ವೀರಕೇಸರಿ ಸೀತಾರಾಮಶಾಸ್ತ್ರೀ
ಸುಮಾರು ಒಂದು ಶತಮಾನಕ್ಕೂ ಮುನ್ನ ಕನ್ನಡನಾಡಿನ ಪತ್ರಿಕೋದ್ಯಮದಲ್ಲಿ ಪ್ರಜ್ವಲಿಸಿದ ನಕ್ಷತ್ರ ಸೀತಾರಾಮಶಾಸ್ತ್ರಿಗಳು. ಇವರು ಹೊರಡಿಸುತ್ತಿದ್ದ ಪತ್ರಿಕೆ ‘ವೀರಕೇಸರಿ’ ಇವರ ಹೆಸರಿನೊಡನೆಯೇ ಸೇರಿಕೊಂಡದ್ದು ಅನ್ವರ್ಥವೆನಿಸಿತು. ಸೀತಾರಾಮಶಾಸ್ತ್ರಿಗಳ ಪತ್ರಿಕೋದ್ಯೋಗ ಹೂವಿನ ಹಾಸಾಗಿರಲಿಲ್ಲ; ಬೆಂಕಿಯ ಕೊಂಡವೇ ಆಗಿತ್ತು. ಇವರ ವ್ಯಕಿತ್ವದ ಚಿತ್ರಣವನ್ನು ಅಂಥ ಒಂದು ಪ್ರಕರಣದಿಂದಲೇ ರಾಮಸ್ವಾಮಿಯವರು ಆರಂಭಿಸಿರುವುದು ತುಂಬ ಉಚಿತವಾಗಿದೆ. ಅದು ಲೋಕಪ್ರಸಿದ್ಧವಾದ ಸುಲ್ತಾನ್‌ಪೇಟೆಯ ಗಣಪತಿ ಗಲಭೆಯನ್ನು ಕುರಿತಿದೆ. ಬಾಲ್ಯದಲ್ಲಿಯೇ ಕಣ್ಣೊಂದನ್ನು ಕಳೆದುಕೊಂಡ ಶಾಸ್ತ್ರಿಗಳು ಆ ಕೊರತೆಯನ್ನು ತಮ್ಮ ಬಹುಶಾಸ್ತ್ರವ್ಯಾಸಂಗದಿಂದ ತುಂಬಿಸಿಕೊಂಡ ಪರಿಯನ್ನು ರಾಮಸ್ವಾಮಿಯವರು ಪರಿಣಾಮಕಾರಿಯಾಗಿ ವರ್ಣಿಸಿದ್ದಾರೆ. ಶಾಸ್ತ್ರಿಗಳ ವಿಸ್ಮಯಾವಹವಾದ ಸ್ಮರಣಶಕ್ತಿಯನ್ನು ಕೂಡ ಪ್ರಸ್ತಾವಿಸಿದ್ದಾರೆ. ಶೃಂಗೇರಿಯ ಶ್ರೀಸಚ್ಚಿದಾನಂದ-ಶಿವಾಭಿನವ-ನೃಸಿಂಹಭಾರತೀಸ್ವಾಮಿಗಳ ನಿಕಟವರ್ತಿಗಳಾಗಿದ್ದ ಶಾಸ್ತ್ರಿಗಳು ಅನೇಕ ಕಾವ್ಯ-ಶಾಸ್ತ್ರಗ್ರಂಥಗಳನ್ನು ವಾಚೋವಿಧೇಯ ಮಾಡಿಕೊಂಡಿದ್ದರಂತೆ. ಯಾರು ಯಾವ ಶ್ಲೋಕವನ್ನು ಉದಾಹರಿಸಿದರೂ ಅದರ ಮೂಲವನ್ನು ಥಟ್ಟನೆ ಗುರುತಿಸುತ್ತಿದ್ದರಂತೆ. ಕೆಲವೊಮ್ಮೆ ಸ್ವಾಮಿಗಳೋ ಇನ್ನಿತರ ಪಂಡಿತರೋ ವಿನೋದಕ್ಕಾಗಿ ತಾವೇ ಶ್ಲೋಕವೊಂದನ್ನು ರಚಿಸಿ ಪ್ರಶ್ನಿಸಿದಾಗ ಅದು ಯಾವ ಗ್ರಂಥದಲ್ಲಿಯೂ ಇಲ್ಲವೆಂದು ಹೇಳುವ ಧೈರ್ಯವನ್ನು ಶಾಸ್ತ್ರಿಗಳು ಎಳವೆಯಲ್ಲಿಯೇ ಮೈಗೂಡಿಸಿಕೊಂಡಿದ್ದರಂತೆ. ಇಂಥ ವಿವರಗಳು ಸೀತಾರಾಮಶಾಸ್ತ್ರಿಗಳ ವೈದುಷ್ಯ ಮತ್ತು ವ್ಯಕ್ತಿತ್ವಗಳನ್ನು ಅರಿಯಲು ನಮಗೆ ಮುಖ್ಯವೆನಿಸುತ್ತವೆ. ಇದು ದಕ್ಕಿರುವುದು ರಾಮಸ್ವಾಮಿಗಳ ಲೇಖನಿಯ ಮೂಲಕ.
