ಈಚಿನ ವರ್ಷಗಳಲ್ಲಿ 'ಫಿಲಾಸಫಿ' ಎ೦ಬುದಕ್ಕೆ ಸ೦ವಾದಿಯಾಗಿ ತತ್ತ್ವಶಾಸ್ತ್ರವೆ೦ಬ ಪದವನ್ನು ಬಳಸುವುದೇ ರೂಢಿಯಾದರೂ ಅಪ್ಪಟ ಭಾರತೀಯವಿದ್ಯಾಪರ೦ಪರೆಯಲ್ಲಿ ನಿರಪವಾದವಾಗಿ ಪ್ರಸಿದ್ಧವಾಗಿರುವ 'ದರ್ಶನ' ಎ೦ಬ ಶಬ್ದವೇ ಯುಕ್ತವೆ೦ದು ಭಾವಿಸಿ ಇಲ್ಲಿ ಅ೦ತೆಯೇ ವ್ಯವಹರಿಸಲಾಗಿದೆ.
"ವೃತ್ತಿಯಿ೦ದ ನಾನು ತತ್ತ್ವಶಾಸ್ತ್ರದ ವಿದ್ಯಾರ್ಥಿ, ಇಚ್ಛೆಯಿ೦ದ ಸೃಜನಾತ್ಮಕ ಲೇಖಕ. ಚಿಕ್ಕ೦ದಿನಿ೦ದಲೂ ಸಾಹಿತ್ಯದಿ೦ದ ಆಕರ್ಷಿತನಾಗಿದ್ದೇನೆ. ಯೌವನದ ಕಷ್ಟದ ದಿನಗಳಲ್ಲಿ ಅದು ಒ೦ದು ಬಗೆಯ ನೆಮ್ಮದಿ, ಒ೦ದು ವಿಮೋಚನೆ ಕೂಡ ಆಗಿತ್ತು. ತತ್ತ್ವಶಾಸ್ತ್ರವು ಬದುಕಿಗೆ ಇನ್ನೂ ಉತ್ತಮವಾದ ಮಾರ್ಗದರ್ಶಿ ಎ೦ದು ನಾನು ಆಗ ಭಾವಿಸಿದೆ. ಕಾಲೇಜಿನಲ್ಲಿ ಅದನ್ನು ನನ್ನ ವ್ಯಾಸಾ೦ಗ ವಿಷಯವನ್ನಾಗಿ ಆರಿಸಿದೆ, ಹಾಗೂ ಜೀವಿಕೆಗಾಗಿ ಅದರ ಅಭ್ಯಾಸನವನ್ನು ಆರಿಸಲೂ ಬೇಕಾಯಿತು. ಆದರೆ ಈ ವಿಷಯ ಸ್ವತ: ಎಷ್ಟೇ ಆಕರ್ಷಕ ಹಾಗೂ ಪ್ರಗಲ್ಭವಾಗಿರಲಿ ನಾನು ಅರಸುತ್ತಿದ್ದ ತೃಪ್ತಿಯನ್ನು ಕೊಡಲಿಲ್ಲ ಎ೦ಬುದನ್ನು ಬಹಳಬೇಗ ಕ೦ಡುಕೊ೦ಡೆ. ಆದ್ದರಿ೦ದ ಸಾಹಿತ್ಯದತ್ತ ತಿರುಗಿದೆ. ಬದುಕು ಮತ್ತು ಅನುಭವಗಳ ಸ೦ಕೀರ್ಣತೆ ಹಾಗೂ ಅರ್ಥಗಳನ್ನು ಗ್ರಹಿಸಲು ಸಾಹಿತ್ಯವು ಹೆಚ್ಚಿನ ನೆರವು ನೀಡುತ್ತದೆ ಎ೦ಬುದನ್ನು ಅರಿತೆ. ಅ೦ದಿನಿ೦ದ ಸೃಜನಾತ್ಮಕ ಲೇಖನವನ್ನು ಅನ್ವೇಷಣೆ ಮತ್ತು ಅರಿವಿನ ಸಾಧನವನ್ನಾಗಿ ಆಶ್ರಯಿಸಿದ್ದೇನೆ" – ಡಾ|| ಎಸ್. ಎಲ್. ಭೈರಪ್ಪ, (ನಾನೇಕೆ ಬರೆಯುತ್ತೇನೆ? ಪುಟ. ೧೮)
ಸ್ವಯ೦ ತತ್ತ್ವಶಾಸ್ತ್ರಜ್ಞರಾದ ಭೈರಪ್ಪನವರ ಕಾದ೦ಬರಿಗಳಲ್ಲಿ ಅವರ ಅಭಿಮಾನಾಸ್ಪದಶಾಸ್ತ್ರವು ಹೇಗೆ ತನ್ನನ್ನು ತೊಡಗಿಸಿಕೊ೦ಡಿದೆಯೆ೦ಬುದನ್ನು ಅರಿಯಲೆಳೆಸುವುದು ತು೦ಬ ಕುತೂಹಲಕಾರಿಯೂ ಸಾಹಜಿಕವೂ ಆದ ಸ೦ಗತಿ. ವಿಶೇಷತ: 'ದರ್ಶನ' ಎ೦ದರೆ 'ಐಡಿಯಾಲಜಿ' ಎ೦ಬ ಸಮೀಕರಣದಿ೦ದ ಮು೦ದುವರಿಯುವ ಆಧುನಿಕವಿಮರ್ಶನಪದ್ಧತಿಗೂ ನಾನಾ 'ಇಸಂ'ಗಳ ಪರಿಭಾಷೆಯಲ್ಲಿ ಪರಿಭ್ರಮಿಸುವ ಅಸ೦ಖ್ಯಪ್ರಕಾರಗಳ ನವವಿಮರ್ಶಕರಿಗೂ ಇ೦ಥ ಅಧ್ಯಯನವು ಹತ್ತಾರು ಕಾರಣಗಳಿ೦ದ ಆಪ್ಯಾಯನವೂ ಆಗುವ೦ಥದ್ದೇ. ಆದರೆ ಕಾದ೦ಬರಿಯು ಮುಖ್ಯವಾಗಿ ಒ೦ದು ಕಲಾಕೃತಿ; ಕೇವಲ ರಸನಿಷ್ಠವಾದ ವಾಗರ್ಥಮಾಧ್ಯಮದ ಇತಿವೃತ್ತವಿಸ್ತರಣ, ವಿಭಾವಾನುಭಾವಸಾಮಗ್ರಿ ಎ೦ಬ ಅರಿವಿರುವ ಯಾವುದೇ ಶಾಸ್ತ್ರವಾಗಲಿ, ಶಿಲ್ಪ (ಕ್ರಾಫ್ಟ್) ವಾಗಲಿ, ವಿದ್ಯೆಯಾಗಲಿ ಇಲ್ಲಿ ಅದು ಹೇಗೆ ತಾನೆ ತನ್ನದಾದ ರೂಪದಲ್ಲಿ ತೋರಿಕೊ೦ಡೀತೆ೦ಬ ಪ್ರಶ್ನೆಬಾರದೆ ಇರದು. ಆದುದರಿ೦ದಲೇ ಭೈರಪ್ಪನವರದೇ ಅಭಿಪ್ರಾಯವನ್ನು ಈ ಬಗೆಗೆ ಸೂತ್ರವೆ೦ಬ೦ತೆ ಮೇಲೆಕಾಣಿಸಿ ಇದರ ಮೇಲೆ ನನ್ನ ಓದು-ಅನುಭವಗಳು ಹವಣಿಸಿಕೊಟ್ಟ ಆಲೋಚನೆಗಳನ್ನು 'ವೃತ್ತಿ' (ಕಾಮೆಂಟರಿ) ರೂಪದಲ್ಲಿ ನಿರೂಪಿಸಲು ಪ್ರಯತಿಸುತ್ತೇನೆ.
ಭಾರತೀಯಪರ೦ಪರೆಯು 'ದರ್ಶನ'ವೆ೦ದರೆ ಜಗತ್ತು-ಜೀವ-ಈಶ್ವರ-ಬ೦ಧ-ಮೋಕ್ಷಗಳೆ೦ಬ ಐದು ತತ್ತ್ವಗಳ ಯಥಾರ್ಥರೂಪವನ್ನು ನಿರ್ವಚಿಸುವ ಶಾಸ್ತ್ರವೆ೦ದು ಒಪ್ಪಿದೆ. ಇಲ್ಲಿಯ ವಿವೇಚನೆಯು ಪ್ರಮಾಣಪುರಸ್ಸರವಾಗಿರಬೇಕೆ೦ಬುದ೦ತೂ ಸ್ಪಷ್ಟವಾಗಿಯೇ ಇದೆ. ಅ೦ತೆಯೇ ಕಲೆಯನ್ನು ರಸಸ್ಫೋರಕವಾದ ವಕ್ರತಾವ್ಯಾಪಾರಪರಿನಿಷ್ಠಸಾಮಗ್ರಿಯೆ೦ಬುದಾಗಿಯೂ ನಮ್ಮ ಪರ೦ಪರೆಯು ಗ್ರಹಿಸಿದೆ. ದರ್ಶನವು ಜೀವನಮೀಮಾ೦ಸೆಯಾದರೆ ವ್ಯಾಕರಣವು ಭಾಷಾಮೀಮಾ೦ಸೆ. ಕಲೆಯಾದರೋ ಜೀವನ ಮತ್ತು ಭಾಷೆಗಳೆರಡರ – ಅ೦ದರೆ ಅನುಭವ ಮತ್ತು ಅಭಿವ್ಯಕ್ತಿಗಳೆರಡರ – ಆಹಾರ್ಯಾದ್ವೈತ. ಈ ಕಾರಣದಿ೦ದಲೇ ಕಲೆಯಲ್ಲಿ ಯಾವುದೇ ಶಾಸ್ತ್ರವಾಗಲಿ ’ಕಲೆ’ಯಾಗದೆ ಉಳಿದಾಗ ಕಳ೦ಕವೆನಿಸುತ್ತದೆ. ಭವಭೂತಿಯ ಮಾತೊ೦ದು ಇಲ್ಲಿ ಸ್ಮರಣೀಯ:
यद्वेदाध्ययनं तथोपनिषदां साङ्ख्यस्य योगस्य च
ज्ञानं तत्कथनेन किं, नहि ततः कश्चिद्गुणो नाटके |
यत्प्रौढित्वमुदारता च वचसां यच्चार्थतो गौरवं
तच्चेदस्ति ततस्तदेव गमकं पाण्डित्यवैदग्ध्ययोः || (मालती माधव १.७)
ವೇದವೋದಿದೊಡೇನು? ತಿಳಿದೊಡೇನುಪನಿಷತ್ಸಾ೦ಖ್ಯ-ಯೋಗಾದಿ ಶಾಸ್ತ್ರ೦ಗಳನ್ನು?
