ವಿದ್ಯಾಭವನದ ಅನುಭವಗಳು - 10

This article is part 10 of 11 in the series ವಿದ್ಯಾಭವನದ ಅನುಭವಗಳು

ರಂಗನಾಥ್ ಅವರು ಕಾರ್ಯಕ್ರಮಗಳ ನಿರ್ದೇಶನದ ಹೊಣೆ ಹೊತ್ತಂತೆಯೇ ಕೆಲವು ಕಾಲ ಗಾಂಧಿ ಕೇಂದ್ರದ ಬಾಧ್ಯತೆಯನ್ನೂ ನಿರ್ವಹಿಸುತ್ತಿದ್ದರು. ಆಗ ಅಲ್ಲಿಯ ಸಂಶೋಧನೆಗಳ ಮಾರ್ಗದರ್ಶನಕ್ಕೆ ಸಂಸ್ಕೃತವಿದ್ವಾಂಸರಾದ ಕೆ. ಟಿ. ಪಾಂಡುರಂಗಿ ಅವರು ಬರುತ್ತಿದ್ದರು. ಇವರ ಪರಿಚಯ ನನಗೆ ತುಂಬ ಹಿಂದಿನದು. ನನ್ನ ವಿದ್ಯಾಗುರುಗಳಿಗೆಲ್ಲ ಪಾಠ ಹೇಳಿದ ಕಾರಣ ಇವರು ನನ್ನ ಪರಮಗುರು. ಕೆ. ಟಿ. ಪಿ. ಅವರ ಸಮಾಧಾನಗುಣ, ನವುರಾದ ವಿನೋದಪ್ರಜ್ಞೆ ಮತ್ತು ವಿಶಾಲವಾದ ಶಾಸ್ತ್ರಜ್ಞಾನ ಯಾರನ್ನೂ ಮೆಚ್ಚಿಸುವಂಥವು. ಅವರು ಉದ್ವಿಗ್ನತೆಯಿಲ್ಲದೆ ಯಾವ ಸಂಗತಿಯನ್ನೂ ತಿಳಿಯಾಗಿ ನಿರೂಪಿಸಬಲ್ಲವರಾಗಿದ್ದರು. ಅವರು ನನ್ನ ಮೆಚ್ಚಿನ ಅಧ್ಯಯನಕ್ಷೇತ್ರಗಳಾದ ಸಾಹಿತ್ಯಶಾಸ್ತ್ರ ಮತ್ತು ಶಾಂಕರವೇದಾಂತಗಳನ್ನೂ ಚೆನ್ನಾಗಿ ಬಲ್ಲವರಾಗಿದ್ದರು. ಅಲ್ಲಿಯ ಹಲಕೆಲವು ಸ್ವಾರಸ್ಯಗಳನ್ನು ಆಗೀಗ ಹಂಚಿಕೊಳ್ಳುತ್ತಿದ್ದರು. ಶಂಕರಾಚಾರ್ಯ ಮತ್ತು ಆನಂದವರ್ಧನರ ವಿಷಯದಲ್ಲಿ ಪಾಂಡುರಂಗಿ ಅವರಿಗೆ ಮಿಗಿಲಾದ ಅಭಿಮಾನವಿತ್ತು.

ಕೆ. ಟಿ. ಪಿ. ಅವರು ತಮ್ಮ ವಾರ್ಧಕ ಮತ್ತು ಅನ್ಯಕಾರ್ಯಭಾರಗಳ ಕಾರಣ ಗಾಂಧಿ ಕೇಂದ್ರದ ಬಾಧ್ಯತೆಯನ್ನು ಒಪ್ಪಲಿಲ್ಲ. ಆಗ ಸ್ವತಂತ್ರವಾಗಿಯೇ ಕೆಲವೊಂದು ಪ್ರಕಲ್ಪಗಳನ್ನು ರಾಜಾರಾಮಣ್ಣ ಅವರು ಸೂಚಿಸಿದರು. ಅಂಥದ್ದರಲ್ಲಿ ಒಂದು ದೇಶದ ವಿವಿಧ ಭಾಷೆಗಳ ಪ್ರಾಚೀನಗ್ರಂಥಗಳಲ್ಲಿ ಸೇರಿರುವ ಮೌಲ್ಯಮಯ ಸೂಕ್ತಿಗಳ ಸಂಗ್ರಹ ಮತ್ತು ಅವುಗಳ ಇಂಗ್ಲಿಷ್ ಅನುವಾದ. ಈ ಸರಣಿಯಲ್ಲೊಮ್ಮೆ ಶ್ರೀಮದ್ರಾಮಾಯಣದ ಸೂಕ್ತಿಗಳನ್ನು ಆಯ್ದು ಅನುವಾದ ಮಾಡಬೇಕಾಯಿತು. ನಾನೂ ಘನಪಾಠಿಗಳೂ ಸೂಕ್ತಿಗಳನ್ನು ಆಯ್ದೆವು. ಇವನ್ನು ರಂಗನಾಥ್ ಅವರ ಮುಂದಿರಿಸಿದಾಗ ಅವರು ಸ್ವಲ್ಪ ಬೇಸರದ ಅಚ್ಚರಿ ವ್ಯಕ್ತಪಡಿಸಿದರು:

“ಅಲ್ಲ ರೀ, ಇಪ್ಪತ್ನಾಲ್ಕುಸಾವಿರ ಶ್ಲೋಕಗಳಷ್ಟು ವಿಸ್ತಾರವಾದ ರಾಮಾಯಣದಲ್ಲಿ ಇಷ್ಟೇ ಸೂಕ್ತಿಗಳು ಇವೆಯಲ್ಲಾ? ನೀವು ಸರಿಯಾಗಿ ನೋಡಿ ಸಂಗ್ರಹ ಮಾಡಿದ್ದೀರಾ? ಏನೇ ಆಗಲಿ, ಒಮ್ಮೆ ರಂಗನಾಥಶರ್ಮರನ್ನು ಕಂಡು ಅವರಿಗೆ ನಿಮ್ಮ ಸಂಗ್ರಹ ತೋರಿಸಿ ಅಭಿಪ್ರಾಯ ಕೇಳಿ.”

ಇದು ನಮಗೆ ಅಸಮ್ಮತವಾದ ಸೂಚನೆಯೇನೂ ಆಗಿರಲಿಲ್ಲ. ರಂಗನಾಥಶರ್ಮರ ವ್ಯಕ್ತಿತ್ವ-ವಿದ್ವತ್ತೆಗಳೂ ರಾಮಾಯಣದ ಮೇಲಣ ಪ್ರಭುತ್ವವೂ ಲೋಕವಿಶ್ರುತ. ಅಲ್ಲದೆ ಅವರನ್ನು ಕಾಣುವುದು ನಮಗೆ ಸಂತಸದ ಸಂಗತಿ. ಆದರೆ ಇರುವ ಸಮಸ್ಯೆಯೆಲ್ಲ ರಾಮಾಯಣದಂಥ ಅಪ್ಪಟ ಕಾವ್ಯದಲ್ಲಿ ಸ್ವತಂತ್ರವಾಗಿ ನಿಲ್ಲಬಲ್ಲ ಸೂಕ್ತಿಗಳ ಸಾಧ್ಯತೆ ಕಡಮೆಯೆಂಬ ನಮ್ಮ ಅನುಭವವನ್ನು ರಂಗನಾಥ್ ಅವರಿಗೆ ಮನದಟ್ಟಾಗಿಸುವುದೇ! ನಾವಿಬ್ಬರೂ ಶರ್ಮರ ಮನೆಗೆ ಹೋಗಿ ಸದ್ಯದ ಸಮಸ್ಯೆಯನ್ನು ಹೇಳಿಕೊಂಡೆವು. ಆ ಮುನ್ನವೇ ರಂಗನಾಥ್ ಅವರು ಶರ್ಮರಿಗೆ ದೂರವಾಣಿಯ ಮೂಲಕ ತಿಳಿಸಿದ್ದ ಕಾರಣ ಹೆಚ್ಚಿನ ವಿವರಣೆಯನ್ನು ಕೊಡುವುದು ಅನವಶ್ಯವಾಗಿತ್ತು. ಅವರು ನಮ್ಮ ಸಂಗ್ರಹವನ್ನು ಆದ್ಯಂತ ಪರಿಶೀಲಿಸಿ ನಮ್ಮ ತೀರ್ಮಾನವನ್ನೇ ಪುನರುಚ್ಚರಿಸಿದರು: “ರಾಮಾಯಣವು ರಸಧ್ವನಿಪ್ರಧಾನವಾದ ಕಾವ್ಯ. ಇಲ್ಲಿಯ ಮೌಲ್ಯಗಳೆಲ್ಲ ಆಯಾ ಸಂದರ್ಭದಲ್ಲಿ ಪಾತ್ರಗಳ ವರ್ತನೆಗಳಿಂದಲೇ ವ್ಯಂಜಿತವಾಗುತ್ತವಲ್ಲದೆ ವಾಚ್ಯವಾದ ಉಪದೇಶವಾಗಿ ಯಾವ ಸಂದೇಶವೂ ಬಂದು ರಸಹಾನಿ ಮಾಡುವುದಿಲ್ಲ. ಹೀಗಾಗಿ ಇಲ್ಲಿ ಸ್ವತಂತ್ರವಾದ ಸೂಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುವುದಿಲ್ಲ.” ಅವರ ಈ ಅಭಿಪ್ರಾಯವನ್ನು ರಂಗನಾಥ್ ಅವರಿಗೆ ತಿಳಿಸಿದೆವು. ಪುಣ್ಯಕ್ಕೆ ಅವರೂ ಒಪ್ಪಿ ತೃಪ್ತರಾದರು.