ರಾಮಸ್ವಾಮಿಯವರು ಗಣಪತಿ ಗಲಭೆಯ ವಿವರಗಳನ್ನು ಕೊಡುವಾಗಲೇ ಶಾಸ್ತ್ರಿಗಳ ಭಾಷಾಶೈಲಿಯನ್ನೂ ಪರಿಚಯಿಸಿದ್ದಾರೆ. ಈ ಒಂದು ತಗಾದೆಯಲ್ಲಷ್ಟೇ ಅಲ್ಲದೆ ಮತ್ತೆಷ್ಟೋ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘರ್ಷಗಳಲ್ಲಿ ಕೂಡ ಶಾಸ್ತ್ರಿಗಳು ಬಿರುಸಾಗಿ ತೊಡಗಿಕೊಂಡವರು. ಇದಕ್ಕೆ ಉದಾರಹಣೆಯಾಗಿ ಬಾಲ್ಯವಿವಾಹವನ್ನು ನಿಷೇಧಿಸುವ ‘ಶಾರದಾ ಆ್ಯಕ್ಟ್’ ಮಸೂದೆಯ ಸುತ್ತಮುತ್ತ ನಡೆದ ಚರ್ಚೆಯನ್ನು ಪ್ರಸ್ತಾವಿಸಿದ್ದಾರೆ. ಇದರ ಪರವಾಗಿ ಆರ್ಯಸಮಾಜದ ಧರ್ಮದೇವ ವಿದ್ಯಾವಾಚಸ್ಪತಿ ಮತ್ತು ವಿರೋಧವಾಗಿ ಶಾಸ್ತ್ರಿಗಳು ಸಂಸ್ಕೃತದಲ್ಲಿ ವಾದ-ಪ್ರತಿವಾದಗಳನ್ನು ಮಾಡಿದರಂತೆ. ಇದು ನಡೆದದ್ದು ೧೯೩೧ರ ಸೆಪ್ಟೆಂಬರ್ ೨೪ರ ಸಂಜೆ, ಬೆಂಗಳೂರಿನ ಶಂಕರಮಠದಲ್ಲಿ. ಇದು ನಿಜಕ್ಕೂ ಐತಿಹಾಸಿಕವಾದ ಚರ್ಚೆ. ಇದರ ವಿವರಗಳನ್ನೆಲ್ಲ ರಾಮಸ್ವಾಮಿಯವರು ನೀಡಿದ್ದಾರೆ. ಮಾತ್ರವಲ್ಲ, ಈ ಚರ್ಚೆಯ ವ್ಯಾಪಕವಾದ ಸಾಧಕ-ಬಾಧಕಗಳನ್ನೂ ಸೂಚಿಸಿದ್ದಾರೆ. ಇಂಥ ವಿಶಾಲ ದೃಷ್ಟಿಯ ನಿರೂಪಣೆ ಮತ್ತೊಬ್ಬರಿಂದ ಸಾಧ್ಯವಾಗುವಂಥದ್ದಲ್ಲ.
ಇದೇ ತೆರನಾದುದು ರಾಹುಲ ಸಾಂಕೃತ್ಯಾಯನರ ಅಭಿಪ್ರಾಯವನ್ನು ಶಾಸ್ತ್ರಿಗಳು ಪ್ರತಿರೋಧಿಸಿದ ಪರಿ. ಪರಿವ್ರಾಜಕರಾಗಿದ್ದ ಸಾಂಕೃತ್ಯಾಯನರು ಬೆಂಗಳೂರಿಗೆ ಬಂದಿದ್ದಾಗ ಶಾಸ್ತ್ರಿಗಳನ್ನು ಕಂಡಿದ್ದರು. ಆಗ ಮಾತಿನ ನಡುವೆ ಉತ್ತರಭಾರತೀಯರ ವೇದೋಚ್ಚಾರಣೆಯೇ ಸರಿಯಾದುದೆಂದು ಅವರು ಹೇಳಿದರಂತೆ. ಇದನ್ನು ವಿರೋಧಿಸಿದ ಶಾಸ್ತ್ರಿಗಳು ಎರಡು-ಮೂರು ದಿನಗಳಲ್ಲಿಯೇ ಬೇರೆ ಬೇರೆ ಊರುಗಳಲ್ಲಿದ್ದ ನಾಲ್ಕೈದು ಜನ ಘನಪಾಠಿಗಳನ್ನು ಕರೆಯಿಸಿ ಅವರ ಮೂಲಕ ದಕ್ಷಿಣಭಾರತದ ವೇದೋಚ್ಚಾರಕ್ರಮವನ್ನು ತಿಳಿಸಿಕೊಟ್ಟರಂತೆ. ಹೀಗೆ ನಾಲ್ಕೂ ವೇದಗಳ ಅದ್ಭುತವಾದ ಘೋಷವನ್ನು ಆಲಿಸಿದ ಬಳಿಕ ಸಾಂಸ್ಕೃತ್ಯಾಯನರಿಗೆ ತಮ್ಮ ಅಭಿಪ್ರಾಯವನ್ನು ಪುನರ್ವಿಮರ್ಶಿಸುವ ಅನಿವಾರ್ಯತೆ ಎದುರಾಯಿತಂತೆ. ಇದು ರಾಹುಲರನ್ನು ಕುರಿತು ಬಂದ ಮತ್ತಾವುದೇ ಬರೆಹದಲ್ಲಿ ದಾಖಲೆಗೊಂಡಿಲ್ಲದ ಪ್ರಕರಣ. ಇದಕ್ಕೆ ಐತಿಹಾಸಿಕವಾದ ಮಹತ್ತ್ವವೂ ಇದೆ. ಯಾರನ್ನೂ ಸುಲಭಕ್ಕೆ ಒಪ್ಪದ, ಯಾವುದನ್ನೂ ಖಂಡಿಸಲು ಹಿಂಜರಿಯದ ಸಾಂಕೃತ್ಯಾಯನರಿಗೆ ಮಹಾಪಂಡಿತ ಎಂಬ ಬಿರುದನ್ನು ಕಾಶಿಯ ವಿದ್ವಾಂಸರು ಕೊಟ್ಟಿದ್ದರು. ಇಂಥ ಪ್ರಗಲ್ಭರು ಬೆಂಗಳೂರಿನಿಂದ ಹೊರಡುವಾಗ ರೈಲು ನಿಲ್ದಾಣದಲ್ಲಿ ತಮ್ಮನ್ನು ಬೀಳ್ಕೊಡಲು ಬಂದ ಆತ್ಮೀಯರಿಗೆ ಹೇಳಿದರಂತೆ: “ನಾನು ನನ್ನ ದೀರ್ಘ ಪರ್ಯಟನೆಯಲ್ಲಿ ಅಸಂಖ್ಯ ವಿದ್ವಾಂಸರನ್ನು ನೋಡಿರುವೆ. ಆದರೆ ವೀರಕೇಸರಿ ಶಾಸ್ತ್ರಿಗಳಷ್ಟು ಆಳರಾದ ವ್ಯುಯತ್ಪನ್ನರನ್ನೂ analytical mind ಇರುವವರನ್ನೂ ಬೇರೆಲ್ಲಿಯೂ ನಾನು ಕಂಡಿಲ್ಲ.”[1]
ಇದ್ದ ಒಂದೇ ಕಣ್ಣಿನ ಪಾಟವವೂ ನಷ್ಟವಾದ ಬಳಿಕ ಕೂಡ ಸೀತಾರಾಮಶಾಸ್ತ್ರಿಗಳು ಓದು-ಬರೆಹಗಳನ್ನು ನಿಲ್ಲಿಸಲಿಲ್ಲ; ಸಾರ್ವಜನಿಕ ಕಾರ್ಯಗಳನ್ನು ಸಾಕುಮಾಡಿಕೊಳ್ಳಲಿಲ್ಲ. ಕೇವಲ ಕೇಳ್ಮೆ ಮತ್ತು ನೆನಪುಗಳ ಬಲದಿಂದಲೇ ಹಲವು ಕಾದಂಬರಿಗಳನ್ನು ಉಕ್ತಲೇಖನದ ರೂಪದಲ್ಲಿ ರಚಿಸಿದರು; ಹತ್ತಾರು ಪ್ರಕಲ್ಪಗಳಲ್ಲಿ ತೊಡಗಿಕೊಂಡರು. ತಮ್ಮದೊಂದು ಶಾಸ್ತ್ರಗ್ರಂಥವನ್ನು ಮತ್ತೊಬ್ಬ ವಿದ್ವಾಂಸರು ಅವರದೇ ಹೆಸರಿನಲ್ಲಿ ಪ್ರಕಟಿಸಿಕೊಂಡಾಗಲೂ ಬೇಸರಿಸಲಿಲ್ಲ. ಅಷ್ಟೇಕೆ, ಒಂದು ಆಕಸ್ಮಿಕದಲ್ಲಿ ಹಿರಿಯ ಮಗ ಮತ್ತವರ ಕುಟುಂಬ ಅಳಿದಾಗಲೂ ಎದೆಗುಂದಲಿಲ್ಲ.
