ಕಾಳಿದಾಸನ ಪರಿಣತಪ್ರಜ್ಞೆಯ ಫಲವಾದ “ರಘುವಂಶ”ಮಹಾಕಾವ್ಯದಲ್ಲಿ ಕಾವ್ಯಮೀಮಾಂಸೆಯ ಮೌಲ್ಯಗಳು ಸಾಕಷ್ಟಿವೆ. ಅವನು ಮಂಗಳಶ್ಲೋಕದಲ್ಲಿಯೇ ಲೋಕೋತ್ತರವಾದ ಕಾವ್ಯದರ್ಶನವನ್ನು ಮಾಡಿಸುತ್ತಾನೆ:
ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ || (೧.೧)
ಮಾತು ಮತ್ತು ಅರ್ಥಗಳಂತೆ ಅವಿಭಾಜ್ಯರಾಗಿ ಜಗತ್ತಿನ ಜನನೀಜನಕರೆನಿಸಿದ ಪಾರ್ವತೀ-ಪರಮೇಶ್ವರರನ್ನು ಮಾತು ಮತ್ತು ಅರ್ಥಗಳ ಪ್ರಾಪ್ತಿಗಾಗಿ ವಂದಿಸುತ್ತೇನೆ.
ಈ ಶ್ಲೋಕದ ಸ್ವಾರಸ್ಯ ಬಹುಮುಖವಾದುದು. ಇಲ್ಲಿಯೇ ಮೊದಲ ಬಾರಿಗೆ ಅರ್ಧನಾರೀಶ್ವರತತ್ತ್ವ ಮತ್ತು ವಾಗರ್ಥಾದ್ವೈತಗಳು ಸಮೀಕೃತವಾಗಿವೆ. ಅಮೂರ್ತವಾದ ವಾಗರ್ಥಗಳನ್ನು ಮೂರ್ತರಾದ ಶಿವ-ಶಿವೆಯರಿಗೆ ಒಪ್ಪವಿಟ್ಟಿರುವುದು ಉಪಮಾಲಂಕಾರಕ್ಕೆ ಮೆರುಗನ್ನಿತ್ತಿದೆ. ಈ ಪದ್ಯದ ಸೌಂದರ್ಯದ ವಿವರಣೆ ಸದ್ಯಕ್ಕೆ ಅಪ್ರಕೃತ. ಕಾವ್ಯಮೀಮಾಂಸೆಯ ದೃಷ್ಟಿಯಿಂದ ಕಾಣುವುದಾದರೆ, ಹೇಗೆ ಪಾರ್ವತೀ-ಪರಮೇಶ್ವರರು ತಮ್ಮ ಮಟ್ಟಿಗೆ ಸ್ವಯಂ ಪೂರ್ಣರಾಗಿದ್ದರೂ ಒಂದೇ ಶರೀರದ ಮೂಲಕ ಮತ್ತೊಮ್ಮೆ ಪೂರ್ಣತೆಯನ್ನು ಪಡೆದಿರುವರೋ ಹಾಗೆಯೇ ಕಾವ್ಯದ ರೂಪ-ಸ್ವರೂಪಗಳು ತಮ್ಮ ತಮ್ಮ ನೆಲೆಗಳಲ್ಲಿ ಸ್ವಯಂಪೂರ್ಣವೆನಿಸಿದ್ದರೂ ಅನ್ಯೋನ್ಯಭಾವದಿಂದ ಪರಿಪೂರ್ಣತೆಯನ್ನು ಗಳಿಸುತ್ತವೆ. ಇಲ್ಲಿ ವಸ್ತುತಃ “ಶಬ್ದ”ವೆಂಬುದಕ್ಕೆ ಬಿಡಿಯಾದ ಮಾತೆಂದೂ “ಅರ್ಥ”ವೆಂಬುದಕ್ಕೆ ಆ ಮಾತಿಗಷ್ಟೇ ಸೀಮಿತವಾದ ಹುರುಳೆಂದೂ ತಾತ್ಪರ್ಯವಲ್ಲ. ಇದು ಶಿವ-ಶಿವೆಯರ ಶರೀರಗಳ ಹೋಲಿಕೆಯಿಂದಲೇ ಅಭಿಪ್ರೇತವಾಗುತ್ತದೆ. ಹೀಗಾಗಿ ಶಬ್ದವು ಕಾವ್ಯಶರೀರವನ್ನೂ ಅರ್ಥವು ಕಾವ್ಯಾಸ್ವಾದವನ್ನೂ ಪ್ರತಿನಿಧಿಸಿದೆ. ಇವನ್ನು ಲಾಕ್ಷಣಿಕವಾಗಿ ವಕ್ರೋಕ್ತಿ ಮತ್ತು ರಸಗಳೆಂದು ನಿರ್ದೇಶಿಸಬಹುದು. ಆಲಂಕಾರಿಕರು ಹೇಳುವ ಕಾವ್ಯಲಕ್ಷಣಗಳಲ್ಲಿ ಬರುವ ಶಬ್ದಾರ್ಥೌ ಎಂಬ ಪದಪುಂಜವನ್ನು ಇಂಥ ಸಮಗ್ರದೃಷ್ಟಿಯಿಂದ ಕಾಣಬೇಕು.
