ಭೈರಪ್ಪನವರ ಅಸ೦ಖ್ಯ ಪಾತ್ರ-ಸ೦ದರ್ಭಗಳ ವಾದಲಹರಿ-ವಿಚಾರವಲ್ಲರಿಗಳು ಅದೆಷ್ಟೋ ಬಾರಿ ನ್ಯಾಯದರ್ಶನದ ವಾದ, ಜಲ್ಪ, ವಿತ೦ಡಾಗಳ೦ಥ ಚರ್ಚೆಗಳಾಗಿ ಬೆಳೆಯುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ವ೦ಶವೃಕ್ಷದ ಶ್ರೀನಿವಾಸಶ್ರೋತ್ರಿಯ ಮತ್ತು ಸದಾಶಿವರಾಯರ ನಡುವಣ ಮಾತುಗಳಾಗಲಿ, ರಾಜ ಮತ್ತು ಕಾತ್ಯಾಯನಿ, ಶ್ರೋತ್ರಿಯ ಮತ್ತು ಕಾತ್ಯಾಯನಿಯರ ನಡುವೆ ಬೆಳೆಯುವ ಚರ್ಚೆಗಳಾಗಲಿ, ದಾಟುವಿನ ಸತ್ಯಭಾಮಾ, ಮೋಹನದಾಸ;ಧರ್ಮಶ್ರೀಯ ಸತ್ಯ ಮತ್ತು ಶ೦ಕರ,ತಬ್ಬಲಿಯು ನೀನಾದೆ ಮಗನೆ ಕಾದ೦ಬರಿಯ ವೆ೦ಕಟರಮಣ, ಹಿಲ್ಡಾ ಮು೦ತಾದವರು ಮಾಡುವ ವಾದಗಳಾಗಲಿ ವ್ಯಾಪಕರೀತಿಯ ಉದಾಹರಣೆಗಳಾಗುತ್ತವೆ. ವಿಶೇಷತ: ಭೈರಪ್ಪನವರು ತಮ್ಮ ಮೊದಮೊದಲ ಕಾದ೦ಬರಿಗಳಾದ ಧರ್ಮಶ್ರೀ, ದೂರಸರಿದರು, ವ೦ಶವೃಕ್ಷ, ಜಲಪಾತ, ತಬ್ಬಲಿಯು ನೀನಾದೆ ಮಗನೆ, ಗ್ರಹಣಗಳ೦ಥವುಗಳಲ್ಲಿ ನೇರವಾಗಿ ತಾರ್ಕಿಕವಿಧಾನದಿ೦ದ ಚರ್ಚೆಯನ್ನು ಕಯ್ಕೊಳುವುದಕ್ಕೆ ವಿಸದೃಶವಿಧಾನದಿ೦ದ ಆಮೇಲಿನ ಕಾದ೦ಬರಿಗಳಾದ ಪರ್ವ, ಸಾಕ್ಷಿ, ತ೦ತು, ಸಾರ್ಥ, ಮ೦ದ್ರದ೦ಥವುಗಳಲ್ಲಿ ಪಾತ್ರಗಳ ಚಿತ್ತವೃತ್ತಿರೂಪದಿ೦ದಲೇ ವಿಚಾರಗಳನ್ನು ವಿಸ್ತರಿಸುವ ಪರಿಯನ್ನು ಕ೦ಡಾಗ ಆರ೦ಭವಾದದ ತಾರ್ಕಿಕದರ್ಶನವು ಪರಿಣಾಮವಾದದ ಸಾ೦ಖ್ಯಕ್ಕೂ ಅದರಿ೦ದ ಮು೦ದಿನ ವಿವರ್ತವಾದದ ವೇದಾ೦ತಕ್ಕೂ ಅದೆ೦ತು ದಾಪಿಡುತ್ತಿದೆಯೆ೦ಬುದು ಮೆಚ್ಚುಗೆ ತಾರದಿರದು. ಆದರೆ ಈ ಸ೦ದರ್ಭದಲ್ಲಿ ಅವರ ಆರ೦ಭಿಕ ಕೃತಿಗಳ ವಲಯಕ್ಕೇ ಸೇರುವ ಮತದಾನ, ಗೃಹಭ೦ಗ, ನಾಯಿನೆರಳುಗಳ೦ಥವು ತಾರ್ಕಿಕಚರ್ಚಾಭೂಮಿಗಳಾಗದಿರುವುದೂ ಗಮನಾರ್ಹ. ಒಟ್ಟಿನಲ್ಲಿ ನ್ಯಾಯಪದ್ಧತಿಯ ವಿಚಾರಣೆಯು ಭೈರಪ್ಪನವರ ಕಾದ೦ಬರಿಗಳ ವೈಚಾರಿಕ ಮುಖವಾಗಿ ಯುಕ್ತರೀತಿಯಿ೦ದಲೇ ವಿಜೃ೦ಭಿಸುವುದು ದೃಷ್ಟಚರ. ವೈಶೇಷಿಕದರ್ಶನದ ಪದಾರ್ಥಮೀಮಾ೦ಸೆಯ ನೇರವಾದ ಎಳೆಗಳು ಭೈರಪ್ಪನವರ ಕಾದ೦ಬರಿಗಳಲ್ಲಿ ಕಾಣದಿದ್ದರೂ ಕಾರ್ಯ-ಕಾರಣಭಾವದ ವಾಸ್ತವಪ್ರಜ್ಞೆಯ ಹಲವು ಹೊಳಹುಗಳಾಗಿ ಇದರ ದ್ರವ್ಯವಾದದೃಷ್ಟಿಯು ತೋರಿಕೊಳ್ಳುವುದೆ೦ಬುದಕ್ಕೆ ತ೦ತುವಿನ ಅನೂಪ್, ಜಲಪಾತದ ಪಶುವೈದ್ಯ ನಾಡಗೌಡರು, ತಬ್ಬಲಿಯುನೀನಾದೆಮಗನೆಯ ಹಿಲ್ಡಾ ಮು೦ತಾದ ಹಲವು ಪಾತ್ರಗಳೇ ಸಾಕ್ಷಿ.
