ಪ್ರವೇಶಿಕೆ
“ಪಾತುಂ ಶ್ರೋತ್ರರಸಾಯನಂ ರಚಯಿತುಂ ವಾಚಃ ಸತಾಂ ಸಮ್ಮತಾ
ವ್ಯುತ್ಪತ್ತಿಂ ಪರಮಾಮವಾಪ್ತುಮವಧಿಂ ಲಬ್ಧುಂ ರಸಸ್ರೋತಸಃ |
ಭೋಕ್ತುಂ ಸ್ವಾದುಫಲಂ ಚ ಜೀವಿತತರೋರ್ಯದ್ಯಸ್ತಿ ತೇ ಕೌತುಕಂ
ತದ್ಭ್ರಾತಃ ಶೃಣು ರಾಜಶೇಖರಕವೇಃ ಸೂಕ್ತೀಃ ಸುಧಾಸ್ಯಂದಿನೀಃ ||” (ಬಾಲರಾಮಾಯಣ, ೧.೧೫)
“ಕಿವಿಗೆ ಅಮೃತವಾಗಬಲ್ಲ ರಸಪಾಕದ ಆಸೆಯುಂಟೆ? ಸಜ್ಜನರು ತಲೆದೂಗಬಲ್ಲಂಥ ಕಾವ್ಯರಚನೆಯ ಸ್ವಾರಸ್ಯ ತಿಳಿಯಬೇಕೆ? ಉತ್ಕೃಷ್ಟಪಾಂಡಿತ್ಯವನ್ನು ಗಳಿಸಬೇಕೆ? ರಸಸಾಗರದ ಸೀಮೆಯನ್ನು ಕಾಣಬೇಕಾಗಿದೆಯೆ? ಜೀವನತರುವಿನ ಮಧುರಫಲವನ್ನು ಆಸ್ವಾದಿಸಲಾಸೆಯಿದೆಯೆ? ಇದಾವ ಕುತೂಹಲವದ್ದರೂ ಸರಿ, ಸಖನೇ! ಸುಧೆಯನ್ನು ಸೂಸುವ ರಾಜಶೇಖರಕವಿಯ ಸೂಕ್ತಿಗಳನ್ನು ಕೇಳು!”
ಸುಮಾರು ಸಾವಿರ ವರ್ಷಗಳಿಗೂ ಮುನ್ನ ಭಾರತದ ಮಧ್ಯಪ್ರಾಂತವಾದ ಕಾನ್ಯಕುಬ್ಜದಲ್ಲಿ ಜೀವಿಸಿದ ರಾಜಶೇಖರ ವಿಲಕ್ಷಣಪ್ರತಿಭೆಯ ಕವಿ, ಶಾಸ್ತ್ರಜ್ಞ. ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ರಾಸಿಕ್ಯವುಳ್ಳ ಸಹೃದಯ. ತನ್ನ ಜೀವಿತಾವಧಿಯಲ್ಲಿ ಸಕಲವೈಭೋಗಗಳನ್ನೂ ಆಸ್ವಾದಿಸಿ ಕೊನೆಗೆ ವಿರಕ್ತಿಯನ್ನು ಸಾಧಿಸಿಕೊಳ್ಳಲು ಕಾಶಿಯತ್ತ ಸಾಗಿದವನು. “ಯಾಯಾವರ”ವಂಶದಲ್ಲಿ ಜನಿಸಿದ ರಾಜಶೇಖರನು ಪ್ರಸಿದ್ಧಿಯನ್ನು ಗಳಿಸಿದ್ದು ಸಂಸ್ಕೃತ-ಪ್ರಾಕೃತಭಾಷೆಗಳಲ್ಲಿ ರಚಿತವಾದ “ಬಾಲರಾಮಾಯಣ,” “ವಿದ್ಧಶಾಲಭಂಜಿಕಾ,” “ಕರ್ಪೂರಮಂಜರೀ” ಮುಂತಾದ ತನ್ನ ನಾಟಕಗಳಿಂದ. ಇದಲ್ಲದೆ “ಹರವಿಲಾಸ”ವೆಂಬ ಮಹಾಕಾವ್ಯವನ್ನೂ (ಇದೀಗ ಅನುಪಲಬ್ಧ) ಇವನು ರಚಿಸಿದ್ದನೆಂದು ತಿಳಿದುಬರುತ್ತದೆ. ಹಲವು ಹತ್ತು ಜ್ಞಾನಶಾಖೆಗಳಲ್ಲಿ ಆಸಕ್ತಿಯನ್ನು ತಳೆದು ವೈದುಷ್ಯವನ್ನೂ ಗಳಿಸಿಕೊಂಡಿದ್ದ ಈತನಿಗೆ ಮಿಗಿಲಾದ ಆತ್ಮಪ್ರತ್ಯಯವಿತ್ತೆಂಬುದರಲ್ಲಿ ಸೋಜಿಗವೆನೂ ಇಲ್ಲ. ಸಂಸ್ಕೃತ-ಪ್ರಾಕೃತಭಾಷೆಗಳಲ್ಲಿ ಎಲ್ಲ ಬಗೆಯ ಪ್ರಬಂಧಗಳನ್ನೂ ರಚಿಸಬಲ್ಲವನಾದುದರಿಂದ ತನ್ನನ್ನು “ಕವಿರಾಜ”ನೆಂದು ಕರೆದುಕೊಂಡಿದ್ದಾನೆ. ಇವನು ಬಾಲರಾಮಾಯಣಕೃತಿಯಲ್ಲಿ ತಾನೇ ಹಿಂದಿನ ಜನ್ಮಗಳಲ್ಲಿ ವಾಲ್ಮೀಕಿ, ಭರ್ತೃಮೇಂಠ ಮತ್ತು ಭವಭೂತಿಗಳಾಗಿದ್ದೆನೆಂದು ಹೇಳಿಕೊಂಡಿದ್ದಾನೆ:
“ಬಭೂವ ವಲ್ಮೀಕಭವಃ ಕವಿಃ ಪುರಾ
ತತಃ ಪ್ರಪೇದೇ ಭುವಿ ಭರ್ತೃಮೇಂಠತಾಮ್ |
ಸ್ಥಿತಃ ಪುನರ್ಯೋ ಭವಭೂತಿರೇಖಯಾ
ಸ ವರ್ತತೇ ಸಂಪ್ರತಿ ರಾಜಶೇಖರಃ ||” (೧.೧೬)
ಈ ಬಗೆಯ ಆತ್ಮಪ್ರಶಸ್ತಿಯು ಧಾರ್ಷ್ಟ್ಯವೆಂಬಂತೆ ತೋರಿದರೂ ಅಹಂಕಾರವನ್ನು ತಾಳಬಲ್ಲ — ಅದನ್ನು ಕ್ವಾಚಿತ್ಕವಾಗಿ ಆತ್ಮೀಯವೂ ಆಗಿಸಬಲ್ಲ — ವಿದ್ವತ್ತೆ-ರಾಸಿಕ್ಯಗಳು ಇವನಲ್ಲಿದುದರಿಂದ ಅದು ಅನ್ಯಾಯದ ಮಟ್ಟಕ್ಕೆ ಮುಟ್ಟುವುದಿಲ್ಲ. ತನ್ನ ಬಗೆಗೆ, ತನ್ನ ವಿದ್ಯಾವಂಶದ ಬಗೆಗೆ ಅಪಾರಾಭಿಮಾನವನ್ನು ಹೊಂದಿದ್ದ ರಾಜಶೇಖರ ಅವನ ಕುಟುಂಬಿನಿ ಅವಂತಿಸುಂದರಿಯನ್ನು ಎಂದೂ ಕೀಳಾಗಿ ಕಾಣಲಿಲ್ಲ; ಪ್ರತ್ಯುತ ಪ್ರೀತ್ಯಾದರಗಳಿಂದ ನಡಸಿಕೊಂಡ. ಪ್ರಾಕೃತಭಾಷೆ ಮತ್ತು ಸಾಹಿತ್ಯಶಾಸ್ತ್ರಗಳಲ್ಲಿ ಸೊಗಸಾದ ಗತಿಯಿದ್ದ ಆಕೆಯ ಅಭಿಪ್ರಾಯಗಳನ್ನು ರಾಜಶೇಖರನು ಗಂಭೀರವಾಗಿ ಪರಿಗಣಿಸಿದ್ದಷ್ಟೇ ಅಲ್ಲ, ತನ್ನ ಗ್ರಂಥಗಳಲ್ಲಿಯೂ ನಾಮೋಚ್ಚಾರಪುರಸ್ಸರವಾಗಿ ಉಲ್ಲೇಖಿಸಿದ್ದಾನೆ. ಈ ರೀತಿಯ ಸರಸಸಾರಸ್ವತಕುಟುಂಬವನ್ನು ಸಂಸ್ಕೃತಸಾಹಿತ್ಯೇತಿಹಾಸದಲ್ಲಿ ನಾವು ಕಾಣುವುದು ವಿರಳ.
