ಮಾಸ್ತಿ ಅವರು ಕಾಣಿಸಿದ ಗಂಡ-ಹೆಂಡಿರು ವಿಪ್ರಕುಲದವರು. ಅವರಿಬ್ಬರ ಸಂಸ್ಕಾರಪರಿಪಾಕಕ್ಕೆ ಆ ಕಾಲದಲ್ಲಿ ಈ ವರ್ಣಕ್ಕೆ ಸಹಜವಾಗಿಯೇ ಒದಗಿಬರುತ್ತಿದ್ದ ಅರಿವು-ಮನ್ನಣೆಗಳ ಅನುಕೂಲತೆಯೂ ನೆರವಾಗಿದೆ ಎನ್ನಬಹುದು. ಆದರೆ ನಾವೀಗ ನೋಡಲಿರುವ ಶಿವರಾಮ ಕಾರಂತರ ಕಲಾಸೃಷ್ಟಿಯ ಎರಡು ಗೌಣಪಾತ್ರಗಳಾದ ಪಮ್ಮ ಮತ್ತು ದುಗ್ಗಿಯರಿಗೆ ಇಂಥ ಸೌಲಭ್ಯವೂ ಇಲ್ಲ. ‘ಮೈ ಮನಗಳ ಸುಳಿಯಲ್ಲಿ’ ಎಂಬ ರಸೋಜ್ಜ್ವಲ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಈ ಜೋಡಿ ಸಿರಿ-ಅರಿಮೆಗಳ ಸಮೃದ್ಧಿಗಿರಲಿ, ಸಾಮಾನ್ಯದ ಹೊತ್ತುಹೊತ್ತಿನ ತುತ್ತಿಗೂ ಕಷ್ಟ ಪಡಬೇಕಿರುವ ಜೀವಗಳು. ಕಾರಂತರೇ ಹೇಳುವಂತೆ ಅವರು “ಮುಟ್ಟಾಳುಗಳಲ್ಲ.” ಅಂದರೆ, ಅಸ್ಪೃಶ್ಯತೆಯ ದಬ್ಬಾಳಿಕೆಯಲ್ಲಿ ನಲುಗಿದ ಸಮುದಾಯದವರು; ಕುಗ್ರಾಮಗಳಲ್ಲಿಯೋ ಅವುಗಳಾಚಿನ ಕಾಡು-ಮೇಡುಗಳಲ್ಲಿಯೋ ಪ್ರಾಯಶಃ ಬಾಳನ್ನು ಕಳೆಯಬೇಕಾದ ಹತಭಾಗ್ಯರು. ಈ ಜೋಡಿಯೂ ಮುಪ್ಪಿನ ಸೆರಗಿನೊಳಗೆ ಸೇರುವಂಥದ್ದೇ. ಹೆಂಡತಿ ದುಗ್ಗಿ ಕಣ್ಣನ್ನು ಕಳೆದುಕೊಂಡಿದ್ದಾಳೆ; ಗಂಡ ಪಮ್ಮನೇ ಅವಳ ಪಾಲಿಗೆ ಕಣ್ಣು-ಕೈ ಎಲ್ಲವೂ ಆಗಿದ್ದಾನೆ.
ಕಾಮ-ಪ್ರೇಮಗಳ, ವಿಪ್ರಲಂಭ-ಸಂಭೋಗಗಳ ದಡಗಳ ನಡುವೆ ಅಂಕುಡೊಂಕಾಗಿ ಹರಿಯುವ ಈ ಕಾದಂಬರಿಯ ನಾಯಿಕೆ ಮಂಜುಳೆಯ ಬಾಳಿನಲ್ಲಿ ನಾಲ್ಕಾರು ತಿಂಗಳುಗಳ ಅವಧಿಯೊಳಗೆ ವಾರಕ್ಕೊಮ್ಮೆ ಕಾಣಸಿಗುತ್ತಿದ್ದ ದುಗ್ಗಿ-ಪಮ್ಮರು ಅವಳಿಗೆ ಆಕಸ್ಮಿಕವಾಗಿ ಪರಿಚಿತರಾದ ಹಾದಿಹೋಕರು. ಮಳೆಗಾಲದ ಬಳಿಕ ಅದೊಂದು ಉರಿಬಿಸಿಲಿನ ಮಧ್ಯಾಹ್ನದಲ್ಲಿ ಪಮ್ಮ-ದುಗ್ಗಿಯರು ಮಂಜುಳೆಯ ಮನೆಯ ಬಳಿ ಸುಳಿಯುತ್ತಾರೆ. ಬಾಯಾರಿ ಬಂದ ಅವರಿಗೆ ಮಂಜುಳೆ ಕೆಲಸದವಳ ಮೂಲಕ ನೀರು-ಬೆಲ್ಲಗಳನ್ನು ಕೊಡಿಸಿ ದಣಿವಾರಿಸಿಕೊಳ್ಳಲು ಅಂಗಳದ ಅಂಚಿನಲ್ಲಿ ಎಡೆ ನೀಡುತ್ತಾಳೆ. ಮಂಜುಳೆ ಊಟ ಮುಗಿಸಿ ಒಂದು ಘಂಟೆಯ ವಿಶ್ರಾಂತಿಯನ್ನೂ ಪಡೆದು ಹಿತ್ತಲಿಗೆ ಬಂದಾಗ ಪಮ್ಮ-ದುಗ್ಗಿಯರಿನ್ನೂ ಅಲ್ಲಿಯೇ ಇರುತ್ತಾರೆ. ಹೊಟ್ಟೆಗಿಲ್ಲದಿದ್ದರೂ ಬೆಲ್ಲ-ನೀರುಗಳಿಂದಲೇ ಸಂತೃಪ್ತರಾಗಿರುತ್ತಾರೆ. ದುಗ್ಗಿಗೆ ಪಮ್ಮ ನಗುನಗುತ್ತ ಏನೇನೋ ಕಥೆಗಳನ್ನು ಕೂಡ ಹೇಳುತ್ತಿರುತ್ತಾನೆ. ಅವರನ್ನು ಕಂಡ ಮಂಜುಳೆಯ ಅಂತಃಕರಣ ಕರಗುತ್ತದೆ. ಬಿಸಿಲಲ್ಲಿ ಬಂದು ಅಷ್ಟು ಹೊತ್ತಿನಿಂದ ಕುಳಿತಿದ್ದ ಆ ಹಿರಿಯರಿಗೆ ಉಣ್ಣಲು ಏನನ್ನೂ ಕೊಡಲಿಲ್ಲವಲ್ಲಾ ಎಂಬ ಕಳವಳದಿಂದ ತಾನುಂಡು ಮಿಕ್ಕ ಅಡುಗೆಯನ್ನೆಲ್ಲ ಅವರಿಗೆ ಕೊಡಿಸುತ್ತಾಳೆ.
