“ಲೋಚನ”ದ ಕೆಲವೊಂದು ಮಹತ್ತ್ವಪೂರ್ಣಸಂಗತಿಗಳು
ಆನಂದವರ್ಧನನು ತಾನು ಪ್ರತಿಪಾದಿಸಿದ ಧ್ವನಿತತ್ತ್ವದ ಮೂರು ಸ್ತರಗಳಾದ ವಸ್ತು, ಅಲಂಕಾರ ಮತ್ತು ರಸಧ್ವನಿಗಳ ನಡುವೆ ಪ್ರಸ್ಫುಟವಾದ ತರ-ತಮವಿವೇಕವನ್ನು ಗ್ರಹಿಸಿದ್ದರೂ ಅದನ್ನು ಕಂಠೋಕ್ತವಾಗಿ ಸಾರಿರಲಿಲ್ಲ. ಈ ಕೆಲಸವನ್ನು ಅಭಿನವಗುಪ್ತನು ಧ್ವನಿಕಾರನ ಹೃದಯಜ್ಞನಾಗಿ ನಡಸಿರುವುದು ನಿಜಕ್ಕೂ ಮುದಾವಹ. ಈ ಮೂಲಕ ಸಾಮಾನ್ಯತಃ ಕಾವ್ಯಾತ್ಮವು ಧ್ವನಿಯೆಂದು ಧ್ವನ್ಯಾಲೋಕದ ಮೊದಲಿಗೆ ಒಕ್ಕಣೆಗೊಂಡಿದ್ದರೂ ವಸ್ತುತಃ ರಸವೇ ಕಾವ್ಯದ ಆತ್ಮವೆಂಬ ಪರಮಾರ್ಥವು ಉನ್ಮೀಲಿತವಾಯಿತು. ಅಲ್ಲದೆ ವಸ್ತ್ವಲಂಕಾರಧ್ವನಿಗಳು ಬಲುಮಟ್ಟಿಗೆ ಕಾವ್ಯವೊಂದರ ರಚನಾಸ್ತರದಲ್ಲಿ ತೋರಿಕೊಳ್ಳುವ ಚಮತ್ಕಾರ ಹಾಗೂ ಅಲಂಕಾರಗಳ ನೆಲೆಯಲ್ಲಿಯೇ ನಿಂತರೆ ರಸಧ್ವನಿಯು ಅದೇ ಕಾವ್ಯದ ಇತಿವೃತ್ತಸ್ತರದಲ್ಲಿ ಆವಿಷ್ಕೃತವಾಗುವ ವಿಭಾವಾನುಭಾವಗಳ ಮಟ್ಟದಲ್ಲಿ ಬೆಳಗುತ್ತದೆಂಬ ಯಥಾರ್ಥವು ನಿಶ್ಚಿತವಾಗುವಂತಾಯಿತು. ಇಷ್ಟು ಮಾತ್ರವಲ್ಲದೆ, “ರಸಧ್ವನಿ” ಎಂದು ನಿರ್ದೇಶಿಸುವಾಗಲೆಲ್ಲ ಅದು ರಸ, ರಸಾಭಾಸ, ಭಾವ, ಭಾವಾಭಾಸ, ಭಾವೋದಯ, ಭಾವಶಾಂತಿ, ಭಾವಸಂಧಿ, ಭಾವಶಬಲತೆಯೇ ಮುಂತಾದ ವಿಭಾವಾನುಭಾವಸಾಮಗ್ರಿಯ ಸಕಲಚಿತ್ತವೃತ್ತಿಮೂಲೀಯಸ್ವಾರಸ್ಯಗಳನ್ನೂ ಒಳಗೊಂಡಿರುತ್ತವೆಂಬ ಆನಂದವರ್ಧನನ ಇಂಗಿತವನ್ನು ಚೆನ್ನಾಗಿ ಗ್ರಹಿಸಿ “ರಸಾದಿಧ್ವನಿ”ಯೆಂದೇ ಬಹುತ್ರ ವ್ಯವಹರಿಸುವುದು ಗಮನಾರ್ಹ. ಇದನ್ನೆಲ್ಲ ಅಭಿನವಗುಪ್ತನ ಮಾತುಗಳಲ್ಲಿಯೇ ಮನಗಾಣಬಹುದು: “ತೇನ ರಸ ಏವ ವಸ್ತುತ ಆತ್ಮಾ; ವಸ್ತ್ವಲಂಕಾರಧ್ವನೀ ತು ಸರ್ವಥಾ ರಸಂ ಪ್ರತಿ ಪರ್ಯವಸ್ಯೇತೇ ಇತಿ ವಾಚ್ಯಾದುತ್ಕೃಷ್ಟೌ ತಾವಿತ್ಯಭಿಪ್ರಾಯೇಣ ಧ್ವನಿಃ ಕಾವ್ಯಸ್ಯಾತ್ಮೇತಿ ಸಾಮಾನ್ಯೇನೋಕ್ತಮ್” (ಪು.೩೧), “ಯೋ ರಸಾದಿರರ್ಥಃ ಸ ಏವ ರಸಾದಿಕ್ರಮೋ ಧ್ವನೇರಾತ್ಮಾ ನ ತ್ವಕ್ರಮ ಏವ ಸಃ” (ಪು.೭೮), “ಏವಂ ರಸಧ್ವನೇರೇಕಸ್ಯೇವಾಮೀ ಭಾವಧ್ವನಿಪ್ರಭೃತಯಃ” (ಪು.೮೧)
ಆನಂದವರ್ಧನನಾಗಲಿ, ಅಭಿನವಗುಪ್ತನಾಗಲಿ; ಹೆಚ್ಚೇನು ಇಡಿಯ ಭಾರತೀಯಕಾವ್ಯಮೀಮಾಂಸೆಯ ಯಾವುದೇ ಪ್ರತಿನಿಧಿಗಳಾಗಲಿ ಕಾವ್ಯದಲ್ಲಿ ರಸಾದಿಧ್ವನಿಪಾರಮ್ಯವನ್ನು ಅದೆಷ್ಟೇ ರೀತಿಯಲ್ಲಿ ಎತ್ತಿಹಿಡಿದರೂ ವಾಚ್ಯಾರ್ಥಕ್ಕೆ ಇರುವ ತನ್ನದೇ ಆದ ಮಹತ್ತ್ವವನ್ನೂ ಅನಿವಾರ್ಯತೆಯನ್ನೂ ನಿರಾಕರಿಸಲಿಲ್ಲ. ಈ ಕಾರಣದಿಂದಲೇ ಗುಣ, ರೀತಿ, ಅಲಂಕಾರಾದಿಗಳಿಗೆಲ್ಲ ಯುಕ್ತಸ್ಥಾನವು ಸಲ್ಲುವಂತಾಯಿತು. ಅಲ್ಲದೆ ಕಲಾನಿರ್ಮಾಣದಲ್ಲಿ ವ್ಯುತ್ಪತ್ತಿ ಮತ್ತು ಅಭ್ಯಾಸಗಳಿಗೆ ಇರುವ ಮಹತ್ತ್ವವೂ ಗೆಲ್ಲುವಂತಾಯಿತು. ಈ ಕಾರಣದಿಂದಲೇ ಸಾಮಾನ್ಯಮಟ್ಟದ ಕಾವ್ಯರಚನಾಧಿಕಾರವೂ ಇಲ್ಲದವರೆಲ್ಲ ಕವಿತಾನಿರ್ಮಿತಿಗೆ ಕೈಹಾಕಲು ಅಂಜುವಂತಾಗಿ ಕಲೆಯ ಮರ್ಯಾದೆ ದಕ್ಕಿತು. ಜೊತೆಗೆ ಆಧುನಿಕಸಾಹಿತ್ಯದಲ್ಲಿಂದು ನೋಡುವಂಥ ವ್ಯುತ್ಪತ್ತಿ-ಅಭ್ಯಾಸಗಳ ಲೇಶವೂ ಇಲ್ಲದ ಅಶಿಸ್ತಿನ ಕಾವ್ಯಾಭಾಸಗಳ ಅಕಾಂಡತಾಂಡವವೂ ನಿವಾರಿತವಾಯಿತು. ಇದನ್ನೆಲ್ಲ ಅಭಿನವಗುಪ್ತನು ಸಂಕ್ಷಿಪ್ತವಾದರೂ ಸಶಕ್ತವಾದ ಮಾತುಗಳಲ್ಲಿ ಸೆರೆಹಿಡಿದಿದ್ದಾನೆ. ಉದಾಹರಣೆಗೆ: “ವಾಚಕಶಕ್ತಿರಪಿ ತಥಾಪೇಕ್ಷಣೀಯಾ ಸಾ ಚ ವಾಚ್ಯನಿಷ್ಠೈವ” (ಪು.೨೨೯).