ರಾಜಶೇಖರನು ರಚಿಸಿದ “ಕಾವ್ಯಮೀಮಾಂಸಾ”ಗ್ರಂಥವು ಅಲಂಕಾರಶಾಸ್ತ್ರಕ್ಷೇತ್ರದಲ್ಲಿಯೇ ವಿನೂತನವಾದುದು. ಕವಿಯಾಗಬಯಸುವವರಿಗೆ ಉತ್ತಮ ಕೈದೀವಿಗೆಯಾದ ಈ ಕೃತಿಯು “ಕವಿಶಿಕ್ಷಾ” ಎಂಬ ಗ್ರಂಥಪ್ರಕಾರದ ಮೂಲಮಾತೃಕೆಯೂ ಹೌದು. ಹದಿನೆಂಟು ಅಧಿಕರಣಗಳಲ್ಲಿ ಸಾಹಿತ್ಯಶಾಸ್ತ್ರದ ಪ್ರಮುಖಪ್ರಮೇಯಗಳೆಲ್ಲವನ್ನೂ ಪ್ರಕೃತಕೃತಿಯು ಚರ್ಚಿಸುತ್ತದೆಯೆಂದು ಸ್ವೀಯ ಮತ್ತು ಅನ್ಯಮೂಲಗಳಿಂದ ತಿಳಿಯುತ್ತದೆಯಾದರೂ ನಮಗಿಂದು ದೊರೆತಿರುವುದು ಹದಿನೆಂಟು ಅಧ್ಯಾಯಗಳಿರುವ “ಕವಿರಹಸ್ಯ”ವೆಂಬ ಒಂದು ಅಧಿಕರಣ ಮಾತ್ರ. ಇದಿಷ್ಟರ ಅಧ್ಯಯನದಿಂದಲೇ ಮೂಲಗ್ರಂಥದ ಮಹತ್ತ್ವ ಯಾವ ತೆರೆನಾದದ್ದೆಂದು ತಿಳಿಯುತ್ತದೆ. ಅನ್ಯತ್ರ ಎಲ್ಲಿಯೂ — ಈ ಬಗೆಯ ವಿನೂತನರೀತಿಯಲ್ಲಿ — ಪರಾಮರ್ಶೆಗೆ ಒಳಗಾಗದ ದ್ವಿವಿಧಪ್ರತಿಭಾತತ್ತ್ವ, ಕವಿಗಳ ಪ್ರಕಾರಗಳು, ಕವಿಚರ್ಯೆ (ಆಯುರ್ವೇದದ ಋತುಚರ್ಯೆ, ಅರ್ಥಶಾಸ್ತ್ರದ ರಾಜಚರ್ಯೆ, ಕಾಮಸೂತ್ರಗಳಲ್ಲಿಯ ನಾಗರಕವೃತ್ತಾಂತ ಮತ್ತು ಧರ್ಮಶಾಸ್ತ್ರದ ಸೂಕ್ಷ್ಮಾಂಶಗಳ ಅಧ್ಯಯನಫಲವೆಂಬಂತೆ ರೂಪಗೊಂಡ ಸ್ವೋಪಜ್ಞವಿಷಯ), ವಿವಿಧಪ್ರಾಂತಗಳಲ್ಲಿಯ ಸಂಸ್ಕೃತಭಾಷೋಚ್ಚಾರಣವಿಧಾನ, ಶಬ್ದಾರ್ಥಹರಣ, ಕವಿಸಮಯ ಮುಂತಾದ ಶಾಸ್ತ್ರಸಂಗತಿಗಳು ಕಾವ್ಯಮೀಮಾಂಸಾಗ್ರಂಥವನ್ನು ಸಾಹಿತ್ಯಾಭ್ಯಾಸಿಗಳ ಪಾಲಿಗೆ ಅನಿವಾರ್ಯವಾಗಿಸಿವೆ. ಈ ಗ್ರಂಥವು ನಮಗೆ ಆಪ್ತವೆನಿಸುವುದು ಶಾಸ್ತ್ರಸರಣಿಯ ನಾವಿನ್ಯನಿಂದ ಮಾತ್ರವಲ್ಲ, ಅದರ ಸ್ಫುಟವೂ ಕಾಂತಿಯುತವೂ ಆದ ಭಾಷಾಶೈಲಿಯಿಂದ ಕೂಡ.
ರಾಜಶೇಖರನದು ಧಾರಾಳವಾಗ್ಧೋರಣೆ. ಆತನ ನಿರೂಪಣವಿಧಾನದಲ್ಲಿ ಆಭಿಜಾತ್ಯವನ್ನು ಬಿಡದ ಅನೌಪಚಾರಿಕತೆಯನ್ನು ನಾವು ಕಾಣುತ್ತೇವೆ. ವಾಗ್ರೂಢಿ, ಅಕ್ಲಿಷ್ಟಾಲಂಕಾರಗಳ ರಮ್ಯತೆ, ಛಂದೋವಿಲಾಸ — ಇವೇ ಮೊದಲಾದ ಅಂಶಗಳನ್ನೊಳಗೊಂಡ ಸಂಸ್ಕೃತಭಾಷೆಯ ಸರ್ವಾಂಗೀಣಸೌಂದರ್ಯವನ್ನು ಮನಗಾಣುವುದಕ್ಕೆ ರಾಜಶೇಖರನ ವಾಕ್ಯಸರಣಿ ಒಂದು ಸುಂದರನಿದರ್ಶನ. ಈ ಗ್ರಂಥದ ಗದ್ಯಭಾಗವು ಬಹುಶಾಸ್ತ್ರವಿಶಾರದನಾದ ಓರ್ವ ಸಾಹಿತ್ಯರಸಿಕ ಸಾವಧಾನವಾಗಿ ಕುಳಿತು ತನ್ನ ಅನುಭವಗಳನ್ನು ಆತ್ಮೀಯವಾಗಿ ವಿನಿಕೆ ಮಾಡಿಕೊಳ್ಳುವ ರೀತಿಯಲ್ಲಿ ಸಾಗುತ್ತದೆ. ರಾಜಶೇಖರನು ಅಲ್ಲಲ್ಲಿ ಹದವರಿತು ಉದಾಹರಿಸುವ ಸ್ವೀಯಸೂಕ್ತಿಗಳಂತೂ ನಿರಪವಾದವಾಗಿ ಸುಂದರವಾಗಿವೆ. ಕಾವ್ಯಮೀಮಾಂಸೆಯ ಭಾಷೆ ಪೆಡಸಲ್ಲ; ಹೀಗಾಗಿಯೇ ಅಲ್ಲಿ ಅರ್ಥಸ್ಪಷ್ಟತೆಗೇನೂ ಕೊರತೆಯಿಲ್ಲ. ಶಾಸ್ತ್ರಮರ್ಯಾದೆಯನ್ನು ಉಲ್ಲಂಘಿಸದೆ ಗಂಭೀರವಿಚಾರಗಳನ್ನು ಎಷ್ಟು ಸರಸವಾಗಿ, ಸುಬೋಧವಾಗಿ ಪ್ರಸ್ತುತಪಡಿಸಬಹುದೆಂದು ತಿಳಿಯುವುದಕ್ಕೆ ಪ್ರಕೃತಗ್ರಂಥವೇ ತವನಿಧಿ. ಇದು ಶಾಸ್ತ್ರ, ಕಾವ್ಯ ಮತ್ತು ಆಡುಮಾತುಗಳ ಸ್ವಾರಸ್ಯಸರ್ವಸ್ವದ ರಸಮಯಪಾಕ. ಈ ಭಾಷೆಯಲ್ಲಿ ಕಂಡುಬರುವ ಅದೊಂದು ಬಗೆಯ ಪಲುಕು ರಾಜಶೇಖರನದೇ ಪ್ರತಿಭಾಪ್ರಾಪ್ತಿ. ಡಾ|| ಕೆ. ಕೃಷ್ಣಮೂರ್ತಿಯವರು ಗುರುತಿಸಿರುವಂತೆ ಈ ಗ್ರಂಥದ ಮತ್ತೊಂದು ವೈಶಿಷ್ಟ್ಯವೆಂದರೆ ತತ್ಪೂರ್ವದಲ್ಲಿ ಇನ್ನಾವ ಲಕ್ಷಣಗ್ರಂಥದಲ್ಲಿಯೂ ಇರದಿರುವಷ್ಟು ಸರಸವಾದ ಉದಾಹರಣಪದ್ಯಗಳ ಅರ್ಥಪೂರ್ಣಸಂಯೋಜನೆ. ಇಂಥ ವಿಶಿಷ್ಟಗ್ರಂಥದ ಕೆಲವು ಭಾಗಗಳನ್ನಾದರೂ ಶಾಲಾ-ಕಾಲೇಜುಗಳ ಸಂಸ್ಕೃತಪಠ್ಯಪುಸ್ತಕಗಳಲ್ಲಿ ಸೇರಿಸದಿರುವುದು ಶೋಚನೀಯ.
