ಅಭಿಜಾತನೃತ್ಯ ಮತ್ತು ಯಕ್ಷಗಾನ: ಒಂದು ವಿವೇಚನೆ - 1

ಉಪಕ್ರಮ

[ಈಗಾಗಲೇ ಹಲವು ಲೇಖನಗಳಲ್ಲಿ ನಾನು ನೃತ್ಯ, ನಾಟ್ಯ ಮತ್ತು ಯಕ್ಷಗಾನಗಳನ್ನು ಕುರಿತಂತೆ ಹೇಳಿರುವ ಕಾರಣ ಅವುಗಳನ್ನೆಲ್ಲ ಹಿನ್ನೆಲೆಯಲ್ಲಿರಿಸಿಕೊಂಡು ಸದ್ಯದ ಬರೆವಣಿಗೆಯನ್ನು ಸಹೃದಯರು ಗಮನಿಸಿಕೊಳ್ಳಬೇಕೆಂದು ವಿನಂತಿ. ಮುಖ್ಯವಾಗಿ “ಸೋದರಕಲೆಗಳ ನಡುವೆ ಯಕ್ಷಗಾನ,” “ಯಕ್ಷಗಾನ: ಒಂದು ದೇಶೀಯ-ಪಾರಂಪರಿಕ-ರಂಗಕಲೆ,” “ಯಕ್ಷಗಾನದಲ್ಲಿ ನವೀನಸುಧಾರಣೆ-ಪ್ರಯೋಗಗಳ ಸಾಧ್ಯತೆ: ಒಂದು ಮೀಮಾಂಸೆ,” “ಬಡುಗುತಿಟ್ಟಿನ ಆಂಗಿಕಾಭಿನಯ,” “ಏಕವ್ಯಕ್ತಿಯಕ್ಷಗಾನ: ತತ್ತ್ವ ಮತ್ತು ಪ್ರಯೋಗ,” “ನೃತ್ಯ-ನಾಟ್ಯಗಳನ್ನು ಅನುಲಕ್ಷಿಸಿ ಅಭಿಜಾತಕಲೆಗಳ ನೆಲೆ-ಬೆಲೆ,” “ರಸೈಕ್ಯವಿಲ್ಲದ ನೃತ್ಯನಾಟಕವು ರಸನಿಷ್ಠೆಯಿರುವ ಏಕಹಾರ್ಯ / ಏಕಾಹಾರ್ಯವಾಗಲಿ” ಎಂಬ ಲೇಖನಗಳು ಪರಿಶೀಲನೀಯ. ಮೊದಲ ಐದು ಬರೆಹಗಳು “ಯಕ್ಷರಾತ್ರಿ” ಗ್ರಂಥದಲ್ಲಿ ಸೇರಿವ. ಉಳಿದ ಎರಡು “ನೂಪುರಭ್ರಮರಿ” ಪತ್ರಿಕೆಯಲ್ಲಿ ಪ್ರಕಟವಾಗಿವೆ.]