ಕಾವ್ಯವನ್ನು ಲಕ್ಷಣೀಕರಿಸುವುದು ಕಷ್ಟದ ಕೆಲಸ. ಯಾವುದೇ ರೀತಿಯಲ್ಲಿ ನಿರ್ದುಷ್ಟವೆನ್ನಬಹುದಾದ ಕಾವ್ಯಲಕ್ಷಣದಲ್ಲಿ ಕೂಡ ಅವ್ಯಾಪ್ತಿ-ಅತಿವ್ಯಾಪ್ತಿದೋಷಗಳನ್ನು ಹೆಕ್ಕಿ ತೆಗಿಯಬಹುದು. ಬಹುಶಃ ಈ ಕಾರಣದಿಂದಲೇ ಆನಂದವರ್ಧನನು ತನ್ನದಾದ ಕಾವ್ಯಲಕ್ಷಣವನ್ನು ಸಾರಿ ಹೇಳಲಿಲ್ಲ. ದಿಟವೇ, “ಕಾವ್ಯಸ್ಯ ಲಲಿತೋಚಿತಸನ್ನಿವೇಶಚಾರುಣಃ ಶರೀರಸ್ಯೇವಾತ್ಮಾ ಸಾರರೂಪತಯಾ ಸ್ಥಿತಃ” (ಪು.೧೫) ಎಂಬ ವೃತ್ತಿಭಾಗದಲ್ಲಿ ವಿದ್ವಾಂಸರು ಆನಂದವರ್ಧನೀಯಕಾವ್ಯಲಕ್ಷಣವನ್ನು ಕಾಣುತ್ತಾರೆ. ಆದರೆ ಇದಕ್ಕೆ ಸ್ಪಷ್ಟತೆ ಸಿಕ್ಕಿದ್ದು ಅಭಿನವಗುಪ್ತನ ಮಾತುಗಳಲ್ಲಿ: “ಲಲಿತಶಬ್ದೇನ ಗುಣಾಲಂಕಾರಗ್ರಹಣಮಾಹ, ಉಚಿತಶಬ್ದೇನ ರಸವಿಷಯಮೇವ” (ಪು.೧೬), “ಕಾವ್ಯಗ್ರಹಣಾದ್ಗುಣಾಲಂಕಾರೋಪಸ್ಕೃತಶಬ್ದಾರ್ಥಪೃಷ್ಠಪಾತೀ ಧ್ವನಿಲಕ್ಷಣ ಆತ್ಮೇತ್ಯುಕ್ತಮ್ ... ಚಾರುತ್ವಪ್ರತೀತಿಸ್ತರ್ಹಿ ಕಾವ್ಯಸ್ಯಾತ್ಮಾ ಸ್ಯಾದಿತಿ ತದಂಗೀಕುರ್ಮ ಏವ ನಾಸ್ತಿ ಖಲ್ವಯಂ ವಿವಾದ ಇತಿ ... ವ್ಯಾಪಾರೋ ವಾ ಶಬ್ದಾರ್ಥಯೋರ್ಧ್ವನನಮಿತಿ ... ಗುಣಾಲಂಕಾರಾಣಾಂ ವಾಚ್ಯವಾಚಕಭಾವಪ್ರಾಣತ್ವಾತ್ | ಅಸ್ಯ ಚ ತದನ್ಯವ್ಯಂಗ್ಯವ್ಯಂಜಕಭಾವಸಾರತ್ವಾನ್ನಾಸ್ಯ ತೇಷ್ವಂತರ್ಭಾವ ಇತಿ” (ಪು.೩೯). ಈ ಎಲ್ಲ ಮಾತುಗಳಲ್ಲಿ ಕಾವ್ಯಶರೀರದ ಗುಣಾಲಂಕಾರ-ರೀತಿಪಾರಮ್ಯವೂ ಇವೆಲ್ಲ ವ್ಯಂಜಕವಾಗಿ ಪರಿಣಮಿಸಲೇಬೇಕೆಂಬ ಎಚ್ಚರವೂ ಸ್ಪಷ್ಟವಾಗಿವೆ. ಈ ಮೂಲಕ ಭಾಮಹನು ಹೇಳಿದ “ಶಬ್ದಾರ್ಥೌ ಸಹಿತೌ ಕಾವ್ಯಂ” ಎಂಬ ಸೂತ್ರಪ್ರಾಯವಾದ ಮಾತಿಗೆ ತಕ್ಕ ಭಾಷ್ಯವು ದೊರೆತು ಕಾವ್ಯಕ್ಕೊಂದು ನಿರ್ವಾಹ್ಯಲಕ್ಷಣವು ದೊರೆತು ಪರಿಷ್ಕಾರಪ್ರಿಯರಿಗೆ ನೆಮ್ಮದಿ ದಕ್ಕಿದೆಯೆನ್ನಬಹುದು.
ಆನಂದವರ್ಧನನು ವ್ಯಂಜನಾವ್ಯಾಪಾರದ ಮಹತ್ತ್ವವನ್ನು ಮತ್ತೆ ಮತ್ತೆ ಸಾರಿದ ಜಾಡನ್ನೇ ಹಿಡಿದ ಅಭಿನವಗುಪ್ತನು ವ್ಯಂಜಕತ್ವವಿಲ್ಲದ ಯಾವ ರಚನೆಗೂ ಕಾವ್ಯತ್ವವನ್ನು ಕರುಣಿಸುವುದಿಲ್ಲ. ಮಾತ್ರವಲ್ಲ, ನಾಟ್ಯಾಯಮಾನತೆಯೇ ಉತ್ಕೃಷ್ಟಕಾವ್ಯದ ಪರಮಸ್ವರೂಪ; ಮತ್ತಿದು ಕವಿನಿಬದ್ಧಪ್ರೌಢೋಕ್ತಿಯಿಂದಲೇ ಸಾಧ್ಯವೆಂಬುದನ್ನು ಸಾರಿದ್ದಾನೆ. ಅಭಿನವಭಾರತಿಯಲ್ಲಿಯೂ ತನ್ನ ಗುರು ಭಟ್ಟತೌತನ “ಪ್ರಯೋಗತ್ವಮನಾಪನ್ನೇ ಕಾವ್ಯೇ ನಾಸ್ವಾದಸಂಭವಃ” ಎಂಬ ಮಾತಿನ ಹಿನ್ನೆಲೆಯಲ್ಲಿ ಈ ತತ್ತ್ವವನ್ನು ದೃಢೀಕರಿಸಿದ ಪರಿಯಿಲ್ಲಿ ಸ್ಮರಣೀಯ. ಇದನ್ನೆಲ್ಲ ಅವನ ಈ ಮಾತುಗಳಲ್ಲಿ ಮನಗಾಣಬಹುದು: “ಯದಾ ತು ಕವಿನಿಬದ್ಧಸ್ಯ ... ಪ್ರೌಢೋಕ್ತಿಃ, ತದಾ ವ್ಯಂಜಕತ್ವಂ” (ಪು.೧೨೯). ಇದೇ ರೀತಿ ಆನಂದವರ್ಧನನು ಅರೆಮನಸ್ಸಿನಿಂದಲೇ ಉಲ್ಲೇಖಿಸಿದ ಚಿತ್ರವೆಂಬ ಕಾವ್ಯಪ್ರಕಾರವನ್ನು ಸರ್ವಾತ್ಮನಾ ನಿರಾಕರಿಸುವ ಮೂಲಕ ಅಭಿನಗುಪ್ತನು ವ್ಯಂಗ್ಯಸ್ಪರ್ಶವಿಲ್ಲದ ರಚನೆಯತ್ತ ತೋರಿದ ಅರ್ಹತಿರಸ್ಕಾರವನ್ನು ನೆನೆಯಬಹುದು: “ಅಕಾವ್ಯಂ ಹಿ ತದ್ಧೇಯತಯೋಪದಿಶ್ಯತೇ” ಹೀಗೆಯೇ ವ್ಯಾವರ್ತನಸಾಧ್ಯವದ ಪ್ರತ್ಯೇಕಾರ್ಥದ ಸಂಭವವೂ ಇಲ್ಲದ ನಾದೈಕಮಾತ್ರದ — ಅತ ಏವ “ಶಬ್ದ”ವೇ “ಅರ್ಥ”ವಾಗಿ ಪರಿಣಮಿಸಿದ — ಸಂಗೀತದಲ್ಲಿ ಕೂಡ ವ್ಯಂಗ್ಯತ್ವವಿದೆಯೆಂಬ ಆನಂದವರ್ಧನನ ಕಾಣ್ಕೆಯನ್ನು ಸಮರ್ಥಿಸುತ್ತಾ ಸಂಗೀತದ ನಾದಾಕಾರವೆಂಬುದು ಪರಮಾರ್ಥತಃ ಭರತನು ಒಕ್ಕಣಿಸುವ — ವಿಭಾವಾನುಭಾವಾದಿಗಳಿಂದ ನಿಷ್ಪನ್ನವಾಗುವ — ರಸವೇ ಹೌದೆಂದು ಅಭಿನವಗುಪ್ತನು ಸ್ಪಷ್ಟಪಡಿಸಿರುವುದು ಸಂಕ್ಷಿಪ್ತವಾದರೂ ಸಮರ್ಥವಾದ ಕಾಣ್ಕೆ: “ರಸಂ ಪ್ರತಿ ಚ ಶಬ್ದಸ್ಯ ವ್ಯಂಜಕತ್ವಮೇವ” (ಪ.೧೯೭)