ಗಂಡ-ಹೆಂಡಿರಿಬ್ಬರೂ ಹಿಗ್ಗಿನಿಂದ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಪಮ್ಮ ದುಗ್ಗಿಯ ಎಲೆಗೆ ಹೆಚ್ಚಾಗಿಯೇ ಬಡಿಸಿ ಅವಳ ಎಲೆಯ ಮೇಲೆ ಯಾವ ಪದಾರ್ಥ ಎಲ್ಲಿದೆಯೆಂದು ತಿಳಿಸಿ ಅದರಂತೆ ಅವಳು ಅಡುಗೆಯನ್ನು ಸವಿಯತೊಡಗಿದ ಬಳಿಕ ತಾನೂ ತನ್ನ ಎಲೆಗೆ ಕೈಹಾಕುತ್ತಾನೆ. “ಇಂಥ ಹುಳಿ ಉಣ್ಣಬೇಕಾದರೆ ಪಡೆದು ಬರಬೇಕು; ಚೆನ್ನಾಗಿ ಕಲಸಿಕೋ. ಉಣ್ಣು, ಚಿಪ್ಪಿನಲ್ಲಿ ಇನ್ನೂ ಉಂಟು”[1] ಎಂದು ಉಪಚರಿಸುತ್ತಾನೆ. ಉಂಡ ಬಳಿಕ ಇಬ್ಬರ ಎಲೆಗಳನ್ನೂ ಎತ್ತಿಹಾಕಿ ಗೋಮಯ ಮಾಡಿ ಕೈ ತೊಳೆದುಕೊಂಡು, ದುಗ್ಗಿಯ ಕೈಯನ್ನೂ ತೊಳಿಸಿ, ಅವಳ ಕೈ ಹಿಡಿದು ಮಂಜುಳೆಯ ಬಳಿ ಬಂದು “ದುಗ್ಗಿ, ಒಡತಿಗೆ ಹೋಗಿಬರುತ್ತೇನೆಂದು ಹೇಳು” ಎಂದು ಅವಳ ಮುಗಿದ ಕೈಗಳನ್ನು ಆಕೆಯತ್ತ ತಿರುಗಿಸುತ್ತಾನೆ. ಅದು ಮಂಜುಳೆಯ ಮುಖಕ್ಕೆ ಸಲ್ಲಿಸಿದ ಮಾಂಗಲಿಕವಾದ ಆರತಿಯಂತೆ ಕಂಡಿತಂತೆ.
ಬಳಿಕ ಮಂಜುಳೆ ಅವರ ಪೂರ್ವೋತ್ತರವನ್ನು ಆಸ್ಥೆಯಿಂದ ವಿಚಾರಿಸಿಕೊಳ್ಳುತ್ತಾಳೆ. ಅವರಿಬ್ಬರೂ ಮಂಜುಳೆಯ ನೆಲೆಯಾದ ಬಸರೂರಿನಿಂದ ಎರಡು ಮೈಲಿ ದೂರವಿರುವ ಆನಗಳ್ಳಿ ಬಯಲಿನವರು. ವಾರಕ್ಕೊಮ್ಮೆ ಬಸರೂರಿಗೆ ನಡೆದುಬಂದು ಇಲ್ಲಿಯವರು ಕೊಟ್ಟದ್ದನ್ನು ತಿಂದು ಹೋಗುವರೆಂದು ತಿಳಿಯುತ್ತದೆ. “ಪಮ್ಮ, ಏನೂ ದಾಕ್ಷಿಣ್ಯ ಮಾಡಬಾರದು. ನೀವು ಯಾವಾಗ ಬಂದರೂ ಸರಿಯೆ ... ಒಂದು ಗಳಿಗೆ ಇಲ್ಲಿಗೆ ಬಂದು ಒಂದು ಮುಷ್ಟಿ ಉಂಡು ಹೋಗಬೇಕು. ನಿಮಗೆ ಹೆಚ್ಚೇನೂ ಕೊಡಲಾರೆ” ಎಂದು ಮಂಜುಳೆ ಅಕ್ಕರೆಯ ಆಹ್ವಾನ ನೀಡಿ ಬೀಳ್ಕೊಡುತ್ತಾಳೆ. ಅವಳೇ ಹೇಳಿಕೊಳ್ಳುವಂತೆ ಈ ಪುಣ್ಯದಂಪತಿಯನ್ನು ಮುಂದೆ ನಾಲ್ಕಾರು ತಿಂಗಳ ಕಾಲ ವಾರಕ್ಕೊಮ್ಮೆ ಕಾಣುವ ಭಾಗ್ಯ ದಕ್ಕಿತಂತೆ. ಪಮ್ಮ ತನ್ನ ಕುರುಡು ಮಡದಿ ದುಗ್ಗಿಯನ್ನು ಕರೆದುಕೊಂಡು ಬಂದ ರೀತಿ, ಊಟ ಮಾಡಿಸಿದ ರೀತಿ, ಕೈಹಿಡಿದು ಏಳಿಸಿದ ಕ್ರಮ, ಊಟದ ತೃಪ್ತಿಯನ್ನು ಅವಳು ಮುಖದಲ್ಲಿ ತೋರಿಸಿದ ಬಗೆ, ಅವಳ ಆನಂದದಿಂದ ಅವನಿಗಾದ ಹಿಗ್ಗು ಅನ್ಯಾದೃಶವೆನಿಸಿತ್ತು. ಆ ಮುಪ್ಪಿನಲ್ಲಿ ಕೂಡ ಅದು ಅಷ್ಟೊಂದು ಪಕ್ವವಾಗಿ, ಸುಂದರವಾಗಿ ಉಳಿದಿರಬೇಕೆಂದರೆ ಅವರ ದಾಂಪತ್ಯ ಮೊದಲ್ಗೊಂಡ ಹರೆಯದಲ್ಲಿ ಅದು ಹೇಗಿದ್ದಿರಬಹುದೆಂಬ ರಸವಿಸ್ಮಯವೂ ಅವಳಲ್ಲಿ ಉಂಟಾಯಿತಂತೆ. ಒಂದಿರುಳಿನ ಸ್ವಪ್ನದಲ್ಲಿ ದುಗ್ಗಿ-ಪಮ್ಮರು ತಾರುಣ್ಯದ ವಧೂ-ವರರಾಗಿ ಕುದುರೆಯನ್ನೇರಿ ಬರುತ್ತಿದ್ದಂತೆ ಮಂಜುಳೆಗೆ ತೋರಿತಂತೆ. ಅವರ ಕುದುರೆ ಆಕಾಶಕ್ಕೆ ನೆಗೆದು ಇಂದ್ರಲೋಕಕ್ಕೆ ಹೋಯಿತಂತೆ. ಇವರ ದಾಂಪತ್ಯಪ್ರೀತಿಯನ್ನು ಕಂಡ ದೇವತೆಗಳೂ ನಾಚಿಕೊಂಡರಂತೆ.
