ಡಿ.ವಿ.ಜಿ.
ಮೊದಲಿಗೆ ಡಿ. ವಿ. ಗುಂಡಪ್ಪನವರ ವ್ಯಕ್ತಿತ್ವವನ್ನು ರೂಪಿಸುವಾಗ ವಿ. ಸೀತಾರಾಮಯ್ಯನವರು ಅವರನ್ನು ಜಿರಾಫೆಗೆ ಹೋಲಿಸುತ್ತಿದ್ದ ಮಾತನ್ನು ಉಲ್ಲೇಖಿಸುತ್ತಾರೆ: “ಅದರ ಕತ್ತು ನೀಳವಾಗಿದೆ. It eats nothing but the topmost foliage. ಅದು ನಮ್ಮಂಥವರಿಗೆ ಎಲ್ಲಿ ಎಟುಕುತ್ತದೆ?” ಈ ಒಂದು ಸೊಲ್ಲಿನಲ್ಲಿಯೇ ಡಿ.ವಿ.ಜಿ. ಅವರ ಸಮುನ್ನತವಾದ ಅಭಿರುಚಿ ಮತ್ತು ಉದಾರವಾದ ದೃಷ್ಟಿಕೋನಗಳು ಸೂಚಿತವಾಗಿವೆ. ಈ ಹಿನ್ನೆಲೆಯಲ್ಲಿ ಅವರ ವೈದುಷ್ಯ ಮತ್ತು ವಿದ್ವತ್ಸಂಪರ್ಕಗಳನ್ನೂ ಬದುಕು-ಬರೆಹಗಳ ನಡುವೆ ಬಿರುಕಿಲ್ಲದ ಬಗೆಯನ್ನೂ ರಾಮಸ್ವಾಮಿಗಳು ಒಕ್ಕಣಿಸುತ್ತಾರೆ. ಇಲ್ಲಿ ಗುಂಡಪ್ಪನವರ ಮನೋಬುದ್ಧಿಗಳ ಸ್ವರೂಪದ್ಯೋತಕವಾದ ಅವರದೇ ಕೆಲವು ಪದ್ಯಗಳನ್ನು ಉದ್ಧರಿಸಿರುವುದು ಗಮನಾರ್ಹ. ಇದು ಡಿ.ವಿ.ಜಿ. ಅವರ ಸಮಗ್ರ ಸಾಹಿತ್ಯವನ್ನು ಬಲ್ಲವರಿಗಲ್ಲದೆ ಬೇರೊಬ್ಬರಿಗೆ ಸಾಧ್ಯವಾಗದ ಕೆಲಸ.
ಎಂಬತ್ತರ ಹತ್ತಿರದಲ್ಲಿದ್ದ ಡಿ.ವಿ.ಜಿ. “ಸಹಜವಾಗಿ ಮುಪ್ಪಿನಿಂದ ಒಂದಷ್ಟು ಹಿಂಸೆಯಾಗುತ್ತಿರುವುದು ನಿಜ. ಆದರೂ ನಾಲ್ಕು ಜನರ ಸ್ನೇಹ ಎಲ್ಲಿಯವರೆಗೆ ದೊರೆಯುತ್ತಿರುತ್ತದೋ ಅಲ್ಲಿಯವರೆಗೆ ಬದುಕುವ ಉತ್ಸಾಹ ಕುಗ್ಗುವುದಿಲ್ಲ. ಆಗಿಂದಾಗ ಬೇಸರವಾಗುವುದುಂಟು. ಆ ಬೇಸರಕ್ಕೆ ಮುಖ್ಯಕಾರಣ - ಕಷ್ಟಸುಖಗಳಲ್ಲಿ ನನ್ನೊಡಗಿದ್ದ ಸ್ನೇಹಿತರು ಒಬ್ಬೊಬ್ಬರಾಗಿ ಕಣ್ಮರೆಯಾಗಿರುವುದು. ಯಾವುದೋ ಒಂದು ಒಳ್ಳೆಯ ಕಾವ್ಯದಿಂದಲೋ ಪ್ರಬಂಧದಿಂದಲೋ ಮನಸ್ಸಿಗೆ ಆನಂದವಾದರೆ ಅದನ್ನು ಯಾರೊಡನೆ ಹಂಚಿಕೊಳ್ಳಲಿ? ಬಿ. ಎಂ. ಶ್ರೀಕಂಠಯ್ಯನೆ, ಟಿ. ಎಸ್. ವೆಂಕಣ್ಣಯ್ಯನೆ, ಎ. ಆರ್. ಕೃಷ್ಣಶಾಸ್ತ್ರಿಯೆ?”[1] ಎಂದು ರಾಮಸ್ವಾಮಿಯವರಿಗೆ ಹೇಳಿದ್ದ ಮಾತಿನ ಉಲ್ಲೇಖವಿದೆ. ಇದು ಪ್ರಬುದ್ಧ ಪಂಡಿತರೂ ಒಳನೋಟವುಳ್ಳ ಕವಿಗಳೂ ಆದ ಡಿ.ವಿ.ಜಿ. ಎಂಥ ಸ್ನೇಹಗುಣವನ್ನು ಹೊಂದಿದ್ದರೆಂಬುದಕ್ಕೆ ಸುಮಧುರ ಸಾಕ್ಷಿ. ಈ ಬಗೆಯ ಉಲ್ಲೇಖಗಳನ್ನು ರಾಮಸ್ವಾಮಿಯವರಷ್ಟೇ ಕೊಡಬಲ್ಲರು.
ಡಿ.ವಿ.ಜಿ. ಅವರು ಸಾಮಾನ್ಯರಲ್ಲಿ ಸಾಮಾನ್ಯರಾದ ಜನರ ಜೊತೆ ಅನುದಿನವೂ ಅಕ್ಕರೆಯಿಂದ ಮಾತನಾಡುವುದರಲ್ಲಿ ಕಾಣುತ್ತಿದ್ದ ಸಂತಸವನ್ನು ರಾಮಸ್ವಾಮಿಯವರು ಮಾತ್ರ ದಾಖಲಿಸಬಲ್ಲರು. ಡಿ.ವಿ.ಜಿ. ೧೯೧೨ಕ್ಕೂ ಮುನ್ನವೇ ಮಾಡಿದ ‘ವಂದೇ ಮಾತರಂ’ ಗೀತದ ಸಂಸ್ಕೃತಾನುವಾದದ ಪೂರ್ಣಪಾಠವನ್ನು ಇಲ್ಲಿ ನೀಡಿರುವುದು ಐತಿಹಾಸಿಕವಾಗಿ ಮುಖ್ಯವೆನಿಸುತ್ತದೆ. ಈ ಮೂಲಕ ತಾರುಣ್ಯದಲ್ಲಿಯೇ ಡಿ.ವಿ.ಜಿ. ಅವರಿಗಿದ್ದ ದೇಶಭಕ್ತಿ, ಸಂಸ್ಕೃತಭಾಷೆಯ ಅಧಿಕಾರ ಮತ್ತು ಪದ್ಯರಚನೆಯ ಕೌಶಲಗಳು ಕೂಡ ಧ್ವನಿಸಿವೆ.