ಧೀರತೆ, ನಿರುದ್ವಿಗ್ನತೆ ಮತ್ತು ಮೌಲ್ಯನಿಷ್ಠೆಗಳು ಅವರ ಶ್ವಾಸೋಚ್ಛ್ವಾಸಗಳಾಗಿದ್ದುವು. ಶಾಸ್ತ್ರಿಗಳ ವ್ಯಕ್ತಿತ್ವವನ್ನು ಕುರಿತು ರಾಮಸ್ವಾಮಿಯವರು ಹೀಗೆ ಉಪಸಂಹಾರ ಮಾಡುತ್ತಾರೆ: “ಶಾಸ್ತ್ರಿಗಳಲ್ಲಿ ನಾನು ಮೆಚ್ಚಿಕೊಂಡಿದ್ದ ಒಂದು ಮುಖ್ಯಗುಣ ಅನುದ್ವೇಗ. ಪ್ರತಿಕಕ್ಷಿಯು ಎಷ್ಟೋ ಆವೇಶಭರಿತವಾಗಿ ಮಾತನಾಡಿದರೂ ತಮ್ಮ ಮನಸ್ಸಮತೆಯನ್ನು ಅವರು ಕೆಡಿಸಿಕೊಳ್ಳುತ್ತಿರಲಿಲ್ಲ. ಪ್ರತಿಕಕ್ಷಿಯು ಹೇಳಿದ ವಾದದ ಸಾರಭಾಗ ಯಾವುದೋ ಅದನ್ನು ಮಾತ್ರ ಪ್ರತ್ಯೇಕಿಸಿ ‘ನೀವು ಹೇಳಿದ್ದರಲ್ಲಿ ಮೂರು ಅಂಶ ಅಡಗಿದೆ. ಆ ಮೂರಕ್ಕೆ ನನ್ನ ಸಮಾಧಾನವನ್ನು ಈಗ ಕೊಡುತ್ತೇನೆ. ಮೊದಲನೆಯದಾಗಿ...’ ಹೀಗೆ categorical ಆಗಿ ತರ್ಕ ನಡೆಸುತ್ತಿದ್ದರು. ಶಾಸ್ತ್ರಿಗಳು ಬಾಲ್ಯದಶೆಯಲ್ಲಿ ವ್ಯಾಸಂಗ ಮಾಡಿದ್ದೇ ತರ್ಕ ಮತ್ತು ಮೀಮಾಂಸಾ ಶಾಸ್ತ್ರಗಳನ್ನು.”[2]
* * *
ಎಸ್. ಶ್ರೀಕಂಠಶಾಸ್ತ್ರೀ; ಮೋಟಗಾನಹಳ್ಳಿ ಪಂಡಿತಸಂಕುಲ
ಸುಪ್ರಸಿದ್ಧ ಇತಿಹಾಸಜ್ಞ ಮತ್ತು ಬಹುವಿದ್ಯಾಕೋವಿದ ಎಸ್. ಶ್ರೀಕಂಠಶಾಸ್ತ್ರಿಗಳು ರಾಮಸ್ವಾಮಿಯವರ ದೊಡ್ಡಪ್ಪನವರು. ಇನ್ನು ಮೋಟಗಾನಹಳ್ಳಿಯ ಪರಂಪರೆಯಂತೂ ಇವರ ಹತ್ತಿರದ ಬಂಧುವರ್ಗಕ್ಕೆ ಸೇರಿದೆ. ಹೀಗಾಗಿ ಈ ಬರೆಹದಲ್ಲಿರುವ ಎಷ್ಟೋ ವಿಷಯಗಳು ರಾಮಸ್ವಾಮಿಯವರ ನೆಲೆ-ಹಿನ್ನೆಲೆಗಳನ್ನು ತಿಳಿಯಲು ಉಪಯೋಗಿಯಾಗಿವೆ. ಮಾತ್ರವಲ್ಲ, ನಮ್ಮ ನಾಡಿನ ಸಾಹಿತ್ಯಕ-ಸಾಂಸ್ಕೃತಿಕ ಇತಿಹಾಸವನ್ನು ರಚಿಸುವವರಿಗೆ ಬೇಕಾದ ಎಷ್ಟೋ ಅಮೂಲ್ಯ ಮಾಹಿತಿಯನ್ನು ಒಳಗೊಂಡಿವೆ. ಸ್ವಭಾವದಿಂದ ಅಂತರ್ಮುಖರೂ ಮಿತಭಾಷಿಗಳೂ ಆದ ಶ್ರೀಕಂಠಶಾಸ್ತ್ರಿಗಳು ತಮ್ಮ ಸತ್ಯನಿಷ್ಠುರವಾದ ಅಭಿವ್ಯಕ್ತಿಗೆ ಹೆಸರಾದವರು. ಅವರು ನಿತ್ಯವ್ಯಾಸಂಗಿಯೂ ಆದ ಕಾರಣ ರೋಚಕವಾದ ಸಂದರ್ಭಗಳಿಗೂ ಸ್ವರಸಸಂವಾದಗಳಿಗೂ ಇವರ ಬದುಕಿನಲ್ಲಿ ಹೆಚ್ಚಿನ ಎಡೆ ಇರಲಾರದು. ಪ್ರಾಯಃ ಇದನ್ನು ಬಲ್ಲವರಾದುದರಿಂದಲೇ ರಾಮಸ್ವಾಮಿಯವರು ಶ್ರೀಕಂಠಶಾಸ್ತ್ರಿಗಳ ವ್ಯಕಿತ್ವವನ್ನು ಚಿತ್ರಿಸುವಾಗ ಅವರ ಮಾತೃಕುಲಕ್ಕೆ ಸೇರಿದ ಮೋಟಗಾನಹಳ್ಳಿಯ ಪಂಡಿತರ ಪರಂಪರೆಯನ್ನು ಕುರಿತೂ ಇಲ್ಲಿ ವಿಪುಲವಾಗಿ ಬರೆದಿದ್ದಾರೆ. ಇದು ಸೊಗಸಾಗಿದೆ, ಔಚಿತ್ಯಪೂರ್ಣವೆನಿಸಿದೆ. ಈ ಪುಸ್ತಕದಲ್ಲಿ ಮತ್ತಾರ ಚಿತ್ರಣವೂ ಇಂಥ ವೈಚಿತ್ರ್ಯವನ್ನು ಹೊಂದದಿರುವುದು ಕೂಡ ಪ್ರಸ್ತುತ ನಿಗಮನಕ್ಕೆ ಪೂರಕವಾಗಿದೆ.