ಭವನದ ಕಾರ್ಯಕ್ರಮಗಳಲ್ಲಿ ಬಹಳಷ್ಟು ವೈವಿಧ್ಯಕ್ಕೆ ಅವಕಾಶವಿರುತ್ತಿತ್ತು. ಅವು ಬೋಧ-ಮೋದಗಳ ಉತ್ಕರ್ಷಕ್ಕೂ ನೆರವಾಗುತ್ತಿದ್ದವು. ಇಂಥ ಸನ್ನಿವೇಶಗಳಲ್ಲಿ ಹೊಮ್ಮುತ್ತಿದ್ದ ಹಾಸ್ಯಕ್ಕೆ ಕೊನೆ-ಮೊದಲಿಲ್ಲ. ಅವುಗಳಲ್ಲಿ ಒಂದೆರಡು ಸಂದರ್ಭಗಳನ್ನು ಇಲ್ಲಿ ನೆನೆಯಬಹುದು.

ನನ್ನ ವಿದ್ಯಾಗುರುಗಳಾದ ಎಸ್. ರಾಮಸ್ವಾಮಿ ಅವರು ರಂಗನಾಥ್ ಅವರಿಗೆ ಒಂದು ಕಾಲದ ವಿದ್ಯಾರ್ಥಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಮಾಡುತ್ತ ಜಗತ್ತನ್ನೆಲ್ಲ ಸುತ್ತಾಡುತ್ತಿದ್ದರು. ಭವನದ ಕಾರ್ಯಕ್ರಮಕ್ಕೆಂದು ರಂಗನಾಥ್ ದೂರವಾಣಿ ಮಾಡಿದಾಗ ಅವರು ಕೈಗೆ ಸಿಕ್ಕುತ್ತಿರಲಿಲ್ಲ; ಸೆಮಿನಾರು-ಕಾನ್ಫರೆನ್ಸುಗಳ ಕೋಲಾಹಲದಲ್ಲಿ ಕಳೆದುಹೋಗಿರುತ್ತಿದ್ದರು. ಹೀಗಾಗಿಯೇ ಅಪ್ಪಿ-ತಪ್ಪಿ ದೂರವಾಣಿಗೆ ದಕ್ಕಿದಾಗ “ಎಲ್ಲಿಂದ ಬಂದಿರಿ?, ಎಲ್ಲಿಗೆ ಹೋಗುತ್ತೀರಿ?” ಎಂದೇ ರಂಗನಾಥ್ ಅವರಲ್ಲಿ ಕುಶಲಪ್ರಶ್ನೆ ಕೇಳುತ್ತಿದ್ದರು. ಇಂಥ ರಾಮಸ್ವಾಮಿ ಅದೊಮ್ಮೆ ಕಾಮನ್‌ವೆಲ್ತ್ ದೇಶಗಳ ಸಾಹಿತ್ಯವನ್ನು ಕುರಿತು ಮಾತನಾಡಬೇಕಿತ್ತು. ದುರ್ದೈವದಿಂದ ಅವರು ಕೆಲದಿನಗಳ ಮುನ್ನ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದರು. ಇದು ತಿರುಪತಿಯಲ್ಲಿ ನಡೆದ ಯಾವುದೋ ಗೋಷ್ಠಿಗೆ ಹೋಗಿ ಬರುವಾಗ ರೈಲು ಹಿಡಿಯುವ ಭರದಲ್ಲಿ ಜಾರಿ ಬಿದ್ದುದರ ವಿಪರಿಣಾಮ.

