೫. ಅನುರಣಿಸುವ ಕೆಲವು ಧ್ವನಿಗಳು
ಸಾಕ್ಷಿಯ ಅಂತ್ಯದಲ್ಲಿ ಕೆಲವೊಂದು ಸೂಚನೆಗಳು ಸೂಕ್ಷ್ಮವಾಗಿ ಕಾಣುತ್ತವೆ. ಅವುಗಳಲ್ಲಿ ಗಣೇಶ(ಸುಕನ್ಯಳ ಮಗ) ಮತ್ತೊಬ್ಬ ಮಂಜಯ್ಯನಂತಾಗಿರುವುದು ಮತ್ತು ಮಂಜಯ್ಯನ ತೋಟದ ಸುತ್ತ ಬೆಳೆದಿರುವ ಕಟ್ಟುಕತೆಯು ಮೌಲ್ಯ, ಅಹಂಕಾರ ಮತ್ತು ಪ್ರವೃತ್ತಿಗಳ ವಾಸ್ತವತೆ ಮತ್ತು ವಿಸ್ತಾರವನ್ನೂ ಮತ್ತು ಅವುಗಳ ನಡುವಿನ ಸಂಘರ್ಷದ ನಿತ್ಯತೆಯನ್ನೂ ಹಾಗೂ ಇವುಗಳು ವೈಯಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಗೆ ಏರಿದಾಗ ಯಾವ ವಿಸ್ತಾರವನ್ನು ಪಡೆಯುತ್ತವೆ ಎಂಬುದನ್ನೂ ತೋರಿಸುತ್ತವೆ.
ಇವುಗಳಿಗೆ ಒಂದು ಕಾವ್ಯಾತ್ಮಕ ಸ್ಪರ್ಶವನ್ನೂ ಅತಿಶಯೋಕ್ತಿಯ ಮರ್ಮವನ್ನೂ ತುಂಬಿರುವುದು ಯಮಲೋಕದ ದೃಶ್ಯ ಮತ್ತು ಇದರಲ್ಲಿಯೂ ಜಾನಕಮ್ಮ ಮತ್ತು ಮಂಜಯ್ಯರ ಪ್ರೇತಗಳ ನಡುವಿನ ಸೆಳೆತ ಮತ್ತು ಕಪಟವಚನಗಳ ವಿನಿಮಯ. ಇವು ಮೇಲೆ ಹೇಳಿದ ಮೌಲ್ಯ, ಅಹಂಕಾರ ಮತ್ತು ಪ್ರವೃತ್ತಿಗಳ ಸಂಘರ್ಷ ಮತ್ತು ಸಹಜೀವನದ ಅನಂತತೆಯನ್ನು ಕಾವ್ಯಾತ್ಮಕವಾಗಿ ಮತ್ತು ಅಷ್ಟೇ ವಾಸ್ತವವಾಗಿಯೂ ಹಿಡಿದಿಟ್ಟಿರುವುದು ವಿಶೇಷ. ಇವೆಲ್ಲದಕ್ಕೆ ಕಲಶವಿಟ್ಟಂತಿರುವುದು "ಪ್ರಭು, ಸುಳ್ಳಿನ ಮೂಲ ಯಾವುದು? ಅದಕ್ಕೆ ನಾಶವೇ ಇಲ್ಲವೇ?" ಎಂಬ ಪರಮೇಶ್ವರಯ್ಯನ ಈ ಅನುರಣಿಸುವ ಪ್ರಶ್ನೆ.
೬. ಯಮಲೋಕದ ಪ್ರತಿಮೆ
ಸಾಕ್ಷಿಯ ಆರ೦ಭ ಮತ್ತು ಅ೦ತ್ಯವೆರಡೂ ಆಗುವುದು ಯಮಲೋಕದಲ್ಲಿ . ಇದರ ಔಚಿತ್ಯವೇನು? ಇದೊ೦ದು ಪ್ರತಿಮೆಯೋ? ಅತಿಶಯೋಕ್ತಿಯೋ ? ಎ೦ದೆಲ್ಲ ಅನುಮಾನಿಸಬಹುದು.
