ಬಹುಕಾಲದಿಂದ ಗರ್ಭಗೃಹದಲ್ಲಿ ನೆಲೆನಿಂತು ಆಗೀಗ ಬರುವ ಭಕ್ತ-ಭಾವುಕರ ಪೂಜೆಯನ್ನು ಮಾತ್ರ ಸ್ವೀಕರಿಸುತ್ತಿದ್ದ ಸಂಸ್ಕೃತಸರಸ್ವತಿಯು ಇದೀಗ ಉತ್ಸವಮೂರ್ತಿಯಾಗಿ ಎಲ್ಲೆಡೆ ಸಂಚರಿಸುತ್ತ ಮನೆಮನೆಗಳಲ್ಲಿ, ಮಾರ್ಗಮಾರ್ಗಗಳಲ್ಲಿ ನೈವೇದ್ಯ-ನೀರಾಜನಗಳನ್ನು ಸ್ವೀಕರಿಸುತ್ತ ತೇಜಃಪ್ರತಿಮೆಯಾಗಿ ಕಂಗೊಳಿಸುತ್ತಿದ್ದಾಳೆ. ಹಿಂದೆ ತಾವು ಸಂಸ್ಕೃತಜ್ಞರೆಂದು ಹೇಳಿಕೊಳ್ಳಲು ಕೀಳರಿಮೆಯಿಂದ ಹಿಂಜರಿಯುತ್ತಿದ್ದ ಜನರು ಇಂದು ಆತ್ಮವಿಶ್ವಾಸದಿಂದ ತಲೆಯೆತ್ತಿ ಮುನ್ನುಗ್ಗುತ್ತಿದ್ದಾರೆ. ನಮ್ಮೆಲ್ಲರ ಮಾತೃವಾಣಿ ಹೀಗೆ ಹೊಸ ಹುರುಪು ಗಳಿಸಿರುವುದನ್ನು ಕಾಣುವುದೇ ಒಂದು ಸೊಗಸು. ಈ ಯುಗಾದಿಪರ್ವದ ಶುಭಾವಸರದಲ್ಲಿ ಪಂಚಾಗಶ್ರವಣ ಮಾಡಿ ಸಾಧಕ-ಬಾಧಕಗಳನ್ನೂ ಕೊಡು-ಕೊಳ್ಳುವಿಕೆಗಳನ್ನೂ ಕಂಡುಕೊಳ್ಳಬೇಕಿದೆ.
ನಮ್ಮ ರಾಷ್ಟ್ರದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಎಂದೂ ಸಂಸ್ಕೃತ ಮತ್ತು ದೇಶಭಾಷೆಗಳಿಗೆ ವೈರುದ್ಧ್ಯ ಕಂಡುಬರುವುದಿಲ್ಲ. ಇವುಗಳಲ್ಲಿ ಪರಸ್ಪರ ದ್ವೇಷಾರೋಪಣೆ ಮಾಡುವ ದುರಧ್ಯವಸಾಯವು ಕಳೆದ ಕೆಲವು ದಶಕಗಳಲ್ಲಿ ಹುಟ್ಟಿದ್ದರೂ ಅದು ಹೆಚ್ಚಾಗಿ ಹರಡದಂತೆ ನೋಡಿಕೊಳ್ಳುವ ಜನರು ನಮ್ಮಲ್ಲಿ ಅನೇಕರಿದ್ದಾರೆ. ಇದು ಸಮಾಜದ ಸ್ವಾಸ್ಥ್ಯವನ್ನು ತೋರಿಸುತ್ತದೆ. ಹೀಗಾಗಿ ಸಂಸ್ಕೃತ ಮತ್ತು ದೇಶಭಾಷೆಗಳು ಭಾರತೀಯಪ್ರಜ್ಞೆಯೆಂಬ ಅಖಂಡಪ್ರವಾಹದ ಹರಿವಿಗೊದಗಿದ ಅನನ್ಯಪ್ರಣಾಲಿಗಳೆಂಬ ಸತ್ಯವನ್ನು ಮತ್ತೆ ಮತ್ತೆ ಸಾರಬೇಕು. ಈ ಪರಿಸ್ಥಿತಿಯಲ್ಲಿ ಸಂಸ್ಕೃತವನ್ನು ಕೀಳ್ಗೆರೆದು ತಮ್ಮ ತಮ್ಮ ಪ್ರಾಂತದ ಭಾಷೆಯನ್ನು ಮೆರೆಸುವ ಮಹಾನುಭಾವರನ್ನು ಎದುರಿಸುವಂತೆಯೇ ಸಂಸ್ಕೃತವನ್ನು ಮಾತ್ರ ನಚ್ಚಿಕೊಂಡು ದೇಶಭಾಷೆಗಳ ಅನುಸಂಧಾನಕ್ಕೆ ಅಂಧರಾಗಿರುವವರನ್ನು ಕೂಡ ಎದುರಿಸಬೇಕಿದೆ. ಇದಕ್ಕೆ ಕಾಲವೂ ಪಕ್ವವಾಗಿದೆ.
ಹೊಸತಾಗಿ ಜಾರಿಗೆ ಬಂದಿರುವ ರಾಷ್ಟ್ರಿಯಶಿಕ್ಷಣನೀತಿಯ ಗುಣಾವಗುಣಗಳು ಏನಿದ್ದರೂ ಅದರಲ್ಲಿ ಸಂಸ್ಕೃತ ಮತ್ತು ದೇಶಭಾಷೆಗಳಿಗೆ ಸಮುಚಿತ ಆದರ ಸಂದಿರುವುದು ಸತ್ಯ. ಇದರ ಹಿನ್ನೆಲೆಯಲ್ಲಿ ಸಂಸ್ಕೃತಜ್ಞರು ಪ್ರಾದೇಶಿಕಭಾಷೆಗಳನ್ನು ಯಾವ ದೃಷ್ಟಿಯಿಂದ ಕಾಣಬೇಕು ಎಂಬುದನ್ನು ಕುರಿತು ಸದ್ಯದ ಲೇಖನ ಚರ್ಚಿಸುತ್ತದೆ. “ಸಂಸ್ಕೃತದಿಂದ ಸಂಸ್ಕೃತ”, “ಸಂಸ್ಕೃತಕ್ಕಾಗಿ ಸಂಸ್ಕೃತ” ಎಂಬಿವೇ ಮುಂತಾದ ಘೋಷಣೆಗಳೂ ಯೋಜನೆಗಳೂ ಕೇಳಿಬರುತ್ತಿರುವ ಸಂದರ್ಭದಲ್ಲಿ ದೇಶಭಾಷೆಗಳು ದೇವವಾಣಿಗೆ ಕೆಲವೊಮ್ಮೆ ಪೂರಕವಾಗಿ, ಕೆಲವೊಮ್ಮೆ ಪ್ರೇರಕವಾಗಿ ದುಡಿದಿರುವ ಪರಿಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪ್ರಯತ್ನವಿಲ್ಲಿದೆ. ವಿಚಾರನಿರೂಪಣೆಗಾಗಿ ನನಗೆ ಕೆಲಮಟ್ಟಿಗೆ ಪ್ರವೇಶವಿರುವ ಸಂಸ್ಕೃತದ ಅಭಿಜಾತಸಾಹಿತ್ಯ ಹಾಗೂ ಅಲಂಕಾರಶಾಸ್ತ್ರಗಳನ್ನು ಆಶ್ರಯಿಸಿದ್ದೇನೆ. ಪ್ರಾದೇಶಿಕಭಾಷೆಗಳ ಪ್ರತಿನಿಧಿಯಾಗಿ ನನ್ನ ಮಾತೃಭಾಷೆ ಕನ್ನಡವನ್ನು ತೆಗೆದುಕೊಂಡಿದ್ದೇನೆ. ಇಲ್ಲಿಯ ಉಪಪಾದನೆಯು ಸಂಸ್ಕೃತದ ಎಲ್ಲ ಆಯಾಮಗಳಿಗೂ ಎಲ್ಲ ದೇಶಭಾಷೆಗಳಿಗೂ ಬಲುಮಟ್ಟಿಗೆ ಅನ್ವಯಿಸುತ್ತದೆ.
ಕನ್ನಡಸಾಹಿತ್ಯೇತಿಹಾಸದಲ್ಲಿ ನವೋದಯವೆಂಬ ಒಂದು ಮಜಲುಂಟಷ್ಟೆ. ಅದರಲ್ಲಿ ಪ್ರಧಾನಪಾತ್ರ ವಹಿಸಿದ ಡಿ.ವಿ.ಜಿ., ಗೋವಿಂದ ಪೈ, ಎ. ಆರ್. ಕೃಷ್ಣಶಾಸ್ತ್ರಿ, ಸೇಡಿಯಾಪು ಕೃಷ್ಣಭಟ್ಟ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಪುತಿನ ಮೊದಲಾದ ಮಹನೀಯರಿಗೆ ಸಂಸ್ಕೃತಭಾಷೆಯ ಬಗೆಗಿದ್ದ ಅವ್ಯಾಜಪ್ರೀತಿ ಮತ್ತು ಅದರಲ್ಲಿ ಅವರೆಲ್ಲರೂ ಸಂಪಾದಿಸಿದ್ದ ಪ್ರಭುತ್ವ ಇಂದಿನ ಕನ್ನಡಲೇಖಕರಲ್ಲಿ ಕಾಣಬರದಿರುವುದು ನಮ್ಮೆಲ್ಲರ ಅನುಭವ. ಅಂತೆಯೇ ಪ್ರತಿಭಾಧನರಾದ ಅವರೆಲ್ಲರ ಯೋಗದಾನವನ್ನು ಇಂದಿನ ಸಂಸ್ಕೃತಜ್ಞರು ಹೆಚ್ಚಾಗಿ ಗಮನಿಸದಿರುವುದೂ ಪ್ರತ್ಯಕ್ಷ. ಒಂದು ಭಾಷೆಗೆ ಕಾಂತಿ-ಕೀರ್ತಿಗಳು ದಕ್ಕುವುದು ಅದನ್ನು ಅಭಿವ್ಯಕ್ತಿಮಾಧ್ಯಮವಾಗಿ ಸ್ವೀಕರಿಸುವ ಜನರ ಅಂತಃಸತ್ತ್ವದಿಂದ. ಹೀಗೆ ಕಂಡಾಗ ನವೋದಯದ ಲೇಖಕರು ಕನ್ನಡವನ್ನು ಶ್ರೀಸಮೃದ್ಧವಾಗಿಸಿರುವುದು ವಿಶದವಾಗುತ್ತದೆ. ಇಂತಹ ಕವಿ-ಪಂಡಿತರನ್ನು ಕನ್ನಡಕ್ಕೆ ಮಾತ್ರ ಸೀಮಿತಗೊಳಿಸುವುದು ವಿವೇಕವಿರಹಿತವಾದ ನಿಲವು. ಅವರ ಬರೆಹಗಳಿಂದ ಸ್ಫೂರ್ತಿ ಪಡೆದು ತಮ್ಮ ಅನುಭವ-ಅಭಿವ್ಯಕ್ತಿಗಳನ್ನು ಆಢ್ಯವಾಗಿಸಿಕೊಳ್ಳಲು ಸಂಸ್ಕೃತಜ್ಞರು ಯತ್ನಿಸಬೇಕು.
