ವಿ. ಸೀತಾರಾಮಯ್ಯ
ರಾಮಸ್ವಾಮಿಯವರಿಗೆ ವಿ.ಸೀ. ಅವರು ನಿಡುಗಾಲದಿಂದ ಬಳಕೆಯಲ್ಲಿದ್ದ ಸಾಹಿತೀಮೂರ್ತಿ. ಮೈಯೆಲ್ಲ ಹೃದಯವೇ ಆಗಿರುವ ವ್ಯಕ್ತಿ ವಿ. ಸೀತಾರಾಮಯ್ಯನವರೆಂಬ ಮಾತೊಂದರಿಂದಲೇ ಇವರ ಪರಿಚಯಕ್ಕೆ ತೊಡಗುತ್ತಾರೆ. ರುಚಿ ಮತ್ತು ರಸಿಕತೆಗಳಿಗೆ ವಿ.ಸೀ. ಪರ್ಯಾಶಬ್ದದಂತೆ ಇದ್ದವರು. ಅವರ ಪ್ರಕೃತಿಪ್ರೇಮ, ಭೋಜನರಸಿಕತೆ, ಉಡುಗೆ-ತೊಡುಗೆಗಳ ಒಪ್ಪ-ಓರಣ, ಪುಸ್ತಕಮುದ್ರಣದಲ್ಲಿ ಅವರಿಗಿದ್ದ ಅಚ್ಚುಕಟ್ಟುತನ ಹಾಗೂ ನಚ್ಚು-ನಸನಸೆ ಮುಂತಾದ ಅವೆಷ್ಟೋ ರೋಚಕ ಸಂಗತಿಗಳನ್ನು ರಾಮಸ್ವಾಮಿಗಳು ಆಕರ್ಷಕವಾಗಿ ನಿರೂಪಿಸುತ್ತಾರೆ. ಇವಷ್ಟೇ ಅವರ ವ್ಯಕ್ತಿತ್ವವಾಗಿದ್ದರೆ ಅವರೊಬ್ಬ ಸೊಗಸುಗಾರ ಎಂದು ಮಾತ್ರ ತೇಲಿಹೋಗುತ್ತಿದ್ದರು. ಆದರೆ ಇವುಗಳಿಗಿಂತ ಮಿಗಿಲಾಗಿ ವಿ.ಸೀ. ಅವರಲ್ಲಿದ್ದ ಮಾನವತೆ ನಮ್ಮನ್ನು ಸೆರೆಹಿಡಿಯುತ್ತದೆ. ಈ ಸದ್ಗುಣವನ್ನು ಬಿಂಬಿಸುವ ಹತ್ತಾರು ಪ್ರಸಂಗಗಳನ್ನು ರಾಮಸ್ವಾಮಿಗಳು ವಿಸ್ತರಿಸುತ್ತಾರೆ.
ಮನೆಯ ಹಿತ್ತಲ ಮರವೊಂದನ್ನು ಕತ್ತರಿಸುವ ಅನಿವಾರ್ಯತೆ ಬಂದಾಗ ಆ ಘೋರಕಾರ್ಯವನ್ನು ನೋಡಲಾಗದೆ ಬೇರೊಂದು ಊರಿಗೆ ವಿ.ಸೀ. ಧಾವಿಸಿದ್ದಾಗಲಿ, ತಮ್ಮ ಆಯುಷ್ಕರ್ಮಕ್ಕಾಗಿ ಬರುತ್ತಿದ್ದ ಕ್ಷೌರಿಕರಿಗೆ ಅವರು ಅಕ್ಕರೆಯಿಂದ ಕಾಫಿ ನೀಡಿ ತಾವೂ ಸಪೀಥಿಗಳಾಗಿ ಹೆಚ್ಚಿನ ಸಂಭಾವನೆ ಕೊಡುತ್ತಿದ್ದ ಸಜ್ಜನಿಕೆಯಾಗಲಿ, ಮನೆಯ ಕೆಲಸದವಳ ಪರ ವಹಿಸಿ ಮನೆಮಂದಿಗೆ ಬುದ್ಧಿ ಹೇಳಿದ್ದಾಗಲಿ, ಗೆಳೆಯರ ಸಾಲಕ್ಕೆ ಜಾಮೀನು ಕೊಟ್ಟು ಕಡೆಗೆ ತಾವೇ ಸದ್ದಿಲ್ಲದೆ ಆ ಸಾಲವನ್ನು ತೀರಿಸಿದ್ದಾಗಲಿ ನಮಗೆ ತಿಳಿಯುವುದು ರಾಮಸ್ವಾಮಿಯವರ ಬರೆಹದಿಂದಲೇ.
ಡಿ.ವಿ.ಜಿ. ಅವರಂತೆಯೇ ವಿ.ಸೀ. ಕೂಡ ರಾಮಸ್ವಾಮಿಯವರಿಗೆ ನೀಡಿದ್ದ ಸಲುಗೆ ದೊಡ್ಡದು. ಅಂಥ ಹಿರಿಯರ ಬರೆಹ-ಭಾವಗಳನ್ನು ಆದರದಿಂದಲೇ ತಿದ್ದುವ, ಸದರದಿಂದಲೇ ಗೇಲಿ ಮಾಡುವ ಅದ್ಭುತ ಅವಕಾಶ ಅವರಿಗೆ ದಕ್ಕಿತ್ತು. ಆದರೆ ರಾಮಸ್ವಾಮಿಯವರು ಇಂಥ ಯಾವ ಸೌಲಭ್ಯವನ್ನೂ ದುರುಪಯೋಗಿಸಲಿಲ್ಲ. ಅದಕ್ಕೆ ಬದಲಾಗಿ ನಿಃಸ್ಪೃಹತೆಯಿಂದ ಶಕ್ತಿಮೀರಿದ ಸಾರಸ್ವತ ಕೈಂಕರ್ಯವನ್ನೇ ಸಲ್ಲಿಸಿದರು. ಇಂತಿದ್ದರೂ ಈ ಸೇವೆಯ ಸೊಲ್ಲನ್ನೂ ಅವರೆತ್ತುವುದಿಲ್ಲ. ಅಂಥ ಎಲ್ಲ ಪ್ರಸ್ತಾವಗಳನ್ನೂ ತೇಲಿಸಿಬಿಡುತ್ತಾರೆ; ಆ ಮಹನೀಯರ ಓದು-ಬರೆಹಗಳಿಗೆ ತನ್ನ ಕಡೆಯಿಂದ ತೊಡಕೇ ಆಯಿತೆಂಬಂತೆ ಚಿತ್ರಿಸಿಬಿಡುತ್ತಾರೆ!