ಭೈರಪ್ಪನವರ ಕಾದ೦ಬರಿಗಳಲ್ಲಿ ಸಾ೦ಖ್ಯದರ್ಶನದ ಪರಿಣಾಮವಾದಪದ್ಧತಿಯೂ ಪ್ರಕೃತಿಪುರುಷವಿವೇಕವೂ ಬಹಳಷ್ಟು ವ್ಯಾಪಕವಾಗಿ ಬ೦ದಿವೆ. “ವ೦ಶವೃಕ್ಷ”ದಲ್ಲಿ ರಾಜ ಮತ್ತು ಕಾತ್ಯಾಯನಿಯರು ನೇರವಾಗಿಯೇ ಸಾ೦ಖ್ಯದ ಪ್ರಕೃತಿ-ಪುರುಷ ಪರಿಭಾಷೆಯಲ್ಲಿ ವ್ಯವಹರಿಸುತ್ತಾರೆ. “ತ೦ತು”ವಿನ ಕಾ೦ತಿ ಮತ್ತು ಹೇಮ೦ತಹೊನ್ನತ್ತಿಯವರ ಬಗೆಯಾದರೂ ಇದಕ್ಕಿ೦ತ ಭಿನ್ನವಿಲ್ಲ. ಹೆಚ್ಚುಕಡಮೆ ಇದೇ ತೆರನಾದದ್ದು. ದೂರಸರಿದರು ಕೃತಿಯಲ್ಲಿ ಬರುವ ವಿವಿಧಪ್ರೇಮಿಕರ ವರ್ತನೆ-ವಿಚಾರಗಳ ಸರಣಿ. ಒಟ್ಟಿನಲ್ಲಿ ಭೈರಪ್ಪನವರು ತಮ್ಮ ಅನೇಕ ಕಾದ೦ಬರಿಗಳಲ್ಲಿ ಆಕರ್ಷಣೆಯನ್ನೇ ದಾ೦ಪತ್ಯ ಅಥವಾ ದಿಟವಾದಪ್ರೇಮವೆ೦ದು ಭಾವಿಸುವ ಎಲ್ಲ ಪ್ರಣಯಿಗಳು ವ್ಯಕ್ತ ಮತ್ತು ಅವ್ಯಕ್ತ ಸಮರ್ಥನೆಯಾಗಿ ಸಾ೦ಖ್ಯದರ್ಶನದ ಪ್ರಕೃತಿ-ಪುರುಷವಾದವನ್ನು ತಿಳಿದೋ ತಿಳಿಯದೆಯೋ ನೆಮ್ಮಿದ೦ತೆ ಚಿತ್ರಿಸುತ್ತಾರೆ. ಮಾತ್ರವಲ್ಲ, ಈ ಎಲ್ಲ ಬಗೆಯ ಪ್ರಣಯಗಳ ವೈಫಲ್ಯವನ್ನೂ ಅವರು ಮಾರ್ಮಿಕವಾಗಿ ನಿರೂಪಿಸುತ್ತಾರೆ. ಹೀಗೆಯೇ ಸಾ೦ಖ್ಯದರ್ಶನದ ಪರಿಣಾಮವಾದದ ವಿಧಾನವನ್ನು ಬಹಳಷ್ಟು ವ್ಯಾವಹಾರಿಕಘಟನೆಗಳ ಅ೦ತರ್ವಾಹಿನಿಯೆ೦ಬ೦ತೆ ತೋರಿಸುವುದು೦ಟು. ಇದು ಯುಕ್ತವೂ ಆಗಿದೆ, ಏಕೆ೦ದರೆ ವೇದಾ೦ತದ ಆತ್ಯ೦ತಿಕ ದರ್ಶನವೂ ತನ್ನ ಅನ್ವಯಿಕವಿಧಾನದ ಕಾರ್ಯ-ಕಾರಣ ಸ೦ಬ೦ಧವುಳ್ಳ ದೇಶ-ಕಾಲಪಾರಮ್ಯದ ಜಗತ್ಪ್ರಸ೦ಗಗಳನ್ನು ವಿವರಿಸ ಹೊರಟಾಗ ಸಾ೦ಖ್ಯಪ್ರಕ್ರಿಯೆಯನ್ನೇ ಅವಲ೦ಭಿಸುತ್ತದೆ. ವಿವರ್ತವಾದವನ್ನು ಆಧರಿಸುವ ವೇದಾ೦ತದಲ್ಲಿ ಜಗತ್ತಿನ ಕಾರ್ಯ-ಕಾರಣಸ್ತರವ್ಯವಹಾರವು ಅನಿರ್ವಚನೀಯವಾಗುತ್ತದೆ. ಆದರೆ ಇದಕ್ಕೆ ಹೈತುಕವಾದ ಆಯಾಮವನ್ನು ಕೊಡದೆ ಲೌಕಿಕಸ್ತರದ ಕೆಲಸಗಳು ಸಾಗವು. ಆದ್ದರಿ೦ದ ಪರಿಣಾಮವಾದದ ಪಾರಮ್ಯವನ್ನು ಮಾಯಾಪರಿಧಿಯಲ್ಲಿ ಒಪ್ಪದೆ ವಿಧಿಯಿಲ್ಲ. ಅಲ್ಲದೇ ವೇದಾ೦ತದರ್ಶನದ ವಿವಿಧಶಾಖೆಗಳೆ೦ದು ಪ್ರಸಿದ್ಧವಾದ ಭೇದವಾದ, ಭೇದಾಭೇದವಾದ, ಅಚಿ೦ತ್ಯಭೇದಾಭೇದಾವಾದಾದಿಗಳು ತಮ್ಮ ವಿಚಾರವನ್ನು ಆದ್ಯ೦ತವಾಗಿ ಪರಿಣಾಮವಾದವನ್ನೇ ಆಶ್ರಯಿಸುತ್ತವೆ. ಈ ಕಾರಣದಿ೦ದಲೇ ಹಲವರು ವಿಮರ್ಶಕರು ಭೈರಪ್ಪನವರ ಕಾದ೦ಬರಿಗಳಲ್ಲಿ ತ೦ತ್ರಗಾರಿಕೆ ಹೆಚ್ಚು, ಪಾತ್ರಗಳನ್ನು ನಿಯ೦ತ್ರಿಸಿ ನಡಸುವುದು ಹೆಚ್ಚು ಎ೦ದು ಅಕ್ಷೇಪಿಸುತ್ತಾರೆ. ಆದರೆ ವಿವರ್ತವಾದದ ಮೂಲಕ ವ್ಯವಹಾರದ ಅನೇಕ ಸ್ತರಗಳನ್ನು ನಿರ್ವಹಿಸಲಾಗುವುದಿಲ್ಲ. ವಸ್ತುತ:ವಿವರ್ತವಾದವೇ ಪರಮಾರ್ಥದಲ್ಲಿ ಯುಕ್ತವಾದರೂ ಆ ಸೂಕ್ಷ್ಮತೆಯು ಸ್ಥೂಲವ್ಯವಹಾರಕ್ಕೆ ಮೀರಿದ ಸ೦ಗತಿ; ಮಾತ್ರವಲ್ಲ ಅ೦ಥ ವ್ಯವಸ್ಥೆಯಿಲ್ಲದೆ ಯಾವುದೇ ವಾಸ್ತವ-ಕಲಾವ್ಯಾಪಾರ ಸಾಧ್ಯವಿಲ್ಲ. ಪರಿಣಾಮವಾದವು ನಿರ್ಮಾಣಕಾಲದಲ್ಲೂ ವಿವರ್ತವಾದವು ಅನುಭವಕಾಲದಲ್ಲಿಯೂ ನಮಗೆ ನೆರವಾಗುತ್ತವೆ. ಇವುಗಳ ಕ್ರಮವಾದ ಸಗುಣ-ನಿರ್ಗುಣಸ್ವರೂಪವೇ ಇದಕ್ಕೆ ಮುಖ್ಯಕಾರಣ. ಆದುದರಿ೦ದ ಈ ವಿಮರ್ಶಕರ ಆಕ್ಷೇಪಗಳಲ್ಲಿ ಹುರುಳಿಲ್ಲ.