“ವಾಗರ್ಥೌ” ಎಂಬ ಶಬ್ದದಲ್ಲಿಯ ದ್ವಿವಚನವು ಲೋಕವ್ಯವಹಾರದ ಮಟ್ಟಿಗೆ ಮಾತ್ರ ಸಿದ್ಧವಾಗುವ ದ್ವಂದ್ವ. ತತ್ತ್ವತಃ ಇಲ್ಲಿರುವುದು ವಾಗರ್ಥಗಳ ಅವಿನಾಭಾವವೂ ಓತಪ್ರೋತವೂ ಆದ ಸಂಬಂಧ. ಇದನ್ನು ಕಾಳಿದಾಸನು ಮೂರು ಬಗೆಯಿಂದ ಸೂಚಿಸಿದ್ದಾನೆ:
ಮೊದಲನೆಯದು ಸಂಪೃಕ್ತಿ ಎಂಬ ಶಬ್ದದ ಸ್ವಾರಸ್ಯದಲ್ಲಿದೆ. ಸಂಯುಕ್ತಿ ಎಂಬ ಸರ್ವಸುಲಭವೂ ಸುಪ್ರಸಿದ್ಧವೂ ಆದ ಪದಕ್ಕೆ ಬದಲಾಗಿ ಹೆಚ್ಚಾಗಿ ಪ್ರಸಿದ್ಧವಲ್ಲದ ಪ್ರಕೃತಶಬ್ದವನ್ನು ಬಳಸಿರುವುದು ಗಮನಾರ್ಹ. “ಪೃಚೀ–ಸಂಪರ್ಕೇ” ಎಂಬ ಧಾತುಮೂಲದ “ಸಂಪೃಕ್ತಿ”ಶಬ್ದವು ಸಾಮರಸ್ಯ, ಸಂಮಿಶ್ರಣ ಮತ್ತು ಪಾರಸ್ಪರ್ಯಗಳೆಂಬ ಅರ್ಥಚ್ಛಾಯೆಗಳನ್ನು ಹೊಂದಿದೆ. ಆದರೆ “ಯುಜಿರ್-ಯೋಗೇ” ಎಂಬ ಧಾತುಮೂಲದ “ಸಂಯುಕ್ತಿ”ಶಬ್ದವು ಬೆಸುಗೆ ಅಥವಾ ಜೋಡಣೆಯೆಂಬ ಅರ್ಥವನ್ನಷ್ಟೇ ತಳೆದಿದೆ. ಸಂಪೃಕ್ತಿಯಲ್ಲಿರುವ ಅನ್ಯೋನ್ಯಪೂರಕವಾದ ಸಮವಾಯಸಂಬಂಧವು ಸಂಯುಕ್ತಿಯಲ್ಲಿ ಎದ್ದುತೋರದು. ಸಾಹಿತ್ಯದ ವಾಗರ್ಥಾದ್ವೈತ ಎರಡು ವಿಭಿನ್ನವಸ್ತುಗಳ ಜೋಡಣೆಯಲ್ಲ; ಅದು ರೂಪ-ಸ್ವರೂಪಗಳ ಅನ್ಯೋನ್ಯಪೂರಕತ್ವದ ಸಾಮರಸ್ಯ. ಧ್ವನಿಸಿದ್ಧಾಂತದ ಬೆಳಕಿನಲ್ಲಿ ಕಂಡಾಗ ರೂಪಪ್ರಾಧಾನ್ಯವುಳ್ಳ ಗುಣ, ರೀತಿ, ಅಲಂಕಾರ ಮುಂತಾದುವೆಲ್ಲ ಸ್ವರೂಪಪ್ರಾಧಾನ್ಯವುಳ್ಳ ಪಾತ್ರ, ಇತಿವೃತ್ತ, ಪ್ರಕರಣ ಮತ್ತು ಪ್ರಬಂಧಗಳಿಗೆ ಪೂರಕವಾಗುವಂತೆ ಧ್ವನಿಗಳನ್ನು ಹೊರಡಿಸುವುದೂ ಪಾತ್ರಾದಿಗಳ ಬಲದಿಂದ ಗುಣಾಲಂಕಾರಾದಿಗಳಿಗೆ ಹೆಚ್ಚಿನ ಪುಷ್ಟಿಯೊದಗುವುದೂ ಸುವೇದ್ಯ. ಇದೇ ಸಂಪೃಕ್ತಿಶಬ್ದದ ಸಂಪರ್ಕಾರ್ಥಸ್ವಾರಸ್ಯ.