ವಿ.ಸೀ. ಅವರ ಕಾಫಿ-ಟೀ ಸೇವನೆಯ ರಾಸಿಕ್ಯವೆಷ್ಟೋ ಅವನ್ನೆಲ್ಲ ಅತಿಥಿಗಳಿಗೆ ಸಮೃದ್ಧವಾಗಿ ಒದಗಿಸುವ ಆಸ್ಥೆಯೂ ಅಷ್ಟು. ಇದನ್ನು ರಾಮಸ್ವಾಮಿಯವರು ಆಕರ್ಷಕವಾಗಿ ನಿರೂಪಿಸಿದ್ದಾರೆ. ಶಾಲೆಯೊಂದರ ಸಮಾರಂಭಕ್ಕೆ ಹೋಗುವಾಗ ಹೊಸ ಪಂಚೆ ಉಟ್ಟಿರಬೇಕೆಂದು ಕೈಯಲ್ಲಿ ಸಾಕಷ್ಟು ಕಾಸಿಲ್ಲದಿದ್ದರೂ ಪೇಟೆಯನ್ನೆಲ್ಲ ಸುತ್ತಾಡಿ ಕಂಡ ಕಂಡ ಪಂಚೆಗಳಲ್ಲೆಲ್ಲ ಕುಂದಿಟ್ಟು ಕಡೆಗೆ ಗೆಳೆಯರಲ್ಲಿ ಕಡ ತೆಗೆದುಕೊಂಡು ಮುರಮುರ ಎನ್ನುವ ೧೭೦೩ ಜಾತಿಯ ಮಲ್ ಪಂಚೆಯನ್ನು ಕೊಂಡ ಕಥೆಯನ್ನು ಓದಿಯೇ ಸವಿಯಬೇಕು! ಇಂಥದ್ದೇ ಸಮಾರಂಭವೊಂದಕ್ಕೆ ಹೋಗಬೇಕೆ, ಬೇಡವೆ? ಎಂಬ ಹ್ಯಾಮ್‌ಲೆಟ್ ಸಂದಿಗ್ಧತೆ ಹಾಗೂ ಹೊರಡುವಾಗ ಮುಖಕ್ಷೌರ ಮಾಡಿಕೊಳ್ಳುವ ಭರದಲ್ಲಿ ಗಾಯ ಮಾಡಿಕೊಂಡು ಕಡೆಗೂ ದಿಗ್ವಿಜಯಕ್ಕೆ ಸಿದ್ಧರಾದ ಮುಗ್ಧೋತ್ಸಾಹದ ಉದಂತ ಓದುಗರಿಗೆ ಕಚಗುಳಿಯಿಡದೆ ಇರದು.
ಇಂಥ ನಚ್ಚಿನ ಮನುಷ್ಯರು ಟಿ. ಎಸ್. ವೆಂಕಣ್ಣಯ್ಯನವರಂಥ ಉನ್ನತ ವ್ಯಕ್ತಿಗಳು ತಮ್ಮ ಕೊಠಡಿಗೆ ತಲೆಬಾಗಿ ಪ್ರವೇಶಿಸಬಾರದೆಂಬ ಗೌರವದಿಂದ ಬಾಗಿಲನ್ನೇ ಏಳಡಿ ಎತ್ತರಕ್ಕೆ ಏರಿಸಿದ ಸಂವೇದನಶೀಲರು; ಡಿ.ವಿ.ಜಿ. ಅವರ ಮೂಲವ್ಯಾಧಿಗೆ ತಾವೇ ಕೈಯಾರ ಚಿಕಿತ್ಸೆ ಮಾಡಿದ ಕಾರುಣ್ಯವಂತರು. ವಿ.ಸೀ. ಅವರ ಕಲಾರಾಸಿಕ್ಯ ಎಂಥದ್ದೆಂದರೆ - ಅನಾರೋಗ್ಯವಾಗಿ ಆಸ್ಪತ್ರೆ ಸೇರಿದ್ದಾಗ ತಮ್ಮದ್ದೊಂದು ಎಕ್ಸ್ರೇ ಚಿತ್ರವನ್ನು ರಾಮಸ್ವಾಮಿ ಪರಿಕಿಸುತ್ತಿದ್ದಾಗ “ಇದೇನು ಪ್ರಾರಬ್ಧ! ಒಂದು ಒಳ್ಳೆಯ ಪೈಂಟಿಂಗ್ ಆದರೂ ತಂದುಕೊಟ್ಟರೆ ನೋಡಿ ಸಂತೋಷಪಡಬಹುದು. ಇದರಲ್ಲೇನಿದೆ – ಡೆಪ್ತ್, ಫಾರ್ಮ್, ಕಾನ್‌ಫಿಗರೇಷನ್, ಲೆವೆಲ್ಸ್ - ಏನಿದೆ ಇದರಲ್ಲಿ? ನಮ್ಮ ಆಕ್ಯುಪೇಷನ್ ಬಿಟ್ಟರೆ ಬೇರೆ ಯಾವುದರಲ್ಲಿದೆ ಅಷ್ಟು ಸಂತೋಷ? ಒಳ್ಳೇ ಪದ್ಯ ಓದಬಹುದು, ಸೌಂದರ್ಯ ನೋಡಬಹುದು, ಸಂಗೀತ ಕೇಳಬಹುದು ... What a blessing!”[1] ಎಂದು ಉದ್ಗರಿಸುವಷ್ಟು!
ಮೇಲ್ನೋಟಕ್ಕೆ ವಿ.ಸೀ. ವಿಚಾರವಾದಿಯಂತೆ ಕಂಡರೂ ಕ್ರಾಂತಿಕಾರಿಯಂತೆ ತೋರಿಕೊಂಡರೂ ಅವರ ಅಂತರಂಗ ಭಾವಕ್ಕೇ ಮಾರುಹೋದದ್ದು, ಭಕ್ತಿಗೇ ವಾಲುವಂಥದ್ದು. ಸಾಂಪ್ರದಾಯಿಕರಂತೆ ತೋರಿಕೊಳ್ಳುವ ರಾಮಸ್ವಾಮಿಯವರನ್ನು ಲಘುವಾಗಿ ಚುಡಾಯಿಸುತ್ತಿದ್ದರಂತೆ: “You are a fossil ... ನಿಮ್ಮ ವೇದ ಪುರಾಣ ಶಾಸ್ತ್ರಗಳೆಲ್ಲ mumbo-jumbo.” ಇವರನ್ನು ಇತರರಿಗೆ ಪರಿಚಯಿಸುವಾಗ “Here comes a grammarian. He stands for systems and codification. I am the opposite. I say, blast all your systems”[2] ಎನ್ನುತ್ತಿದ್ದರಂತೆ. ಆದರೆ ಇಂಥ ವಿ.ಸೀ. ಶಿಖೆಯನ್ನಾಗಲಿ, ಸಂಧ್ಯೆಯನ್ನಾಗಲಿ, ಭೋಜನಪೂರ್ವದ ಅಕ್ಷತಧಾರಣವನ್ನಾಗಲಿ ಬಿಟ್ಟಿರಲಿಲ್ಲ! ಶಿವರಾತ್ರಿಯಂದು ಶಿವಾಲಯಕ್ಕೆ ಸಕುಟುಂಬವಾಗಿ ಹೋಗುವುದು ಕಟ್ಟಲೆಯೇ ಆಗಿತ್ತು. ಅಷ್ಟೇಕೆ, ಮೈ-ಮನಸ್ಸುಗಳಿಗೆ ಅಧೈರ್ಯ ಒದಗಿದಾಗ ಶಿವಾಪರಾಧಕ್ಷಮಾಪಣಸ್ತೋತ್ರ ಹೇಳಿಕೊಳ್ಳುತ್ತಿದ್ದರಂತೆ. ಇಂಥ ಪ್ರಾಮಾಣಿಕರಾದ ಆಪಾತವೈರುದ್ದ್ಧಶೀಲರನ್ನು ಪ್ರೀತಿಸದೆ ಇರುವುದಾದರೂ ಹೇಗೆ? ಇದನ್ನು ನಮಗೆ ಸಾಕ್ಷಾತ್ಕರಿಸಿಕೊಟ್ಟವರು ರಾಮಸ್ವಾಮಿಯವರು.
ತಾವು ಪ್ರಾಚಾರ್ಯರಾಗಿದ್ದ ಕಾಲೇಜೊಂದರ ಅಟೆಂಡರ್‌ನ ಮನೆಗೆ ಆಗಾಗ ಹೋಗುತ್ತಿದ್ದುದಲ್ಲದೆ ನಿವೃತ್ತರಾದ ಬಳಿಕವೂ ಸಂಪರ್ಕ ಇರಿಸಿಕೊಂಡಿದ್ದವರು ವಿ.ಸೀ. ಅವರು ಬೇರೆ ಊರಿನಲ್ಲಿ ನಡೆದ ಆತನ ಮಗಳ ಮದುವೆಗೂ ಹೋಗಿ ಹರಸಿ ಬಂದಿದ್ದರು. ಆ ಅಟೆಂಡರ್ ಹೇಳುತ್ತಿದ್ದನಂತೆ: “ನನ್ನ ಸರ್ವೀಸಿನಲ್ಲಿ ಬಹಳ ಜನ ಪ್ರಿನ್ಸಿಪಾಲರನ್ನು ನೋಡಿದೆ. ಆದರೆ ನನ್ನ ಮನೆಯೊಳಕ್ಕೆ ಕಾಲಿರಿಸಿದ ಪ್ರಿನ್ಸಿಪಾಲರು ಇವರು ಮಾತ್ರ!”[3] ಮನೆಯಲ್ಲಿ ಕಸಮುಸುರೆ ಮಾಡುವವಳಿಗೆ ನಿಯತವಾದ ಸಂಬಳವಲ್ಲದೆ ವರ್ಷಕ್ಕೊಮ್ಮೆ ಸೀರೆ-ಕುಪ್ಪಸ ಜೋಡಿಯನ್ನೂ ಪ್ರತ್ಯೇಕವಾದ ನಗದನ್ನೂ ವಿಶೇಷವಾಗಿ ಸಲ್ಲಿಸುತ್ತಿದ್ದರು. ತಮ್ಮ ವಿದ್ಯಾರ್ಥಿನಿಯೊಬ್ಬಳ ಅಂಗವೈಕಲ್ಯದ ಕಾರಣ ಕಾಲೇಜಿನ ಆವರಣಕ್ಕೆ ನಡೆದು ಬರಲಿ ಅಸಾಧ್ಯವಾದಾಗ ಅವಳ ವಾಹನ ಒಳಗೆ ಬರಲು ಅನುಕೂಲಿಸುವಂತೆ ಕಾಂಪೌಂಡನ್ನೇ ಒಡೆಸಿದ್ದರಂತೆ![4] ನಿಯತವಾದ ತರಗತಿಗಳಲ್ಲದೆ ಹೆಚ್ಚಿನ ತಾಸುಗಳ ಪಾಠವನ್ನು ರಜೆಯ ದಿನಗಳಲ್ಲಿ ಮಾಡಬೇಕಾಗಿ ಬಂದಾಗ ಇಂಥ ಸ್ಪೆಷಲ್‌ಕ್ಲಾಸುಗಳಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆಲ್ಲ ತಮ್ಮ ಖರ್ಚಿನಲ್ಲಿ ಕಾಫಿ-ತಿಂಡಿ ಸಮಾರಾಧನೆ ಮಾಡಿಸುತ್ತಿದ್ದರಂತೆ. ಮನುಷ್ಯರ ಬಗೆಗಿರಲಿ, ಮರ-ಗಿಡಗಳ ಬಗೆಗೂ ಇವರ ಪ್ರೀತಿ ಉದಾರವಾಗಿ ಹರಿದಿತ್ತು. ಲಾಲ್‌ಬಾಗಿನ ಮರ-ಮರಗಳೂ ಇವರ ನಂಟರು. ಅಲ್ಲಿಯ ಬೃಹದಾಕಾರದ ಬೂರುಗದ ಮರವಂತೂ ಇವರ ಮನೆಯ ಹಿರಿಯನಂತಿತ್ತು. “That tree has haunted me for thirty-five years” ಎನ್ನುತ್ತಿದ್ದರು. ರಸ್ತೆಯ ವಿಸ್ತರಣದ ಭರದಲ್ಲಿ ಕೃಷ್ಣರಾಜೇಂದ್ರ ಮಾರ್ಗದ ಸಾಲುಮರಗಳು ಉರುಳಿದಾಗ ಅವರು ಕಂಬನಿ ಮಿಡಿದಿದ್ದರಂತೆ.
ಹೀಗೆ ವಿ.ಸೀ. ಅವರ ಹೃದ್ಭಾವದ ಹೊನಲನ್ನು ನಮ್ಮತ್ತ ಹರಿಯಿಸಿದ ಭಗೀರಥ ರಾಮಸ್ವಾಮಿಯವರು.