ಭಾರತೀಯರಂಗಕಲೆಗಳ ಪ್ರಯೋಗ ನಮ್ಮೆಲ್ಲರ ಅನುಭವಗಳಿಗೆ ಅಷ್ಟೋ ಇಷ್ಟೋ ಬಂದೇ ಇದೆ. ಇದರ ಅನುಸ್ಯೂತತೆಯನ್ನು ನಾವು ನಮ್ಮ ವಿಚಾರಶಕ್ತಿಯಿಂದಲೇ ಅನುಮಾನಿಸಬಹುದು. ಆದರೆ ಇದಕ್ಕೆ ಹಿನ್ನೆಲೆಯಾದ ತತ್ತ್ವ ಮತ್ತದು ವ್ಯವಸ್ಥಿತವಾಗಿ ಹರಳುಗಟ್ಟಿದ ಕ್ರಮವನ್ನು ಕಾಣಲು ನಾವು ನಾಟ್ಯಶಾಸ್ತ್ರದ ಪರಂಪರೆಗೇ ಶರಣಾಗಬೇಕಿದೆ. ಜಗತ್ತಿನ ಇನ್ನುಳಿದ ಯಾವುದೇ ದೇಶದ ರಂಗಪರಂಪರೆಗೆ ಹೋಲಿಸಿದರೆ, ನಮ್ಮದು ತತ್ತ್ವ-ಶಾಸ್ತ್ರ ಮತ್ತು ಅನುಭವ-ಕಲೆಗಳ ಅವಿಚ್ಛಿನ್ನಸಂಪ್ರದಾಯವಾಗಿ ಉಳಿದುಬಂದಿರುವುದು ನಿಜಕ್ಕೂ ಹೆಮ್ಮೆ ತರುವಂತಿದೆ. ಏಕೆಂದರೆ, ಇಲ್ಲಿ ಭರತನಿಂದ ಮೊದಲ್ಗೊಂಡು ಅನೇಕವಿದ್ವಾಂಸರು ನಡಸಿದ ಚಿಂತನೆ ಮತ್ತು ಮಾಡಿದ ಶಾಸ್ತ್ರವಿಶ್ಲೇಷಣೆ ಆಶ್ಚರ್ಯ ತರುವಷ್ಟು ಸಮೃದ್ಧವಾಗಿದೆ. ಇದಕ್ಕೆ ಹೆಗಲೆಣೆಯಾಗಿ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಸಂಸ್ಕೃತ ಮತ್ತು ದೇಶಭಾಷೆಗಳಲ್ಲಿ ರಂಗಪಾಠ್ಯಗಳೂ ಮೌಖಿಕಸಾಹಿತ್ಯಗಳೂ ವಿಪುಲವಾಗಿ ಬೆಳೆದುಬಂದಿವೆ. ಇವೆರಡನ್ನೂ ಒಳಗೊಳ್ಳುವಂತೆ ಹದಗೊಂಡಿರುವ ಸಹೃದಯಸಂವೇದನೆ ಕೇವಲ ಅಲಿಖಿತವಷ್ಟೇ ಅಲ್ಲ, ಅಪ್ರತ್ಯಭಿಜ್ಞಾತವೂ ಹೌದು. ಇಷ್ಟು ಅಪಾರವಾದ ಸಾಮಗ್ರಿ ಇರುವ ಕಾರಣದಿಂದಲೇ ಅವೆಷ್ಟೋ ವಾದ-ಉಪವಾದಗಳು ಇಂದಿಗೂ ನಿಷ್ಕರ್ಷೆಯ ನೆಲೆಯನ್ನು ಕಾಣದಂತಿವೆ. ಆದರೆ ರಸತತ್ತ್ವದ ಬಲದಿಂದ ಈ ಎಲ್ಲ ತೊಡಕುಗಳನ್ನೂ ಬಿಡಿಸಬಹುದು. ಆ ವಿಶ್ವಾಸದಿಂದಲೇ ಸದ್ಯದ ಪ್ರಕಲ್ಪ ಮೊದಲಾಗಿದೆ.

