ನಾವಿನ್ನು ಶಕುಂತಲೆಯ ಪ್ರಣಯಪತ್ರದತ್ತ ತಿರುಗಬಹುದು. ಆಕಸ್ಮಿಕವಾಗಿ ಆಶ್ರಮಕ್ಕೆ ಬಂದ ದುಷ್ಯಂತನನ್ನು ಕಂಡು ಶಕುಂತಲೆ ಮನಸೋತಿದ್ದಾಳೆ. ಅವನಾದರೂ ಈಕೆಯಲ್ಲಿ ನಿರ್ಭರಾನುರಾಗವನ್ನು ಹೊಂದಿದ್ದಾನೆ. ಆದರೆ ಇಬ್ಬರಿಗೂ ತಮ್ಮ ಪ್ರಣಯವು ಏಕಮುಖವೇನೋ ಎಂಬ ಅಳುಕುಂಟು. ಈ ಕಾರಣದಿಂದಲೇ ಅವರಿಗೆ ತೀವ್ರವಿರಹವೇದನೆ. ಸ್ವಭಾವಸುಕುಮಾರಿಯಾದ ಶಕುಂತಲೆಯು ತನ್ನ ಈ ಪ್ರಥಮಪ್ರಣಯಪಾರವಶ್ಯದಿಂದಲೂ ತತ್ಫಲಿತವಾದ ಅದಮ್ಯವಿರಹದಿಂದಲೂ ಎಣೆಮೀರಿ ಬಳಲಿದ್ದಾಳೆ. ಕಣ್ವಾಶ್ರಮದ ಮಾಲಿನೀನದಿಯ ತೀರದಲ್ಲಿ ಅವಳ ಸಖಿಯರು ಕೋಮಲಕಮಲದಳಗಳ ಶಿಶಿರಶಯ್ಯೆಯನ್ನೂ ಕಲ್ಪಿಸಿದ್ದಾರೆ. ಆದರೆ ಈ ಎಲ್ಲ ತಾಪೋಪಶಾಂತಿಪ್ರಕಲ್ಪಗಳೂ ನಿಷ್ಪ್ರಯೋಜಕವಾಗಿವೆ. ಆಗ ಗೆಳತಿಯರು ಅವಳಿಗೆ ಮದನಲೇಖನವನ್ನು ರಚಿಸುವ ಸಲಹೆಯನ್ನೀಯುತ್ತಾರೆ. ಮಾತ್ರವಲ್ಲ, ದೇವತಾಪ್ರಸಾದವ್ಯಾಜದಿಂದ ಹೂಗಳ ನಡುವೆ ಹವಣಿಸಿ ಅದನ್ನು ಗುಟ್ಟಾಗಿ ದುಷ್ಯಂತನಿಗೆ ತಲಪಿಸುವ ಬಾಧ್ಯತೆಯನ್ನೂ ವಹಿಸುತ್ತಾರೆ. ಎಷ್ಟೇ ಆಗಲಿ ಇದೊಂದು ಸುಕುಮಾರಪ್ರಯೋಗವಲ್ಲವೇ! ಗೆಳತಿಯರಿಗೂ ಇದು ರೋಚಕ. ಅಂತೆಯೇ ಶಕುಂತಲೆಯು ಆತ್ಮೋಪನ್ಯಾಸಕ್ಕೆ ಅನುರೂಪವಾದ ಲಲಿತಪದಬಂಧವನ್ನು ಹೊಂದಿಸಿಕೊಳ್ಳುತ್ತಾಳೆ. ಅವಳ ಪ್ರಣಯಗೀತವಸ್ತುವೇನೋ ಮನಸ್ಸಿನಲ್ಲಿ ಸಜ್ಜಾಯಿತು. ಆದರೆ ಲೇಖನಸಾಧನಗಳಿಲ್ಲವಲ್ಲಾ ಎಂಬ ಆಕೆಯ ಕಳವಳಕ್ಕೆ ಸಮಾಧಾನವಾಗಿ ಪ್ರಿಯಂವದೆಯು ಶುಕೋದರಸುಕುಮಾರವಾದ ನಲಿನೀಪತ್ರದಲ್ಲಿ ಉಗುರುಗಳಿಂದಲೇ ಸ್ಮರಲೇಖದ ವರ್ಣಮಾಲೆಯನ್ನು ನಿಕ್ಷೇಪಿಸಬೇಕೆಂದು ಸೂಚಿಸುತ್ತಾಳೆ. ಒಡನೊಡನೆ ಶಕುಂತಲೆಯು ತನ್ನೊಲವಿನ ಹಾಡನ್ನು ಹೆಣೆದು ಅದು ಸಂಗತಾರ್ಥವೋ ಅಲ್ಲವೋ ಎಂದು ತಿಳಿಯಲು ಗೆಳತಿಯರಿಗೆ ಹೀಗೆ ಕೇಳಿಸುತ್ತಾಳೆ:
ತುಜ್ಝ ಣ ಆಣೇ ಹಿಅಅಂ ಮಮ ಉಣ ಮದನೋ ದಿವಾ ವಿ ರತ್ತಿಂ ವಿ |
ಣಿಗ್ಘಿಣ! ತವಇ ಬಲೀಅಂ ತುಇ ವುತ್ತಮಣೋರಹಾಇಂ ಅಂಗಾಇಂ || (೩.೧೩)
(ತವ ನ ಜಾನೇ ಹೃದಯಂ ಮಮ ಪುನರ್ಮದನೋ ದಿವಾಪಿ ರಾತ್ರಾವಪಿ |
ನಿರ್ಘೃಣ! ತಪತಿ ಬಲೀಯಸ್ತ್ವಯಿ ವೃತ್ತಮನೋರಥಾನ್ಯಂಗಾನಿ ||)
ಅರಿಯಂ ನಿನ್ನಯ ಬಗೆಯಂ
ಸ್ಮರನೋ ಪಗಲಿರುಳುಮೆನ್ನನುರಿಸುತ್ತಿರ್ಪಂ |
ಮರುಗದ ನಿನ್ನೊಳೆ ಮನ್ಮನ-
ದೆರಕಮನೊಡಲೊಡನೆ ಪುದಿದನಲ! ನಿರ್ದಯನೇ!
ಇದೆಲ್ಲವನ್ನೂ ಮರೆಯಿಂದಲೇ ನಿರುಕಿಸುತ್ತಿದ್ದ ದುಷ್ಯಂತನು ತತ್ಕ್ಷಣವೇ ಆನಂದೋಲ್ಲಾಸದಿಂದ ಅವಳತ್ತ ಬಂದು ಅವಳ ಪಾಲಿಗೆ ನಿರ್ದಯನಾದ ಕಾಮನು ತನ್ನ ಪಾಲಿಗಂತೂ ನಿರ್ದಯತಮನೇ ಆಗಿದ್ದಾನೆಂದು ಹೇಳುವ ಮೂಲಕ ತನ್ನೊಲವನ್ನು ಸಾರಿಕೊಳ್ಳುತ್ತಾನೆ. ಹೀಗೆ ಪ್ರಣಯಿಗಳ ಪರಸ್ಪರಾನುರಾಗದ ಅಭಿವ್ಯಕ್ತಿಯು ಅಚಿರದಲ್ಲಿಯೇ ಅವರ ಗಾಂಧರ್ವವಿವಾಹದಲ್ಲಿ ಸಾಫಲ್ಯವನ್ನು ಕಾಣುತ್ತದೆ.
ನಾವೀಗ ಶಕುಂತಲಾಸ್ಮರಲೇಖದ ತಾತ್ಪರ್ಯವನ್ನಿಷ್ಟು ಪರಿಶೀಲಿಸೋಣ. ಇಲ್ಲಿಯೂ ಪದ್ಯದ ಪೂರ್ವಾರ್ಧದಲ್ಲಿಯೇ ಹೆಚ್ಚಿನ ಸ್ವಾರಸ್ಯವಿದೆ. ತತ್ರಾಪಿ ಪದ್ಯದ ಮೊದಲ ಸಾಲೇ ಅರ್ಥಗರ್ಭಿತ. ಯಾವುದೇ ಪ್ರಣಯಿಗಾಗಲಿ, ತಾನೊಲಿದವರು ತನ್ನನ್ನು ಒಲಿದಿದ್ದಾರೋ ಇಲ್ಲವೋ ಎಂಬ ಕಳವಳವೇ ಬಲುಮಿಗಿಲು. ನಮಗೆ ದಕ್ಕುವ ಅಥವಾ ದಕ್ಕದಿರುವ ಸಂಭಾವ್ಯತೆಯಿರುವಾಗಲೂ ಈ ಜಗತ್ತಿನಲ್ಲಿ ನಾವೊಲಿದ ಯಾವುದೇ ವಸ್ತುಜಾತವು ಭಾವಜೀವಿಗಳಾದ ನಮ್ಮನ್ನು ಅಷ್ಟಾಗಿ ಕಂಗೆಡಿಸದು. ಏಕೆಂದರೆ ನಿರ್ಜೀವವಸ್ತುಸಮಸ್ತಕ್ಕೆ ತನ್ನದಾದ ಯಾವುದೇ ಸ್ವತಂತ್ರಸ್ಥಿತಿಯಾಗಲಿ, ಪ್ರತಿಕ್ರಿಯಾಸಾಮರ್ಥ್ಯವಾಗಲಿ ಇರುವುದಿಲ್ಲ. ಆದರೆ ಜೀವರಾಶಿಗೆ ಹಾಗಲ್ಲ; ತತ್ರಾಪಿ ಮಾನವಜೀವಿಗಂತೂ ಹಾಗಲ್ಲವೇ ಅಲ್ಲ. ಈ ಕಾರಣದಿಂದಲೇ ಇಬ್ಬರು ಸ್ವತಂತ್ರವ್ಯಕ್ತಿಗಳ ನಡುವೆ ಭವ-ಭಾವಸಾಮ್ಯದ ಪರಾಕಾಷ್ಠೆಯೆನ್ನಬಹುದಾದ ಅನುರಾಗವು ಮೊಳೆತು ಮಲರಾಗಲು ಅದೆಷ್ಟೋ ಪುಣ್ಯಪರಿಪಾಕ ಬೇಕು. ಇದೊಂದು ಅನಿಶ್ಚಯತಮದುರ್ಗಮಯಾತ್ರೆಯೇ ಹೌದು. ಈ ಭಾವೋತ್ಕಟತೆಯನ್ನೇ ಮಹಾಕವಿಯು ಪ್ರಕೃತಪದ್ಯದ ಮೊದಲಿಗೆ ಹರಳುಗಟ್ಟಿಸಿದ್ದಾನೆ. ಶಕುಂತಲೆಯಂಥ ಪ್ರಣಯಪರೋಕ್ಷಜೀವಕ್ಕೂ ಅದು ಹೇಗೋ ಈ ಸತ್ಯವು ಸ್ಫುರಿಸಿದೆ. ಅನಾಘ್ರಾತಪುಷ್ಪವೆನಿಸಿದ ಆಕೆಗೆ ಹೇಗೋ ಪೂರ್ವಪ್ರಣಯಾನುಭವಪಟಿಷ್ಠನಾದ ದುಷ್ಯಂತನಿಗೂ ಹಾಗೆಯೇ ಇಂಥ ಅನಿಶ್ಚಯದ ಆಂದೋಳನವುಂಟಾಗಿರುವುದು ಪ್ರೇಮಪ್ರಪಂಚದ ಚಿರಸಾರ್ವಭೌಮನಾದ ಸ್ಮರನ ದುರ್ದಾಂತಶಾಸನದ ಅಪ್ರತಿಹತಬಲ. ಇಂಥ ಕಾಮೋಪನಿಷದ್ರಹಸ್ಯವನ್ನು ಅವಲೀಲೆಯಿಂದ, ಅಮುಖ್ಯವೆಂಬಂಥ ಯಾದೃಚ್ಛಿಕತೆಯಿಂದ ಚಿತ್ರಿಸಿರುವ ಕಾಳಿದಾಸನ ಕೌಶಲವನ್ನು ಅದೆಷ್ಟು ಕೊಂಡಾಡಿದರೂ ಸಾಲದು. ಈ ಸ್ಮರಲೇಖದ ಉತ್ತರಾರ್ಧದಲ್ಲಿ ಶಕುಂತಲೆಯು ತನ್ನತನವೆಲ್ಲ ಇದೀಗ ದುಷ್ಯಂತನ ಹೃದಯದಲ್ಲಿ ಹೂತುಹೋದ ಸುಕುಮಾರಸಂಕಟವನ್ನು ತೋಡಿಕೊಂಡಿದ್ದಾಳೆ. ಇದಾದರೂ ಸಮಸ್ತಪ್ರಣಯಿಜನಕ್ಕೆ ಸುವಿದಿತಸತ್ಯ. ಪ್ರೇಮಪಾಶದಲ್ಲಿ ಸಿಲುಕುವವರೆಗೆ ಮಾತ್ರ ಸ್ವಾತಂತ್ರ್ಯ; ಆ ಬಳಿಕ ಎಲ್ಲವೂ ಪರತಂತ್ರ. ಆದರೆ ತಾನೊಲಿದ ಜೀವಿಯು ತನ್ನನ್ನೂ ಒಲಿದಿದೆಯೆಂಬ ನಿಶ್ಚಯವು ತನಗಾಗದವರೆಗೂ ಅಸ್ತಿತ್ವವೇ ಅತಂತ್ರ. ಇಂಥ ದುಃಸ್ಥಿತಿಯನ್ನೇ ಶಕುಂತಲೆಯಿಲ್ಲಿ ತನ್ನ ಪ್ರಾಕೃತಮುಗ್ಧೋಕ್ತಿಗಳ ಮೂಲಕ ಹೆಪ್ಪುಗಟ್ಟಿಸಿದ್ದಾಳೆ.