* * *
ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
ಕರ್ಣಾಟಕಾಂಧ್ರಸವ್ಯಸಾಚಿ ಮತ್ತು ಸಂಗೀತ-ಸಾಹಿತ್ಯಗಳ ಕೋವಿದರೆನಿಸಿದ್ದ ರಾಳ್ಲಪಲ್ಲಿಯವರ ಬಗೆಗೆ ಕನ್ನಡದಲ್ಲಿ ಹೆಚ್ಚಿನ ಸಾಮಗ್ರಿ ಇಲ್ಲ. ನಾನು ಬಲ್ಲಂತೆ ಎಸ್. ಕೆ. ರಾಮಚಂದ್ರರಾಯರ ‘ಪುರುಷಸರಸ್ವತಿ’ ಎಂಬ ಕಿರುಹೊತ್ತಿಗೆ ಹಾಗೂ ವಿ.ಸೀ., ಎಸ್. ಕೃಷ್ಣಮೂರ್ತಿ ಮುಂತಾದ ಒಬ್ಬಿಬ್ಬರ ಲೇಖನಗಳು ಮಾತ್ರ ಗಣ್ಯವಾಗಿವೆ. ರಾಳ್ಲಪಲ್ಲಿ ಅವರ ಮಗ ಪ್ರೊ|| ಫಣಿಶಾಯಿ ಅವರು ಸಂಕಲನ ಮಾಡಿಕೊಟ್ಟ ‘ಪರಮಾನಂದ ಗಾನಸುಧಾ’ ಎಂಬ ಪುಸ್ತಿಕೆಯಲ್ಲಿಯೂ ಕೆಲವೊಂದು ವಿವರಗಳಿವೆ. ಪ್ರಾಯಶಃ ಈ ಎಲ್ಲ ಬರೆವಣಿಗೆಗಳಿಗಿಂತ ಮಿಗಿಲಾಗಿ ರಸಮಯವಾಗಿರುವುದು ರಾಮಸ್ವಾಮಿಯವರ ಲೇಖನ. ದಿಟವೇ, ರಾಮಚಂದ್ರರಾಯರ ಪುಸ್ತಿಕೆ ಬಲುಸೊಗಸಾದ ಬರೆವಣಿಗೆ. ಆದರೆ ಅಲ್ಲಿ ಶರ್ಮರ ಜೀವನ-ಸಾಧನೆಗಳಿಗೆ ಹೆಚ್ಚಿನ ಅವಧಾರಣೆ ಸಂದಿದೆ. ಇಲ್ಲಿಯಾದರೋ ಅವರ ಅನ್ಯಾದೃಶ ವ್ಯಕ್ತಿತ್ವ ಹತ್ತಾರು ಸಂದರ್ಭಗಳ ಮೂಲಕ, ಅನನ್ಯವಾದ ಉಲ್ಲೇಖಗಳ ಮೂಲಕ ಹರಳುಗಟ್ಟಿದೆ. ಹೀಗಾಗಿ ಕಾವ್ಯಾಂಶ-ಭಾವಾಂಶಗಳು ಮೇಲ್ಮೆ ಪಡೆದಿವೆ. ಇದು ‘ದೀವಟಿಗೆಗಳು’ ಪುಸ್ತಕದ ಹೆಗ್ಗುರುತೂ ಹೌದು. ಈ ಬರೆಹದಲ್ಲಿ ರಾಮಸ್ವಾಮಿಯವರು ‘ಅನಂತರಾಗಂ’ ಎಂಬ ಶರ್ಮರ ಗೌರವಗ್ರಂಥದ ಹಲಕೆಲವು ಸೂಕ್ತಿಗಳನ್ನೂ ಪದ್ಯಗಳನ್ನೂ ಉಲ್ಲೇಖಿಸಿರುವುದು ಕನ್ನಡದ ಮಟ್ಟಿಗೆ ಅಪೂರ್ವವೆನಿಸಿದೆ.
ಆರಂಭದಲ್ಲಿಯೇ ರಾಳ್ಲಪಲ್ಲಿಯವರ ವ್ಯಕ್ತಿತ್ವಮಾಧುರ್ಯವನ್ನು ಪ್ರಸ್ತಾವಿಸುವ ರಾಮಸ್ವಾಮಿಯವರು ‘ರೂಪಂ’ ಪತ್ರಿಕೆಯ ಸಂಪಾದಕ ಓ. ಸಿ. ಗಂಗೂಲಿ ಅವರು ಶರ್ಮರ ಭಾವಚಿತ್ರವನ್ನು ರೂಪಚಿತ್ರಗಳ ಮಾದರಿಗಾಗಿ ತೆಗೆದ ಸಂಗತಿಯನ್ನು ಹೇಳಿದ್ದಾರೆ. ಅಂತೆಯೇ ಅದೊಮ್ಮೆ ಟಿ. ವಿ. ವೆಂಕಟಾಚಲ ಶಾಸ್ತ್ರಿಗಳ ಜೊತೆಗೆ ಅವರಲ್ಲಿಗೆ ಹೋದಾಗ ಶರ್ಮರು ಛಂದಸ್ಸು ಮತ್ತು ಸಂಗೀತಗಳ ಹೋಲಿಕೆ-ಅಂತರಗಳನ್ನು ಕುರಿತು ಆಶುವಾಗಿ ಮಾಡಿದ ಪ್ರೌಢಪಾಠನದಂಥ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಇವುಗಳ ಮೂಲಕ ರಾಳ್ಲಪಲ್ಲಿ ಅವರಿಗಿದ್ದ ಆಕೃತಿ ಮತ್ತು ಕೃತಿಗಳ ಅನ್ಯಾದೃಶತೆಯನ್ನು ಓದುಗರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಎರಡು ಪ್ರಸಂಗಗಳೂ ಪ್ರತ್ಯೇಕವಾಗಿ ವಿ.ಸೀ. ಮತ್ತು ವೆಂಕಟಾಚಲ ಶಾಸ್ತ್ರಿಗಳ ಲೇಖನಗಳಲ್ಲಿ ಬಂದಿವೆ. ಆದರೆ ಇವೆರಡನ್ನೂ ಜೋಡಿಸಿ ತನ್ಮೂಲಕ ಶರ್ಮರ ರೂಪ-ಸ್ವರೂಪಗಳ ಪರಿಯನ್ನು ಕಾಣಿಸುವ ಕೌಶಲ ರಾಮಸ್ವಾಮಿಯವರದು.
ರಾಳ್ಲಪಲ್ಲಿ ಅವರ ರಾಸಿಕ್ಯ ಆಹಾರ-ವಿಹಾರಗಳಿಂದ ಮೊದಲ್ಗೊಂಡು ನುಡಿ-ನಡೆಗಳವರೆಗೆ, ಉಡುಗೆ-ತೊಡುಗೆಗಳವರೆಗೆ ಹದವರಿತು ಹಬ್ಬಿದ ಬಗೆಯನ್ನು ಮೆಚ್ಚುವ ರಾಮಸ್ವಾಮಿ ಅವರ ಸೂಕ್ಷ್ಮ ದೃಷ್ಟಿಯ ಮಿಂಚನ್ನೂ ಇಡಿಯ ವ್ಯಕ್ತಿತ್ವದ ಕಾಂತಿಯನ್ನೂ ಪ್ರಸ್ತಾವಿಸುತ್ತ “ಅತಿಸಾಮಾನ್ಯ ಸಂಗತಿಗಳನ್ನೇ ಹೇಳುವಾಗಲೂ ಅವು ಶರ್ಮರ ಬಾಯಿಂದ ಬಂದಾಗ ವಿಶೇಷವೆನಿಸುತ್ತಿದ್ದವು ... ‘ಎಲ್ಲರೂ ಕೂತುಕೊಂಡು ಚೆನ್ನಾಗಿ ಊಟ ಮಾಡಿದೆವು’ ಎಂಬ ಮುದ್ರಣದಲ್ಲಿ ಶುಷ್ಕವಾಗಿ ಕಾಣುವ ವಾಕ್ಯ ರಾಳ್ಳಪಲ್ಲಿಯವರ ಬಾಯಿಂದ ಬಂದಾಗ ಕಾವ್ಯದಂತೆ ಭಾಸವಾಗುತ್ತಿತ್ತು.”[5] ಎಂದಿರುವುದು ಗಮನಾರ್ಹ.