ಒಬ್ಬ ಡಿ. ಆರ್. ವೆಂಕಟರಮಣನ್ ಅವರನ್ನುಳಿದು ಡಿ.ವಿ.ಜಿ. ಅವರನ್ನು ಕುರಿತು ಬರೆದವರೆಲ್ಲ ನಿರಪವಾದವೆಂಬಂತೆ ಅವರ ಸಾಹಿತ್ಯವನ್ನಷ್ಟೇ ಗಮನಿಸಿದ್ದಾರಲ್ಲದೆ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಜೀವನವನ್ನಲ್ಲ. ಆದರೆ ರಾಮಸ್ವಾಮಿಯವರು ಮಾತ್ರ ಈ ಲೇಖನದ ಮಿತಿಯೊಳಗೇ ಅನೇಕ ಸಂಗತಿಗಳನ್ನು ಈ ಕುರಿತು ಪ್ರಸ್ತಾವಿಸಿದ್ದಾರೆ; ಹೊಸ ಹೊಸ ಒಳನೋಟಗಳನ್ನು ನೀಡಿದ್ದಾರೆ. ಇದನ್ನು ಕಂಡಾಗ ಡಿ.ವಿ.ಜಿ. ಅವರ ಅಧಿಕೃತವಾದ ಜೀವನಚರಿತ್ರೆಯನ್ನು ಸಮಗ್ರವಾಗಿ ಇವರೇಕೆ ಬರೆಯಲಿಲ್ಲವೆಂಬ ಖೇದ-ಆಶ್ಚರ್ಯಗಳು ನಮಗಾಗದಿರವು. ಇಂಥ ಕೆಲಸವನ್ನು ಮಾಡಲು ಇವರೊಬ್ಬರೇ ದಿಟವಾದ ಅಧಿಕಾರಿಗಳು. ಈ ಮಹಾಕಾರ್ಯ ಆಗದೆ ಹೋದ ಕಾರಣ ನಮಗೆ ಶಾಶ್ವತವಾದ ನಷ್ಟವಾಗಿದೆಯೆಂದರೆ ಅತಿಶಯವಲ್ಲ. ಆದರೂ ರಾಮಸ್ವಾಮಿಯವರು ಕೊಟ್ಟಿರುವುದು ತುಂಬ ದೊಡ್ಡದು. ಅದರ ಗುಣವಂತೂ ಬಲು ಮಿಗಿಲು. ಹೀಗಾಗಿ ಕೃತಜ್ಞತೆಯಿಂದ ಕೈಮುಗಿಯುವುದಷ್ಟೇ ನಮಗೆ ಉಳಿಯುತ್ತದೆ.
ಡಿ.ವಿ.ಜಿ. ಅವರು ತಮ್ಮ ಇಪ್ಪತ್ತನೆಯ ವಯಸ್ಸಿನ ಹೊತ್ತಿಗೇ ಜೀವನವನ್ನೆಲ್ಲ ಸಮಾಜಸೇವೆಗೆ ಮೀಸಲಿಡಬೇಕೆಂದು ನಿಶ್ಚಯಿಸಿ ಈ ಬಗೆಗೆ ತಮ್ಮ ತಂದೆಯವರಿಗೆ ಪತ್ರ ಬರೆದಿದ್ದರಂತೆ. ಮುಳಬಾಗಿಲಿನಲ್ಲಿದ್ದ ಅವರ ತಂದೆ ಈ ಕುರಿತು ಅಲ್ಲಿಯ ತಮ್ಮ ಗೆಳೆಯರೊಡನೆ ಮಾತನಾಡಿಕೊಂಡರಂತೆ. ಸಮಾಜಸೇವೆ ಎಂದರೆ ಏನೆಂಬ ಪ್ರಶ್ನೆ ಬಂದಾಗ ಅದು ಆಕಾಶಕ್ಕೆ ಕಂಬಳಿ ಹೊದ್ದಿಸುವ ಕೆಲಸ ಎಂಬ ಗೇಲಿಯ ಉತ್ತರ ಕೂಡ ಹುಟ್ಟಿತಂತೆ! ಇದನ್ನು ಇದಂಪ್ರಥಮವಾಗಿ ದಾಖಲಿಸುವ ರಾಮಸ್ವಾಮಿ ಅವರು “ಹೀಗೆ ಆಕಾಶಕ್ಕೆ ಬೆಡ್ಷೀಟ್ ಹೊದಿಸುವ ಕೆಲಸವನ್ನು ಡಿ.ವಿ.ಜಿ. ಜೀವಮಾನವೆಲ್ಲ ಮಾಡಿದರು” ಎಂದು ಹೇಳಿ ಈ ಪ್ರಕರಣವನ್ನು ಮಾರ್ಮಿಕವಾಗಿ ಮುಗಿಸುತ್ತಾರೆ. ಇದು ಡಿ.ವಿ.ಜಿ. ಅವರ ಸಮಾಜಜೀವನಕ್ಕೆ ನಿರುಪಮ ವ್ಯಾಖ್ಯಾನ.[2]
ಲಂಡನ್ನಿನ ಪ್ರಸಿದ್ಧವಾದ ಚಕ್ರಗೋಷ್ಠಿಯಲ್ಲಿ ಅಂಬೇಡ್ಕರ್ ಅವರು ದೇಶೀಯ ಸಂಸ್ಥಾನಗಳನ್ನು ಕುರಿತು ಮಾತನಾಡುವಾಗ ಡಿ.ವಿ.ಜಿ. ಅವರ ಬರೆಹಗಳನ್ನು ಉದ್ಧರಿಸಿದ್ದ ಸಂಗತಿ ರಾಮಸ್ವಾಮಿಯವರಿಂದಲೇ ನಮಗೆ ತಿಳಿದುಬಂದಿದೆ.[3] ಇದೇ ರೀತಿ ಮತಾಂತರಗಳಿಂದ ಸಾಮಾಜಿಕ ಸಾಮರಸ್ಯದ ಹದ ಕೆಡುತ್ತಿದ್ದುದಕ್ಕೆ ಸ್ವಲ್ಪದ ಪರಿಹಾರವನ್ನಾದರೂ ತರಲು ಡಿ.ವಿ.