ಹದಿನೈದು ದಿನಗಳ ಬಳಿಕ ಪಮ್ಮ-ದುಗ್ಗಿಯರು ಎಂದಿನಂತೆ ಕಾಣಿಸಿಕೊಳ್ಳಲಿಲ್ಲ. ಮತ್ತೂ ಒಂದು ವಾರ ಕಳೆಯಿತು. ಕಳವಳಗೊಂಡ ಮಂಜುಳೆ ತನಗೆದುರಾದ ಆನಗಳ್ಳಿ ಬಯಲಿನ ಯಾರೋ ಹಾದಿಹೋಕರನ್ನು ಈ ಬಗೆಗೆ ವಿಚಾರಿಸಿದಳು. ಆತ ಹೇಳುತ್ತಾನೆ: “ಆ ಜಬ್ಬ ಜಬ್ಬಿ ಅಲ್ಲವೆ? ತುಂಬ ಒಳ್ಳೆಯವರು. ಪುಣ್ಯ ಮಾಡಿ ಬಂದವರು. ಮೊನ್ನೆ ಶನಿವಾರ ಅವಳು ಹೋದಳು; ಮರುದಿನವೇ ಪಮ್ಮನೂ ಹೋದ.” ಇದನ್ನು ಕೇಳಿದ ಮಂಜುಳೆಗಾದ ಸಂಕಟ ಅಷ್ಟಿಷ್ಟಲ್ಲ.
ಅವಳ ಭಾವಸಂಚಲನವನ್ನು ಕಾರಂತರ ಮಾತಿನಲ್ಲಿಯೇ ಕೇಳಬಹುದು: “ನಾನು ನನ್ನ ಬಾಳಿನ ಉದ್ದಕ್ಕೂ ಹಿಂದಿನಿಂದ ಇಂದಿನ ತನಕವೂ ಶೃಂಗಾರ, ಪ್ರಣಯ, ಸುಖ ಮತ್ತೊಂದು - ಎಂದು ಅನ್ನುತ್ತಲೇ ಬಂದಿದ್ದೇನೆ. ನನ್ನ ಕಲ್ಪನೆಯಲ್ಲಿ - ಗಂಡು ಹೆಣ್ಣುಗಳು ಹತ್ತಿರ ಬಂದು ಮಾತನಾಡುವುದು, ಬಿನ್ನಾಣ ತೋರಿಸುವುಸು, ಕೂಡುವುದು - ಇವಕ್ಕಿಂತ ಹೆಚ್ಚಿನ ಅರ್ಥ ಎಂದೂ ಹೊಳೆದಿರಲಿಲ್ಲ. ನಾನು ‘ಮೈ-ಮನಸ್ಸು’ ಎನ್ನುವ ಉದ್ದುದ್ದದ ಮಾತುಗಳೆಲ್ಲ ಇಷ್ಟಕ್ಕೇ ಸೀಮಿತವಾದುವು. ಯಾವುದಕ್ಕಾಗಿ ಈ ಸಂಭ್ರಮ? ಇವೆರಡರಲ್ಲಿ ಒಂದಿದ್ದು, ಒಂದಿಲ್ಲವಾದರೆ ಯಾಕೆ ಈ ಕಷ್ಟ ಎಂಬುದನ್ನು ಅನುಭವಿಸಿದ್ದೇನೆ, ನೊಂದಿದ್ದೇನೆ, ಗೊಣಗಿದ್ದೇನೆ - ಅಷ್ಟೇನೆ. ಅದು ಹೇಗಿದ್ದೀತು - ಎಂದು ಕೊಕ್ಕರಣೆ ಶೀನನ ಅರ್ಥದಿಂದಲೋ, ಅಡಿಗಳ ಮನೆಯಲ್ಲಿ ಕೇಳಿದ ಕಾವ್ಯಗಳ ವಿವರಣೆಯಿಂದಲೋ, ಗುರು ಕಲಿಸಿದ ಚೀಸಿನಿಂದಲೋ, ಇಣಿಕಿನೋಡಲು ಹೋದರೆ, ಬರಿಯ ತೊಗಟೆ ಕಾಣಿಸುತ್ತಿತ್ತು. ತಿರುಳು ಕಾಣಸಿಗಲಿಲ್ಲ. ಪಮ್ಮ-ದುಗ್ಗಿಯರನ್ನು ಆ ಮುಪ್ಪಿನಲ್ಲಿ ಕಂಡಾಗ, ಅವರು ಒಬ್ಬೊಬ್ಬರನ್ನು ಕಡು ದಾರಿದ್ರ್ಯದಲ್ಲೂ ನಡೆಯಿಸಿದ ರೀತಿಯನ್ನು ಕಂಡಾಗ, ಶೃಂಗಾರಕ್ಕೆ ಬೇಕಾದ ವಯ್ಯಾರ ಬಿನ್ನಾಣ, ಒನಪು ಮತ್ತೊಂದುಗಳು - ಆಭರಣದಿಂದ, ಅಲಂಕಾರದಿಂದ, ಸೀರೆಯಿಂದ, ಬೇಕಾದರೆ ನನ್ನ ಸಂಗೀತದಿಂದಲೂ ಬರಲಾರವು. ಅವು ಒಳಗಿದ್ದರೆ ತಾವಾಗಿಯೇ ಹೊರಬರುತ್ತವೆ. ಅವಕ್ಕೆ ಕೃತಕ ಆಭರಣ ಬೇಡ - ಅನ್ನಿಸಿತು. ಪಮ್ಮ ದುಗ್ಗಿಯರ ಬಾಳು ಹರೆಯದಲ್ಲಿ ಅದೆಷ್ಟು ಸೊಗಸಿಂದ ಬೆರೆತಿತ್ತೋ, ಬೇಳೆದಿತ್ತೋ! ಹಾಗಾಗಿ ಗಂಡು ಹೆಣ್ಣುಗಳಲ್ಲಿನ ಮೈಯ ಆಕರ್ಷಣೆ ಕಳೆದ ಮೇಲೆಯೂ, ಅದು ತನ್ನ ಸವಿಯನ್ನು, ಸೊಗಸನ್ನು ಕಳೆದುಕೊಳ್ಳಲೇ ಇಲ್ಲ.”