“ಕಾವ್ಯಾಲಾಪಾಂಶ್ಚ ವರ್ಜಯೇತ್” ಎಂದು ತಿವಿಯುತ್ತಿದ್ದ ಮೀಮಾಂಸಕರ ಬಿಗಿಮುಷ್ಟಿಗೆ ಸಿಲುಕಿ ನರಳುತ್ತಿದ್ದ ಸಾಹಿತ್ಯವಿದ್ಯೆಗೆ ವೇದೋಪವಸತಿಯನ್ನು ಕಲ್ಪಿಸಿಕೊಟ್ಟ ಹೆಗ್ಗಳಿಕೆಯೂ ರಾಜಶೇಖರನಿಗೆ ಸಲ್ಲುತ್ತದೆ. ಸಾಹಿತ್ಯವನ್ನು ವೇದಾಂಗಗಳಲ್ಲಿಯೂ ವಿದ್ಯಾಸ್ಥಾನಪ್ರಕಾರಗಳಲ್ಲಿಯೂ ಸೇರಿಸತಕ್ಕದ್ದೆಂದು ಇವನ ಅಭಿಪ್ರಾಯ. ಮಧುಸೂದನಸರಸ್ವತಿಗಳು ತಮ್ಮ “ಪ್ರಸ್ಥಾನತ್ರಯ”ಗ್ರಂಥದಲ್ಲಿ ಈ ವಿಚಾರವನ್ನು ಚರ್ಚಿಸುವ ಮೂಲಕ ಉಪವೇದಗಳಲ್ಲೊಂದಾದ ಗಾಂಧರ್ವವೇದಕ್ಕೆ ಅಷ್ಟಾದಶವಿದ್ಯಾಸ್ಥಾನಗಳಲ್ಲಿ ಸ್ಥಾನವನ್ನು ಕಲ್ಪಿಸಿಕೊಟ್ಟರು. ವೇದಮಂತ್ರಗಳನ್ನು ವಿವರಿಸುವ ಸಂದರ್ಭದಲ್ಲಿ ಅಲಂಕಾರಶಾಸ್ತ್ರದ ಅನಿವಾರ್ಯತೆಯನ್ನು ಅವರಿಗೆ ಮುಂದೆ ಬಂದ ಅಪ್ಪಯದೀಕ್ಷಿತರೇ ಮೊದಲಾದವರು ಸಮರ್ಥವಾಗಿ ನಿರೂಪಿಸಿದರು. ಈ ಬಗೆಯಲ್ಲಿ ಆನಂದೈಕಪ್ರಯೋಜನವುಳ್ಳ ಸಾಹಿತ್ಯವನ್ನು ಅದಕ್ಕಾಗಿಯೇ ಗೌರವಿಸದೆ ವೇದೋಪವಸತಿಯನ್ನು ನಮ್ಮ ಪೂರ್ವಿಕರು ಅಪೇಕ್ಷಿಸಿದ್ದು ಪ್ರಶಂಸನೀಯವೇನೂ ಅಲ್ಲ. ವೇದವಾಙ್ಮಯವೂ ಆನಂದೈಕತಾತ್ಪರ್ಯವುಳ್ಳದ್ದೆಂದು ಮನಸ್ಸಿಗೆ ತಂದುಕೊಂಡರೆ ಈ ಸಂಗತಿ ಮತ್ತೂ ವಿಕಟವೆನಿಸುತ್ತದೆ.
ಸರ್ವವಿಧದ ಜಿಜ್ಞಾಸೆಗಳೂ ಆತ್ಯಂತಿಕವಾಗಿ ಇರವು-ಅರಿವು-ನಲವುಗಳನ್ನು ಕುರಿತವೇ. ಈ ಬಗೆಯ ಮೀಮಾಂಸೆಯನ್ನು ಕಥೆಗಳ ಮೂಲಕ ಕಲಾತ್ಮಕವಾಗಿ ರೂಪಿಸಿ, ಬೆಳೆಸಿ, ಮುನ್ನಡೆಸುವುದು ಭಾರತೀಯರಾದ ನಮ್ಮ ನಚ್ಚಿನ ಮಾರ್ಗ. ಇಂಥ ಕಥೆಗಳಲ್ಲೊಂದು “ಕಾವ್ಯಪುರುಷೋತ್ಪತ್ತಿ.” ಇದೇ ಪ್ರಕೃತಲೇಖನದ ವಿಷಯ.
ಕಾವ್ಯದ ಹಿಂದಿನ ಕಥೆ
ಕಾವ್ಯಪುರುಷೋತ್ಪತ್ತಿಯು ವಾಯುಪುರಾಣದ ಸರಸ್ವತ್ಯುಪಾಖ್ಯಾನದಲ್ಲಿಯೂ (೬೫ನೆಯ ಅಧ್ಯಾಯ) ಬಾಣಭಟ್ಟನ ಹರ್ಷಚರಿತದಲ್ಲಿಯೂ ಉಲ್ಲೇಖಗೊಂಡಿದೆ. ಇಂತಿದ್ದರೂ ಅದೊಂದು ಆಕರ್ಷಕರೂಪವನ್ನು ತಾಳಿ ಸೌಂದರ್ಯಶಾಸ್ತ್ರದ ಸೂಕ್ಷ್ಮಗಳನ್ನು ಧ್ವನಿಸುವಂತಾಗಿರುವುದು ರಾಜಶೇಖರನ ಗ್ರಂಥದಲ್ಲಿಯೇ. ಕಾವ್ಯಮೀಮಾಂಸಾಗ್ರಂಥದ ಮೂರನೆಯ ಅಧ್ಯಾಯದಲ್ಲಿ ಒಕ್ಕಣೆಗೊಂಡಿರುವ ಕಾವ್ಯಪುರುಷನ ಕಥೆಯನ್ನು ಬೃಹಸ್ಪತಿಯು ತನ್ನ ಶಿಷ್ಯರಿಗೆ ಹೇಳಿದುದಂತೆ.
ಹಿಂದೊಮ್ಮೆ ವಾಗ್ದೇವತೆಯಾದ ಸರಸ್ವತಿಯು ಸಂತಾನೋತ್ಸುಕಳಾಗಿ ಹಿಮಾಲಯದ ತಪ್ಪಲಿನಲ್ಲಿ ತಪಸ್ಸನ್ನಾಚರಿಸುತ್ತಿದ್ದಾಗ ಆಕೆಯ ದೃಢದೀಕ್ಷೆಗೆ ಒಲಿದ ವಿಧಾತನು ಪುತ್ರಜನ್ಮವಾಗಲೆಂದು ವರವಿತ್ತನಂತೆ. ಕಾವ್ಯಪುರುಷನ ಆವಿರ್ಭಾವವಾದದ್ದು ಹೀಗೆ. ಬೇರೆಲ್ಲ ಮಕ್ಕಳು ಹುಟ್ಟಿದೊಡನೆಯೇ ರೋದಿಸತೊಡಗಿದರೆ ಕಾವ್ಯಪುರುಷನು ತಾಯಿಗೆ ನಮಸ್ಕರಿಸಿ ಛಂದೋಬದ್ಧವಾಗಿ ಮಾತನಾಡಿದನಂತೆ! ಇದನ್ನು ಕಂಡು ವಿಸ್ಮಯಗೊಂಡ ಸರಸ್ವತಿಯು ಆತನ ರೂಪರಮ್ಯತೆಯನ್ನು ಹೊಗಳತೊಡಗಿದಳಂತೆ: “ನಿನ್ನ ಶರೀರ ಶಬ್ದಾರ್ಥಮಯ, ಸಂಸ್ಕೃತವು ಮುಖ, ಪ್ರಾಕೃತ ತೋಳು, ಅಪಭ್ರಂಶ ಬೆನ್ನು, ಪೈಶಾಚ ಪಾದ, ಮಿಶ್ರಭಾಷೆಯೇ ಎದೆ, ಸಕಲಶಬ್ದಾರ್ಥಗುಣಗಳೂ ನಿನ್ನಲ್ಲಿವೆ. ‘ಚಮತ್ಕಾರ’ ನಿನ್ನ ಮಾತಿನಲ್ಲಿ ಮನೆಮಾಡಿದೆ. ರಸವೇ ನಿನ್ನ ಆತ್ಮ, ಛಂದಸ್ಸುಗಳೇ ರೋಮಗಳು. ಪ್ರಹೇಲಿಕೆಯೇ ಮೊದಲಾದ ಚಿತ್ರಕಾವ್ಯಪ್ರಕಾರಗಳು ನಿನ್ನ ವಿನೋದವಿಧಾನಗಳು. ಅನುಪ್ರಾಸ, ಉಪಮೆ ಮುಂತಾದ ಶಬ್ದಾರ್ಥಾಲಂಕೃತಿಗಳೇ ನಿನ್ನ ಆಭರಣಗಳು. ಭಗವತೀ ಶ್ರುತಿಯೇ ನಿನ್ನನ್ನು ಕೊಂಡಾಡಿದ್ದಾಳೆ:
“ಚತ್ವಾರಿ ಶೃಂಗಾಸ್ತ್ರಯೋऽಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಾಸೋ ಅಸ್ಯ |
ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾಮಾವಿವೇಶ ||”
“ನಾಲ್ಕು ಕೊಂಬು, ಮೂರು ಕಾಲು, ಎರಡು ತಲೆ, ಏಳು ಕೈಗಳಿಂದ ಕೂಡಿ ಮೂರೆಳೆಗಳಿಂದ ಕಟ್ಟುಹಾಕಿದ ಎತ್ತು ಗುಟುರು ಹಾಕುತ್ತಿದೆ. ಮಹಿಮಾಶಾಲಿಯಾದ ಭಗವಂತನು ಭೂಮಿಗಿಳಿದಿದ್ದಾನೆ.”