ರಾಮಸ್ವಾಮಿಯವರು ಶ್ರೀಕಂಠಶಾಸ್ತ್ರಿಗಳನ್ನು ನಮಗೆ ಪರಿಚಯಿಸುವುದೇ ಅವರು ‘ಆರ್ಯ ಆಕ್ರಮಣ’ ವಾದಾಭಾಸಕ್ಕೆ ನೀಡಿದ ತೀಕ್ಷ್ಣ ಖಂಡನೆಯ ಮೂಲಕ. ಇದು ಶಾಸ್ತ್ರಿಗಳ ಸಮಗ್ರ ವ್ಯಕ್ತಿತ್ವ ಮತ್ತು ವಿದ್ವತ್ತ್ವಗಳ ಮೇಲೆ ಬೆಳಕು ಚೆಲ್ಲಬಲ್ಲ ಅಂಶ. “ಪರೀಕ್ಷೆಯಲ್ಲಿ ಮಾರ್ಕುಗಳನ್ನು ಪಡೆಯುವುದಕ್ಕಾಗಿ ಪಠ್ಯಪುಸ್ತಕದಲ್ಲಿರುವಂತೆ ಉತ್ತರ ಬರೆಯಿರಿ. ಆದರೆ ‘ಆರ್ಯರು ಹೊರಗಿನಿಂದ ಬಂದವರು’ ಎಂಬ ವಾದವನ್ನು ನೀವು ನಂಬಬೇಡಿ. ಆರ್ಯರು ಈ ದೇಶದ ಮೂಲಸ್ಥರು ಎಂಬುದೇ ತಥ್ಯ”[3] ಎಂದು ಪಾಠ ಮಾಡಿದ ಧೀಮಂತಿಕೆ ಶಾಸ್ತ್ರಿಗಳದಾಗಿತ್ತು.
ಶಾಸ್ತ್ರಿಗಳ ಬಹುಭಾಷೆಗಳ, ಬಹುಶಾಸ್ತ್ರಗಳ ಪರಿಣತಿಯನ್ನು ವಿಶದೀಕರಿಸುವ ರಾಮಸ್ವಾಮಿಯವರು ಅವರಿಗಿದ್ದ ಸಮಕಾಲೀನ ಸಂವೇದನೆಯನ್ನೂ ಸಾಧಾರವಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಇತಿಹಾಸಜ್ಞರು ಭೂತಕಾಲದಲ್ಲಿ ಕಳೆದುಹೋಗುವುದು ದೃಷ್ಟಚರ. ಶಾಸ್ತ್ರಿಗಳು ಇದಕ್ಕೆ ಪ್ರಖರವಾದ ಅಪವಾದ. ಅಧ್ಯಯನ ಮತ್ತು ಲೇಖನಗಳನ್ನು ಬಾಲ್ಯದಿಂದಲೇ ಇವರು ಮೈಗೂಡಿಸಿಕೊಂಡ ಕಾರಣ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ಪ್ರತಿಷ್ಠಿತ ವಿದ್ವತ್ಪತ್ರಿಕೆಗಳಲ್ಲಿ ಇವರ ಶೋಧಪ್ರಬಂಧಗಳು ಪ್ರಕಟವಾಗಿದ್ದುವು. ತಮ್ಮ ಸೋದರಮಾವ ರಾಮಶೇಷಶಾಸ್ತ್ರಿಗಳು ಕನ್ನಡಕ್ಕೆ ತಂದ ‘ಶ್ರೀಮದ್ಭಾಗವತ’, ‘ಮುದ್ರಾರಾಕ್ಷಸ’ ಮತ್ತು ‘ಮುಕುಂದಾನಂದಭಾಣ’ ಎಂಬ ಕೃತಿಗಳಿಗೆ ವಿವಿಧ ಶಾಸ್ತ್ರಗಳ ಹಿನ್ನೆಲೆಯಲ್ಲಿ ಸಂಶೋಧನಾತ್ಮಕವಾದ ವಿಸ್ತೃತ ಪೀಠಿಕೆಗಳನ್ನು ಬರೆದಿದ್ದರು. ಇಂಥ ಅಕುಂಠಿತ ದೀಕ್ಷೆಯ ಕಾರಣದಿಂದಲೇ ತಮ್ಮ ಪ್ರಮುಖ ಗ್ರಂಥ ‘Sources of Karnataka History’ ಪ್ರಕಟನದ ಹಂತದಲ್ಲಿ ಕಳೆದುಹೋದಾಗ ಎರಡು ಬಾರಿ ಮತ್ತೆ ಸಜ್ಜುಮಾಡಿ ಕೊಟ್ಟಿದ್ದರು. ಈ ಎಲ್ಲ ವಿಷಯಗಳನ್ನು ರಾಮಸ್ವಾಮಿಯವರು ತಮ್ಮ ಲೇಖನದ ಹೂರಣಕ್ಕೆ ಹದವರಿತು ಬಳಸಿಕೊಂಡಿದ್ದಾರೆ. ಈ ಮೂಲಕ ಇಂಥ ವಿದ್ವಾಂಸರ ವ್ಯಕ್ತಿತ್ವ ದಿಟವಾಗಿ ಅವರ ಕೃತಿತ್ವವೇ ಆಗಿದೆಯೆಂದು ಧ್ವನಿತವಾಗುತ್ತದೆ.
