ಎಷ್ಟೋ ಬಾರಿ ನರಕವಿಗಳೂ ವರಕವಿಗಳೂ ತಮ್ಮ ಕಾವ್ಯಗಳ ಮಟ್ಟಿಗೆ ಮೌಲ್ಯನಿಷ್ಠರಾಗಿರುವರಲ್ಲದೆ ಅವುಗಳ ಆಚೆಗೆ ಸಾಮಾನ್ಯಮಾನವರಂತೆಯೇ ಮೌಲ್ಯವಿಕ್ಷೋಭೆಗಳೊಳಗೇ ಒದ್ದಾಡುತ್ತಿರುತ್ತಾರೆ. ಋಷಿಕವಿಗಳು ಮಾತ್ರ ತಮ್ಮ ಕೃತಿಯಿಂದಾಚೆಗೂ ಮೌಲ್ಯಬದ್ಧರಾಗಿರುತ್ತಾರೆ. ಈ ಕಾರಣದಿಂದಲೇ ಅವರ ಭಣಿತಿ ಮಾತ್ರವಲ್ಲದೆ ಬದುಕೂ ಕಾವ್ಯವೆನಿಸುತ್ತದೆ. ಇಂಥ ಒಂದು ಮಹತ್ತ್ವದ ಸಂಗತಿಯನ್ನು ಉತ್ತರಕಾಂಡದ ಕಡೆಯಲ್ಲಿ ಕಾಣಬಹುದು. ಪರಿತ್ಯಕ್ತಳಾದ ಸೀತೆಯನ್ನು ಮತ್ತೆ ರಾಮನು ಸ್ವೀಕರಿಸುವಂತೆ ಮಾಡುವಲ್ಲಿ ಆಸ್ಥೆಯುಳ್ಳ ವಾಲ್ಮೀಕಿಮುನಿಗಳು ಸೀತೆಯ ಚಾರಿತ್ರ್ಯಶುದ್ಧಿಯನ್ನು ಶಪಥಪೂರ್ವಕವಾಗಿ ಸಾರುತ್ತಾರೆ. ಆ ಸರ್ಗಕ್ಕೆ “ವಾಲ್ಮೀಕಿಪ್ರತ್ಯಯದಾನ”ವೆಂದೇ ಹೆಸರು (೭.೯೬). ಸೀತೆಯು ಕಳಂಕಿತೆಯೆಂಬುದೇ ಸತ್ಯವಾಗಿದ್ದಲ್ಲಿ ತನ್ನ ತಪಸ್ಸೆಲ್ಲ ವ್ಯರ್ಥವಾಗಲೆಂದು ಪ್ರತಿಜ್ಞೆ ಮಾಡುತ್ತಾರೆ. ಮಾತ್ರವಲ್ಲ, ಸೀತೆಯು ನಿಷ್ಪಾಪಳಾಗಿದ್ದಲ್ಲಿ ಮಾತ್ರ ತ್ರಿಕರಣಗಳಿಂದ ಶುದ್ಧನಾದ ನಾನು ಈ ಪರಿಶುದ್ಧಿಯ ಫಲವನ್ನು ಹೊಂದುತ್ತೇನೆ, ಅನ್ಯಥಾ ಅಲ್ಲವೆಂದು ಕೂಡ ಘೋಷಿಸುತ್ತಾರೆ:
ಬಹುವರ್ಷಸಹಸ್ರಾಣಿ ತಪಶ್ಚರ್ಯಾ ಮಯಾ ಕೃತಾ |
ನೋಪಾಶ್ನೀಯಾಂ ಫಲಂ ತಸ್ಯಾ ದುಷ್ಟೇಯಂ ಯದಿ ಮೈಥಿಲೀ ||
ಮನಸಾ ಕರ್ಮಣಾ ವಾಚಾ ಭೂತಪೂರ್ವಂ ನ ಕಿಲ್ಬಿಷಮ್ |
ತಸ್ಯಾಹಂ ಫಲಮಶ್ನಾಮಿ ಅಪಾಪಾ ಯದಿ ಮೈಥಿಲೀ || (೭.೯೬.೨೦,೨೧)
ಅಷ್ಟೇ ಅಲ್ಲದೆ ರಾಮನಿಗೇ ನೇರವಾಗಿ ಹೇಳುತ್ತಾರೆ: ಇಂಥ ಸಾಧ್ವಿಯು ಶುದ್ಧಚರಿತೆಯೆಂದು ನೀನು ತಿಳಿದಿದ್ದರೂ ಆಕೆಯನ್ನು ಲೋಕಾಪವಾದದ ಭಯದ ಕಾರಣ ಪರಿತ್ಯಜಿಸಿದ್ದೀಯೆ:
ಲೋಕಾಪವಾದಕಲುಷೀಕೃತಚೇತಸಾ ಯಾ