ಈ ಆಲೋಚನೆಯ ಜೊತೆಗೇ ಮಂಜುಳೆಗೆ ಬಾಲ್ಯದಿಂದ ತಾನು ಬಲ್ಲ ರಾಮಪ್ಪ ಅಡಿಗಳ ಹಾಗೂ ಅವರ ಮಡದಿ ಕಾವೇರಮ್ಮನವರ ದಾಂಪತ್ಯ ನೆನಪಾಗುತ್ತದೆ. ಬ್ರಾಹ್ಮವಿವಾಹದ ಸಪ್ತಪದಿಯನ್ನು ತುಳಿದು ಗೃಹಸ್ಥಧರ್ಮದ ಬಾಧ್ಯತೆಯನ್ನು ಬಲ್ಲವರವರು. ಕಾವ್ಯಾದಿಗಳ ಸಂಸ್ಕಾರವನ್ನು ಉಳ್ಳವರು ಕೂಡ. ಆದರೂ ಅವರಲ್ಲಿ ಅನುರಾಗದ ಮಾರ್ದವ ಮೃಗ್ಯವಾಗಿತ್ತು. ಇದನ್ನೇ ಪರಿಭಾವಿಸುತ್ತ ಮಂಜುಳೆ ಹೀಗೆಂದುಕೊಳ್ಳುತ್ತಾಳೆ: “ಅಗ್ನಿಯ ಸುತ್ತ ಏಳು ಸುತ್ತು ಬರಲಿ, ಎಪ್ಪತ್ತು ಸುತ್ತು ಬರಲಿ, ಸುತ್ತಿದ್ದು ಸಾರ್ಥಕವಾಗಬೇಕಿದ್ದರೆ ದುಗ್ಗಿ ಪಮ್ಮರ ಹಾಗಿರಬೇಕು. ಹಾಗಿರುತ್ತೇವೆಂದು ಒಬ್ಬರಿಗೊಬ್ಬರು ಅಭಯ ಕೊಟ್ಟು ಕೊನೆಗೆ ‘ಏ ಹೆಣ್ಣೇ, ನಿನ್ನ ಮಗುವನ್ನು ನೋಡು’ ಎನ್ನುವ ಸ್ಥಿತಿ ಬಂದುದಾದರೆ, ಅದಕ್ಕಿಂತ ಅಂಥ ಕಟ್ಟಿಗೆ ಸಿಲುಕದ, ಮಾತು ಕೊಟ್ಟು ಮೋಸ ಮಾಡದ ನನ್ನಂಥವಳ ಬಾಳ್ವೆ ಒಳ್ಳೆಯದಲ್ಲವೇ? ನಡೆಯಿಸಿದಂಥ ಯಾವುದೇ ಮಾತು ಎಷ್ಟು ಗಂಭೀರವಾಗಿದ್ದರೇನಂತೆ!”
ಮಂಜುಳೆಗೆ ದುಗ್ಗಿ-ಪಮ್ಮರು ಮತ್ತೆ ಮತ್ತೆ ನೆನಪಾಗುತ್ತಿರುತ್ತಾರೆ. ಅವಳ ಆಲೋಚನಸರಣಿ ಹೀಗೆ ಸಾಗುತ್ತಿತ್ತು: ತನಗೂ ಒಬ್ಬ ‘ಪಮ್ಮ’ ಸಿಗಬಾರದೇಕೆ? ಆದರೆ ದೇವದಾಸಿಯರಾಗಿ ಬೆಲೆವೆಣ್ಣುಗಳ ನೆಲೆಗಿಳಿದ ತಮ್ಮಂಥವರಿಗೆ ‘ನೀನು ದುಗ್ಗಿಯಾಗು; ನಾನು ಪಮ್ಮನಾಗುತ್ತೇನೆ’ ಎನ್ನುವ ಮಾತನ್ನು ಕೇಳುವ ಅವಕಾಶವೇ ಇಲ್ಲವಲ್ಲ! ಆಗುವ ಗುಣವನ್ನು ಹೆಣ್ಣು ಪಡೆದಿರಬೇಕು. ಅದನ್ನು ಮೆಚ್ಚುವುದಕ್ಕೆ ಗಂಡು ಕಲಿತಿರಬೇಕು. ಗಂಡಿನಲ್ಲೂ ಪಮ್ಮನಾಗುವ ಮನೋಬುದ್ಧಿಗಳು ಯೌವನಕ್ಕಿಂತ ಮೊದಲೇ ಹುಟ್ಟಿರಬೇಕು.