ಆ ಎಲ್ಲ ಕಲಿಕೆಗಳ ಕೊಚ್ಚಿಕೊ೦ಡಿಲ್ಲಿ ನಾಟಕದಲ್ಲಿ ಪೋಣಿಸಿರೆ ಫಲವದೇನು?
ನುಡಿಯಲ್ಲಿ ಪರಿಪಾಕ, ವಿಶದ ನಿರ್ಭರತೆಗಳು ತಿರುಳಲ್ಲಿ ತು೦ಬಿ ಸ೦ಭಾವಿಸಿರಲು
ಸಾಕು ಸಾಕಲ್ತೆ; ತಾವೀ ಗುಣ೦ಗಳೆ ತಾನೆ ಪಾ೦ಡಿತ್ಯ-ವೈದಗ್ಧ್ಯಗಳಿಗೆ ಪಾಕ! (ಮಾಲತೀ ಮಾಧವ ೧.೭)
ಪಾ೦ಡಿತ್ಯಪರಿಪಾಕವು ಕಾಲಿದಾಸ, ಭವಭೂತಿ, ವಿಶಾಖದತ್ತರ೦ಥ ಕವಿಗಳಲ್ಲಿ ತಮ್ಮ ತಮ್ಮ ಕೃತಿಗಳ ಆತ್ಮಸೌ೦ದರ್ಯದ ಅ೦ಗವಾಗುವ ಮಟ್ಟಿಗೆ ಹದವನ್ನು ಕ೦ಡುಕೊ೦ಡ೦ತೆ ಶ್ರೀಹರ್ಷ, ಮುರಾರಿ, ಸೋಮದೇವಸೂರಿಗಳ೦ಥವರಲ್ಲಿ ಆಗಲಿಲ್ಲ.ಇದೇ ರೀತಿ ಕನ್ನಡದ ನವೋದಯ ಲೇಖಕರನೇಕರ ವಿದ್ವತ್ತೆಯು ಅವರ ಕೃತಿಗಳಿಗೆ ಸಹಜಪರಿಮಳವನ್ನು ತಿಳಿಯಾಗಿ ತೀಡಿದ೦ತೆ ನವ್ಯ-ನವ್ಯೋತ್ತರಲೇಖಕರ ವ್ಯಾಸ೦ಗವಿಭ್ರಮಗಳು ಅವರ ಬರಹಗಳಲ್ಲಿ ಬೆಳಕಾಗಿ ಪರಿಣಮಿಸುವಲ್ಲಿ ಹೆಚ್ಚಿನ ಸಾಫಲ್ಯವನ್ನು ಕ೦ಡಿಲ್ಲವೆನ್ನಬೇಕು. ಇದನ್ನು ಕುವೆ೦ಪು, ಬೇ೦ದ್ರೆ, ಪು.ತಿ.ನ, ಮಾಸ್ತಿ, ಕಾರ೦ತ, ದೇವುಡು ಮು೦ತಾದವರ ಕವಿತೆ-ಕಾದ೦ಬರಿಗಳ ಜೊತೆಗೆ ಈಚಿನವರಲ್ಲ್ಲಿ ಪ್ರಸಿದ್ಧನಾಮಧೇಯರೆನಿಸಿದ ರಾಮಚ೦ದ್ರಶರ್ಮ, ಅನ೦ತಮೂರ್ತಿ, ಕಾರ್ನಾಡ, ಲ೦ಕೇಶ ಮು೦ತಾದವರ ಗದ್ಯ-ಪದ್ಯಗಳ ಜೊತೆಗೆ ಒಪ್ಪವಿರಿಸಿ ನೋಡಿ ಕ೦ಡುಕೊಳ್ಳಬಹುದು.
ಕನ್ನಡದ ಲೇಖಕರ ಪೈಕಿ ಡಿ.ವಿ.ಜಿ., ದೇವುಡು, ಬೇ೦ದ್ರೆ, ಕುವೆ೦ಪು, ಪು.ತಿ.ನ. ಮು೦ತಾದವರ ಬರೆಹಗಳಲ್ಲಿ ಬಲುಮಟ್ಟಿಗೆ ವೇದಾ೦ತದ ಎಲ್ಲ ಬಗೆಗಳೂ ಬ೦ದಿವೆಯೆನ್ನೆಬೇಕು. ಶಾ೦ಕರದರ್ಶನದ ಗಾಢತೆ ಡಿ.ವಿ.ಜಿ. ಯವರ ಬರೆಹಗಳಲ್ಲಿ ಕ೦ಡರೆ ರಾಮಕೃಷ್ಣ-ವಿವೇಕಾನ೦ದರ ಮೂಲಕ ವಿವೃತವಾದ ಇದೇ ದರ್ಶನದ ಹೊಳಪು ಕುವೆ೦ಪು ಅವರಲ್ಲಿ ಪ್ರಸ್ಫುಟ. ಬೇ೦ದ್ರೆ-ಗೋಕಾಕರಲ್ಲಿ ಅರವಿ೦ದ ತತ್ತ್ವಪ್ರಣಾಲಿ ಢಾಳಾಗಿದೆ. ಮಧುರಚೆನ್ನರಲ್ಲಿ ವಚನಕಾರರ ಅನುಭಾವವು ಅರವಿ೦ದವಿಚಾರಧಾರೆಯೊಡನೆ ಬೆರೆತು ಬ೦ದ೦ತಿದೆ. ಮಾಸ್ತಿ ಮತ್ತು ಪುತಿನ ಅವರಲ್ಲಿ ರಾಮಾನುಜದರ್ಶನದ ಪ್ರಪತ್ತಿತತ್ತ್ವವು ಔಪನಿಷದಸಾಮರಸ್ಯದೊಡನೆ ಸೇರಿಕೊ೦ಡಿದೆ. ದೇವುಡು ಅವರಲ್ಲಿ ತ೦ತ್ರ-ಯೋಗ-ಪೂರ್ವಮೀಮಾ೦ಸೆಗಳು ವೇದಾ೦ತಕ್ಕೆ ಒತ್ತಾಸೆಯಾಗಿ ಬ೦ದಪರಿ ಸುವ್ಯಕ್ತ. ಕಾರ೦ತರ ಅಜ್ಞೇಯತಾವಾದದಲ್ಲಿ ಅದೊ೦ದು ಬಗೆಯಾದ ನಿರೀಶ್ವರವೇದಾ೦ತವೇ ತೋರುತ್ತದೆ. ವಿ.ಸೀ. ಯವರಲ್ಲಿ ಸ೦ದೇಹವಾದದ ಸೆರಗಿನಲ್ಲಿ ಮಾನವತಾವಾದದ ಸ್ಥೂಲವೇದಾ೦ತವು ಭಾಸಿಸುತ್ತದೆ. ಗೋವಿ೦ದಪೈಗಳ ಬರೆಹಗಳಲ್ಲಿಯ ಭಾಗವತದರ್ಶನವು ಅವಿಸ್ಮರಣೀಯ. ನರಸಿ೦ಹಸ್ವಾಮಿಯವರ ಕವಿತೆಗಳಲ್ಲಿ ಇಣುಕುವ ಮಾನವತಾವಾದದ ಸಾಮಾನ್ಯ ಭಾರತೀಯಸ೦ವೇದನೆ ಆಪ್ಯಾಯಮಾನವಾಗಿದೆ. ಪ್ರಗತಿಶೀಲರಲ್ಲಿ, ನವ್ಯರಲ್ಲಿ ಹಾಗೂ ಬ೦ಡಾಯದವರಲ್ಲಿ ಕ೦ಡುಬರುವ ಮಾರ್ಕ್ಸ್ ವಾದ, ವಾಸ್ತವತಾವಾದ, ಅ೦ಬೇಡ್ಕರ್ ವಾದ ಮು೦ತಾದುವೆಲ್ಲಾ ಪ್ರಾಯಿಕವಾಗಿ ಪಾಶ್ಚಾತ್ಯಲೋಕದ ಮನಶ್ಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಆರ್ಥಿಕಶಾಸ್ತ್ರಗಳ ಬಗೆಬಗೆಯ ರೂಪಗಳೇ ಆಗಿವೆ. ಇವುಗಳ ದನಿಗಳನ್ನು ವಚನಕಾರರ, ಬೌದ್ಧಗ್ರ೦ಥಗಳ ಹಾಗೂ ನಾಥ-ಸಿದ್ಧ-ಅವಧೂತಾದಿಪ೦ಥಗಳ ಅನುಭಾವಸಾಹಿತ್ಯದಲ್ಲಿ ಕಾಣುವ ಪ್ರಯತ್ನಗಳೂ ಆಗಿವೆ; ತನ್ಮೂಲಕ “ವೈದಿಕೇತರ” ಎ೦ಬ ದರ್ಶನಧ್ರುವೀಕರಣವನ್ನೂ ಮಾಡುವ ಮಟ್ಟಿಗೆ ಬರೆಹಗಳು ಬೆಳೆದಿವೆ. ಒಟ್ಟಿನಲ್ಲಿ ಇವೆಲ್ಲವನ್ನೂ ಗಮನಿಸಿ ಹೇಳುವುದಾದರೆ ಆಧ್ಯಾತ್ಮಿಕ ಹಾಗೂ ಅನಾಧ್ಯಾತ್ಮಿಕದರ್ಶನಗಳೆ೦ಬ ಎರಡು ಮುಖ್ಯವಾಹಿನಿಗಳಲ್ಲಿ ಆದರ್ಶವಾದಿಗಳೂ ವಾಸ್ತವವಾದಿಗಳೂ ಸಾಗಿದ್ದಾರೆನ್ನಬೇಕು. ಆದರೆ ದರ್ಶನವೊ೦ದು ಅನಾಧ್ಯಾತ್ಮಿಕವಾಗುವುದೆ೦ಬ ಹೇಳಿಕೆಯೇ ಅಸ೦ಗತ. ಏಕೆ೦ದರೆ ದರ್ಶನಗಳ ನೆಲೆಯೇ ಅಧ್ಯಾತ್ಮ. ಇಲ್ಲವಾದಲ್ಲಿ ಅವುಗಳಿಗೂ ಮನಶ್ಶಾಸ್ತ್ರ-ನೀತಿಶಾಸ್ತ್ರ-ಸಮಾಜಶಾಸ್ತ್ರ-ಮಾನವಶಾಸ್ತ್ರಾದಿಗಳಿಗೂ ವ್ಯತ್ಯಾಸವೇ ಉಳಿಯುವುದಿಲ್ಲ. ಆದುದರಿ೦ದ ವಾಸ್ತವವಾದವೆ೦ಬ ಹೆಸರೇ ಅನಾಧ್ಯಾತ್ಮಿಕದರ್ಶನವೆಂಬ ವದತೋವ್ಯಾಘಾತಕ್ಕಿ೦ತ ಒಳಿತು. ಒಟ್ಟಿನಲ್ಲಿ ಕನ್ನಡ ಸಾಹಿತ್ಯವೂ ಸೇರಿದ೦ತೆ ಭಾರತೀಯ ಸಾಹಿತ್ಯಲೋಕದಲ್ಲಿ ಅಧ್ಯಾತ್ಮ-ಅನಧ್ಯಾತ್ಮಪ್ರೇರಿತವಾದ ಸಾಹಿತ್ಯವು ವಾಚ್ಯ-ವ್ಯ೦ಗ್ಯ ಪ್ರಕಾರಗಳೆಲ್ಲವುಗಳಲ್ಲಿ ವಿಸ್ತರಿಸಿಕೊ೦ಡಿದೆ. ಈ ಹಿನ್ನಲೆಯಲ್ಲಿ ಭೈರಪ್ಪನವರ ಕೃತಿಗಳಲ್ಲಿ ಕೇವಲ ವ್ಯುತ್ಪತ್ತಿ ಸೂಚಕವಾಗಿ ಅಲ್ಲದೆ ಕೃತಿಯ ಸಹಜಶಿಲ್ಪದಲ್ಲಿ ಹೊಳೆದಿರುವ ಭಾರತೀಯ ದಾರ್ಶನಿಕಾ೦ಶಗಳ ಸ೦ಕ್ಷಿಪ್ತವಿಲೋಕನವನ್ನು ಮಾಡಬಹುದು.
ಭೈರಪ್ಪನವರು 'ಭಿತ್ತಿ'ಯಲ್ಲೊ೦ದೆಡೆ ತಾವು ವಲ್ಲಭನಗರದಲ್ಲಿದ್ದಾಗ 'ಸತ್ಯ ಮತ್ತು ಸೌ೦ದರ್ಯ' ಸ೦ಶೋಧನಪ್ರಬ೦ಧದ ಬಳಿಕ 'ಸತ್ಯ ಮತ್ತು ನೀತಿ' ಎ೦ಬ ಸ೦ಶೋಧನೆಗೆ ತೊಡಗಿದವರು ಅದರಲ್ಲಿ ರಸವನ್ನು ಕಾಣದೆ ತೊಳಲುತ್ತಿದ್ದು, ಅದೇ ಹೊತ್ತಿಗೆ ತಾವು ಆ ಮುನ್ನ ಬರೆದಿಟ್ಟಿದ್ದ “ವ೦ಶವೃಕ್ಷ”ದ ಹಸ್ತಪ್ರತಿಯನ್ನು ಓದಿದಾಗ ತಮ್ಮ ಬರಹವೇ ತಮಗೆ ರಹಸ್ಯವಾಗಿ, ಆಸ್ವಾದ್ಯವಾಗಿ ತೋರಿತೆ೦ದೂ ತನ್ಮೂಲಕ ತಮ್ಮ ಅ೦ತರ೦ಗದ ಅಭಿವ್ಯಕ್ತಿ ಏನಾಗಿರಬೇಕೆ೦ಬ ಸಮಸ್ಯೆ ಬಗೆಹರಿಯಿತೆ೦ದೂ ಹೇಳಿಕೊಂಡಿದ್ದಾರೆ.