ಶಾಸ್ತ್ರಿಗಳ ತವರೂರು ನೆಲಮಂಗಲದ ಹತ್ತಿರದ ಸೊಂಡೇಕೊಪ್ಪ. ಅಲ್ಲಿದ್ದ ಅವರ ಪೂರ್ವಜರನ್ನು ಹತ್ತಾರು ತಲೆಮಾರುಗಳ ಕಾಲದಷ್ಟು ಹಿಂದಿನಿಂದ ನಮಗೆ ಪರಿಚಯಿಸಿಕೊಡುವ ರಾಮಸ್ವಾಮಿ ಇಡಿಯ ವಂಶವೃಕ್ಷವನ್ನೇ ನಮ್ಮೆದುರು ಹರಡಿದ್ದಾರೆ ಎಂದರೆ ಅತಿಶಯವಲ್ಲ. ಲೇಖನದ ಈ ಭಾಗ ನಮ್ಮ ಸಾಹಿತ್ಯಚರಿತ್ರೆ, ಇತಿಹಾಸ, ಗೆಜೆ಼ಟಿಯರ್ ಮುಂತಾದ ಅಧಿಕೃತ ಬರೆಹಗಳಿಗೆ ಸಲ್ಲಬಲ್ಲ ಅಪೂರ್ವ ಮಾಹಿತಿಗಳನ್ನು ಒಳಗೊಂಡಿದೆ. ಇದು ಬರಿಯ ಮಾಹಿತಿಯಷ್ಟೇ ಆಗದೆ ಒಂದು ಯುಗದ ಅದ್ಭುತವಾದ ಜೀವನಪದ್ಧತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗಳ ನಿದರ್ಶನವೂ ಆಗಿದೆ. ಈ ಭಾಗವನ್ನೇ ಒಂದು ಸಂಶೋಧನಲೇಖನದ ಮಿಡಿ ಎನ್ನಬಹುದು.
ಇಲ್ಲಿಂದ ಮುಂದಕ್ಕೆ ರಾಮಸ್ವಾಮಿಯವರು ಮೋಟಗಾನಹಳ್ಳಿ ಮತ್ತು ಸೊಂಡೇಕೊಪ್ಪಗಳೆರಡರ ಪಂಡಿತಕುಟುಂಬಗಳು ನಡಸಿದ ಸಾರಸ್ವತ ವ್ಯವಸಾಯವನ್ನು ಅನೇಕ ರೋಚಕ ಉಲ್ಲೇಖಗಳೊಡನೆ ನಿರೂಪಿಸಿದ್ದಾರೆ. ಈ ಭಾಗವಂತೂ ಡಿ.ವಿ.ಜಿ. ಅವರ ‘ಜ್ಞಾಪಕಚಿತ್ರಶಾಲೆ’ಯ ಐದನೆಯ ಸಂಪುಟದಲ್ಲಿ (‘ವೈದಿಕಧರ್ಮ ಸಂಪ್ರದಾಯಸ್ಥರು’) ಬರುವ ಮೋಟಗಾನಹಳ್ಳಿ ಶಂಕರಶಾಸ್ತ್ರಿಗಳು, ಮಹಾದೇವಶಾಸ್ತ್ರಿಗಳು ಮತ್ತು ರಾಮಶೇಷಶಾಸ್ತ್ರಿಗಳನ್ನು ಕುರಿತ ಲೇಖನಗಳಿಗೆ ಅನುಬಂಧವಾಗಿ ಸಲ್ಲುತ್ತದೆ. ಮೋಟಗಾನಹಳ್ಳಿ ಮಹಾದೇವಶಾಸ್ತ್ರಿಗಳು ಶೃಂಗೇರಿಯ ಶ್ರೀಗಳನ್ನು ಕುರಿತು ರಚಿಸಿದ ಪದ್ಯವಾಗಲಿ, ಶಂಕರಶಾಸ್ತ್ರಿಗಳ ಪದ್ಯರಚನಾಕೌಶಲ ಮತ್ತು ‘ಇಂದ್ರಸಭಾ’, ‘ಮಂದಾರೋಜ್ಜ್ವಲಾಪರಿಣಯ’, ‘ಪಾಂಡವವಿಜಯ’ ಮೊದಲಾದ ರೂಪಕಗಳ ಹಾಡು-ಹಸೆಗಳ ವಿವರಗಳಾಗಲಿ, ಸುಬ್ರಹ್ಮಣ್ಯಶಾಸ್ತ್ರಿಗಳ ಸಾಹಿತ್ಯಪರಿಶ್ರಮವಾಗಲಿ ತುಂಬ ಅಧಿಕೃತವಾಗಿ ಹವಣುಗೊಂಡಿವೆ. ಸುಬ್ರಹ್ಮಣ್ಯಶಾಸ್ತ್ರಿಗಳನ್ನು ಕುರಿತು ರಾಮಸ್ವಾಮಿಯವರು ಪ್ರತ್ಯೇಕ ಪುಸ್ತಿಕೆಯನ್ನೇ ಬರೆದಿದ್ದಾರೆ.