ಅಂದಿನ ಭಾಷಣದಲ್ಲಿ ಸ್ವಾಗತ ಕೋರುತ್ತ ರಂಗನಾಥ್ ಅವರು ಬ್ಯಾಂಡೇಜು ಧರಿಸಿದ ರಾಮಸ್ವಾಮಿ ಅವರ ತೋಳಿನತ್ತ ಬೆರಳು ತೋರಿ, “I extend a warm welcome to you. I am happy that you are very well armed for this verbal combat!” ನನ್ನ ಗುರುಗಳು ಈ ವಿನೋದವನ್ನು ಚೆನ್ನಾಗಿಯೇ ಸ್ವೀಕರಿಸಬಲ್ಲವರಾಗಿದ್ದ ಕಾರಣ ಅಂದಿನ ಕಾರ್ಯಕ್ರಮ ಮತ್ತಷ್ಟು ರಂಗೇರಿತು. ವಿಧಿವೈಕಟ್ಯವೆಂದರೆ ಕೆಲವೇ ದಿನಗಳಲ್ಲಿ ರಾಮಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ಕಲಾವತಿ ಅವರು ತುಂಬ ಅನಿರೀಕ್ಷಿತವಾಗಿ ತೀರಿಕೊಂಡರು. ಇದು ನಿಜಕ್ಕೂ ನನ್ನ ಗುರುಗಳ ಪಾಲಿಗೆ ತಮ್ಮ ಬಲಗೈಯೇ ಬಿದ್ದುಹೋದಂಥ ಆಘಾತ – Coming events cast their shadows before. ಕಲಾವತಿ ಅವರು ನನ್ನ ಗುರುಗಳ ಪಾಲಿಗೆ ಸರ್ವಾರ್ಥದಲ್ಲಿಯೂ “ಗೃಹಿಣೀ ಸಚಿವಃ ಸಖೀ ಮಿಥಃ ಪ್ರಿಯಶಿಷ್ಯಾ ಲಲಿತೇ ಕಲಾವಿಧೌ” ಆಗಿದ್ದರು.

ಜಿ. ವೆಂಕಟಾಚಲಂ ಎಂಬ ಪ್ರಸಿದ್ಧ ಕಲಾವಿಮರ್ಶಕರ ಬಗೆಗೆ ಸಂಸ್ಮರಣಭಾಷಣ ಏರ್ಪಾಟಾಗಿತ್ತು. ಅಂದಿನ ಭಾಷಣಕಾರರು ಸ್ವನಾಮಧನ್ಯರಾದ ವಿದ್ಯಾಲಂಕಾರ ಎಸ್. ಕೆ. ರಾಮಚಂದ್ರರಾಯರು. ರಾಯರಿಗೆ ವೆಂಕಟಾಚಲಂ ಅವರಲ್ಲಿ ಅಂಥ ಒಳ್ಳೆಯ ಅಭಿಪ್ರಾಯವಿರಲಿಲ್ಲ. ರಂಗನಾಥ್ ಅವರ ಮಾತಿಗೆ ಇಲ್ಲವೆನ್ನಲಾಗದೆ ಬಂದಿದ್ದರು. ಭಾಷಣವೇನೋ ತೃಪ್ತಿಕರವಾಗಿ ಮುಗಿಯಿತು. ಆದರೆ ರಾಯರ ಎಂದಿನ ‘ಟಚ್’ ಇರಲಿಲ್ಲ. ಅವರನ್ನು ಮನೆಯವರೆಗೆ ಕಳುಹಿಸಿಕೊಡಲು ಭವನದ ವಾಹನ ಸಜ್ಜಾಗಿತ್ತು. ಜೊತೆಯಲ್ಲಿ ಬೀಳ್ಕೊಡಲು ನಾನು ಮತ್ತು ರಾಜಗೋಪಾಲ್ ಸಿದ್ಧರಿದ್ದೆವು. ಅಂದು ರಂಗನಾಥ್ ಬಂದಿರಲಿಲ್ಲ. ಅವರಿಗೆ ಗೊತ್ತಿತ್ತು; ರಾಯರು ಇಷ್ಟವಿಲ್ಲದ ಕೆಲಸಕ್ಕೆ ತಮ್ಮನ್ನು ತೊಡಗಿಸಿದ ಕಾರಣ ತಿವಿಯುವರೆಂದು! ಹೀಗಾಗಿ ಎಸ್. ಕೆ. ಎಮ್. ಮಾತ್ರ ಬಂದಿದ್ದರು. ಅವರ ಮನೆಯೂ ರಾಯರ ಮನೆಯ ದಿಕ್ಕಿನಲ್ಲಿಯೇ ಇದ್ದ ಕಾರಣ ಎಲ್ಲರೂ ಒಟ್ಟಾಗಿ ಹೊರಟೆವು. ದಾರಿಯಲ್ಲಿ ನಾನು ರಾಯರನ್ನು ಅಂದಿನ ಭಾಷಣದ ಬಗೆಗೆ ಪ್ರಶ್ನಿಸಿದೆ: “ಸರ್, ಯಾಕೋ ನಿಮ್ಮ ಮಾಂತ್ರಿಕಸ್ಪರ್ಶ ಇಂದು ಕಾಣಲಿಲ್ಲ...”