ಸಾಮಾನ್ಯವಾಗಿ ಶಿವರಾಮ ಕಾರಂತರನ್ನು ಖಾರವಾದ, ನೇರವಾದ ಅಭಿಪ್ರಾಯಗಳ ಕಟ್ಟುನಿಟ್ಟಿನ ಲೇಖಕರೆಂದು ಭಾವಿಸುವುದುಂಟು. ಆದರೆ ದುಗ್ಗಿ-ಪಮ್ಮರ ಈ ಪ್ರಕರಣವನ್ನು ಅವರು ನಿರ್ವಹಿಸಿದ ಪರಿಯನ್ನು ಕಂಡಾಗ ಈ ಮಟ್ಟದ ನಯ-ನವುರುಗಳೂ ಪ್ರಾಮಾಣಿಕತೆಯ ಕೋಮಲತೆಯೂ ಕಾಳಿದಾಸ-ಭವಭೂತಿಗಳಂಥ ಅಭಿಜಾತಕವಿಗಳಿಗೆ ಕೂಡ ಕಷ್ಟಸಾಧ್ಯವೆಂಬ ಕಲ್ಪನೆ ನಮಗಾಗುತ್ತದೆ. ಇದಕ್ಕೆ ಲೇಖಕರ ಉದಾತ್ತರಮಣೀಯ ಮನೋಧರ್ಮ ಎಷ್ಟರ ಮಟ್ಟಿಗೆ ಕಾರಣವೋ ಅಷ್ಟರ ಮಟ್ಟಿಗೆ ‘ಜರಸಾ ಯಸ್ಮಿನ್ನಹಾರ್ಯೋ ರಸಃ’ ಎಂಬ ದಿವ್ಯಶೃಂಗಾರದ ಆದರ್ಶವೂ ಕಾರಣ. ಡಿ.ವಿ.ಜಿ. ಅವರು “The highest use of literature is a certain grace and serenity”[2] ಎಂದು ಸಾಂದರ್ಭಿಕವಾಗಿ ಹೇಳಿದ ಮಾತಿಲ್ಲಿ ಸ್ಮರಣೀಯ. ಡಿ.ವಿ.ಜಿ. ಅವರ ಇಂಗಿತದಲ್ಲಿರುವ ‘grace and serenity’ ಕಾವ್ಯೇತರವಾದ ಈ ಜಗತ್ತಿನಲ್ಲಿ ಕಂಡುಬರುವುದಿದ್ದಲ್ಲಿ ಅದು ಇಂಥ ‘ಆವರಣಾತ್ಯಯಾತ್ ಪರಿಣತೇ ಯತ್ ಪ್ರೇಮಸಾರೇ ಸ್ಥಿತಂ’ ಎಂಬ ಪರಿಪಾಕದಿಂದಲೇ. ಇಷ್ಟಕ್ಕೂ ಕಲೆ-ಸಾಹಿತ್ಯಗಳೆಲ್ಲ ನಮ್ಮ ಜೀವನದ ಸಾರವದ್ಭಾಗಗಳ ಶಾಶ್ವತೀಕರಣದ ಹಂಬಲಗಳಲ್ಲದೆ ಇವುಗಳಿಗಿಂತ ಹೊರತಾದ ಭ್ರಾಮಕ ಕಲ್ಪನೆಗಳಲ್ಲವಷ್ಟೆ.
* * *
ಮಾಸ್ತಿ ಅವರು ಕಾಣಿಸಿದ ಪರಿಣತದಾಂಪತ್ಯದ ಪ್ರೀತಿಪರಿಪಾಕ ಒಂದು ಐತಿಹ್ಯದ ಹಂದರದ ಮೇಲೆ ಹಬ್ಬಿದ ಬಳ್ಳಿ. ಕಾರಂತರ ಇದೇ ಬಗೆಯ ರಸಸೃಷ್ಟಿ ಪ್ರತ್ಯಕ್ಷಜೀವನದಲ್ಲಿ ಅವರು ಕಂಡ ದೃಶ್ಯದ ಮೇಲೆ ರೂಪ ತಳೆದ ಪ್ರತಿಭಾಫಲ.[3] ಆದರೆ ಈಗ ನಾವು ಗಮನಿಸಲಿರುವ ಪ್ರಸಂಗ ಲೇಖಕರೇ ಕಂಡ ವಾಸ್ತವ. ಇದು ಡಿ.ವಿ.ಜಿ. ಅವರ ವ್ಯಕ್ತಿಸ್ಮೃತಿಚಿತ್ರರೂಪದ ಮಹಾಕಾವ್ಯದಂತಿರುವ ‘ಜ್ಞಾಪಕಚಿತ್ರಶಾಲೆ’ಯ ಕಡೆಯ ಭಾಗ ‘ಸಂಕೀರ್ಣ ಸ್ಮೃತಿಸಂಪುಟ’ದ ಕಟ್ಟಕಡೆಯ ಅಧ್ಯಾಯವಾದ ‘ಹೃದಯಸೌಂದರ್ಯ: ಒಂದು ಮಧುರ ಸ್ಮೃತಿ’[4] ಎಂಬಲ್ಲಿ ಚಿತ್ರಿತವಾದ ವೃದ್ಧದಂಪತಿಯ ಜೀವನಶಕಲದಲ್ಲಿ ಸಾಕ್ಷಾತ್ಕರಿಸಿದೆ.
ಅವು ೧೯೨೦-೨೧ರ ಆಸುಪಾಸಿನ ದಿನಗಳು. ಡಿ.ವಿ.ಜಿ. ಅವರ ‘The Karnataka’ ಆಂಗ್ಲಪತ್ರಿಕೆಯ ಅವಸಾನಕ್ಕೆ ಕ್ಷಣಗಣನೆಯಾಗುತ್ತಿದ್ದ ಕಾಲ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿಯಲ್ಲಿದ್ದ ನವರತ್ನ ಅಂಡ್ ಕಂಪೆನಿ ಅವರ ಮುದ್ರಣಾಲಯದಲ್ಲಿ ಪತ್ರಿಕೆಯ ಕಾರ್ಯ ಸಾಗುತ್ತಿತ್ತು. ಪ್ರತಿದಿನ ಡಿ.ವಿ.ಜಿ. ಅಲ್ಲಿಗೆ ಬಂದು ಮುದ್ರಣಾಲಯದ ಅಂಗಳದಲ್ಲಿ ಕುಳಿತು ಬರೆಹ, ಕರಡುತಿದ್ದುಗೆ ಮುಂತಾದ ಕೆಲಸದಲ್ಲಿ ತೊಡಗುತ್ತಿದ್ದರು. ಆಗ ಮುದ್ರಣಾಲಯದ ಪಕ್ಕದ ಮಂಡಿಯ ಹಿಂದಿದ್ದ ಕೈಸಾಲೆಯಲ್ಲಿ ವಾಸ ಮಾಡುತ್ತಿದ್ದ ವೃದ್ಧದಂಪತಿಯ ಬದುಕು ಅವರ ಗಮನಕ್ಕೆ ಬಂದಿತು. ಸಹಜವಾಗಿಯೇ ಜೀವಕುತೂಹಲ ಮತ್ತು ಜೀವನಶ್ರದ್ಧೆಗಳನ್ನುಳ್ಳ ಡಿ.ವಿ.ಜಿ. ಅವರಿಗೆ ಈ ಬೀದಿಭಿಕಾರಿಗಳ ಬಾಳಿನಲ್ಲಿ ಆಸ್ಥೆ ಮೂಡಿತು.