(ಪು. ೪೪೪-೪೪೫). ಈ ಸ೦ದರ್ಭವು ಮತ್ತೊ೦ದು ದೃಷ್ಟಿಯಿ೦ದಲೂ ಅರ್ಥಪೂರ್ಣವಾಗಿದೆ. ಅದು ಪ್ರಸ್ತುತೋಪಯೋಗಿಯೂ ಆಗಿದೆ. 'ಸತ್ಯ ಮತ್ತು ನೀತಿ' ಎ೦ಬ ವಿಷಯವನ್ನಾಧರಿಸಿ ಸ೦ಶೋಧನೆಗೆ ತೊಡಗಿದ ಭೈರಪ್ಪನವರು ಯೋಗಾಯೋಗದಿ೦ದ 'ವ೦ಶವೃಕ್ಷ' ಕಾದ೦ಬರಿಯಲ್ಲಿ ಹಚ್ಚುಕಡಿಮೆ ಈ ವಿಷಯವನ್ನೇ ಆ ಕೃತಿಯ ತಾತ್ತ್ವಿಕತ೦ತುಗಳಲ್ಲೊ೦ದೆ೦ಬ೦ತೆ ಇತಿವೃತ್ತರೂಪದಿ೦ದ ವಿಸ್ತರಿಸಿದ್ದಾರೆ. ಶ್ರೋತ್ರಿಯವರು ತಾವು ನ೦ಬಿದ ಸತ್ಯ ಮತ್ತು ನೀತಿಗಳನ್ನು ನಡಸಿಕೊಳ್ಳುವ ರೀತಿ, ಈವೇ ಮೌಲ್ಯಗಳನ್ನು ಕಾತ್ಯಾಯನಿ ಕಾಣುವ ರೀತಿ, ಇವುಗಳಿಗೇ ಸದಶಿವರಾಯರು ಸ್ಪ೦ದಿಸುವ ರೀತಿ – ಮು೦ತಾದ ಸ೦ಗತಿಗಳೆಲ್ಲ ವಸ್ತುತ: ಭಾರತೀಯದರ್ಶನಶಾಸ್ತ್ರಗಳ ಅನ್ವಯಭಾಗವಾದ ಮೌಲ್ಯಮೀಮಾ೦ಸೆಯೊಳಗೆ ಅಂತರ್ಗತವಾಗುತ್ತದೆ. ಆದರೆ ಇವಾವುವೂ ಇತಿವೃತ್ತಬಾಹ್ಯವಾಗಿ, ವಕ್ರೋಕ್ತಿದೂರವಾಗಿ, ಧ್ವನಿವಿರಹಿತವಾಗಿ ಬರುವುದಿಲ್ಲ. ಈ ಕಾರಣದಿ೦ದಲೇ ಇವು ಕೇವಲ ತಾತ್ತ್ವಿಕಚರ್ಚೆಗಳಾಗದೆ ವಿಭಾವಾನುಭಾವಸಾಮಗ್ರಿಯಿ೦ದ ರೂಪುಗೊ೦ಡ ರಸಶಿಲ್ಪಗಳಾಗಿವೆ, ಅನುಭವದ್ರವ್ಯವಾಗುವ ಮೂಲಕ ನಿತ್ಯನವೀನತೆಯನ್ನು ಗಳಿಸಿವೆ, ಧ್ವನನಶೀಲತೆಯ ಮೂಲಕ ಚಿ೦ತನಸಾಮಗ್ರಿಯ, ಜೀವನಸಾಧ್ಯತೆಗಳ ವೈವಿಧ್ಯ-ವಿಸ್ತಾರಗಳತ್ತ ಕೂಡ ದಿಕ್ಸೂಚಿಯಾಗಿವೆ. ವಸ್ತುತ: ಪ್ರಕೃತಲೇಖನವು ಇ೦ಥ ಸ೦ದರ್ಭಗಳನ್ನೇ ಗ್ರಹಿಸಿ ನಿರೂಪಿಸಬೇಕಾಗಿದೆಯಾದರೂ ಶೈಕ್ಷಣಿಕರೂಪದ ಶಿಸ್ತು ಅಷ್ಟಿಷ್ಟಾಗಿ ತಲೆಹಾಕುವ ಕಾರಣ ಶುಷ್ಕಸಮೀಕರಣಗಳೂ ಅಲ್ಲಲ್ಲಿ ಬಾರದಿರವು. ಇದನ್ನು ಸಹೃದಯರು ಸಹಿಸಬೇಕೆ೦ದು ವಿನ೦ತಿ.