ಲಾಸ್ಯಾಂಗ ಮತ್ತು ವೀಥ್ಯಂಗಗಳು

ಭರತಮುನಿಯ ನಾಟ್ಯಶಾಸ್ತ್ರದಲ್ಲಿ ನೃತ್ತ ಮತ್ತು ನಾಟ್ಯಗಳ ವಿಸ್ತೃತವಾದ ವಿವೇಚನೆಯಿದ್ದರೂ ನೃತ್ಯವೆಂಬ ಶಬ್ದವೇ ಇಲ್ಲ, ಮತ್ತದು ವಿವೇಚಿತವಾಗಿಯೂ ಇಲ್ಲವೆಂಬುದು ಹಲವರ ಅನಿಸಿಕೆ. ಇದು ಆಂಶಿಕಸತ್ಯ ಮಾತ್ರ. ಏಕೆಂದರೆ ಭಾರತನು ತಾಂಡವಲಕ್ಷಣಾಧ್ಯಾಯದ ಮೊದಲಿಗೆ ನೃತ್ತವು ಯಾವುದೇ ಅರ್ಥನಿರಪೇಕ್ಷವೆಂದು ಹೇಳಿದರೂ (೪-೨೬೫-೨೬೮) ಕರಣ-ಅಂಗಹಾರಗಳನ್ನು ನಿರೂಪಿಸಿದ ಬಳಿಕ ಆಸಾರಿತ, ಪರ್ಯಸ್ತಕ, ಪಿಂಡೀಬಂಧ ಮುಂತಾದ ನರ್ತನಗಳನ್ನು ಪ್ರಸ್ತಾವಿಸುತ್ತಾನೆ; ಅವುಗಳು ಗೀತಾರ್ಥವನ್ನು (ವಸ್ತು) ಅಭಿನಯಿಸಬೇಕೆಂದೂ ಒಕ್ಕಣಿಸುತ್ತಾನೆ (೪-೨೮೫). ಅನಂತರ ಪೂರ್ವರಂಗವನ್ನು ವಿವರಿಸುವಾಗ ಚಾರೀ, ಮಹಾಚಾರೀ, ಅಡ್ಡಿತಾ ಧ್ರುವಾ, ಅವಕೃಷ್ಟಾ ಧ್ರುವಾ, ವಿಕ್ಷಿಪ್ತಾ ಧ್ರುವಾ ಮುಂತಾದ ಅಂಶಗಳನ್ನು ನಿರೂಪಿಸುತ್ತಾನೆ. ಇವೆಲ್ಲ ಬರಿಯ ನೃತ್ತದ ಲಕ್ಷಣಗಳನ್ನಲ್ಲದೆ ನೃತ್ಯದ ಲಕ್ಷಣಗಳನ್ನೂ ಒಳಗೊಂಡಿವೆಯೆಂಬುದು ಸುವೇದ್ಯ.ಇದೇ ರೀತಿ ದಶರೂಪಕಗಳನ್ನು ವಿವರಿಸುವಾಗ ನಾಟ್ಯಶಾಸ್ತ್ರವು ಹಲವು ಬಗೆಯ “ಲಾಸ್ಯಾಂಗ”ಗಳನ್ನೂ ವಿವರಿಸುತ್ತದೆ. ಇವುಗಳ ಸಂಖ್ಯೆ ಹತ್ತರಿಂದ ಹದಿಮೂರರವರೆಗೆಂದು ಬೇರೆ ಬೇರೆ ಶಾಸ್ತ್ರಕಾರರ ಅಭಿಮತ. ಆದರೆ ಈ ಸಂಖ್ಯೆಯ ನಿರ್ದಿಷ್ಟತೆಗಿಂತ ಮಿಗಿಲಾದದ್ದು ಲಾಸ್ಯಾಂಗಗಳ ತತ್ತ್ವ. ಲಾಸ್ಯಾಂಗಗಳು ಕೇವಲ “ಭಾಣ”ವೆಂಬ ರೂಪಕಪ್ರಕಾರದ ಅಂಗಗಳೆಂದು ಹೆಚ್ಚಿನ ವಿದ್ವಾಂಸರು ಭ್ರಮಿಸಿದ್ದಾರೆ[1]. ವಸ್ತುತಃ ಇವು ಭಾಣವೂ ಸೇರಿದಂತೆ ದಶರೂಪಕಗಳಿಗೆಲ್ಲ ಅನ್ವಯವಾಗುವ ತತ್ತ್ವಗಳು. ಈ ವಿಚಾರವನ್ನು ಹಿಂದೆಯೇ ಡಾ|| ವಿ. ರಾಘವನ್ ಸ್ಪಷ್ಟಪಡಿಸಿದ್ದಾರೆ.[2] ಇವು ದಶರೂಪಕಗಳಿಗೆ ಮಾತ್ರವಲ್ಲದೆ ಮಿಕ್ಕೆಲ್ಲ ಉಪರೂಪಕಗಳಿಗೂ ಅನ್ವಿತವಾಗಬಲ್ಲವು. ಲಾಸ್ಯಾಂಗಗಳನ್ನೇ ನಾವು ಭಾರತೀಯನೃತ್ಯದ ಮೂಲಧಾತುಗಳೆಂದು ಹೇಳಬಹುದು. ಈ ನಿಟ್ಟಿನಲ್ಲಿ ಕೂಡ ರಾಘವನ್ ಅವರ ಅಧ್ಯಯನಗಳು ಗಮನಾರ್ಹ[3].     

ಲಾಸ್ಯಾಂಗಗಳಂತೆಯೇ ಭರತನು ಹದಿಮೂರು “ವೀಥ್ಯಂಗ”ಗಳನ್ನು ಕುರಿತೂ ಪ್ರಸ್ತಾವಿಸಿದ್ದಾನೆ. ಇವು “ವೀಥೀ” ಎಂಬ ರೂಪಕಪ್ರಭೇದದ ಲಕ್ಷಣದ ಬಳಿಕ ನಿರೂಪಿತವಾಗಿವೆ. ಇವುಗಳನ್ನು ಕೇವಲ ವೀಥಿಗೆ ಸಂಬದ್ಧವಾದ ಅಂಶಗಳೆಂದು ವಿದ್ವಾಂಸರು ಭ್ರಮಿಸಿರುವರು. ಆದರೆ ಇವು ಲಾಸ್ಯಾಂಗಗಳಂತೆಯೇ ಮಿಕ್ಕೆಲ್ಲ ರೂಪಕಗಳಿಗೂ ಅನ್ವೇಯ. ಇವನ್ನು ಉಪರೂಪಕಗಳಿಗೂ ವಿಸ್ತರಿಸಬಹುದಾಗಿದೆ. ಹೇಗೆ ಲಾಸ್ಯಾಂಗಗಳು ಭಾರತೀಯನೃತ್ಯದ ಮೂಲಮಾತೃಕೆಗಳೋ ಹಾಗೆಯೇ ವೀಥ್ಯಂಗಗಳು ಭಾರತೀಯನಾಟ್ಯದ ಮೂಲಮಾತೃಕೆಗಳು.[4] ಲಾಸ್ಯಾಂಗಗಳು ಗಾನಾಶ್ರಿತವಾದ ಆಂಗಿಕವನ್ನು ಪ್ರಧಾನವಾಗಿ ಆಧರಿಸಿದಂತೆ ವೀಥ್ಯಂಗಗಳು ಭಾಷಾಶ್ರಿತವಾದ ವಾಚಿಕವನ್ನು ಆಧರಿಸಿವೆ.