ಅಲ್ಲದೆ, ಇಲ್ಲಿ ಸತ್ತವರೆಲ್ಲರನ್ನೂ ಯಮಲೋಕಕ್ಕೆ ಲೇಖಕರು ಕರೆದುಕೊ೦ಡು ಬ೦ದಿಲ್ಲ ಕೇವಲ ಪರಮೇಶ್ವರಯ್ಯ, ಆತನ ಹೆ೦ಡತಿ ಮತ್ತು ಮ೦ಜಯ್ಯ ಮಾತ್ರ. ನಾಗಪ್ಪ, ಕ೦ಚಿ ಏಕೆ ಬ೦ದಿಲ್ಲ ಎ೦ಬ ಅನುಮಾನ ಓದುಗರಿಗೆ ಬ೦ದಿರಲಿಕ್ಕೆ ಸಾಕು . ಯಮಲೋಕದ ಚಿತ್ರಣ ಏಕೆ ಬ೦ದಿದೆ, ಅದರ ಔಚಿತ್ಯವೇನು ಎ೦ದು ಯೋಚಿಸುವಲ್ಲಿ ಈ ಮೇಲಿನ ಅನುಮಾನವೂ ಒ೦ದು ರೀತಿಯಲ್ಲಿ ಸಹಕಾರಿ.
ಅಹಂಕಾರ ಮತ್ತು ವ್ಯಕ್ತಿಯ ಸಾರ್ವಜನಿಕ ವ್ಯಕ್ತಿತ್ವದ ಬಗೆಗಿನ ಕಾಳಜಿ ಎಂದಿಗೂ ಅವನನ್ನು ಬಿಟ್ಟು ಹೋಗುವುದಿಲ್ಲ; ವ್ಯಕ್ತಿ ಸತ್ತು ಪ್ರೇತವಾಗಿ ಶರೀರವನ್ನು ಬಿಟ್ಟು ಯಮನಬಳಿಗೆ ಹೋದರೂ ತಮ್ಮ ಅಹಂಕಾರಪ್ರಜ್ಞೆಯಿಂದ ಕಳಚಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾವ್ಯಕಾರಣವನ್ನು ತೋರಿಸಲು ಮತ್ತು ಅದರ ತೀವ್ರತೆಯನ್ನು ಓದುಗರಿಗೆ ಪರಿಚಯಿಸಲು ಈ ಯಮಲೋಕದ ಪ್ರತಿಮೆಯನ್ನು ಬಳಸಲಾಗಿದೆಯಷ್ಟೆ. ಹಾಗಾಗಿ ಸತ್ತ ಎಲ್ಲ ಪಾತ್ರಗಳನ್ನು ಯಮಲೋಕದಲ್ಲಿ ಒಮ್ಮೆ ಕರೆತರುವ ವಾಸ್ತವಕ್ಕೆ ಇಳಿಯುವ ಅತಿವ್ಯಾಪ್ತಿಯ ಅನೌಚಿತ್ಯವನ್ನು ಮಾಡದೇ, ಸಾಕ್ಷಿಯು ಸೂಚಿಸಬೇಕಾದ ಅಂಶಗಳಿಗೆ ಮಾತ್ರ ಈ ಪ್ರತಿಮೆಯನ್ನು ಬಳಸಿದ್ದಾರೆ ಲೇಖಕರು.
ಔಚಿತ್ಯ - ಸಂಭಾಷಣೆ, ಪದಪ್ರಯೋಗ ಮತ್ತು ಸನ್ನಿವೇಶ :
ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ಮಾತಿನಲ್ಲಿನ ಸ್ವಾಭಾವಿಕತೆಯನ್ನು ಗಮನಿಸಿದರೆ, ಕೆಲವು ಪಾತ್ರಗಳಲ್ಲಿನ ವಿಶೇಷವಾದ ಸಂಭಾಷಣೆಯ ಔಚಿತ್ಯವನ್ನು ಗಮನಿಸಬಹುದು.
ಹಶೀಮ್ ಡಾಕ್ಟರು, ಮತ್ತು ಉಸ್ಮಾನಿ ಮಂಜಯ್ಯನೊಡನೆ ಮಾತನಾಡುವಾಗ ಅವರು ಬಳಸುವ ಭಾಷೆ ಉರ್ದುವಿನ ಛಾಯೆಯಿರುವ ಕನ್ನಡವೇ ಆಗಿರುತ್ತದೆ. ಅದರಲ್ಲೂ ಉಸ್ಮಾನಿ ಬಳಸುವ ಕೆಲವು ನುಡಿಗಟ್ಟುಗಳು ಸಮುಚಿತವಾಗಿವೆ.