ಸಂಸ್ಕೃತಸಾಹಿತ್ಯವನ್ನು ಕುರಿತು ಕನ್ನಡದಲ್ಲಿ ಸಾಗಿರುವ ಕೃಷಿ ಅಪಾರ. ಯಾವ ಭಾಷೆಯೂ ಬೆರಗಾಗುವಷ್ಟು ಗುಣವಂತಿಕೆ ಇಲ್ಲಿದೆ. ಆರ್ಷಕಾವ್ಯಗಳಾದ ರಾಮಾಯಣ-ಮಹಾಭಾರತಗಳನ್ನು ಸಂಸ್ಕೃತದಲ್ಲಿಯೇ ಇಡಿಯಾಗಿ ಆಸ್ವಾದಿಸುವುದೊಂದು ಪಾವಕಾನುಭವವಾದರೂ ಇದರಿಂದ ವಂಚಿತರಾದವರ ಸಂಖ್ಯೆಯೇ ಹೆಚ್ಚು. ಹೀಗಿರುವಾಗ ಎನ್. ರಂಗನಾಥಶರ್ಮರು ಕನ್ನಡಕ್ಕೆ ಸೊಗಸಾಗಿ ಭಾಷಾಂತರಿಸಿರುವ ರಾಮಾಯಣಸಂಪುಟಗಳು ಮಿಗಿಲಾಗಿ ಸಾಹ್ಯವೀಯುತ್ತವೆ. ಈ ಗ್ರಂಥಗಳಿಗೆ ಡಿ.ವಿ.ಜಿ. ಅವರು ಬರೆದಿರುವ ಮುನ್ನುಡಿಗಳು ರಾಮಾಯಣವಿದ್ಯಾರ್ಥಿಗಳ ಅಂತರಂಗವನ್ನು ಅನುಲ್ಬಣಶೋಭೆಯಿಂದ ಬೆಳಗುತ್ತವೆ. ಆರ್ಷಕಾವ್ಯಗಳನ್ನು ಹೇಗೆ ಓದಬೇಕು, ವಾಲ್ಮೀಕಿಪ್ರತಿಭೆಯ ಗುಣವಿಶೇಷಗಳು ಯಾವುವು, ರಾಮಾಯಣದ ಕೆಲವು ದುರ್ನಿವಾರವಾದ ಗಂಟುಗಳನ್ನು ಬಿಡಿಸುವುದು ಹೇಗೆ ಮೊದಲಾದ ಹತ್ತಾರು ಪ್ರಶ್ನೆಗಳಿಗೆ ಬೇರೆಡೆ ದುರ್ಲಭವಾದ ಉತ್ತರಗಳಿಲ್ಲಿವೆ. ಇವು ಶ್ರೀಮದ್ರಾಮಾಯಣದಂತೆಯೇ ಪಾರಾಯಣಯೋಗ್ಯ. ಮಾಸ್ತಿ ವೆಂಕಟೇಶ ಅಯ್ಯಂಗಾರರ “ಆದಿಕವಿ ವಾಲ್ಮೀಕಿ” ಎಂಬ ಗ್ರಂಥ ಆದಿಕಾವ್ಯದ ಆಂತರ್ಯವನ್ನು ನಮಗೆ ಚೆನ್ನಾಗಿ ಪರಿಚಯಿಸುತ್ತದೆ. ಮಾಸ್ತಿಯವರ ಅವಿಕೃತಶಾಂತವಾದ ಜೀವನದೃಷ್ಟಿಯ ಮೂಲಕ ವಾಲ್ಮೀಕಿಮುನಿಗಳ ದರ್ಶನವು ಹಾಯ್ದುಬರುವಾಗ ಅದು ಪಡೆಯುವ ಸ್ನಿಗ್ಧತೆಯನ್ನು ಅನುಭವಿಸಯೇ ಅರಿಯಬೇಕು.
ಮಹಾಭಾರತದತ್ತ ತಿರುಗುವುದಾದರೆ, ಕನ್ನಡಕ್ಕೆ ಸಂಸ್ಕೃತಜ್ಞರ ಆನೃಣ್ಯವನ್ನು ಸಂಪಾದಿಸಲು ಎ. ಆರ್. ಕೃಷ್ಣಶಾಸ್ತ್ರಿಗಳ “ವಚನಭಾರತ”ವೊಂದೇ ಸಾಕು. ಶಾಸ್ತ್ರಿಗಳು ಇದರ ಮುನ್ನುಡಿಯಲ್ಲಿ ಮಹಾಭಾರತದ ಎಲ್ಲ ಸಂಕೀರ್ಣಸ್ವಾರಸ್ಯಗಳನ್ನೂ ವಿವರಿಸಿದ್ದಾರೆ. ಜೀವನವಿಮುಖವಲ್ಲದ ನಿಶಿತಾರ್ದ್ರ ವಿಮರ್ಶಪ್ರಜ್ಞೆ ತಲುಪಬಹುದಾದ ಅತ್ಯುಚ್ಚಸ್ತರವನ್ನು ಕಾಣಲು ಎಲ್ಲರೂ ಈ ಮಹಾಪ್ರಬಂಧವನ್ನು ಓದಬೇಕು. ಮಹಾಭಾರತವನ್ನು ಸಂಕ್ಷಿಪ್ತವಾಗಿ ನಿರೂಪಿಸಲು ತೊಡಗಿದ ಹಲವು ಕೃತಿಗಳು ಆ ಪ್ರಕ್ರಿಯೆಯಲ್ಲಿ ತಾವೇ ಸೊರಗಿ ಸಂಕೋಚಗೊಂಡರೆ ವಚನಭಾರತವು ತ್ರಿವಿಕ್ರಮೋನ್ನತವಾಗಿ ನಿಲ್ಲುತ್ತದೆ. ಕೃಷ್ಣಶಾಸ್ತ್ರಿಗಳ ಸಂಕ್ಷೇಪಣಸಿದ್ಧಿ ಕ್ಷೇಮೇಂದ್ರನನ್ನು ನಾಚಿಸುವಂತಹದ್ದು. ಈ ಸದ್ಗ್ರಂಥವನ್ನು ಸಂಸ್ಕೃತಜ್ಞರು ಓದದಿದ್ದರೆ ನಷ್ಟ ಯಾರದ್ದು? ಡಿ.ವಿ.ಜಿ. ಅವರ “ಮಹಾಭಾರತದ ಪಾತ್ರಗಳು” ಎಂಬ ಲೇಖನ ಯುಗಸಂಧಿಯಲ್ಲಿ ರಚಿತವಾಗುವ ಸಾಹಿತ್ಯದ ಸಾಂದ್ರಸೌಂದರ್ಯದತ್ತ ನಮ್ಮ ಗಮನವನ್ನು ಸೆಳೆಯುತ್ತಲೇ ಮಹಾಭಾರತದ ಪ್ರಮುಖಪಾತ್ರಗಳ ಹೃದಯಾವಿಷ್ಕಾರ ಮಾಡುತ್ತದೆ. ಋತ, ಕಾಲ, ಧರ್ಮ ಮೊದಲಾದ ಭೂಮತತ್ತ್ವಗಳ ಹಿನ್ನೆಲೆಯಲ್ಲಿ ಸಾಗುವ ಇಲ್ಲಿಯ ಪ್ರತಿಪಾದನೆಯು ಕುವೆಂಪು ಅವರು ಗುರುತಿಸುವ “ದಾರ್ಶನಿಕವಿಮರ್ಶೆ”ಗೆ ಒಳ್ಳೆಯ ಉದಾಹರಣೆ. ಪ್ರಾಸಂಗಿಕವಾಗಿ ಹೇಳುವುದಾದರೆ, ಡಿ.ವಿ.ಜಿ. ಅವರೇ ಮುನ್ನುಡಿ ಬರೆದಿರುವ ಮತ್ತೊಂದು ಗ್ರಂಥ ಭಾರತೀಯಸಾಹಿತ್ಯದ ಅಧ್ಯೇತೃಗಳ ಪಾಲಿಗೆ ಅನನ್ಯಶರಣ್ಯವಾಗಿದೆ. ಅದು ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಬಂಗಾಳಿಯಲ್ಲಿ ಬರೆದ “ಶ್ರೀಕೃಷ್ಣಚರಿತ್ರ” ಎಂಬ ಕೃತಿಯ ಕನ್ನಡಾನುವಾದ; ವ್ಯಾಸರಾಯರು ಸಿದ್ಧಪಡಿಸಿರುವುದು. ನಮ್ಮ ನೆಲದಲ್ಲಿ ದೃಢವಾಗಿ ಬೇರುಬಿಟ್ಟು ವೈಶ್ವಿಕಸಂವೇದನೆಯನ್ನು ಮೈಗೂಡಿಸಿಕೊಂಡ ಸಂಶೋಧನಸೂತ್ರಗಳು ಹೇಗೆ ತೆರೆದುಕೊಳ್ಳುತ್ತವೆಂದು ಅರಿಯಲು ಇದಕ್ಕಿಂತ ಸೊಗಸಾದ ನಿದರ್ಶನವಿಲ್ಲ.
ಸಂಸ್ಕೃತಸಾಹಿತ್ಯವೆಂಬ ತ್ರಿವೇಣೀಸಂಗಮದಲ್ಲಿ ರಾಮಾಯಣ-ಮಹಾಭಾರತಗಳು ಗಂಗೆ-ಯಮುನೆಯರಾದರೆ ಬೃಹತ್ಕಥೆಯು ಗುಪ್ತಗಾಮಿನಿ ಸರಸ್ವತಿ. ಬಹುಶಃ ಉಪೇಕ್ಷಿತವೇ ಆದ ಬೃಹತ್ಕಥೆಯ ವಿಸ್ತೃತವಾಙ್ಮಯವನ್ನು ಕಥಾಸರಿತ್ಸಾಗರ, ಬೃಹತ್ಕಥಾಶ್ಲೋಕಸಂಗ್ರಹ ಮತ್ತು ಬೃಹತ್ಕಥಾಮಂಜರಿಗಳಿಂದ ಗ್ರಹಿಸಿ ಸೊಗಸಾದ ಕನ್ನಡದಲ್ಲಿ ಅಡಕವಾಗಿಸಿರುವ ಕೃತಿ ಎ. ಆರ್. ಕೃಷ್ಣಶಾಸ್ತ್ರಿಗಳ “ಕಥಾಮೃತ”. ಬೇರಾವ ಭಾರತೀಯಭಾಷೆಯಲ್ಲಿಯೂ ಇಂತಹ ಕೃತಿ ಮೈದಾಳಿಲ್ಲ. ಶಾಸ್ತ್ರಿಗಳ ವಿಯದಾಯತ ವಿದ್ವತ್ತೆ, ಸಂಕ್ಷೇಪಣಶಕ್ತಿ ಮತ್ತು ನುಡಿಬೆಡಗುಗಳು ಕಥಾಮೃತಕ್ಕೆ ಜೀವ ತುಂಬಿವೆ. ಇಲ್ಲಿ ಕುವೆಂಪು ಅವರ “ಜನಪ್ರಿಯ ವಾಲ್ಮೀಕಿರಾಮಾಯಣ” ಮತ್ತು ತ. ಸು. ಶ್ಯಾಮರಾಯರ “ವಚನಭಾಗವತ”ಗಳನ್ನು ಕೂಡ ಸ್ಮರಿಸಬೇಕು. ಹೆಚ್ಚಿನ ಟಿಪ್ಪಣಿ-ವಿವರಣೆಗಳ ಭಾರವಿಲ್ಲದೆ ನಮ್ಮ ಆರ್ಷಕಾವ್ಯ ಹಾಗೂ ಪುರಾಣಗಳ ಪ್ರಾಥಮಿಕಪರಿಚಯವನ್ನು ಬಯಸುವವರಿಗೆ ಈ ಗ್ರಂಥಗಳು ಚೆನ್ನಾಗಿ ಒದಗಿಬರುತ್ತವೆ.
ಕಾಳಿದಾಸನ ಕಾವ್ಯಗಳನ್ನು ಕುರಿತು ಕನ್ನಡದಲ್ಲಿ ಹಲವು ಚೆಲುವಾದ ಹೊತ್ತಿಗೆಗಳಿವೆ. ಆದ್ಯ ರಂಗಾಚಾರ್ಯರ (ಶ್ರೀರಂಗರ) “ಕಾಳಿದಾಸ” ಎಂಬ ಕೃತಿ ಉದಾತ್ತಪ್ರಸನ್ನವಾದ ಒಳನೊಟಗಳಿಂದ ವಿಶಿಷ್ಟವಾಗಿದೆ. ಕವಿ-ಕಾವ್ಯಗಳ ಬಗೆಗಿನ ಅನೇಕರಚನೆಗಳು ಅಧ್ಯಯನಾಸಕ್ತರಿಗೆ ಉಪಯುಕ್ತವಾದರೂ ಕವಿತಾಕುತೂಹಲಿಗಳಿಗೆ ಶುಷ್ಕವಾಗಿ ತೋರುವ ವಿವರಗಳನ್ನು ಒಳಗೊಂಡಿರುತ್ತವೆ. ಶ್ರೀರಂಗರ ಕೃತಿಯಾದರೋ ಸಹೃದಯಸಮೀಕ್ಷೆಗೆ ಒತ್ತುಕೊಟ್ಟು ಕವಿಕುಲಗುರುವಿನ ಮನಸ್ತತ್ತ್ವವನ್ನೂ ಕಾವ್ಯಧರ್ಮವನ್ನೂ ಅರ್ಥಮಾಡಿಕೊಳ್ಳಲು ಸೊಗಸಾದ ಮಾರ್ಗದರ್ಶಿಯೆನಿಸಿದೆ. ಅಂತೆಯೇ ಎಂ. ರಾಜಗೋಪಾಲಾಚಾರ್ಯರ “ಕಾಳಿದಾಸನ ಉಪಮೆಗಳು” ಎಂಬುದೊಂದು ವಿನೂತನವಾದ ಕೃತಿ. ಸಂಸ್ಕೃತದಲ್ಲಿ “ಉಪಮಾ ಕಾಲಿದಾಸಸ್ಯ” ಎಂಬ ಶೀರ್ಷಿಕೆಯಡಿ ಲೇಖನಗಳೂ ನಿಬಂಧಗಳೂ ವಿಪುಲವಾಗಿ ದೊರೆಯುತ್ತವೆ; ಅವು ಪ್ರಾಯಿಕವಾಗಿ ಲಕ್ಷ್ಯ-ಲಕ್ಷಣಸಮನ್ವಯವನ್ನು ಮಾತ್ರ ಉದ್ದೇಶದಲ್ಲಿರಿಸಿಕೊಳ್ಳುವ ಕಾರಣ ಹೊಸ ಹೊಳಹುಗಳನ್ನು ನೀಡುವುದಿಲ್ಲ. ರಾಜಗೋಪಾಲಾಚಾರ್ಯರ ಕನ್ನಡಕೃತಿ ಹೊರನೋಟಕ್ಕೆ ಲಘುಸಂಹಿತೆಯಾಗಿ ಕಂಡರೂ ಅದರ ವಿಷಯವಿಭಾಗಕ್ರಮ, ಸಂಶ್ಲೇಷಣವನ್ನು ಮರೆಮಾಚದ ವಿಶ್ಲೇಷಣಶಕ್ತಿ ಮತ್ತು ವಿವರಣವೈಶದ್ಯಗಳಿಂದ ಹಿರಿದೆನಿಸಿದೆ. ಕಾಳಿದಾಸನ ಅನುಪಮವಾದ ಜ್ಯೋತಿರ್ಜ್ಞಾನವನ್ನು ಪ್ರಕಾಶಪಡಿಸುವ ಇಲ್ಲಿಯ ನಿರೂಪಣೆ ಅನಿತರಸಾಧಾರಣವೆಂದೇ ಹೇಳಬೇಕು. ಹೆಚ್ಚಿನ ಸಂಶೋಧನನಿಬಂಧಗಳೂ ಒಳಗೊಳ್ಳದ ಅಂತರ್ದೃಷ್ಟಿಯನ್ನು ಪುಟಪುಟದಲ್ಲಿಯೂ ಒದಗಿಸುವ ಈ ಗ್ರಂಥ ಸಂಸ್ಕೃತಜ್ಞರಿಗೆ ಪ್ರಾಯಶಃ ಅಪರಿಚಿತವಾಗಿಯೇ ಉಳಿದಿರುವುದು ವಿಪರ್ಯಾಸವೇ ಸರಿ. ಅಂತೆಯೇ ಹಜಾರಿ ಪ್ರಸಾದ್ ದ್ವಿವೇದಿ ಅವರು ಹಿಂದಿಯಲ್ಲಿ ರಚಿಸಿದ “ಮೇಘದೂತ್ ಏಕ್ ಪುರಾನೀ ಕಹಾನೀ” ಎಂಬ ಕೃತಿಯನ್ನು ಮ. ಸು. ಕೃಷ್ಣಮೂರ್ತಿಯವರು ಕನ್ನಡಕ್ಕೆ ಸೊಗಸಾಗಿ ಭಾಷಾಂತರಿಸಿದ್ದಾರೆ (“ಮೇಘದೂತ ಒಂದು ಹಳೆಯ ಕಥೆ” ಎಂಬ ಹೆಸರಿನಲ್ಲಿ). ಅತಿ ಹೆಚ್ಚು ವ್ಯಾಖ್ಯಾನಗಳನ್ನು ಪಡೆದಿರುವ ಸಂಸ್ಕೃತಕಾವ್ಯವೆಂಬ ಹೆಗ್ಗಳಿಕೆ ಮೇಘದೂತಕ್ಕಿದೆ; ಹೀಗಿದ್ದರೂ ಪ್ರಸ್ತುತಕೃತಿ ಯಾವ ಸಾಂಪ್ರದಾಯಿಕವ್ಯಾಖ್ಯಾನವೂ ಕಾಣಿಸದ ಕಾವ್ಯಸೂಕ್ಷ್ಮಗಳತ್ತ ನಮ್ಮ ಗಮನ ಸೆಳೆಯುತ್ತದೆ. ರೋಚಕವಾದ ಕಾದಂಬರಿಯಂತೆ ಓದಿಸಿಕೊಳ್ಳುವ ಈ ಅಮ್ಲಾನಪೇಶಲ ಕೃತಿಯ ಆದ್ಯಂತವೂ ಹಜಾರಿ ಪ್ರಸಾದರ ಸರ್ವಂಕಷವ್ಯುತ್ಪತ್ತಿ ಕಾಣಸಿಗುವುದು ಓದುಗರ ಭಾಗ್ಯ. ಸಂಸ್ಕೃತಸಾಹಿತ್ಯದ ಬಗೆಗೆ, ಭಾರತೀಯಸಂಸ್ಕೃತಿಯ ಬಗೆಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನವಜೀವನದ ಬಗೆಗೆ ಏಕಕಾಲದಲ್ಲಿ ಪ್ರೀತಿ-ಗೌರವಗಳನ್ನು ಪ್ರಚೋದಿಸುವ ಸದ್ಯದ ಗ್ರಂಥವನ್ನು ಓದದವರಿಗೆ ಅದೇ ದೊಡ್ಡ ದಂಡನೆ.
