅರ್ಥಿಸಬೇಕೆಂದೂ ಅರುಹಲಾಯಿತು:
ಅಥ ವಿಶ್ವಾತ್ಮನೇ ಗೌರೀ ಸಂದಿದೇಶ ಮಿಥಃ ಸಖೀಮ್|
ದಾತಾ ಮೇ ಭೂಭೃತಾಂ ನಾಥಃ ಪ್ರಮಾಣೀಕ್ರಿಯತಾಮಿತಿ|| (೬-೧)
ಹೀಗೆ “ಪರಸ್ಪರತಪಃಸಂಪತ್ಫಲಾಯಿತಪರಸ್ಪರ”ರಾದ ಆದಿದಂಪತಿಗಳ ಅನಾದಿದಾಂಪತ್ಯಕಥೆಯನ್ನು ಬಲುಮಟ್ಟಿಗೆ ತನ್ನ ಅನನ್ಯಪ್ರತಿಭಾಬಲದಿಂದಲೇ ನಿರ್ಮಿಸಿಕೊಂಡ ಕವಿ ಕಾಳಿದಾಸನ ದರ್ಶನವು ದೇಶ-ಕಾಲಾತೀತ. ಈ ಅರ್ಥದಲ್ಲಿ ಕುಮಾರಸಂಭವವು ತುಂಬ ಸ್ವೋಪಜ್ಞವಾದ ಕಾವ್ಯ. ಇದು ಸರ್ವಾಥಗಳಲ್ಲಿಯೂ ಪರಿಣತಪ್ರಜ್ಞನ ಪ್ರಬುದ್ಧರಚನೆ. ಮೇಲುನೋಟಕ್ಕೆ ಕವಿಯ ಶೈಲಿಯು ಅದೆಷ್ಟು ಲಲಿತ, ಕೋಮಲ ಮತ್ತು ಸುಕುಮಾರವೆನಿಸಿದರೂ ಅವನ ವಾಣಿಯು ಅದೆಷ್ಟು ಸಾಲಂಕೃತ ಮತ್ತು ಕವಿಸಮಯಮಯವೆನಿಸಿದರೂ ಆಳದಲ್ಲಿದು ನಿರ್ಭರ, ನಿಷ್ಠುರ, ಪ್ರೌಢ ಮತ್ತು ರಸೈಕಪ್ರವಣವೆಂಬುದು ಕೇವಲ ಪ್ರಜ್ಞಾವಂತರಾದ ಕಾವ್ಯರಸಿಕರಿಗೆ ವೇದ್ಯ. ಹೀಗಾಗಿಯೇ ಆರ್ಷಕಾವ್ಯಗಳ ಕರ್ತೃಗಳಾದ ವ್ಯಾಸ-ವಾಲ್ಮೀಕಿಗಳಿಗಿಂತ ಕಾಳಿದಾಸನು ತನ್ನ ಕಾವ್ಯದ ಶೈಲಿ, ವಸ್ತು, ವಿನ್ಯಾಸಾದಿಗಳಲ್ಲಿ ವಿಭಿನ್ನನಾದರೂ ಅವರಿಗೆ ದರ್ಶನದ ಮೂಲಕ ತುಂಬ ಹತ್ತಿರವಾಗಿದ್ದಾನೆ; ಈ ಕಾರಣದಿಂದಲೇ ಋಷಿಕಲ್ಪನೆನಿಸಿದ್ದಾನೆ. ಇದಕ್ಕೊಂದು ನಿದರ್ಶನವಾಗಿ ಈ ಮೂವರು ಮಹಾಕವಿಗಳು ತಮ್ಮ ತಮ್ಮ ಕಾವ್ಯನಾಯಕರಾದ (ಬಲುಮಟ್ಟಿಗೆ ತಮ್ಮ ತಮ್ಮಇಷ್ಟದೈವತಗಳೂ ಹೌದು) ಮಹಾಪಾತ್ರಗಳಲ್ಲಿಯೇ ಮಾನವಸಹಜವಾಗಿ ಸುಳಿಯಬಹುದಾದ ಕುಂದು-ಕೊರತೆಗಳನ್ನು (ಅವುಗಳ ಭವ್ಯತೆಗೂ ಔಚಿತ್ಯಕ್ಕೂ ಧಕ್ಕೆಯಾಗದಂತೆ) ರಸಸ್ಫೋರಕವಾಗಿ ಧ್ವನಿಸಿರುವುದನ್ನು ನೆನೆಯಬಹುದು. ವಸಂತಶೋಭೆಯೇ ಮೆಯ್ವೆತ್ತಂತಿರುವ ಪಾರ್ವತಿಯ ಅನಾಘ್ರಾತಸೌಂದರ್ಯಕ್ಕೆ ಕ್ಷಣಕಾಲ ಮಾರುಹೋಗಿ ಆಕೆಯ ಚೆಂದುಟಿಗಳಲ್ಲಿಯೇ ತನ್ನ ಮುಕ್ಕಣ್ಣುಗಳನ್ನೂ ಕೀಲಿಸಿದ ಕಪರ್ದಿಯ ಮನೋವಿಹ್ವಲತೆಯನ್ನು ಕಾಳಿದಾಸನು ಚಿತ್ರಿಸುವ ಪರಿಯೇ ಅನ್ಯಾದೃಶ:
ಹರಸ್ತು ಕಿಂಚಿತ್ಪರಿಲುಪ್ತಧೈರ್ಯಶ್ಚಂದ್ರೋದಯಾರಂಭ ಇವಾಂಬುರಾಶಿಃ|
ಉಮಾಮುಖೇ ಬಿಂಬಫಲಾಧರೋಷ್ಠೇ ವ್ಯಾಪಾರಯಾಮಾಸ ವಿಲೋಚನಾನಿ|| (೩-೬೭)
ಹೀಗೆ ತನ್ನ ದೇವರ ದೌರ್ಬಲ್ಯವನ್ನು ಅವಿಸ್ಮರಣೀಯವಾಗಿ ಬಣ್ಣಿಸಿದರೂ ನಮ್ಮೀ ಕವಿಯು ಆತನಲ್ಲಿ ಭಕ್ತಿಯನ್ನು ಬಿಡುವುದಿಲ್ಲ, ಆದರ್ಶಕ್ಕೆ ಎರವಾಗುವುದಿಲ್ಲ.