ಮುದುಕಿ ಮಂಡಿಯ ಕಸ ಗುಡಿಸುವ ಕೆಲಸದಲ್ಲಿದ್ದಳು. ಮುದುಕ ಮುಪ್ಪು ಮತ್ತು ಅನಾರೋಗ್ಯಗಳ ಕಾರಣ ದುಡಿಯಲಾಗದೆ ಸದಾ ಹಾಸಿಗೆಗಂಟಿ ವಿಶ್ರಮಿಸುತ್ತಿದ್ದ. ಹೆಂಡತಿ ಬೆಳಗ್ಗೆ ತಾನು ಕಸ ಬಳಿಯುವಾಗ ಹೆಕ್ಕಿಕೊಂಡಿರುತ್ತಿದ್ದ ಹಳೆಯ, ಕೊಳೆತ ತರಕಾರಿಗಳನ್ನು ಶೋಧಿಸಿ, ಅಲ್ಲಿಯ ಹುಳುಕು-ಕೊಳಕುಗಳನ್ನೆಲ್ಲ ಕತ್ತರಿಸಿ ತೆಗೆದು ಬೇಯಿಸುತ್ತಿದ್ದಳು. ಈ ಪಾಕ ಸಾಗುವಾಗಲೇ ಗಂಡನ ಸ್ನಾನನಿಗೆ ಅಣಿಯಾಗುತ್ತಿತ್ತು. ಬಲುಮಟ್ಟಿಗೆ ಬೀದಿಯಲ್ಲಿಯೇ ಬಾಳುತ್ತಿದ್ದ ಆ ದಂಪತಿಯ ಆಸ್ತಿಯೆಲ್ಲ ಕೆಲವು ಮಡಕೆ-ಕುಡಿಕೆಗಳು, ನಾಲ್ಕೈದು ಚಿಂದಿಬಟ್ಟೆಗಳು. ಮುದುಕಿ ಬೀದಿಯ ಕಸ-ಕಡ್ಡಿಗಳನ್ನು ಉರುವಲಾಗಿ ಬಳಸಿ, ದೊಡ್ಡ ಗಡಿಗೆಯಲ್ಲಿ ನೀರನ್ನು ಕಾಯಿಸಿ ಮುದುಕನಿಗೆ ಸಾವಕಾಶವಾಗಿ ಸ್ನಾನ ಮಾಡಿಸುತ್ತಿದ್ದಳು. ಜಡ್ಡಾದ ಮೈಯ ನೋವು ನೀಗುವಂತೆ ಮೆಲ್ಲನೆ ಸವರುತ್ತ ಬಿಸಿನೀರಿನ ಉಪಚಾರ ಸಾಗುತ್ತಿತ್ತು. ಇದು ಮುದುಕನಿಗೆ ಎಣೆಯಿಲ್ಲದ ಉಲ್ಲಾಸವನ್ನು ತುಂಬಿಕೊಡುತ್ತಿತ್ತು. ಆ ಹಿಗ್ಗಿನಲ್ಲಿ ಆತ ಸಂತಸದ ಉದ್ಗಾರವನ್ನೂ ಮಾಡುತ್ತಿದ್ದ. ಬಳಿಕ ಹೆಂಡತಿ ಗಂಡನ ಎದುರು ಊಟದ ಎಲೆಯನ್ನು ಹಾಕಿ ಆಗಷ್ಟೇ ತೊಳಸಿದ್ದ ಬಿಸಿಬಿಸಿ ರಾಗಿಮುದ್ದೆಯನ್ನು ಬಡಿಸುವಳು. ತಂಬಿಗೆಯ ಗಾತ್ರದ ಆ ಮುದ್ದೆಯ ನಡುವೆ ಪಾತಿ ಕಟ್ಟಿ ಅದಕ್ಕೆ ತಾನು ಅಟ್ಟು ಅಣಿಮಾಡಿದ್ದ ತರಕಾರಿಗಳ ಅಂಬಲಿಯನ್ನು ಸುರಿಯುತ್ತಿದ್ದಳು. ಮುದುಕ ಮೆಲ್ಲಮೆಲ್ಲನೆ ಚಪ್ಪರಿಸಿ ತಿನ್ನುತ್ತಿದ್ದ. ನಡುನಡುವೆ ವಿನೋದದ ಮಾತುಗಳ ವಿನಿಮಯ ಇದ್ದೇ ಇರುತ್ತಿತ್ತು. ಬಳಿಕ ಆಕೆಯ ಊಟ ಸಾಗುತ್ತಿತ್ತು. ಎರಡೂ ಹೊತ್ತು ಅರ್ಧಘಂಟೆಗೂ ಹೆಚ್ಚು ಕಾಲ ನಡೆಯುತ್ತಿದ್ದ ಈ ಅನ್ನಬ್ರಹ್ಮದ ಆರಾಧನೆಗೆ ಡಿ.ವಿ.ಜಿ. ರಸಸಾಕ್ಷಿಯಾಗಿರುತ್ತಿದ್ದರು.