ಜಿ. ಮತಾಂತರಗಳನ್ನು ಸರ್ಕಾರದ ಕಾರ್ಯಾಲಯಗಳಲ್ಲಿ ನೋಂದಣಿ ಮಾಡಿಸುವ ಕಾನೂನನ್ನು ತರಬೇಕೆಂದು ಗೊತ್ತುವಳಿ ಮಂಡಿಸಿದ್ದರು. ಇದು ಕೂಡ ನಮಗೆ ತಿಳಿಯುತ್ತಿರುವುದು ರಾಮಸ್ವಾಮಿಯವರ ಬರೆವಣಿಗೆಯಿಂದ.[4] ಇಂಥ ನೂರಾರು ಸಾರ್ವಜನಿಕ ಸೇವಾಕಾರ್ಯಗಳನ್ನು ಮಾಡುವಾಗ ಡಿ.ವಿ.ಜಿ. ತಮ್ಮ ಮನೆವಾಳ್ತೆಯ ಕಷ್ಟ-ನಷ್ಟಗಳಿಂದ ಕಂಗೆಡುತ್ತಿರಲಿಲ್ಲ. ಮನೆಯ ಎಲೆಕ್ಟ್ರಿಸಿಟಿ ಬಿಲ್ ಕಟ್ಟಲು ಹಣವಿಲ್ಲದ ದಿನವೂ ಅವರು ರಾಮಸ್ವಾಮಿಯವರನ್ನು ಕೂಡಿಸಿಕೊಂಡು ಅಂದಿನ ನಿಯತವಾದ ಲೇಖನವನ್ನು ಹೇಳಿ ಬರೆಸುತ್ತಿದ್ದರಂತೆ.[5]
ಹೆಚ್ಚಿನ ಕನ್ನಡಿಗರಿಗೆ ಡಿ.ವಿ.ಜಿ. ಅವರ ಸೌಮ್ಯವೂ ವಿನಯಶೀಲವೂ ಆದ ಮುಖ ಮಾತ್ರ ಗೊತ್ತು. ತೀವ್ರವಾದ ರಾಜಕೀಯ ಸಂದರ್ಭಗಳಲ್ಲಿ, ಸಮಾಜಸುಧಾರಣೆಯಲ್ಲಿ ಅವರು ತೋರ್ಪಡಿಸುತ್ತಿದ್ದ ತೀಕ್ಷ್ಣವೂ ಚಿಕಿತ್ಸಕವೂ ಆದ ಅಭಿವ್ಯಕ್ತಿ ರಾಮಸ್ವಾಮಿಯವರ ಬರೆಹದಿಂದಾಗಿಯೇ ಉಳಿದುಬಂದಿದೆ. ಇದಕ್ಕೆ ಹೆನ್ರಿ ಕಾಬ್ ಎಂಬ ರೆಸಿಡೆಂಟನ ಆಗ್ರಹದ ವಿರುದ್ಧ ಸೆಟೆದ ಸಂದರ್ಭದಿಂದ ಮೊದಲ್ಗೊಂಡು ನಾಭಾ ಸಂಸ್ಥಾನದ ದೊರೆ ರಿಪುದಮನಸಿಂಹರ ಆಕ್ಷೇಪಕ್ಕೆ ನೀಡಿದ ದಿಟ್ಟವಾದ ಉತ್ತರದವರೆಗೆ ಎಷ್ಟೋ ಸಾಕ್ಷ್ಯಗಳು ಸುದೈವದಿಂದ ನಮ್ಮೆದುರು ನಿಂತಿವೆ.
ಡಿ.ವಿ.ಜಿ. ಹತ್ತು ಹಲವು ಸರ್ಕಾರಿ ಸಂಸ್ಥೆಗಳಿಗೆ ಸದಸ್ಯರಾಗಿ ನೇಮಕಗೊಂಡಿದ್ದರು. ಈ ಕಾರಣದಿಂದ ಆಯಾ ಸಂಸ್ಥೆಗಳು ಸಹಜವಾಗಿಯೇ ಇವರು ತಮ್ಮ ಪರವಾಗಿರಲೆಂದು ಅಪೇಕ್ಷಿಸುತ್ತಿದ್ದುವು. ಅದನ್ನೊಲ್ಲದ ಡಿ.ವಿ.ಜಿ. “ನಾನು ಸಾರ್ವಜನಿಕರಿಂದ ಚುನಾಯಿಸಲ್ಪಟ್ಟ ಸದಸ್ಯನಂತೆಯೇ ನನ್ನ ಯೋಗ್ಯತಾನುಸಾರ ಪ್ರಜಾಸೇವೆ ಮಾಡುತ್ತೇನೆ” ಎಂದರು. ಅಷ್ಟೇ ಅಲ್ಲ, “ನಾನು ‘ನಾಮಕರಣ’ ಗೋತ್ರಕ್ಕೆ ಸೇರಿದವನಾದರೂ ಸರ್ಕಾರಕ್ಕೆ ‘ದತ್ತಕ’ನಾಗಿಲ್ಲ” ಎಂದು ಹೇಳಿ ತಮ್ಮ ನಿಲವನ್ನು ಇಂಗ್ಲೆಂಡಿನ ಹಲವು ರಾಜಕೀಯ ಸಂದರ್ಭಗಳ ಮೂಲಕ ಸಮರ್ಥಿಸಿಕೊಂಡರಂತೆ. ಇದು ನಮಗೆ ತಿಳಿಯುವುದು ರಾಮಸ್ವಾಮಿಯವರ ಲೇಖನಗಳಿಂದ.[6] ತಾನು ಸಮಾಜಕ್ಕೆ ಹೊಣೆಗಾರ ಎಂಬ ಪ್ರಜ್ಞೆ ಡಿ.ವಿ.ಜಿ. ಅವರಲ್ಲಿ ಸದಾ ಅಪ್ರಮತ್ತವಾಗಿ ಇರುತ್ತಿತ್ತು. ತಾವು ಕನ್ನಡಸಾಹಿತ್ಯಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ಯಾವುದೇ ಸೌಲಭ್ಯವನ್ನಾಗಲಿ, ಭತ್ಯವನ್ನಾಗಲಿ ಸ್ವೀಕರಿಸದೆ ತಮ್ಮ ಖರ್ಚಿನಲ್ಲಿ ಎಲ್ಲವನ್ನೂ ನಿರ್ವಹಿಸುತ್ತಿದ್ದುದಲ್ಲದೆ ಸಿಬ್ಬಂದಿ ಮತ್ತು ಕಾರ್ಯಕಾರಿ ಸಮಿತಿಗಳ ಮಾಸಿಕ ಸಭೆಯ ಉಪಾಹಾರದ ವೆಚ್ಚವನ್ನೂ ಸಂಸ್ಥೆಯ ಹೊರಗಿನ ಸಂಪನ್ಮೂಲಗಳಿಂದ ನಿಭಾಯಿಸುತ್ತಿದ್ದರು. ಆದುದರಿಂದಲೇ ಅವರು ಸಾತ್ತ್ವಿಕರಾದ ರಾಷ್ಟ್ರಕರು ಯಥಾಯೋಗ್ಯ ಜೀವನೋಪಾಯವನ್ನು ಏರ್ಪಡಿಸಿಕೊಂಡು ಉಳಿದಂತೆ ತಮ್ಮ ಸಮಯ, ಶ್ರಮ, ಸಂಪನ್ಮೂಲಗಳನ್ನು ಸಾರ್ವಜನಿಕ ಹಿತಕ್ಕಾಗಿ ವಿನಿಯೋಗಿಸಬೇಕೆಂದು ನಂಬಿದ್ದರು. ರಾಮಸ್ವಾಮಿಯವರು ಹೇಳುವಂತೆ ಡಿ.ವಿ.ಜಿ. ಮೆಚ್ಚುತ್ತಿದ್ದುದು ಅಂಥ ಸಜ್ಜನರನ್ನೇ ಹೊರತು “ವೃತ್ತಿಪರ ಸೇವೋತ್ಸಾಹಿ”ಗಳನ್ನಲ್ಲ! ಹೀಗಾಗಿಯೇ ದೇವಋಣ, ಋಷಿಋಣ, ಪಿತೃಋಣಗಳ ಜೊತೆಗೆ ದೇಶಋಣವೆಂಬ ನಾಲ್ಕನೆಯದನ್ನೂ ಸೇರಿಸಿಕೆಳ್ಳಬೇಕೆಂಬುದು ಅವರ ನಿಲವಾಗಿತ್ತು.[7]
‘ವಿರಕ್ತ ರಾಷ್ಟ್ರಕ ಡಿ.ವಿ.ಜಿ.’ ಗ್ರಂಥವೂ ಸೇರಿದಂತೆ ಮತ್ತೆಲ್ಲಿಯೂ ದಾಖಲೆಗೊಳ್ಳದ ಎಷ್ಟೋ ಅಪೂರ್ವ ವಿಷಯಗಳಿರುವ ‘ದೀವಟಿಗೆಗಳು’ ಗ್ರಂಥದ ಪ್ರಸ್ತುತ ಭಾಗವು ಡಿ.ವಿ.ಜಿ. ವಿದ್ಯಾರ್ಥಿಗಳಿಗೆ ಅನನ್ಯವಾದ ತವನಿಧಿ. ಈ ಸಂದರ್ಭದಲ್ಲಿ ರಾಜಕೀಯ ನಿವೃತ್ತಿಗೆ ಮನಸ್ಸು ಮಾಡಿದ ಡಿ.ವಿ.ಜಿ. ಅವರಿಗೆ ಉಪಶ್ರುತಿಯಾಗಿ ಒದಗಿದ ತ್ಯಾಗರಾಜರ ಕೃತಿಯೊಂದನ್ನು ರಾಮಸ್ವಾಮಿಯವರು ಉಲ್ಲೇಖಿಸಿರುವುದು ಕಾವ್ಯೋಪಮವಾಗಿದೆ. ಇದರೊಟ್ಟಿಗೆ ಡಿ.ವಿ.ಜಿ. ಅವರ ಬದುಕಿನಲ್ಲಿ ತ್ಯಾಗರಾಜರು ಬೀರಿದ್ದ ಪ್ರಭಾವವನ್ನು ಕುರಿತು ಇವರೇ ಬರೆದ ಬೇರೊಂದು ಲೇಖನವನ್ನೂ ನಾವಿಲ್ಲಿ ನೆನೆಯಬಹುದು.[8]
ಗೋಖಲೆ ಸಂಸ್ಥೆಯಲ್ಲಿ ಡಿ.ವಿ.ಜಿ. ನಡಸುತ್ತಿದ್ದ ವ್ಯಾಸಂಗಗೋಷ್ಠಿಯ ವಿಶೇಷವನ್ನು ಹೆಚ್ಚಿನ ಜನ ತಿಳಿದಿಲ್ಲ. ರಾಮಸ್ವಾಮಿಗಳು ಅದರ ಸ್ವಾರಸ್ಯವನ್ನು ಸೊಗಸಾಗಿ ಸಂಗ್ರಹಿಸಿದ್ದಾರೆ. ಆ ಗೋಷ್ಠಿಯಲ್ಲಿ ಎಷ್ಟೆಲ್ಲ ಗ್ರಂಥಗಳ ಅಧ್ಯಯನ ಸಾಗಿತೆಂಬ ಪ್ರತ್ಯೇಕ ಪಟ್ಟಿಯನ್ನೂ ಅವರು ಅನ್ಯತ್ರ ನೀಡಿದ್ದಾರೆ.[9] ಆ ಜ್ಞಾನಸತ್ರಗಳ ಮಹತ್ತ್ವವನ್ನು ಈ ಮಾತುಗಳಲ್ಲಿ ಮನಗಾಣಬಹುದು: “... ಅದು ಡಿ.ವಿ.ಜಿ. ಅವರಲ್ಲಿಯೂ ನಮ್ಮಲ್ಲಿಯೂ ಉಂಟುಮಾಡಿದ ತನ್ಮಯತೆ ಅಸಾಧಾರಣ ... ‘ಕಸ್ಮಿನ್ನು ಖಲು ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ?’ ‘ವಿಜ್ಞಾತಾರಮರೇ ಕೇನ ವಿಜಾನೀಯಾತ್?’ ‘ಕಥಮಸತಃ ಸಜ್ಜಾಯೇತ?’ ಮೊದಲಾದ ಪ್ರಶ್ನೆಗಳನ್ನು ನಾವೇ ಕೇಳಿ ಉತ್ತರಗಳನ್ನು ಅರಸುತ್ತಿದ್ದೇವೇನೋ ಎನಿಸುತ್ತಿತ್ತು ನಮಗೆ.”[10] ಇಂಥ ಭಾವೋನ್ನತಿಯನ್ನು ತಂದುಕೊಡುವುದಕ್ಕಿಂತ ಮಿಗಿಲಾಗಿ ಮತ್ತೇನನ್ನು ತಾನೆ ಅಧ್ಯಯನಗೋಷ್ಠಿ ಮಾಡಲು ಸಾಧ್ಯ?