ಸಂಸ್ಕೃತಸಾಹಿತ್ಯವನ್ನು ಪರಿಚಯಿಸುವ ಗ್ರಂಥಗಳಿಗೆ ಕನ್ನಡದಲ್ಲಿ ಕೊರತೆಯಿಲ್ಲ. ಸಂಸ್ಕೃತದಲ್ಲಿಯೇ ರಚಿತವಾದ ಈ ಬಗೆಯ ಗ್ರಂಥಗಳಲ್ಲಿ ಹಲವು ತೆರನಾದ ಕೊರತೆಗಳು ಕಾಣುತ್ತವೆ: ಪ್ರಾತಿನಿಧಿಕವಾದ ಕವಿ-ಕಾವ್ಯಗಳ ಆಯ್ಕೆಯಲ್ಲಿ ಔಚಿತ್ಯವಿರುವುದಿಲ್ಲ, ವಿಮರ್ಶೆಯಲ್ಲಿ ಸಿದ್ಧಸೂತ್ರಗಳ ಅನುಸರಣ ಹೆಚ್ಚಾಗಿ ರಸಸಂವೇದನೆಗೆ ಕುಂದೊದಗಿರುತ್ತದೆ, ವಿಚಾರಪ್ರಸ್ತುತಿಯಲ್ಲಿ ಅಡಕ-ಎಳೆತಗಳ ನಡುವಣ ಹದವಿರುವುದಿಲ್ಲ. ಇಂತಹ ದೋಷಗಳಿಗೆ ದೂರವಾದ ಕೃತಿಗಳು ಕನ್ನಡದಲ್ಲಿರುವುದು ಹೆಮ್ಮೆಯ ಸಂಗತಿ. ಈ ಬಗೆಯ ಗ್ರಂಥಗಳನ್ನು ಬರೆಯುವವರಿಗೆ ಮಾರ್ಗದರ್ಶಕವಾಗಬಲ್ಲ ತೀ.ನಂ.ಶ್ರೀ ಅವರ ಮಾತುಗಳನ್ನು ಗಮನಿಸಿ ಮುಂದೆ ಸಾಗಬಹುದು:
ಒಂದು ಸಾಹಿತ್ಯದ ಚರಿತ್ರೆಯನ್ನು ಬರೆಯಲು ಹೊರಟಾಗ ಎರಡು ಮಾರ್ಗಗಳನ್ನು ಅನುಸರಿಸಲು ಅವಕಾಶವುಂಟು. ಸಾಹಿತ್ಯವೆಂದರೆ ಒಂದು ಭಾಷೆಯಲ್ಲಿ ಬರೆದಿರುವ ಗ್ರಂಥಗಳ ಸಮುದಾಯವೆಂದು ಅರ್ಥವಿಟ್ಟುಕೊಂಡು, ಆ ಗ್ರಂಥಗಳನ್ನು ಬರೆದ ಕವಿಗಳೆಲ್ಲರ ಚರಿತ್ರೆಯನ್ನೂ ಅವರ ಗ್ರಂಥಗಳ ವಿಮರ್ಶೆಯನ್ನೂ ಅನುಕ್ರಮವಾಗಿ ಕೊಡುತ್ತಾ ಹೋಗುವುದು ಒಂದು ಮಾರ್ಗ. ಇದು ನೋಡುವುದಕ್ಕೆ ಸುಲಭವಾಗಿಯೂ ಸಕಾರಣವಾಗಿಯೂ ತೋರಿದರೂ ಇದರಲ್ಲಿ ಪ್ರಯೋಜನ ಕಡಿಮೆ; ಕ್ಲೇಶವು ಹೆಚ್ಚು. ಒಂದು ಭಾಷೆಯಲ್ಲಿ ಬರೆದ ಎಲ್ಲಾ ಕವಿಗಳನ್ನೂ ಕೀರ್ತಿಸುವುದು ಸಾಧ್ಯವೇ? ಒಂದು ವೇಳೆ ಸಾಧ್ಯವಾದರೂ ಯುಕ್ತವೇ? ಕನ್ನಡದಂಥ ಅಲ್ಪವ್ಯಾಪ್ತಿಯ ಭಾಷೆಗೆ ಸೇವೆ ಸಲ್ಲಿಸಿದ ಕವಿಗಳೇ ಸಾವಿರಗಟ್ಟಳೆಯಾಗಿ ಇರುವಾಗ, ಹಿಂದೂ ದೇಶದಲ್ಲೆಲ್ಲಾ ವೈಭವದಿಂದ ಬಹುಕಾಲ ಮೆರೆದ ಸಂಸ್ಕೃತಭಾಷೆಯಲ್ಲಿ ಕಾವ್ಯರಚನೆ ಮಾಡಿದ ಕವಿಗಳ ಚರಿತ್ರೆಯನ್ನು ಬರೆಯುವುದು ಹಾಗಿರಲಿ, ಅವರೆಲ್ಲರ ಹೆಸರುಗಳನ್ನು ಪಟ್ಟಿಹಾಕುವುದೇ ಶ್ರಮಸಾಧ್ಯವಾಗುತ್ತದೆ. ಒಂದು ವೇಳೆ ಹೀಗೆ ಎಲ್ಲ ಕವಿಗಳ ವಿಚಾರವನ್ನು ಬರೆದರೂ ಅದರಿಂದ ಉಪಯೋಗವು ಕಡಿಮೆ. ಆ ಅಸಂಖ್ಯಾತ ಕವಿಗಳಲ್ಲಿ ಕೆಲವರು ಮಾತ್ರವೇ ಗಣ್ಯರು, ಯಶಸ್ವಿಗಳು; ನಮಗೆ ಬೇಕಾದದ್ದು ಆ ಕೆಲವರ ವಿಷಯ. ಆದ್ದರಿಂದ ಕವಿಗಳ ಚರಿತ್ರೆಯನ್ನು ಬರೆಯಬೇಕೆನ್ನುವವರು ಕೂಡ ಕೆಲವರು ಕವಿಗಳನ್ನು ಮಾತ್ರ ಆಯ್ದುಕೊಂಡು ತಮ್ಮ ಗಮನವನ್ನೆಲ್ಲಾ ಅವರ ಕಡೆಗೇ ತಿರುಗಿಸಬೇಕಾಗುತ್ತದೆ.[1]
ಎ. ಆರ್. ಕೃಷ್ಣಶಾಸ್ತ್ರಿಗಳ “ಸಂಸ್ಕೃತನಾಟಕ” ಮತ್ತು ಕೆ. ಕೃಷ್ಣಮೂರ್ತಿಗಳ “ಸಂಸ್ಕೃತಕಾವ್ಯ” ಈ ಬಗೆಯ ರಚನೆಗಳು. ಕೃಷ್ಣಶಾಸ್ತ್ರಿಗಳ ಗ್ರಂಥ ತನ್ನ ಕಾಲದ ಆಕರಸಾಮಗ್ರಿಯನ್ನೆಲ್ಲ ಸಂಪೂರ್ಣವಾಗಿ ಜೀರ್ಣಿಸಿಕೊಂಡು ಅದನ್ನು ಅನಿಮೇಷಸ್ಥಿರವಾಗಿ ವಿಮರ್ಶಿಸುತ್ತದೆ. ಡಿ.ವಿ.ಜಿ. ಅವರು ಹೆಸರಿಸುವ “ರಸತರ್ಕೈಕ್ಯ”ವನ್ನು ಇಲ್ಲಿ ಧಾರಾಳವಾಗಿ ಕಾಣಬಹುದು. ಕೆಲವೇ ಮಾತುಗಳಲ್ಲಿ ಕವಿಯ ಮನೋಧರ್ಮವನ್ನೂ ಕೃತಿಯ ವೈಶಿಷ್ಟ್ಯವನ್ನೂ ಹಿಡಿದಿಡುವ ಶಾಸ್ತ್ರಿಗಳದು ಮಾಂತ್ರಿಕಶಕ್ತಿ. ಇಲ್ಲಿಯ ಆಧಾರಗಳ ಅಧಿಕೃತತೆ ಮತ್ತು ವಿಶ್ಲೇಷಣೆಯ ಸ್ವೋಪಜ್ಞತೆ ಬೇರಾವ ಭಾಷೆಯ ಕೃತಿಯಲ್ಲಿಯೂ ಕಾಣುವುದಿಲ್ಲವೆಂದರೆ ಸುಳ್ಳಲ್ಲ. ಇನ್ನು ಕೆ. ಕೃಷ್ಣಮೂರ್ತಿಗಳ ಕೃತಿ ಲಲಿತೋಜ್ಜ್ವಲವಾದ ಗದ್ಯನೌಕೆಯಲ್ಲಿ ನಮ್ಮನ್ನು ಕುಳ್ಳಿರಿಸಿ ಸಂಸ್ಕೃತಸರಸ್ಸಿನ ಸೊಗಸುಗಳನ್ನೆಲ್ಲ ಹೃದ್ಯವಾಗಿ ತೋರಿಸಿಕೊಡುತ್ತದೆ. ಒಬ್ಬ ವ್ಯಕ್ತಿಯಲ್ಲಿ ಸಂಸ್ಕೃತದ ಬಗೆಗೆ ಪ್ರೀತಿ ಬೆಳೆಸಬೇಕಾದರೆ ಅವರಿಗೆ ಈ ಕೃತಿಯನ್ನು ಪರಿಚಯಿಸಬೇಕು. ಇಲ್ಲಿ ಉದಾಹೃತವಾದ ಪದ್ಯಗಳನ್ನು ಓದಿದರಷ್ಟೇ ಸಾಕು, ಎಲ್ಲ ಬಗೆಯ ಕಾವ್ಯಗಳ ಆಸ್ವಾದಕ್ಕೂ ಅನಿವಾರ್ಯವಾದ ರುಚಿಶುದ್ಧಿ ಸಿದ್ಧಿಸುತ್ತದೆ. ಕನ್ನಡದಲ್ಲಿರುವ ಮತ್ತೊಂದು ಅನನ್ಯವಾದ ಕೃತಿ ಶತಾವಧಾನಿ ಆರ್. ಗಣೇಶರ “ಕವಿತೆಗೊಂದು ಕಥೆ”. ಸಂಸ್ಕೃತಕವಿಗಳ ವೈಯಕ್ತಿಕವಿವರಗಳು ಹೆಚ್ಚಾಗಿ ತಿಳಿಯುವುದಿಲ್ಲವೆಂದು ವಿಷಾದಿಸುವ ನಮ್ಮ ಪಾಲಿಗೆ ಚಾಟುಪದ್ಯಗಳೇ ಸಾಂತ್ವನಸಾಧನಗಳು. ಈ ಕೃತಿ ಚಮತ್ಕಾರಸ್ಫೋರಕವಾದ ನೂರೆಂಟು ಚಾಟುಪದ್ಯಗಳು ನಿರೂಪಿಸುವ ಸಂಸ್ಕೃತಕವಿಗಳ ಜೀವಿತಸ್ವಾರಸ್ಯಗಳನ್ನು ಪರಿಣಾಮತೀವ್ರವಾದ ಭಾಷೆಯಲ್ಲಿ ಪರಿಚಯಿಸುತ್ತದೆ. ಬಗೆಬಗೆಯ ಶೈಲಿಗಳನ್ನೂ ಕವಿಮನೋಭಾವಗಳನ್ನೂ ಮನಗಾಣಲು ಇದಕ್ಕಿಂತ ಒಳ್ಳೆಯ ಆಕರ ದುರ್ಲಭ.
ಹೀಗಲ್ಲದೆ ಸಂಸ್ಕೃತಸಾಹಿತ್ಯದ ಎಲ್ಲ ಮುಖಗಳನ್ನೂ ಪರಿಚಯಿಸಲೆಳಸುವ ಗ್ರಂಥಗಳೂ ಕನ್ನಡದಲ್ಲಿವೆ. ಬಲದೇವ ಉಪಾಧ್ಯಾಯರ “ಸಂಸ್ಕೃತಸಾಹಿತ್ಯ ಕಾ ಇತಿಹಾಸ್” ಹಿಂದಿ ಕೃತಿಯನ್ನು “ಸಂಸ್ಕೃತಸಾಹಿತ್ಯದ ಇತಿಹಾಸ” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿರುವ ಎಸ್. ರಾಮಚಂದ್ರಶಾಸ್ತ್ರಿಗಳು ಸಾಹಿತ್ಯಾರಾಧಕರಿಗೆಲ್ಲ ಮಹೋಪಕಾರ ಮಾಡಿದ್ದಾರೆ. ಬೆರಗು ಮೂಡಿಸುವ ಹರಹುಳ್ಳ ಈ ಗ್ರಂಥ ಪ್ರಾಯಶಃ ಎಲ್ಲ ಸಾಹಿತ್ಯಪ್ರಕಾರಗಳ ಪರಿಷ್ಕೃತಪರಿಚಯವನ್ನೊಳಗೊಂಡಿದೆ. ಅಂತೆಯೇ ಎಂ. ಎನ್. ಶ್ರೀನಿವಾಸ ಅಯ್ಯಂಗಾರರು ಅಗಾಧಶ್ರಮದಿಂದ ಎರಡು ಹೆಬ್ಬೊತ್ತಿಗೆಗಳಲ್ಲಿ ನಿರ್ಮಿಸಿದ “ಸಂಸ್ಕೃತ ಕವಿಚರಿತ್ರೆ” ಅವಶ್ಯವಾಗಿ ಸ್ಮರಣೀಯ. ಪ್ರಮುಖರೂ ಪ್ರಸಿದ್ಧರೂ ಆದ ಕವಿಗಳ ವಿವರಗಳ ಜೊತೆಯಲ್ಲಿಯೇ ಅಜ್ಞಾತರೂ ಅನತಿಪ್ರಚುರರೂ ಆದ ಅನೇಕರ ಸಾಹಿತ್ಯವ್ಯವಸಾಯವನ್ನು ಈ ಕೃತಿ ಪ್ರಕಾಶಪಡಿಸುತ್ತದೆ. ಭಾಸ, ಕಾಳಿದಾಸ ಮತ್ತು ಭವಭೂತಿಯರನ್ನು ಕುರಿತು ಸಿ. ಕೆ. ವೆಂಕಟರಾಮಯ್ಯನವರು ರಚಿಸಿದ ನಿಡಿದಾದ ಗ್ರಂಥಗಳೂ ಇಲ್ಲಿ ಉಲ್ಲೇಖನೀಯ.