ಬೀದಿಯ ಬಾಳು, ಮುಪ್ಪಿನ ಗೋಳು, ತಮ್ಮವರೆನ್ನುವವರು ಯಾರೊಬ್ಬರೂ ಇಲ್ಲದ ಕಳವಳ, ಬಡತನದ ತಳಮಳ ಮುಂತಾದ ಯಾವೊಂದು ಕ್ಲೇಶವೂ ತಮಗೆ ತಟ್ಟುತ್ತಿಲ್ಲವೆಂಬಂತೆ ಆ ಗಂಡ-ಹೆಂಡತಿ ಹೊತ್ತುಹೊತ್ತಿನ ತುತ್ತಿನ ಸವಿಯಲ್ಲಿ, ಪರಸ್ಪರ ಪ್ರೀತಿಯ ಆಸರೆಯಲ್ಲಿ ಬಾಳುತ್ತಿದ್ದ ಬಗೆ ಡಿ.ವಿ.ಜಿ. ಅವರಿಗೆ ಹಿರಿದಾದ ಜೀವನಸೌಂದರ್ಯದರ್ಶನವನ್ನು ಮಾಡಿಸಿತು. ಅವರೇ ಹೇಳುವಂತೆ: “ಪ್ರೀತಿ ಅವರ ಮುಪ್ಪನ್ನು ಮರೆಯಿಸಿ ಯೌವನವನ್ನು ತಂದುಕೊಟ್ಟಿತ್ತು ... ಪ್ರೀತಿಯೇ ಸೌಂದರ್ಯ; ಪ್ರೀತಿಯೇ ಐಶ್ವರ್ಯ. ಪ್ರೀತಿಯೆಂದರೆ ಹೃದಯವಿಕಾಸ” (ಪು. ೪೦೨). ಡಿ.ವಿ.ಜಿ. ಇಡಿಯ ಈ ಪ್ರಕರಣವನ್ನು ತೈತ್ತಿರೀಯೋಪನಿಷತ್ತಿನ ಬ್ರಹ್ಮಾನಂದವಲ್ಲಿಯ ಮಂತ್ರಗಳಿಂದ ಸಮಾಪ್ತಿಗೊಳಿಸುತ್ತಾರೆ:
“ಆನಂದೋ ಬ್ರಹ್ಮೇತಿ ವ್ಯಜಾನಾತ್ | ಆನಂದಾಧ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ | ಆನಂದೇನ ಜಾತಾನಿ ಜೀವಂತಿ | ಆನಂದಂ ಪ್ರಯಂತ್ಯಭಿಸಂವಿಶಂತಿ ||
ಆನಂದವೇ ಬ್ರಹ್ಮವೆಂದು ನೀನರಿಯಯೈ
ಆನಂದದಿಂದ ಪುಟ್ಟಿಹುದೆಲ್ಲಮಲ್ತೆ |
ಆನಂದದಿಂ ಪುಟ್ಟಿದೆಲ್ಲಮುಂ ಬಾಳುಗುಂ
ಆನಂದವನೆ ಕುರಿತು ಪೋಗುತಲಿ ಪುಗುಗುಂ ||”
ಭವಭೂತಿ ಹೇಳುವ ‘ಅದ್ವೈತಂ ಸುಖದುಃಖಯೋರನುಗತಂ ಸರ್ವಾಸ್ವವಸ್ಥಾಸು’ ಎಂಬ ತಪಸ್ಸಾಧನೆ ‘ವಿಶ್ರಾಮೋ ಹೃದಯಸ್ಯ’ ಎನ್ನುವ ಫಲದಲ್ಲಿ ಪರ್ಯವಸಿಸುವುದನ್ನು ಇಲ್ಲಿ ನಾವು ಕಾಣಬಹುದು. ಈ ಸಂದರ್ಭ ಕೂಡ ‘ಜರಸಾ ಯಸ್ಮಿನ್ನಹಾರ್ಯೋ ರಸಃ’ ಎಂಬ ಸತ್ಯವನ್ನು ಸುಂದರವಾಗಿ ಸಮರ್ಥಿಸಿದೆ. ಇಲ್ಲಿಯ ‘ಆವರಣಾತ್ಯಯ’ವು ಬರಿಯ ಅಂತರಂಗದ ಹಮ್ಮು-ಬಿಮ್ಮುಗಳ ಕವಚವನ್ನಲ್ಲದೆ ಬಹಿರಂಗದ ಸಿರಿ-ಸಂಪದಗಳ ಪರಿವೇಷವನ್ನೂ ಇಲ್ಲವಾಗಿಸಿದೆ. ಹೀಗೆ ಒಳ-ಹೊರಗುಗಳೆಲ್ಲ ಪ್ರೀತಿಯೊಂದೇ ತುಂಬಿರುವ ಆ ಮುಪ್ಪಿನ ಗಂಡ-ಹೆಂಡಿರ ಬಾಳು ಶಾರೀರಕಸೂತ್ರವು ಹೇಳುವ ‘ಆನಂದಮಯೋಽಭ್ಯಾಸಾತ್’ ಎಂಬ ಮಾತಿನಲ್ಲಿ ಅಭಿಪ್ರೇತವಾದ ಪ್ರಾಚುರ್ಯ-ವಿಕಾರಗಳಿಗೆ ಅತೀತವಾದ ಆನಂದದ ಏಕರಸಘನವೇ ಆಗಿ ಪರಿಪಾಕ ಪಡೆದಿರುವುದನ್ನು ನಾವು ಕಾಣಬಹುದು.
* * *
ಈ ಮೂರು ಪ್ರಕರಣಗಳಲ್ಲಿ ಮೊದಲನೆಯದು ಸತಿ-ಪತಿಯರ ಸಕ್ರಿಯವಾದ ಪರಸ್ಪರಾವಲಂಬನವನ್ನು ಪ್ರಧಾನವಾಗಿ ಚಿತ್ರಿಸಿದೆ; ಎರಡನೆಯದು ಕಣ್ಣಿಲ್ಲದ ಕಾದಲೆಗೆ ಕಣ್ಣು-ಕೈ-ಕಾಲುಗಳಾದ ಕಾದಲನ ಕೂರ್ಮೆಯನ್ನು ಅವಧಾನಿಸಿದೆ; ಮೂರನೆಯದು ಹಾಸಿಗೆ ಹಿಡಿದ ಗಂಡನಿಗೆ ದುಡಿಯುವ ಕೈಯಾಗಿ, ಆಸರೆಯ ತೋಳಾಗಿ ಕಾಪಿಡುವ ಹೆಂಡತಿಯ ಅಕ್ಕರೆಯನ್ನು ಕಟಾಕ್ಷಿಸಿದೆ. ಹೀಗೆಂದ ಮಾತ್ರಕ್ಕೆ ಕಾರಂತ ಮತ್ತು ಡಿ.ವಿ.ಜಿ. ಅವರು ಚಿತ್ರಿಸಿದ ದಂಪತಿಗಳ ಸಾಮರಸ್ಯಕ್ಕೆ, ಪಾರಸ್ಪರ್ಯಕ್ಕೆ ಕೊರತೆಯೇನಿಲ್ಲ. ಏಕೆಂದರೆ ಪಮ್ಮನಿಗೆ ಬಾಳುವ ಬಲವನ್ನು ಕೊಟ್ಟದ್ದು ಕುರುಡಿ ದುಗ್ಗಿಯ ಪ್ರೀತಿಯ ಕಣ್ಣು; ಬೀದಿಗೆ ಬಿದ್ದ ಮುದುಕಿಗೆ ದುಡಿಮೆಯ ಕಸುವನ್ನು ಕೊಟ್ಟದ್ದು ಹಾಸಿಗೆ ಹಿಡಿದ ಮುದುಕನ ಆರೋಗ್ಯಕರ ಅನುರಾಗ.
ಆದಿಕವಿ ವಾಲ್ಮೀಕಿಮುನಿಗಳ ಸೀತಾ-ರಾಮರು ತ್ರೇತಾಯುಗಕ್ಕೆ ಸೇರಿದ ದಿವ್ಯಮಾನವರು. ಅಷ್ಟೇಕೆ, ಲಕ್ಷ್ಮೀ-ನಾರಾಯಣರ ಅವತಾರವೆಂದೇ ಕಾಳಿದಾಸ-ಭವಭೂತಿಗಳಿಂದ ಕೀರ್ತಿತರಾದವರು. ಅಂಥವರು ತಮ್ಮ ವಿಯೋಗದಲ್ಲಿಯೂ ಉಳಿಸಿಕೊಂಡಿದ್ದ ಪ್ರೀತಿಯ ಜೀವಾತುಶಕ್ತಿಯನ್ನೇ ಮಾಸ್ತಿ, ಕಾರಂತ ಮತ್ತು ಡಿ.ವಿ.ಜಿ. ಅವರು ಚಿತ್ರಿಸಿದ ದಂಪತಿಗಳ ಸಂಯೋಗದಲ್ಲಿ ಕಾಣುತ್ತೇವೆ. ಇದಕ್ಕೆ ದೇಶ-ಕಾಲಗಳ ಹಂಗಿಲ್ಲ, ವರ್ಣ-ವೃತ್ತಿಗಳ ಸಂಕೋಲೆಯಿಲ್ಲ, ಸಿರಿತನ-ಬಡತನಗಳ ಇಕ್ಕಟ್ಟು-ಬಿಕ್ಕಟ್ಟುಗಳೂ ಇಲ್ಲ. ಯೌವನ, ಸಂಪತ್ತಿ ಮತ್ತು ಪ್ರಭುತ್ವಗಳು ಇದ್ದಲ್ಲಿ ಮಾತ್ರವೇ ಜೀವನಸುಖದ ಸಾರವದ್ರೂಪವಾದ ದಾಂಪತ್ಯದ ಸೊಗಸಿನ ಪರಾಕಾಷ್ಠೆ ಅನುಭವಕ್ಕೆ ಬರುವುದೆಂಬ ಲೋಕಸಾಮಾನ್ಯದ ಕುರುಡುನಂಬಿಕೆಗೆ ಕೊಡಲಿಯ ಪೆಟ್ಟಾಗುವಂತೆ ಇಲ್ಲಿಯ ಮೂರು ಪ್ರಕರಣಗಳು ನಮ್ಮ ಅನುಭವಕೋಶವನ್ನು ಶ್ರೀಮಂತಗೊಳಿಸುತ್ತಿವೆ. ಮಾತ್ರವಲ್ಲ, ಸಂಸ್ಕೃತದ ವಾಲ್ಮೀಕಿ, ಕಾಳಿದಾಸ, ಭವಭೂತಿಗಳಂಥ ಅಭಿಜಾತಕವಿಗಳ ಸಾಲಂಕೃತ ವಾಣಿಯ ಹುರುಳೇ ಕನ್ನಡದ ಮಾಸ್ತಿ, ಕಾರಂತ ಮತ್ತು ಡಿ.ವಿ.ಜಿ. ಅವರಂಥ ಆಧುನಿಕ ಲೇಖಕರ ನಿರಲಂಕೃತ ವಾಕ್ಕಿನ ತಿರುಳಾಗಿದೆ. ಈ ಹುರುಳು-ತಿರುಳುಗಳು ರಸವಲ್ಲದೆ ಮತ್ತೇನು? ರತಿಸ್ಥಾಯಿಯಾದ ಶೃಂಗಾರ ಇಲ್ಲಿದೆಯೆಂದು ಶಾಸ್ತ್ರೀಯವಾಗಿ ನಿರೂಪಿಸಬಹುದಾದರೂ ರತಿಭಾವಕ್ಕೆ ರಸತ್ವವನ್ನು ನೀಡುವ ಶಮಗುಣವೇ ಇದರ ಆತ್ಮವೆಂದರೆ ತಪ್ಪಾಗದು. ಹೀಗೆ ಶಾಂತಿಯಲ್ಲಿ ಪರಿಣಮಿಸದ ಭಾವಕ್ಕೆ ಯಾವ ಬೆಲೆ? ಇದನ್ನು ಪರಿಭಾವಿಸಿದಷ್ಟೂ ಶೃಂಗಾರದ ಸಾರವಂತಿಕೆ ಹೆಚ್ಚಾಗುತ್ತದೆ.
[ಈ ಲೇಖನದ ವಿಷಯವ್ಯಾಪ್ತಿಯನ್ನು ಸೂಚಿಸಿ ನನ್ನಿಂದ ಇದನ್ನು ಬರೆಯಿಸಿದ ಗೆಳೆಯ ಶಶಿಕಿರಣ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ.]
Concluded.
[1] ಇಲ್ಲಿಯ ಹಲವು ಮಾತುಗಳನ್ನು – ಮುಖ್ಯವಾಗಿ ಉದ್ಧರಣಚಿಹ್ನೆಗಳೊಳಗಿನ ಮಾತುಗಳನ್ನು – ‘ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ. ಬೆಂಗಳೂರು: ಸಪ್ನ ಬುಕ್ ಹೌಸ್, ೨೦೧೬. ಪು. ೧೪೦-೪೪; ೧೪೭-೪೮
[2] ‘ದೀವಟಿಗೆಗಳು’. ಎಸ್. ಆರ್. ರಾಮಸ್ವಾಮಿ. ಬೆಂಗಳೂರು: ಸಾಹಿತ್ಯ ಸಿಂಧು ಪ್ರಕಾಶನ, ೨೦೦೯. ಪು. ೫೮
[3] ‘ಹುಚ್ಚು ಮನಸಿನ ಹತ್ತು ಮುಖಗಳು’. ಶಿವರಾಮ ಕಾರಂತ. ಬೆಂಗಳೂರು: ಎಸ್. ಬಿ. ಎಸ್. ಪ್ರಕಾಶನ, ೨೦೧೭. ಪು. ೩೯೫. ಈ ಮಾಹಿತಿಯನ್ನು ನನಗೆ ನೀಡಿದ ವಿದ್ವನ್ಮಿತ್ರ ಡಾ|| ಜಿ. ಎಲ್. ಕೃಷ್ಣ ಅವರಿಗೆ ಕೃತಜ್ಞತೆಗಳು.
[4] ‘ಡಿ.ವಿ.ಜಿ. ಕೃತಿಶ್ರೇಣಿ’ (ಸಂ. ಹಾ. ಮಾ. ನಾಯಕ; ಸಂಪುಟ ೮). ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ೧೯೯೮. ಪು. ೩೯೯-೪೦೨