ತ್ಯಕ್ತಾ ತ್ವಯಾ ಪ್ರಿಯತಮಾ ವಿದಿತಾಪಿ ಶುದ್ಧಾ || (೭.೯೬.೨೪)
ಈ ಮಾತಿನ ಧ್ವನಿ ಮಾರ್ಮಿಕವಾಗಿದೆ. ರಾಮನೂ ಸೇರಿದಂತೆ ಇಡಿಯ ಕೋಸಲದ ಜನತೆಗೆ ಬೇಡವಾಗಿದ್ದ ಸೀತೆಯನ್ನು ವಾಲ್ಮೀಕಿಮುನಿಗಳು ತಾವಾಗಿ ತಮ್ಮ ಆಶ್ರಮಕ್ಕೆ ಕರೆದೊಯ್ದು ಆಶ್ರಯವಿತ್ತು ಆದರಿಸಿದ್ದಾರೆ. ಜೊತೆಗೆ ಅವಳಿಗೆ ಸುಖಪ್ರಸವವನ್ನು ಮಾಡಿಸಿ ಆಕೆಯ ಮಕ್ಕಳಿಗೂ ಪಾಲನ-ಪೋಷಣ-ವಿದ್ಯಾದಾನಗಳ ನೆರವನ್ನಿತ್ತಿದ್ದಾರೆ. ಇದು ಸಾಮಾನ್ಯದ ಸಂಗತಿಯಲ್ಲ; ಮೌಲ್ಯನಿಷ್ಠೆಗಾಗಿ ಇಡಿಯ ಜಗತ್ತನ್ನೇ ಎದುರುಹಾಕಿಕೊಳ್ಳುವ ದಿವ್ಯಸಾಹಸ! ಇಂಥ ಮಹನೀಯತೆ ಕೇವಲ ಕವಿತ್ವಕ್ಕಿಂತ ಎಷ್ಟೋ ಪಟ್ಟು ಮಿಗಿಲು. ಇದು ಬರಿಯ ವರ್ಣನಕೌಶಲದ ಪರಿಧಿಯನ್ನು ಮೀರಿದ ದರ್ಶನಸಿದ್ಧಿ. ಇಲ್ಲಿಗೆ ಕಾವ್ಯಮೀಮಾಂಸೆಯು ಮುಗಿದು ಜೀವನಮೀಮಾಂಸೆಗೆ ದಾಪಿಡುವ ಹಂತ ಮೊದಲಾಗುತ್ತದೆ. ಇಂಥ ಜೀವನಮೀಮಾಂಸೆಯ ಬೆನ್ನೆಲುಬಿಲ್ಲದ ಕಾವ್ಯಮೀಮಾಂಸೆಗೆ ಅಲಂಕಾರಸ್ಥಿತಿಯಲ್ಲದೆ ಅಲಂಕಾರ್ಯಸ್ಥಿತಿ ಎಂದೂ ಸಲ್ಲದು. ಇಷ್ಟಾದರೂ ಮಹರ್ಷಿಗಳಿಗೆ ರಾಮನಲ್ಲಿ ಕ್ರೋಧ-ಜುಗುಪ್ಸೆಗಳಿಲ್ಲ. ಏಕೆಂದರೆ ಅವರು ಆತನ ಇಕ್ಕಟ್ಟನ್ನೂ ಬಲ್ಲರು. ಹೀಗಾಗಿಯೇ ಸೀತೆಯನ್ನು ಪರಿತ್ಯಜಿಸಿದ ರಾಮನನ್ನು ತಾವು ಪರಿತ್ಯಜಿಸದೆ ತಮ್ಮ ಕಾವ್ಯವನ್ನು ರಾಮಾಯಣವಾಗಿಯೇ ಮುಂದುವರಿಸಿದರು; ಅದನ್ನೇ ಸಂತ್ರಸ್ತೆಯಾದ ಸೀತೆಯ ಮಕ್ಕಳಿಗೂ ಕಲಿಸಿಕೊಟ್ಟರು.[1] ರಾಮನೂ ಸಹ ವಾಸ್ತವವನ್ನು ಅರಿತಿದ್ದವನಾದ ಕಾರಣ ತನ್ನ ಅಸಹಾಯಕತೆಗಾಗಿ ವಾಲ್ಮೀಕಿಮುನಿಗಳಲ್ಲಿ ಕ್ಷಮೆಯನ್ನು ಬೇಡಿದ (೭.೯೭.೪,೫). ಇದನ್ನೂ ಆದಿಕವಿಗಳು ದಾಖಲಿಸಿದ್ದಾರೆ. ಈ ಮೂಲಕ ಅವರ ಸಂಯಮದ ನಿಲವಿಗೆ ಹೆಚ್ಚಿನ ಪುಷ್ಟಿಯೊದಗಿದೆ.
ಹೀಗೆ ಆದಿಕವಿಗಳ ಕಾವ್ಯಮೀಮಾಂಸೆ ಅವರ ಕಾವ್ಯದಷ್ಟೇ ಅನರ್ಘವಾಗಿದೆ.
ಭಗವಾನ್ ವ್ಯಾಸ
ವೇದವ್ಯಾಸರು ಮಹಾಭಾರತದ ಆದಿಯಲ್ಲಿಯೇ ತಮ್ಮ ಕೃತಿ ಕೇವಲ ಕಾವ್ಯವಲ್ಲದೆ ಅನೇಕಶಾಸ್ತ್ರಗಳನ್ನು ಒಳಗೊಂಡಿದೆಯೆಂದು ಸ್ಪಷ್ಟಪಡಿಸುತ್ತಾರೆ. ಹೀಗಾಗಿಯೇ ಮಹಾಭಾರತವನ್ನು “ಸೂಕ್ಷ್ಮಾರ್ಥನ್ಯಾಯಯುಕ್ತ” ಎಂದು, “ವೇದಾರ್ಥಭೂಷಿತ” ಎಂದು, “ಸಂಸ್ಕಾರೋಪಗತವಾದ ಸರಸ್ವತಿ” ಎಂದು ಸಾರಿದ್ದಾರೆ. ಇಲ್ಲಿ ನಮಗೆ ಕ್ಷೇಮೇಂದ್ರ ಹೇಳುವ “ಶಾಸ್ತ್ರಕಾವ್ಯ”[2] ಎಂಬ ಪ್ರಕಾರಕ್ಕೆ ಬೇಕಾದ ಆಕರಸಾಮಗ್ರಿ ದೊರೆಯುತ್ತದೆ. ಹಾಗೆಂದ ಮಾತ್ರಕ್ಕೆ ಕಾವ್ಯಗುಣಗಳು ಸೊರಗಬೇಕೆಂದು ತಾತ್ಪರ್ಯವಲ್ಲ. ಇಲ್ಲಿಯೇ ವ್ಯಾಸರು ಹೀಗೆ ಒಕ್ಕಣಿಸುತ್ತಾರೆ:
ಅಲಂಕೃತಂ ಶುಭೈಃ ಶಬ್ದೈಃ ಸಮಯೈರ್ದಿವ್ಯಮಾನುಷೈಃ |
ಛಂದೋವೃತ್ತೈಶ್ಚ ವಿವಿಧೈರನ್ವಿತಂ ವಿದುಷಾಂ ಪ್ರಿಯಮ್ || (೧.೧.೨೬)
ಈ ಪ್ರಕಾರ ಮಹಾಕಾವ್ಯವು ಮಂಗಳಮಯವಾದ ಪದಗಳಿಂದ ಕಂಗೊಳಿಸಬೇಕು, ದೇವ-ಮಾನವರ ನಯ-ನೀತಿಗಳಿಂದ ಕೂಡಿರಬೇಕು, ಇಂಪಾದ ಛಂದಸ್ಸುಗಳಿಂದ ಕಿವಿ ಜಕ್ಕುಲಿಸುವಂತಿರಬೇಕು. ಎಲ್ಲಕ್ಕಿಂತ ಮಿಗಿಲಾಗಿ ವಿದ್ವದ್ರಸಿಕರಿಗೆ ಆತ್ಮೀಯವಾಗಬೇಕು. ಇದು ಮುಂದೆ ಭಾಮಹಾದಿಗಳು ಹೇಳುವ ಮಹಾಕಾವ್ಯಲಕ್ಷಣಕ್ಕೆ ದಾರಿದೀವೆಗೆಯಾಗಿದೆ ಎನ್ನಬಹುದು.