ರೂಪಕ ಮತ್ತು ಪದ್ಯಕವಿತೆಗಳ ಮಾಧ್ಯಮಗಳಲ್ಲಿ ಮಹೋನ್ನತನಾದ ಕಾಳಿದಾಸನ ಬಳಿಕ ಗದ್ಯಕಾವ್ಯನಿರ್ಮಾಣದಲ್ಲಿ ತನಗೆ ತಾನೇ ಸಾಟಿಯೆನಿಸಿದ ಭಟ್ಟಬಾಣನ ಅಮರಾಖ್ಯಾನ “ಕಾದಂಬರಿ”ಯ ಒಂದು ಸ್ಮರಲೇಖವನ್ನು ನಾವೀಗ ಸಾಕ್ಷಾತ್ಕರಿಸಿಕೊಳ್ಳೋಣ. ಬಾಣಭಟ್ಟನ ಈ “ಅತಿದ್ವಯೀ”ಗದ್ಯಕಥೆಯು ಹೆಸರಿಗೆ ಕೃತಿನಾಯಿಕೆ ಕಾದಂಬರಿಯ ಶೀರ್ಷಿಕೆಯನ್ನು ತಳೆದಿದ್ದರೂ ವಾಸ್ತವದಲ್ಲಿ ಅವನದೇ ನಿರ್ಮಾಣವಾದ ಪೂರ್ವಭಾಗವನ್ನು ಅನುಲಕ್ಷಿಸಿ ಹೇಳುವುದಾದರೆ, ಇದು “ಮಹಾಶ್ವೇತೆ”ಯೇ ಹೌದು. ಗಂಧರ್ವಸುಂದರಿ ಮಹಾಶ್ವೇತೆಯು ಅದೊಂದು ವಸಂತಸುಪ್ರಭಾತದಂದು ಅಚ್ಛೋದಸರಸ್ತೀರದಲ್ಲಿ ತಾಪಸವ್ರತವನ್ನು ಕೈಗೊಂಡ ಕಾಮದೇವನಂತಿದ್ದ ಪುಂಡರೀಕನನ್ನು ಕಂಡು ಮರುಳಾಗುತ್ತಾಳೆ. ಅವನಿತ್ತ ಮಂದಾರಮಂಜರಿಯ ಕರ್ಣಪೂರವನ್ನು ತಳೆದು ಮೈಮರೆಯುತ್ತಾಳೆ. ಪ್ರೇಮಪಾರವಶ್ಯದ ಭರದಲ್ಲಿ ಅವನಿಗೆರುವಾಗ ತನ್ನ ಮುಕ್ತಾವಳಿಯು ಜಾರಿಹೋದುದನ್ನೂ ಅದನ್ನು ಮತ್ತೆ ಸಂಗ್ರಹಿಸಿಕೊಳ್ಳುವ ಹವಣಿನಲ್ಲಿ ಅದಕ್ಕೆ ಬದಲಾಗಿ ಆತನ ಜಪಮಾಲೆಯೇ ತನ್ನ ಕೈಗೆ ಬಂದುದನ್ನೂ ಅರಿಯದೆ ವಿಲುಪ್ತಹೃದಯಳಾಗಿ ತನ್ನರಮನೆಗೆ ಮರಳುತ್ತಾಳೆ. ಸಂಜೆಯ ಹೊತ್ತಿಗೆ ಅವಳ ವಿರಹವೇದನೆ ಯುಗಾಂತಭಾಸ್ಕರನ ಪ್ರಖರಕಾಂತಿಯಂತೆ ಅವಳನ್ನು ಸುಟ್ಟುರುಬುತ್ತಿರುತ್ತದೆ. ಅಷ್ಟರಲ್ಲಿ ಪುಂಡರೀಕನ ಗೆಳಯ ಕಪಿಂಜಲನು ಬಂದು ವೈರಾಗ್ಯವ್ರತಿಗಳ ದೀಕ್ಷಾವಸ್ತ್ರವೆನ್ನಬಹುದಾದ ನಾರುಮಡಿಯ ತುಂಡೊಂದರಲ್ಲಿ ರಾಗಾನುರಾಗದ ರಸಸೂಕ್ತವೆನ್ನಬಹುದಾದ ಅನಂಗಲೇಖನವೊಂದನ್ನು ತಂದೀಯುತ್ತಾನೆ. ಅದು ಮಹಾಶ್ವೇತೆಯಲ್ಲಿ ಅನುರಕ್ತನಾದ ಪುಂಡರೀಕನ ಪ್ರಣಯಪತ್ರ. ಅವನಂತೂ ಮನ್ಮಥದಶಾವಸ್ಥೆಗಳಲ್ಲಿ ಕಡೆಯ ಹಂತಗಳಾದ ಮೂರ್ಛೆ ಮತ್ತು ಮರಣಗಳ ಸನಿಹದಲ್ಲಿರುತ್ತಾನೆ. ಹಾಡು-ಕುಣಿತಗಳಲ್ಲಿ, ಭೋಗ-ಭಾವನೆಗಳಲ್ಲಿ ಮಿಂದೇಳುವ ಗಂಧರ್ವಕುಲದ ಕನ್ಯಾಮಣಿಗೆ ಪ್ರಮದಾಲೋಕದ ಸೋಂಕೂ ಇರದ, ಕಾಮತಂತ್ರಗಳ ಕನಸೂ ಬರದ ತಾಪಸಕುಲದ ಅಕುಂಠಿತಬ್ರಹ್ಮಚಾರಿಯೊಬ್ಬನು ಬರೆದ ಈ ಪತ್ರ ನಿಜಕ್ಕೂ ರಸವಿಸ್ಮಯ. ನಿಸರ್ಗನಿರ್ವಾಚ್ಯಸಂವೇದನೆಗೆ ಪ್ರತ್ಯೇಕವಾದ ಪ್ರಶಿಕ್ಷಣ ಬೇಕೇ? ಯಾವುದೇ ಸಂಸ್ಕಾರಸಂಪನ್ನನಾದ ಭಾವಜೀವಿಗೆ ಪ್ರೀತಿಯ ಶ್ರುತಿ ಸೇರಿದರೆ ಹೊಮ್ಮುವುದೆಲ್ಲ ಮಾರಮಧುರಗೀತವಲ್ಲದೆ ಮತ್ತೇನು? ಹೀಗಾಗಿ ಪುಂಡರೀಕನಂಥ ತಾಪಸನೂ ಕವಿಯಾಗಿದ್ದಾನೆ. ಅವನ ಪ್ರೀತಿಕವಿತೆ ಹೀಗಿದೆ:
ದೂರಂ ಮುಕ್ತಾಲತಯಾ ಬಿಸಸಿತಯಾ ವಿಪ್ರಲೋಭ್ಯಮಾನೋ ಮೇ |
ಹಂಸ ಇವ ದರ್ಶಿತಾಶೋ ಮಾನಸಜನ್ಮಾ ತ್ವಯಾ ನೀತಃ || (ಪು.೩೧೯)
ಸರಸಿಜನಾಳಚ್ಛವಿಯಿಂ
ಮೆರೆಯುವ ಮುತ್ತುಗಳ ಮಾಲೆಯಿಂ ಮರುಳ್ಗೊಳಿಸು-
ತ್ತರರೇ! ದೂರಕೆ ಸೆಳೆದೌ
ವರಮಾನಸಭವನನೆನ್ನಯಾ ಹಂಸದವೋಲ್ ||
ಬಾಣಭಟ್ಟನ ವಿಕಟಪಾಂಡಿತ್ಯವೂ ಪ್ರಕಟಪ್ರತಿಭೆಯೂ ಈ ಪದ್ಯದಲ್ಲಿ ತಿಕ್ತಮಧುರಪಾಕವೆಂಬಂತೆ ಹವಣುಗೊಂಡಿವೆ. ಮಹಾಶ್ವೇತೆಯ ಮುತ್ತಿನ ಮಾಲೆಯು ಪುಂಡರೀಕನಲ್ಲಿಯೇ ಉಳಿಯಿತು. ತಾವರೆಯ ಬಿಳುಪಾದ ನಾಳದಂತಿರುವ ಈ ಹಾರವು ಪುಂಡರೀಕನ ಮನದಲ್ಲಿ ಹುಟ್ಟಿದ ಹಂಸದಂಥ ಒಲವನ್ನು ಆಸೆದೋರಿಸುತ್ತಲೇ ದಿಗಂತದಾಚೆಗೂ ಕೊಂಡೊಯ್ದಿದೆಯೆಂಬುದು ಇದರ ಸ್ಥೂಲತಾತ್ಪರ್ಯ. ಪದ್ಯದ ಪೂರ್ವಾರ್ಧದಲ್ಲಿ ಸವಕಲಾದ ಸಿದ್ಧಸಾಮಗ್ರಿಯ ಕಲ್ಪನೆಯೇ ತಲೆದೋರಿದೆಯಾದರೂ ಉತ್ತರಾರ್ಧದಲ್ಲಿ — ಶ್ಲೇಷದ ಕ್ಲೇಶವಿದ್ದರೂ — ಲೋಕೋತ್ತರವಾದ ಭಾವವೇ ಒಡಮೂಡಿದೆ. ಸಾಮಾನ್ಯವಾಗಿ ಒಲವಿನ ಹುಟ್ಟು ಮನ್ಮಥನ ಕೆಲಸವೆಂದೂ ಇಂಥ ನಲ್ಮೆಯು ನಲ್ಲ-ನಲ್ಲೆಯರನ್ನು ಸೇರುವುದೆಂದೂ ಲೋಕರೂಢಿಯ ಮಾತು. ಆದರೆ ಇಲ್ಲಿ ಪುಂಡರೀಕನ ಮನದಲ್ಲಿ ಉದಿಸಿದ ಮನೋಜನನ್ನೇ ಮಹಾಶ್ವೇತೆಯ ಮುತ್ತಿನ ಮಾಲೆಯು ಹಂಸದ ಹಾಗೆ ಮುಗಿಲಿನಾಚೆಗೆ ಸೆಳೆದೊಯ್ದಿದೆ. ಕವಿಯ ಪ್ರೌಢೋಕ್ತಿಯಿಲ್ಲಿ ತುಂಬ ಸಂಕೀರ್ಣವಾಗಿದೆ. ಬಯಕೆಯ ಭಗವಂತನಾದ ಮನ್ಮಥನೇ ಮನಸ್ಸಿನಿಂದಾಚೆ ಸೆಳೆದೊಯ್ಯಲ್ಪಟ್ಟ ಬಳಿಕ ಬದುಕುವ ಬಯಕೆಯಾದರೂ ಇದ್ದೀತೇ? ಅಲ್ಲದೆ, ಪ್ರಾಣಪಕ್ಷಿಯನ್ನು ಹಂಸವೆಂದು ಸಂಕೇತಿಸುವ ಸಂಪ್ರದಾಯದ ಹಿನ್ನೆಲೆಯಲ್ಲಿ ಈ ಮಾತು ಮತ್ತೂ ಪರಿಣಾಮಕಾರಿ. ಜೊತೆಗೆ, ಹಾರವೆಂಬ ಆಹಾರದ ವ್ಯಾಜದಿಂದ (ಕಮಲದ ನಾಳವು ಹಂಸಗಳ ಸವಿದಿನಿಸೆಂಬುದು ಸರ್ವವಿದಿತ. ಅಂತೆಯೇ ಮುತ್ತಿನ ಹಾರಕ್ಕೆ ತಾವರೆಯ ಬಳ್ಳಿಯ ಹೋಲಿಕೆಯೂ ಕವಿಲೋಕಪ್ರಸಿದ್ಧ) ಪ್ರಾಣವನ್ನೇ ಕಸಿದೊಯ್ಯಬಲ್ಲ ಒಲವಿನ ಕಸುವು ಇಲ್ಲಿ ಗಮನಾರ್ಹ. ಎಲ್ಲರೂ ಬಲ್ಲಂತೆ, ಕೋಮಲವಾದ ತಾವರೆಯ ಬಳ್ಳಿಯ ದುರ್ಬಲತೆಯೂ ಜೀವವನ್ನು ಸೆಳೆಯುವಂಥ ಪ್ರಬಲಸಾಧನವಾಗಿರುವ ಸಂಗತಿ ಇಲ್ಲಿಯ ವ್ಯಂಗ್ಯವನ್ನು ಮತ್ತಷ್ಟು ಪೋಷಿಸುತ್ತದೆ. ಇಷ್ಟೆಲ್ಲ ರುದ್ರಭೀಕರಧ್ವನಿಗಳನ್ನುಳ್ಳ ಪದ್ಯವು ಮುಂದೆ ಮಹಾಶ್ವೇತೆಯ ಮಿಲನಕ್ಕಿಂತ ಮುನ್ನವೇ ಬೆಳದಿಂಗಳ ಬೆಂಕಿಯಲ್ಲಿ ಬಳಲಿದ ವಿರಹಿ ಪುಂಡರೀಕನ ಅವಸಾನವಾದುದನ್ನು ಸೂಚಿಸುತ್ತಿದೆಯೆಂದರೆ ಅಚ್ಚರಿಯಲ್ಲ. ಒಟ್ಟಿನಲ್ಲಿ ಪುಂಡರೀಕನ ಪ್ರಣಯಪತ್ರವು ಅವನ ಜನ್ಮಾಂತರದಲ್ಲಷ್ಟೇ ಫಲಿಸುವಂತಾದುದು ಮಹಾಶ್ವೇತೆಯ ನಿರೀಕ್ಷೆಯ ನೋಂಪಿಗೆ ಸಲ್ಲಿಸಿದ ನೀರಾಜನ.