ನೃತ್ತ, ನೃತ್ಯ ಮತ್ತು ನಾಟ್ಯ

ನಾವೆಲ್ಲ ಬಲ್ಲಂತೆ ನೃತ್ಯವು ಪ್ರಧಾನವಾಗಿ ಆಂಗಿಕವನ್ನು ನೆಮ್ಮಿದ್ದರೆ ನಾಟ್ಯವು ವಾಚಿಕವನ್ನು ಆಶ್ರಯಿಸಿದೆ. ಇವೆರಡೂ ಸಾತ್ತ್ವಿಕವನ್ನು ತಮ್ಮ ಗುರಿಯನ್ನಾಗಿ ಇರಿಸಿಕೊಂಡಿರುವುದು ಸ್ಪಷ್ಟ. ಅಲ್ಲದೆ, ನೃತ್ಯವು ತನ್ನ ಗೀತಾಶ್ರಿತವಾದ ಆಂಗಿಕಪಾರಮ್ಯದ ಕಾರಣ ನಾಟ್ಯಧರ್ಮಿಗೆ ಹೆಚ್ಚು ಹತ್ತಿರವಾಗಿದ್ದರೆ, ನಾಟ್ಯವು ತನ್ನ ಭಾಷಾಶ್ರಿತವಾದ ವಾಚಿಕಪಾರಮ್ಯದ ಕಾರಣ ಲೋಕಧರ್ಮಿಗೆ ನಿಕಟವಾಗಿದೆ. ಆಹಾರ್ಯವು ನೃತ್ಯದಲ್ಲಿ ಸಾಂಕೇತಿಕವೆನಿಸಿದ್ದರೆ, ನಾಟ್ಯದಲ್ಲಿ ವಾಸ್ತವಿಕವೆನಿಸುತ್ತದೆ. ದಿಟವೇ, ಇವೆರಡರ ನಡುವೆ ಸಾಕಷ್ಟು ಕೊಡು-ಕೊಳ್ಳುವಿಕೆಗಳಿವೆ. ಆದರೆ ಪ್ರಧಾನವ್ಯಪದೇಶದಿಂದ ಈ ಎರಡು ವಿಭಾಗಗಳ ಔಚಿತ್ಯ ಸರ್ವಸಮ್ಮತ.

ನೃತ್ತಕ್ಕೆ ಇತಿವೃತ್ತದ ಹಂಗಿಲ್ಲ. ಈ ಕಾರಣದಿಂದಲೇ ಅದು ಅತ್ಯಂತ ಪರಿಶುದ್ಧರೂಪದ ಆಂಗಿಕ. ಇದಕ್ಕಿರುವ ವಾಚಿಕರೂಪದ ಸಂಗೀತವೂ ಸಾಹಿತ್ಯದ ಹಂಗಿಲ್ಲದ, ಕೇವಲ ಶ್ರುತಿ-ಲಯರೂಪವಾದ ಅನಿಬದ್ಧಗಾನ. ಆಹ್ಲಾದವನ್ನು ಉಂಟುಮಾಡುವುದೇ ನೃತ್ತದ ಪರಮೋದ್ದೇಶ. ಈ ಕಾರಣದಿಂದಲೇ ಭರತನು ಇದನ್ನು “ಶೋಭಾಮಾತ್ರ”ವೆಂದು ಗುರುತಿಸಿದ್ದಾನೆ.