ಎರಡನೆಯದು ಪಾರ್ವತೀಪರಮೇಶ್ವರ ದಾಂಪತ್ಯದಿಂದ ಸೂಚಿತವಾಗುವ ಸ್ವಾರಸ್ಯ. ಮಿಕ್ಕೆಲ್ಲರ ದಾಂಪತ್ಯಗಳಂತೆ ಶಿವ-ಶಿವೆಯರ ದಾಂಪತ್ಯವು ನೈಮಿತ್ತಿಕವಲ್ಲ; ಅದು ಅವ್ಯಾಜ, ಅಲೌಕಿಕ. ಪರಸ್ಪರ ತಪಃಸಂಪತ್ತಿಯ ಫಲವಾದ ಇವರ ದಾಂಪತ್ಯವು ಪತಿ-ಪತ್ನೀಭಾವಕ್ಕಿರುವ ಪರಮಾದರ್ಶ. ಈ ಮೂಲಕ ವಾಗರ್ಥಗಳ ಅತ್ಯುಚ್ಚಸ್ತರದ ಮೌಲ್ಯವೇ ಕಾವ್ಯದ ಮಹತ್ತ್ವವೆಂದು ತೀರ್ಮಾನವಾಗುತ್ತದೆ. ಅಂದರೆ, ಒಳ್ಳೆಯ ಇತಿವೃತ್ತವನ್ನು ನಿರೂಪಿಸಲು ವರ್ಣನೆಯೂ ಉತ್ಕೃಷ್ಟವರ್ಣನೆಗೆ ಅವಕಾಶವೀಯುವಂತೆ ಇತಿವೃತ್ತವೂ ದುಡಿಯಬೇಕು. ಇದೇ ಪರಸ್ಪರತಪಸ್ಸು. ಜೊತೆಗೆ ಮಿಕ್ಕ ದಂಪತಿಗಳಂತೆ ಅರ್ಧನಾರೀಶ್ವರರಲ್ಲಿ ಏಕದೇಹನ್ಯಾಯವು ಔಪಚಾರಿಕವಲ್ಲ; ಅದು ಅಭಿಧಾಮೂಲಧ್ವನಿಯಂತೆ ದೃಢನಿಶ್ಚಿತ!
ಮೂರನೆಯದು “ಪಿತರೌ” ಎಂಬ ಏಕಶೇಷವೃತ್ತಿಯ ಶಬ್ದದ ಮೂಲಕ ಒದಗಿಬಂದಿರುವ ಸ್ವಾರಸ್ಯ. ಹೇಗೆ ಜಾಯಾಪತಿಗಳು ದಂಪತಿಗಳೋ ಮಾತಾಪಿತೃಗಳೂ ಹಾಗೆಯೇ “ಪಿತರೌ.” ಹೀಗೆ ಗಂಡ-ಹೆಂಡಿರು ಬೇರೆ ಎಂಬಂತೆ ತೋರಿದರೂ ಬೇರೆಯಲ್ಲದ ಬಗೆಯನ್ನು ಅಭಿಧೆಯಿಂದಲೇ ಸಾಧಿಸುವ ಕವಿಕೌಶಲ ಅನ್ಯಾದೃಶ.
ಒಟ್ಟಿನಲ್ಲಿ ಕಾವ್ಯದ ರೂಪ-ಸ್ವರೂಪಗಳ ಭಾವಾದ್ವೈತವನ್ನು ವ್ಯಾಪಕಾರ್ಥದಲ್ಲಿ ಮನಗಾಣಿಸಿರುವ ಕಾಳಿದಾಸನ ಕಾಣ್ಕೆ ಅಲಂಕಾರಶಾಸ್ತ್ರಕ್ಕೇ ಒಂದು ಅಲಂಕಾರ.