ರಸದ ಆನಂದಸ್ವರೂಪವನ್ನು ಮತ್ತೆ ಮತ್ತೆ ಬಗೆಗಾಣಿಸುವ ಅಭಿನವಗುಪ್ತನು ಅದನ್ನು ಭೋಗಾನಂದ ಮತ್ತು ಯೋಗಾನಂದಗಳೇ ಮೊದಲಾದ ಮತ್ತಿತರ ಆನಂದಗಳ ಜೊತೆಗೆ ಮುಖಾಮುಖಿಯಾಗಿಸುವುದು ಆತನಿಗಿದ್ದ ಪರಿಚ್ಛೇದಪ್ರಜ್ಞೆಗೆ ಉತ್ತಮಸಾಕ್ಷಿ. ಹೀಗಲ್ಲದಿದ್ದಲ್ಲಿ ಆನಂದನಿಶ್ಶ್ರೇಣಿಯಲ್ಲಿ ರಸಾನಂದದ ಸ್ಥಾನವನ್ನು ನಿಷ್ಕರ್ಷಿಸಲು ಕಷ್ಟವಾಗುತ್ತಿತ್ತು: “... ಅತಶ್ಚ ರಸೋऽಯಮಲೌಕಿಕಃ. ಯೇನ ಲಲಿತಪರುಷಾನುಪ್ರಾಸಸ್ಯಾರ್ಥಾಭಿಧಾನಾನುಪ-ಯೋಗಿನೋऽಪಿ ರಸಂ ಪ್ರತಿ ವ್ಯಂಜಕತ್ವಂ” (ಪು.೬೯), “ಇಹ ತು ವಿಭಾವಾದಿಚರ್ವಣಾದ್ಭುತಪುಷ್ಪವತ್ತತ್ಕಾಲಸಾ-ರೈವೋದಿತಾ ನ ಪೂರ್ವಾಪರಕಾಲಾನುಬಂಧಿನೀತಿ ಲೌಕಿಕಾಸ್ವಾದಾದ್ಯೋಗಿವಿಷಯಾಚ್ಚಾನ್ಯ ಏವಾಯಂ ರಸಾಸ್ವಾದಃ” (ಪು.೭೦)
ಗುಣಸ್ವರೂಪವನ್ನು ಕುರಿತು ಹೇಳುವಾಗ ರಸಕ್ಕೂ ಗುಣಕ್ಕೂ ಇರುವ ಸಾವಯವಸಂಬಂಧವನ್ನು ಅಭಿನವಗುಪ್ತನು ಚೆನ್ನಾಗಿ ನಿರೂಪಿಸುತ್ತಾನೆ. ಅವನ ಸುದೀರ್ಘವಾದ ಪ್ರತಿಪಾದನೆಯ ಸಾರಾಂಶವಾಗಿ “ತದಕಾಲುಷ್ಯಂ ಪ್ರಸನ್ನತ್ವಂ ನಾಮ ಸರ್ವರಸಾನಾಂ ಗುಣಃ. ಉಪಾಚಾರಾತ್ತು ತಥಾವಿಧೇ ವ್ಯಂಗ್ಯೇऽರ್ಥೇ ಯಚ್ಛಬ್ದಾರ್ಥಯೋಃ ಸಮರ್ಪಕತ್ವಂ ತದಪಿ ಪ್ರಸಾದಃ” (ಪು.೯೯), “ಸರ್ವರಸಸಾಧಾರಣ್ಯಮೇವ ಗುಣಃ” (ಪು.೧೦೦) ಎಂಬ ಮಾತುಗಳನ್ನು ಗಮನಿಸಬಹುದು. ಈ ಪ್ರಕಾರ ಓಜಸ್ಸು ಮತ್ತು ಮಾಧುರ್ಯಗಳೆಂಬ ಎರಡು ಗುಣಗಳು ವಿವಿಧರಸಗಳಿಗೆ ಯಥೋಚಿತವಾಗಿ ಅನ್ವಿತವಾಗುವುವಾದರೂ ಪ್ರಸಾದಗುಣವು ಮಾತ್ರ ಸರ್ವತ್ರ ಸಲ್ಲುವಂಥದ್ದು. ಈ ಅಂಶವನ್ನು ಆನಂದವರ್ಧನನು ತನ್ನ ಕಾರಿಕೆಯಲ್ಲಿ (೨.೧೧) ಸೂಚ್ಯವಾಗಿ ಹೇಳಿದ್ದರೂ ಪ್ರತಿಯೊಂದು ರಸಕ್ಕೂ ವಿವಿಧಗುಣಗಳನ್ನು ಅನ್ವಯಿಸಿ ಕಟ್ಟಕಡೆಗೆ ರಸತ್ವವಿರುವುದೇ ಪ್ರಸಾದವೆಂಬ ಗುಣಮೌಲ್ಯದಲ್ಲೆಂದು ಸಾರಿರುವ ಪರಿ ಪ್ರಶಂಸನೀಯ. ಈ ಮೂಲಕ ಕಾವ್ಯದಲ್ಲಿ ಯಾವುದನ್ನು ಉದಾತ್ತತೆಯೆಂದೂ (grand) ಭವ್ಯತೆಯೆಂದೂ (sublime) ಪಾಶ್ಚಾತ್ಯಕಾವ್ಯಮೀಮಾಂಸಕರು ಮಿಗಿಲಾಗಿ ಮನ್ನಿಸುವರೋ ಆ ಮೌಯಗಳ ಧ್ವನನವನ್ನು ಕಾಣಬಹುದು. ಇಲ್ಲವಾದಲ್ಲಿ ಪ್ರಸಾದವೆಂಬುದು ಕೇವಲ ಅಗ್ಗದ ಜಾಳುತನವಾದೀತು. ವಸ್ತುತಃ ಇದು ಸಶಕ್ತಸಾರಳ್ಯದ ಸೊಗಸು. ಇಂಥ ಪ್ರತಿಪಾದನೆಯಲ್ಲೆಲ್ಲ ಅಭಿನವಗುಪ್ತನು ಆನಂದವರ್ಧನನ ಸೂಚನೆಗಳನ್ನು ಗ್ರಹಿಸಿ ಸ್ವೋಪಜ್ಞವಾಗಿ ವಿಸ್ತರಿಸಿರುವುದು ಶಾಸ್ತ್ರಜಿಜ್ಞಾಸುಗಳಿಗೆ ಪರಮೋಪಕಾರಿಯೆನ್ನಲೇಬೇಕು.
ಅಲಂಕಾರಗಳ ಸ್ವಭಾವವನ್ನು ಕುರಿತು ತುಂಬ ಬೆಲೆಯುಳ್ಳ ಮಾತನ್ನೇ ಅಭಿನವಗುಪ್ತನು ಆಡಿದ್ದಾನೆ. ಆನಂದವರ್ಧನನ ಕಾರಿಕೆಯೊಂದನ್ನು (೨.೬) ವಿಶದೀಕರಿಸುತ್ತಾ “ತದೇವಾಲಂಕರಣಂ ಯದ್ವ್ಯಂಗ್ಯಾರ್ಥಾಭಿವ್ಯಂಜ-ನಸಾಮರ್ಥ್ಯಾಧಾನಮಿತಿ” (ಪು.೯೦) ಎನ್ನುವ ಮೂಲಕ ಮಾತಿಗೆ ವ್ಯಂಜಕತೆಯನ್ನು ತುಂಬಿಕೊಡುವ ಸಾಮರ್ಥ್ಯವುಳ್ಳದ್ದೇ ಅಲಂಕಾರವೆಂದು ಮೂಲಾನುಸಾರಿಯಾಗಿ ಸ್ಪಷ್ಟೀಕರಿಸಿರುವುದು ಸೊಗಸಾಗಿದೆ. ಜೊತೆಗೆ ಮತ್ತೊಂದೆಡೆಯಲ್ಲಿ “ಇಯಂ ವ್ಯಂಗ್ಯತಾ ಯದಪ್ರಧಾನಭೂತಾಪಿ ವಾಚ್ಯಮಾತ್ರಾಲಂಕಾರೇಭ್ಯ ಉತ್ಕರ್ಷಮಲಂಕಾರಾಣಾಂ ವಿತರತಿ” (ಪು.೧೪೪) ಎಂದೂ “ಶಬ್ದಸ್ತು ನ ಕದಾಚಿದ್ವ್ಯಂಗ್ಯಃ. ಅಪಿ ತು ವ್ಯಂಜಕ ಏವೇತಿ” (ಪ್.೧೫೦) ಎಂದೂ ಒಕ್ಕಣಿಸುವ ಮೂಲಕ ಅಲಂಕಾರಗಳ ಜೀವಾಳವು ಅವುಗಳ ಗುಣೀಭೂತವ್ಯಂಗ್ಯತ್ವದಲ್ಲಿ ಇದೆಯೆಂಬುದನ್ನು ಸ್ಫುಟವಾಗಿ ಮನಗಾಣಿಸಿದ್ದಾನೆ; ಮಾತ್ರವಲ್ಲ, ಅಲಂಕಾರಗಳೆಂದೂ ವ್ಯಂಗ್ಯವಾಗುವುದಿಲ್ಲ, ಅವು ಹೆಚ್ಚೆಂದರೆ ವ್ಯಂಜಕವೇ ಆಗಿ ಉಳಿಯುತ್ತವೆಂಬ ವಾಸ್ತವವನ್ನೂ ಗುರುತುಮಾಡಿಕೊಟ್ಟಿದ್ದಾನೆ. ಈ ಮೂಲಕ ಅಲಂಕಾರಗಳ ಸಾಮರ್ಥ್ಯ ಹಾಗೂ ಪರಿಮಿತಿಗಳು ನಮಗೆ ತಿಳಿಯುತ್ತವೆ. ಜೊತೆಗೆ ಈ ಚೌಕಟ್ಟಿನೊಳಗೆ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ವಿವೇಕವೂ ದಕ್ಕುತ್ತದೆ.