ಇಂತಿದ್ದರೂ ಸ್ವಭಾವಪ್ರಗಲ್ಭತೆಯನ್ನು ಮರೆಮಾಚಿ ನೀನು ಮಗುವಿನಂತೆ ವರ್ತಿಸು.”
ಹೀಗೆ ಹೇಳಿ ಸರಸ್ವತಿಯು ಸ್ನಾನಕ್ಕೆಂದು ಗಂಗಾನದಿಯಲ್ಲಿಗೆ ತೆರಳಿದಳು. ಈ ಮಧ್ಯೆ ನೆತ್ತಿಗೇರಿದ ತಪನನ ತಾಪದಿಂದ ಬಂಡೆಗಲ್ಲಿನ ಮೇಲೆ ಬಳಲುತ್ತಿದ್ದ ಮಗುವನ್ನು ದರ್ಭೆ-ಸಮಿತ್ತುಗಳ ಸಂಚಯಕ್ಕಾಗಿ ಅತ್ತ ಸಾಗುತ್ತಿದ್ದ ಶುಕ್ರಾಚಾರ್ಯನು ಕಂಡನು. ಕೂಡಲೆ ಕನಿಕರಿಸಿ ಆ ಶಿಶುವನ್ನು ತನ್ನ ಆಶ್ರಮಕ್ಕೆ ಕೊಂಡೊಯ್ದನು. ಆಶ್ರಮದ ಪರಿಸರದಲ್ಲಿ ಸ್ವಲ್ಪ ಸಮಾಧಾನಗೊಂಡ ಸಾರಸ್ವತೇಯನು ಶುಕ್ರಾಚಾರ್ಯನಲ್ಲಿ ಛಂದೋಬದ್ಧರಚನೆಯ ಆವೇಶವನ್ನುಂಟುಮಾಡಿದನು. ಆಗ ಶುಕ್ರಾಚಾರ್ಯನ ಮೊಗದಿಂದ ಈ ಸೂಕ್ತಿಯು ಹಠಾತ್ತಾಗಿ ಹೊರಹೊಮ್ಮಿತು:
“ಯಾ ದುಗ್ಧಾಪಿ ನ ದುಗ್ಧೇವ ಕವಿದೋಗ್ಧೃಭಿರನ್ವಹಮ್ |
ಹೃದಿ ನಃ ಸನ್ನಿಧತ್ತಾಂ ಸಾ ಸೂಕ್ತಿಧೇನುಃ ಸರಸ್ವತೀ ||”
“ಕವಿಗಳು ದಿನತಪ್ಪದಂತೆ ಸಂತತವಾಗಿ ಹಾಲು ಕರೆಯುತ್ತಿದ್ದರೂ ಯಾರ ಕ್ಷೀರಸಂಚಯವು ಕ್ಷಯಿಸದೆ ಏಕಪ್ರಕಾರವಾಗಿದೆಯೋ ಆ ಸೂಕ್ತಿಧೇನುವಾದ ಸರಸ್ವತಿಯು ನಮ್ಮ ಹೃದಯದಲ್ಲಿ ನೆಲಸಲಿ.”
ಅಂದಿನಿಂದ ಆರಂಭವಾಗಿ ಶುಕ್ರಾಚಾರ್ಯನನ್ನು “ಕವಿ”ಯೆಂದು ಕರೆಯುವುದು ವಾಡಿಕೆಯಾಯಿತು.
ಅಷ್ಟರಲ್ಲಿ ಸ್ನಾನ ಮುಗಿಸಿಕೊಂಡು ಹಿಂತಿರುಗಿದ ವಾಣಿಯು ಶಿಶುವನ್ನು ಕಾಣದೆ ವಿಲಪಿಸಿದಳು. ಪ್ರಸಂಗವಶಾತ್ ಅಲ್ಲಿಗೆ ಬಂದ ಮಹರ್ಷಿ ವಾಲ್ಮೀಕಿಯು ಆಕೆಗೆ ನಡೆದುದನ್ನೆಲ್ಲ ನಿವೇದಿಸಿ ಶುಕ್ರಾಚಾರ್ಯನ ಆಶ್ರಮವನ್ನು ತೋರಿಸಿಕೊಟ್ಟನು. ಅಲ್ಲಿ ಕಂದನನ್ನು ಕಂಡಕೂಡಲೆ ಆನಂದತುಂದಿಲಳಾದ ವಾಗ್ದೇವಿಯು ವಾಲ್ಮೀಕಿಗೆ ಛಂದೋಮಯರಚನಾರಹಸ್ಯನ್ನು ಬೋಧಿಸಿದಳು. ವಾಲ್ಮೀಕಿಯು ಆ ಸ್ಫೂರ್ತಿಯ ಆವೇಶದಲ್ಲಿದ್ದಾಗ ಬೇಡನೊಬ್ಬನಿಂದ ಹತವಾದ ಕ್ರೌಂಚಪಕ್ಷಿಯನ್ನು ಕಂಡ. ಆಗ ಅವನ “ಕರುಣೆ ಕನಲಿ” ಶೋಕವೇ ಶ್ಲೋಕರೂಪವನ್ನು ತಾಳಿತು:
“ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||”
“ಬೇಡನೇ! ಪ್ರೇಮಪರವಶವಾಗಿ ರಮಿಸುತ್ತಿದ್ದ ಕ್ರೌಂಚಪಕ್ಷಿಗಳಲ್ಲಿ ಒಂದನ್ನು ನೀನು ನಿಷ್ಕಾರಣವಾಗಿ ಕೊಂದಿರುವೆ. ಎಂದೆಂದಿಗೂ ನಿನಗೆ ಯಶಸ್ಸು ಲಭ್ಯವಾಗದಿರಲಿ.”
ಶ್ಲೋಕರಚನಾಸ್ಫೂರ್ತಿಯಿಂದ ವಾಲ್ಮೀಕಿಯು ರಾಮಾಯಣವೆಂಬ ಇತಿಹಾಸವನ್ನು ನಿರ್ಮಿಸಿದನು. ಈ ಶ್ಲೋಕವನ್ನು ಅಭ್ಯಸಿಸಿದ ವ್ಯಾಸ ಆ ಬಳಿಕ ಶತಸಾಹಸ್ರೀಸಂಹಿತೆಯಾದ ಮಹಾಭಾರತವನ್ನು ರಚಿಸಿದನು.
ಆ ಸಮಯಕ್ಕೆ ಸರಿಯಾಗಿ ಬ್ರಹ್ಮರ್ಷಿಗಳಿಗೂ ದೇವತೆಗಳಿಗೂ ವೇದವಿಷಯವೊಂದರ ಬಗೆಗೆ ಸಂಶಯವುಂಟಾಗಿ ಅದನ್ನು ಬಗೆಹರಿಸುವುದಕ್ಕೆ ಬ್ರಹ್ಮ ಸರಸ್ವತಿಯನ್ನು ನಿಯೋಜಿಸಿದನು. ಇದನ್ನು ಕೇಳಿದೊಡನೆಯೇ ಬ್ರಹ್ಮಲೋಕಕ್ಕೆ ತೆರಳಲು ಸಿದ್ಧವಾದ ತಾಯಿಯ ಜೊತೆ ತಾನೂ ಹೋಗುವುದಕ್ಕೆ ಕಾವ್ಯಪುರುಷನು ಉದ್ಯುಕ್ತನಾದ. ಆಗ ಸರಸ್ವತಿಯು, “ಮಗು, ಬ್ರಹ್ಮನ ಅಪ್ಪಣೆಯಿಲ್ಲದೆ ನೀನಲ್ಲಿಗೆ ಬರುವಂತಿಲ್ಲ” ಎಂದು ಹೇಳಿ ಮಗುವನ್ನು ಹಿಂದೆಯೇ ಬಿಟ್ಟು ಬ್ರಹ್ಮಲೋಕಕ್ಕೆ ಹೊರಟಳು. ಆಗ ಸಾರಸ್ವತೇಯನು ರೋಷಾವಿಷ್ಟನಾಗಿ ಅಲೆದಾಡಲಾರಂಭಿಸಿದ.