ಸತ್ಕವಿತ್ವದ ಕೀರ್ತಿಯನ್ನು ಪಡೆಯಲೆಂದು ತಾನೀ ಕೃತಿಯನ್ನು ರಚಿಸುತ್ತಿರುವುದಾಗಿ ನಮ್ರತೆಯಿಂದ ನಿವೇದಿಸುತ್ತಾನೆ.[1] ಇದು ಮುಂದೆ ಕಾವ್ಯಂ ಯಶಸೇ ಎಂದು ಆಲಂಕಾರಿಕರೆಲ್ಲ ಸೂತ್ರೀಕರಿಸಲು ನೆರವಿತ್ತಿತು. ಅನಂತರ ದುಃಶಕವಾದ ಈ ಕಾರ್ಯ ತನಗೆ ಸಾಧ್ಯವಾಗುವುದಿದ್ದಲ್ಲಿ ಅದು ಪೂರ್ವಸೂರಿಗಳ ಅನುಗ್ರಹದಿಂದಲೇ ಎಂದು ಸಾರಿರುವುದು ಕಾವ್ಯರಚನೆಗೆ ಪ್ರತಿಭೆಯ ಬಳಿಕ ವ್ಯುತ್ಪತ್ತಿಗಿರುವ ಸ್ಥಾನವನ್ನು ಧ್ವನಿಸಿದೆ. ಇದು ವಸ್ತುತಃ ಹಿಂದಿನ ಮಹಾಕವಿಗಳು ಬರೆದ ಸತ್ಕಾವ್ಯಗಳ ವ್ಯಾಸಂಗವಲ್ಲದೆ ಮತ್ತೇನು? ಈ ಅಂಶವನ್ನು ಎಲ್ಲ ಆಲಂಕಾರಿಕರೂ ಮತ್ತೆ ಮತ್ತೆ ಎತ್ತಿಹಿಡಿದಿದ್ದಾರೆ. ಕಾಳಿದಾಸನು ನಾಲ್ಕು ಪದ್ಯಗಳಲ್ಲಿ ತನ್ನ ಕಾವ್ಯದ ವಸ್ತುಮಾಹಾತ್ಮ್ಯವನ್ನು ಸಂಗ್ರಹಿಸಿದ್ದಾನೆ.[2] ಇದು ಈ ಮುನ್ನ ನಾವು ಕಂಡ ವಾಲ್ಮೀಕಿ ಮತ್ತು ವ್ಯಾಸರ ಹಾದಿಗೆ ಅನುಗುಣವಾಗಿದೆ. ಬಳಿಕ ತನ್ನ ವಿನಯವನ್ನು ಹಲವು ಬಗೆಯಿಂದ ನಿವೇದಿಸಿದ್ದಾನೆ. ಇದು ಯಾವುದೇ ಕವಿಗಿರಬೇಕಾದ ಸದ್ಗುಣಗಳಲ್ಲೊಂದು. ಆದರೆ ಈ ಬಗೆಯ ವಿನಯವು ಪ್ರದರ್ಶನವಾಗದೆ ದರ್ಶನವಾಗಬೇಕು. ಇದು ಸಾಧ್ಯವಾಗುವುದು ವಿಮರ್ಶನಕ್ಕೆ ತೆರೆದುಕೊಂಡಾಗಲೇ. ಹೀಗಾಗಿಯೇ ಪುಟಕ್ಕಿಟ್ಟ ಬಂಗಾರದಂತೆ ತನ್ನ ಕೃತಿಯು ಸಹೃದಯರ ವಿಮರ್ಶೆಯಲ್ಲಿ ತೇರ್ಗಡೆಯಾಗಬೇಕೆಂದು ಕಾಳಿದಾಸನ ಆಶಯ:
ತಂ ಸಂತಃ ಶ್ರೋತುಮರ್ಹಂತಿ ಸದಸದ್ವ್ಯಕ್ತಿಹೇತವಃ |
ಹೇಮ್ನಃ ಸಂಲಕ್ಷ್ಯತೇ ಹ್ಯಗ್ನೌ ವಿಶುದ್ಧಿಃ ಶ್ಯಾಮಿಕಾಪಿ ವಾ || (೧.೧೦)
ನಮ್ಮ ಆಲಂಕಾರಿಕರೆಲ್ಲ ಈ ಅಂಶವನ್ನು ಆದರ್ಶವಾಗಿ ಸ್ವೀಕರಿಸಿ ತಮ್ಮ ಗ್ರಂಥಗಳಲ್ಲಿಯ ಗುಣ-ದೋಷಪ್ರಕರಣಗಳನ್ನು ಯಥಾಶಕ್ತಿ ರೂಪಿಸಿದ್ದಾರೆಂದರೆ ಅತಿಶಯವಲ್ಲ.