ಆದರೆ ನೃತ್ಯವು ಹೀಗಲ್ಲ. ಇದರ ಆಂಗಿಕದಲ್ಲಿ ಇತಿವೃತ್ತದ ನಿರೂಪಣೆಗೆ ಒದಗಿಬರಬಲ್ಲ ಚಲನೆಗಳಿವೆ. ಹೀಗಾಗಿಯೇ ಅಂಥ ಕಥನದ ಕೊಂಡಿಗಳು ಲೋಕಧರ್ಮಿಗೆ ಹತ್ತಿರವೂ ಆಗಿವೆ. ಇದೇ ರೀತಿ ಇಲ್ಲಿಯ ಗಾನ ನಿಬದ್ಧರೂಪದ್ದಾಗಿ ಸಾಹಿತ್ಯವನ್ನು ಒಳಗೊಂಡಿದೆ. ನೃತ್ಯದ ಇತಿವೃತ್ತ ಸೀಮಿತವಾದುದು. ಇಲ್ಲಿ ಕಥನಕ್ಕಿಂತ ವ್ಯಾಖ್ಯಾನವೇ ಪ್ರಧಾನ. ಅಂದರೆ, ಕಥನದಲ್ಲಿ ಮುಖ್ಯವಾಗುವ ಘಟನೆಗಳನ್ನು ಅಭಿನಯಸುವುದಕ್ಕಿಂತ ಮಿಗಿಲಾಗಿ, ಅಂಥ ಘಟನೆಗಳನ್ನು ರೂಪಿಸುವ ಪಾತ್ರಗಳ ಚಿತ್ತವೃತ್ತಿಗಳನ್ನು ವಿಶದವಾಗಿ ನಿರೂಪಿಸುವುದೇ ನೃತ್ಯದ ಪರಮಾಶಯ. ಯಾವಾಗ ಹೆಚ್ಚಿನ ಘಟನೆಗಳಿರುವುದಿಲ್ಲವೋ ಆಗ ಹೆಚ್ಚಿನ ಪಾತ್ರಗಳೂ ಇರುವುದಿಲ್ಲ. ಹೀಗಾಗಿ ನೃತ್ಯವು ಒಂದು ಅಥವಾ ಕೆಲವೇ ಪಾತ್ರಗಳ ಚಿತ್ತವೃತ್ತಿಗಳನ್ನು ನಿರೂಪಿಸಲು ಅನುವಾಗಿದೆ. ಕೆಲವೇ ಪಾತ್ರಗಳನ್ನು ನಿರ್ವಹಿಸುವಾಗಲೂ ಅದು ಬಹ್ವಾಹಾರ್ಯದ ಕ್ರಮವನ್ನು ತಾಳದೆ ಏಕಾಹಾರ್ಯದಲ್ಲಿಯೇ ಎಲ್ಲವನ್ನೂ ನಡಸುತ್ತದೆ[5]. ನೃತ್ಯವನ್ನು ಮಾಡುವ ಕಲಾವಿದನು ತಾನು ನಿರೂಪಿಸಲಿರುವ ಯಾವ ಪಾತ್ರಕ್ಕೂ ನಿರ್ದಿಷ್ಟವಲ್ಲದ, ಯಾವುದೋ ಒಂದು ರೀತಿಯಲ್ಲಿ ತಟಸ್ಥವೆನಿಸಬಲ್ಲ—ಆದರೆ ತುಂಬ ಆಕರ್ಷಕವಾದ—ಆಹಾರ್ಯವನ್ನು ಧರಿಸುತ್ತಾನೆ. ಒಬ್ಬನೇ ಕಲಾವಿದ ಸಾಕಷ್ಟು ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಅಂದವನ್ನೂ, ತಾಟಸ್ಥ್ಯ ಮತ್ತು ಅದಕ್ಕೆ ನಿಕಟವಾದ ಲೋಕೋತ್ತರತೆಗಳನ್ನು ಪ್ರತಿನಿಧಿಸಬಲ್ಲ ಘನತೆಯನ್ನೂ ಉಳ್ಳ ಆಹಾರ್ಯವಿಲ್ಲಿ ಅಪೇಕ್ಷಿತ.

ತಾತ್ಪರ್ಯತಃ ಹೇಳುವುದಾದರೆ, ಯಾವುದೇ ರಂಗಪ್ರಯೋಗದಲ್ಲಿ ಗದ್ಯರೂಪದ ವಾಚಿಕವೂ ನೃತ್ತವಲ್ಲದ ಆಂಗಿಕವೂ ಹೆಚ್ಚಾದರೆ ಅದು ಲೋಕಧರ್ಮಿಗೆ ನಿಕಟವಾದ ನಾಟ್ಯವೆನಿಸುತ್ತದೆ. ಇದಕ್ಕೆ ವಿರುದ್ಧವಾಗಿ ಗೀತರೂಪದ ವಾಚಿಕವೂ ನೃತ್ತರೂಪದ ಆಂಗಿಕವೂ ಮಿಗಿಲಾದರೆ, ಅದು ನಾಟ್ಯಧರ್ಮಿಗೆ ಹತ್ತಿರವಾದ ನೃತ್ಯವೆನಿಸುತ್ತದೆ. ಕಥನಾಂಶ ಪ್ರಧಾನವಾದರೆ ನಾಟ್ಯವೆಂದೂ ವ್ಯಾಖ್ಯಾನಾಂಶ ಮುಖ್ಯವಾದರೆ ನೃತ್ಯವೆಂದೂ ಇವುಗಳ ಆಂತರ್ಯದ ದೃಷ್ಟಿಯಿಂದ ಹೇಳಬಹುದು. ಕಥನದಲ್ಲಿ ಸಾಮಾನ್ಯಲಕ್ಷಣವೆಂಬಂತೆ ಘಟನಾಬಾಹುಳ್ಯ, ಪಾತ್ರಬಾಹುಳ್ಯ ಮತ್ತು ಹೆಚ್ಚಿನ ವೇಗಗಳನ್ನು ಕಾಣಬಹುದು. ಇದಕ್ಕೆ ವ್ಯತಿರಿಕ್ತವಾಗಿ ಘಟನೆ-ಪಾತ್ರಗಳ ಸೀಮಿತಸಂಖ್ಯೆ ಮತ್ತು ನಿರೂಪಣೆಯ ಮಂದಗತಿಯನ್ನು ನೃತ್ಯದ ಸಾಮಾನ್ಯಲಕ್ಷಣವೆಂಬಂತೆ ಗಮನಿಸಬಹುದು.