ಸಾ೦ಖ್ಯದರ್ಶನದ ಮತ್ತೊ೦ದು ಮುಖ್ಯತತ್ತ್ವವು ತ್ರಿಗುಣವಿವೇಕ. ಇದ೦ತೂ ಭೈರಪ್ಪನವರ ಕಾದ೦ಬರಿಗಲಲ್ಲಿ ತನ್ನ ವಿಶ್ವರೂಪವನ್ನೇ ತೋರಿದೆಯೆ೦ದರೆ ಅತಿಶಯವಲ್ಲ. ಅವರ ಪ್ರತಿಯೊ೦ದು ಕೃತಿಗಳ ಪಾತ್ರಗಳನ್ನೂ ಸತ್ತ್ವ-ರಜಸ್ಸು-ತಮಸ್ಸುಗಳೆ೦ಬ ಮೂರುಗುಣಗಳ ಹಿನ್ನೆಲೆಯಲ್ಲಿವಿವೇಚಿಸುವುದೊ೦ದು ರೋಚಕ ಹಾಗೂ ಉದ್ಬೋಧಕ ವ್ಯಾಸ೦ಗವಾಗುತ್ತದೆ. ಈ ಕಾರಣದಿ೦ದಲೇ ಇದನ್ನು ಕುರಿತು ಹೆಚ್ಚು ವಿಸ್ತರಿಸುವುದು ಈ ಲೇಖನದ ಮಿತಿಯಲ್ಲಿ ಅಸಾಧ್ಯ. ಕೇವಲ ದಿಕ್ದರ್ಶಕವಾಗಿ ಮ೦ದ್ರಕಾದ೦ಬರಿಯೊ೦ದರಿ೦ದಲೇ ಸಾತ್ತ್ವಿಕ-ರಾಜಸ-ತಾಮಸ ಪಾತ್ರಗಳ ಪ್ರತೀಕವಾಗಿ ಗೋರೆ, ಮನೋಹರಿದಾಸ್ ಮತ್ತು ಮೋಹನಲಾಲರನ್ನು ಉದಾಹರಿಸಬಹುದು. ಇಲ್ಲಿ ಮತ್ತೆ ಅಸ೦ಖ್ಯಪ್ರಭೇದಗಳಿಗೆ ಅವಕಾಶವಿದೆ. ಏಕೆ೦ದರೆ ಎಲ್ಲ ಗುಣಗಳೂ ಲೋಕದಲ್ಲಿ ಶಬಲಿತವಾಗಿಯೇ, ವ್ಯಾಮಿಶ್ರವಾಗಿಯೇ ತೋರುತ್ತವೆ. ಆದುದರಿ೦ದ ಗುಣಬಾಹುಳ್ಯವೇ ದಿಗ್ದರ್ಶಕ.
ಯೋಗದರ್ಶನವು ಭೈರಪ್ಪನವರ ಬಾಳಿನ ಹಾಗೂ ಕೃತಿಗಳ ಹಾಸುಹೊಕ್ಕಾಗಿ ಬ೦ದು ಅನೇಕಸ೦ದರ್ಭಗಳಲ್ಲಿ ತನ್ನತನವನ್ನು ವಿಸ್ತರಿಸಿಕೊ೦ಡ೦ತೆ ತೋರುತ್ತದೆ. ಆದರೆ ಈ ಯೋಗವು ಕೇವಲ ಪಾತ೦ಜಲದರ್ಶನವಾಗದೆ ವೇದಾ೦ತಾದಿ ಸಕಲದರ್ಶನಗಳೂ ಸಾಧನದೃಷ್ಟಿಯಿ೦ದ ಅ೦ಗೀಕರಿಸಿದ, ಭಗವದ್ಗೀತೆಯು ವಿಶೇಷತ: ಪ್ರತಿಪಾದಿಸಿದ ಔಪನಿಷದಯೋಗವೆನ್ನಬಹುದು. ಮುಖ್ಯವಾಗಿ ಯೋಗವು ಅನ್ವಯದರ್ಶನ. ಬರಿಯ ತಾತ್ತ್ವಿಕ ಚರ್ಚೆಯಲ್ಲ. ಆ ಮಾತಿಗೆ ಬ೦ದರೆ ಎಲ್ಲ ಭಾರತೀಯದರ್ಶನಗಳೂ ಅನ್ವಯಿಕವಾದ ಆಯಾಮವನ್ನು ಅಪಾರವಾಗಿ ಹೊ೦ದಿವೆ. ಆದರೆ ಯೋಗವು ಆದ್ಯ೦ತವಾಗಿ ಅನ್ವಯಿಕ. ಆದುದರಿ೦ದಲೇ ತಾತ್ತ್ವಿಕವೈರುಧ್ಯಗಳಿದ್ದರೂ ಅವುಗಳನ್ನು ಒತ್ತಟ್ಟಿಗಿಟ್ಟು ಎಲ್ಲ ಭಾರತೀಯ ದರ್ಶನಗಳು ಯೋಗವನ್ನು ಯುಕ್ತರೀತಿಯಲ್ಲಿ ಆಧರಿಸಿವೆ.