ವನವಾಸದ ಬಳಿಕ ಸೀತಾ-ರಾಮರು ಅಯೋಧ್ಯೆಯಲ್ಲಿ ಸುಖವಾಗಿರುವ ದಿನಗಳನ್ನು ಕಾಳಿದಾಸನು ಹೀಗೆ ಚಿತ್ರಿಸುತ್ತಾನೆ:
ತಯೋರ್ಯಥಾಪ್ರಾರ್ಥಿತಮಿಂದ್ರಿಯಾರ್ಥಾ-
ನಾಸೇದುಷೋಃ ಸದ್ಮಸು ಚಿತ್ರವತ್ಸು |
ಪ್ರಾಪ್ತಾನಿ ದುಃಖಾನ್ಯಪಿ ದಂಡಕೇಷು
ಸಂಚಿಂತ್ಯಮಾನಾನಿ ಸುಖಾನ್ಯಭೂವನ್ || (೧೪.೨೫)
ಚಿತ್ರಾಲಂಕೃತವಾದ ಭವನಗಳಲ್ಲಿ ತಾವು ಬಯಸಿದ ಭೋಗವಸ್ತುಗಳೆಲ್ಲ ಕೈಗೆಟುಕುತ್ತಿರುವಾಗ ಸೀತಾ-ರಾಮರು ವನವಾಸದ ಕಷ್ಟಗಳನ್ನು ನೆನೆದರು. ಹಾಗೆ ನೆನಪಾದ ದುಃಖಗಳೂ ಅವರಿಗಾಗ ಸುಖವಾಗಿ ತೋರಿದವು.
ಇದಕ್ಕೆ ಮಲ್ಲಿನಾಥನು ತುಂಬ ಬೋಧಪ್ರದವಾದ ವಿವರಣೆಯನ್ನಿತ್ತಿದ್ದಾನೆ. ಆ ಪ್ರಕಾರ ಸೀತಾ-ರಾಮರ ಅರಮನೆಯನ್ನು ಅಲಂಕರಿಸಿದ ಚಿತ್ರಗಳು ಅವರ ವನವಾಸದ ಬೇರೆಬೇರೆಯ ಘಟ್ಟಗಳನ್ನು ಕುರಿತಿದ್ದವು. ಅವುಗಳಲ್ಲಿ ಚಿತ್ರಿತವಾದ ಸೀತಾಪಹರಣ, ರಾಮವಿಲಾಪ ಮತ್ತು ಸೀತಾನ್ವೇಷಣಗಳಂಥ ಸನ್ನಿವೇಶಗಳನ್ನು ಕಂಡು ಆಯಾ ಕಷ್ಟಗಳನ್ನು ನೆನೆದಾಗಲೂ ಅವರಿಗೆ ಸುಖವೇ ಉಂಟಾಯಿತು.
ಇದು ನಿಜಕ್ಕೂ ಮಿಗಿಲಾದ ಕಲಾಸ್ವಾರಸ್ಯವನ್ನು ಒಳಗೊಂಡಿದೆ. ಬದುಕು ಕಲೆಯಾಗುವುದು ಬ್ರಹ್ಮಜ್ಞಾನಿಗೆ ಮಾತ್ರ. ಹಾಗೆ ಬದುಕನ್ನು ಕಲೆಯಾಗಿ ಆಸ್ವಾದಿಸಲು ಅವಿದ್ಯೆಯ ಆವರಣವನ್ನು ಮೀರಬೇಕಾಗುತ್ತದೆ. ಆದರೆ ಸಾಮಾನ್ಯಸಹೃದಯರಿಗೆ ಕಲೆಯೆಂಬುದು ಬದುಕಿನೊಳಗಣ ಒಂದು ಭಾಗ; ಬದುಕಿನ ರಾಗ-ದ್ವೇಷಗಳಿಗೆ ಅಂಟದ ಹೃದಯಂಗಮಭಾಗ. ಹೀಗಾಗಿ ಕಲಾಸ್ವಾದಕಾಲದಲ್ಲಿ ಜಗತ್ಕಾರಣವಾದ ಅವಿದ್ಯೆಯಿದ್ದರೂ ಅದರ ಕಾರ್ಯಗಳಾದ ಕಾಮ-ಕರ್ಮಗಳಿರುವುದಿಲ್ಲ. ಇದನ್ನು ಆಚಾರ್ಯ ಎಂ. ಹಿರಿಯಣ್ಣನವರು ಪ್ರಬುದ್ಧವಾಗಿ ವಿವರಿಸಿದ್ದಾರೆ.[3] ಹೀಗೆ ಕಾರ್ಯವಿಲ್ಲದ ಹೊತ್ತಿನಲ್ಲಿ ಕಾರಣವು ತಾತ್ಕಾಲಿಕವಾಗಿಯಾದರೂ ಸುಪ್ತವಾಗಿರುತ್ತದೆ. ಅಂದರೆ, ಅದು ಆ ಹೊತ್ತಿನಲ್ಲಿ ಸಹೃದಯರನ್ನು ಕಾಡುವುದಿಲ್ಲ. ಈ ಬಗೆಯ ಸೌಖ್ಯವು ಸಹೃದಯನಿಗೆ ಸಿದ್ಧಿಸಬೇಕೆಂದರೆ ಕಲೆಯ ಜೊತೆಗೆ ಅದರ ಆಸ್ವಾದಕ್ಕೆ ಬೇಕಿರುವ ಕಾಲವ್ಯವಧಿ ಮತ್ತು ಮನಃಪ್ರಸನ್ನತೆಗಳೂ ಅವಶ್ಯ. ಅಭಿನಗುಪ್ತನು ರಸವಿಘ್ನಗಳನ್ನು ಚರ್ಚಿಸುವಾಗ ಈ ಅಂಶವನ್ನು ಕಟಾಕ್ಷಿಸಿರುವುದು ಸ್ಮರಣೀಯ.