ನೃತ್ತದಲ್ಲಿ ಇತಿವೃತ್ತದ ಸೋಂಕೇ ಇಲ್ಲದಿದ್ದರೂ ಅದು ಆಬಾಲವೃದ್ಧರಿಗೆಲ್ಲ ಆಕರ್ಷಕವಾಗುತ್ತದೆ. ಇದಕ್ಕೆ ಮುಖ್ಯಕಾರಣ ಅದರಲ್ಲಿರುವ ಆಂಗಿಕದ ಸೌಂದರ್ಯ ಮತ್ತು ಸ್ಥಾಯಿಯಾದ ಉಲ್ಲಾಸ. ವಿಶೇಷತಃ ಆಭಿಜಾತ್ಯದ ಸೂಕ್ಷ್ಮತೆಗಳಿಲ್ಲದ ಸುಲಭಶೈಲಿಯ ನೃತ್ತ ಎಲ್ಲರಿಗೂ ಹತ್ತಿರವೆನಿಸುತ್ತದೆ; ನೋಡುಗರನ್ನೂ ಕುಣಿಯುವಂತೆ ಮಾಡುತ್ತದೆ. ಇದನ್ನು ಜನಪದಕಲೆಗಳ ಜೀವಾಳವೆನ್ನಬಹುದು. ಈ ನೃತ್ತವು ಕೆಲವೊಮ್ಮೆ ತುಂಬ ಕ್ಲಿಷ್ಟವಾಗಿಯೂ ಇರಬಹುದು. ಅಂದರೆ, ಸೋಮೇಶ್ವರನು ಹೇಳುವಂತೆ “ವಿಷಮ”[6] ಎಂಬ ನೃತ್ತಪ್ರಕಾರದಂತೆ ತೋರಬಹುದು. ಆಗ ಅದು ಚಿತ್ರಕವಿತೆಯಂತೆ ಮಿಕ್ಕವರಿಗೆ ಅನುಕರಿಸಲು ಕಷ್ಟವಾದರೂ ಹೆಚ್ಚಿನ ಬೆರಗನ್ನು ಉಂಟುಮಾಡುತ್ತದೆ. ಇದು ಕೂಡ ಮಿಗಿಲಾದ ಜನರಂಜನೆಗೆ ಕಾರಣವೆನ್ನಬಹುದು.

ನೃತ್ಯವು ಈ ಮಟ್ಟದ ವ್ಯಾಪಕವಾದ ಜನಾದರಣೆಯನ್ನು ಹೊಂದುವುದು ಕಷ್ಟ. ಏಕೆಂದರೆ, ಇಲ್ಲಿ ವೀಕ್ಷಕನ ಸಂಸ್ಕಾರ ಮತ್ತು ಸಹೃದಯತೆಗಳು ಹೆಚ್ಚಿನ ಪ್ರಮಾಣದಲ್ಲಿ ಇರಬೇಕು. ಪಾತ್ರವೊಂದರ ಚಿತ್ತವೃತ್ತಿಗಳನ್ನು ವಿಶದವಾಗಿ ಬಗೆ ಬಗೆಯ ಕಲ್ಪನೆಗಳ ಮೂಲಕ ಕಲಾವಿದನು ಚಿತ್ರಿಸುತ್ತಿರುವಾಗ ಅದನ್ನು ಗ್ರಹಿಸಲು ಮಿಗಿಲಾದ ವ್ಯುತ್ಪತ್ತಿಯೂ ಬೇಕು. ಇದು ಸಾಮಾನ್ಯರಿಗೆ ಸುಲಭಸಾಧ್ಯವಲ್ಲ. ಅಪ್ಪಟ ರಸಿಕರಿಗಾದರೋ ನೃತ್ಯವು ತನ್ನ ಧ್ವನಿಶೀಲತೆಯ ಮೂಲಕ ಹೆಚ್ಚಿನ ರಸಾನಂದವನ್ನು ನೀಡುತ್ತದೆ.