ಶ್ರೀಕಂಠಶಾಸ್ತ್ರಿಗಳು ತಮ್ಮ ಕಣ್ಣು-ಕಿವಿಗಳ ಸಾಮರ್ಥ್ಯಕ್ಕೆ ತುಂಬ ಎರವಾಗಿದ್ದರೂ ಅಪಾರವಾದ ವ್ಯಾಸಂಗವನ್ನು ಮಾಡಿದ ಸಂಗತಿ ಎಂಥವರಿಗೂ ಸ್ಫೂರ್ತಿ ನೀಡುತ್ತದೆ. ಅದೊಂದು ಅನೌಪಚಾರಿಕ ಸಂಭಾಷಣೆಯ ಹೊತ್ತಿನಲ್ಲಿ ರಾಮಸ್ವಾಮಿಯವರು ನನಗೆ ಹೇಳಿದ್ದರು: “ನಮ್ಮ ದೊಡ್ಡಪ್ಪನ ಪಕ್ಕ ಮದ್ದಾನೆ ಬಂದು ನಿಂತು ಘೀಳಿಟ್ಟರೂ ಅದು ಅವರಿಗೆ ಕಾಣುತ್ತಲೂ ಇರಲಿಲ್ಲ, ಅದರ ಬ್ರೂಂಕಾರ ಕೇಳುತ್ತಲೂ ಇರಲಿಲ್ಲ!” ಇಂಥ ಪರಿಸ್ಥಿತಿಯಲ್ಲಿಯೂ ಶಾಸ್ತ್ರಿಗಳು ತಮ್ಮ ಆಸಕ್ತಿಯ ವಿಷಯಗಳಿಗೆ ತೆರೆದ ಕಿವಿಯಾಗುತ್ತಿದ್ದರು. ಖ್ಯಾತ ವಿದ್ವಾಂಸ ಅಂಬಳೆ ವೆಂಕಟಸುಬ್ಬಯ್ಯನವರ ಶ್ರವಣಶಕ್ತಿಯೂ ಬಹು ದುರ್ಬಲ. ಆದರೆ ಇವರು ಇಬ್ಬರೂ ಒಟ್ಟು ಸೇರಿದಾಗ ಗಂಟೆಗಟ್ಟಲೆ ವೇದಾರ್ಥಮೀಮಾಂಸೆ ನಡಸುತ್ತಿದ್ದರಂತೆ. ಇಂಥ ಸ್ವಾರಸ್ಯಗಳೆಲ್ಲ ನಮಗೆ ಈಗ ಲಭ್ಯವಾಗಿರುವುದು ರಾಮಸ್ವಾಮಿಗಳ ಆಸ್ಥೆಯ ಕಾರಣದಿಂದ. ಇವರಿಂದಾಗಿಯೇ ಶಾಸ್ತ್ರಿಗಳು ಬರೆದು ಪ್ರಕಟಿಸಿಲ್ಲದ ಹಲವು ಕೃತಿಗಳ ಪಟ್ಟಿ ದೊರೆತಿದೆ. ತೈತ್ತಿರೀಯಬ್ರಾಹ್ಮಣ, ತೈತ್ತಿರೀಯ ಆರಣ್ಯಕ ಮತ್ತು ಇದೇ ಶಾಖೆಗೆ ಸೇರಿದ ಕಲ್ಪಸೂತ್ರಗಳ ಇಂಗ್ಲಿಷ್ ಅನುವಾದವನ್ನು ಶಾಸ್ತ್ರಿಗಳು ಸಿದ್ಧಪಡಿಸಿದ್ದರಂತೆ. ವಿಮುಕ್ತಾತ್ಮರ ಗಡುಚಾದ ಗ್ರಂಥ ‘ಇಷ್ಟಸಿದ್ಧಿ’ಯನ್ನೂ ಇಂಗ್ಲಿಷಿಗೆ ತಂದಿದ್ದರಂತೆ. ಡಿಕೆನ್ಸನ ‘ಎ ಟೇಲ್ ಆಫ್ ಟೂ ಸಿಟೀಸ್’ ಕಾದಂಬರಿಯ ಕನ್ನಡಾನುವಾದ ಮಾಡಿ ಗೆಳೆಯೊಬ್ಬರಿಗೆ ಪ್ರಕಟನೆಗೆ ಕೊಟ್ಟು ಕಳೆದುಕೊಂಡಿದ್ದರಂತೆ. ಇಂಥವು ಮತ್ತೂ ಹತ್ತಾರು. ಇದನ್ನೆಲ್ಲ ಪರಿಭಾವಿಸಿದಾಗ ನಮ್ಮ ಸಮಾಜ ಶಾಸ್ತ್ರಿಗಳಂಥ ಅಪ್ಪಟ ವಿದ್ವಾಂಸರ ವಿಷಯದಲ್ಲಿ ಎಂಥ ಉಪೇಕ್ಷೆ ತೋರಿತೆಂಬ ಖೇದ ಉಂಟಾಗದಿರದು.
ಉಪಲಬ್ಧವಿರುವ ಶಾಸ್ತ್ರಿಗಳ ಬರೆವಣಿಗೆಯ ಹಿರಿಮೆ-ಗರಿಮೆಗಳು ಸ್ವಲ್ಪದ್ದೇನಲ್ಲ. ‘ಶ್ರೀಕಂಠೇಶ್ವರಶತಕ’ದಂಥ ಹಳಗನ್ನಡದ ವೃತ್ತಗಳಿಂದ ಮೊದಲ್ಗೊಂಡು ‘ಪುರಾತತ್ತ್ವಶೋಧನೆ’, ‘ಹೊಯ್ಸಳ ವಾಸ್ತುಶಿಲ್ಪ’, ‘ಭಾರತೀಯ ಸಂಸ್ಕೃತಿ’, ‘Sources of Karnataka History’ ಮೊದಲಾದ ಕೃತಿಗಳ ಮೌಲ್ಯ ಬಲು ಮಿಗಿಲು. ಅವರ ದೇಹಾಂತ್ಯದ ಬಳಿಕ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ಬರೆದ ಶೋಧಲೇಖನಗಳು ಒಂದೆಡೆ ದಕ್ಕುವಂತಾದುದು ನಮ್ಮ ಭಾಗ್ಯ - ‘ಸಂಶೋಧನ ಲೇಖನಗಳು’ ಮತ್ತು ಎರಡು ಸಂಪುಟಗಳ ‘ಶ್ರೀಕಂಠಯಾನ’. ಇವುಗಳ ಪ್ರಕಾಶನದಲ್ಲಿ ಕೂಡ ರಾಮಸ್ವಾಮಿಯವರ ಸೇವೆ ಸಂದಿರುವುದರಲ್ಲಿ ಸಂದೇಹವಿಲ್ಲ.