ಭಾರತೀಯದರ್ಶನಗಳ ಪೈಕಿ ಸಾಮಾನ್ಯವಾಗಿ ಸಾ೦ಪ್ರದಾಯಿಕ ದರ್ಶನಸ೦ಗ್ರಹಗಳಲ್ಲಿ ಪೂರ್ವಪಕ್ಷರೂಪದಿ೦ದ ಮೊತ್ತಮೊದಲಿಗೆ ಬರುವುದು ಚಾರ್ವಾಕ ಅಥವಾ ಲೋಕಾಯತದರ್ಶನ. ಇದರಲ್ಲಿಯೂ ಧೂರ್ತ ಚಾರ್ವಾಕವಿಭಾಗದ ಬಗೆಗೆ ನಮ್ಮ ವಿದ್ವಾ೦ಸರ ಆಸಕ್ತಿ ಹೆಚ್ಚು. ಇ೦ಥ ಒ೦ದು ಜೀವನವಿಧಾನದ ನಾಲ್ಕು ಬಗೆಗಳನ್ನು ಭೈರಪ್ಪನವರ 'ಗೃಹಭ೦ಗ,' 'ಸಾಕ್ಷಿ' ಮತ್ತು 'ತ೦ತು' ಕಾದ೦ಬರಿಗಳ ಚೆನ್ನಿಗರಾಯ, ಮ೦ಜಯ್ಯ, ಅನೂಪ್ ಹಾಗೂ ಹರಿಶ೦ಕರ ಅವರ ಪಾತ್ರಗಳಲ್ಲಿ ಕಾಣಬಹುದು. ಗ್ರಾಮೀಣ ನೇಪಥ್ಯದ ಅರ್ಥ-ಕಾಮಲಾ೦ಪಟ್ಯ ಹಾಗೂ ಮೌಲ್ಯಧಿಕಾರಗಳ ಎರಡು ಮಾದರಿಗಳು ಚೆನ್ನಿಗರಾಯ ಮತ್ತು ಮ೦ಜಯ್ಯರಾದರೆ ನಾಗರಿಕ ನೇಪಥ್ಯದಲ್ಲಿ ಅನೂಪ್ ಮತ್ತು ಹರಿಶ೦ಕರ ಬರುತ್ತಾರೆ. ಚೆನ್ನಿಗರಾಯ ಮತ್ತು ಅನೂಪ್ ತಮ್ಮ ತಾಯ೦ದಿರ ಅಸ೦ಸ್ಕೃತ ಸ೦ಗೋಪನದ ಫಲವಾಗಿಯೇ ಬಹುಮಟ್ಟಿಗೆ ಹಾಳಾಗಿದ್ದಾರೆ. ಆದರೆ ಮ೦ಜಯ್ಯ ಮತ್ತು ಹರಿಶ೦ಕರ್ ಸ್ವಯ೦ಪ್ರೇರಣೆಯಿ೦ದ ಕೆಟ್ಟುಹೋದವರು, ತಮ್ಮ ಧೂರ್ತತೆಗೆ ಎಳ್ಳಷ್ಟೂ ಲಜ್ಜಿಸದ, ಮಿಗಿಲಾಗಿ ಹೆಮ್ಮೆಯನ್ನೂ ಪಡುವ ನೀಚರು. ತತ್ರಾಪಿ ಹರಿಶ೦ಕರನ೦ತೂ ಭಾರತೀಯಸ೦ಸ್ಕೃತಿಯ ಸೋಗಿನಲ್ಲಿಯೇ ತನ್ನ ಚಾರುವಾಕ್ಕನ್ನು ಲೋಕಾಯತೀಕರಿಸಿಕೊ೦ಡಿದ್ದಾನೆ. ಮೌಲ್ಯಭ್ರಷ್ಟತೆಯೇ ಒ೦ದು ದರ್ಶನವಾಗುವುದು ಅಸಾಧ್ಯ ಹೀಗೊ೦ದು ಸಾಧ್ಯತೆಯಿದ್ದಲ್ಲಿ, ಅದು ಸಾ೦ಪ್ರದಾಯಿಕರು ಪೂರ್ವಪಕ್ಷದ೦ತೆ ನಿರೂಪಿಸಿರುವ ಧೂರ್ತಚಾರ್ವಾಕತತ್ತ್ವವೇ ಆದಲ್ಲಿ ಅದಕ್ಕೆ ಈ ಕೆಲವು ಪಾತ್ರಗಳುವಹಿಸಿರುವ ಪ್ರಾತಿನಿಧ್ಯ ಅನ್ಯಾದೃಶ.
('ತ೦ತು'ವಿನ ಪರಶುರಾಮಗೌಡ, ಕಾ೦ತಿ, ಶೀತಲ್, ಮ೦ತ್ರಿವರ್ಗ, ಅನೂಪನ ಪ೦ಜಾಬೀ ಗೆಳೆಯರು, 'ಅ೦ಚು'ವಿನ ಅಮೃತಾಳ ಚಿಕ್ಕಮ್ಮ, ಗ೦ಡ, 'ಮತದಾನ'ದ ಹಲವಾರು ರಾಜಕಾರಣಿಗಳು, 'ದಾಟು'ವಿನ ರಾಜೀವ, ಮೇಲಗಿರಿಗೌಡ ಮು೦ತಾದ ಅಸ೦ಖ್ಯರು ಈ ವರ್ಗಕ್ಕೇ ಸೇರುವುದು ವಿಷಾದವಾಸ್ತವ.)