ಈ ಪ್ರಶ್ನೆಗೇ ಕಾದಿದ್ದವರಂತೆ ವೆಂಕಟಾಚಲಂ ಅವರನ್ನು ಕುರಿತು ಮತ್ತೊಂದು ಭಾಷಣವನ್ನೇ ಮಾಡತೊಡಗಿದರು. ಇದು ನಿಜಕ್ಕೂ ರಾಮಚಂದ್ರೀಯವಾಗಿತ್ತು! ರಾಯರ ಮನೆ ತಲಪುವಷ್ಟರಲ್ಲಿ ಮುಕ್ಕಾಲು ಗಂಟೆಯಾಗಿತ್ತು. ಒಳ್ಳೆಯ ವಿಚಾರವನ್ನು ಕೇಳಿದ ಹರ್ಷದಿಂದ ಅವರನ್ನು ಬೀಳ್ಗೊಟ್ಟು ಎಸ್. ಕೆ. ಎಮ್. ಅವರ ಮನೆಯತ್ತ ಸಾಗಿದೆವು. ಈಗ ಎಸ್. ಕೆ. ಎಮ್. ರಾಯರ ಮಾತುಗಾರಿಕೆಯನ್ನು ತಮ್ಮದೇ ಆದ ಶೈಲಿಯಲ್ಲಿ ವಿಡಂಬಿಸತೊಡಗಿದರು. ಅವರನ್ನು ಕುರಿತು ಕೆಲವು ಚಿಟ್ಟೆಕತೆಗಳನ್ನೂ ಹೇಳತೊಡಗಿದರು. ಅವರ ಮನೆ ಸಮೀಪಿಸಿದಾಗ ವಾಹನದಿಂದ ಇಳಿದವರೇ ನಮಗೆ ವಿದಾಯ ಹೇಳುತ್ತ ವಿನೋದದ ಕಿಡಿ ಹಾರಿಸಿದರು: “ಇನ್ನು ನೀವಿಬ್ಬರೂ ನನ್ನ ಬಗ್ಗೆ ಚೆನ್ನಾಗಿ ಗಾಸಿಪ್ ಮಾಡಿಕೊಂಡು ಹೋಗಿ. ಒಳ್ಳೇದಾಗಲಿ!”      

ಯಾರೇ ಇಬ್ಬರು ಸೇರಿದಾಗ ಮತ್ತೊಬ್ಬರನ್ನು ಕುರಿತು ಮಾತನಾಡಿಕ್ಕೊಳ್ಳುತ್ತೇವೆಂಬ ಲೋಕಸತ್ಯವನ್ನು ಈ ಪ್ರಕರಣ ಚೆನ್ನಾಗಿ ಧ್ವನಿಸುತ್ತದೆ. ಇದನ್ನು ಎಸ್. ಕೆ. ಎಮ್. ಬಲ್ಲವರಾಗಿದ್ದರು. ಅಂತೆಯೇ ರಾಯರು ತಾವು ಅಷ್ಟಾಗಿ ಒಪ್ಪದ ವಿಷಯಗಳಲ್ಲಿಯೂ ತಮ್ಮ ತತ್ತ್ವಕ್ಕೆ ಭಂಗ ಬರದಂತೆ ಮಾತನಾಡಿ ಅನಂತರ ತಮ್ಮದಾದ ನಿಲವನ್ನು ನಿಃಸಂಕೋಚವಾಗಿ ತಿಳಿಸಬಲ್ಲವರಾಗಿದ್ದರೆಂಬ ತಥ್ಯವನ್ನೂ ಸೂಚಿಸುತ್ತದೆ. ಈ ಒಂದು ಪ್ರಕರಣ ಯಾರ ಬಗೆಗಿನ ವಿಮರ್ಶೆಯೂ ಅಲ್ಲ; ಬದುಕಿಗೊಂದು ಪಾಠ.

To be continued.

 

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...