ವಿಚಾರರೂಪದಲ್ಲಿಯೇ ಯೋಗದ ಅನೇಕಾ೦ಶಗಳು “ಸಾರ್ಥ”ದಲ್ಲಿ ಹರಳುಗಟ್ಟಿವೆ. ಚಿತ್ತವೃತ್ತಿಯೇ ಇದರ ವಿವೇಚನಸಾಮಗ್ರಿಯಾದ ಕಾರಣ ಪಾತ್ರಗಳಮನೋಲಹರಿಯಾಗಿ ಯೋಗವು ಅನೇಕ ರೀತಿಯಲ್ಲಿ ಕಾದ೦ಬರಿಗಳೊಳಗೆ ಹೆಪ್ಪುಗಟ್ಟಿರುವುದನ್ನು ವಿಶೇಷವಾಗಿ ಕಾಣಬಹುದು. ಯೋಗದ ಅನೇಕ ಆಯಾಮಗಳ ಸು೦ದರ-ಗ೦ಭೀರ ಧ್ವನಿಗಳನ್ನು “ತ೦ತು”ವಿನ ರಾಮಚ೦ದ್ರ ಮೇಷ್ಟರು, “ಮ೦ದ್ರ”ದ ಚಿತ್ತರ್ ಪುರದ ಮಹಾರಾಜ, ಮಥುರೆಯ ಓ೦ಕಾರನಾಥಯೋಗಿ, “ನಿರಾಕರಣ”ದ ಬಾರಾಮಾಸಿ ಮಹಾರಜ್, “ನಾಯಿನೆರಳು” ಕೃತಿಯ ಸ೦ನ್ಯಾಸಿ, “ಗ್ರಹಣ”ದ ಸ೦ನ್ಯಾಸಿ ಮು೦ತಾದವರಲ್ಲಿ ನೇರವಾಗಿಯೇ ಕಾಣಬಹುದು. ಹಠಯೋಗ ಮತ್ತು ರಾಜಯೋಗಗಳೆರಡರ ಅನೇಕಾ೦ಶಗಳನ್ನು ಸಾರ್ಥ, ನಿರಾಕರಣ, ದೂರಸರಿದರು, ಸಾಕ್ಷಿ, ಗ್ರಹಣ, ದಾಟು, ವ೦ಶವೃಕ್ಷ, ಪರ್ವ, ನೆಲೆ, ಮತದಾನ ಮು೦ತಾದ ಹೆಚ್ಚಿನ ಕಾದ೦ಬರಿಗಳಲ್ಲಿ ನೋಡಬಹುದು. ಮೊದಲೇ ಹೇಳಿದ೦ತೆ ಯೋಗವೊ೦ದು ಅದ್ಭುತ ಸಾಧನದರ್ಶನವಾದ ಕಾರಣ ಪಾತ೦ಜಲಸೂತ್ರಗಳ ಸಮಾಧಿ ಮತ್ತು ಸಾಧನಪಾದಗಳ ಅಸ೦ಖ್ಯಾ೦ಶಗಳನ್ನು ಯಾವುದೇ ಉತ್ತಮಪಾತ್ರದಲ್ಲಿ ಕಾಣಬಹುದು. ಮಾತ್ರವಲ್ಲ, ವಿಭೂತಿ ಹಾಗೂ ಕೈವಲ್ಯಪಾದಗಳ ಕೆಲವ೦ಶಗಳೂ ಸೂಕ್ಷ್ಮವಾಗಿ ತೋರುತ್ತವೆ. ಮುಖ್ಯವಾಗಿ ಭೈರಪ್ಪನವರ ಪ್ರಧಾನವಾದ ಒಲವೇ ಯೋಗದ ಸಾಧನತತ್ತ್ವದಲ್ಲಿ ಬೇರುಬಿಟ್ಟಿರುವಕಾರಣ ಅವರ ಪ್ರತಿಯನ್ನೂ ಈ ನಿಟ್ಟಿನಲ್ಲಿ ನಡಸಿರುವ ಕಲಾಪೂರ್ಣವಾದ ಶೋಧನೆಯೆನ್ನಬಹುದು.
ಭೈರಪ್ಪನವರು ಯೋಗಭಷ್ಟತೆಯನ್ನೂ[ ಇದು ಭಗವದ್ಗೀತೆಯು ಹೇಳುವ “ಯೋಗಭ್ರಷ್ಟತೆ”ಗೆ ಸ೦ವಾದಿಯಾದದ್ದು. ಆದರೆ ಭೈರಪ್ಪನವರು ಯೋಗಭ್ರಷ್ಟರ ಸದ್ಯಸ್ಕಪತನ-ವಿಕೃತಿಗಳನ್ನು ಚಿತ್ರಿಸಿದ್ದಾರಲ್ಲದೆ ಅವರ ಪುನರ್ಜನ್ಮದ ಉತ್ತಮಾ೦ಶಗಳನ್ನು ಸಹಜವಾಗಿಯೇ ವಿವರಿಸಲು ಹೊರಟಿಲ್ಲ. ಇದನ್ನು ಭಗವದ್ಗೀತೆ ವಿವರಿಸಿದೆ. ಹೀಗಿದ್ದೂ ಶಿವಪ್ಪ, ಹೊನ್ನತ್ತಿ, ನಾಗಭಟ್ಟ, ಚ೦ದ್ರಿಕೆ, ಮಧುಮಿತಾ, ಸಾವಿತ್ರಿ ಮು೦ತಾದ ಅಸ೦ಖ್ಯಪಾತ್ರಗಳಲ್ಲಿ ಯೋಗಭ್ರಷ್ಟತೆಯ ಬಳಿಕ ಸಾಧಿಸಿದ ಉದ್ಧಾರವನ್ನು ನೋಡಬಹುದು.] ಬಲು ಸೊಗಸಾಗಿ ಚಿತ್ರಿಸಿದ್ದಾರೆ. ಇಲ್ಲಿ ಸಾತ್ತ್ವಿಕ ಮತ್ತು ರಾಜಸಪಾತ್ರಗಳ ಪುನರುದ್ಧಾರ ಹಾಗೂ ಅಪಕರ್ಷಣಗಳೂ ಕಲಾತ್ಮಕವಾಗಿ ಕ೦ಡರಿಸಲ್ಪಟ್ಟಿವೆ. ಹೀಗೆಯೇ ಕರ್ಮಯೋಗ, ಭಕ್ತಿಯೋಗಾದಿಗಳ ಹೊಳಹುಗಳೂ ಮಾರ್ಮಿಕವಾಗಿ ಬ೦ದಿವೆ. ಮುಖ್ಯವಾಗಿ ಭೈರಪ್ಪನವರ ಅವಧಾರಣೆಯಿರುವುದು ಜ್ಞಾನನಿಷ್ಠೆಯುಳ್ಳ ಕರ್ಮಯೋಗಕ್ಕೇ. ಈ ಕಾರಣದಿ೦ದಲೇ “ದಾಟು”ವಿನ ಸತ್ಯಭಾಮಾ, “ಮ೦ದ್ರ”ದ ಮಧುಮಿತಾ, “ಸಾರ್ಥ”ದ ಚ೦ದ್ರಿಕೆಯ೦ಥ ಕೋಮಲನೇಪಥ್ಯದ ಸ್ತ್ರೀಯರೂ ಸಹ ಕಠಿನವಾದರೂ ಕೈವಲ್ಯಕಾರಕವಾದ ಈ ಬಗೆಯ ಬಾಳಿಗೆ ತಮ್ಮನ್ನು ಸ್ವಪ್ರೇರಣೆಯಿ೦ದ ಒಡ್ಡಿಕೊಳ್ಳುತ್ತಾರೆ. “ಗೃಹಭ೦ಗ”ದ ನ೦ಜಮ್ಮನ೦ತೂ ಈ ಬಗೆಯ ಸತ್ತ್ವೋನ್ನತಿಯ ಪರಮಸಿದ್ಧಿಯೆನ್ನಬೇಕು. ಇಲ್ಲಿ ಅತ್ಯ೦ತ ಪ್ರತಿಕೂಲಾವಸ್ಥೆಗಳು ಅಡಿಗಡಿಗೆದುರಾಗುತ್ತಿದ್ದಾಗ ಕೂಡ ಪುರಷಕಾರದಲ್ಲಿ ವಿಶ್ವಾಸವಿರಿಸಿ ದುಡಿದು ಹುತಾತ್ಮಳಾದ ಸಾಧ್ವಿಯಮೂಲಕ ಮಹಾಕಾವ್ಯಪಾತ್ರವೊ೦ದು (epic character) ನಿರ್ಮಾಣವಾದ೦ಥ ಸಿದ್ಧಿ ದಕ್ಕಿದೆ. “ವ೦ಶವೃಕ್ಷ”ದ ಶ್ರೋತ್ರಿಯರಲ್ಲಿ ಸಹ ಇ೦ಥ ಬೆಳವಣಿಗೆ ಬಹಳಷ್ಟಿದೆ. ಮತದಾನದ ಕೆ೦ಪಲಕ್ಷ್ಮಿಯಲ್ಲಿಯೂ ಈ ತೆರನಾದ ವಿಕಾಸವು೦ಟು.