ಕಾಲಿದಾಸನ ಬಳಿಕ ಬಂದ ನಮ್ಮ ಕವಿ-ಆಲಂಕಾರಿಕರು ದೃಶ್ಯಕಾವ್ಯ-ಶ್ರವ್ಯಕಾವ್ಯಗಳ ಗುಣ-ಲಕ್ಷಣಗಳನ್ನು ಎಷ್ಟು ಬಗೆಯಲ್ಲಿ ವಿಸ್ತರಿಸಿದ್ದರೂ ಅಲ್ಲಿಯ ಪಾತ್ರಗಳ (ಭೂಮಿಕೆ, ಪ್ರಕೃತಿ) ಚಿತ್ರಣ ಹೇಗಿರಬೇಕೆಂಬುದರ ಬಗೆಗೆ ಅಪವಾದಕ್ಕಾಗಿ ಕೂಡ ಯಾವೊಂದು ಮಾತನ್ನೂ ಆಡಿಲ್ಲ. ನಾಯಕಲಕ್ಷಣವೆಂಬ ಒಂದು ಸಂಪ್ರದಾಯವನ್ನು ಮತ್ತೆ ಮತ್ತೆ ಉಗ್ಗಡಿಸುವರಾದರೂ ಅದು ಹೇಗೆ ಪ್ರತಿಯೊಂದು ಕಾವ್ಯ-ರೂಪಕದಲ್ಲಿ ಕವಿಪ್ರತಿಭಾನುಪ್ರಾಣಿತವಾಗಿ ತನ್ನ ಅನನ್ಯತೆಯನ್ನು ಸಿದ್ಧಿಸಿಕೊಳ್ಳಬೇಕೆಂದು ನಿರೂಪಿಸುವುದಿಲ್ಲ. ನಾಯಿಕೆ, ಪ್ರತಿನಾಯಕ, ಗೌಣಪಾತ್ರಗಳು ಮುಂತಾದುವನ್ನೆಲ್ಲ ಮಾತೃಕೀಕರಿಸಿ ಬಣ್ಣಿಸುವರಲ್ಲದೆ ಅವನ್ನು ರಸಪೋಷಕವಾಗಿರುವ ರೀತಿಯಲ್ಲಿ ಚಿತ್ರಿಸುವುದು ಹೇಗೆಂದು ವಿವರಿಸುವುದೇ ಇಲ್ಲ. ವ್ಯಾಸರು ಇಂಥ ಅಂಧಪರಂಪರೆಗೆ ವ್ಯತಿರಿಕ್ತವಾಗಿ ತಮ್ಮ ಕೃತಿಯ ಪಾತ್ರಪ್ರದೀಪಿಕೆಯನ್ನು ಹೀಗೆ ಬೆಳಗಿದ್ದಾರೆ:
ವಿಸ್ತರಂ ಕುರುವಂಶಸ್ಯ ಗಾಂಧಾರ್ಯಾ ಧರ್ಮಶೀಲತಾಮ್ |
ಕ್ಷತ್ತುಃ ಪ್ರಜ್ಞಾಂ ಧೃತಿಂ ಕುಂತ್ಯಾಃ ಸಮ್ಯಗ್ ದ್ವೈಪಾಯನೋऽಬ್ರವೀತ್ ||
ವಾಸುದೇವಸ್ಯ ಮಾಹಾತ್ಮ್ಯಂ ಪಾಂಡವಾನಾಂ ಚ ಸತ್ಯತಾಮ್ |
ದುರ್ವೃತ್ತಂ ಧಾರ್ತರಾಷ್ಟ್ರಾಣಾಮುಕ್ತವಾನ್ ಭಗವಾನೃಷಿಃ || (೧.೧.೫೯,೬೦)
ಮಹಾಭಾರತದಲ್ಲಿ ಕುರುವಂಶದ ಕಥನವಿದೆ. ಇದರೊಟ್ಟಿಗೆ ಗಾಂಧಾರಿಯ ಧರ್ಮಶೀಲತೆ, ವಿದುರನ ಪ್ರಜ್ಞೆ, ಕುಂತಿಯ ಧೈರ್ಯ, ಶ್ರೀಕೃಷ್ಣನ ಮಹಿಮೆ, ಪಾಂಡವರ ಸತ್ಯವ್ರತ ಮತ್ತು ಕೌರವರ ಕೆಟ್ಟತನಗಳು ಚಿತ್ರಿತವಾಗಿವೆ.