ಪ್ರಕೃತ ಸೀತಾ-ರಾಮರಿಗೆ ತಮ್ಮೆಲ್ಲ ಕಷ್ಟಗಳನ್ನೂ ಕಳೆದುಕೊಂಡು ಅಯೋಧ್ಯೆಯಲ್ಲಿ ನೆಮ್ಮದಿಯಾಗಿರುವ ಅವಕಾಶ ಬಂದಿದೆ. ಅದಕ್ಕೆ ತಕ್ಕಂತೆ ಅವರಿಗೆ ಪಂಚೇಂದ್ರಿಯಗಳ ಅಪೇಕ್ಷೆಗಳಾದ ಸೌಖ್ಯಸಾಧನಗಳು ಸಮೃದ್ಧವಾಗಿ ದೊರೆತಿವೆ. ಇಷ್ಟಕ್ಕೇ ತೃಪ್ತರಾಗುವುದು ಬರಿಯ ಭೋಗಿಗಳ ಬಗೆ. ಇದನ್ನು ಮೀರಿ ಅಂತರಿಂದ್ರಿಯವಾದ ಮನಸ್ಸಿನ ವಿಶ್ರಾಂತಿಗೆ ಎಳಸುವುದು ಕಲಾಯೋಗಿಗಳ ಕ್ರಮ. ಸೀತಾ-ರಾಮರು ಅದನ್ನು ಚಿತ್ರವೀಕ್ಷಣೆಯಿಂದ ಸಾಧಿಸಿಕೊಂಡರೆಂಬುದು ಇಲ್ಲಿ ವಿವಕ್ಷಿತ. ಮತ್ತೂ ಹೆಚ್ಚಿನ ಸ್ವಾರಸ್ಯವೆಂದರೆ, ಅಲ್ಲಿಯ ಚಿತ್ರಗಳು ಅವರ ಜೀವನವನ್ನೇ ಕುರಿತವು; ಮಿಗಿಲಾಗಿ ಅವರ ಕಷ್ಟದ ಬದುಕನ್ನೇ ಕುರಿತವು. ಸಾಮಾನ್ಯರಿಗೆ ಸುಖಸಂದರ್ಭದಲ್ಲಿಯೂ ತಮ್ಮ ಕಷ್ಟಗಳು ನೆನಪಿಗೆ ಬಂದಾಗ ಅಸುಖವೆನಿಸುತ್ತದೆ. ಮತ್ತೆ ಕೆಲವರಿಗೆ ಅಸುಖವಾಗದೆ ಇದ್ದರೂ ನಾವೀಗ ಆ ಕಷ್ಟಗಳನ್ನೆಲ್ಲ ದಾಟಿದ್ದೇವೆಂಬ ಹೆಮ್ಮೆ ಉಂಟಾಗುತ್ತದೆ. ಇವೆರಡೂ ತಾಮಸ-ರಾಜಸವಲಯದವು. ಶುದ್ಧರಸಿಕರಿಗೆ ಮಾತ್ರ ತಮ್ಮ ಬದುಕಿನ ವಿಷಮಘಟ್ಟಗಳೂ ಆಸ್ವಾದ್ಯವಾಗಿ ತೋರಬಲ್ಲವು. ಇದಕ್ಕೆ ಪುಟವೀಯುವುದು ಅಂಥ ಘಟ್ಟಗಳನ್ನು ರಮಣೀಯವಾಗಿಸುವ ಕಲಾವ್ಯಾಪಾರ. ಹೀಗೆ ಕಾರ್ಯ-ಕಾರಣಭಾವದ ಜಗತ್ತು ವಿಭಾವ-ಅನುಭಾವಗಳ ರೂಪದಲ್ಲಿ ಸಾಕ್ಷಾತ್ಕರಿಸಿದಾಗ ಸುಖ-ದುಃಖಾತೀತವಾದ ಆನಂದವೊಂದೇ ಉಳಿಯುತ್ತದೆ. ನಮ್ಮ ಹಳಬರು ಅದೆಷ್ಟೋ ಬಾರಿ ಈ ಆನಂದವನ್ನು ಪ್ರೀತಿಯೆಂದೂ ಸುಖವೆಂದೂ ಸರಳಶಬ್ದಗಳಲ್ಲಿ ಹೇಳಿರುವರಾದರೂ ಅದರ ಮುಖ್ಯತಾತ್ಪರ್ಯವಿದೇ. ಈ ಅಂಶವು ಕಾಳಿದಾಸನಿಂದ ಚೆನ್ನಾಗಿ ಆವಿಷ್ಕೃತವಾಗಿದೆ.