ಡಿ.ವಿ.ಜಿ. ಅವರನ್ನು ಕುರಿತ ರಸವತ್ತಾದ ಚಿಟ್ಟೆಕತೆಗಳೆಷ್ಟೋ ರಾಮಸ್ವಾಮಿಯವರ ಮೂಲಕ ಶಾಶ್ವತೀಕೃತವಾಗಿವೆ. ಇವೆಲ್ಲ ಯಾವ ಭಾಷೆಯ ಸಾಹಿತ್ಯಕ್ಕೂ ಸೊಗಸನ್ನು ತರಬಲ್ಲ ರಸಘುಟಿಕೆಗಳು. ನನ್ನ ‘ಬ್ರಹ್ಮಪುರಿಯ ಭಿಕ್ಷುಕ’ ಎಂಬ ಹೊತ್ತಿಗೆಗೆ ರಾಮಸ್ವಾಮಿಯವರ ಬರೆಹಗಳೇ ಮುಖ್ಯಾವಲಂಬನ. ಇಲ್ಲಿಯ ನೂರಾರು ಪ್ರಸಂಗಗಳಲ್ಲಿ ಹೆಚ್ಚಿನವೆಲ್ಲ ‘ದೀವಟಿಗೆಗಳು’ ಪುಸ್ತಕದಿಂದಲೇ ನೇರವಾಗಿ ಹಾರಿಬಂದಿವೆ; ಬೆಳಗಿ ಬೆಳಗಿಸಿವೆ. ಈ ಸಂದರ್ಭದಲ್ಲಿ ಮತ್ತೂ ಒಂದು ಅಂಶವನ್ನು ನೆನೆಯಬೇಕು. ‘ಜ್ಞಾಪಕಚಿತ್ರಶಾಲೆ’ಯ ಹಲಕೆಲವು ಪ್ರಸಂಗಗಳಲ್ಲಿ ಡಿ.ವಿ.ಜಿ. ಅವರು ಸ್ವಂತದ ಪ್ರಸ್ತಾವ ಬರಬಾರದೆಂದು ಹಿಂಜರಿದು ಹಿಂಗಿಸಿದ ಭಾಗಗಳನ್ನು ರಾಮಸ್ವಾಮಿಯವರು ತಮ್ಮೀ ಲೇಖನದಲ್ಲಿ ಹದವರಿತು ವಿಸ್ತರಿಸಿ ಅವಕ್ಕೆ ತಕ್ಕ ನ್ಯಾಯ ಸಲ್ಲಿಸಿದ್ದಾರೆ.
ಡಿ.ವಿ.ಜಿ. ಅವರ ಸಹಧರ್ಮಿಣಿಯ ಘನತೆಯನ್ನು ಸಾರಿಹೇಳುವ ಪ್ರಕರಣವೊಂದು ಈ ಹೊತ್ತು ಸಾಹಿತ್ಯರಸಿಕರಿಗೆಲ್ಲ ಗೊತ್ತಾಗಿರುವ ಸಂಗತಿ. ಇದನ್ನು ಮೊತ್ತಮೊದಲು ಸಾರಸ್ವತ ಲೋಕದ ಎದುರು ತೆರೆದಿಟ್ಟವರು ರಾಮಸ್ವಾಮಿ. ನಾನೇ ಬಲ್ಲಂತೆ ಈ ಸಂದರ್ಭವನ್ನು ಎಷ್ಟೋ ಮಂದಿ ಬರೆಹಗಳಲ್ಲಿ, ಭಾಷಣಗಳಲ್ಲಿ ಪುನರ್ನಿರೂಪಿಸಿ ಓದುಗರ, ಕೇಳುಗರ ಕಂಬನಿಗೆ ಕಾರಣರಾಗಿದ್ದಾರೆ. ಆ ಎಲ್ಲ ಶ್ರೇಯಸ್ಸೂ ರಾಮಸ್ವಾಮಿಯವರಿಗೇ ಸಲ್ಲಬೇಕು.
ಕರುಪಯ್ಯನೆಂಬ ಕೆಲಸದವನ ಮೇಲೆ ಅದೇಕೋ ಕೆರಳಿದ ಡಿ.ವಿ.ಜಿ. ‘ನಿನ್ನನ್ನು ಸಾಯಿಸಿಬಿಡುತ್ತೇನೆ’ ಎಂದಾಗ ಆತ ಸೌಮ್ಯವಾಗಿ ‘ನಿಮ್ಮ ಕೈಯಿಂದ ನಾನು ಸಾಯುವುದಾದರೆ ಅದಕ್ಕಿಂತ ಹೆಚ್ಚಿನ ಪುಣ್ಯ ನನಗೆ ಏನಿದ್ದೀತು ಐನೋರೇ’ ಎಂದನಂತೆ. ಇದು ಡಿ.ವಿ.ಜಿ. ಅವರನ್ನು ಅಳುವಂತೆ ಮಾಡಿತು. ಈ ಸಂದರ್ಭದ ಆರ್ದ್ರತೆಗೆ ಯಾವ ವಿವರಣೆಯೂ ಬೇಕಿಲ್ಲ. ಇಂಥ ಎಷ್ಟೋ ಹೃದಯಂಗಮವಾದ ಪ್ರಕರಣಗಳನ್ನು ರಾಮಸ್ವಾಮಿಯವರು ಹೂಮಾಲೆಯನ್ನು ಹೆಣೆದಿದ್ದಾರೆ.