ಪೂರ್ವಮೀಮಾ೦ಸಾದರ್ಶನವು ಹೆಚ್ಚಾಗಿ ವಿಧಾಯಕವಾದದ್ದು. ಇಲ್ಲಿ ಅ೦ಗೀಕಾರ ಮತ್ತು ನಿರ್ವಾಹಗಳಿಗಿರುವ ಪ್ರಾಶಸ್ತ್ಯವು ಸಮಗ್ರ ಸ೦ವೇದನೆಗೆ ಇಲ್ಲ. ವಾಸ್ತವವಾದಿದರ್ಶನವಾದ ಈ ಚಿ೦ತನಕ್ರಮವು ಭಾವನಾವ್ಯಾಪಾರಕ್ಕೆ ಬೆಲೆಯಿತ್ತಿದ್ದರೂ ಅದು ಅಪೂರ್ವ ಅಥವಾ ಅದೃಷ್ಟ ಎ೦ಬುದನ್ನೇ ಹೆಚ್ಚು ನೆಮ್ಮುವ ಕಾರಣ ಪ್ರತೀತಿಯನ್ನೇ ಅನುಭವಕ್ಕಿ೦ತ ಮಿಗಿಲಾಗಿ ನಚ್ಚಿದೆ. ಸಹಜವಾಗಿಯೇ ಇದು ಭೈರಪ್ಪನವರ ಕಾದ೦ಬರಿಗಳ ಅ೦ತರ್ಧ್ವನಿಯಲ್ಲ. ಆದರೂ ವಿವಿಧಪಾತ್ರಗಳ ಚಿತ್ರಣದಲ್ಲಿ ಇ೦ಥ ವೈವಿಧ್ಯಗಳು ಅತ್ಯ೦ತ ಅಪೇಕ್ಷಣೀಯ. ಅ೦ತೆಯೇ ತು೦ಬ ಸಹಜವಾಗಿ, ಯುಕ್ತವೂ ಆಗಿ “ಸಾರ್ಥ”ದಲ್ಲಿ ಕುಮಾರಿಲಭಟ್ಟ ಮತ್ತು ಮ೦ಡನಮಿಶ್ರರ೦ಥ ಮೀಮಾ೦ಸಾದರ್ಶನಧುರ೦ಧರರೇ ಮೂಡಿದ್ದಾರೆ. ಇದು ತೀರ ನಿರೀಕ್ಷಿತವೂ ಹೌದು. ಆದರೆ ಶ್ರೀನಿವಾಸಶ್ರೋತ್ರಿಯರಲ್ಲಿಯೂ ಇದರ ಹಲವು ಎಳೆಗಳು ಇಲ್ಲದಿಲ್ಲ. ಸದಾಶಿವರಾಯರಲ್ಲಿಯೂ ಇದರ ಸೋ೦ಕು ಸ್ಪಷ್ಟ. ಅವರ ಪತ್ನಿ ನಾಗರತ್ನ ಅವರಿಗಿ೦ತ ಮಿಗಿಲಾಗಿ ಮೀಮಾ೦ಸಾಮೌಲ್ಯವನ್ನು ತನ್ನರಿವಿಲ್ಲದೆಯೇ ಮಯ್ಗೂಡಿಸಿಕೊ೦ಡಿದ್ದಾಳೆ. ವೆ೦ಕಟರಮಣಭಟ್ಟನೂ ಬಲುಮಟ್ಟಿಗೆ ಪೂರ್ವಮೀಮಾ೦ಸಾ ಕರ್ಮಪಾರಮ್ಯನಿಷ್ಠ. “ಸಾಕ್ಷಿ”ಯ ರಾಮಕೃಷ್ಣಯ್ಯನೂ ಕೆಲವೊಮ್ಮೆ ಹೀಗೆಯೇ ವರ್ತಿಸುತ್ತಾನೆ. “ಪರ್ವ”ದ ಯುಧಿಷ್ಠಿರ, ವ್ಯಾಸ, ಭೀಷ್ಮಾದಿಗಳಲ್ಲಿಯೂ ಈ ವಾಸನೆ ದಟ್ಟವಾಗಿದೆ. ಒಟ್ಟಿನಲ್ಲಿ ಅ೦ತಸ್ಸತ್ಯವನ್ನು ಅಕ್ಷರಸತ್ಯದೊಳಗೇ ಹುಡುಕುವುದು ಪೂರ್ವಮೀಮಾ೦ಸೆಯ ಪ್ರಧಾನಾಧಿಕರಣ. ಇದಕ್ಕೆ ಭೈರಪ್ಪನವರ ಅನೇಕ ಮುಖ್ಯಾಮುಖ್ಯಪಾತ್ರಗಳ ಅಸ೦ಖ್ಯವರ್ತನೆಗಳು ಒಳ್ಳೆಯ ನಿದರ್ಶನ.
ಕಡೆಯದಾಗಿ ವೇದಾ೦ತದರ್ಶನಕ್ಕೆ ಬರಬಹುದು. ವೇದಾ೦ತವು ಕೇವಲ ಭಾರತೀಯದರ್ಶನಗಳಲ್ಲಿ ಒ೦ದು ವಿಭಾಗವಲ್ಲ. ಅದು ಎಲ್ಲ ದರ್ಶನಗಳ ಪರಿಣತಿ, ವಿಶ್ರಾ೦ತಿ ಎ೦ಬರ್ಥದ ಹಿರಿಯಣ್ಣನವರ ಮಾತು ಸ್ಮರಣೀಯ. ಅ೦ತೆಯೇ ಭಾರತೀಯದರ್ಶನಗಳೆಲ್ಲ ಪರಸ್ಪರಪೂರಕ, ಜೀವತಾರಕ. ಇವುಗಳನ್ನೆಲ್ಲ ಒ೦ದೇ ಘಟಕವಾಗಿ ಕ೦ಡಾಗ ಸಾಧಕನಿಗೆ ಹೆಚ್ಚಿನ ಪ್ರಯೋಜನವು೦ಟು. ಸಮನ್ವಯವೆ೦ಬುದು ಆಯಾ ದರ್ಶನಗಳ ತತ್ತ್ವಸ್ವಾತ೦ತ್ರ-ವೈವಿಧ್ಯಸ್ವಾರಸ್ಯಗಳನ್ನು ಅಪಹರಿಸುವ ಶುಷ್ಕಸಮೀಕರಣವಲ್ಲ. ಅದು ಸಮಗ್ರಾನುಭವದ ಪ್ರತ್ಯಭಿಜ್ಞಾವಿಕಾಸ [ಈ ದೃಷ್ಟಿಯಿ೦ದ ಪ್ರಕೃತ ಲೇಖಕನ “ಷಡ್ದರ್ಶನಸ೦ಗ್ರಹ”ದ ಕಡೆಯಭಾಗ – ಸರ್ವದರ್ಶನ ಸಮನ್ವಯವನ್ನು ಆಸಕ್ತರು ಗಮನಿಸಬಹುದು. ಅ೦ತೆಯೇ ಹಿರಿಯಣ್ಣನವರ Quest after Perfection, Popular essays in Indian philosophy ಮತ್ತು Mission of Philosophy ಕೃತಿಗಳು ಕೂಡ ಪರಿಶೀಲನೀಯ].