ಮೇಲಣ ಚರ್ಚೆ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳೆರಡಕ್ಕೂ ಸಲ್ಲುವಂಥದ್ದು. ಆದರೆ ಅರ್ಥಾಲಂಕಾರಗಳು ರಸಪೋಷಣದೃಷ್ಟಿಯಿಂದ ಶಬ್ದಾಲಂಕಾರಗಳಿಗಿಂತ ಬಲು ಮಿಗಿಲಾಗಿವೆ. ಇದಕ್ಕೆ ಕಾರಣವಿಷ್ಟೆ: ಶಬ್ದಾಲಂಕಾರಗಳು ವರ್ಣ ಮತ್ತು ಪದಗಳ ಮಟ್ಟಿಗೆ ಮಾತ್ರ ವಿಸ್ತರಿಸಿಕೊಳ್ಳಬಲ್ಲುವಾದರೆ ಅರ್ಥಾಲಂಕಾರಗಳು ಪ್ರಾಥಮಿಕವಾಗಿಯೇ ವಾಕ್ಯವ್ಯಾಪ್ತವಾಗಿವೆ. ಅಲ್ಲದೆ, ಶಬ್ದಾಲಂಕಾರಗಳು ಪ್ರಾಯಿಕವಾಗಿ ಕವಿಯ ನೈಘಂಟುಕ ಹಾಗೂ ವೈಯಾಕರಣಶಕ್ತಿಗಳಲ್ಲಿಯೇ ಬೇರುಬಿಟ್ಟ ಕಾರಣ ಕವಿಪ್ರತಿಭೆಗಿಂತ ಮಿಗಿಲಾಗಿ ಕವಿಯ ವ್ಯುತ್ಪತ್ತಿಯನ್ನೇ ಹೆಚ್ಚಾಗಿ ನಚ್ಚಿವೆ. ಆದರೆ ಅರ್ಥಾಲಂಕಾರಗಳ ಪರಿ ಹೀಗಲ್ಲ. ಅದು ಬಲು ಮಟ್ಟಿಗೆ ಪ್ರತಿಭಾಧೀನ. ಛಂದಸ್ಸು, ಕೋಷ. ವ್ಯಾಕರಣಾದಿಗಳು ಕವಿಯ ನಾದ ಮತ್ತು ಪದಸಂಪದಗಳನ್ನು ಪುಷ್ಟಿಗೊಳಿಸಬಲ್ಲುವಲ್ಲದೆ ಕಲ್ಪನೆಯನ್ನಲ್ಲ. ಆತನ ಕಲ್ಪನೆಯು ಲೋಕದಿಂದಲೇ ಪ್ರೇರಿತವಾಗಿ, ಅಂತರಂಗದಲ್ಲಿಯೇ ಆವಿಷ್ಕೃತವಾಗಿ, ಯಾವುದೇ ಶಾಸ್ತ್ರಗಳು ನೆರವೀಯಲಾರದಂಥ ಸಂವೇದನೆಯ ಮಟ್ಟದಲ್ಲಿ ಸಲ್ಲುವ ಕಾರಣ ನಿಜವಾದ ಅರ್ಥಾಲಂಕಾರಗಳು ಇಲ್ಲಿಂದ ಮಾತ್ರ ಹೊಮ್ಮುತ್ತವೆ. ಹೀಗಾಗಿ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳಿಗಿರುವ ವ್ಯತ್ಯಾಸ ಅವಿಸ್ಮಾರ್ಯ. ಅಲ್ಲದೆ, “ಚಿತ್ರ”ವೆಂಬ ಮೂರನೆಯ ಪ್ರಕಾರದ ಕಾವ್ಯವು ಯದ್ಯಪಿ ಗುಣೀಭೂತವ್ಯಂಗ್ಯಲೇಶವೂ ಇಲ್ಲದ ಅರ್ಥಾಲಂಕಾರ ಹಾಗೂ ಪ್ರಯತ್ನಘಟಿತವಾದ ಯಾವುದೇ ರೀತಿಯ ಶಬ್ದಾಲಂಕಾರಗಳಲ್ಲಿ ತೋರಿಕೊಳ್ಳುವುದಾದರೂ ಮುಖ್ಯವಾಗಿ ಇದರ ಅಭಿವ್ಯಕ್ತಿಯು ದುಷ್ಕರಶಬ್ದಾಲಂಕಾರಗಳಲ್ಲಿಯೇ. ಈ ಕಾರಣದಿಂದಲೇ ಇಂಥ ಕಾವ್ಯಪ್ರಕಾರವನ್ನು ಆನಂದವರ್ಧನನು ತೀರ ದಾಕ್ಷಿಣ್ಯದಿಂದ ಲೆಕ್ಕಿಸಬೇಕಾಯಿತು. “ದೇವೀಶತಕ”ದಂಥ ಪ್ರಗಲ್ಭಚಿತ್ರಕವಿತೆಯನ್ನು ರಚಿಸಿದ ಈ ರಸಜ್ಞಶೇಖರನು ಇಂಥ ನಿಲವಿಗೆ ಬಂದದ್ದು ನಿಜಕ್ಕೂ ವಿಸ್ಮಯಾವಹ. ಆದರೆ ಅಭಿನವಗುಪ್ತನು ಮತ್ತೂ ಒಂದು ಹೆಜ್ಜೆ ಮುಂದುವರಿದು “ಅಕಾವ್ಯಂ ಹಿ ತದ್ಧೇಯತಯೋಪದಿಶ್ಯತೇ” (ಪು.೧೦೪) ಎಂದಿರುವುದು ಮುಕ್ತಾಕಣ, ರತ್ನಾಕರ, ಶಿವಸ್ವಾಮಿ, ಈಶ್ವರಕವಿ ಮುಂತಾದ ಚಿತ್ರಕಾವ್ಯಕೋವಿದರ ಪರಂಪರೆಯುಳ್ಳ ಕಾಶ್ಮೀರದ ತತ್ಕಾಲೀನಸಾಹಿತ್ಯನೇಪಥ್ಯದಲ್ಲಿ ಮಹತ್ತ್ವದ ಸಂಗತಿ. ಅಲ್ಲದೆ, ಮಾಘ, ಭಾರವಿ, ಕುಮಾರದಾಸ ಮುಂತಾದ ಲಬ್ಧಪ್ರತಿಷ್ಠರಾದ ಅಖಿಲಭಾರತವ್ಯಾಪ್ತಿಯ ಪೂರ್ವಸೂರಿಗಳ ಸಾಧನೆಯ ಹಿನ್ನೆಲೆಯಲ್ಲಿ ಮತ್ತೂ ಕ್ರಾಂತಿಕಾರಕವೆನ್ನಬಹುದಾದ ನಿಲವು. ಹಾಗೆಂದು ಅಕ್ಲಿಷ್ಟವೂ ಅಯತ್ನಸಾಧ್ಯವೂ ಆದ ರಸವಿರುದ್ಧವಲ್ಲದ ಶಬ್ದಾಲಂಕಾರಗಳಿಗೆ ಯಾವುದೇ ತೆರನಾದ ನಿಷೇಧವನ್ನೂ ಹೇರಿಲ್ಲ. ವಿಶೇಷತಃ ಬಲಾದಾಕೃಷ್ಟವಲ್ಲದ, ಏಕತಾನತೆಯಿಲ್ಲದ ಅನುಪ್ರಾಸವು ಆಪ್ಯಾಯನವೆಂದೇ ಅಭಿನವಗುಪ್ತನು ಬಗೆದಂತೆ ತೋರುತ್ತದೆ: “ಏಕರೂಪತ್ವಾನುಬಂಧಂ ತ್ಯಕ್ತ್ವಾ ವಿಚಿತ್ರಾನುಪ್ರಾಸೋऽನುಬಧ್ಯಮಾನೋ ನ ದೋಷಾಯ” (ಪು.೧೦೩) ಅಂತೆಯೇ ಅಕ್ಲಿಷ್ಟವಲ್ಲದ ಶ್ಲೇಷಾಲಂಕಾರವನ್ನೂ ಅವನು ಆಕ್ಷೇಪಿಸಲಾರ. ಅಭಿನವಗುಪ್ತನ ತಗಾದೆಯಿರುವುದೆಲ್ಲ ರಸಭಂಜಕವಾದ ಪ್ರಯತ್ನಘಟಿತಶಬ್ದಾಲಂಕೃತಿಯಲ್ಲಿಯೇ: ”ಅರ್ಥಶ್ಲೇಷೋ ನ ದೋಷಾಯ ... ಶಬ್ದಭಂಗೋऽಪಿ ಕ್ಲಿಷ್ಟ ಏವ ದುಷ್ಟಃ ... ಯಮಕಾದಿ ಕವೇಃ ಪ್ರತಿಪತ್ತುಶ್ಚ ರಸವಿಘ್ನಕಾರ್ಯೇವ” (ಪು.೧೦೩-೧೦೪)