ಹಾಸ್ಯಪ್ರಸಂಗಗಳಿಗಂತೂ ಕೊರತೆಯೇ ಇಲ್ಲ. ಡಿ.ವಿ.ಜಿ. ಎಂದರೆ ನಿಸ್ಸಂಕೋಚವಾದ ನಗೆಬುಗ್ಗೆಯೆಂಬ ಸತ್ಯ ಇಲ್ಲಿಯ ಪುಟಪುಟಗಳಲ್ಲಿ ಪುಟಪಾಕವಾಗಿದೆ. ತಮ್ಮ ಜನ್ಮದಿನೋತ್ಸವದ ಏರ್ಪಾಟಿಗೆ ಮುಂದಾದ ವಿ.ಸೀ. ಅವರಿಗೆ ಅವರು ಬರೆದ ಕುಚೋದ್ಯದ ಪತ್ರವಂತೂ ಹಾಸ್ಯಸಾಹಿತ್ಯಕ್ಕೊಂದು ಹೊಸ ಮಾದರಿಯೆನಿಸಿದೆ. ಡಿ.ವಿ.ಜಿ. ಅವರ ವಿನೋದಗಳು ಗದ್ಯರೂಪವನ್ನಲ್ಲದೆ ಪದ್ಯರೂಪವನ್ನೂ ತಾಳುತ್ತಿದ್ದುವು. ಕನ್ನಡದಲ್ಲಿ ಮಾತ್ರವಲ್ಲದೆ ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲಿ ಕೂಡ ಆಶುಕವಿತೆಯ ರೂಪದಲ್ಲಿ ಉದ್ಭವಿಸುತ್ತಿದ್ದುವು. ಹಾಗೆ ನೋಡಿದರೆ ನಮ್ಮ ಕನ್ನಡಸಾಹಿತಿಗಳ ಪೈಕಿ ಚಾಟುಕವಿತೆ ಎಂಬ ಪ್ರಕಾರಕ್ಕೆ ಅದ್ವಿತೀಯವಾದ ನಿದರ್ಶನವಾಗಿ ನಿಂತವರು ಡಿ.ವಿ.ಜಿ. ಒಬ್ಬರೇ. ಇದೆಲ್ಲ ನಮಗೆ ದಕ್ಕಿರುವುದು ರಾಮಸ್ವಾಮಿಗಳ ಮೂಲಕ. ಹಲ್ಲುನೋವಿನೊಡನೆ ಹೆಣಗುತ್ತಿದ್ದ ಎನ್. ರಂಗನಾಥಶರ್ಮರನ್ನು ಗೇಲಿ ಮಾಡುವಾಗ ಹುಟ್ಟಿದ ಸಂಸ್ಕೃತಶ್ಲೋಕವಾಗಲಿ, ತಮ್ಮ ಅನಾರೋಗ್ಯ-ದೀರ್ಘಾಯುಷ್ಯಗಳನ್ನು ಕುರಿತು ತಾವೇ ಗೇಲಿಮಾಡಿಕೊಳ್ಳುತ್ತ ಸ್ವರಪ್ರಸ್ತಾರದ ಜೊತೆಗೆ ಹಾಡಿಕೊಳ್ಳುತ್ತಿದ್ದ ಕನ್ನಡಗೀತಗಳಾಗಲಿ, ರಾಮಸ್ವಾಮಿಯವರು ಕ್ಯಾರಮೆಲ್ ಮಿಠಾಯನ್ನು ತಂದುಕೊಟ್ಟಾಗ ಹಿಗ್ಗಿ ಅದಕ್ಕಾಗಿ ಹೊಸೆದ ತೆಲುಗಿನ ಕಂದಪದ್ಯವಾಗಲಿ ಚಾಟುಕವಿತಾಸಾಹಿತ್ಯಕ್ಕೆ ಸ್ವಾಗತಾರ್ಹವಾದ ಸೇರ್ಪಡೆಗಳು.
‘ಮಂಕುತಿಮ್ಮನ ಕಗ್ಗ’ದ ಎರಡನೆಯ ಮುದ್ರಣದಲ್ಲಿ ಡಿ.ವಿ.ಜಿ. ಅವರು ಮಾಡಿದ ಧಾರಾಳವಾದ ಪರಿಷ್ಕಾರಗಳಿಂದ ಕಂಗೆಟ್ಟ ಪ್ರಿನ್ಸಿಪಲ್ ಸಬ್ಜಡ್ಜ್ ಸಿ. ಬಿ. ಶ್ರೀನಿವಾಸರಾಯರ ಅಳಲು ನಗೆಯುಕ್ಕಿಸುವಂತಿದೆ. ಅವರ ಅಹವಾಲು ಹೀಗಿದೆ: “ನೀವು ನಮಗೆ ಯಾಕೆ ಹೀಗೆ ಕಷ್ಟ ಕೊಡುತ್ತೀರಿ? ... ಮೊದಲು ಬರೆದದ್ದನ್ನು ನಾವೆಲ್ಲ ಎಷ್ಟು ಕಷ್ಟಪಟ್ಟು ಬೈಹಾರ್ಟ್ ಮಾಡಿದ್ದೆವು! ಈಗ ಮತ್ತೆ ಅಭ್ಯಾಸ ಮಾಡಬೇಕಾಗಿದೆಯಲ್ಲ?”[11] ಕಗ್ಗಕ್ಕೆ ಇದಕ್ಕಿಂತ ಮಿಗಿಲಾದ ಪ್ರಶಂಸೆ ಬೇಕೆ?
‘ಜ್ಞಾಪಕಚಿತ್ರಶಾಲೆ’ಯನ್ನು ಪಂಡಿತಪ್ರವರ ಮಾಗಡಿ ಲಕ್ಷ್ಮೀನರಸಿಂಹಶಾಸ್ತ್ರಿಗಳು ಮೆಚ್ಚಿಕೊಂಡ ಪರಿ ಇಲ್ಲಿ ಮಾತ್ರ ದಾಖಲೆಗೊಂಡಿದೆ: “ಸತ್ತ್ವವುಳ್ಳ ಬರೆವಣಿಗೆ ಅಂದರೆ ಇದು. ಗುಂಡಪ್ಪನವರ ಗೀತೋಪನ್ಯಾಸವೂ ಇತರ ಲೇಖನಗಳೂ ಚೆನ್ನಾಗಿದ್ದವು. ಆದರೆ ಅವರ ಭಗವದ್ಗೀತೆಗಿಂತ ಹೆಚ್ಚು ಮುಖ್ಯವಾದದ್ದು ವಿಶ್ವೇಶ್ವರಯ್ಯನವರನ್ನು ಕುರಿತ ಲೇಖನಗಳೆಂದು ನನಗನ್ನಿಸುತ್ತದೆ. ಶಾಸ್ತ್ರವಾಕ್ಯಗಳನ್ನು ಎಷ್ಟು ಝಾಡಿಸಿದರೆ ಏನು ಪ್ರಯೋಜನ? ವೇದಾಂತವು ನಡತೆಯಲ್ಲಿ ತೋರಿದಾಗ ತಾನೆ ಅದಕ್ಕೊಂದು ಬೆಲೆ?”[12] ವೇದ-ವೇದಾಂತ ಮೊದಲಾದ ಚತುಶ್ಶಾಸ್ತ್ರಗಳಲ್ಲಿ ಪಾರೀಣರಾದ ಪ್ರಾಮಾಣಿಕ ವಿದ್ವಾಂಸರ ಈ ಮಾತು ಇಡಿಯ ಶಾಸ್ತ್ರಪರಂಪರೆಗೇ ಹೊಸನೋಟವನ್ನು ಕೊಡುವಂಥದ್ದು.