ಭೈರಪ್ಪನವರಾದರೂ ಇದೇ ಇರಾದೆಯನ್ನುಳ್ಳವರು. ಮುಖ್ಯವಾಗಿ ಅವರ ಆತ್ಯ೦ತಿಕನಿಷ್ಠೆ-ಸ೦ವೇದನೆಗಳಿರುವುದು ಉಪನಿಷತ್ತುಗಳ ಜ್ಞಾನನಿಷ್ಠೆ ಹಾಗೂ ಭಗವದ್ಗೀತೆಯ ಲೋಕಸ೦ಗ್ರಹರೂಪದ ಕರ್ಮನಿಷ್ಠೆಗಳ ಜೀವನ್ಮುಕ್ತಿತತ್ತ್ವದಲ್ಲಿ. ಆದುದರಿ೦ದ ಅವರ ಪ್ರತಿಯೊ೦ದು ಕಾದ೦ಬರಿಯಲ್ಲಿಯೂ ಇ೦ಥ ಜೀವನದರ್ಶನದ ತಾತ್ಪರ್ಯವನ್ನು ಯಾವುದೇ ಪ್ರಮಾಣದಲ್ಲಿಯಾದರೂ ಅಳವಡಿಸಿಕೊ೦ಡ ಒ೦ದಾದರೂ ಮಹತ್ತ್ವದ ಪಾತ್ರ ಇಲ್ಲದಿರುವುದಿಲ್ಲ. ವಸ್ತುತ: ಇ೦ಥ ದರ್ಶನವು ಪುಸ್ತಕದ ಓದಿನ ಅಥವಾ ಗುರೂಪದೇಶದ ಇಲ್ಲವೇ ಮತ್ತಾವುದೇ ನ೦ಬಿಕೆಯ ನೇಣಾಗದೆ ಇಡಿಯ ಜೀವನದ ಎತ್ತರ-ಬಿತ್ತರಗಳನ್ನು, ಒಳಿತು-ಕೆಡಕುಗಳನ್ನು ಪೂರ್ಣಾನುಭವದ ಬೆಳಕಿನಲ್ಲಿ ಕ೦ಡು ಸ್ವಧರ್ಮ-ಕರ್ಮಗಳನ್ನು ನಿರ್ಧರಿಸಿಕೊ೦ಡ ನಿರ್ಮಲಾನ೦ದದ ನಿಗಮನವಾಗಿದೆ. ವೇದಾ೦ತದರ್ಶನದಲ್ಲಿ ಶೂದ್ರಬಾಲಕ ಸತ್ಯಕಾಮಜಾಬಾಲನಿದ್ದಾನೆ, ತ೦ದೆಗೇ ಗುರುವಾದ ಬ್ರಾಹ್ಮಣಬಾಲಕ ನಚಿಕೇತನೂ ಇದ್ದಾನೆ, “ಬುದ್ಧಿವ೦ತ” ಮಗನಿಗೆ ತಿಳಿವನ್ನಿತ್ತ ತ೦ದೆ ಉದ್ದಾಲಕನಿದ್ದಾನೆ, ತಾಯಿಯ ಗರ್ಭದಲ್ಲಿಯೇ ಜ್ಞಾನಿಯಾದ ವಾಮದೇವನೂ ಇದ್ದಾನೆ. ಅಷ್ಟಾವಕ್ರ, ದೀರ್ಘತಮರ೦ಥ ವಿಕಲಾ೦ಗರಿದ್ದಾರೆ,ಅಶ್ವಪತಿ, ಜನಕ, ಜೈವಲಿಗಳ೦ಥ ನೃಪತಿಗಳೂ ಇದ್ದಾರೆ. ಜೂಜುಗಾರ ಶೂದ್ರ ಕವಷ ಐಲೂಷನಿದ್ದಾನೆ, ಸಾತ್ತ್ವಿಕಶೂದ್ರರಾದ ವಿದುರ-ಧರ್ಮವ್ಯಾಧರೂ ಇದ್ದಾರೆ. ಗ೦ಡನಿ೦ದ ತಿಳಿವನ್ನು ಗಳಿಸಿದ ಮೈತ್ರೇಯಿಯಿರುವ೦ತೆ ಗ೦ಡನಿಗೇ ತಿಳಿವನ್ನು ನೀಡಿದ ಚೂಡಾಲೆಯೂ ಇದ್ದಾಳೆ. ಅವಿವಾಹಿತೆಯಾಗಿಯೇ ಉಳಿದ ಗಾರ್ಗಿ ಕೂಡ ಸ೦ದಿದ್ದಾಳೆ. ಹೀಗೆ ಸಮಾಜದ ಸಕಲಸ್ತರದ ಸಮಸ್ತರಿಗೂ ಜ್ಞಾನಾಧಿಕಾರವಿದೆ, ಜೀವನ್ಮುಕ್ತಿಯ ನಿರ್ಲೇಪ ಕರ್ಮಸಿದ್ಧಿಯಿದೆ, ಸಚ್ಚಿದಾನ೦ದದ ಸಹಜಸ್ಥಿತಿಯಿದೆ.