ಮಂಜಯ್ಯನು ಸರೋಜಾಕ್ಷಿಯ ಕಥೆಯನ್ನು ಉಸ್ಮಾನಿಯಿಂದ ಕೇಳಬಯಸಿದಾಗ ಉಸ್ಮಾನಿ ಕೊಡುವ ಹೋಲಿಕೆಯನ್ನು ಗಮನಿಸಿ: “ಹಕೀಮ್ ಸಾಹೇಬ್ರು ಜಟಕಾ ಸಾಬಿ ತಾವ ದವಾ ಕೇಳ್ದಂಗಾತು ನಿಮ್ಮ ಮಾತು” (ಪು. ೧೬೮)
ಇನ್ನು ಮಂಜಯ್ಯನಂಥ ಚಾಲಾಕಿ ಮನುಷ್ಯರ ಭಾಷೆ ಹೇಗೆ ಜನರಿಂದ ಜನರಿಗೆ ಬದಲಾಗುತ್ತದೆ, ಅವರ ಕಾರ್ಯಸಾಧನೆಯ ಮಾರ್ಗವಾಗಿ ಮಾತಿನ ಬಳಕೆಯು ಹೇಗೆ ಔಚಿತ್ಯವನ್ನು ಪಡೆಯುತ್ತದೆ ಅನ್ನುವುದಕ್ಕೆ ಕೆಲವು ಉದಾಹರಣೆಯನ್ನು ನೋಡಬಹುದು.
ಮಂಜಯ್ಯನಿಗೆ ಬುದ್ಧಿವಾದ ಹೇಳಲು ಬರುವ ಸತ್ಯಪ್ಪನನ್ನು ಮೋಡಿಮಾಡಲು ಅವನು ಬಳಸುವ ಮಾತುಗಳು ನೋಡಿ “ಸಾಮ್ರಾಜ್ಯಾಧಿಪತಿ ಇಂಗ್ಲಿಷಿನೋರು ಎಷ್ಟು ಜನವಿದ್ದರು? ಅಂಥೋರಿಗೆ ಒಬ್ಬನೇ ಗಾಂಧಿ ಹೇಗೆ ಕಣ್ಣು ತೆರಸಿದ? ಸತ್ಯದ ಬಲದಿಂದ ತಾನೆ?” (ಪು ೯೧). ಸತ್ಯಪ್ಪ ಗಾಂಧಿಯ ಅನುಯಾಯಿ ಎಂಬುದನ್ನು ತಿಳಿದು, ಅವನನ್ನು ಸೆಳೆಯುವ ಮಂಜಯ್ಯನ ತಂತ್ರ ಅದ್ಭುತ.
ಕಂಚಿಯ ಮತ್ತು ಮಂಜಯ್ಯನ ನಡುವೆ ಹೋಲಿಸುವಾಗ ಲಕ್ಕುವಿನ ಮನದಲ್ಲಿ ಬರುವ ಮಾತು ಕಂಚಿಯ ತೆಂಗಿನ ಮರವನ್ನು ಹತ್ತುವ ಕೌಶಲ್ಯವನ್ನೇ ಬಳಸಿ ವಿವರಿಸುವುದು - ಹೆಂಡ್ತಿ ತಾವಳೂ ಅಷ್ಟೆ. ಸರ ಸರ ಅಂತ ಏರಿ, ಚರ ಚರ ಅಂತ ಗೊನೆ ಇಳುಕಿ ಸರ ಅಂತ ಜಾರಿ ಇಳಿದುಬಿದ್ದು ಗೊರ ಗೊರ ಅಂತ ನಿದ್ದೆ - ಒಗಟಿನಂತೆ ಭಾಸವಾದರೂ ಕಥೆ ಮತ್ತು ಕಂಚಿಯ ಪಾತ್ರದ ಹಿನ್ನೆಲೆಯಲ್ಲಿ ಸೂಚ್ಯಾರ್ಥಕ್ಕೊಂದು ಊರುಗೋಲನ್ನು ನೀಡಿ ಅದರಲ್ಲಿರುವ ಅಶ್ಲೀಲತೆಯನ್ನು ಮುಚ್ಚಿ ಸಹೃದಯರನ್ನು ರಂಜಿಸುತ್ತದೆ.(ಪುಟ 36)
ನಾಗಪ್ಪ ತನ್ನ ಹಣದ ಅಚ್ಚುಕಟ್ಟಿನ ಲೆಕ್ಕಾಚಾರದ ಮನಸ್ಸಿನಿಂದ ತನ್ನ ಬೀಗರು ಮಾಡುವ ಅನ್ನದಾನವನ್ನು ಅವಿವೇಕವೆಂದೂ ಹಾಗೂ ಸುಳ್ಳುಸಾಕ್ಷಿ ಹೇಳಿದ್ದಕ್ಕೆ ಆತ್ಮಹತ್ಯೆಮಾಡಿಕೊಂಡ ಅವರನ್ನು ಕುರಿತು ಆಡುವಮಾತು ನೋಡಿ. ತಮ್ಮ ಮಾತಿಗೆ ಆಧಾರವಾಗಿ ಎಷ್ಟು ಸೂಕ್ಷ್ಮವಾಗಿ ತಾವು ಧರ್ಮರಾಯನ ಬಗೆಗೆ ಗಮನಿಸಿರುವುದನ್ನು ಹೇಳುತ್ತಾರೆ.