ಇಲ್ಲೊಂದೆಡೆ ಸಾಹಿತ್ಯದ ಪರಮೋಚ್ಚ ಪ್ರಯೋಜನವನ್ನು ಕುರಿತು ಡಿ.ವಿ.ಜಿ. ಹೇಳಿದ ಸಾರೋಕ್ತಿ ಒಕ್ಕಣೆಗೊಂಡಿದೆ: “The highest use of literature is a certain grace and serenity.” ಇದಕ್ಕಿಂತ ಒಳ್ಳೆಯ ಕಾವ್ಯಪ್ರಯೋಜನವನ್ನು ಯಾವ ಆಲಂಕಾರಿಕರು ತಾನೆ ಹೇಳಿಯಾರು?
ಡಿ.ವಿ.ಜಿ. ಅವರ ನೆನಪಿನ ಶಕ್ತಿ ತನ್ನಂತೆಯೇ ಒಂದು ದಂತಕಥೆ. ಇದಕ್ಕೆ ಹಲವು ದೃಷ್ಟಾಂತಗಳು ಈ ಕೃತಿಯಲ್ಲಿವೆ. ಅದೊಮ್ಮೆ ಬೈಬಲ್ಲಿನ ವಾಕ್ಯವೊಂದನ್ನು ರಾಮಸ್ವಾಮಿಯವರು ಹುಡುಕುವಾಗ ಅಲ್ಲಿಯ ಇಡಿಯ ಭಾಗಗಳನ್ನು ಡಿ.ವಿ.ಜಿ. ಅವರು ಉದ್ಧರಿಸಿದ ಪರಿಯಾಗಲಿ, ಸಾಹಿತ್ಯಪರಿಷತ್ತಿಗಾಗಿ ಬರೆದ ಸಲಹೆಗಳ ಪಟ್ಟಿ ಕಣ್ಮರೆಯಾದಾಗ ಅದನ್ನು ಮತ್ತೆ ಬರೆಸಿದ ಬಳಿಕ ಮೊದಲ ಕರಡು ಸಿಕ್ಕಾಗ ಎರಡೂ ಬರೆಹಗಳಲ್ಲಿ ಒಂದೇ ಒಂದು ಶಬ್ದ ಕೂಡ ವ್ಯತ್ಯಾಸವಾಗದಿದ್ದ ಸಂಗತಿಯಾಗಲಿ ಅದ್ಭುತವೆನಿಸುವಂಥವು.
ಇನ್ನು ಡಿ.ವಿ.ಜಿ. ಅವರ ಇಡಿಯೋಸಿಂಕ್ರೆಸೀಸ್ಗಳನ್ನು ಕುರಿತು ರಾಮಸ್ವಾಮಿಯವರಲ್ಲದೆ ಮತ್ತಾರು ತಾನೇ ಹೇಳಿಯಾರು? ಗೌರವ ಮತ್ತು ಸಲುಗೆಗಳೆರಡೂ ಇಲ್ಲದಿದ್ದರೆ ಇಂಥ ಅಂಶಗಳು ದಾಖಲೆಗೊಳ್ಳಲು ಸಾಧ್ಯವೇ ಇಲ್ಲ. ಭಾಷಾಶೈಲಿಯ ವಿಷಯದಲ್ಲಿ ನಡೆಯುತ್ತಿದ್ದ ಅನುದಿನದ ಪ್ರಯೋಗಗಳಾಗಲಿ, ಮಾಡುವ ಕೆಲಸ ಪರಿಷ್ಕಾರವಾಗಿರಬೇಕೆ ಅಥವಾ ತೋಚಿದಷ್ಟು ಮಾಡಿ ಬಿಸಾಡಿದರೆ ಸಾಕೆ ಎಂಬ ಹ್ಯಾಮ್ಲೆಟ್ನ ಸಂದಿಗ್ಧತೆಯಂಥ ಹೊಯ್ದಾಟಗಳಾಗಲಿ, ಬರೆಹವನ್ನು ಜೋಪಾನವಾಗಿಡಬೇಕೆಂಬ ಎಚ್ಚರದಿಂದ ಅದನ್ನೇ ಕಳೆದುಬಿಡುವಂಥ ಅಡಾವುಡಿಯಾಗಲಿ, ಪರಿಷ್ಕಾರವಾಗಿ ಹಲ್ಲುಜ್ಜಬೇಕು ಎಂದು ವಸಡುಗಳಿಂದ ರಕ್ತಸ್ರಾವ ಮಾಡಿಸಿಕೊಂಡದ್ದಾಗಲಿ, ಕಣ್ಣುಗಳು ತಂಪಾಗಿರಬೇಕೆಂದು ಕನ್ನಡಕವನ್ನು ರಾತ್ರಿಯೆಲ್ಲ ನೀರಿನಲ್ಲಿ ನೆನೆಸಿಟ್ಟಿದ್ದಾಗಲಿ, ವೆನೆರಬಲ್ ಆಗಿ ಇರುವುದೆಂದು ಏಳಡಿಯಷ್ಟು ಉದ್ದದ ಕೈಬೆತ್ತವನ್ನು ಬಳಸಬಯಸಿದ್ದಾಗಲಿ ನಮಗೆ ಮತ್ತೆಲ್ಲಿ ಸಿಗಬೇಕು?