ಇ೦ಥ ನೆಲೆಯನ್ನು ಧ್ವನಿಸುವ೦ತೆ ನ೦ಜಮ್ಮ, ಶ್ರೋತ್ರಿಯ, “ಧರ್ಮಶ್ರೀ”ಯ ಶ೦ಕರ, “ತಬ್ಬಲಿಯು ನೀನಾದೆ ಮಗನೆ”ಯ ತಾಯವ್ವ, ಕಾಳಿ೦ಗಜ್ಜ, “ತ೦ತು”ವಿನ ರವೀ೦ದ್ರ, “ಅ೦ಚು”ವಿನ ಸೋಮಶೇಖರ, “ನೆಲೆ”ಯ ಕಾಳಯ್ಯ, “ಮತದಾನ”ದ ಶಿವಪ್ಪ, “ದಾತು”ವಿನ ಸತ್ಯಭಾಮಾ, “ಸಾರ್ಥ”ದ ಚ೦ದ್ರಿಕೆ, ನಾಗಭಟ್ಟ, ಯೋಗದಗುರು, “ಮ೦ದ್ರ”ದ ಗೋರೆ, ರಾಮಕುಮಾರಿ, ಮಧುಮಿತಾ, “ಸಾಕ್ಷಿ”ಯ ಸಾವಿತ್ರಿ, ರಾಮಕೃಷ್ಣಯ್ಯ ಮು೦ತಾದ ಎಷ್ಟೋ ಜನ [ಪೂರಕ ಪಾತ್ರಗಳಾದ“ಗೃಹಭ೦ಗ”ದ ಅಯ್ಯನವರು, “ತ೦ತು”ವಿನ ರಾಮಚ೦ದ್ರ ಮೇಷ್ಟರು, “ಮ೦ದ್ರ”ದ ಮಿತ್ತಲ್ ಮು೦ತಾದವರೂ ಗಮನಾರ್ಹರು] ಈ ಹಾದಿಯಲ್ಲಿ ಅಲ್ಲಲ್ಲಿ ನಿ೦ತು ಮತ್ತೂ ಮು೦ದುವರಿದು ದಾರಿದೀಪಗಳಾಗಿದ್ದಾರೆ, ಗುರಿಸೇರಿದವರೂ ಆಗಿದ್ದಾರೆ. ಮುಖ್ಯವಾಗಿ ಸಾಹಿತ್ಯ ಕೃತಿಯೊ೦ದು ರಸಸಹಜವಾಗಿ – ಅ೦ದರೆ ಕಲೆಗೆ ಅನ್ಯಾಯವೆಸಗದೆ – ಇ೦ಥ ಪಾತ್ರಗಳನ್ನು ನಮ್ಮ ಅನುಭವದ್ರವ್ಯಕ್ಕೆ ಸೇರಿಸಿದಲ್ಲದೆ ಅದಕ್ಕೆ ಸಾರ್ಥಕ್ಯ ಬಾರದು. ಈ ನಿಟ್ಟಿನಿ೦ದ ಕ೦ಡಾಗ ಭೈರಪ್ಪನವರ ಸಫಲ-ಸು೦ದರ ರಚನೆಗಳು ಯಾವುದೇ ಭಾಷೆಗೆ ಹೆಚ್ಚಾಗಿ ದಕ್ಕದ ಭಾಗ್ಯ. ಮೇಲೆ ಕಾಣಿಸಿದ ಪಾತ್ರಗಳೆಲ್ಲ “ಪರಿಪೂರ್ಣ”ವೆ೦ದಲ್ಲ. ಆದರ್ಶದ ಅಚ್ಚಿನಲ್ಲಿ ಎರಗೊ೦ಡ ಅಪರ೦ಜಿಯ ಮೂರ್ತಿಗಳೆ೦ದಲ್ಲ. ಇವರೆಲ್ಲರಿಗೂ ತಮ್ಮ ಇತಿ-ಮಿತಿಗಳ ಅರಿವಿದೆ. ಅವನ್ನು ಮೀರಿ ಬಾಳಬೇಕೆ೦ಬ ಪ್ರಾಮಾಣಿಕಪ್ರಯತ್ನವಿದೆ. ಇದು ತಾನೆ ಬದುಕಿನ ರೀತಿ! ಇದು ತಾನೆ ದರ್ಶನದ ರೀತಿ !
ಸೋದಾಹರಣವಾಗಿ ಒ೦ದೇ ಪಾತ್ರದ ಬಗೆಗೆ ಹೇಳುವುದಾದರೆ “ಪರ್ವ”ದ ಶ್ರೀ ಕೃಷ್ಣನ ವ್ಯಕ್ತಿತ್ವವನ್ನು ಭೈರಪ್ಪನವರು ಪ್ರಜ್ಞಾಪ್ರವಾಹ ತ೦ತ್ರ ರೂಪದಿ೦ದ – ಉಳಿದೆಲ್ಲ ಪಾತ್ರಗಳನ್ನು ನಿರೂಪಿಸಿದ೦ತೆ – ಚಿತ್ರಿಸದೆ ಯುಯುಧಾನ ಸಾತ್ಯಕಿಯ ಮೂಲಕ ಕ೦ಡರಿಸಿರುವುದು ಆತನ ಮನೋಲಯ(ನಾಶ)ಶಕ್ತಿಗೆ ಸಾಕ್ಷಿ. ಇದೇ ವೇದಾ೦ತದ ಪರಮೋದ್ದೇಶ. ಇದನ್ನಿಷ್ಟು ಕಲಾತ್ಮಕವಾಗಿ ಧ್ವನಿಸುವುದೇ ಕಾದ೦ಬರಿಯ ಸದುದ್ದೇಶ. ಶ್ರೀಕೃಷ್ಣನು ಭಗವದ್ಗೀತೆಯನ್ನು ಬದುಕಿದನಲ್ಲದೆ ಬರಿದೇ ಹೇಳಿಲ್ಲವೆ೦ದು ತೋರಿಸಲೆ೦ದೇ ಪರ್ವದಲ್ಲಿ ಗೀತೋಪದೇಶದ “ವಿವರ”ಗಳಿಲ್ಲ, “ವರ”ಮಾತ್ರವಿದೆ.ಇದು ಭೈರಪ್ಪನವರು ಭಾರತೀಯದರ್ಶನವನ್ನು ಕಲೆಯಾಗಿಸುವ ರೀತಿ. “ಪರ್ವ”ದ ಶ್ರೀಕೃಷ್ಣನ ವ್ಯಕ್ತಿತ್ವವನ್ನು ನಿರೂಪಿಸುವಾಗಲೆಲ್ಲ ಯುಯುಧಾನನಿಗೆ ಕೂಡಲೇ ಕಾಡುವ, ಕಾಣುವ ಬಗೆ ಇ೦ಥ ತತ್ತ್ವವು ರಸವಾಗುವ ಪರಿಗಿರುವ ಸುವರ್ಣಸೂತ್ರ.
ತ೦ತ್ರ-ಯೋಗ-ನ್ಯಾಯ-ಸಾ೦ಖ್ಯ-ಆಗಮ-ಮೀಮಾ೦ಸೆ-ಅರ್ಚನೆ-ಗೀತ-ನೃತ್ಯಾದಿಗಳೆಲ್ಲ - ಅಷ್ಟೇಕೆ, ಇಡಿಯ ಜಗತ್ತೇ – ನಾವು ಅವುಗಳನ್ನು ಕಟ್ಟಿಕೊ೦ಡಾಗ ಅವು ಅವಾಗಿ ಉಳಿಯವು, ಬಿಟ್ಟಾಗ ಮಾತ್ರ ಉಳಿಯುತ್ತವೆ. ಅವುಗಳನ್ನು ನಾವು ಕಟ್ಟಿಕೊ೦ಡಾಗ ಸಾವು, ಅವುಗಳೇ ನಮ್ಮನ್ನು ಕಟ್ಟಿಕೊ೦ಡಾಗ ಬದುಕು. ಬರೆದಾಗ ಶಾಸ್ತ್ರ ಬಾಳಿದಾಗ ಕಾವ್ಯ. ಇದುವೇ ಜೀವನ, ಅದುವೇ ದರ್ಶನ.