ಇಂಥ ಭಾವಸ್ಪಂದವುಳ್ಳವರು ಬುದ್ಧಿನಿಶ್ಚಯದಲ್ಲಿಯೂ ಉಜ್ಜ್ವಲವಾಗಿದ್ದರು. ಅದೊಮ್ಮೆ ಡಿ.ವಿ.ಜಿ. ಅವರು ಕೇದಾರಗೌಳ ರಾಗವು ಶೃಂಗಾರವನ್ನು ಅಷ್ಟಾಗಿ ಪೋಷಿಸುವುದಿಲ್ಲವೆಂದು ಹೇಳಿದಾಗ ಅದಕ್ಕೆ ಯಾವುದೇ ಒಣಮಾತುಗಳ ಪ್ರತಿವಾದ ಹೂಡದೆ ಕ್ಷೇತ್ರಜ್ಞನ ‘ರಮ್ಮನವೇ ಸಮ್ಮುಖಾನ’ ಎಂಬ ಪದವನ್ನು ಅದೇ ರಾಗದಲ್ಲಿ ಹಾಡುವ ಮೂಲಕ ರಾಳ್ಲಪಲ್ಲಿಯವರು ತಮ್ಮ ನಿಲವನ್ನು ಸೂಚಿಸಿದರಂತೆ. ಈ ಪದವನ್ನು ಆಲಿಸಿದೊಡನೆಯೇ ಡಿ.ವಿ.ಜಿ. “ನನ್ನ ವಾದ ಬಿದ್ದುಹೋಯಿತು” ಎಂದು ಸಂತೋಷದಿಂದ ಉದ್ಗರಿಸಿದರಂತೆ. ಈ ಪ್ರಕರಣದಲ್ಲಿ ಶರ್ಮರ ಬುದ್ಧಿನಿಶ್ಚಯವು ಅನುಭವನಿಷ್ಠವಾಗಿದ್ದ ಬಗೆ ಮತ್ತದು ನಿರುದ್ವಿಗ್ನವಾಗಿ ತನ್ನನ್ನು ಅಭಿವ್ಯಕ್ತಿಸುತ್ತಿದ್ದ ಪರಿ ಅದ್ಭುತವಾಗಿ ಕಂಡರಣೆಗೊಂಡಿವೆ. ಸತ್ಯವೊಂದನ್ನೇ ಗುರಿಯಾಗಿ ಉಳ್ಳ ಬುದ್ಧಿಕಾರ್ಯದ ಆಳ-ಆರ್ಜವಗಳು ಇಲ್ಲಿ ಘನೀಭವಿಸಿವೆ.
ಇಷ್ಟು ಧೀಮಂತರಾಗಿದ್ದ ರಾಳ್ಲಪಲ್ಲಿ ಅವರು ಸಕೇಶಿ ವಿಧವೆಯೊಬ್ಬರ ಮಾತೃವಾತ್ಸಲ್ಯದ ಆತಿಥ್ಯವನ್ನು ಪ್ರೀತಿ-ಗೌರವಗಳಿಂದ ಸ್ವೀಕರಿಸಿದ ಬಗೆಯಾಗಲಿ, ಅವರ ಬಂಧುಗಳೊಬ್ಬರು ತುಂಬ ಹಿಂದೆ ಕಾಶೀಯಾತ್ರೆಗೆ ಹೋಗಿದ್ದಾಗ ಮರಳಲು ಹಣವಿಲ್ಲದೆ ತಮ್ಮ ಪುಣ್ಯವನ್ನೇ ಅಲ್ಲಿಯ ಒಬ್ಬ ವರ್ತಕನಲ್ಲಿ ಅಡವಿಟ್ಟು ಸಾಲ ಪಡೆದ ಪ್ರಸಂಗವಾಗಲಿ ಇಲ್ಲಷ್ಟೇ ಒಕ್ಕಣೆಗೊಂಡಿವೆ. ಇವು ಶರ್ಮರ ಭಾವಶ್ರೀಮಂತಿಕೆಗೆ ಸುಂದರ ನಿದರ್ಶನಗಳಾಗಿ ನಿಂತಿವೆ. ಇಂಥ ಗಂಭೀರ ಘಟನೆಗಳ ಜೊತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನಡೆದ ವಾಕ್ಯಾರ್ಥವೊಂದರ ವೈಖರಿ, ಅದೇ ಕಾಲದಲ್ಲಿ ಲಿಪಿಕಾರನೊಬ್ಬ ‘ಅನರ್ಘರಾಘವ’ ನಾಟಕದ ಶುದ್ಧಪ್ರತಿಯನ್ನು ತಯಾರಿಸುವಲ್ಲಿ ಎದುರಾದ ವೈಪರೀತ್ಯ ಮುಂತಾದ ವೈನೋದಿಕ ಸಂದರ್ಭಗಳನ್ನೂ ರಾಮಸ್ವಾಮಿಯವರು ಅನ್ಯಾದೃಶವಾಗಿ ದಾಖಲಿಸಿದ್ದಾರೆ. ಇವುಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು. ಇವು ಪುನರ್ನಿರೂಪಣೆಗೆ ಎಟುಕದ ಸಾಹಿತ್ಯಸುಧಾಬಿಂದುಗಳು.