ಸುಭಾಷಿತಸಂಕಲನಗಳು ಸಂಸ್ಕೃತದಲ್ಲಿಯೇ ಹಲವಿವೆಯಾದರೂ ಅವುಗಳಲ್ಲೆಲ್ಲ ಏಕರೂಪದ ಸೌಂದರ್ಯವಿಲ್ಲ. ಈ ಬಗೆಯ ಪ್ರಕಲ್ಪಗಳು ಮೌಲಿಕವೆನಿಸುವುದು ಆಯಾ ಗ್ರಂಥಕಾರರ ಬಹುಶ್ರುತತ್ವದಿಂದ; ಅದಕ್ಕಿಂತ ಹೆಚ್ಚಾಗಿ ರಾಸಿಕ್ಯದಿಂದ. ಈ ನಿಟ್ಟಿನಲ್ಲಿ ತೀ.ನಂ.ಶ್ರೀ ಅವರ “ಬಿಡಿಮುತ್ತು” ಮತ್ತು ಪಾ. ವೆಂ. ಆಚಾರ್ಯರ “ಸುಭಾಷಿತಚಮತ್ಕಾರ” ಎಂಬ ಕೃತಿಗಳು ಕನ್ನಡವನ್ನು ಅದ್ವಿತೀಯವಾಗಿಸಿವೆ. ತೀ.ನಂ.ಶ್ರೀ. ಅವರ ಗ್ರಂಥ ನವುರಾದ ನರ್ಮಭಾವಗಳನ್ನು ಅಂದವಾದ ಉದಾಹರಣೆಗಳ ಮೂಲಕ ಸಂಗ್ರಹಿಸಿದರೆ ಪಾ. ವೆಂ. ಆಚಾರ್ಯರ ಕೃತಿ ಕಚಗುಳಿಯಿಕ್ಕುವ ಕಟಕಿ-ಕುಚೋದ್ಯಗಳನ್ನು ವಿಲಕ್ಷಣಕವಿತೆಗಳ ಮೂಲಕ ಸಂಕಲಿಸುತ್ತದೆ. ಇಲ್ಲಿ ಗಮನಾರ್ಹವಾದ ಮತ್ತೊಂದು ಗ್ರಂಥ ಕೆ. ಕೃಷ್ಣಮೂರ್ತಿಗಳ “ಸೃಜನಶೀಲತೆ ಮತ್ತು ಪಾಂಡಿತ್ಯ”. ಶಾಸ್ತ್ರ ಮತ್ತು ಕವಿಕರ್ಮಗಳ ವಿವಿಧ ಆಯಾಮಗಳನ್ನು ಅಗಾಧ ಆಕರಸಾಮಗ್ರಿಯೊಡನೆ ಪರಿಚಯಿಸುವ ಈ ಕೃತಿಯ ನವೀನವಿಚಾರಸರಣಿ ಮತ್ತು ಆಕರ್ಷಕನಿರೂಪಣೆಗಳು ಅದನ್ನು ಅನುಪವಾಗಿಸಿವೆ. ಇದೇ ರೀತಿ ಚಿತ್ರಕಾವ್ಯವನ್ನು ಆಮೂಲಾಗ್ರವಾಗಿ ವಿವೇಚಿಸುವ ಎರಡು ಅಮೂಲ್ಯಕೃತಿಗಳು ಕನ್ನಡದಲ್ಲಿವೆ. ಟಿ. ವಿ. ವೆಂಕಟಾಚಲಶಾಸ್ತ್ರಿಗಳ “ಕನ್ನಡ ಚಿತ್ರಕಾವ್ಯ” ಅದರ ಹೆಸರೇ ತಿಳಿಸುವಂತೆ ಹೆಚ್ಚಾಗಿ ಕನ್ನಡದ ಉದಾಹರಣೆಗಳನ್ನು ನೀಡಿದರೂ ಅದಕ್ಕೆ ಸಂಸ್ಕೃತಲಕ್ಷಣಗ್ರಂಥಗಳ ಭದ್ರವಾದ ಅಧಿಷ್ಠಾನವಿದೆ. ಹೊಸಹಳ್ಳಿ ವಾಸುದೇವ ಅವರ “ಸಂಸ್ಕೃತ ಚಿತ್ರಕಾವ್ಯಮೀಮಾಂಸೆ” ಈ ಕಾವ್ಯಪ್ರಕಾರದ ಎಲ್ಲ ಪ್ರಭೇದಗಳನ್ನೂ ಚೆನ್ನಾಗಿ ವಿವರಿಸುತ್ತದೆ.
ಇಷ್ಟೇ ಅಲ್ಲದೆ ಸಂಸ್ಕೃತದ ಕಾವ್ಯ-ನಾಟಕಗಳನ್ನು ಅನುವಾದಿಸುವ ಉದ್ಯಮ ಸುಮಾರು ನೂರೈವತ್ತು ವರ್ಷಗಳಿಂದ ಕನ್ನಡದಲ್ಲಿ ಸತತವಾಗಿ ನಡೆಯುತ್ತ ಬಂದಿದೆ. ಗದ್ಯ, ಪದ್ಯ, ಚಂಪೂ, ಕಥೆ, ಆಖ್ಯಾಯಿಕೆ, ರೂಪಕ, ಪ್ರಬಂಧ, ಸುಭಾಷಿತ, ಗೀತ ಮೊದಲಾದ ಎಲ್ಲ ಸಂಸ್ಕೃತಸಾಹಿತ್ಯಪ್ರಕಾರಗಳೂ ಕನ್ನಡಕ್ಕೆ ಅವತರಿಸಿವೆ. ಅನ್ವಯ-ಪ್ರತಿಪದಾರ್ಥಗಳುಳ್ಳ ಮೂಲನಿಷ್ಠ ಅನುವಾದಗಳಂತೆಯೇ ಸಂಗ್ರಹ-ಪುನಃಕಥನಗಳೂ ಸಾಕಷ್ಟಿವೆ. ವಾಲ್ಮೀಕಿಯಿಂದ ಮೊದಲ್ಗೊಂಡು ಜಗನ್ನಾಥನವರೆಗೆ, ಮಹಾಕಾವ್ಯದಿಂದ ಹಿಡಿದು ಭಾಣ-ಪ್ರಹಸನಗಳವರೆಗೆ ಎಲ್ಲ ಬಗೆಯ ಕೃತಿಗಳೂ ಇಲ್ಲಿವೆ. ವಿವಿಧಸ್ತರಗಳ ಸಾಹಿತ್ಯಾಸಕ್ತರು ತಮ್ಮ ತಮ್ಮ ಆವಶ್ಯಕತೆಗಳಿಗೆ ತಕ್ಕಂತೆ ಆರಿಸಿಕೊಳ್ಳಬಹುದಾದ ವಿಪುಲವಾಙ್ಮಯ ಕನ್ನಡದಲ್ಲಿ ಸಿದ್ಧವಾಗಿರುವುದು ಅಲ್ಪದ ಮಾತಲ್ಲ.