ಅಭಿನವಗುಪ್ತನು ಬಲು ದೊಡ್ಡ ರಸಪಕ್ಷಪಾತಿ. ಆನಂದವರ್ಧನನಾದರೂ ಅಷ್ಟೆ. ಆದುದರಿಂದಲೇ ಇವರಿಬ್ಬರೂ ಕಾವ್ಯವೂ ಸೇರಿದಂತೆ ಯಾವುದೇ ಕಲೆಯಲ್ಲಿ ಚಿತ್ತವೃತ್ತಿವಿಶದೀಕರಣದ ಮೂಲಕ ಉನ್ಮೀಲಿತವಾಗಬೇಕಾದ ರಸಸ್ಫೂರ್ತಿಗೆ ಅವಕಾಶವಿಲ್ಲದ ನಿರ್ಮಾಣವನ್ನು ಸಂಮತಿಸುವುದಿಲ್ಲ. ಇಂಥ ರಸಮಯರಚನೆಗೆ ಮುಖ್ಯಾಲಂಬನವೆಂದರೆ ವಿಭಾವಾನುಭಾವಾದಿಸಾಮಗ್ರಿಗಳ ಔಚಿತ್ಯಪೂರ್ಣಸಂಯೋಜನ. ಅದೆಷ್ಟೋ ಬಾರಿ ಒಳ್ಳೆಯ ಕವಿಗಳೆಂದೆನಿಸಿಕೊಂಡವರೂ ಈ ಬಗೆಯ ಗುರಿಯಿಲ್ಲದ ವ್ಯರ್ಥವರ್ಣನೆಗಳಲ್ಲಿ ಶುಷ್ಕವಿದ್ವದ್ವ್ಯವಸಾಯದಲ್ಲಿ ವ್ಯಗ್ರರಾಗುತ್ತಾರೆ. ಆಗ ಹುಟ್ಟುವ ಕಲೆಯು ಕಲೆಯೆಂದಲ್ಲಿ ಅದು ಸತ್ಯವಿರೋಧವೇ ಹೌದು. ಇಂತಲ್ಲದೆ ಪ್ರತಿಯೊಂದು ವರ್ಣನೆಯೂ ರಸದಲ್ಲಿ ತಾತ್ಪರ್ಯವನ್ನು ತಳೆಯಬೇಕು. ಇದನ್ನು ಆನಂದವರ್ಧನನು ನಯವಾದ, ಆದರೆ ನಿಶ್ಚಯವಾದ ರೀತಿಯಲ್ಲಿ ಒಕ್ಕಣಿಸಿದರೆ ಅಭಿನವಗುಪ್ತನು ತನ್ನದಾದ ವಿಕಟನೈಷ್ಠುರ್ಯದಿಂದ ಹೀಗೆ ತೀರ್ಮಾನಿಸುತ್ತಾನೆ: “ಅತಿಜಡೋऽಪಿ ಚಂದ್ರೋದ್ಯಾನಪ್ರಭೃತಿಸ್ತ್ವವಿಶ್ರಾಂತೋऽಪಿ ವರ್ಣ್ಯಮಾನೊऽವಶ್ಯಂ ಚಿತ್ತವೃತ್ತಿವಿಭಾವತಾಂ ತ್ಯಕ್ತ್ವಾ ಕಾವ್ಯೇऽನಾಖ್ಯೇಯ ಏವ ಸ್ಯಾತ್” (ಪು.೯೪) ಇಂಥ ಮಾತಿನ ಮುಸಲಹತಿಯನ್ನು ಕೂಡ ಕಿವುಡುಗೇಳಿ ರಸರಿಕ್ತರಚನೆಗಳಿಗೇ ತೆತ್ತುಕೊಂಡ ಕವಿಬ್ರುವಪರಂಪರೆ ಇನ್ನೂ ಉಳಿದಿರುವುದೊಂದು ವಿಷಾದಚೋದ್ಯ.
ರಸರಾಜನೆನಿಸಿದ ಶೃಂಗಾರದ ಅತಿಸುಕುಮಾರಾಭಿವ್ಯಕ್ತಿಯು ವಿಪ್ರಲಂಭದಲ್ಲೆಂದು ವಿಜ್ಞರ ಅಭಿಮತ. ಅಂತೆಯೇ ದ್ರುತಿಯೆಂಬ ರಸಧರ್ಮದ ಪರ್ಯಂತಭೂಮಿಯನ್ನು ಮುಟ್ಟುವ ಕರುಣವು ಯಾವುದೇ ಜೀವದ ಹೃದಯಪರಿಪಾಕಕ್ಕೆ ಚೆನ್ನಾಗಿ ಒದಗಿಬರುವ ರಸವೆಂದೂ ಕವಿ-ವಿಮರ್ಶಕರ ಅಭಿಪ್ರಾಯ. ಹೀಗಾಗಿಯೇ ಇವುಗಳನ್ನು ಕುರಿತು ಕಲಾಮೀಮಾಂಸೆಯು ಚಿರಕಾಲದಿಂದ ಚಿಂತಿಸಿದೆ. ಅಭಿನವಗುಪ್ತನೂ ತನ್ನ ಅಭಿನವಭಾರತಿಯ ರಸಾಧ್ಯಾದಲ್ಲಿ ವಿಶದವಾಗಿ ವಿಪ್ರಲಂಭಶೃಂಗಾರ ಮತ್ತು ಕರುಣರಸಗಳಿಗಿರುವ ವ್ಯತ್ಯಾಸವನ್ನು ಚರ್ಚಿಸಿದ್ದಾನೆ. ಆದರೆ ಈ ಎಲ್ಲ ವಿಸ್ತೃತಚಿಂತನೆಯ ಫಲಶ್ರುತಿಯೆಂಬಂತೆ ಲೋಚನದಲ್ಲಿ ಹೀಗೊಂದು ಮಾತನ್ನು ಹೇಳುತ್ತಾನೆ: “ನಿರಪೇಕ್ಷಭಾವತಯಾ ಸಾಪೇಕ್ಷಭಾವಶೃಂಗಾರವಿರೋಧಿನ್ಯಪಿ ಕರುಣೇ ಭವಂತ್ಯೇವ ತ ಏವ ಭವಂತೀತಿ” (ಪು.೨೦೪) ಈ ಪ್ರಕಾರ ಪ್ರೇಮಿಗಳ ಪುನರ್ಮಿಲನದ ಸಾಧ್ಯತೆಯಿರುವ ಕಾರಣದಿಂದಲೇ ವಿಪ್ರಲಂಭಶೃಂಗಾರವೆನಿಸುವ ಸಂನಿವೇಶವು ಇಂಥ ಸಾಧ್ಯತೆಯ ಲೇಶವೂ ಇಲ್ಲದ ಪರಿಸ್ಥಿತಿಯಲ್ಲಿ ಕರುಣವೆನಿಸುತ್ತದೆ. ಹೀಗಾಗಿಯೇ ಇವೆರಡು ರಸಗಳಲ್ಲಿಯೂ ಒಂದೇ ರೀತಿಯ ವ್ಯಭಿಚಾರಿಭಾವಗಳು ಸುತ್ತಿ ಸುಳಿಯುತ್ತವೆ. ಹಾಗೆಂದ ಮಾತ್ರಕ್ಕೆ ಇವೆರಡು ರಸಗಳೂ ಒಂದಲ್ಲ. ಏಕೆಂದರೆ, ಅವುಗಳ ನಿರ್ಣಾಯಕಸ್ಥಾಯಿಭಾವಗಳು ಬೇರೆಬೇರೆಯೇ. ಇದಕ್ಕೆ ಕಾರಣ ಈ ಎರಡು ರಸಗಳಲ್ಲಿ ಕ್ರಮವಾಗಿ ತೋರುವ ಪ್ರತ್ಯಾಶೆ ಮತ್ತು ಆತ್ಯಂತಿಕನಿರಾಶೆಗಳ ವಸ್ತುಸ್ಥಿತಿಯೇ. ಈ ಎಲ್ಲ ಅಂಶಗಳನ್ನು ಸಂಗ್ರಹವಾಗಿ ಅಣಿಮಾಡಿಕೊಟ್ಟ ಅಭಿನಗುಪ್ತನ ಜಾಣ್ಮೆ-ಕಾಣ್ಮೆಗಳು ಸ್ತವನೀಯ.