ಹಲವು ದಶಕಗಳ ಕಾಲ ತೆಲುಗುಪಂಡಿತರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬೋಧಿಸಿದ ರಾಳ್ಲಪಲ್ಲಿ ಅವರಿಗೆ ಕುವೆಂಪು, ರಾಜರತ್ನಂ, ತೀ.ನಂ.ಶ್ರೀ., ಡಿ.ಎಲ್.ಎನ್., ಎನ್. ಅನಂತರಂಗಾಚಾರ್ಯ, ಕೆ. ವೆಂಕಟರಾಮಪ್ಪ ಮುಂತಾದ ನವೋದಯದ ದಿಗ್ಗಜಗಳೆಲ್ಲ ಶಿಷ್ಯರೇ ಆಗಿದ್ದರು. ಇವರು ತಮ್ಮ ಗುರುಗಳ ಬೋಧನಕೌಶಲವನ್ನು ಕುರಿತು ಹೇಳಿದ ಕೆಲವು ಮಾತುಗಳನ್ನು ರಾಮಸ್ವಾಮಿಯವರು ತಮ್ಮ ಭಾಷಣವೊಂದರಲ್ಲಿ ಸಂಗ್ರಹಿಸಿರುವುದು ಇಲ್ಲಿ ಸ್ಮರಣೀಯ. “ಶರ್ಮರು ಒಂದೆರಡು ಪದ್ಯ ಹೇಳುತ್ತಿದ್ದ ಹಾಗೆ ವಿದ್ಯಾರ್ಥಿಗಳನ್ನು ಕವಿಯ ಲೋಕಕ್ಕೆ ಒಯ್ದುಬಿಡುತ್ತಿದ್ದರು. ಕನ್ನಡ-ಇಂಗ್ಲಿಷುಗಳನ್ನೂ ಧಾರಾಳವಾಗಿ ಬಳಸಿ ವಿಷಯವನ್ನು ಹೃದ್ಗತ ಮಾಡಿಸುತ್ತಿದ್ದರು. ಅವರು ಮಾತನ್ನು ನಿಲ್ಲಿಸಿದಾಗಷ್ಟೆ ಒಂದು ಗಂಟೆ ಮುಗಿದುಹೋಗಿದ್ದು ಗಮನಕ್ಕೆ ಬರುತ್ತಿತ್ತು” ಎಂಬ ದೇ.ಜ.ಗೌ. ಅವರ ಮಾತನ್ನವರು ಉದ್ಧರಿಸಿದ್ದಾರೆ.[6]
ಇಲ್ಲಿಯೇ ಅವರ ಶಿಷ್ಯವಾತ್ಸಲ್ಯದ ನಿದರ್ಶನವಾಗಿ ಮತ್ತೂ ಒಂದು ಪ್ರಸಂಗವನ್ನು ನೆನೆದಿದ್ದಾರೆ. ಪ್ರಸಿದ್ಧ ಸುಗಮಸಂಗೀತಜ್ಞ ಪದ್ಮಚರಣ್ (ಎ. ವಿ. ಕೃಷ್ಣಮಾಚಾರ್ಯ) ಅವರು ಮೊದಲೇ ಗೊತ್ತಾದಂತೆ ಬೆಳಗಿನ ಜಾವ ಪಾಠಕ್ಕೆ ಬರುವ ಬದಲಾಗಿ ಗಡಿಬಿಡಿಯಿಂದ ನಟ್ಟಿರುಳಿನಲ್ಲಿಯೇ ಬಂದಾಗ ರಾಳ್ಲಪಲ್ಲಿಯವರು ಸ್ವಲ್ಪವೂ ಇರುಸುಮುರುಸುಗೊಳ್ಳದೆ ಅದೇ ಸರಿಯಾದ ಸಮಯವೆಂಬಂತೆ ಎರಡು-ಮೂರು ಘಂಟೆಗಳ ಕಾಲ ವಯೊಲಿನ್ ಪಾಠ ಹೇಳಿದರಂತೆ.[7]
ರಾಳ್ಲಪಲ್ಲಿ ಅವರ ಸಂಗೀತ-ಸಾಹಿತ್ಯಗಳ ವೈದುಷ್ಯ ಇಲ್ಲಿ ಹಾಸು-ಹೊಕ್ಕಾಗಿ ಬಂದಿದೆ. ಯಾವುದನ್ನೂ ತಲಸ್ಪರ್ಶಿಯಾಗಿ ತಿಳಿಯುವ, ಮನಃಪೂರ್ವಕವಾಗಿ ಅರಿಯುವ ಶರ್ಮರ ವಿದ್ಯಾನುಸಂಧಾನ ವಿಪುಲವಾದ ಗ್ರಂಥರಚನೆಗೆ ಅಷ್ಟಾಗಿ ಮನಸ್ಸು ಮಾಡದಿದ್ದ ಸಂಗತಿಯನ್ನೂ ರಾಮಸ್ವಾಮಿ ಪ್ರಸ್ತಾವಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಉಲ್ಲೇಖಿಸುವ ಶರ್ಮರ ಪದ್ಯ ತನ್ನಂತೆಯೇ ಒಂದು ಅದ್ಭುತ ಆತ್ಮಪರೀಕ್ಷಾಕವಿತೆ:
ಪದಪುಷ್ಟಿಂ ಬರಿಕಿಂಚಿ ಶಬ್ದವಿಧುಲಂ ಬಾಟಿಂಚಿ ಯರ್ಥಂಬುಲನ್
ಗೊದುಕಲ್ ಪುಟ್ಟಕ ತಿದ್ದಿ ಭಾವಮುಲ ನಿಕ್ಕುಲ್ ಜೂಚಿ ಪದ್ಯಂಬುಲನ್
ಬೊದಿಗಿಂಪಂಗಲಮಿಂತೆ ಕಾನಿ ಯದಿಯೇಮೋ ತಕ್ಕುವೈ ತೋಚು ನಾ
ಕೊದುವಂ ದೀರ್ಚು ಕವಿತ್ವಬೀಜಮದಿ ಮಾಕುಂ ಜಿಕ್ಕುನೋ ಚಿಕ್ಕದೋ!
(ಪದಗಳ ಸಾಮರ್ಥ್ಯವನ್ನು ಗಮನಿಸಿ, ವ್ಯಾಕರಣನಿಯಮಗಳನ್ನು ಅನುಸರಿಸಿ, ಅರ್ಥಸ್ವಾರಸ್ಯವನ್ನೆಲ್ಲ ಹೊಂದಿಸಿ, ಭಾವಗಳಿಗೆ ಮೆರುಗಿತ್ತು ಪದ್ಯಗಳನ್ನು ಹೊಸೆದರೂ ಅವು ಯಾವುದೋ ಕೊರತೆಯನ್ನು ಹೊಂದಿದಂತೆ ತೋರುತ್ತವೆ. ಈ ಲೋಪವನ್ನು ತೀರಿಸಬಲ್ಲ ದಿಟವಾದ ಕಾವ್ಯವಿದ್ಯೆಯ ಬೀಜ ನನಗೆ ಎಟುಕುವುದೋ ಇಲ್ಲವೋ!)