ಈ ವಿಚಾರವನ್ನು ಕಾವ್ಯಪುರುಷನ ಪ್ರಿಯಮಿತ್ರನಾದ ಸುಬ್ರಹ್ಮಣ್ಯ ಕೇಳಿ ಗಟ್ಟಿಯಾಗಿ ಅಳುತ್ತ ತನ್ನ ತಾಯಿ ಪಾರ್ವತಿಯ ಬಳಿ ಬಂದನು. ಆಗ ಗೌರಿಯು ಸಾಹಿತ್ಯವಿದ್ಯೆಯೆಂಬ ಕನ್ಯೆಯನ್ನು ಸೃಜಿಸಿದಳು. ಕಾವ್ಯಪುರುಷನನ್ನು ಅನುಸರಿಸಿ, ಆಕರ್ಷಿಸಲು ಆಕೆಗೆ ಆದೇಶಿಸಿದಳು. ಮತ್ತು ಅಲ್ಲಿ ನೆರೆದಿದ್ದ ಮಹರ್ಷಿಗಳಿಗೆಲ್ಲ ಈ ದಂಪತಿಗಳ ಸ್ತುತಿಮಾಡಿರೆಂದು ಹೇಳಿದಳು. ಅದರಂತೆಯೇ ನಡೆಯಿತು.
ಅವರೆಲ್ಲರೂ ಸಂಚರಿಸುತ್ತಾ ಮೊದಲು ಪೂರ್ವದಿಕ್ಕಿಗೆ ಬಂದರು. ಅಂಗ, ವಂಗ, ಸುಹ್ಮ ಮುಂತಾದ ಪ್ರದೇಶಗಳಲ್ಲಿ ಓಡಾಡುತ್ತ ಕಾವ್ಯಪುರುಷನನ್ನು ಒಲಿಸಿಕೊಳ್ಳಲು ಸಾಹಿತ್ಯವಿದ್ಯಾವಧು ವಿಧವಿಧವಾದ ವೇಷಗಳನ್ನು ತಳೆಯಲಾರಂಭಿಸಿದಳು. ಆ ಪ್ರಾಂತಗಳ ಹೆಂಗಸರೆಲ್ಲ ಸಾಹಿತ್ಯವಿದ್ಯೆಯ ವೇಷಾದಿಗಳನ್ನು ಅನುಕರಿಸತೊಡಗಿದರು. ಇದೇ “ಓಡ್ರಮಾಗಧೀ” ಎಂಬ ಪ್ರವೃತ್ತಿ. ಇದೇ ರೀತಿ ಕಾವ್ಯಪುರುಷನು ಮನಬಂದಂತೆ ಧರಿಸಿದ ಉಡುಪುಗಳನ್ನೆಲ್ಲ ಆ ಪ್ರಾಂತದ ಗಂಡಸರು ಅನುಕರಿಸಿದರು. ಹೀಗೆ ಆದದ್ದು “ಪ್ರವೃತ್ತಿ”ಯ ಉದ್ಗಮ. ಈ ಸಂದರ್ಭದಲ್ಲಿ ನೃತ್ಯ, ವಾದ್ಯ ಮುಂತಾದವುಗಳನ್ನೊಳಗೊಂಡ ಅಭಿನಯವನ್ನು ಸಾಹಿತ್ಯವಿದ್ಯಾವಧು ಪ್ರಸ್ತುತಪಡಿಸಿದಳು. ಅದೇ “ಭಾರತೀವೃತ್ತಿ.” ಇದರಿಂದಲೂ ಸಾರಸ್ವತೇಯನು ಅವಳ ವಶನಾಗಲಿಲ್ಲ. ಆಗ ಅವಳು ದಂಡಾಕಾರಸಮಾಸಗಳನ್ನೂ ಪ್ರಾಸಾನುಪ್ರಾಸಗಳನ್ನೂ ಒಳಗೊಂಡ ಮಾತುಗಳನ್ನಾಡಿದಳು. ಇದೇ “ಗೌಡೀ ರೀತಿ.” ಇದನ್ನೆಲ್ಲ ಮುನಿಗಳು ಪ್ರಶಂಸಿಸಿದರು.
ಮುಂದೆ ಕಾವ್ಯಪುರುಷನು ಪಾಂಚಾಲದೇಶದ ದಿಕ್ಕಿನಲ್ಲಿಯೂ ಅವಂತೀದೇಶದ ದಿಕ್ಕಿನಲ್ಲಿಯೂ ಸಂಚರಿಸಿ ಕೊನೆಗೆ ದಕ್ಷಿಣದಿಕ್ಕಿಗೆ ಬಂದನು. ಆ ದಿಕ್ಕುಗಳಲ್ಲಿ ಸಂಚರಿಸುತ್ತಿದ್ದಾಗ ಕ್ರಮಕ್ರಮವಾಗಿ ಸಾರಸ್ವತೇಯನು ಸಾಹಿತ್ಯವಿದ್ಯಾವಧುವಿಗೆ ಒಲಿಯತೊಡಗಿದ. ಈ ಸಂದರ್ಭದಲ್ಲಿ ವೇಷವಿನ್ಯಾಸಗಳಾದ “ಪ್ರವೃತ್ತಿ”ಗಳೂ ವಿಲಾಸವಿನ್ಯಾಸಗಳಾದ “ವೃತ್ತಿ”ಗಳೂ ವಚನವಿನ್ಯಾಸಗಳಾದ “ರೀತಿ”ಗಳೂ ಹುಟ್ಟಿದವು. ಪಾಂಚಾಲದೇಶದಲ್ಲಿ “ಪಾಂಚಾಲಮಧ್ಯಮಾ” ಪ್ರವೃತ್ತಿ, “ಸಾತ್ತ್ವತೀ” ಮತ್ತು “ಆರಭಟೀ” ವೃತ್ತಿಗಳು ಮತ್ತು “ಗೌಡೀಯಾ” ರೀತಿ ಜನಿಸಿದವು. ಅವಂತೀದೇಶದಲ್ಲಿ “ಅವಂತೀ” ಪ್ರವೃತ್ತಿ, “ಸಾತ್ತ್ವತೀ” ಮತ್ತು “ಕೈಶಿಕೀ” ವೃತ್ತಿಗಳು ತಲೆದೋರಿದವು. ದಕ್ಷಿಣದೇಶದಲ್ಲಿ ಅವರಿಬ್ಬರಿಗೂ ಪೂರ್ಣಪ್ರಣಯ ಉಂಟಾಗಿ “ದಾಕ್ಷಿಣಾತ್ಯಾ” ಪ್ರವೃತ್ತಿ, “ಕೈಶಿಕೀ” ವೃತ್ತಿ ಮತ್ತು “ವೈದರ್ಭೀ” ರೀತಿಗಳು ಹುಟ್ಟಿದವು[1].
ಇಂತಾಗಲು ವಿದರ್ಭದೇಶದಲ್ಲಿ ಮನ್ಮಥನ ಲೀಲಾನಿವಾಸವಾದ ವತ್ಸಗುಲ್ಮವೆಂಬ ನಗರದಲ್ಲಿ ಕಾವ್ಯಪುರುಷ ಸಾಹಿತ್ಯವಿದ್ಯಾವಧುವನ್ನು ಗಾಂಧರ್ವವಿಧಿಯಿಂದ ಮದುವೆಯಾದನು. ಹೀಗೆ ಸರಸ್ವತಿಗೂ ಪಾರ್ವತಿಗೂ ಸಂಬಂಧ ಬೆಳೆಯಿತು. ವಧೂವರರು ಹಿಮವತ್ಪರ್ವತಕ್ಕೆ ಹಿಂತಿರುಗಿ ಸರಸ್ವತೀ-ಪಾರ್ವತಿಯರಲ್ಲಿ ಆಶೀರ್ವಾದವನ್ನು ಬೇಡಿದಾಗ ಅವರು, “ನೀವು ಕವಿಗಳ ಮಾನಸದಲ್ಲಿ ನೆಲೆಸಿರಿ” ಎಂದು ಹರಸಿದರು. ಅವರಿಗಾಗಿ “ಕವಿಲೋಕ”ವೆಂಬ ವಿಶೇಷಸ್ವರ್ಗವನ್ನು ನಿರ್ಮಿಸಿದರು.
ಕಥಾಸ್ವಾರಸ್ಯಗಳು
ಇನ್ನು ಈ ಕಥಾಸಂದರ್ಭದಿಂದ ಧ್ವನಿತವಾಗುವ ಕೆಲವು ಸ್ವಾರಸ್ಯಗಳನ್ನು ಗಮನಿಸೋಣ.