ಅಭಿನವಗುಪ್ತನ ರಸಪಕ್ಷಪಾತವು ಲೋಕವಿಖ್ಯಾತ. ಸಂದರ್ಭವೊದಗಿದಾಗಲೆಲ್ಲ ಅವನು ರಸಮಾಹಾತ್ಮ್ಯವನ್ನು ಸಾರುತ್ತಲೇ ಇರುತ್ತಾನೆ. ಯಾವುದೇ ಕಲೆಯು ನಾಟ್ಯಾಯಮಾನತೆಯನ್ನು ಹೊಂದದೆ ರಸ್ಯವಾಗುವುದಿಲ್ಲ. ಹೀಗಾಗಿ ಗೀತ, ಚಿತ್ರ, ಶಿಲ್ಪ, ನೃತ್ತ, ಕಾವ್ಯಾದಿಗಳೂ ನಾಟ್ಯಮಯತೆಯನ್ನು ಸಂಪಾದಿಸಿಕೊಳ್ಳಬೇಕೆಂಬುದು ಈತನ ಗುರು ಭಟ್ಟತೌತನ ಕಾಣ್ಕೆಯಾಗಿತ್ತೆಂಬ ಸಂಗತಿಯನ್ನು ನಾವೀಗಾಗಲೇ ಕಂಡಿದ್ದೇವೆ. ತನ್ನ ಅಭಿನವಭಾರತಿಯಲ್ಲಿ ಈ ಎಲ್ಲ ವಿಚಾರಗಳ ಕೂಲಂಕಷಚರ್ಚೆಯನ್ನು ಅಭಿನವಗುಪ್ತನು ಮಾಡಿಯೇ ಇದ್ದಾನೆ. ಆದರೆ ಲೋಚನದಲ್ಲಿಯೂ ಆ ಕೆಲವಂಶಗಳ ಪ್ರಸ್ತಾವ ಬರದಿದ್ದರೆ ಶಾಸ್ತ್ರಪೂರ್ಣತೆಯಾಗದು. ಜೊತೆಗೆ ಧ್ವನಿ ಮತ್ತು ರಸಗಳಿಗಿರುವ ಅವಿನಾಭಾವಸಂಬಂಧವು ಮನದಟ್ಟಾಗದು. ಹೀಗಾಗಿ ಅವನು ಈ ಕೆಲವೊಂದು ಸಾರೋಕ್ತಿಗಳಲ್ಲಿ ಕಲಾಸರ್ವಸ್ವಭೂತವೂ ಬ್ರಹ್ಮಾಸ್ವಾದಸಹೋದರವೂ ಎನಿಸಿದ ರಸದ ದರ್ಶನವನ್ನು ಮಾಡಿಸಿದ್ದಾನೆ: “ತನ್ನಾಟ್ಯಮೇವ ರಸಾಃ ... ಸಕಲಮೇವ ಸಮುದಾಯಂ ರಸಮಾಹುರಿತ್ಯಲಂ ಬಹುನಾ ... ಪ್ರತೀಯಮಾನ ಏವ ಹಿ ರಸಃ, ಪ್ರತೀತಿರೇವ ವಿಶಿಷ್ಟಾ ರಸನಾ” (ಪು.೮೪), “... ಪರಬ್ರಹ್ಮಾಸ್ವಾದಸಬ್ರಹ್ಮಚಾರಿತ್ವಂ ವಾಸ್ತ್ವಸ್ಯ ರಸಾಸ್ವಾದಸ್ಯ” (ಪು.೮೫)
ಶ್ರವ್ಯಕಾವ್ಯವನ್ನು ಕುರಿತು ಚರ್ಚಿಸುತ್ತ ಅಭಿನವಗುಪ್ತನು ಮುಕ್ತಕವೇ ಮುಂತಾದ ಅಲಂಕಾರಚಮತ್ಕಾರದಲ್ಲಿ ವಿಶ್ರಾಂತಿಸುವ ಬಿಡಿಗವಿತೆಯ ಸೊಗಸೆಷ್ಟಿದ್ದರೂ ಅದು ಕಡೆಗೆ ಪ್ರಬಂಧದಂಥ ಇಡಿಕವಿತೆಗೇ ಅಡಿಯಾಳಾಗಬೇಕೆಂದು ಅಭಿಪ್ರಾಯಿಸುತ್ತಾನೆ. ಈ ಕಾರಣದಿಂದಲೇ ಕಲಾಪ್ರಪಂಚದಲ್ಲಿ ಸರ್ವತ್ರ ರಸಕ್ಕೆ ಅಗ್ರತಾಂಬೂಲವೆಂಬುದು ನಿಸ್ಸಂದಿಗ್ಧನಿರ್ಣಯ. ಅದೆಷ್ಟೋ ಬಾರಿ ಘಟನೆಗಳ ಮಣಿಮಾಲೆಯೇ ಕಥೆಯೆನಿಸುತ್ತದೆ. ಆದರೆ ಇದು ತನ್ನಂತೆ ದೊಡ್ಡ ಕಲೆಯೆನಿಸದು. ಇಂಥ ಘಟನೆಗಳ ಹಿನ್ನೆಲೆಯಲ್ಲಿರುವ ಚಿತ್ತವೃತ್ತಿವಿಲಾಸವನ್ನು ಸಮುಚಿತವಾಗಿ ವರ್ಣನಪರವಾದ ವಾಗರ್ಥವೈಶದ್ಯದಿಂದ ವಿಸ್ತರಿಸಿದಾಗಲೇ ಮಿಗಿಲಾದ ಕಾವ್ಯವು ಸಿದ್ಧಿಸುತ್ತದೆ. ಇದನ್ನು ಅಭಿನವಗುಪ್ತನು ಹೀಗೆ ಹರಳುಗಟ್ಟಿಸಿದ್ದಾನೆ: “ಪ್ರಬಂಧೇಷ್ವಪಿ ಮುಕ್ತಕಸ್ಯಾಸ್ತಿ ಸದ್ಭಾವಃ” (ಪು.೧೭೫), “ಕಥಾತಾತ್ಪರ್ಯೇ ಸಂಬಂಧೋ ಯಥಾ ಭಟ್ಟಜಯಂತಕಸ್ಯ ಕಾದಂಬರೀಕಥಾಸಾರಮ್. ರಸತಾತ್ಪರ್ಯಂ ಯಥಾ ರಘುವಂಶಾದಿ.” (ಪು.೧೭೬), “ಯತ್ರ ವಿನೇಯಾನಾಂ ಪ್ರತೀತಿಖಂಡನಾ ನ ಜಾಯತೇ ತಾದೃಗ್ವರ್ಣನೀಯಮ್” (ಪು.೧೮೦)