ಅಲಂಕಾರಶಾಸ್ತ್ರವನ್ನು ಗಮನಿಸುವುದಾದರೆ, ತೀ. ನಂ. ಶ್ರೀಕಂಠಯ್ಯನವರ “ಭಾರತೀಯಕಾವ್ಯಮೀಮಾಂಸೆ” ಎಲ್ಲ ದೃಷ್ಟಿಯಿಂದಲೂ “ಆಚಾರ್ಯಕೃತಿ”ಯೆಂಬ ಸಾರ್ಥಕೋಪಾಧಿಗೆ ಅರ್ಹವಾಗಿದೆ. ಶಾಸ್ತ್ರೀಯವಿಚಾರಗಳನ್ನು ಎಷ್ಟು ಸುಬೋಧಸುಂದರವಾಗಿ ನಿರೂಪಿಸಬಹುದೆಂದು ತಿಳಿಯಲು ಎಲ್ಲರೂ ಈ ಕೃತಿಯನ್ನು ಓದಬೇಕು. “ಈ ಬಗೆಯ ಗ್ರಂಥ ನಮ್ಮನ್ನು ಕುರಿತು ಬರಲಿಲ್ಲವಲ್ಲ!” ಎಂದು ಅನ್ಯಶಾಸ್ತ್ರಗಳು ಅಲಂಕಾರಶಾಸ್ತ್ರದ ಬಗೆಗೆ ಅಸೂಯೆ ವ್ಯಕ್ತಪಡಿಸಿದಲ್ಲಿ ಅಚ್ಚರಿಯಿಲ್ಲ. ಇಲ್ಲಿಯ ವಿಮರ್ಶವಿಧಾನವನ್ನು ಒಂದೇ ಮಾತಿನಲ್ಲಿ ಹಿಡಿದಿಡಬಹುದು — ಹದ; ನ್ಯಾಯನಿರ್ಣೀತವೂ ಸದ್ಭಾವಸಂಸ್ಕೃತವೂ ಆದ ಹದ. ಇನ್ನು ಕೆ. ಕೃಷ್ಣಮೂರ್ತಿಗಳು ಸಮಗ್ರವಾಗಿ ಅನುವಾದಿಸಿರುವ ಭಾಮಹ, ದಂಡಿ, ವಾಮನ, ಆನಂದವರ್ಧನ, ರಾಜಶೇಖರ, ಮಮ್ಮಟ, ಕ್ಷೇಮೇಂದ್ರ ಮುಂತಾದ ಚಿರಂತನಕಾವ್ಯಚಿಂತಕರ ಗ್ರಂಥಗಳು ಸಾಹಿತ್ಯಶಾಸ್ತ್ರದ ಎಲ್ಲ ವಿದ್ಯಾರ್ಥಿಗಳಿಗೂ ಅನಿವಾರ್ಯ ಆಲಂಬನಗಳಾಗಿವೆ. ಕಾವ್ಯಾಲಂಕಾರ, ಧ್ವನ್ಯಾಲೋಕ, ಕಾವ್ಯಮೀಮಾಂಸೆ ಮತ್ತು ಕಾವ್ಯಪ್ರಕಾಶಗಳ ಅವರ ಆವೃತ್ತಿಗಳು ಒಂದೊಂದೂ ಸ್ವತಂತ್ರಸಂಶೋಧನಕೃತಿಯ ಮೌಲ್ಯ ಹೊಂದಿವೆ. ಪ್ರಾಯಶಃ ಇವುಗಳ ಭೂಮಿಕೆ-ಟಿಪ್ಪಣಿಗಳಲ್ಲಿ ಪರಾಮೃಷ್ಟವಾಗದ ಕಾವ್ಯತತ್ತ್ವವೇ ಇಲ್ಲ. ಇವನ್ನು ಕೃಷ್ಣಮೂರ್ತಿಯವರದೇ ಆದ “ಆನಂದವರ್ಧನನ ಕಾವ್ಯಮೀಮಾಂಸೆ”ಯ ಜೊತೆ ಅಭ್ಯಸಿಸಿದರೆ ಅಲಂಕಾರಶಾಸ್ತ್ರದ ಅಂತರಂಗ ಅರಿವಿಗೆಟುಕುವುದರಲ್ಲಿ ಸಂಶಯವಿಲ್ಲ. ಯಾವ ಭಾಷೆಗೂ ಭೂಷಣವಾಗಬಲ್ಲ ಈ ಕೃತಿಗಳು ಕನ್ನಡದಲ್ಲಿ ಲಭ್ಯವಿರುವುದು ನಮ್ಮ ಭಾಗ್ಯ. “ಭಾರತೀಯಕಾವ್ಯಮೀಮಾಂಸೆ: ತತ್ತ್ವ ಮತ್ತು ಪ್ರಯೋಗ” ಮತ್ತು “ರಸೋಲ್ಲಾಸ”ಗಳು ಲಘುಕಾಯದ ಮಹೋನ್ನತರಚನೆಗಳು. ಕಾವ್ಯಶಾಸ್ತ್ರದ ಕೇಂದ್ರತತ್ತ್ವಗಳಾದ ರಸ-ಧ್ವನಿ-ಅಲಂಕಾರಗಳನ್ನು ವಸ್ತುನಿಷ್ಠವಾಗಿ ವಿವರಿಸುತ್ತಲೇ ಈ ಎರಡು ಕೃತಿಗಳು ಹೊಮ್ಮಿಸುವ ಹೊಳಹುಗಳು ಅದ್ಭುತ. ಅವರು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣಸಂಸ್ಥೆಗೆ ಸಿದ್ಧಪಡಿಸಿದ ಧ್ವನ್ಯಾಲೋಕದ ಪಾಠ್ಯಸರಣಿ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ವಿದ್ವಾಂಸರಿಗೂ ಉಪಾದೇಯವಾಗಿದೆ. ಶಾಸ್ತ್ರಗ್ರಂಥವೊಂದನ್ನು ಅನೇಕವರ್ಷಗಳ ಕಾಲ ಆಸ್ಥೆಯಿಂದ ಸಂಶೋಧಿಸಿ ಅಧ್ಯಾಪಿಸಿದ ಉಪಾಧ್ಯಾಯರೊಬ್ಬರು ಸಂಶಯಕ್ಕಾಸ್ಪದವಾದ ಸಂಗತಿಗಳನ್ನು ಸ್ವಯಂ ಉದ್ಭಾವಿಸಿಕೊಂಡು ಅವುಗಳಿಗೆ ಸೂಕ್ತಸಮಾಧಾನಗಳನ್ನು ಸೂಚಿಸುತ್ತಲೇ ಮನನೀಯ ಅಂಶಗಳನ್ನು ಪ್ರಕಾಶಪಡಿಸುವ ಕ್ರಮವನ್ನಿಲ್ಲಿ ಕಾಣಬಹುದು.
ಆದ್ಯ ರಂಗಾಚಾರ್ಯರು ಮಾಡಿರುವ ನಾಟ್ಯಶಾಸ್ತ್ರದ ಸಮಗ್ರ-ಸಟಿಪ್ಪಣ ಅನುವಾದ ಮತ್ತು ಲಕ್ಷ್ಮೀನರಸಿಂಹಶಾಸ್ತ್ರಿಗಳು ವಿಪುಲವಿವರಣೆಯೊಂದಿಗೆ ಮಾಡಿರುವ ಏಳು ಅಧ್ಯಾಯಗಳ ಅನುವಾದಗಳು ಉಲ್ಲೇಖಾರ್ಹ. ಸಿದ್ಧಪ್ಪಾರಾಧ್ಯರ ಕುವಲಯಾನಂದ, ಸಾಹಿತ್ಯದರ್ಪಣ ಮತ್ತು ರಸಗಂಗಾಧರಗಳ ಅನುವಾದಗಳು ಹಾಗೂ ಆರ್. ಲಕ್ಷ್ಮೀನಾರಾಯಣರ ವಕ್ರೋಕ್ತಿಜೀವಿತದ ಅನುವಾದ ಅಷ್ಟಾಗಿ ಒಳಹೊಳಹುಗಳನ್ನು ಕಾಣಿಸದಿದ್ದರೂ ವಿದ್ಯಾರ್ಥಿಗಳಿಗೆ ಪ್ರಯೋಜಕವಾಗಿವೆ. ಈಚಿನ ವರ್ಷಗಳಲ್ಲಿ ಎಂ. ಎ. ಹೆಗಡೆ ಮತ್ತು ಎಚ್. ವಿ. ನಾಗರಾಜರಾಯರು ಉದ್ಬೋಧಕವಾದ ಪೀಠಿಕೆ-ಟಿಪ್ಪಣಿಗಳೊಡನೆ ಸಮಗ್ರವಾಗಿ ಭಾಷಾಂತರಿಸಿರುವ ಧ್ವನ್ಯಾಲೋಕ (ಲೋಚನದ ಸಹಿತ), ಭಗವದ್ಭಕ್ತಿರಸಾಯನ, ಅಲಂಕಾರಸರ್ವಸ್ವ, ಮತ್ತು ವ್ಯಕ್ತಿವಿವೇಕಗಳು ಕೂಡ ಗಮನಾರ್ಹ. ಶತಾವಧಾನಿ ಆರ್. ಗಣೇಶರ “ಭಾರತೀಲೋಚನ” ಅಭಿನವಗುಪ್ತನ ಕಾವ್ಯಶಾಸ್ತ್ರಚಿಂತನಗಳನ್ನು ಸಾರ್ವತ್ರಿಕಸಂವೇದನೆಗೆ ಅನುಗುಣವಾಗಿ ಅರಿಯಬಯಸುವವರ ಪಾಲಿಗೊಂದು ಅಮೂಲ್ಯಶೇವಧಿ. ಜಟಿಲವಾದ ಭಾಷೆ ಮತ್ತು ತರ್ಕಸರಣಿಗಳನ್ನು ಲಕ್ಷಣವಾಗಿ ಹೊಂದಿರುವ ಲೋಚನ ಮತ್ತು ಅಭಿನವಭಾರತಿಗಳನ್ನು ನಿಃಸಂದಿಗ್ಧವಾಗಿ ಅರ್ಥೈಸಿಕೊಳ್ಳಲಷ್ಟೇ ಅಲ್ಲದೆ ಭಾರತೀಯಸೌಂದರ್ಯಶಾಸ್ತ್ರದ “ವಸ್ತುತಂತ್ರ”ಮೌಲ್ಯವನ್ನು ಮನಗಾಣಲೂ ಈ ಕೃತಿ ನೆರವಾಗುತ್ತದೆ.
ನಗೇಂದ್ರ ಅವರು ಹಿಂದಿಯಲ್ಲಿ ರಚಿಸಿದ “ರಸಸಿದ್ಧಾಂತ” ಮತ್ತೊಂದು ಅಮೂಲ್ಯಗ್ರಂಥ. ಇದನ್ನು ಪ್ರಧಾನ ಗುರುದತ್ತರು ಕನ್ನಡಕ್ಕೆ ಸಮರ್ಥವಾಗಿ ಭಾಷಾಂತರಿಸಿದ್ದಾರೆ. ಮನಃಶಾಸ್ತ್ರದ ಅಧಿಕರಣಗಳನ್ನು ಅಳವಡಿಸಿಕೊಂಡು ರಸತತ್ತ್ವದ ಹಲವು ಆಯಾಮಗಳನ್ನು (ಸಂಖ್ಯೆ, ಸ್ವರೂಪ, ಪರಿಣಾಮ ಇತ್ಯಾದಿ) ವಿಶ್ಲೇಷಿಸುವ ಈ ಕೃತಿ ಹಲವು ಚಿಂತನತಂತುಗಳ ಸೀವನದ ಫಲ. ಎಚ್. ತಿಪ್ಪೇರುದ್ರಸ್ವಾಮಿ ಅವರು ಕನ್ನಡದಲ್ಲಿಯೇ ರಚಿಸಿರುವ “ತೌಲನಿಕ ಕಾವ್ಯಮೀಮಾಂಸೆ” ಮತ್ತೊಂದು ಮೌಲಿಕಕೃತಿ. ಕವಿ, ಕಾವ್ಯ, ಪ್ರತಿಭೆ, ಅಲಂಕಾರ, ಶೈಲಿ, ಔಚಿತ್ಯ ಮುಂತಾದ ಸಂಗತಿಗಳನ್ನು ಭಾರತೀಯ ಮತ್ತು ಪಾಶ್ಚಾತ್ತ್ಯಪರಂಪರೆಗಳು ಕಾಣಿಸುವ ಕ್ರಮವನ್ನು ನಿರುಪಮವಾಗಿ ನಿರೂಪಿಸುವ ಈ ಗ್ರಂಥ ಅನೇಕ ಸ್ವರಸಸೂಕ್ತಿಗಳ ಸಂಚಯವೂ ಹೌದು. ಪಾಶ್ಚಾತ್ತ್ಯರ ಕಾವ್ಯತತ್ತ್ವಚಿಂತನಗಳನ್ನು ಅರಿಸ್ಟಾಟಲ್, ಹೊರೆಸ್ ಮತ್ತು ಲಾಂಜೈನಸ್ಸರ ಗ್ರಂಥಗಳ ಅನುವಾದದ ಮೂಲಕ ಕನ್ನಡಿಗರಿಗೆ ಪರಿಚಯಿಸಿಕೊಟ್ಟ ಎನ್. ಬಾಲಸುಬ್ರಹ್ಮಣ್ಯ ಅವರು ತಮ್ಮ ತೌಲನಿಕಪ್ರಕಲ್ಪದ ಉಪಫಲವಾಗಿ ಭಾರತೀಯಕಾವ್ಯಮೀಮಾಂಸೆಗೆ ಸಂಬಂಧಿಸಿದ ಅನೇಕ ಆಯಾಮಗಳ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ. ಜಿ. ಎಸ್. ಶಿವರುದ್ರಪ್ಪನವರ “ಕಾವ್ಯಾರ್ಥ ಪದಕೋಶ” ಮತ್ತು ಮಲ್ಲೇಪುರಂ ವೆಂಕಟೇಶರ “ಭಾರತೀಯ ಕಾವ್ಯಶಾಸ್ತ್ರ ಪರಿಭಾಷೆ” ಸಾಹಿತ್ಯವಿದ್ಯೆಯ ಸಂಜ್ಞಾ-ಪರಿಭಾಷೆಗಳನ್ನು ಪ್ರಾಮಾಣಿಕವಾಗಿ ಪರಿಚಯಿಸುವ ಕೋಶಗಳು. ಎಂ. ಎ. ಹೆಗಡೆ ಅವರ “ಅಲಂಕಾರತತ್ತ್ವ” ಎಂಬ ಹೊತ್ತಿಗೆ ಸಂಸ್ಕೃತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಸಹಜಾಲಂಕಾರಗಳನ್ನು ವಿಶದವಾಗಿ ವಿವರಿಸುತ್ತದೆ. ಈ ಕೃತಿಯ ಅಡಕ-ಅಧಿಕೃತತೆಗಳು ಹಿರಿದು. ಇಂತಹ ಸ್ವತಂತ್ರಗ್ರಂಥಗಳಲ್ಲದೆ ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡ ಕೈಪಿಡಿಗಾಗಿ ಬರೆದ “ಅಲಂಕಾರಶಾಸ್ತ್ರದ ಚರಿತ್ರೆ” ಮತ್ತು ಎನ್. ರಂಗನಾಥಶರ್ಮರು ಎರಡನೆಯ ನಾಗವರ್ಮ ಎಂಬ ಗ್ರಂಥಕ್ಕಾಗಿ ಬರೆದ “ಭಾರತೀಯ ಕಾವ್ಯಮೀಮಾಂಸೆಯ ಹಿನ್ನೆಲೆ” ಎಂಬ ದೀರ್ಘಪ್ರಬಂಧಗಳು ಮೌಲಿಕವಾಗಿದ್ದು ಓದುಗರಿಗೆ ತಮ್ಮಂತೆಯೇ ಶಾಸ್ತ್ರಸಂಸ್ಕಾರವೊದಗಿಸುತ್ತವೆ.