ಮೊತ್ತಮೊದಲು ಸರಸ್ವತಿಗೆ ಸಂತಾನಕಾಮನೆಯಾದಾಗ ಹುಟ್ಟಿದ್ದು ಕಾವ್ಯ; ಶಾಸ್ತ್ರವಲ್ಲ. ವಾಗ್ದೇವಿಯೂ ಸೇರಿದಂತೆ ಎಲ್ಲರೂ ಹಾತೊರೆದು ಬಯಸುವುದು ಸಂತೋಷವನ್ನು. ಸಂತೋಷದ ಸುಂದರಾಕೃತಿಯು ಸಿದ್ಧವಾಗಿರುವುದು ಪ್ರಕೃತಿಯಲ್ಲಿ, ಸಾಧ್ಯವಾಗುವುದು ಕಲೆಯಲ್ಲಿ. ಮೂಲಭೂತವಾಗಿ ಕಂಡಾಗ ಸಿದ್ಧ ಮತ್ತು ಸಾಧ್ಯಸೌಂದರ್ಯಗಳಲ್ಲಿ ವ್ಯತ್ಯಾಸವಿಲ್ಲವಾದರೂ ಕಲಾಸೌಂದರ್ಯವು ವ್ಯಂಜನಾವ್ಯಾಪಾರದ ಮೂಲಕ ಸಹೃದಯರಲ್ಲಿ ರಸವನ್ನು ಸೃಷ್ಟಿಸುವುದರಿಂದ ಅದರಲ್ಲಿಯ ಆಸ್ವಾದ ಹೆಚ್ಚೆನ್ನಬಹುದು. ಮತ್ತೂ ಸ್ಫುಟವಾಗಿ ಹೇಳಬೇಕೆಂದರೆ, ಕಲೆಯಲ್ಲಿ ಚರ್ವಣಾವಕಾಶ ಹೆಚ್ಚಾದುದರಿಂದ ಅದು ಮಿಗಿಲಾಗಿ ಆಪ್ಯಾಯನವಾಗುತ್ತದೆ. ಈ ಸಂದರ್ಭದಲ್ಲಿ ವಾಗಧೀಶ್ವರಿಯು ತನ್ನ ಸಂತೋಷಸ್ಥಾನವನ್ನು ಸಂಗೀತ, ನೃತ್ಯ ಮುಂತಾದ ಅನ್ಯಕಲಾಪ್ರಕಾರಗಳಲ್ಲಿ ಕಂಡುಕೊಳ್ಳದೆ ತನ್ನದೇ ಅಭಿವ್ಯಕ್ತಿಮಾಧ್ಯಮವಾದ ವಾಕ್ಕಿನಲ್ಲಿ ಕಂಡುಕೊಂಡದ್ದು ಬಹಳ ಅರ್ಥಪೂರ್ಣವಾಗಿದೆ.
ಕಾವ್ಯಪುರುಷನು ಹುಟ್ಟಿದ ಕ್ಷಣವೇ ಛಂದೋಬದ್ಧವಾಗಿ ಮಾತನಾಡತೊಡಗಿದ್ದು ಮತ್ತೊಂದು ಸ್ವಾರಸ್ಯ. ಇದರಿಂದ ಸಂಸ್ಕೃತಭಾಷೆಗೆ ಛಂದಃಸಹಿತರಚನೆಯೇ ಸಹಜವೆಂದು ತಿಳಿಯುತ್ತದೆ. ಈ ಸಹಜತೆಯಲ್ಲಿ ಸೌಂದರ್ಯವೂ ಇಲ್ಲದಿಲ್ಲ. ಛಂದೋನಾದದಿಂದ ಶಬ್ದಗಳಿಗೊದಗುವ ಶಕ್ತಿ ಯಾವ ತೆರನಾದುದೆಂದು ಬಲ್ಲವರೆಲ್ಲ ಬಲ್ಲರು. ಛಂದಸ್ಸನ್ನು “ಬಹಿಷ್ಕರಿಸಿ” ಬರೆಯುವ ಕವಿಬ್ರುವರು ಈ ಅಂಶವನ್ನು ಗಮನಿಸಬೇಕು.
ಪ್ರಕೃತಕಥೆಯಲ್ಲಿ ಶುಕ್ರಾಚಾರ್ಯನನ್ನು ಕವಿಯಾಗಿ ಗಣಿಸಿರುವುದರ ಕಾರಣವೂ ಸುಂದರವಾಗಿದೆ. “ಉಶನಾ ಭಾರ್ಗವಃ ಕವಿಃ” ಎಂಬುದು ಅಮರಕೋಶದ ಒಕ್ಕಣೆ. “ಕವೀನಾಮುಶನಾಃ ಕವಿಃ” ಎಂಬುದು ಗೀತಾಚಾರ್ಯನ ಮಾತು. ಹೀಗೆ ನಮ್ಮ ಪರಂಪರೆಯಲ್ಲಿ ಶುಕ್ರಾಚಾರ್ಯನನ್ನು ಕವಿಯೆಂದು ವ್ಯವಹರಿಸುವ ಪರಿಪಾಟಿಯಿದೆ. ಭಾರ್ಗವವಂಶೀಯರು ಲೌಕಿಕವಿದ್ಯೆಗಳಲ್ಲಿ ಸಿದ್ಧಹಸ್ತರು, ಕಲಾನಿಪುಣರು. ಭಾರ್ಗವಿಯಾದ ಲಕ್ಷ್ಮೀದೇವಿಯಂತೂ ಸಂಪದಧೀಶ್ವರಿ. ಜ್ಯೌತಿಷವೇ ಮೊದಲಾದ ಶಾಸ್ತ್ರಗಳಿಂದ ತಿಳಿದುಬರುವ ಮತ್ತೊಂದು ಸಂಗತಿಯೆಂದರೆ, ಶುಕ್ರ ಕಾಮವೆಂಬ ಪುರುಷಾರ್ಥಕ್ಕೆ ಸಂಬಂಧಿಸಿದವನು. ಕಾವ್ಯವೂ ಸೇರಿದಂತೆ ಸಕಲಕಲೆಗಳೂ ಧರ್ಮಾವಿರುದ್ಧವಾದ ಕಾಮವನ್ನು ಕುರಿತವಷ್ಟೆ? ಈ ರೀತಿಯಲ್ಲಿ ಸಂಪತ್ತು-ಸಂತೋಷಗಳಿಗೆ ಹೆಸರಾದವರು ಭಾರ್ಗವರೆಂದು ಗ್ರಹಿಸಿ ರಾಜಶೇಖರನೇ ಈ ಕಥೆಯನ್ನು ಕಟ್ಟಿರಬಹುದು.
ಮಗುವನ್ನು ತಾಯಿಗೆ ತೋರಿಸಿಕೊಡುವ ಕೆಲಸವನ್ನು ವಾಲ್ಮೀಕಿ ಮಾಡಿದನೆಂಬ ಸಂಗತಿಯಂತೂ ಬಹ್ವಾಯಾಮಗಳಲ್ಲಿ ಧ್ವನಿಪೂರ್ಣವಾಗಿದೆ. ವಾಲ್ಮೀಕಿಯಲ್ಲಿ ನಿಸರ್ಗಸಿದ್ಧವಾಗಿದ್ದ ಅನುಕಂಪ ಇಲ್ಲಿ ಸುಂದರವಾಗಿ ವ್ಯಕ್ತವಾಗಿದೆ. ಈ ಕರುಣೆಯ ಕಾರಣದಿಂದಲೇ ಮುಂದೆ ಕ್ರೌಂಚವಧೆಯನ್ನು ಕಂಡು ಶೋಕಪಟ್ಟು ವಾಲ್ಮೀಕಿಯು ಶ್ಲೋಕವನ್ನು ಸೃಜಿಸಿದ್ದು, ಮತ್ತು ಕರುಣರಸಪ್ಲಾವಿತವಾದ ರಾಮಾಯಣವನ್ನು ರಚಿಸಿದ್ದು. ಇದೇ ರೀತಿಯಲ್ಲಿ ದೈವಕ್ಕೂ ಕಾವ್ಯಕ್ಕೂ ಇರುವ ಸಂಧಿಸ್ಥಾನ ಕವಿಯೇ ಎಂಬ ಸತ್ಯ ಸ್ಫುರಿಸುತ್ತದೆ. ಆದಿಕವಿಯ ಸಾಮರ್ಥ್ಯ ಅಲ್ಪಪ್ರಮಾಣದ್ದಲ್ಲ. ಸ್ವಯಂ ಸರಸ್ವತಿಯ ಕಣ್ಣೀರನ್ನು ಒರೆಸಿ ಆಕೆ ಹರ್ಷೋತ್ಫುಲ್ಲಳಾಗಿ ಮಾಡುವ ಮಟ್ಟದ್ದು!
ವೇದಾರ್ಥದ ಅವಗಮನದಲ್ಲಿ ತೊಡಕುಂಟಾದ ಸಂದರ್ಭದಲ್ಲಿ ಸರಸ್ವತಿಯು ಬ್ರಹ್ಮಲೋಕಕ್ಕೆ ತೆರಳಿ ಆ ಸಮಸ್ಯೆಗೆ ಸೂಕ್ತಸಮಾಧಾನವನ್ನು ಸೂಚಿಸುವಂತಾದದ್ದು ಕಾವ್ಯಪುರುಷನ ತಾಯಿಯಾದ ನಂತರವೇ; ತತ್ಪೂರ್ವದಲ್ಲಿ ಅಲ್ಲ. ಹೀಗೆ ಕಂಡಾಗ, ವೇದವಾಙ್ಮಯವನ್ನು ಅರ್ಥಮಾಡಿಕೊಳ್ಳುವಲ್ಲಿ ಕಾವ್ಯದೃಷ್ಟಿಯು ಹೇಗೆ ಅನಿವಾರ್ಯವೆಂಬುದರ ಅರಿವಾಗದಿರದು.