ಇದನ್ನು ಶರ್ಮರು ಬರೆದದ್ದು ಸಮಗ್ರ ‘ರಘುವಂಶ’ವನ್ನು ತೆಲುಗಿಗೆ ಅನುವಾದಿಸಿದ ಬಳಿಕ ಆ ಕೆಲಸ ತೃಪ್ತಿ ತಾರದೆ ಇಡಿಯ ಅನುವಾದವನ್ನೇ ಹರಿದು ಬಿಸುಟು ಬೇಸತ್ತಾಗ. ಈ ಸನ್ನಿವೇಶವನ್ನು ನೆನೆದರೆ ರಾಳ್ಲಪಲ್ಲಿ ಅವರ ವ್ಯಕ್ತಿತ್ವ ಎಂಥದ್ದೆಂದು ತಾನಾಗಿ ತಿಳಿಯುತ್ತದೆ. ಇಂಥ ನಿರ್ದಾಕ್ಷಿಣ್ಯವಾದ ಆತ್ಮವಿಮರ್ಶನಪ್ರಜ್ಞೆ ಶರ್ಮರದಾಗಿದ್ದ ಕಾರಣದಿಂದಲೇ ಅವರ ಎಷ್ಟೋ ಬರೆಹಗಳು ಪ್ರಕಟವಾಗಲಿಲ್ಲ. ಅಷ್ಟೇಕೆ, ಸ್ವೋಪಜ್ಞ ಚಿಂತನೆಗಳು ಬರೆವಣಿಗೆಯ ಮಟ್ಟಕ್ಕೂ ಬರಲಿಲ್ಲ! ರಾಮಸ್ವಾಮಿ ಮತ್ತು ಬಿ. ಎಸ್. ರಾಮಕೃಷ್ಣರಾಯರು ತುಂಬ ಒತ್ತಾಯದಿಂದ ರಾಳ್ಲಪಲ್ಲಿಯವರ ಸಂಸ್ಕೃತರಚನೆಗಳನ್ನು ಸಂಕಲಿಸಿ ಪ್ರಕಟಿಸಿದಾಗ ಅದಕ್ಕೆ ಮುನ್ನುಡಿಯಾಗಿ ಅವರೇ ಬರೆದ ಪದ್ಯವೊಂದನ್ನು ಉಲ್ಲೇಖಿಸಿದ್ದಾರೆ. ಇದು ಶರ್ಮರ ಮನೋಧರ್ಮವನ್ನು ಸೊಗಸಾಗಿ ಪ್ರತಿಫಲಿಸುತ್ತದೆ:
ಇಯಂ ತನೋತು ವಾಗ್ದೇವ್ಯಾ ಮಂದಸ್ಮಿತಕುತೂಹಲಮ್ |
ವಿನೋದಮಪಿ ಸೂರೀಣಾಂ ಸತಾಂ ಕಿಮಿತರೈಃ ಫಲೈಃ ||[8]
(ಈ ಕೃತಿಯು ವಾಗ್ದೇವತೆಯ ವದನದಲ್ಲಿ ಮುಗುಳ್ನಗೆಯೊಂದನ್ನು ಮೂಡಿಸಿದರೆ ಸಾಕು, ಸಹೃದಯರನ್ನು ರಂಜಿಸಿದರೆ ಸಾಕು. ಸಜ್ಜನರಿಗೆ ಇದಕ್ಕಿಂತ ಹೆಚ್ಚಿನ ಫಲ ಮತ್ತೇನು ಬೇಕು?)
ಇದೇ ತೆರನಾದುದು ಅವರ ವಿದ್ಯಾಗ್ರಹಣಶ್ರದ್ಧೆ. ಅದೊಮ್ಮೆ ಭಿಕ್ಷುಕನೊಬ್ಬ ತ್ಯಾಗರಾಜರ ‘ನಾದಸುಧಾರಸಂಬಿಲನು’ ಎಂಬ ಆರಭಿರಾಗದ ಕೃತಿಯನ್ನು ಹಾಡಿಕೊಳ್ಳುತ್ತಿದ್ದಾಗ ಅದನ್ನು ಆಲಿಸಿ ಆತನನ್ನು ಮನೆಯೊಳಗೆ ಬರಮಾಡಿಕೊಂಡು ಆದರಿಸಿ ಔತಣವಿತ್ತು, ಅವನಿಂದ ಆ ಗೇಯವನ್ನು ತಾವು ನಮ್ರತೆಯಿಂದ ಕಲಿತುಕೊಂಡರಂತೆ. ಆ ಕಾಲದಲ್ಲಿ ಈ ಕೃತಿ ಅಷ್ಟಾಗಿ ವಾಡಿಕೆಯಲ್ಲಿರಲಿಲ್ಲ. ರಾಳ್ಲಪಲ್ಲಿ ಅವರ ಮೂಲಕ ಇದಕ್ಕೆ ಮೈಸೂರು ಸೀಮೆಯಲ್ಲಿ ಹೆಚ್ಚಿನ ಪ್ರಾಚುರ್ಯ ಸಿಕ್ಕಿತು. ಇಂಥ ನಿತ್ಯಶಿಷ್ಯತ್ವ ಮಹನೀಯರಿಗಷ್ಟೇ ಸಾಧ್ಯವಾದ ಸದ್ಗುಣ. “ವ್ಯುತ್ಪತ್ತ್ಯೈ ಸರ್ವಶಿಷ್ಯತಾ” ಎಂಬ ಕ್ಷೇಮೇಂದ್ರನ ಮಾತು ಇಲ್ಲಿ ಸ್ಮರಣೀಯ.