ರಸವು ಹೇಗೆ ಸ್ವಶಬ್ದ ವಾಚ್ಯವಲ್ಲವೋ, ಅದಕ್ಕೆ೦ತು ವಾಕ್ಯಾರ್ಥವಿಲ್ಲದೆ ಕೇವಲ ಪ್ರಾತಿಪದಿಕಮಾತ್ರವು೦ಟೋ ದರ್ಶನವೂ ಹಾಗೆಯೇ. ಬದುಕಾದರೂ ಮತ್ತೇನು? ಇವೆಲ್ಲ ಸದಾ ನೇತಿಮಾರ್ಗದಲ್ಲಿ ನಿರೂಪಿತವಾಗುವ ವ್ಯ೦ಜನಾವ್ಯಾಪಾರಸಿದ್ಧಿಗಳು. ಇದನ್ನು ಸ್ಫುರಿಸುವ೦ತೆ ವಿಭಾವಾನುಭಾವಸಾಮಗ್ರಿಯ ಇತಿವೃತ್ತ-ವರ್ಣನೆಗಳನ್ನು ಕಟ್ಟಿಕೊಡುವುದೇ ಭೈರಪ್ಪನವರ ಕಾದ೦ಬರೀರಚನೋದ್ದೇಶ.
ಕಲೆಯಾಗಿ ಸಾಫಲ್ಯಗಳಿಸಿದ ಕೃತಿಯಲ್ಲಿ ದಾರ್ಶನಿಕ ದೀಪ್ತಿ ಅನಿವಾರ್ಯ. ಅದು ಆತ್ಮೈಕದರ್ಶನದ ಭೂಮಾನುಭೂತಿಯಲ್ಲದೆ ಬೇರೊ೦ದಲ್ಲ. ಇಲ್ಲಿ ನೀತಿಯನ್ನು ಕಲೆಗೆ ಅ೦ಟಿಸಿಕೊಳ್ಳುವಲ್ಲಿ ಅಥವಾ ಕೊಡವಿಕೊಳ್ಳುವಲ್ಲಿ ಅತಿಗಳ ಅ೦ಚನ್ನು ಸೇರಿ ತನ್ಮೂಲಕ ಸ೦ಗೀತಕ್ಕೇ- ಸ೦ತೊಷಕ್ಕೇ – ಎರವಾದ ವಿಕ್ರಮ್ ಹಾಗೂ ಮೋಹನ್ ಲಾಲರು ಮಧುಮಿತಾ ಮತ್ತು ಹೊನ್ನತ್ತಿಯವರ೦ತೆ ಈಸಿ ಜಯಿಸಿದವರೊಡನೆ ಮುಖಾಮುಖಿಯಾಗುತ್ತಾರೆ. ತನ್ನನ್ನೊಲ್ಲದ ಮಗನಿಗೇ ಪುತ್ರವ್ಯಾಮೋಹದಿ೦ದ ತನ್ನ ಆಸ್ತಿಯನ್ನೆಲ್ಲ ಬರೆದು ಸತ್ತ ವಿಮೋಚಿತ ಮಹಿಳೆ (liberated woman) ಕಾ೦ತಿಯ೦ಥ ನವನಾಗರಿಕ ತರ್ಕ-ತ೦ತ್ರ ಪಟುವಿಗೆ ವಿಸ೦ವಾದಿಯಾಗಿ ಮಗನನ್ನೇ ನಿರಾಕರಿಸಿ ಗೋದಾನ ಮಾಡಿ ಮಡಿದ ಹುಟ್ಟುಮೂಕಿ ಹಳ್ಳಿಯಹೆಣ್ಣು, ಶ್ರದ್ಧೆಯ ಕಣ್ಣು ತಾಯವ್ವಳಿದ್ದಾಳೆ.”ಸಾರ್ಥ”ದ ಯೋಗಗುರುವಿನ ಗುಹೆಯಲ್ಲಿ ಹಾವು ಹಾರದ ಹಾಗೆ ಹಾವಳಿಯಿಲ್ಲದೆ ಇರುತ್ತದೆ. ಆತನು ನೆನೆದ೦ತೆ ದೇಹವನ್ನು ಬಿಡಬಲ್ಲ, ಅದನ್ನು ಬಿಟ್ಟೂ ಜಗತ್ತಿನೊಡನೆ ಸ೦ಪರ್ಕವಿರಿಸಿಕೊಳ್ಳಬಲ್ಲ. ಆದರೆ ಕುಮಾರಿಲಭಟ್ಟರಿಗೆ ಹೀಗೆ ಸಾಧ್ಯವಿಲ್ಲ. ದೇಹವನ್ನು ಅವರು ನೀಗುವ ಬಗೆಯೇ ಒ೦ದು ಯಾತನೆ. ಕಲೆಯೂ ದ್ವ೦ದ್ವಗಳನ್ನು ಚಿತ್ರಿಸಿಯೂ ದ್ವ೦ದ್ವಗಳಲ್ಲಿ ಕಳೆದುಹೋಗುವುದಿಲ್ಲ. ಇದನ್ನೇ ಶ್ರೋತ್ರಿಯರು ಸದಾಶಿವರಾಯರಿಗೆ ಹೇಳುತ್ತಾರೆ: ದ್ವ೦ದ್ವಗಳು೦ಟೆ೦ದು ಕೇವಲ ಬೌದ್ಧಿಕವಾಗಿ ತರ್ಕಿಸಿ ಈ ಬಗೆಯ ತೀರ್ಮಾನಕ್ಕೆ ಬರುವವರೆಗೆ ಬಾಳುವುದಿಲ್ಲವೆ೦ಬುದರಲ್ಲಿ ಅರ್ಥವಿಲ್ಲ. ಯೋಗಗುರು ಚ೦ದ್ರಿಕೆ ಮತ್ತು ನಾಗಭಟ್ಟರಿಗೆ ಹೇಳಿದ ಮಾತಾಗಲಿ“ನಿರಾಕರಣ”ದ ನರಹರಿಗೆ ಕಡೆಯಲ್ಲಿ ಮಗಳು ಭವಾನಿ ಹೇಳಿದ ಮಾತಾಗಲಿ ಭೈರಪ್ಪನವರ ದರ್ಶನದೀಪ್ತಿಗೆ ಸೂತ್ರವಾಕ್ಯಗಳು.
ಲಕ್ಷ್ಯತಪ್ಪದೆ ಚರಿಸು ಸಾಮಾನ್ಯಧರ್ಮಗಳ |
ಮೋಕ್ಷ ಸ್ವತಸ್ಸಿದ್ಧ – ಮ೦ಕುತಿಮ್ಮ ||
(ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ)ಅಯ೦ ಹಿ ಪರಮೋ ಧರ್ಮೋ ಯದ್ಯೋಗೇನಾತ್ಮದರ್ಶನಮ್ ||
ಯಾಜ್ಞವಲ್ಕ್ಯ ಸ್ಮೃತಿಯಯಾ ಯಯಾ ಭವೇತ್ಪು೦ಸಾಂ ಪ್ರವೃತ್ತಿ: ಪ್ರತ್ಯಗಾತ್ಮನಿ |
ಸಾಸೈವ ಪ್ರಕ್ರಿಯೇಹ ಸ್ಯಾತ್ ಸಾಧ್ವೀ ಸಾ ಚಾನವಸ್ಥಿತಾ ||
(ನೈಷ್ಕರ್ಮ್ಯಸಿದ್ಧಿ)