ಅದೇ ಸಂದರ್ಭದಲ್ಲಿ ಕಾವ್ಯಪುರುಷನು ಬ್ರಹ್ಮಲೋಕಕ್ಕೆ ತೆರಳದೆ ಭೂಮಿಯಲ್ಲಿಯೇ ಉಳಿದುಕೊಂಡದ್ದರ ಸಂಕೇತಸ್ವಾರಸ್ಯ ಸೂಕ್ಷ್ಮವಾದುದು. ಮಾನುಷತ್ವದ ಆರೋಪವಿಲ್ಲದೆ ಕಾವ್ಯವು ಆಸ್ವಾದ್ಯವಾಗುವುದಿಲ್ಲ. ದೇವತೆಗಳಾದರೂ ಸರಿ; ಅವರು ಕಾವ್ಯದಲ್ಲಿ ಚಿತ್ರಿತರಾಗಿ ನಮಗೆ ಹತ್ತಿರವಾಗಬೇಕಾದರೆ ಅವಶ್ಯವಾಗಿ ಮನುಷ್ಯಭಾವಗಳನ್ನು ತಳೆಯಬೇಕು, ಅವಕ್ಕೆ ಸ್ಪಂದಿಸಬೇಕು. ದೇವಲೋಕದಲ್ಲಿ ಮಾನುಷಭಾವಗಳಿಗೆ ಆಸ್ಪದವಿಲ್ಲವಷ್ಟೆ. ಆದುದರಿಂದ ಅಲ್ಲಿ ಕಾವ್ಯಾವಿರ್ಭಾವವೂ ಸಾಧ್ಯವಿಲ್ಲ.
ಕಲ್ಪನಾಶೀಲತೆಯೇ ಕಾವ್ಯದ ಜೀವಾಳ. ಕಲ್ಪನೆಯಾದರೋ ಸರ್ವತ್ರ ಗತಿಶೀಲವಾದದ್ದು; ಅದಕ್ಕೆ ನಿಲುಗಡೆಯೇ ಇಲ್ಲ. ಕಾವ್ಯಪುರುಷನು ಎಲ್ಲ ದಿಕ್ಕುಗಳಲ್ಲಿಯೂ ನಿರ್ವಿರಾಮವಾಗಿ ಸಂಚರಿಸಿದರ ಅರ್ಥವಂತಿಕೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಕಾವ್ಯವು ಅದಕ್ಕೆ ಸಮರ್ಪಿಸಿಕೊಂಡ ಸಹೃದಯರಿಗೆ ತತ್ಕ್ಷಣವೇ ಒಲಿಯುತ್ತದೆ. ಇದಕ್ಕೆ ಶುಕ್ರಾಚಾರ್ಯ, ವಾಲ್ಮೀಕಿ, ಸಾಹಿತ್ಯವಿದ್ಯಾವಧು ಮೊದಲಾದವರೇ ಸಾಕ್ಷಿ. ಅಂತೆಯೇ, ಕಾವ್ಯವನ್ನು ಅನುನಯದಿಂದ ವಶಮಾಡಿಕೊಳ್ಳಬಹುದೇ ಹೊರತು ಅದರ ವಿಷಯದಲ್ಲಿ ಆತುರಕ್ಕಾಗಲಿ, ಬಲಾತ್ಕಾರಕ್ಕಾಗಲಿ ಕವಡೆಯ ಕಿಮ್ಮತ್ತೂ ಇಲ್ಲ.
ಸಾಹಿತ್ಯವಿದ್ಯಾವಧು ಕಾವ್ಯಪುರುಷನನ್ನು ಅನುನಯದಿಂದ ಅನುಸರಿಸಿದಳು ಎಂಬುದು ಔಚಿತ್ಯಪೂರ್ಣವಾಗಿದೆ. ಲಕ್ಷ್ಯವನ್ನು ಗಮನಿಸಿಯೇ ಲಕ್ಷಣ ಹುಟ್ಟತಕ್ಕದ್ದು; ಪ್ರಯೋಗವನ್ನನುಸರಿಸಿಯೇ ಶಾಸ್ತ್ರ ಉದಯಿಸುವುದು. ಇದರಿಂದ ಕಾವ್ಯ-ಶಾಸ್ತ್ರಗಳ ಪರಸ್ಪರಪರಿಪೂರಕಸಂಬಂಧವು ಸ್ಪಷ್ಟವಾಗುವುದಲ್ಲದೆ ಶಾಸ್ತ್ರಕ್ಕಿರಬೇಕಾದ ನಯವೂ ಅದರ ಮರ್ಯಾದೆಯೂ ತಿಳಿದುಬರುತ್ತದೆ. ಅದೇ ಸಂದರ್ಭದಲ್ಲಿ ಶಂಶನ-ಶಾಸನಾತ್ಮಕವಾದ ಶಾಸ್ತ್ರದ ಗತಿಯನ್ನೇ ನಿರ್ದೇಶಿಸಬಲ್ಲದ್ದು ಕಾವ್ಯವೆಂದು ಸಿದ್ಧವಾದಾಗ, ಅದರ ಮೇಲಿನ ಬಾಧ್ಯತೆಯೂ ಕಾವ್ಯನಿರ್ಮಾಣದಲ್ಲಿ ಕವಿಗಳು ತೋರಬೇಕಾದ ಎಚ್ಚರಿಕೆಯೂ ಸೂಚಿತವಾಗುತ್ತವೆ.
ಅಂತೆಯೇ, ಸಾಹಿತ್ಯವಿದ್ಯಾವಧು ಕಾವ್ಯಪುರುಷನನ್ನು ಕ್ರಮಕ್ರಮವಾಗಿ ಒಲಿಸಿಕೊಂಡಳು ಎಂಬುದರಲ್ಲಿಯ ಸ್ವಾರಸ್ಯ ಮನನೀಯ. ಸೌಂದರ್ಯ ಬಹುಮುಖವಾದದ್ದು; ಅದರ ಆಯಾಮಗಳು ಗಣನಾತೀತ. ಸಂದರ್ಭವಿಶೇಷಗಳಿಂದಲೂ ರುಚಿಭೇದಗಳಿಂದಲೂ ಒಂದು ವಸ್ತುವಿನ ಸೌಂದರ್ಯ ನಾನಾವಿಧಗಳಲ್ಲಿ ಪ್ರತಿಫಲಿಸುತ್ತದೆ. ಸೌಂದರ್ಯದ ಸಂಪೂರ್ಣಸಂಕೀರ್ಣತೆಯನ್ನು ಏಕತ್ರ ಒಮ್ಮೆಲೇ ಹಿಡಿದಿಡುವುದು ಕಷ್ಟಸಾಧ್ಯವಲ್ಲ, ಅಸಾಧ್ಯ. ಅದೇನಿದ್ದರೂ ಸಾವಕಾಶವಾಗಿ ಆದೀತು. ಸೌಂದರ್ಯಕ್ಕೆ ಸ್ಪಂದಿಸಲು, ಅದನ್ನು ಆಸ್ವಾದಿಸಲು ಮನಃಸಮಾಧಾನ ಅತ್ಯವಶ್ಯ.
ರಾಜಶೇಖರನು ರೀತಿ-ವೃತ್ತಿ-ಪ್ರವೃತ್ತಿಗಳೆಂಬ[2] ಶಾಸ್ತ್ರೀಯಸಂಗತಿಗಳನ್ನು ಶುಷ್ಕವಾಗಿಸದೆ ಕಥಾಭಾಗದಲ್ಲಿ ಹೊಂದಿಸಿ ರೋಚಕವಾಗಿ ವಿವರಿಸಿದ್ದಾನೆ. ಈ ಇಡೀ ಪ್ರಕರಣವೇ ರಾಜಶೇಖರನ ರುಚಿರರಾಸಿಕ್ಯಕ್ಕೆ ಸೂರ್ಯಸಾಕ್ಷಿ. ಕಾವ್ಯಪುರುಷ ಸಾಹಿತ್ಯವಿದ್ಯಾವಧುವಿಗೆ ಸಂಪೂರ್ಣವಾಗಿ ಒಲಿದದ್ದು ದಕ್ಷಿಣದೇಶದಲ್ಲಿ ಎಂದು ನೆನೆದಾಗ ರಾಜಶೇಖರ ಕೈಶಿಕೀವೃತ್ತಿ ಮತ್ತು ವೈದರ್ಭೀರೀತಿಗಳ ಪಕ್ಷಪಾತಿಯೆಂದು ತಿಳಿಯುತ್ತದೆ. ಅವನ ಒಲವು ನೆಲೆಗೊಂಡಿರುವುದು ಆಡಂಬರದ ಆಟಾಟೋಪವಿಲ್ಲದ ಪ್ರಸನ್ನರಮ್ಯತೆಯಲ್ಲಿ. ಚೋದ್ಯವೇನೆಂದರೆ ಕಾವ್ಯಮೀಮಾಂಸೆಯಲ್ಲಿ ಈ ತೆರನಾದ ಅಭಿಪ್ರಾಯವನ್ನು ಮಂಡಿಸುವ ರಾಜಶೇಖರ ಬಾಲರಾಮಾಯಣವೇ ಮುಂತಾದ ತನ್ನ ಕಾವ್ಯಗಳಲ್ಲಿ ಸಮಾಸಭೂಯಿಷ್ಠರಚನೆಗಳನ್ನೇ ಹೆಚ್ಚಾಗಿ ಮಾಡಿದ್ದಾನೆ! ಶಾಸ್ತ್ರ-ಕಾವ್ಯಸಮನ್ವಯವು ಮೃಗ್ಯವೇ ಸರಿ.
ಒಟ್ಟಿನಲ್ಲಿ ಹೇಳುವುದಾದರೆ, ರಾಜಶೇಖರ ಶಾಸ್ತ್ರವಿಚಾರಗಳನ್ನು ಶುಷ್ಕವಾಗಿಸದೆ ಪೌರಾಣಿಕರೂಪಕಾತ್ಮಕವಾದ ಕಥೆಯನ್ನು ರಸಮಯವಾಗಿ ಕಲ್ಪಿಸಿ ತನ್ಮೂಲಕ ಅವುಗಳನ್ನು ವಿವರಿಸಿರುವ ಪರಿ ಕಮನೀಯವಾಗಿದೆ. ಬಲು ತೊಡಕಾದ “ಸಂಕೇತ”ಸೃಷ್ಟಿಯ ಪರೀಕ್ಷೆಯಲ್ಲಿ ರಾಜಶೇಖರ ಪ್ರಶಸ್ತವಾಗಿ ತೇರ್ಗಡೆಯಾಗಿದ್ದಾನೆ. ಕಷ್ಟಪಟ್ಟಾದರೂ ಶಾಸ್ತ್ರಸಿದ್ಧಾಂತಗಳನ್ನು ಕಂಡುಕೊಳ್ಳಬಹುದು, ಆದರೆ ಅವಕ್ಕೆ ಪೌರಾಣಿಕಸಂಕೇತಗಳಿಗಿರುವ ಶಕ್ತಿ-ಆಕರ್ಷಕತೆಗಳು ದೊರಕಲಾರವಷ್ಟೆ?
ಟಿಪ್ಪಣಿಗಳು
[1] ಇಲ್ಲಿ ರಾಜಶೇಖರನ ವಿವರಣೆ ಸ್ವಲ್ಪ ಗೋಜಲಾಗಿದೆ. ರೀತಿ-ವೃತ್ತಿ-ಪ್ರವೃತ್ತಿಗಳ ಐತಿಹಾಸಿಕವಿಕಾಸವನ್ನು ಗಮನಿಸಿ ಇವನ್ನು ಹೀಗೆ ವಿಶದಪಡಿಸಬಹುದು:
ಪೂರ್ವಭಾರತದಲ್ಲಿ ಕಂಡುಬರುವುವು — ಓಡ್ರಮಾಗಧೀ ಪ್ರವೃತ್ತಿ, ಆರಭಟೀ ವೃತ್ತಿ ಮತ್ತು ಗೌಡೀಯಾ ರೀತಿ.
ಪಶ್ಚಿಮಭಾರತದಲ್ಲಿ ಕಂಡುಬರುವುವು — ಆವಂತೀ ಪ್ರವೃತ್ತಿ, ಸಾತ್ತ್ವತೀ ವೃತ್ತಿ ಮತ್ತು ಲಾಟೀಯಾ ರೀತಿ.
ಉತ್ತರಭಾರತದಲ್ಲಿ ಕಂಡುಬರುವುವು — ಪಾಂಚಾಲಮಧ್ಯಮಾ ಪ್ರವೃತ್ತಿ, ಭಾರತೀ ವೃತ್ತಿ ಮತ್ತು ಪಾಂಚಾಲೀ ರೀತಿ.
ದಕ್ಷಿಣಭಾರತದಲ್ಲಿ ಕಂಡುಬರುವುವು — ದಾಕ್ಷಿಣಾತ್ಯಾ ಪ್ರವೃತ್ತಿ, ಕೈಶಿಕೀ ವೃತ್ತಿ ಮತ್ತು ವೈದರ್ಭೀ ರೀತಿ.
[2] ಭಾರತದ ವಿವಿಧಪ್ರಾಂತಗಳಲ್ಲಿ ವಾಸಿಸುವ ಜನರ ಸಂಸ್ಕೃತಿ ಮತ್ತು ರುಚಿವೈವಿಧ್ಯಗಳಿಗನುಸಾರವಾಗಿ ರೀತಿ-ವೃತ್ತಿ-ಪ್ರವೃತ್ತಿಗಳನ್ನು ಭರತನೇ ನಾಟ್ಯಶಾಸ್ತ್ರದಲ್ಲಿ (ಹದಿನಾಲ್ಕನೆಯ ಅಧ್ಯಾಯ) ವಿಭಜಿಸಿ ವಿವರಿಸಿದ್ದಾನೆ. ಇದನ್ನೇ ಅನುಸರಿಸಿ ರಾಜಶೇಖರನು ನಾಲ್ಕು ಬಗೆಯ ವೃತ್ತಿಗಳನ್ನೂ ಪ್ರವೃತ್ತಿಗಳನ್ನೂ ಹೆಸರಿಸಿದ್ದಾನೆ, ಮತ್ತು ಮೂರು ಬಗೆಯ ರೀತಿಗಳನ್ನು ವಿವರಿಸಿದ್ದಾನೆ. ವೃತ್ತಿಯೆಂಬುದು ರೀತಿ-ಪ್ರವೃತ್ತಿಗಳಿಗಿಂತ ಬಹುವ್ಯಾಪಕವಾದ ಶಾಸ್ತ್ರಾಂಶ. ಅದು ಪ್ರಧಾನವಾಗಿ ಚಿತ್ತವೃತ್ತಿಗಳಿಗೆ ಸಂಬಂಧಪಟ್ಟದ್ದು. ಪ್ರವೃತ್ತಿಯು ಪ್ರಾದೇಶಿಕವಾದ ಗುಣಧರ್ಮಗಳಿಗೆ ಅನುಸಾರವಾಗಿ ಮಾರ್ಪಡುತ್ತದೆ. ವೃತ್ತಿ ಮಾರ್ಗವಾದರೆ ಪ್ರವೃತ್ತಿ ದೇಶಿ. ವ್ಯಾಪಕತತ್ತ್ವವೊಂದು ವ್ಯಕ್ತಿ-ಸಂದರ್ಭಾನುಸಾರದಂತೆ ಸೀಮಿತಸ್ತರದಲ್ಲಿ ಅನ್ವಿತಗೊಂಡು ಮತ್ತೂ ಆಪ್ತವಾಗುವುದನ್ನು ನಾವು ವೃತ್ತಿ-ಪ್ರವೃತ್ತಿಗಳಲ್ಲಿ ಕಾಣುತ್ತೇವೆ. ಇವುಗಳ ಅನ್ವಯವನ್ನು ಸಂಗೀತ, ನೃತ್ಯ ಮೊದಲಾದ ವಿವಿಧಕಲಾಮಾಧ್ಯಮಗಳಲ್ಲಿ ಸಾಧಿಸಿಕೊಂಡಾಗ ರೀತಿಯ ಆವಿರ್ಭಾವವಾಗುತ್ತದೆ. ಪ್ರಕೃತ ರಾಜಶೇಖರನು ಸಾಹಿತ್ಯಕಲೆಗೆ ಸಂಬಂಧಿಸಿದಂತೆ ರೀತಿಯನ್ನು ವರ್ಣಿಸಿದ್ದಾನೆ.
ಲಾಟದೇಶದಲ್ಲಿಯ “ಲಾಟೀಯಾ” ಎಂಬ ರೀತಿಯನ್ನು ರಾಜಶೇಖರ ಗಣಿಸಿಲ್ಲ. ಇದಕ್ಕೆ ಕಾರಣ ಅವನು ಲಾಟೀಯಾ ಮತ್ತು ಪಾಂಚಾಲೀ ರೀತಿಗಳಿಗೆ ಅಭೇದವನ್ನು ಕಲ್ಪಿಸಿಕೊಂಡಿರುವುದು. ಲಾಟಿಯಾ ರೀತಿಯ ಬಗೆಗಿನ ವಿವರಣೆಯನ್ನು ರುದ್ರಟನ “ಕಾವ್ಯಾಲಂಕಾರ” ಗ್ರಂಥದಲ್ಲಿ ಕಾಣಬಹುದು.