ಅಲಂಕಾರಶಾಸ್ತ್ರವನ್ನು ಕುರಿತು ಹೇಳುವಾಗ ಛಂದಃಶಾಸ್ತ್ರದ ಪ್ರಸ್ತಾವ ಅಪ್ರಸ್ತುತವಾಗಲಾರದು. ಇಲ್ಲಿ ನಾವು ಗಣಿಸಲೇಬೇಕಾದ ಗ್ರಂಥ ಸೇಡಿಯಾಪು ಕೃಷ್ಣಭಟ್ಟರ “ಛಂದೋಗತಿ”. ಸಂಸ್ಕೃತದಲ್ಲಿ ಕೃತಿರಚನೆ ಮಾಡಿದ ಛಂದೋವಿದರು ಗೌಣವಾಗಿಯೂ ವಿವೇಚಿಸದ ಗತಿತತ್ತ್ವವನ್ನು ಸೇಡಿಯಾಪು ಪ್ರಗಲ್ಭವಾಗಿ ಅನಾವರಣಗೊಳಿಸಿದ್ದಾರೆ. ಯತಿ, ಪ್ರಾಸ ಮೊದಲಾದ ಮೂಲಭೂತ ಛಂದಸ್ತತ್ತ್ವಗಳ ಲಕ್ಷಣಪರಿಷ್ಕಾರವನ್ನು ನಿರುಪಮವಾಗಿ ಮಾಡುವುದಲ್ಲದೆ ಪದಗತಿ, ಪದ್ಯಗತಿ, ಭಾಷಾಪದಗತಿ, ಛಂದಃಪಗತಿ, ಅಕ್ಷರಜಾತಿ ಮುಂತಾದ ನೂತನಪರಿಭಾಷೆಗಳನ್ನು ಕೂಡ ಈ ಗ್ರಂಥ ಪ್ರತಿಪಾದಿಸುತ್ತದೆ. ಲಯ ಮತ್ತು ಗತಿಗಳಿಗಿರುವ ವ್ಯತ್ಯಾಸ, ವೈದಿಕಸ್ವರಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳಬೇಕಾದ ವಿಧಾನ, ವಿವಿಧರೂಪದ ವರ್ಣ-ಮಾತ್ರಾ-ತ್ರಿಮೂರ್ತಿಗಣಬದ್ಧವಾದ ಛಂದಸ್ಸುಗಳನ್ನು ಪಠಿಸುವ ಕ್ರಮವೇ ಮುಂತಾದ ಸಂಗತಿಗಳನ್ನು ಊಹೆಗೂ ಎಟುಕದ ಸ್ವೋಪಜ್ಞತೆ-ತರ್ಕಪರಿಷ್ಕಾರಗಳಿಂದ ಸೇಡಿಯಾಪು ವಿವರಿಸುತ್ತಾರೆ. ವಿಶ್ವದ ಶಾಸ್ತ್ರಸಾಹಿತ್ಯಕ್ಕೆ ಕನ್ನಡ ಕೊಟ್ಟಿರುವ ಕೆಲವೇ ಕೊಡುಗೆಗಳಲ್ಲಿ ಛಂದೋಗತಿ ಅವಶ್ಯಗಣ್ಯವೆಂದರೆ ಅತ್ಯುಕ್ತಿಯಾಗದು.
ಸಾಹಿತ್ಯಕ್ಕೆ ಉಪಸ್ತಂಭಕವಾದ ಅನೇಕಸಂಗತಿಗಳನ್ನರಹುವ ಕೆಲವು ಕೃತಿಗಳು ಗಣನೀಯ. ಎನ್. ರಂಗನಾಥಶರ್ಮರ “ಸಂದರ್ಭಸೂಕ್ತಿ” ನೂರಾರು ಲೌಕಿಕನ್ಯಾಯಗಳ ಸೊಗಸಾದ ಸಂಚಯ. ಇಂಗ್ಲಿಷ್, ಸಂಸ್ಕೃತ ಮೊದಲಾದ ಭಾಷೆಗಳಲ್ಲಿ ಈ ಬಗೆಯ ಗ್ರಂಥಗಳು ಇವೆಯಾದರೂ ಅವುಗಳಲ್ಲಿ ಶರ್ಮರ ನಿರೂಪಣೆಯ ಆರ್ಜವ-ಅಧಿಕೃತತೆಗಳಿಲ್ಲ. ಶರ್ಮರ ಅಮರಕೋಶ ಅನುವಾದವನ್ನೂ ಇಲ್ಲಿ ಸ್ಮರಿಸಬೇಕು. ಎಲ್ಲ ಶಬ್ದಗಳ ಲಿಂಗ ಮತ್ತು ಪ್ರಾತಿಪದಿಕರೂಪಗಳನ್ನು ಗುರುತಿಸಿ ಉಪಕರಿಸುವ ಈ ಗ್ರಂಥ ಗಣರತ್ನಸಂಗ್ರಹ-ಉಣಾದಿಸಂಗ್ರಹಗಳಂಥ ಉಪಾದೇಯ ಅನುಬಂಧಗಳನ್ನೂ ಹೊಂದಿದೆ. ಟಿ. ವಿ. ವೆಂಕಟಾಚಲಶಾಸ್ತ್ರಿಗಳ “ಶ್ರೀವತ್ಸನಿಘಂಟು” ಅತ್ಯಮೂಲ್ಯವಾದ ಸಂಖ್ಯಾಪದಕೋಶ. ಭಾರತೀಯಸಾಹಿತ್ಯದ ಎಲ್ಲ ಅನುಸಂಧಾತೃಗಳಿಗೂ ಉಪಯುಕ್ತವಾದ ಈ ಗ್ರಂಥ ಕನ್ನಡದ ಹೆಮ್ಮೆಗಳಲ್ಲೊಂದು. ಅಂತೆಯೇ ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯರು ಅಪಾರಶ್ರಮ ವಹಿಸಿ ಆರು ಸಂಪುಟಗಳಲ್ಲಿ ಸಿದ್ಧಪಡಿಸಿದ “ಶಬ್ದಾರ್ಥಕೌಸ್ತುಭ” ಎಂಬ ಸಂಸ್ಕೃತ-ಕನ್ನಡನಿಘಂಟು ಬರಿಯ ಶಬ್ದಕೋಶವಾಗದೆ ವಿಶ್ವಕೋಶದ ವ್ಯಾಪ್ತಿಯನ್ನು ಪಡೆದಿದೆ. ಪ್ರತಿಯೊಂದು ಪದದ ಅರ್ಥ, ಧಾತುಮೂಲ ಮತ್ತು ಪ್ರಯೋಗಗಳೊಡನೆ ಶಾಸ್ತ್ರ-ಕಾವ್ಯಪ್ರಸಿದ್ಧವಾದ ಅನೇಕ ಅರ್ಥಚ್ಛಾಯೆಗಳನ್ನೂ ಸೇರಿಸಿರುವುದು ಅಧ್ಯಯನಾಸಕ್ತರಿಗೆ ಸಂದ ವರ.