೧೯೭೦ರಲ್ಲಿ ಪರಿಪಕ್ವ ವಯಸ್ಸಿನ ಡಿ.ವಿ.ಜಿ. ತಮ್ಮ ಜೀವನದರ್ಶನವನ್ನು ನಿವೇದಿಸಿದ ಬಗೆಯನ್ನು ರಾಮಸ್ವಾಮಿಯವರು ಹೀಗೆ ಹರಳುಗಟ್ಟಿಸಿದ್ದಾರೆ: “ಸತ್ಯದ ಜೊತೆಗೆ ಸ್ನೇಹ ಸೇರಬೇಕು. ಲೋಕಸ್ನೇಹ, ಜೀವಸ್ನೇಹ - ಇದು ಬಹಳ ಮುಖ್ಯವಾದದ್ದು. ನಮ್ಮಂತೆಯೇ ಬರಿಯ ನ್ಯಾಯವನ್ನು ಕೊಡುತ್ತೇನೆಂದು ಭಗವಂತ ಹೊರಟರೆ ಒಂದು ಕ್ಷಣವೂ ನಾವು ಸುಖವಾಗಿರುವುದು ಸಾಧ್ಯವಿಲ್ಲ! ಕರುಣೆಯಿಂದ, ಔದಾರ್ಯದಿಂದ ಭಗವಂತ ನಮಗೆ ಕೊಟ್ಟ ‘ಎಕ್ಸ್ ಗ್ರೇಷಿಯಾ’ದಿಂದಲೇ ನಮ್ಮ ಬದುಕು ಸುಖವಾಗಿರುವುದು.”[13] ಅಧ್ಯಾತ್ಮ, ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆಗಳು ಇದಕ್ಕಿಂತ ಮಿಗಿಲಾಗಿ ಮತ್ತೇನನ್ನು ತಾನೆ ಸಾಧಿಸಿಕೊಡಬಲ್ಲುವು?
ಈ ಬರೆಹದ ಪ್ರಕೃತ ಭಾಗವನ್ನು ಮನಸ್ಸಿಲ್ಲದೆಯೇ ಮುಗಿಸಬೇಕಾದ ಅನಿವಾರ್ಯತೆ ಇರುವ ಕಾರಣ ಅಸಮಗ್ರವಾಗಿಯೇ ಮಂಗಳ ಹಾಡಬೇಕಿದೆ. ಒಟ್ಟಿನಲ್ಲಿ ಇಷ್ಟನ್ನಂತೂ ಹೇಳಬೇಕು: ಡಿ.ವಿ.ಜಿ. ಅವರ ಸಾಹಿತ್ಯವನ್ನೆಲ್ಲ ಶ್ರದ್ಧಾಸಕ್ತಿಗಳಿಂದ ಓದಿಕೊಂಡ ಯಾರೇ ಆಗಲಿ, ರಾಮಸ್ವಾಮಿಯವರ ಈ ಬರೆಹವನ್ನು ಓದದಿದ್ದರೆ ಅವರ ಅಧ್ಯಯನ ಅಸಂಪೂರ್ಣ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಡಿ.ವಿ.ಜಿ. ಬರೆದ ಉಪಲಬ್ಧ ವಾಙ್ಮಯ ಹದಿನೈದು ಸಾವಿರ ಪುಟಕ್ಕೂ ಹೆಚ್ಚಿನದು. ಆ ಸುರಲೋಕಪಾರಿಜಾತಪ್ರಸೂನಗಳ ಪರಿಮಳದಂತೆ ರಾಮಸ್ವಾಮಿಯವರ ನೂರಿನ್ನೂರು ಪುಟಗಳ ಬರೆವಣಿಗೆ ಇದೆಯೆಂದರೆ ಅತಿಶಯವಲ್ಲ.
[1] ‘ದೀವಟಿಗೆಗಳು’, ಪು. ೬
[2] ‘ಡಿ.ವಿ.ಜಿ. ಮತ್ತು ಸಾರ್ವಜನಿಕ ಜೀವನ’, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ೨೫.೦೪.೨೦೦೩ ರಂದು ಮಾಡಿದ ಉಪನ್ಯಾಸದ ಲಿಖಿತರೂಪ. ಪು. ೫
[3] ‘ಡಿ.ವಿ.ಜಿ. ಮತ್ತು ಸಾರ್ವಜನಿಕ ಜೀವನ’, ಪು. ೧೨
[4] ‘ಡಿ.ವಿ.ಜಿ. ಮತ್ತು ಸಾರ್ವಜನಿಕ ಜೀವನ’, ಪು. ೧೭
[5] ‘ಡಿ.ವಿ.ಜಿ. ಮತ್ತು ಸಾರ್ವಜನಿಕ ಜೀವನ’, ಪು. ೨೮
[6] ‘ಋಷಿಕಲ್ಪ ಸಾಧಕ ಡಿ.ವಿ.ಜಿ.’, ಉತ್ಥಾನ, ಏಪ್ರಿಲ್ ೨೦೧೧, ಪು. ೯-೧೦
[7] ‘ಋಷಿಕಲ್ಪ ಸಾಧಕ ಡಿ.ವಿ.ಜಿ.’, ಪು. ೧೫
[8] ‘ವನಸುಮ’. ಡಿ.ವಿ.ಜಿ. ಜನ್ಮಶತಾಬ್ದಿ ಸಂಸ್ಮರಣಸಂಚಿಕೆ. ಬೆಂಗಳೂರು: ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ೧೯೮೭. ಪು. ೧೦೫-೦೭
[9] Selected Writings of D. V. Gundappa (Ed. Ramaswamy, S R, Shashi Kiran B N; Vol. 5), Bengaluru: Gokhale Institute of Public Affairs, 2021. pp. 4–6
[10] ‘ದೀವಟಿಗೆಗಳು’, ಪು. ೨೯
[11] ‘ದೀವಟಿಗೆಗಳು’, ಪು. ೫೨
[12] ‘ದೀವಟಿಗೆಗಳು’, ಪು. ೫೫
[13] ‘ಋಷಿಕಲ್ಪ ಸಾಧಕ ಡಿ.ವಿ.ಜಿ.’, ಪು. ೨೦
ನಾಡೋಜ ಎಸ್. ಆರ್. ರಾಮಸ್ವಾಮಿ ಅವರ ಗೌರವಗ್ರಂಥ "ದೀಪಸಾಕ್ಷಿ"ಯಲ್ಲಿ (ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬೆಂಗಳೂರು, ೨೦೨೨) ಪ್ರಕಟವಾದ ಲೇಖನ.
To be continued.