* * *
ಎನ್. ಚೆನ್ನಕೇಶವಯ್ಯ
ಗಾನಕಲಾಸಿಂಧು ಚೆನ್ನಕೇಶವಯ್ಯನವರು ಪ್ರಸಿದ್ಧ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಶಿಷ್ಯಾಗ್ರಣಿ. ಮೈಸೂರುಸಂಗೀತದ ಸುವರ್ಣಯುಗವು ಮುಗಿಯುವ ಹೊತ್ತಿನಲ್ಲಿ ಮಿನುಗಿದ ನಕ್ಷತ್ರ ಇವರು. ಚೆನ್ನಕೇಶವಯ್ಯನವರ ವಿಷಯವನ್ನು ಹೆಚ್ಚಿನವರು ತಿಳಿದಿಲ್ಲ. ಬಹುಶಃ ಈ ಕಾರಣದಿಂದಲೇ ರಾಮಸ್ವಾಮಿಯವರು ಇವರನ್ನು ಅಚ್ಚುಕಟ್ಟಾಗಿ ಪರಿಚಯಿಸುವ ಪ್ರಸ್ತುತ ಲೇಖನವನ್ನು ಬರೆದರೆನಿಸುತ್ತದೆ.
ಚೆನ್ನಕೇಶವಯ್ಯನವರು ಕಿವಿಯ ಮೂಲಕ ಆನಂದವನ್ನು ತುಂಬಿಕೊಡುವ ಗಾನಕಲೆಯಲ್ಲಿ ಅಲ್ಲದೆ ಕಣ್ಣಿನ ಮೂಲಕ ಸಂತೋಷವನ್ನು ಎಟುಕಿಸುವ ಚಿತ್ರಕಲೆಯಲ್ಲಿಯೂ ನುರಿತಿದ್ದ ಸಂಗತಿ ರಾಮಸ್ವಾಮಿಯವರಿಂದಾಗಿಯೇ ತಿಳಿಯುತ್ತಿದೆ. ಇವರು ವಾಸುದೇವಾಚಾರ್ಯರಲ್ಲಿ ಮಾಡಿದ ಸಂಗೀತಸಾಧನೆಯ ವಿವರಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಈ ವಿವರಗಳಲ್ಲಿ ಆ ಕಾಲದ ಕಲಾವಿದರ ಕೆಣಕು-ತಿಣುಕುಗಳ, ಮೆಚ್ಚುಗೆ-ಚುಚ್ಚುಗೆಗಳ ಎಳೆಗಳೂ ಸೂಕ್ಷ್ಮವಾಗಿ ಸೇರಿರುವುದು ಗಮನಾರ್ಹ. ಇಂಥ ಸಂಗತಿಗಳು ಬರೆಹದ ಆಕೃತಿಗೆ ಆಳ-ಅಗಲಗಳನ್ನು ಕೊಡುವುದು ಸುವೇದ್ಯ.
ತಮ್ಮ ಗುರುಗಳ ಕೃತಿಗಳು ಮಾತು-ಧಾತುಗಳೊಡನೆ ಲಿಪಿರೂಪವನ್ನು ತಾಳುವಲ್ಲಿ ಪ್ರಧಾನ ಕಾರಣ ಚೆನ್ನಕೇಶವಯ್ಯನವರೇ. ಏಕೆಂದರೆ ಅಂದಿನ ಎಷ್ಟೋ ಮಂದಿ ಗಾಯಕ-ವಾದಕರಿಗೆ ಸಂಗೀತಲಿಪಿಯ ಪರಿಚಯವೇ ಇರಲಿಲ್ಲ. ಈ ದಾರಿಯಲ್ಲಿ ಮೈಸೂರು ಸದಾಶಿವರಾಯರ, ಮುತ್ತಯ್ಯ ಭಾಗವತರ, ಜಯಚಾಮರಾಜೇಂದ್ರ ಒಡೆಯರ ಕೃತಿಗಳೂ ಮೈದಾಳಲು ಇವರೇ ಕಾರಣ. ಇಂದಿನ ಸಂಗೀತಗಾರರೂ ಸಂಶೋಧಕರೂ ತಿಳಿಯದ ಇಂಥ ಮೌಲಿಕ ಸಂಗತಿಗಳು ರಾಮಸ್ವಾಮಿಯವರಿಂದಾಗಿ ಮಾತ್ರ ಉಳಿದುಬಂದಿವೆ.
ಪ್ರಮುಖ ಹರಿದಾಸರ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಮಾತು-ಧಾತುಗಳೊಡನೆ, ಅರ್ಥಸ್ವಾರಸ್ಯಗಳ ವ್ಯಾಖ್ಯಾನ, ಐತಿಹಾಸಿಕ ಹಿನ್ನೆಲೆ ಮತ್ತು ರಾಗ-ತಾಳಲಕ್ಷಣಗಳೊಡನೆ ಮೊತ್ತಮೊದಲ ಬಾರಿಗೆ ಮೂರು ಸಂಪುಟಗಳಲ್ಲಿ ಹೊರತಂದ ಶ್ರೇಯಸ್ಸು ಚೆನ್ನಕೇಶವಯ್ಯನವರದೇ. ಇದಕ್ಕೆ ಕೇಂದ್ರ ಸಂಗೀತನಾಟಕ ಅಕಾಡೆಮಿಯ ಪ್ರಶಸ್ತಿಯೂ ದೊರಕಿತ್ತಂತೆ.