ಹೀಗೆ ಕಾಳಿದಾಸ-ಬಾಣಭಟ್ಟರಂಥ ರಸಸಿದ್ಧರ ಸ್ಮರಲೇಖಗಳ ಬಳಿಕ ಈ ಪದ್ಧತಿಯು ಅಲ್ಲಷ್ತು ಇಲ್ಲಷ್ಟು ಮಿಂಚಿ ಮರೆಯಾಯಿತು. ಅಂಥ ಪದ್ಯಗಳ ಪ್ರತಿನಿಧಿಯಾಗಿ ಒಂದನ್ನು ಸಂಕ್ಷೇಪವಿಧಿಯಿಂದ ಸಮೀಕ್ಷಿಸೋಣ. ವಲ್ಲಭದೇವನ ಸುಭಾಷಿತಾವಲಿಯ ಮುಕ್ತಕವೊಂದು (೧೧೮೩) ಮದನಪತ್ರದ ಬಹಿರಂಗವೇ ಅದೆಂತು ಅದರ ಅಂತರಂಗದ ಪ್ರತಿಬಿಂಬವಾಗಿದೆಯೆಂಬುದನ್ನು ಸ್ಮರಣೀಯವಾಗಿ ಚಿತ್ರಿಸಿದೆ:
ಕೃತಸರಸಮೃಣಾಲೀಸೂತ್ರಸಂಧಾನಬಂಧಃ
ಕುಚಮುಕುಲಮುಖಾಂಕಶ್ಚಂದನೋಪಾತ್ತಮುದ್ರಃ |
ಸ್ಮರಶಬರಶರಾಣಾಮೇಷ ಲಕ್ಷ್ಯೀಭವಂತೀಂ
ಕಥಯತಿ ಖಲು ಲೇಖಸ್ತಾಮನುದ್ಘಾಟಿತೋऽಪಿ ||
ಪಸಿಯ ತಾವರೆನೂಲ ಸಾಲನು ಸುತ್ತಿ ಗಂಟನು ಕೂಡಿಸಿ
ಮೊಲೆಮುಗುಳ ತೊಟ್ಟೊತ್ತಿ ಚಂದನಸಾರಮುದ್ರೆಯನಂಕಿಸಿ |
ಕಳುಹಿದೀ ಲೇಖನವೆ ಮನ್ಮಥಶಬರನಂಬುಗಳೀಡಿಗೆ
ಸಿಲುಕಿರುವಳವಳೆಂದು ಹೇಳುವುದೈಸೆ ತೆರೆಯುವ ಮುನ್ನವೇ ||
(ತೀ.ನಂ.ಶ್ರೀ., “ಬಿಡಿಮುತ್ತು”, ಪು.೯೬)
ಈ ಕವಿತೆಯು ಕಾಮಲೇಖನದ ಬಹಿರಂಗಮಾಧುರ್ಯವನ್ನು ಅದರ ಅಂತರಂಗಸ್ವಾರಸ್ಯಕ್ಕೆ ಸ್ವಲ್ಪವೂ ಸೋಲದ ರೀತಿಯಲ್ಲಿ ಗುಂಫಿಸಿದೆ. ಯಾವುದೇ ಪತ್ರವೂ ಅದನ್ನು ತೆರೆದು ಓದುವ ಮುನ್ನವೇ ತನ್ನೊಳಗಿನ ಹೂರಣವನ್ನು ಧ್ವನಿಪೂರ್ಣವಾಗಿ ಸೂಚಿಸಬೇಕು. ಇದು ನಮ್ಮ ಸಂಪ್ರದಾಯ. ಇಲ್ಲವಾದರೆ ಮದುವೆ-ಮುಂಜಿಗಳಂಥ ಶುಭಸಂದೇಶಪತ್ರಗಳ ನಾಲ್ಕು ಮೂಲೆಗಳಲ್ಲಿಯೂ ಮಂಗಳಮಯಹರಿದ್ರಾಂಕನದ ಸುವರ್ಣಾಲಂಕಾರವಾಗಲಿ, ಸಾವು-ನೋವುಗಳಂಥ ಅಶುಭಸಂದೇಶಪತ್ರಗಳ ನಾಲ್ದೆಸೆಯಲ್ಲಿಯೂ ಅಮಂಗಳದ ಅಂಕಿತವಾಗಿ ಮಸಿಯ ಲೇಪನವಾಗಲಿ ಹೇಗೆ ಸಾರ್ಥಕವಾಗುತ್ತಿದ್ದವು? ಇದಲ್ಲದೆ, ಕೇತಕೀ-ಅಶೋಕ-ಮಲ್ಲಿಕಾ-ಪಾಟಲ-ಕದಂಬಾದಿಕುಸುಮಗಳ ಜೊತೆಗೆ ಯಥೋಚಿತವಾದ ಪತ್ರಗಳನ್ನಿಟ್ಟು ಕಳುಹವಾಗಲೇ ಅವುಗಳ ತಿರುಳು ತಿಳಿಯುತ್ತಿದ್ದ ಅಭಿಜಾತಯುಗದ ನಾಗರಕವರ್ತನೆಗೆ ನೆಲೆ-ಬೆಲೆಗಳೆಲ್ಲಿ? ಈ ಪದ್ಯದಲ್ಲಿ ವಿಹರಿಣಿಯೊಬ್ಬಳ ಸ್ಮರಲೇಖದ ಪ್ರಸ್ತಾವವಿದೆಯೆಂಬುದನ್ನು ನಾವು ಕಂಡೆವಷ್ಟೆ. ವಿರಹತಾಪೋಪಶಾಂತಿಗೆಂದು ಕಮಲಕುಸುಮಗಳ ಹಾಸಿನ ಮೇಲೆ ಅವಳು ಮಲಗಿದ್ದಾಳೆ. ಇದೂ ಸಾಕಾಗದೆ ಎದೆಗೆಲ್ಲ ಚಂದನವನ್ನು ಸವರಿಕೊಂಡು ಬೆಂದ ಹೃದಯಕ್ಕೆ ತಂಪೆರೆಯಲು ವ್ಯರ್ಥಪ್ರಯಾಸವನ್ನು ಸಾಗಿಸಿದ್ದಾಳೆ. ಈ ನಡುವೆ — ಪ್ರಾಯಶಃ ಅವಳ ದುಃಸ್ಥಿತಿಗೆ ಮರುಗಿದ ಇಷ್ಟಸಖಿಯರ ಸಲಹೆಯಂತೆ — ನಲ್ಲನೆಡೆಗೆ ತುರ್ತಿನ ಪತ್ರವನ್ನೂ ಕಳುಹಲು ಯತ್ನಿಸಿದ್ದಾಳೆ. ಆಗ ತತ್ಕ್ಷಣದಲ್ಲಿ ಒದಗಿಬಂದ ಸಾಧನಗಳಾದರೂ ಕಮಲಪುಷ್ಪಶಯ್ಯೆಯ ಸರೋಜದಳದ ಪತ್ರ ಹಾಗೂ ಅದನ್ನು ಸುತ್ತಿಕಟ್ಟಲು ಅದೇ ಹೂವಿನ ಕೋಮಲನಾಳ. ಬಹುಶಃ ಶಕುಂತಲೆಯಂತೆ ತನ್ನ ನಖಶಿಖರಗಳಿಂದಲೇ ರಚಿಸಿದ ಮದನಪತ್ರಕ್ಕೆ ಅನ್ಯದುರ್ಭೇ(ರ್ವೇ)ದ್ಯವೂ ದಯಿತೈಕಸುಭೇ(ವೇ)ದ್ಯವೂ ಆದ ನಿಜಕುಚಮುಕುಲಾಗ್ರದಲ್ಲಿ ಕೆನೆಗಟ್ಟಿ ನಿಂತ ಚಂದನದ ಮೂಲಕವೇ ಮಾಸದ ಮುದ್ರೆಯನ್ನೂ ಹಾಕಿ ಕಳುಹಿದ್ದಾಳೆ. ಇದನ್ನೂ ಧಿಕ್ಕರಿಸಬಲ್ಲ ಧೀರನಾರು?
ಪ್ರಮಾಣಗ್ರಂಥಾವಳಿ
- ಕಾಳಿದಾಸಗ್ರಂಥಾವಲಿ. (ಸಂ.) ರೇವಾಪ್ರಸಾದ ದ್ವಿವೇದಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ೧೯೭೬
- ಕಾದಂಬರೀ. (ಸಂ.) ಮಧುರನಾಥಶಾಸ್ತ್ರಿ, ನಾಗ್ ಪ್ರಕಾಶಕರು, ದೆಹಲಿ, ೧೯೮೫
- ಕನ್ನಡ ಕಾವ್ಯಾದರ್ಶ. (ಅನು.) ಕೆ. ಕೃಷ್ಣಮೂರ್ತಿ, ಶಾರದಾ ಮಂದಿರ, ಮೈಸೂರು, ೧೯೭೫
- ಬಿಡಿಮುತ್ತು. (ಅನು.) ತೀ. ನಂ. ಶ್ರೀಕಂಠಯ್ಯ, ಕಾವ್ಯಾಲಯ, ಮೈಸೂರು, ೧೯೭೮
Concluded.