ಸಾವಿರ ವರ್ಷಗಳಿಗೂ ಮೀರಿದ ಕನ್ನಡಸಾಹಿತ್ಯಚರಿತ್ರೆಯಲ್ಲಿ ಇಪ್ಪತ್ತನೆಯ ಶತಮಾನದ ನವೋದಯಸಾಹಿತ್ಯವನ್ನು ಕನ್ನಡಸಾಹಿತ್ಯಪುನರುಜ್ಜೀವನದ ಸುವರ್ಣಯುಗವೆಂದು ಹೇಳಬಹುದು. ಈ ಕಾಲದ ಅನೇಕಕವಿಗಳು ಹಾಗೂ ಲೇಖಕರು ಬಹುಭಾಷಾಕೋವಿದರಾಗಿದ್ದುದಲ್ಲದೆ ವಿವಿಧಪ್ರಾದೇಶಿಕಭಾಷಾಸಾಹಿತ್ಯಗಳ ಸಮೃದ್ಧಸಾಂಸ್ಕೃತಿಕಝರಿಗಳಿಂದ ನೇರವಾಗಿ ಸ್ಫೂರ್ತಿಗೊಂಡು ಬಗೆದುಂಬಿಸಿಕೊಳ್ಳುವ ಮೂಲಕ ಆ ಹೊತ್ತಿಗೆ ನಿಂತ ನೀರಾಗಿದ್ದ ನಮ್ಮ ತಾಯ್ನುಡಿಯ ಹೊಳೆಯ ಹರಿವನ್ನು ಹೊನಲಾಗಿ ಹಿಗ್ಗಿಸಿದರು.
ಕನ್ನಡದ ಮೇಲೆ ಬಂಗಾಳಿ ಭಾಷೆ ಹಾಗು ಸಾಹಿತ್ಯದ ಪ್ರಭಾವವು ಹತ್ತೊಂಬತ್ತನೆಯ ಶತಮಾನದ ಪ್ರಮುಖವ್ಯಕ್ತಿಗಳಿಂದ ಮೊದಲಾಯಿತು. ವಿಶೇಷವಾಗಿ ಅಧ್ಯಾತ್ಮಿಕಗುರುಗಳು, ಸಮಾಜಸುಧಾರಕರು ಹಾಗೂ ರಾಷ್ಟ್ರವಾದಿಗಳಾದ ರಾಮಕೃಷ್ಣ ಪರಮಹಂಸ (೧೮೩೬–೧೮೮೬), ಬಂಕಿಮಚಂದ್ರ ಚಟ್ಟೋಪಾಧ್ಯಾಯ (೧೮೩೮–೧೮೯೪), ರವೀಂದ್ರನಾಥ ಠಾಕುರ್ (೧೮೬೧–೧೯೪೧), ಸ್ವಾಮಿ ವಿವೇಕಾನಂದ (೧೮೬೩–೧೯೦೨), ಅರವಿಂದ ಘೋಷ್ (೧೮೭೨–೧೯೫೦) ಮೊದಲಾದವರು ಈ ಪಂಕ್ತಿಯಲ್ಲಿ ಅಗ್ರಗಣ್ಯರು. ಹೀಗಾಗಿ ಕನ್ನಡಲೇಖಕರ ಬಂಗಾಳದ ನಂಟು ಅಧ್ಯಾತ್ಮ, ರಾಷ್ಟ್ರವಾದ ಹಾಗೂ ಸಮಾಜ ಸುಧಾರಣೆಗಳಿಂದಾಯಿತೆಂದರೆ ತಪ್ಪಾಗಲಾರದು.
ಪ್ರಾಯಶಃ ಬಂಗಾಳಿ ಸಾಹಿತ್ಯವನ್ನು ಮೊದಲಬಾರಿಗೆ ಕನ್ನಡಕ್ಕೆ ಅನುವಾದರೂಪವಾಗಿ ತಂದವರು ಬಿಂಡಿಗನವಿಲೆ ವೆಂಕಟಾಚಾರ್ಯರು. ಸ್ವಾಮಿ ವಿವೇಕಾನಂದರ ಸಮಕಾಲೀನರಾಗಿದ್ದ ಅವರು ಬಂಕಿಮಚಂದ್ರ ಹಾಗೂ ಮತ್ತಿತರರ ಅನೇಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಅವರಿಗೆ ಬಂಗಾಳಿ ಭಾಷೆಯ ಕುರಿತು ಪ್ರೀತಿ ಎಷ್ಟಿತ್ತೆಂದರೆ, ಅದನ್ನು ತಮ್ಮ ಮನೆಯವರಿಗಲ್ಲದೆ ನೆರೆಹೊರೆಯವರಿಗೂ ಕಲಿಸಿದ್ದರು. ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದಾಗ ವೆಂಕಟಾಚಾರ್ಯರ ಮನೆಯಲ್ಲಿ ಕೆಲಕಾಲ ತಂಗಿದ್ದ ಅವರು ಅಲ್ಲಿ ಎಲ್ಲರೂ ಬಂಗಾಳಿಯಲ್ಲಿ ಮಾತನಾಡುವುದನ್ನು ಕೇಳಿ ತುಂಬಆಶ್ಚರ್ಯ ಪಟ್ಟರಂತೆ.
ಸ್ವಾಮಿ ವಿವೇಕಾನಂದರ ಪ್ರಭಾವವಂತೂ ಹಲವು ತಲೆಮಾರಿನ ಕನ್ನಡಲೇಖಕರ ಮೇಲೆ ಗಾಢವಾಗಿ ಆಗಿದೆ. ಟಿ. ಎಸ್. ವೆಂಕಣ್ಣಯ್ಯ, ಎ. ಅರ್. ಕೃಷ್ಣಶಾಸ್ತ್ರಿ, ಡಿ. ವಿ. ಗುಂಡಪ್ಪ, ಕುವೆಂಪು ಮುಂತಾದವರಿಂದ ಮೊದಲುಗೊಂಡು ಈಚಿನ ಕನ್ನಡದ ಅತ್ಯುತ್ತಮಲೇಖಕರಾದ ಎಸ್. ಎಲ್. ಭೈರಪ್ಪನವರ ವರೆಗೆ ಈ ವ್ಯಾಪ್ತಿಯನ್ನು ಕಾಣಬಹುದು. ವೆಂಕಣ್ಣಯ್ಯ ಮತ್ತು ಕೃಷ್ಣಶಾಸ್ತ್ರಿಗಳು ರಾಮಕೃಷ್ಣ ಹಾಗೂ ವಿವೇಕಾನಂದರ ಮೊತ್ತ ಮೊದಲ ಜೀವನಚರಿತ್ರೆಗಳನ್ನು ಕನ್ನಡದಲ್ಲಿ ಬರೆದರು. ರಾಮಕೃಷ್ಣದೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿದ್ದ ಕುವೆಂಪು ರಾಮಕೃಷ್ಣ ಹಾಗೂ ವಿವೇಕಾನಂದರ ಉಪದೇಶಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಅವರಿಬ್ಬರ ಜೀವನ ಚರಿತ್ರೆಗಳನ್ನು ಕನ್ನಡದಲ್ಲಿ ಬರೆಯುವುದರೊಂದಿಗೆ, ಸ್ವಾಮಿ ಶಿವಾನಂದರ ಹಲವು ಬರವಣಿಗೆಗಳನ್ನು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು.
ಕನ್ನಡ ಸಾಹಿತಿಗಳ ಮೇಲೆ ಬಹಳಷ್ಟು ಪ್ರಭಾವ ಬೀರಿದ ಮತ್ತೊಬ್ಬರೆಂದರೆ ಅರವಿಂದರು. ಕುವೆಂಪು, ದ ರಾ ಬೇಂದ್ರೆ ಹಾಗು ವಿ. ಕೃ. ಗೋಕಾಕರಲ್ಲದೆ, ಅನುಭಾವಕವಿ ಹಾಗೂ ಬಹುಭಾಷಾಕೋವಿದರಾದ ಮಧುರಚೆನ್ನರೂ ಸೇರಿದಂತೆ ಹಲವರು ಅರವಿಂದರ ಅಭಿಮಾನಿಗಳಾಗಿದ್ದರು. ಕೋ. ಚೆನ್ನಬಸಪ್ಪನವರು ಅರವಿಂದರ Life Divine ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸುತ್ತಿರುವಾಗ ಅಲ್ಲಿಯ ಕೆಲವು ಕಠಿನಶಬ್ದಗಳು ಹಾಗು ಅವುಗಳ ವಿನಿಯೋಗದ ಬಗೆಗೆ ಸಂದೇಹವುಂಟಾದಾಗ, ಅರವಿಂದರೇ ಒಪ್ಪಿದ್ದ ಬಂಗಾಳಿ ಅನುವಾದವನ್ನು ನೋಡುತ್ತಿದ್ದರಂತೆ.