ಪ್ರಾಯಶಃ ಚೆನ್ನಕೇಶವಯ್ಯನವರಿಗೆ ಡಿ.ವಿ.ಜಿ. ಅವರೊಡನಿದ್ದ ಅನುಬಂಧದ ಕಾರಣದಿಂದಲೇ ರಾಮಸ್ವಾಮಿಯವರಿಗೂ ಅವರ ಪರಿಚಯವಾಗಿರಬಹುದು. ಚೆನ್ನಕೇಶವಯ್ಯನವರು ಡಿ.ವಿ.ಜಿ. ಅವರ ಅಪೇಕ್ಷೆಯ ಮೇರೆಗೆ ‘ಹನುಮದ್ವಿಲಾಸ’ ಕಾವ್ಯವನ್ನು ಸ್ವರಬದ್ಧಗೊಳಿಸಿದ ಅಪೂರ್ವ ಸಂಗತಿ ಈ ಲೇಖನದಲ್ಲಿದೆ. ತಮ್ಮ ಗ್ರಂಥನಿರ್ಮಾಣದ ವೇಳೆಯಲ್ಲಿ ಆಗೀಗ ತಲೆದೋರುತ್ತಿದ್ದ ಸಂದೇಹಗಳನ್ನು ಅವರು ಡಿ.ವಿ.ಜಿ. ಅವರಲ್ಲಿ ಹೇಳಿಕೊಂಡಾಗ ಬಂದ ಉತ್ತರ ಉಲ್ಲೇಖಾರ್ಹವಾಗಿದೆ: “ತುಂಬಾ ಸಂಗ್ರಹವಾಗಿ ಹೇಳಿದರೆ ಅರ್ಥವಾಗುವುದಿಲ್ಲ; ತುಂಬಾ ಲಂಬಿಸಿ ಹೇಳಿದರೆ ಜನ ಓದುವುದಿಲ್ಲ. ಜನರು ಓದುವಂತೆ ಮಾಡಬೇಕಾದರೆ ಬರವಣಿಗೆ ಹೇಗಿರಬೇಕೆಂಬ ಬಗೆಗೆ ನನ್ನ ಮನಸ್ಸು ಡೋಲಾಯಮಾನವಾಗಿದೆ ... ಓದುವವರಿಗೆ ವಿಷಯಸ್ವರೂಪ ಏನೂ ತಿಳಿದಿಲ್ಲವೆಂದು ಭಾವಿಸಿ ನೀವು ಬರೆದರೆ ಉಪಯೋಗವಾದೀತು ... ಸಂಪ್ರದಾಯ ಪಾಂಡಿತ್ಯವೂ ಲಕ್ಷಣಜ್ಞಾನವೂ ಈಗ ಲುಪ್ತವಾಗಿಹೋಗಿದೆ. ನಿಮ್ಮಷ್ಟು ಶಾಸ್ತಾçಧಿಕಾರ ಉಳ್ಳ ಜನ ಈ ಹೊತ್ತು ಇನ್ನೊಬ್ಬರು ಸಿಕ್ಕುವುದಿಲ್ಲ. ಇನ್ನು ಮುಂದೆಯAತೂ ದೇವರೇ ಗತಿ.”[4] ಈ ಮಾತುಗಳ ಹಿನ್ನೆಲೆಯಲ್ಲಿ ಚೆನ್ನಕೇಶವಯ್ಯನವರ ವೈದುಷ್ಯ ಮತ್ತು ಸದ್ಯದ ಕಲಾಜಗತ್ತಿನ ಬಡತನ ನಮಗೆ ಸ್ಪಷ್ಟವಾಗುತ್ತದೆ.
ಇವರ ಜೀವನದರ್ಶನವನ್ನು ರಾಮಸ್ವಾಮಿ ಹೀಗೆ ಸಂಗ್ರಹಿಸಿದ್ದಾರೆ: “ಆದಷ್ಟು ಜ್ಞಾನವನ್ನು ಸಂಗ್ರಹಿಸುವುದು; ಕೇಳಿದವರಿಗೆ ಕೈಲಾದಷ್ಟನ್ನು ದಾನ ಮಾಡುವುದು. ಈ ಎರಡನ್ನು ಬಿಟ್ಟರೆ ನಮಗೆ ಬೇರೆ ಉದ್ಯೋಗ ಏನಿದೆ?”[5] ವಿದ್ವಲ್ಲೋಕದಿಂದ ಇಷ್ಟೆಲ್ಲ ಪ್ರಶಸ್ತಿ-ಪುರಸ್ಕಾರ ದಕ್ಕಿದ್ದರೂ ಅವರಿಗೆ ಅಹನ್ಯಹನಿ ಕಾಲಕ್ಷೇಪ ತಪ್ಪಲಿಲ್ಲ. ಇದರಿಂದ ಅವರು ಕುಗ್ಗಲಿಲ್ಲ, ಜಗ್ಗಲಿಲ್ಲ. ಕಡೆಗಾಲದಲ್ಲಿ ಕಣ್ಣಿನ ಶಕ್ತಿಯೂ ಹಿಂಗಿಹೋಯಿತಂತೆ. ಆದರೆ ಬದುಕೆಲ್ಲ ನಡಸಿದ ಅಧ್ಯಯನ, ಅಧ್ಯಾಪನ ಮತ್ತು ಲೇಖನ ಕಾರ್ಯಗಳೇ ಅವರಿಗೆ ನೆಮ್ಮದಿ ನೀಡಿದ್ದುವು.
* * *
[1] ‘ದೀವಟಿಗೆಗಳು’, ಪು. ೧೭೭
[2] ‘ದೀವಟಿಗೆಗಳು’, ಪು. ೧೭೭
[3] ‘ದೀವಟಿಗೆಗಳು’, ಪು. ೧೮೪
[4] ‘ದೀವಟಿಗೆಗಳು’, ಪು. ೨೧೫, ೨೧೭
[5] ‘ದೀವಟಿಗೆಗಳು’, ಪು. ೨೧೫, ೨೧೮
ನಾಡೋಜ ಎಸ್. ಆರ್. ರಾಮಸ್ವಾಮಿ ಅವರ ಗೌರವಗ್ರಂಥ "ದೀಪಸಾಕ್ಷಿ"ಯಲ್ಲಿ (ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬೆಂಗಳೂರು, ೨೦೨೨) ಪ್ರಕಟವಾದ ಲೇಖನ.
To be continued.