“ಮಗಳ ಸಂಸಾರವೂ ನೆಟ್ಟಗಾಗಬೇಕು, ತಾವು ಧರ್ಮರಾಜನೂ ಅನ್ನಿಸಿಕೊಬೇಕು ಅಂದರೆ ಹೇಗಾಗುತ್ತದೆ? ಧರ್ಮರಾಜ ಸುಳ್ಳುಹೇಳಲಿಲ್ಲವೋ? ಹತ: ಕುಂಜರ: ಅಂದದ್ದೊಂದೇ ಅಲ್ಲ, ವಿರಾಟನ ಆಸ್ಥಾನಕ್ಕೆ ಹೋಗಿ ನನ್ನ ಹೆಸರು ಕಂಕಭಟ್ಟ ಅಂತ, ನಾನು ಬ್ರಾಹ್ಮಣ ಎಂದು ಸುಳ್ಳುನುಡಿಯಲಿಲ್ಲವೋ?ಅಜ್ಞಾತವಾಸ ಎಂದರೆ ಒಂದು ಗುಹೆಯಲ್ಲಿ ಅವಿತು ಕೂತಿರಬೇಕಾಗಿತ್ತು, ಎಂದು ತಮ್ಮ ಬೀಗರ ಹುಚ್ಚನ್ನು ನೆನೆಸಿಕೊಂಡು ಮರುಕಪಟ್ಟರು.” (ಪು. ೮೮)
ನಾಗಪ್ಪನ ಪಾತ್ರದ ಪರಿಚಯವಾಗುವ ಸಮಯದಲ್ಲಿ ಅವನ ಅಂಗಿಗಿದ್ದ ಮೂರು ಒಳಜೇಬುಗಳನ್ನು ಹೇಳುವುದು, ಮಾರ್ಮಿಕವಾಗಿ ಅವನ ಜಿಪುಣತನವನ್ನು ಚಿತ್ರಿಸಿದೆ.
ಸರೋಜಾಕ್ಷಿಯು ಅಪ್ಪಾಜಪ್ಪನ ಅಮಾನತ್ತಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸುಬ್ಬಯ್ಯನ ಬಳಿ ಹೋಗಿ, ಅವನು ಸರೋಜಾಕ್ಷಿಯ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ಅವಳು ಕೊಡುವ ಸದೃಶ್ಯವಾದ ಹಾಗೂ ವ್ಯಂಗ್ಯವಾದ ಮಾತು - “ನೋಡಿ, ಭಾರಿ ಭಾರಿ ನರಭಕ್ಷಕ ಹುಲಿಯ ಭೇಟೆಯಾಡುವಾಗಲೂ ನೀವು ಮಲಗಿದ ಹುಲಿ ಹೊಡೆಯುಲ್ಲ, ಕಾಹಿಲೆ ಬಿದ್ದದ್ದ ಹೊಡೆಯುಲ್ಲ ಗಾಯಗೊಂಡದ್ದ ಹೊಡೆಯುಲ್ಲ ಅಂತ ಒಂದು ಸಲ ನನ್ನ ಕೈಲಿ ಹೇಳಿದ್ದಿರಿ, ಜ್ಞಾಪಕವಿದೆಯೆ?” - ಕಾವ್ಯಮಯವೂ ಅತ್ಯೌಚಿತ್ಯವೂ ಆಗಿದೆ.