ಡಿವಿಜಿ, ಬಿ. ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಬೇಂದ್ರೆ ಹಾಗೂ ಕೃಷ್ಣಶಾಸ್ತ್ರಿಗಳನ್ನು ಮೊದಲುಗೊಂಡು, ನವೋದಯಯುಗದ ಹೆಚ್ಚಿನ ಸಾಹಿತಿಗಳು ಕನಿಷ್ಠ ಆರೇಳು ಭಾಷೆಗಳನ್ನು ಬಲ್ಲವರಾಗಿದ್ದರು. ಎಸ್. ಶ್ರೀಕಂಠಶಾಸ್ತ್ರಿಗಳು ಹದಿನೇಳು ಭಾಷೆಗಳನ್ನು ಬಲ್ಲವರಾಗಿದ್ದರೆ, ಗೋವಿಂದ ಪೈಗಳು ಇಪ್ಪತ್ತೆರಡು ಭಾಷೆಗಳ ಪರಿಚಯವನ್ನು ಪಡೆದಿದ್ದರು. ಕನ್ನಡದಲ್ಲಿ ತಲೆದೋರಿದ ನವ್ಯಸಾಹಿತ್ಯಾಂದೋಲನವು ಇಂಥ ಬಹುಭಾಷಾಪ್ರಾವೀಣ್ಯದ ಸಾವನ್ನು ಕಂಡರೆ, ಅನಂತರದ “ಕ್ರಾಂತಿಕಾರಿ" ಆಂದೋಲನಗಳು ಕನ್ನಡಸಾಹಿತ್ಯದಿಂದ ಕನ್ನಡವನ್ನೇ ತೆಗೆದುಹಾಕಿವೆಯೆಂದರೆ ತಪ್ಪಲ್ಲ.
ನವೋದಯದ ಪ್ರಮುಖರ ಪೈಕಿ ಬಂಗಾಳಿಯಲ್ಲಿ ಧಾರಾಳವಾಗಿ ನುರಿತವರೆಂದರೆ ಗೋವಿಂದಪೈ, ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿ, ಕುವೆಂಪು, ಮಾಸ್ತಿ, ಬೇಂದ್ರೆ, ಮಧುರಚೆನ್ನ, ವಿ. ಸೀತಾರಾಮಯ್ಯ, ಪ್ರಹ್ಲಾದ ನರೇಗಲ್ಲ, ಪಾ. ವೆಂ. ಆಚಾರ್ಯ, ಕೆ. ಕೃಷ್ಣಮೂರ್ತಿ ಮೊದಲಾದವರು.
ಬಂಕಿಮರ ಕೃತಿಗಳು ಮೊದಲು ಕನ್ನಡದಲ್ಲಿ ದೊರೆತಾಗ ನಮ್ಮ ಜನತೆಗೆ ಬಂಗಾಳಿಯಲ್ಲಿ ಆಸಕ್ತಿ ಹುಟ್ಟಿತು. ಠಾಕುರರ ಆಗಮನದಿಂದ ಬಂಗಾಳಿ ಕಲಿಯುವ ಹುಚ್ಚು ಇನ್ನೂ ಹೆಚ್ಚಿತು. ಮಾಸ್ತಿಯವರು ಠಾಕುರರನ್ನು ಕುರಿತು ಬರೆದರು. ಟಿ. ಎಸ್. ವೆಂಕಣ್ಣಯ್ಯನವರು ಠಾಕುರರ ಹಾಗೂ ಬಂಕಿಮರ ಹಲವು ಲೇಖನಗಳನ್ನು ಅನುವಾದಿಸಿದರು. ಎ. ಅರ್. ಕೃಷ್ಣಶಾಸ್ತ್ರಿಗಳು ಠಾಕುರರ ಲೇಖನಗಳ ಮೂರು ಸಂಪುಟಗಳನ್ನು ನಿಬಂಧಮಾಲಾ ಎಂಬ ಹೆಸರಿನಲ್ಲಿ ಅನುವಾದಿಸಿದರು. ಎಚ್. ವಿ. ಸಾವಿತ್ರಮ್ಮನವರು ಠಾಕುರರ ಅನೇಕ ಕಾದಂಬರಿಗಳನ್ನು ಅನುವಾದಿಸಿದರು.