ಋಷಿಕವಿಗಳಾದ ವ್ಯಾಸ-ವಾಲ್ಮೀಕಿಗಳಿಗೆ ತಮ್ಮ ತಮ್ಮ ಕೃತಿಗಳಲ್ಲಿ ಕಾಮವೆಂಬ ಪುರುಷಾರ್ಥವನ್ನು ಕುರಿತು ಇಂಥ ಮೀಮಾಂಸೆಯನ್ನು ಮಾಡುವ ಅವಕಾಶ ದೊರೆತಿರಲಿಲ್ಲ. ಇದನ್ನು ಕಾಳಿದಾಸನು ದಕ್ಕಿಸಿಕೊಂಡು ಗೆದ್ದಿದ್ದಾನೆ. ಇದು ನಿಜಕ್ಕೂ ಅಸಾಧಾರಣವಿಕ್ರಮ. ಈ ದೃಷ್ಟಿಯಿಂದ ಕೂಡ ಕಾಳಿದಾಸನ ಕಾವ್ಯವು ಆರ್ಷೇಯಸತ್ತ್ವವನ್ನುಳ್ಳದ್ದು. ಬೌದ್ಧಾದಿದರ್ಶನಗಳು ತಮ್ಮ ಆತ್ಯಂತಿಕಕಾಮವಿಮುಖವಾದ - ಹೀಗಾಗಿಯೇ ಕೃತ್ರಿಮವೂ ಏಕಪಕ್ಷೀಯವೂ ಜೀವನವಿರುದ್ಧವೂ ಆದ - ನಿಲವಿನ ಕಾರಣ ಅವಿದ್ಯೆಯನ್ನು (ತ್ರಿವರ್ಗ) ಸರ್ವಥಾ ಉಪೇಕ್ಷಿಸಿ ವಿದ್ಯೆಯನ್ನೇ (ಅಪವರ್ಗ) ಉಪಾಸಿಸತೊಡಗುವ, “ಭೂಯ ಇವ ಅಂಧಂತಮಃ ಪ್ರವೇಶ”ವನ್ನು ಮಾಡುವ ಅಪಾಯಕ್ಕೆ ಜನತೆಯನ್ನು ಮುಂದೂಡಿದ್ದುವು. ಬಲುಮುನ್ನವೇ ಈ ಬಗೆಗೆ ಈಶಾವಾಸ್ಯೋಪನಿಷತ್ತು ನೀಡಿದ ಎಚ್ಚರಿಕೆಯು ಸರ್ವದಾ ಉಪಾದೇಯ. ಇಂಥ ಅತಿರೇಕದ ಪ್ರಕೃತಿವಿರುದ್ಧವೂ ಸಂಸ್ಕೃತಿಬಾಹ್ಯವೂ ಆದ ವಿಕೃತಿಯನ್ನು ಕಾಳಿದಾಸನು ತನ್ನೀ ಕಾವ್ಯದ ಮೂಲಕ ಕಲಾತ್ಮಕವಾಗಿ ತಿದ್ದುವ ರಸಸುಂದರಕಾರ್ಯವನ್ನು ಮಾಡಿದ್ದಾನೆ. ಮುಖ್ಯವಾಗಿ ಗಿರಿಜಾಶಂಕರರ ದಿವ್ಯದಾಂಪತ್ಯದಲ್ಲಿ ವಿದ್ಯಾವಿದ್ಯೆಗಳ ಸಾಮರಸ್ಯವನ್ನು ಸೊಗಸಾಗಿ ತೋರಿದ ಕವಿಯು ಕಾಮನ ಅಹಂಕಾರದಲ್ಲಿ ಅವಿದ್ಯಾಮಾತ್ರಮಾನ್ಯತೆಯ ಅಪಾಯವನ್ನೂ ಮದನನ ಅವಸಾನಾನಂತರ ವಿಲಪಿಸುವ ರತಿಯ ದುಃಖದಲ್ಲಿ ಮನೋಜನಿಲ್ಲದ ಜಗತ್ತಿನ ಗೋಳನ್ನೂ (ಬಯಕೆಯು ಸತ್ತಾಗ ಭೋಗದ ಬೇಗೆ) ಧ್ವನಿಸಿ ತನ್ನ ರಚನೆಗೆ ಸಮಗ್ರತೆಯನ್ನು ತಂದಿದ್ದಾನೆ.
To be continued.
Comments