ಸಂಗೀತ-ಸಾಹಿತ್ಯಗಳ ಹೃದಯವನ್ನರಿತು ಅವುಗಳ ಪ್ರಯೋಗ ಮತ್ತು ಆಸ್ವಾದಗಳನ್ನು ಮಾಡಬೇಕೆಂಬ ತತ್ತ್ವಕ್ಕೆ ರಾಳ್ಲಪಲ್ಲಿ ಅವರು ಮೂರ್ತೀಭವಿಸಿದ ನಿದರ್ಶನವಾಗಿದ್ದರು. ಇದನ್ನು ರಾಮಸ್ವಾಮಿಯವರು ಹಲವು ದೃಷ್ಟಾಂತಗಳ ಮೂಲಕ ನಮಗೆ ಮನಗಾಣಿಸುತ್ತಾರೆ. ವಾಗ್ಗೇಯಕಾರರ ಕೃತಿಗಳನ್ನಾಗಲಿ, ಪದಗಳನ್ನಾಗಲಿ ಹೇಗೆ ಹಾಡಬೇಕೆಂಬ ಅನನ್ಯ ಪದ್ಧತಿಯನ್ನು ಅವರು ರೂಪಿಸಿದ ಬಗೆಯನ್ನೂ ರಾಮಸ್ವಾಮಿ ವಿವರಿಸುತ್ತಾರೆ. ತಾವು ವಿಶ್ವವಿದ್ಯಾನಿಲಯದಲ್ಲಿ ತೆಲುಗುಪಂಡಿತರಾಗಿ ಕೆಲಸಕ್ಕೆ ಸೇರಿ ಮೂರು ದಶಕಗಳಿಗೂ ಹೆಚ್ಚು ಸೇವೆಯ ಬಳಿಕ ಅದೇ ಸ್ಥಾನದಿಂದ ನಿವೃತ್ತರಾದುದರ ಬಗೆಗೆ ಸ್ವಲ್ಪವೂ ಬೇಸರಿಸದೆ ‘ಯದೃಚ್ಛಾಲಾಭಸಂತುಷ್ಟ’ರಾಗಿ ಬಾಳಿದ ಪರಿಯನ್ನು ರಾಮಸ್ವಾಮಿಯವರು ಒಕ್ಕಣಿಸುತ್ತಾರೆ. ಮಾತಿನ ನಡುವೆ ಈ ವಿಷಯ ಬಂದಾಗ ಶರ್ಮರು ಅದನ್ನು ಕೂಡಲೇ ಕೊಡವಿಹಾಕಿ ಹೀಗೆಂದರಂತೆ: “ನನ್ನದೇನಪ್ಪಾ ದೊಡ್ಡ ವಿಷಯ? ಎಂ. ಹಿರಿಯಣ್ಣನವರು ತಾನೇ ಏನು ಭೋಗ-ಭಾಗ್ಯಗಳನ್ನು ಅನುಭವಿಸಿದರು?”
ರಾಳ್ಲಪಲ್ಲಿಯವರ ‘ಶ್ರೀಮಹೀಶೂರರಾಜ್ಯಾಭ್ಯುದಯಾದರ್ಶಃ’ (ಸಂಸ್ಕೃತ), ‘ಗಾನಕಲೆ’, ‘ಸಾಹಿತ್ಯ ಮತ್ತು ಜೀವನಕಲೆ’, ‘ವೇಮನೋಪನ್ಯಾಸಮುಲು’ (ತೆಲುಗು) ಮುಂತಾದ ರಚನೆಗಳನ್ನು ಪ್ರಸ್ತಾವಿಸುವ ರಾಮಸ್ವಾಮಿ ಅವರ ಗೇಯಕೃತಿಗಳತ್ತ ಕೂಡ ಕಟಾಕ್ಷಿಸಿದ್ದಾರೆ. ಈ ಕೃತಿಗಳಿಂದ ಸಾಕಷ್ಟು ಭಾಗಗಳನ್ನು ಉದ್ಧರಿಸಿ ತಮ್ಮ ಅಭಿಪ್ರಾಯಗಳಿಗೆ ಪುಷ್ಟಿ ನೀಡಿದ್ದಾರೆ. ನಿರ್ಭೀತಿ, ನಿಃಸ್ಪೃಹತೆ ಮತ್ತು ನಿಶ್ಚಯಗಳು ರಾಳ್ಲಪಲ್ಲಿಯವರ ಬೌದ್ಧಿಕ ಲಕ್ಷಣಗಳಲ್ಲಿ ಮುಖ್ಯವಾದುವು. ಈ ಕಾರಣದಿಂದಲೇ ತಮ್ಮ ಗುರುವರ್ಗದಲ್ಲಿದ್ದ ಕಟ್ಟಮಂಚಿ ರಾಮಲಿಂಗಾರೆಡ್ಡಿ ಅವರ ಅಭಿಪ್ರಾಯಗಳನ್ನು ಒಪ್ಪದೆ ವಿರೋಧಿಸಿದರು. ಅಷ್ಟೇಕೆ, ತಮ್ಮ ‘ಶಾಲಿವಾಹನಸಪ್ತಶತಿ’ಯನ್ನು ಅವರಿಗೆ ಅರ್ಪಣೆ ಮಾಡಿ ಅವರಿಂದಲೇ ಮುನ್ನುಡಿ ಬರೆಸಿಕೊಂಡ ಶರ್ಮರು ಅದೇ ಪುಸ್ತಕದ ಪ್ರಸ್ತಾವನೆಯಲ್ಲಿ ಅವರ ಅಭಿಪ್ರಾಯಗಳನ್ನೇ ಖಂಡಿಸಿದ್ದಾರೆ! ಆದರೆ ಇದು ಕಹಿಯಿಲ್ಲದ ಖಂಡನೆ, ಅಬ್ಬರವಿಲ್ಲದ ಮಂಡನೆ.
ಇಂಥ ವ್ಯಕ್ತಿತ್ವವನ್ನು ರಾಮಸ್ವಾಮಿ ಅಂಥವರಲ್ಲದೆ ಹೆಚ್ಚಿನವರು ಕಂಡರಿಸಲಾರರು.
[1] ‘ದೀವಟಿಗೆಗಳು’, ಪು. ೧೧೮
[2] ‘ದೀವಟಿಗೆಗಳು’, ಪು. ೧೨೧
[3] ‘ದೀವಟಿಗೆಗಳು’, ಪು. ೯೮
[4] A Tapestry of Pen-portraits (Ed. Ravikumar, Hari and Bharadwaj, Arjun) Bengaluru: Prekshaa Pratishtana, 2020. p. 34
[5] ‘ದೀವಟಿಗೆಗಳು’, ಪು. ೧೨೫
[6] ‘ಕನ್ನಡ ತೆಲುಗು ಭಾಷಾ ಬೆಳವಣಿಗೆಗೆ ದಿ. ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ಸಲ್ಲಿಸಿದ ಸೇವೆ.’ ಮೈಸೂರಿನ ಮುಲಕನಾಡು ಸಭೆಯಲ್ಲಿ ೧.೭.೨೦೧೦ ರಂದು ರಾಮಸ್ವಾಮಿಯವರು ಮಾಡಿದ ಭಾಷಣದ ಹಸ್ತಪ್ರತಿ. ಪು. ೬
[7] ‘ಕನ್ನಡ ತೆಲುಗು ಭಾಷಾ ಬೆಳವಣಿಗೆಗೆ ದಿ. ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ಸಲ್ಲಿಸಿದ ಸೇವೆ.’ ಪು. ೮
[8] ‘ಕನ್ನಡ ತೆಲುಗು ಭಾಷಾ ಬೆಳವಣಿಗೆಗೆ ದಿ. ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ಸಲ್ಲಿಸಿದ ಸೇವೆ.’ ಪು. ೧೪
ನಾಡೋಜ ಎಸ್. ಆರ್. ರಾಮಸ್ವಾಮಿ ಅವರ ಗೌರವಗ್ರಂಥ "ದೀಪಸಾಕ್ಷಿ"ಯಲ್ಲಿ (ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬೆಂಗಳೂರು, ೨೦೨೨) ಪ್ರಕಟವಾದ ಲೇಖನ.
To be continued.