ನಾಟ್ಯವು ನೃತ್ತದಂತೆಯೇ ಸರ್ವಜನರಿಗೂ ಮನೋರಂಜಕ. ಇದರ ಇತಿವೃತ್ತ, ಕಥನತಂತ್ರ, ಘಟನಾಬಾಹುಳ್ಯ ಮತ್ತು ಪಾತ್ರವೈವಿಧ್ಯಗಳು ತಮ್ಮ ಲೋಕಧರ್ಮಿಯ ಸತ್ತ್ವದೊಡನೆ ಯಾವುದೇ ವೀಕ್ಷಕನಿಗೆ ಹೆಚ್ಚಿನ ಪೂರ್ವಸಿದ್ಧತೆಯ ಅಪೇಕ್ಷೆಯಿಲ್ಲದೆ ರಸಾನಂದವನ್ನು ನೀಡಬಲ್ಲುವು. ಕೇವಲ ಸಂವೇದನಶೀಲನಾದ ಸಹೃದಯ ಮಾತ್ರ ನೃತ್ತ-ನೃತ್ಯ-ನಾಟ್ಯಗಳನ್ನೆಲ್ಲ ಯಥೋಚಿತವಾಗಿ ಸ್ವೀಕರಿಸಿ ಆನಂದಿಸಬಲ್ಲ.



[1] ಇಂಥ ಭ್ರಮೆಯನ್ನು ಮೊದಲು ಹುಟ್ಟುಹಾಕಿದವನು “ಭಾವಪ್ರಕಾಶ”ದ  ಕರ್ತೃ ಶಾರದಾತನಯ.

[2] Ref: Bhāṇa and Lāsyāṅgas. Raghavan, V. Sanskrit Drama: Its Aesthetics and Production. Madras: Samskrita Ranga, 1993. pp. 163–75

[3] Ref: Bharatanāṭya. Raghavan, V. Splendours of Indian Dance. Chennai: Dr V. Raghavan Centre for Performing Arts, 2004. pp. 8–47

ಈ ಲೇಖನದಲ್ಲಿ ರಾಘವನ್ ಅವರ ಎಷ್ಟೋ ಒಳನೋಟಗಳು ಅಮೂಲ್ಯವಾಗಿದ್ದರೂ ಅವರು ಭರತನಾಟ್ಯವೆಂದು ಈಚೆಗೆ ಪ್ರಸಿದ್ಧವಾದ ಸದಿರ್ ಎಂಬ ದೇಶೀನೃತ್ಯಪ್ರಕಾರದತ್ತ ತಾಳಿರುವ ಅವಿಚಾರಿತವಾದ ಅಭಿನಿವೇಶವೂ ಕರಣಗಳ ರಚನೆ ಮತ್ತು ಪುನಾರಚನೆಗಳನ್ನು ಕುರಿತಂತೆ ಹೊಂದಿರುವ ಅವೈಜ್ಞಾನಿಕವಾದ ವಿರೋಧವೂ ಗ್ರಾಹ್ಯವಲ್ಲ.