ನವೋದಯ ಲೇಖಕರ ಪೈಕಿ ಶಿವರಾಮ ಕಾರಂತರಿಗೆ ಬಂಗಾಳಿಯ ಪರಿಚಯವಿಲ್ಲದಿದ್ದರೂ ಠಾಕುರರಿಂದ ಬಹಳವಾಗಿ ಪ್ರಭಾವಿತರಾಗಿದ್ದ ಅವರು ಠಾಕುರರಂತೆಯೇ ಇದ್ದರು. ಕಾರಂತರು ಕವಿತೆಗಳನ್ನು ಬರೆಯದಿದ್ದರೂ ಠಾಕುರರಂತೆ ಕಥೆ, ಕಾದಂಬರಿ ಹಾಗೂ ಪ್ರವಾಸಕಥನಗಳನ್ನು ಬರೆದರು.ಅವರು ಚಿತ್ರಕಾರರೂ ಆಗಿದ್ದರು. ಯಕ್ಷಗಾನಕಲೆಯನ್ನು ಬಲುಮಟ್ಟಿಗೆ ಒಬ್ಬಂಟಿಯಾಗಿ ಪುನರುಜ್ಜೀವನಗೊಳಿಸಿದರು. ಪ್ರಕೃತಿಯ ನಡುವಿನಲ್ಲಿ ಶಾಲೆಯನ್ನು ನಡೆಸಿದರು. ವಿಜ್ಞಾನ ಹಾಗು ವಿಜ್ಞಾನಸಂಬಂಧಿವಿಷಯಗಳನ್ನು ಕುರಿತು ಬರೆದರು. ಭಾರತೀಯಕಲೆ ಹಾಗೂ ಶಿಲ್ಪಕಲೆಗಳ ಬಗೆಗೂ ಬರೆದರು. ಅನೇಕ ಪ್ರವಾಸಗಳನ್ನು ಕೈಗೊಂಡರು. ಹೀಗೆ ಕಾರಂತಾರಲ್ಲಿ ಠಾಕುರರೊಂದಿಗೆ ಎಷ್ಟೋ ಸಾಮ್ಯಗಳನ್ನು ಕಾಣಬಹುದು.
ಠಾಕುರರನ್ನುಳಿದು ಶರಚ್ಚಂದ್ರ ಚಟ್ಟೋಪಾಧ್ಯಾಯ ಮತ್ತು ವಿಭೂತಿಭೂಷಣ ಬಂದ್ಯೋಪಾಧ್ಯಾಯರ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಾಗ ಅವು ನಮ್ಮ ಓದುಗರಿಂದ ಹೆಚ್ಚಿನ ಮೆಚ್ಚುಗೆಯನ್ನು ಪಡೆದವು. ಶರಚ್ಚಂದ್ರರ ಎಲ್ಲ ಕಾದಂಬರಿಗಳೂ ಕನ್ನಡಕ್ಕೆ ಅನುವಾದಗೊಂಡವು. ಬೇಂದ್ರೆಯವರು ಬಂಗಾಳಿಯ ನೂರೊಂದು ಕವಿತೆಗಳನ್ನು ಕನ್ನಡೀಕರಿಸಿದರು. ಪತ್ರಕರ್ತರಾದ ಪಾ. ವೆಂ. ಆಚಾರ್ಯರವರು ಅನೇಕ ಬಂಗಾಳಿ ಕೃತಿಗಳನ್ನು ವಿವಿಧಕಾವ್ಯನಾಮಗಳಲ್ಲಿ ಅನುವಾದಿಸಿದರು. ಎಂ. ಎಸ್. ಕೃಷ್ಣಮೂರ್ತಿಗಳು ಬಂಗಾಳಿಯ ಆಧ್ಯಾತ್ಮಿಕಕವಿಗಳನ್ನು ಕುರಿತು ಬರೆದರು ಹಾಗೂ ಹದಿನೈದನೆಯ ಶತಮಾನದ ಬಂಗಾಳಿ ಕವಿ ಚಂಡೀದಾಸನ ಕೃತಿಗಳನ್ನು ಅನುವಾದಿಸಿದರು.
ಬಂಗಾಳಿ ಸಾಹಿತಿಯೊಬ್ಬರ ಕುರಿತ ಕನ್ನಡದ ಕೃತಿಗಳಲ್ಲಿ ಗಣನೀಯವಾದದ್ದು ಎ. ಅರ್. ಕೃಷ್ಣಶಾಸ್ತ್ರಿಗಳು ಬಂಕಿಮಚಂದ್ರರ ಕಾದಂಬರಿಗಳು ಹಾಗು ಇನ್ನಿತರ ಬರವಣಿಗೆಗಳನ್ನು ಕುರಿತು ಬರೆದ ದೀರ್ಘಸಂಶೋಧನಪ್ರಬಂಧ. ಇದಕ್ಕೆ ಕೇಂದ್ರಸಾಹಿತ್ಯ ಅಕಾಡಮಿಯ ೧೯೬೧ರ ಪ್ರಶಸ್ತಿ ದೊರಕಿದ್ದಲ್ಲದೆ ಬಂಕಿಮರ ಬರವಣಿಗೆಗಳನ್ನು ಕುರಿತಂತೆ ಇದಕ್ಕೆ ಸಮನಾದ ಕೃತಿಯು ಮತ್ತಾವ ಭಾಷೆಯಲ್ಲಿಯೂ ಬಂದಿಲ್ಲವೆಂಬುದು ಪಂಡಿತರ ಅಭಿಪ್ರಾಯ.