ವ್ಯಾಸರು ಈ ಮೂಲಕ ತಮ್ಮ ಕಾವ್ಯದ ವಸ್ತು ಮತ್ತು ಪಾತ್ರಸ್ವಭಾವಗಳನ್ನು ಅಡಕವಾಗಿ ನಿರೂಪಿಸಿದ್ದಾರೆ. ಹೀಗೆ ಮೊದಲಿಗೇ ಇತಿವೃತ್ತದ ಸಾರವನ್ನು ದಿಗ್ದರ್ಶಿಸಿ ಬಳಿಕ ಅದು ಹೇಗೆ ಬೆಳೆಯುವುದೆಂದು ನಿರೂಪಿಸುವುದು ಮಹಾಕವಿಗಳ ಕ್ರಮ. ಏಕೆಂದರೆ ಕುತೂಹಲವನ್ನಷ್ಟೇ ಕೆರಳಿಸಿ ಆಸ್ವಾದವನ್ನು ಉಳಿಸಿಕೊಳ್ಳದ ಕೃತಿ ಒಂದೇ ಓದಿಗೆ ಪರ್ಯಾಪ್ತವಾಗುತ್ತದೆ. ಇದು ಧ್ವನನಶೀಲವಲ್ಲದ ಕಾವ್ಯಾಭಾಸದ ದುರ್ಗತಿ. ಹೀಗೆ ಸೂತ್ರರೂಪದಲ್ಲಿ ಪಾತ್ರಗಳ ಪ್ರಧಾನಧಾತುಗಳನ್ನು ಹೇಳಿ ಅನಂತರ ಸಂಧಿ-ಅವಸ್ಥೆ-ಅರ್ಥಪ್ರಕೃತಿಗಳ ಮೂಲಕ ಈ ಅಂಶಗಳೇ ವಿಸ್ತರಿಸಿಕೊಳ್ಳುವುದನ್ನು ಸೂಚಿಸುವುದು ಶ್ರೇಷ್ಠರೀತಿಯ ಪಾತ್ರನಿರ್ವಾಹ. ಇಷ್ಟಕ್ಕೂ ಪಾತ್ರಚಿತ್ರಣವೆಂದರೆ ಆಯಾ ವ್ಯಕ್ತಿಗಳ ಜೀವಾಳವೆನಿಸಿದ ಶೀಲ-ಸ್ವಭಾವಗಳು ಅನುಕೂಲ-ಪ್ರತಿಕೂಲಸಂದರ್ಭಗಳಲ್ಲಿ ಹೇಗೆ ತೆರೆದುಕೊಳ್ಳುತ್ತವೆ ಎಂಬುದನ್ನು ಧ್ವನಿಮಯವಾಗಿ ಕಥಿಸುವುದೇ ಆಗಿದೆ. ಇದು ವ್ಯಾಸರ ಸದ್ಯದ ಉಕ್ತಿಯಿಂದ ಸ್ಫುಟವಾಗದಿರದು.
ಈ ತತ್ತ್ವವನ್ನೇ ಮತ್ತೂ ಆಕರ್ಷಕವಾಗಿ ಎರಡು ವೃಕ್ಷರೂಪಕಗಳ ಮೂಲಕ ಹೇಳುತ್ತಾರೆ:
ದುರ್ಯೋಧನೋ ಮನ್ಯುಮಯೋ ಮಹಾದ್ರುಮಃ
ಸ್ಕಂಧಃ ಕರ್ಣಃ ಶಕುನಿಸ್ತಸ್ಯ ಶಾಖಾಃ |
ದುಃಶಾಸನಃ ಪುಷ್ಪಫಲೇ ಸಮೃದ್ಧೇ
ಮೂಲಂ ರಾಜಾ ಧೃತರಾಷ್ಟ್ರೋऽಮನೀಷೀ ||
ಯುಧಿಷ್ಠಿರೋ ಧರ್ಮಮಯೋ ಮಹಾದ್ರುಮಃ
ಸ್ಕಂಧೋऽರ್ಜುನೋ ಭೀಮಸೇನೋऽಸ್ಯ ಶಾಖಾಃ |
ಮಾದ್ರೀಸುತೌ ಪುಷ್ಪಫಲೇ ಸಮೃದ್ಧೇ
ಮೂಲಂ ಕೃಷ್ಣೋ ಬ್ರಹ್ಮ ಚ ಬ್ರಾಹ್ಮಣಾಶ್ಚ || (೧.೧.೬೫–೬೬)
ದುರ್ಯೋಧನನು ಅಧರ್ಮದ ಹೆಮ್ಮರ. ಇದರ ಕಾಂಡ ಕರ್ಣ; ಕೊಂಬೆಗಳು ಶಕುನಿ; ಹೂವು-ಹಣ್ಣುಗಳು ದುಃಶಾಸನ; ಅವಿವೇಕಿ ಧೃತರಾಷ್ಟ್ರನೇ ಬೇರು.