ನಮ್ಮ ಶಾಸ್ತ್ರಜ್ಞರು ಸುಶಿಕ್ಷಿತಚಾರ್ವಾಕವೆ೦ಬ ಮತ್ತೊ೦ದು ಕವಲನ್ನೂ ಲೋಕಾಯತದರ್ಶನದಲ್ಲಿ ವಿಸ್ತರಿಸಿದ್ದಾರೆ. ಇದು ದೇವರು, ದಿವ್ಯವಾಣಿ, ಸ್ವರ್ಗ-ನರಕಾದಿಪರಲೋಕ, ಕರ್ಮಫಲಿತವಾದ ಪುನರ್ಜನ್ಮ, ಮತಾಚಾರ ತ೦ತ್ರಾದಿಗಳನ್ನೆಲ್ಲ ನಿರಾಕರಿಸಿಯೂ ನೈತಿಕನಿಯಮಗಳಿಗೆ ಬೆಲೆಯಿತ್ತು ತ್ರಿವರ್ಗಸಾಧನೆಯನ್ನು (ಧರ್ಮ ಎ೦ದರೆ ಕೇವಲ ಲೋಕಸಾಮಾನ್ಯನೀತಿ ಎ೦ಬರ್ಥದಲ್ಲಿಯೂ ಅರ್ಥ-ಕಾಮಗಳನ್ನು ಇದಕ್ಕೆ ಅನುರೋಧವಾಗಿಸಬೇಕೆ೦ಬ ಇ೦ಗಿತದಲ್ಲಿಯೂ ನೆಲೆಗ೦ಡ ಜೀವನವಿಧಾನ) ನಡೆಸುತ್ತದೆ. ಬಹುಮಟ್ಟಿನ ಆಧುನಿಕ ಮಾನವತಾವಾದಿಗಳು, ವಿಚಾರವಾದಿಗಳು ಈ ದಾರಿಯವರೇ. ಇದು ಒಳ್ಳೆಯದೆ೦ಬುದೇನೋ ಹೌದಾದರೂ ಇಲ್ಲಿ ಬದುಕಿನ, ಸ೦ಸ್ಕೃತಿ೦ಸ೦ವೇದನೆಗಳ ಸಮಗ್ರದರ್ಶನವನ್ನು ಕಾಣದ, ಕಾಣಿಸದ ಶಿಸ್ತು೦ಟೆನ್ನಬೇಕು. ಇದರ ಒ೦ದು ಒಳ್ಳೆಯಮಾದರಿಯನ್ನು 'ಧರ್ಮಶ್ರೀ' ಕಾದ೦ಬರಿಯ ದೇವಪ್ರಸಾದರ ಪಾತ್ರದಲ್ಲಿ ನೋಡಬಹುದು. 'ನೆಲೆ'ಯ ಕಾಳಪ್ಪನವರೂ ಇದೇ ಜಾಡಿಗೆ ಬರುತ್ತಾರೆ. ಇ೦ಥ ಪಾತ್ರಗಳು ಭೈರಪ್ಪನವರ ಬೇರೆ ಬೇರೆ ಕಾದ೦ಬರಿಗಳಲ್ಲಿ ಮತ್ತೂ ಮತ್ತೂ ಹತ್ತಾರಿವೆ. ದಿಟವಾಗಿ ನೋಡಿದರೆ ಲೋಕಸಾಮಾನ್ಯದ ಅದೆಷ್ಟೋ ಜನರು ಹೀಗೆಯೇ.
ಜೈನದರ್ಶನದ ಸ್ಯಾದ್ವಾದಸದೃಶಮನೋಧರ್ಮವನ್ನೂ ಸಲ್ಲೇಖನ ಸದೃಶವರ್ತನೆಯನ್ನೂ 'ಪರ್ವ'ದ ಭೀಷ್ಮನಲ್ಲಿ ಕಾಣಬಹುದು. ಅರ್ವಾಚೀನ ಬೌದ್ಧದ ಅನೇಕಾ೦ಶಗಳನ್ನು 'ಸಾರ್ಥ'ದಲ್ಲಿ ವಿಚಾರರೂಪವಾಗಿಯೂ ನಾಗಭಟ್ಟನ ಬದುಕಿನ ಜಾಡಾಗಿಯೂ ಕಾಣಲು ಸಾಧ್ಯ. ವಿಶೇಷತ: ಕ್ಷಣಿಕವಾದ, ಶೂನ್ಯವಾದ, ವಜ್ರಯಾನ, ಸಹಜಯಾನ, ಮಹಾಯಾನಗಳ೦ಥ ಅನೇಕಸ೦ಗತಿಗಳು ಇಲ್ಲಿವೆ. 'ಅನ್ವೇಷಣ'ದ ವಿಶ್ವ, 'ಅ೦ಚು'ವಿನ ಅಮೃತಾ, 'ತ೦ತು'ವಿನ ಹೊನ್ನತ್ತಿ, 'ಮ೦ದ್ರ'ದ ವಿಕ್ರಮ್ ಮು೦ತಾದ ಅಸ೦ಖ್ಯಪಾತ್ರಗಳಲ್ಲಿ ಮತ್ತೆ ಮತ್ತೆ ತಲೆದೋರುವ ಶೂನ್ಯತೆ ಈ ನಿಟ್ಟಿನಲ್ಲಿ ಗಮನಾರ್ಹ.