ಕಡೆಯದಾಗಿ ಪ್ರಾದೇಶಿಕಭಾಷೆಗಳಲ್ಲಿ ಬರೆದ ಲೇಖಕರ ಕೆಲವು ಸ್ವೋಪಜ್ಞವಿಚಾರಗಳನ್ನು ಪರಾಮರ್ಶಿಸಬಹುದು. ಡಿ.ವಿ.ಜಿ. ಅವರು “ಜೀವನಸೌಂದರ್ಯ ಮತ್ತು ಸಾಹಿತ್ಯ”, “ಸಾಹಿತ್ಯಶಕ್ತಿ” ಮತ್ತು “ಕಾವ್ಯಸ್ವಾರಸ್ಯ” ಎಂಬ ಕೃತಿಗಳ ಮೂಲಕ ಸಂಸ್ಕೃತದ ಆಲಂಕಾರಿಕರಿಗೂ ಎಟುಕದ ಹಲವು ಮೌಲಿಕಾಂಶಗಳನ್ನು ಅನ್ಯೂನಪರಿಷ್ಕೃತಿಯೊಡನೆ ಸಾರಿದ್ದಾರೆ. ಸಾಮಾಜಿಕಜೀವನದ ಎಲ್ಲ ಹಂತಗಳಲ್ಲಿಯೂ ಅರ್ಥವಂತಿಕೆಯನ್ನು ಸಂಧಾನಿಸುವ ಶಕ್ತಿ ಸಾಹಿತ್ಯಕ್ಕೆ ಉಂಟೆಂಬ ಡಿ.ವಿ.ಜಿ. ಅವರ ನಿಲವು ನಿಜಕ್ಕೂ ಉಪಾದೇಯ. ಅವರು “ಸಹಿತತೆಯಿಂದ ಸಾಹಿತ್ಯ” ಎಂಬ ಲೇಖನದಲ್ಲಿ ಪ್ರತಿಪಾದಿಸಿರುವ ಹತ್ತು ಅಂಶಗಳಾಗಲಿ, “ಸಾಹಿತ್ಯಸಂಹಿತೆ” ಎಂಬ ಪ್ರಬಂಧದಲ್ಲಿ ಕಾಣಿಸಿರುವ ಉಪನಿಷತ್ತುಲ್ಯ ಒಳನೋಟವಾಗಲಿ ವಿಮರ್ಶಕ್ಷೇತ್ರದ ಸೀಮೆಯನ್ನೇ ವಿಸ್ತರಿಸಿವೆ. ರಾಳ್ಲಪಲ್ಲಿ ಅನಂತಕೃಷ್ಣಶರ್ಮರ “ಸಾಹಿತ್ಯ ಮತ್ತು ಜೀವನಕಲೆ” ಹೆಚ್ಚು ಜನರಿಗೆ ತಿಳಿಯದ ಕೃತಿ. ತಿಳಿಯಾದ ಅಂತರಂಗವುಳ್ಳ ಒಬ್ಬ ಸ್ವತಂತ್ರಚಿಂತಕ ಮಾಡಬಲ್ಲ ಸಾಹಿತ್ಯವಿಮರ್ಶೆಗೆ ಇದು ಒಳ್ಳೆಯ ನಿದರ್ಶನ. ಕುವೆಂಪು ಅವರ ಹಲವು ಪ್ರಬಂಧಗಳು ದಾರ್ಶನಿಕದೀಪ್ತಿಯಿಂದ ವಿಶಿಷ್ಟವಾಗಿವೆ. ವಿಭೂತಿ, ಭೂಮತೆ, ಭವ್ಯತೆ ಮುಂತಾದ ಸಂಪ್ರದಾಯಶುದ್ಧ ತತ್ತ್ವಗಳ ಕಾವ್ಯಾನ್ವಯವನ್ನು ವಿವೇಚಿಸುವ ಕುವೆಂಪು ಕಾವ್ಯದಲ್ಲಿ ಹಾಸು-ಹೊಕ್ಕಾಗಿರುವ ಆಧ್ಯಾತ್ಮಿಕತೆಯನ್ನು ತಮಗೇ ಸಲ್ಲುವ ಉದ್ದಾಮರಮ್ಯ ಶೈಲಿಯಲ್ಲಿ ಪ್ರತಿಪಾದಿಸಿದ್ದಾರೆ. ಅವರ ಈ ಹೊಳಹುಗಳು “ದಾರ್ಶನಿಕ ಕಾವ್ಯಮೀಮಾಂಸೆ” ಎಂಬ ಗ್ರಂಥದಲ್ಲಿ ಅಡಕವಾಗಿವೆ. ಪುತಿನ ಅವರು ಕಾವ್ಯಶಾಸ್ತ್ರದ ಪರಿಭಾಷಾಪ್ರಪಂಚಕ್ಕೆ ಇಬ್ಬರು ನೂತನಪ್ರಜೆಗಳನ್ನು ಪರಿಚಯಿಸಿದ್ದಾರೆ. ಕವಿಯು ಜೀವನದ ತಳಮುಟ್ಟಿ ತಿಳಿಯಬೇಕಾದ ಭಾವಸೂಕ್ಷ್ಮಗಳನ್ನು ಕುರಿತು ಹೇಳುತ್ತ ಅವರು ಬಳಸುವ “ಭವನಿಮಜ್ಜನಚಾತುರ್ಯ” ಎಂಬ ಶಬ್ದ ಹಾಗೂ ಆತ ಭಾವಪ್ರವಾಹದಲ್ಲಿ ಕೊಚ್ಚಿಹೋಗದೆ ಮೇಲೆದ್ದು ಬಂದು ಶಬ್ದಾರ್ಥಗಳ ವಿವಾಹದಲ್ಲಿ ಪುರೋಹಿತನಾಗಿ ಕಾರ್ಯ ನಿರ್ವಹಿಸಬೇಕಾದ ಬಾಧ್ಯತೆಯನ್ನು ಕುರಿತು ಹೇಳುವಾಗ ಬಳಸುವ “ಲಘಿಮಕೌಶಲ” ಎಂಬ ಶಬ್ದ ಎಷ್ಟು ವಿನೂತನವೋ ಅಷ್ಟೇ ಅರ್ಥಗರ್ಭಿತ. ಅವರ “ರಸಪ್ರಜ್ಞೆ” ಎಂಬ ಲೇಖನವೂ ಬಹುಮೌಲಿಕ.
ಪ್ರಾಯೋಗಿಕವಿಮರ್ಶೆಯ ಉದಾಹರಣೆಗೆ ಕುವೆಂಪು ಮತ್ತು ರವೀಂದ್ರನಾಥ ಠಾಕೂರ್ ಅವರು ಬಾಣಭಟ್ಟನ “ಕಾದಂಬರಿ”ಯನ್ನು ಕುರಿತು ಆಡಿರುವ ಮಾತುಗಳನ್ನು ಗಮನಿಸಬಹುದು. “ಮಹಾಶ್ವೇತೆಯ ತಪಸ್ಸು” ಎಂಬ ಲೇಖನದಲ್ಲಿ ಕುವೆಂಪು ಹೇಳುತ್ತಾರೆ: “ಕಾವ್ಯದುದ್ದಕ್ಕೂ ಪ್ರೇಮದ ಜಯಡಿಂಡಿಮಕ್ಕಿಂತಲೂ ಅದನ್ನು ತೂರಿ ಮೀರಿ ನಮಗೆ ಕೇಳಿಬರುತ್ತದೆ — ತಪಸ್ಸಿನ ವೀಣಾಧ್ವನಿ. ಕಟ್ಟಕಡೆಯಲ್ಲಿಯೂ ಕಾವ್ಯಕೈಲಾಸದ ನೆತ್ತಿಯ ಮೇಲೆ ಶೃಂಗಾರದ ದಿಗ್ವಿಜಯದ ಧ್ವಜವೇನೋ ಹಾರಾಡುತ್ತದೆ. ಆದರೆ ಕಣ್ಣಿಟ್ಟು ನೋಡುವವರಿಗೆ ಗೊತ್ತಾಗುತ್ತದೆ — ಆ ಧ್ವಜವಸ್ತ್ರ ವಲ್ಕಲದ್ದು; ಅದರ ಬಣ್ಣ ಕಾವಿ!”[2] ಅದರ ಕಥೆಯನ್ನು ಕುರಿತು “ಕಾದಂಬರಿಯ ಚಿತ್ರ” ಎಂಬ ಲೇಖನದಲ್ಲಿ ರವೀಂದ್ರರು ಹೇಳುತ್ತಾರೆ: “ಸಂಸ್ಕೃತಭಾಷೆಯನ್ನು ಅನುಚರರಿಂದೊಡಗೂಡಿದ ಚಕ್ರವರ್ತಿಯಂತೆ ಮುಂದು ಮಾಡಿಕೊಂಡು ಕಥೆಯು ಕಣ್ಣಿಗೆ ಬೀಳದಂತೆ ಅದರ ಹಿಂದೆ ಛತ್ರಿಯನ್ನು ಹೊತ್ತುಕೊಂಡು ಹೋಗುತ್ತದೆ.”[3] ಮಹಾಕವಿಗಳು ಮಾಡುವ ಕಾವ್ಯವಿಮರ್ಶೆಯ ಅಪೂರ್ವಭಾಸ್ವರ ಸತ್ತ್ವಮಯತೆಯನ್ನು ಕಾಣಲು ಇವಕ್ಕಿಂತ ಒಳ್ಳೆಯ ಉದಾಹರಣೆಗಳು ಸಿಗುವುದಿಲ್ಲ. ಸಂಸ್ಕೃತದಲ್ಲಿ ಈ ಪರಿಯ ವಿಮರ್ಶಶಕಲಗಳಿವೆಯೇ?
ಈವರೆಗಿನ ನಿರೂಪಣೆ ಯಾವ ಬಗೆಯಿಂದಲೂ ಪರಿಪೂರ್ಣವಲ್ಲ. ಇಲ್ಲಿ ಹೆಸರಿಸದ ಮೌಲಿಕಕೃತಿಗಳು ಹಲವಿವೆ. ಸದ್ಯದ ಲೇಖನದ ಚಿಕ್ಕ ಚೌಕಟ್ಟಿನೊಳಗೆ ಪ್ರಾತಿನಿಧಿಕವಾದ ವಿವರಗಳನ್ನೊದಗಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ವೈಯಕ್ತಿಕ ರುಚಿ ಮತ್ತು ಅಧ್ಯಯನಮಿತಿಗಳೇ ಇಲ್ಲಿಯ ಪ್ರತಿಪಾದನೆಯನ್ನು ಮುನ್ನಡಸಿವೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಒಟ್ಟಿನಲ್ಲಿ ಸಿದ್ಧವಾಗುವ ತಥ್ಯವೆಂದರೆ, ಕನ್ನಡಭಾಷೆಯಲ್ಲಿ ಸಾಹಿತ್ಯ-ಅಲಂಕಾರಶಾಸ್ತ್ರಗಳಿಗೆ ಸಂಬಂಧಿಸಿದಂತೆ ಸಂಸ್ಕೃತಕ್ಕೂ ಉಪಯಾನವಾಗಬಲ್ಲ ಅನೇಕ ಅಂಶಗಳಿವೆ. ಯಾವುದೇ ಮೇಲರಿಮೆ-ಕೀಳರಿಮೆಗಳಿಲ್ಲದೆ ಎಲ್ಲ ಲೇಖಕರೂ ಇವುಗಳನ್ನು ಆಸ್ವಾದಿಸಿ, ಅರ್ಥೈಸಿಕೊಂಡು ಭಾರತೀಯಸಾಹಿತ್ಯವನ್ನು ಪುಷ್ಟಿಗೊಳಿಸುವಂತಾಗಲಿ ಎಂದು ಹಾರೈಸೋಣ.
“ದೇವಾ ದೈವೀಂ ನರಾ ನಾರೀಂ ಶಬರಾಶ್ಚಾಪಿ ಶಾಬರೀಮ್ |
ತಿರ್ಯಂಚೋಽಪಿ ಚ ತೈರಶ್ಚೀಂ ಮೇನಿರೇ ಭಗವದ್ಗಿರಮ್ ||”
[1] ತೀ.ನಂ.ಶ್ರೀ. ಸಮಗ್ರಗದ್ಯ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ೨೦೧೯. ಪು. ೭೧
[2] ಕುವೆಂಪು ಸಮಗ್ರಗದ್ಯ, ಸಂ. ೧. ಕುಪ್ಪಳ್ಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ೨೦೧೩. ಪು. ೧೬೪
[3] ಪ್ರಾಚೀನಸಾಹಿತ್ಯ (ಅನುವಾದ: ಟಿ. ಎಸ್. ವೆಂಕಣ್ಣಯ್ಯ). ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೧೯೮೩. ಪು. ೬೯