ಧರ್ಮರಾಜನು ಧರ್ಮದ ಹೆಮ್ಮರ. ಇದರ ಕಾಂಡ ಅರ್ಜುನ; ಕೊಂಬೆಗಳು ಭೀಮ; ಹೂವು-ಹಣ್ಣುಗಳು ನಕುಲ-ಸಹದೇವರು; ವೇದಗಳು, ವೇದಗಳನ್ನು ಬಲ್ಲ ಜ್ಞಾನಿಗಳು ಮತ್ತು ಭಗವಾನ್ ಶ್ರೀಕೃಷ್ಣನೇ ಇದಕ್ಕೆ ಬೇರು.
ಈ ಎರಡು ಪದ್ಯಗಳಲ್ಲಿ ಇಡಿಯ ಮಹಾಭಾರತವನ್ನೇ ಪ್ರತಿಮೀಕರಿಸಿದ ಪರಿ ಅಸಾಧಾರಣವಾಗಿದೆ. ಇದರ ಮೂಲಕವೇ ತಮ್ಮ ಕೃತಿಯನ್ನು ಓದುಗರು ಹೇಗೆ ಕಾಣಬೇಕೆಂಬ ದರ್ಶನವನ್ನು ವ್ಯಾಸರು ಕಲ್ಪಿಸಿದ್ದಾರೆ. ಹೀಗೆ ಕೃತಿಯ ಪ್ರಬಂಧಧ್ವನಿಗೆ ಪೂರಕವಾಗಿ ಬರುವ ಅಲಂಕಾರವೇ ಕಾವ್ಯದ ನಿಜವಾದ ಭೂಷಣವೆಂಬ ಆನಂದವರ್ಧನನ ಕಾಣ್ಕೆ ಮಹಾಭಾರತದ ಆದಿಯಲ್ಲಿಯೇ ಸಫಲವಾಗಿದೆ. ಹೀಗೆ ಪಾತ್ರಗಳನ್ನು ಪರಿಚಯಿಸುವ ವ್ಯಾಸರು ಕಟ್ಟಕಡೆಗೆ ಧರ್ಮರಾಜನ ಕಣ್ಣುಗಳ ಮೂಲಕ ಮತ್ತೆ ಇವೆಲ್ಲ ಪಾತ್ರಗಳನ್ನೂ ಅವುಗಳ ಮೂಲಸ್ವರೂಪಗಳೊಡನೆ ಕಾಣಿಸುತ್ತಾರೆ. ಇದೊಂದು ಮಾರ್ಮಿಕದರ್ಶನ. ಮರ್ತ್ಯದೇಹದಿಂದಲೇ ಸ್ವರ್ಗ ಸೇರಿದ ಯುಧಿಷ್ಠಿರನು ಅಲ್ಲಿ ತನ್ನ ಆತ್ಮೀಯರನ್ನು ಕಾಣಲಾಗದೆ ದುರ್ಯೋಧನಾದಿಗಳನ್ನೇ ಕಂಡು ಕೆರಳುತ್ತಾನೆ. ಆಗ ನಾರದರೂ ಸೇರಿದಂತೆ ಇಂದ್ರಾದಿದೇವತೆಗಳು ಅವನಿಗೆ ಸಮಾಧಾನ ಹೇಳುತ್ತಾರೆ. ಅದರ ತಾತ್ಪರ್ಯವಿಷ್ಟು: ಮಾನುಷಭಾವದಿಂದ ಕಂಡಾಗ ಉಕ್ಕುವ ರಾಗ-ದ್ವೇಷಗಳು ದೈವದೃಷ್ಟಿಯಿಂದ ಕಂಡಾಗ ಹೊಮ್ಮುವುದಿಲ್ಲ. ಸ್ವರ್ಗದಲ್ಲಿ ಮಾನುಷ ಅಭಿನಿವೇಶಕ್ಕೆ ಅವಕಾಶವಿಲ್ಲ. ದೇವಗಂಗೆಯಲ್ಲಿ ಮಿಂದು ಮರ್ತ್ಯಭಾವಗಳಿಂದ ಮುಕ್ತರಾಗಿ ದೇವಸಂವೇದನೆಗೆ ಎಡೆ ಮಾಡಿಕೊಡಬೇಕು. ಆದರೆ ಇದನ್ನೊಪ್ಪದ ಯುಧಿಷ್ಠಿರನು