ದೃಶ್ಯಕಾವ್ಯವೆನಿಸಿದ ರೂಪಕಲೋಕದಲ್ಲಿ “ಸಂಧಿ-ಸಂಧ್ಯಂಗ”ಗಳ ಸಾರ್ಥಕಸಮನ್ವಯವು ತುಂಬ ಮುಖ್ಯ. ಆದರೆ ಶಾಸ್ತ್ರವನ್ನು ಕುರುಡಾಗಿ ಅನುಸರಿಸಬಾರದು. ಉಪದೇಶವ್ಯಸನಕ್ಕೆ ಸಿಲುಕಿ ಸೌಂದರ್ಯಸ್ವಾರಸ್ಯವನ್ನು ಬತ್ತಿಸಲೂ ಬಾರದು. ಈ ಎಲ್ಲ ಅಂಶಗಳನ್ನು ಆನಂದವರ್ಧನನು ಹೇಳಿಯೇ ಇದ್ದಾನೆ (೩.೧೦-೧೪). ಅಭಿನವಗುಪ್ತನಾದರೋ ಇದಕ್ಕೆ ತನ್ನದಾದ ಮತ್ತಷ್ಟು ಮೌಲ್ಯವನ್ನು ಮೇಳವಿಸಿ ಹೀಗೆ ಹೇಳುತ್ತಾನೆ: “ಹೃದಯಾನುಪ್ರವೇಶಶ್ಚ ರಸಾಸ್ವಾದಮಯ ಏವ. ಸ ಚ ರಸಶ್ಚತುರ್ವರ್ಗೋಪಾಯವ್ಯುತ್ಪತ್ತಿನಾಂತರೀಯಕವಿಭಾವಾದಿಸಂಯೋಗ-ಪ್ರಸಾದೋಪನತ ಇತ್ಯೇವಂ ರಸೋಚಿತವಿಭಾವಾದ್ಯನುಬದ್ಧರಸಾಸ್ವಾದವೈವಶ್ಯಮೇವ ಸ್ವರಸಭಾವಿನ್ಯಾಂ ವ್ಯುತ್ಪತ್ತೌ ಪ್ರಯೋಜಕಮಿತಿ ಪ್ರೀತಿರೇವ ವ್ಯುತ್ಪತ್ತೇಃ ಪ್ರಯೋಜಿಕಾ. ಪ್ರೀತ್ಯಾತ್ಮಾ ಚ ರಸಸ್ತದೇವ ನಾಟ್ಯಂ, ನಾಟ್ಯ ಏವ ಚ ವೇದ ಇತ್ಯಸ್ಮದುಪಾಧ್ಯಾಯಃ. ನ ಚೈತೇ ಪ್ರೀತಿವ್ಯುತ್ಪತ್ತೀ ಭಿನ್ನರೂಪೇ ಏವ. ದ್ವಯೋರಪ್ಯೇಕವಿಷಯತ್ವಾತ್. ವಿಭಾವಾದ್ಯೌಚಿತ್ಯಮೇವ ಹಿ ಸದ್ಯಃಪ್ರೀತೇರ್ನಿದಾನಮಿತ್ಯಸಕೃದವೋಚಾಮ. ವಿಭಾವಾದೀನಾಂ ತದ್ರಸೋಚಿತಾನಾಂ ಯಥಾಸ್ವರೂಪವೇದನಂ ಫಲಪರ್ಯಂತೀಭೂತತಯಾ ವ್ಯುತ್ಪತ್ತಿರಿತ್ಯುಚ್ಯತೇ. ಫಲಂ ನಾಮ ಯದದೃಷ್ಟವಶಾದ್ದೇವತಾಪ್ರಸಾದಾದನ್ಯತೋ ವಾ ಜಾಯತೇ. ನ ಚ ತದುಪದೇಶ್ಯಮ್.” (ಪು.೧೮೩-೧೮೪) ಈ ಪ್ರಕಾರ ಕಲೆಯಲ್ಲಿ ರಸವೇ ಪರಮಾರ್ಥ. ಇದರಿಂದುಂಟಾಗುವ ನಲವೇ ಎಲ್ಲ ಬಗೆಯ ಅರಿವು. ವಸ್ತುತಃ ಈ ತೆರನಾದ ನಲವು-ಅರಿವುಗಳಿಗೆ ಭೇದವೇ ಇಲ್ಲ. ವಿಭಾವಾನುಭಾವಸಮಾಗ್ರಿಯ ಔಚಿತ್ಯಪೂರ್ಣಸಂಯೋಗವೇ ತತ್ಕ್ಷಣದ ರಸಾನಂದಕ್ಕೆ ಮೀಟುಗೋಲು. ಇದಕ್ಕಿಂತ ಹೊರತಾದ ಪ್ರಯೋಜನವೇನಿದ್ದರೂ ಅಧಿಭೂತ ಮತ್ತು ಅಧಿದೈವಗಳ ನೆಲೆಗೆ ಸೇರುವುದಲ್ಲದೆ ಅಪ್ಪಟ ಅಧ್ಯಾತ್ಮವಾದ ಕಲಾಸ್ವಾದದ ಪರಿಧಿಗೆ ಬರುವುದಿಲ್ಲ.
ತನ್ನ ಗುರು ಭಟ್ಟತೌತನು ಕಂಠೋಕ್ತವಾಗಿ ದೃಶ್ಯಕಾವ್ಯ-ಶ್ರವ್ಯಕಾವ್ಯಗಳ ಸಮನ್ವಯವನ್ನು ಹೇಳಿದ್ದನು. ಇದು ಕೂಡ ಆನಂದವರ್ಧನನ ಸಹಮತತತ್ತ್ವ. ಇವೆಲ್ಲಕ್ಕೂ ಭರತಮುನಿಯ ದರ್ಶನವೇ ಆಧಾರ, ಆದರೆ ಇವೆಲ್ಲವನ್ನೂ ಪೋಣಿಸುವಂತೆ ಅಭಿನವಗುಪ್ತನು ಒಂದೇ ಮಾತಿನಲ್ಲಿ ಹೇಳಿದ ಪರಿ ನಿಜಕ್ಕೂ ಪರಿಭಾವನೀಯ: “ವೃತ್ತಯಃ ಕಾವ್ಯಮಾತೃಕಾ ಇತಿ ಬ್ರುವಾಣೇನ ಮುನಿನಾ ... ರಸಸ್ಯೇವ ಜೀವಿತಮುಕ್ತಮ್ ... ಇತಿವೃತ್ತಂ ಹಿ ನಾಟ್ಯಸ್ಯ ಶರೀರಂ ಇತಿ ಮುನಿಃ ನಾಟ್ಯಂ ಚ ರಸ ಏವೇತ್ಯುಕ್ತಪ್ರಾಯಮ್” (ಪು.೨೨೬) ಈ ಪ್ರಕಾರ ನಾಟ್ಯಶಾಸ್ತ್ರೋಕ್ತವಾದ ಕೈಶಿಕೀ-ಆರಭಟೀ-ಭಾರತೀ-ಸಾತ್ತ್ವತೀವೃತ್ತಿಚತುಷ್ಟಯವಾಗಲಿ, ಅಲಂಕಾರಶಾಸ್ತ್ರಸಮಯಕ್ಕೆ ಸಲ್ಲುವ ಪರುಷಾ-ಕೋಮಲಾ-ಉಪನಾಗರಿಕಾದಿವರ್ಣವೃತ್ತಿಗಳಗಲಿ ಪರಮಾರ್ಥತಃ ರಸದಲ್ಲಿಯೇ ತಾತ್ಪರ್ಯವುಳ್ಳವು. ಹೀಗಾಗಿ ದೃಶ್ಯ-ಶ್ರವ್ಯಕಾವ್ಯಗಳು ಒಂದೇ ಕಕ್ಷೆಗೆ ಬರುತ್ತವೆ. ನಾಟ್ಯಶಾಸ್ತ್ರದಲ್ಲಿ ದೃಶ್ಯಕಾವ್ಯದ ವಲಯಕ್ಕೆ ಸಲ್ಲುವುವೆಂದು ಭಾವಿಸಲ್ಪಡುವ ಲೋಕಧರ್ಮೀ ಮತ್ತು ನಾಟ್ಯಧರ್ಮೀ ಎಂಬ ಪರಿಕಲ್ಪನೆಗಳು ಶ್ರವ್ಯಕಾವ್ಯದ ವ್ಯಾಪ್ತಿಗೆ ಬರುವ ತತ್ತ್ವಗಳೆಂದು ಪ್ರತೀತವಾಗುವ ಸ್ವಭಾವೋಕ್ತಿ ಮತ್ತು ವಕ್ರೋಕ್ತಿಗಳ ಸಂವಾದಿಗಳೆಂದು ಅಭಿನವಗುಪ್ತನು ಬೇರೊಂದೆಡೆ ನಿರೂಪಿಸಿರುವುದಿಲ್ಲಿ ಸ್ಮರಣೀಯ.