ಎಲ್ಲಾ ಭಾರತೀಯಭಾಷೆಗಳಿಗೆ ಸಂಸ್ಕೃತವು ಮೂಲವಾಗಿದ್ದರೂ ಕಳೆದ ಎರಡು ಸಹಸ್ರಮಾನಗಳಲ್ಲಿ ಎಲ್ಲವೂ ತಮ್ಮಂತೆಯೇ ವೃದ್ಧಿಗೊಂಡು, ಸಮೃದ್ಧವಾದ ಸಾಹಿತ್ಯಕಪರಂಪರೆಗಳನ್ನು ಹೊಂದಿವೆ. ಪ್ರಾದೇಶಿಕಭಾಷೆಗಳನ್ನಾಡುವವರು ಇತರ ಭಾಷೆಗಳವರೊಂದಿಗೆ ಸದಾ ಸಂಪರ್ಕದಲ್ಲಿದ್ದ ಚರಿತ್ರೆ ನಮ್ಮದಾಗಿದ್ದು, ಎಲ್ಲ ಭಾಷೆಗಳು ಪರಸ್ಪರ ಮೈತ್ರಿಯಿಂದ ವೃದ್ಧಿ ಹೊಂದಿವೆ. ಈ ನಿಟ್ಟಿನಲ್ಲಿ ಪರಿಶೀಲಿಸಿದಾಗ ಈಚಿನ ವಿಪರ್ಯಾಸವೊಂದು ನಮ್ಮ ಮನವನ್ನು ಕಲಕದಿರದು. ಅದೆಂದರೆ ಇಂದಿನ ಅಂಗ್ಲಭಾಷಾಮಾತ್ರಕೇಂದ್ರಿತವಾದ ಶಿಕ್ಷಣವ್ಯವಸ್ಥೆಯಿಂದಾಗಿ ಇತರ ಭಾಷೆಗಳೊಡನಿರಲಿ, ನಮ್ಮ ನಮ್ಮ ತಾಯ್ನುಡಿಗಳೊಂದಿಗೇ ನಮಗೆ ಸಂಪರ್ಕವಿಲ್ಲದಂತಾಗಿದೆ. ಇದರೊಂದಿಗೆ ಪ್ರಾದೇಶಿಕದುರಭಿಮಾನದ ವಿಷಸರ್ಪವೂ ಆಗಾಗ ಹೆಡೆಯೆತ್ತುತ್ತಿರುತ್ತದೆ. ಭಾಷಾಂತರ, ಅನುವಾದ ಮತ್ತಿತರ ವಿಧಾನಗಳ ಮೂಲಕ ವಿಭಿನ್ನಭಾರತೀಯಭಾಷೆಗಳ ನಡುವೆ ಹಾಗೂ ಅವುಗಳೊಡನೆ ನಮಗೆ ಏರ್ಪಡಬಹುದಾದ ಸಂಪರ್ಕವು ಮತ್ತೂ ಅರ್ಥಪೂರ್ಣವಾಗಬೇಕೆಂದರೆ ಅದು ಎಲ್ಲ ಭಾರತೀಯರಿಗೂ ಸಮಾನವಾದ ಯಾವುದಾದರೂ ತಳಹದಿಯ ಮೇಲೆ ಆಗಬೇಕು. ಅದು ಸನಾತನಧರ್ಮದ ಅಧ್ಯಾತ್ಮವೋ, ರಾಷ್ಟ್ರವಾದವೋ, ಅಥವಾ ಸೋಪಜ್ಞಸಮಾಜಸುಧಾರಣೆಯ ಮೂಲಕವೋ ಆಗಬೇಕಲ್ಲದೆ ಬೇರೆ ಮಾರ್ಗಗಳಿಂದ ಸಾಧಿಸುವುದು ಸುಲಭವಲ್ಲ.
ಇದು ಶತಾವಧಾನಿ ಡಾ।। ರಾ. ಗಣೇಶ್ (ಮತ್ತು ಹರಿ ರವಿಕುಮಾರ್) ಬರೆದ ಆಂಗ್ಲ ಭಾಷಾ ಲೇಖನದ ಕನ್ನಡ ಅನುವಾದ. ಮೂಲ ಲೇಖನವನ್ನು ಓದಲು ಇಲ್ಲಿ ಒತ್ತಿ.