ತನ್ನ ಬಂಧುಗಳು ನರಕದಲ್ಲಿರುವರೆಂದು ತಿಳಿದು ಅಲ್ಲಿಗೇ ಹೋಗಿ ನೆಲಸುವ ಸಂಕಲ್ಪ ಮಾಡಿ ಗೆಲ್ಲುತ್ತಾನೆ. ಆಗ ಅವನಲ್ಲಿಗೆ ದೇವತೆಗಳೆಲ್ಲ ಬಂದಾಗ ನರಕವೇ ಸ್ವರ್ಗವಾಗಿ ಮಾರ್ಪಡುತ್ತದೆ. ಅನಂತರ ದೇವಗಂಗೆಯಲ್ಲಿ ಮಿಂದ ಯುಧಿಷ್ಠಿರನಿಗೆ ಆತನ ಬಂಧುಗಳೆಲ್ಲ ಸ್ವರ್ಗವಾಸಿಗಳಾಗಿ ತಮ್ಮ ಸ್ವಸ್ವರೂಪಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಅವನಿಗೆ ತುಂಬ ಸಮಾಧಾನ ತಂದಿದ್ದರಲ್ಲಿ ಅಚ್ಚರಿಯಿಲ್ಲ. ಆದರೆ ಆತನ ಹರ್ಷವನ್ನು ವ್ಯಾಸರು ದಾಖಲಿಸುವುದಿಲ್ಲ! ಕೇವಲ ಕಾಣ್ಕೆಯನ್ನಷ್ಟೇ ನಿರೂಪಿಸಿ ಮುಗಿಸುತ್ತಾರೆ. ಇಲ್ಲೊಂದು ಮಹೋನ್ನತಧ್ವನಿಯಿದೆ: ಕಾವ್ಯದಲ್ಲಿ ಬರುವ ವ್ಯಕ್ತಿಗಳನ್ನು ಪಾತ್ರಗಳಾಗಿ ನೋಡದೆ ವ್ಯಕ್ತಿಗಳಾಗಿ ಕಂಡಾಗ ರಾಗ-ದ್ವೇಷಗಳು ತಪ್ಪುವುದಿಲ್ಲ. ಇದು ಭಾವಬದ್ಧತೆಯಿಂದ ಕಲೆಯನ್ನು ಕಾಣುವ ಅಪ್ರಬುದ್ಧಸ್ಥಿತಿ. ಕಾವ್ಯದ ವ್ಯಕ್ತಿಗಳನ್ನು ಪಾತ್ರಗಳಾಗಿಯೇ ಕಂಡಾಗ ಅವರ ಎಲ್ಲ ಗುಣ-ದೋಷಗಳೂ ರಸಾವಹವೆನಿಸುತ್ತವೆ; ಇದು ಚಿತ್ತಕ್ಕೆ ಸದಸದ್ವಿವೇಕದ ವ್ಯುತ್ಪತ್ತಿಯನ್ನು ಕೊಡುತ್ತಿದ್ದರೂ ರಸಾನಂದವನ್ನು ಮಾತ್ರ ತಪ್ಪದೆ ನೀಡುತ್ತದೆ. ಇದೊಂದು ಬಗೆಯಲ್ಲಿ ಅಮರ್ತ್ಯಭಾವವೇ ಸರಿ. ದೇವತೆಗಳನ್ನು ಸುಮನಸರೆನ್ನುತ್ತಾರೆ. ನಮ್ಮಲ್ಲಿ ಹೃದಯ ಮತ್ತು ಮನಸ್ಸುಗಳಿಗೆ ಪರ್ಯಾಯತ್ವವುಂಟು. ಹೀಗೆ ಸುಮನಸರೂ ಸಹೃದಯರೂ ತತ್ತ್ವತಃ ಬೇರೆಯಲ್ಲ. ಹೀಗೆ ಭಯ, ಶೋಕ, ಕ್ರೋಧ, ಜುಗುಪ್ಸೆಗಳಂಥ ಅಹಿತಕರ ಭಾವಗಳು ಭಯಾನಕ, ಕರುಣ, ರೌದ್ರ, ಬೀಭತ್ಸಗಳಂಥ ರಸಗಳಾಗಿ ಮಾರ್ಪಟ್ಟು ಆಸ್ವಾದ್ಯವಾಗಬಲ್ಲ ರಹಸ್ಯ ಸೂಚಿತವಾಗಿದೆ. ಮಾತ್ರವಲ್ಲ, ಒಳಿತು-ಕೆಡುಕುಗಳಿಗೆ ಪ್ರತೀಕವಾದ ಯುಧಿಷ್ಠಿರವೃಕ್ಷ ಮತ್ತು ದುರ್ಯೋಧನವೃಕ್ಷಗಳು ರಸಸ್ಥಿತಿಯಲ್ಲಿ ಸಮಾನವಾಗಿ ಆಸ್ವಾದ್ಯವೆಂಬ ಅಲೌಕಿಕದೃಷ್ಟಿಯೂ ಧ್ವನಿತವಾಗಿದೆ. ಆದರೆ ವ್ಯಾಸರು ಇಂಥ ಸ್ತರದಲ್ಲಿಯೂ ದುರ್ಯೋಧನಾದಿಗಳು ವ್ಯಕ್ತಿಗಳಾಗಿ ಬಲುಬೇಗ ಕ್ಷಣಿಕಸ್ವರ್ಗದಿಂದ ಚ್ಯುತರಾಗಿ ಶಾಶ್ವತನರಕಕ್ಕೆ ಸಲ್ಲುವರೆಂಬ ನೈತಿಕಮೌಲ್ಯವನ್ನು ಮರೆಯದೆ ಒಕ್ಕಣಿಸುತ್ತಾರೆ. ಹೀಗೆ ರಸದಲ್ಲಿ ಅಂತರ್ಗತವಾಗಿ ಬರುವ ನೀತಿ ವಿರಸವಾಗದೆ ಮನಮುಟ್ಟುತ್ತದೆ.
ಇಷ್ಟೆಲ್ಲ ಗುಣವಿಶೇಷಗಳು ಇರುವ ಕಾರಣದಿಂದಲೇ ತಮ್ಮ ಕಾವ್ಯವು ವರಕವಿಗಳಿಗೂ ಉಪಜೀವ್ಯವೆಂದು ವ್ಯಾಸರು ಅಭಿಪ್ರಾಯಿಸುತ್ತಾರೆ (೧.೨.೨೪೧). ಇದು ಮೇಲ್ನೋಟಕ್ಕೆ ಅತಿಶಯೋಕ್ತಿಯಾಗಿ ತೋರಿದರೂ ವಸ್ತುತಃ ಸ್ವಭಾವೋಕ್ತಿ. ಈ ಕಾರಣದಿಂದಲೇ ಮುಂದೆ ಕ್ಷೇಮೇಂದ್ರನು ವೇದವ್ಯಾಸರನ್ನು “ಭುವನೋಪಜೀವ್ಯ”ರೆಂದು ಸಾರ್ಥಕವಾಗಿ ಸ್ಮರಿಸುತ್ತಾನೆ.[3]
[1] ಈ ಅಂಶವೇ ನಮ್ಮ ಕಾಲದ “ವಿಚಾರವಾದಿ”ಗಳ ಅನಾತ್ಮದೃಷ್ಟಿಯಿಂದ ಪ್ರೇರಿತವಾದ ಕಾವ್ಯ ಮತ್ತು ಅದರ ಮೀಮಾಂಸೆಗಳಿಗಿಂತ ಆದಿಕವಿಗಳ ದೃಷ್ಟಿ-ಸೃಷ್ಟಿಗಳು ಮಿಗಿಲಾದುವೆಂದು ಸಾರುತ್ತಿದೆ. ಮೂಲತಃ ಮಹನೀಯವಾದ ಮಾನವತೆಯಲ್ಲಿ ಶಾಶ್ವತವಾದ ಕಹಿಯನ್ನು ಉಳಿಸುವ ಯಾವುದೇ ಯತ್ನ ನಿಂದ್ಯ, ಹೇಯ. ಇದಕ್ಕೆ ವಿರುದ್ಧವಾದುದು ಆರ್ಷದರ್ಶನ.
[2] ಸುವೃತ್ತತಿಲಕ, ೩.೨
[3] ಕವಿಕಂಠಾಭರಣ, ೨.೧