ಅಭಿನವಗುಪ್ತನ ಸಹೃದಯಸ್ವರೂಪನಿರ್ವಚನವು ಅತ್ಯಂತಪ್ರಸಿದ್ಧ. “ಸಹೃದಯಾಲೋಕ”ವೆಂಬ ನಾಮಾಂತರವುಳ್ಳ ಧ್ವನ್ಯಾಲೋಕದ ಕೇಂದ್ರತತ್ತ್ವಗಳಲ್ಲಿ ಇದೂ ಒಂದು. ಆದರೆ ಎಂದಿನಂತೆ ಆನಂದವರ್ಧನನ ಹೃದಯಸೂತ್ರವನ್ನು ತನ್ನ ಧಾರಾಳವಾದ ಮಾತುಗಳಲ್ಲಿ ವಿಶದೀಕರಿಸುವ ಅಭಿನವಗುಪ್ತನ ನಿರ್ಭರಾಭಿವ್ಯಕ್ತಿಯೇ ಈ ವ್ಯಾಖ್ಯಾನದಲ್ಲಿ ಬೆಳಗಿದೆಯೆಂದರೆ ಅತಿಶಯವಲ್ಲ. ಅವನ ಊರ್ಜಸ್ವಿಯಾದ ಮಾತುಗಳನ್ನೇ ಸಾಕ್ಷಾತ್ತಾಗಿ ಆಲಿಸೋಣ: “ಯೇಷಾಂ ಕಾವ್ಯಾನುಶೀಲಾನಾಭ್ಯಾಸವಶಾದ್ವಿಶದೀಭೂತೇ ಮನೋಮುಕುರೇ ವರ್ಣನೀಯತನ್ಮಯೀಭವನಯೋಗ್ಯತಾ ತೇ ಸ್ವಹೃದಯಸಂವಾದಭಾಜಃ ಸಹೃದಯಾಃ ಯಥೋಕ್ತಂ ಯೋऽರ್ಥೋ ಹೃದಯಸಂವಾದೀ ತಸ್ಯ ಭಾವೋ ರಸೋದ್ಭವಃ” (ಪು.೧೩). ತನ್ನ ಹೃದಯಕ್ಕೆ ತಾನು ಪ್ರಾಮಾಣಿಕನಲ್ಲದ, ತಾನೊಲಿದ ಕಲಾಪ್ರಕಾರಗಳಲ್ಲಿ ನಿರಂತರವಾಗಿ ಸಾವಧಾನವಾಗಿ ವಿಹರಿಸದ, ಕವಿ-ಕಲಾವಿದರ ಸೃಷ್ಟಿಯಲ್ಲಿ ಮೈಮರೆಯದ ವ್ಯಕ್ತಿ ಸಹೃದಯನಲ್ಲ. “ಅತ್ಯಂತಸಹೃದಯೋ ಯೋ ನ ಭವತಿ ತಸ್ಯೈಷ ಸ್ಫುಟಸಂವೇದ್ಯ ಏವ ಕ್ರಮಃ ಯಥಾತ್ಯಂತಶಬ್ದವೃತ್ತಜ್ಞೋ ನ ಭವತಿ ತಸ್ಯ ಪದಾರ್ಥವಾಕ್ಯಕ್ರಮಃ” (ಪು.೩೭). ಸಂಲಕ್ಷ್ಯಕ್ರಮ ಮತ್ತು ಅಸಂಲಕ್ಷ್ಯಕ್ರಮವೆಂಬ ಇಬ್ಬಗೆಯ ಧ್ವನಿಪ್ರಕಾರಗಳಲ್ಲಿ ಕಟ್ಟಕಡೆಗುಳಿಯುವುದು ಅಸಂಲಕ್ಷ್ಯಕ್ರಮವೊಂದೇ. ಏಕೆಂದರೆ, ಅತ್ಯಂತಸಹೃದಯನಿಗೆ ರಸಸಂವೇದನೆಯು ಒಮ್ಮೆಲೇ ಉಕ್ಕಿಬರುತ್ತದೆ. ಇದೇ ಆತನ ಸಹೃದಯತೆಯ ಒರೆಗಲ್ಲು ಕೂಡ. ಭಾಷೆಯೊಂದರ ಒಳ-ಹೊರಗನ್ನು ಬಲ್ಲ ನುಡಿಜಾಣನಿಗೆ ಶಬ್ದಾರ್ಥಗಳ ನಡುವೆ ಯಾವುದೇ ತೆರೆನಾದ ಬಿರುಕು-ಮುರುಕುಗಳಿರುವುದಿಲ್ಲ. ಹೀಗೆ ಸರಳವೆಂದು ತೋರಿದರೂ ಮಹತೋಮಹೀಯವಾಗಿ ಮೆರೆದು ಕಲಾರಸಿಕರಿಗೆ ಸ್ವಯಂವೇದ್ಯವಾಗಬಲ್ಲ ಈ ಮಾತುಗಳಿಗೆ ಹೆಚ್ಚಿನ ವಿವರಣೆ ಬೇಕಿಲ್ಲ.
ಕಡೆಯದಾಗಿ ನಾವು ಅಭಿನವಗುಪ್ತನ ಪ್ರತಿಭಾತತ್ತ್ವದತ್ತ ಕಣ್ಣು ಹಾಯಿಸಬಹುದು. ಯಾವುದೊಂದು ತೆರೆದುಕೊಂಡರೆ ಜಗವೆಲ್ಲ ಬಗೆಬಿರಿದುಕೊಳ್ಳುತ್ತದೆಯೋ ಮತ್ತು ಈ ತತ್ತ್ವವು ನಮ್ಮೊಳಗಿನದೇ ಆಗಿರುವುದೋ ಅದೇ ಪ್ರತಿಭೆಯೆಂದು ಲೋಚನದ ಮೊದಲ ಅಧ್ಯಾಯದ ಕಡೆಗೆ ಅಪೂರ್ವಮನೋಹರವಾದ ಶ್ಲೋಕರೂಪದಲ್ಲಿ ಇವನು ಕಂಡರಿಸಿದ ಕಾಣ್ಕೆ ಮನನೀಯ: “ಯದುನ್ಮೀಲನಶಕ್ತ್ಯೈವ ವಿಶ್ವಮುನ್ಮೀಲತಿ ಕ್ಷಣಾತ್. ಸ್ವಾತ್ಮಾಯತನವಿಶ್ರಾಂತಾಂ ವಂದೇऽಹಂ ಪ್ರತಿಭಾಂ ಶಿವಾಮ್ (ಪರಾಮ್)” (ಪು.೭೨) ವಿಶೇಷತಃ ಪ್ರತ್ಯಭಿಜ್ಞಾಶೈವದರ್ಶನದ ತತ್ತ್ವಗಳಲ್ಲಿ ಮಿಗಿಲಾದ ಬೆಲೆಯುಳ್ಳ ಪ್ರತಿಭಾಸ್ಪಂದಕ್ಕೆ ಯುಕ್ತವಾಗಿಯೇ ಮಾರುಹೋದ ಅಭಿನವಗುಪ್ತನು ಲೋಚನದ ಆದ್ಯಂತವೂ ಅಲ್ಲಲ್ಲಿ ಈ ಮೌಲ್ಯಕ್ಕೆ ತಕ್ಕ ಕಪ್ಪಕಾಣಿಕೆಯನ್ನು ಸಲ್ಲಿಸಿದ್ದಾನೆ. “ಪ್ರತಿಭಾಪೂರ್ವವಸ್ತುನಿರ್ಮಾಣಕ್ಷಮಾ ಪ್ರಜ್ಞಾ. ತಸ್ಯಾ ವಿಶೇಷೋ ರಸಾವೇಶವೈಶದ್ಯಸೌಂದರ್ಯಕಾವ್ಯನಿರ್ಮಾ-ಣಕ್ಷಮತ್ವಂ ... ಅಭಿವ್ಯಕ್ತೇನ ಸ್ಫುರತಾ ಪ್ರತಿಭಾವಿಶೇಷೇಣ ನಿಮಿತ್ತೇನ ಮಹಾಕವಿತ್ವಗಣನೇತಿ ಸ್ಯಾತ್” (ಪು.೩೪), “ಜ್ಞಾತಸ್ಯಾಪಿ ವಿಶೇಷತೋ ನಿರೂಪಣಮನುಸಂಧಾನಾತ್ಮಕಮತ್ರ ಪ್ರತ್ಯಭಿಜ್ಞಾನಮ್” (ಪು.೩೬) , “ವರ್ಣನೀಯವಸ್ತುನಿಷ್ಠಃ ಪ್ರಜ್ಞಾವಿಶೇಷೋ ಹಿ ಪ್ರತಿಭಾ” ಈ ಸಾರೋಕ್ತಿಗಳ ತಾತ್ಪರ್ಯವಿಷ್ಟೆ: ಹೊಸಹೊಸತನ್ನು ನಿರ್ಮಿಸಬಲ್ಲ ಬಲ್ಮೆಯೇ ಪ್ರತಿಭೆ. ಅದರ ವೈಶಿಷ್ಟ್ಯವೇ ರಸಸುಂದರಕಲಾನಿರ್ಮಾಣಸಾಮರ್ಥ್ಯ. ಇದೊಂದೇ ಮಹಾಕವಿತ್ವದ ಮೂಲ ಮತ್ತು ಮಾನ. ಇದು ನಮ್ಮೊಳಗಿನ ಮೌಲ್ಯವೇ ಆದ ಕಾರಣ ನಮ್ಮೆಲ್ಲರ ಅರಿವಿಗಿದು ಎಟುಕಿದ್ದಾಗಲೂ ಮತ್ತೆ ಮತ್ತೆ ಗುರುತಿಸಿಕೊಳ್ಳದೆ ಸಕ್ರಿಯವಾಗದು. ಕವಿ-ಕಲಾವಿದರು ತಾವು ನಿರ್ಮಿಸಬಲ್ಲ ಸೌಂದರ್ಯಲೋಕಕ್ಕೆ ಬದ್ಧವಾಗಿ ನಡೆಯುವ ಪ್ರಜ್ಞಾಪ್ರಬುದ್ಧತೆಯೇ ಪ್ರತಿಭೆ. ಈ ರೀತಿ ಸಾಗುವ ಅಭಿನವಗುಪ್ತನ ಪ್ರತಿಭಾವಿಶ್ಲೇಷಣೆಯು ಬಲು ಮಟ್ಟಿಗೆ ಅವನ ಗುರು ಭಟ್ಟತೌತನ ಯೋಗದಾನವೂ ಹೌದು. ಒಟ್ಟಿನಲ್ಲಿ ಲೋಚನೋಕ್ತವಾದ ಕಾವ್ಯಲಕ್ಷಣದಿಂದ ಮೊದಲಾದ ಪ್ರಸ್ತುತಪರಾಮರ್ಶೆಯನ್ನು ಕ್ರಮವಾಗಿ ಕವಿ-ಸಹೃದಯರಿಬ್ಬರನ್ನೂ ಬೆಸೆಯುವ ಈ ತೆರೆನಾದ ಪ್ರತಿಭಾತತ್ತ್ವನಿರೂಪಣೆಯಿಂದ ನಾವು ಮುಗಿಸಬಹುದು.
References
- Dhvanyaloka. New Delhi: Munshiram Manoharlal Publishers, 1998 [A reproduction of the volume edited by Pandit Durgaprasad and Kashinath Pandurang Parab for the Kavyamala series]