ಕಾಳಿದಾಸನು ಸೀತಾಪರಿತ್ಯಾಗದ ಪ್ರಕರಣದಲ್ಲಿ ವಾಲ್ಮೀಕಿಮುನಿಗಳನ್ನು ನಮಗೆ ಪರಿಚಯಿಸುವ ಪರಿಯೇ ಅನ್ಯಾದೃಶ:
ತಾಮಭ್ಯಗಚ್ಛದ್ರುದಿತಾನುಸಾರೀ
ಕವಿಃ ಕುಶೇಧ್ಮಾಹರಣಾಯ ಯಾತಃ |
ನಿಷಾದವಿದ್ಧಾಂಡಜದರ್ಶನೋತ್ಥಃ
ಶ್ಲೋಕತ್ವಮಾಪದ್ಯತ ಯಸ್ಯ ಶೋಕಃ || (೧೪.೭೦)
ದರ್ಭೆ, ಸಮಿತ್ತುಗಳನ್ನು ಸಂಗ್ರಹಿಸಲು ಹೊರಟಿದ್ದ ಕವಿಯು ಸೀತೆಯ ಅಳುವನ್ನು ಅನುಸರಿಸಿ ಆಕೆಯತ್ತ ಬಂದನು. ಬೇಡನ ಬಾಣಕ್ಕೆ ತುತ್ತಾಗಿ ಮಡಿದ ಹಕ್ಕಿಯ ನೋವಿಗೆ ಸ್ಪಂದಿಸಿದ ಆತನ ಶೋಕವೇ ಶ್ಲೋಕವಾಗಿ ಹೊಮ್ಮಿತ್ತಷ್ಟೆ.
ಕಾವ್ಯದೃಷ್ಟಿಯಿಂದ ಇದು ಅತ್ಯುನ್ನತಸ್ತರಕ್ಕೆ ಸಲ್ಲುವ ಪದ್ಯ. ಇದಕ್ಕೆ ಕಾವ್ಯಮೀಮಾಂಸೆಯ ಮಹತ್ತ್ವವೂ ಇಲ್ಲದಿಲ್ಲ. ಕಾಳಿದಾಸನಿಲ್ಲಿ ಕವಿಯ ಒಂದು ಪ್ರಧಾನಲಕ್ಷಣವನ್ನು ಸೂಚಿಸಿದ್ದಾನೆ. ಲೋಕದ ಸುಖ-ದುಃಖಗಳಿಗೆ ಸ್ಪಂದಿಸಲಾಗದವನು ಕವಿಯಾಗುವುದಿರಲಿ, ಮನುಷ್ಯನೇ ಆಗುವುದಿಲ್ಲ. ಹೀಗೆ ಭಾವನಿರ್ಭರತೆ ಮತ್ತು ಸ್ಪಂದನಶೀಲತೆಗಳು ಸಜ್ಜನಿಕೆಯ ಲಕ್ಷಣಗಳು. ಇಂಥ ಸದ್ಗುಣವನ್ನು ಕ್ರಿಯಾರೂಪದಿಂದ ಪ್ರಕಟಿಸಿ ಲೋಕಹಿತವನ್ನು ಸಾಧಿಸುವುದು ಜ್ಞಾನಿಯ ಲಕ್ಷಣ. ಇದನ್ನೇ ವಾಗರ್ಥರೂಪದಿಂದ ಅಭಿವ್ಯಕ್ತಿಸುವ ಮಟ್ಟದಲ್ಲಿ ಸೀಮಿತವಾಗುವುದು ಯಾವುದೇ ಸಾಮಾನ್ಯಕವಿಯ ಲಕ್ಷಣ. ಇಲ್ಲಿ ವಾಲ್ಮೀಕಿಮುನಿಗಳು ಇವೆರಡನ್ನೂ ಸಾಧಿಸಿರುವ ವಿರಳೋದಾಹರಣೆ ಉಂಟು. ಹೀಗಾಗಿಯೇ ಅವರು ಋಷಿಕವಿಗಳು. ಆದುದರಿಂದ ಅವರಿಗೆ “ಕವಿ” ಎಂಬ ಉಪಾಧಿಯು ವೇದ-ಲೋಕಗಳೆರಡರಲ್ಲಿಯೂ ಲಕ್ಷಿತವಾದಂತೆ ಸಲ್ಲುತ್ತದೆ. ಇದನ್ನು ಕಾಳಿದಾಸನು ಬಲ್ಲವನಾದ ಕಾರಣದಿಂದ ತನ್ನಂಥ ಕವಿಗಳಿಗಿಂತ ವಾಲ್ಮೀಕಿಮುನಿಗಳು ವಿಶಿಷ್ಟರೆಂದು ಸಾರಲು ಕವಿಯೆಂಬ ಶಬ್ದವನ್ನು ವಿಶೇಷಣವನ್ನಾಗಿ ಬಳಸದೆ ವಿಶೇಷ್ಯವನ್ನಾಗಿಸಿದ್ದಾನೆ. ಇದು ಆಕಸ್ಮಿಕವಲ್ಲವೆಂಬುದನ್ನು ಸಾಬೀತು ಪಡಿಸಲೆಂಬಂತೆ ಮತ್ತೂ ಮೂರು ಬಾರಿ ಕವಿಶಬ್ದದಿಂದಲೇ ಮಹರ್ಷಿಗಳನ್ನು ಹೆಸರಿಸಿರುವುದು ಗಮನಾರ್ಹ.[4] ವಿಶೇಷಣಗಳೆಲ್ಲ ಉಪಾಧಿಗಳೆಂಬುದು ಸರ್ವವೇದ್ಯ. ಆದರೆ ವಿಶೇಷ್ಯವು ಹಾಗಲ್ಲ. ಅದು ಎಲ್ಲ ಉಪಾಧಿಗಳಿಗೂ ಅಧಿಷ್ಠಾನವಾಗಬಲ್ಲ ಕೇವಲತತ್ತ್ವ. ಇದನ್ನು ಬಲ್ಲ ಕಾಳಿದಾಸನು ಈ ಮೂಲಕ ತನ್ನಂಥ ಕವಿಗಳಿಗೆಲ್ಲ ಇರುವ ಆದರ್ಶದತ್ತ ತೋರ್ಬೆರಳನ್ನು ಚಾಚಿದ್ದಾನೆಂದರೆ ಅತಿಶಯವಲ್ಲ. ನಮ್ಮ ಆಲಂಕರಿಕರು ಕವಿಯ ಈ ತೆರನಾದ ಆದರ್ಶವನ್ನು ಚರ್ಚಿಸಿಯೇ ಇಲ್ಲ. ಆದರೆ ಒಬ್ಬ ಮಹಾಕವಿಯು ತನ್ನ ಕವಿತ್ವಾಭಿಮಾನವನ್ನೂ ಬದಿಗಿರಿಸಿ ಈ ಸತ್ಯವನ್ನು ಸಾರಿರುವುದು ಸ್ವಲ್ಪದ ಸಂಗತಿಯಲ್ಲ. ಈ ಒಳನೋಟದೊಡನೆ ರಘುವಂಶದ ಆರಂಭದಲ್ಲಿ ಬರುವ “ಮಂದಃ ಕವಿಯಶಃಪ್ರಾರ್ಥೀ” ಎಂಬ ನಮ್ರೇಪ್ಸೆಯನ್ನು ಹೋಲಿಸಿದಾಗ ಕಾಳಿದಾಸನ ಮನೋಧರ್ಮವು ನಮಗೆ ಹತ್ತಿರವಾಗುತ್ತದೆ.
ಒಟ್ಟಿನಲ್ಲಿ ಕಾಳಿದಾಸನು ವ್ಯಾಸ-ವಾಲ್ಮೀಕಿಗಳ ಸಮರ್ಥ ಉತ್ತರಾಧಿಕಾರಿಯಾಗಿ ಕಾವ್ಯಪ್ರಪಂಚದಲ್ಲಿ ಬೆಳಗಿದಂತೆ ಆನಂದವರ್ಧನ-ಅಭಿನವಗುಪ್ತರಂಥ ಆಲಂಕಾರಿಕತಲ್ಲಜರಿಗೂ ಮಾರ್ಗದರ್ಶಿಯಾಗಿ ಸಂದಿದ್ದಾನೆಂದರೆ ಅತಿಶಯವಲ್ಲ.
[1] ರಘುವಂಶ, ೧.೩
[2] ರಘುವಂಶ, ೧.೫–೮
[3] Art Experience, pp. 16–19
[4] ರಘುವಂಶ, ೧೫.೩೨,೪೧,೭೧
To be continued.