[4] ನೃತ್ಯ-ನಾಟ್ಯಗಳ ಐತಿಹಾಸಿಕವಿಕಾಸವನ್ನು ಉಪಲಕ್ಷಿಸಿ ಹೇಳುವುದಾದರೆ, ಲಾಸ್ಯಾಂಗಗಳೂ ವೀಥ್ಯಂಗಗಳೂ ಹರಳುಗಟ್ಟುತ್ತ ಬಂದಂತೆ, ಇವುಗಳನ್ನು ಒಳಗೊಳ್ಳುವಂಥ ದಶರೂಪಕಗಳು ಮೈದಾಳಿದವೆನ್ನಬಹುದು. ಇವೆಲ್ಲಕ್ಕೂ ಮೂಲ ಮಾನವನ ಉತ್ಸಾಹಮಯವಾದ ಕುಣಿತ. ಯಾವುದೇ ಇತಿವೃತ್ತವಿಲ್ಲದ ಕಾರಣ ಅನಿಬದ್ಧವಾದ ಈ ಕುಣಿತವು ಸೌಂದರ್ಯದೃಷ್ಟಿಯಿಂದ ಪರಿಷ್ಕೃತವಾಗುತ್ತ ಬಂದಂತೆ ನೃತ್ತವೆನಿಸಿತು. ಇದಕ್ಕೆ ಸಾಹಿತ್ಯ-ಸಂಗೀತಗಳ ಪುಷ್ಟಿ ದೊರೆತಾಗ ನೃತ್ಯವು ರೂಪಿತವಾಯಿತು. ಶೈಲೀಕೃತವಾದ ನೃತ್ತವು ಹಿಂದಾಗಿ, ಲೋಕಸಾಮಾನ್ಯದ ಚಲನೆಯೇ ಮುಂದಾಗಿ, ಹಾಡಿನ ಜಾಡು ಅನುದಿನದ ಮಾತಿಗೆ ಹತ್ತಿರವಾದಂತೆ ನಾಟ್ಯವು ಮೈದಾಳಿತು. ಈ ಕಾರಣದಿಂದಲೇ ನೃತ್ತವು ಆದಿಮಾನವನ ಆರಣ್ಯಕಾಭಿವ್ಯಕ್ತಿಯೆಂದೂ ನೃತ್ಯವು ಗ್ರಾಮೀಣನ ರೂಪಣವೆಂದೂ ನಾಟ್ಯವು ನಾಗರಕನ ನಿರ್ಮಾಣವೆಂದೂ ಹೇಳಬಹುದು. ಏಕೆಂದರೆ, ಇಂದಿಗೂ ನಮ್ಮ ಆದಿವಾಸಿಗಳ ಕುಣಿತವೆಲ್ಲ ಹೆಚ್ಚಾಗಿ ಶುದ್ಧನೃತ್ತವನ್ನೇ ಹೋಲುವಂತಿದೆ. ಅಂತೆಯೇ ಜನಪದಗೀತಗಳೊಡನೆ ಜೀವನದ ಅಭಿಭಾಜ್ಯ ಅಂಗವಾಗಿ ನಮ್ಮ ಗ್ರಾಮಜನರು ಹವಣಿಸಿಕೊಂಡ ಕುಣಿತವು ನೃತ್ಯಕ್ಕೆ ಸಂವಾದಿಯಾಗಿದೆ. ಇದೇ ರೀತಿ ನಗರಜೀವನದ ಉಪಫಲವಾದ ನಾಟಕಗಳು ನಾಟ್ಯಕ್ಕೆ ನಿಕಟವಾಗಿವೆ. ವಸ್ತುತಃ ಕಾಡು-ಹಳ್ಳಿಗಳ ನೈಸರ್ಗಿಕಜೀವನವು ಹಾಡು-ಕುಣಿತಗಳನ್ನು ಸಹಜವಾಗಿ ಪೋಷಿಸುವಂತೆ ಅತಿಶಿಷ್ಟತೆ-ಕೃತಕತೆಗಳ ಬಿಕ್ಕಟ್ಟಿರುವ ನಗರಜೀವನವು ಪೋಷಿಸುವುದಿಲ್ಲ. ಅಷ್ಟೇಕೆ, ಆದಿವಾಸಿಗಳ ಹಾಗೂ ಹಳ್ಳಿಗರ ಹಾವ-ಭಾವ ತುಂಬಿದ ವರ್ತನೆಯನ್ನೂ ಹಾಡಿನ ಏರಿಳಿತಗಳನ್ನು ಹೊಂದಿದ ಮಾತಿನ ಅಬ್ಬರವನ್ನೂ ನಾಗರಕಪ್ರಪಂಚವು ಮೆಚ್ಚುವುದಿಲ್ಲ, ಸಹಿಸುವುದಿಲ್ಲ. ಇಲ್ಲಿರುವುದೆಲ್ಲ ಹೆಚ್ಚಿನ ಆಂಗಿಕವಿಲ್ಲದ, ಎದ್ದುತೋರುವಂಥ ದನಿಯ ಏರಿಳಿತಗಳಿಲ್ಲದ, ಕ್ಲೃಪ್ತರೂಪದ ಪಿಸುಮಾತಿನ ಗದ್ಯ ಮಾತ್ರ. ಈ ಕಾರಣದಿಂದಲೇ ಛಂದೋಬದ್ಧವಾಗಿದ್ದ ನಮ್ಮ ಸಾಹಿತ್ಯವು ನಾಗರಕತೆಯ ನಿರ್ದಯವ್ಯವಹಾರದ ಒತ್ತಡದಿಂದ ನೀರಸಗದ್ಯಕ್ಕೆ ಜಾರಿದೆ. ಭಾಷೆಯ ಸ್ತರದಲ್ಲಿ ಪದ್ಯವು ನಾಟ್ಯಧರ್ಮಿಯಾದರೆ ಗದ್ಯವು ಲೋಕಧರ್ಮಿ. ಇದನ್ನು ರಂಗಕಲೆಗೆ ಅನ್ವಯಿಸಿದರೆ, ನೃತ್ತ-ನೃತ್ಯ-ನಾಟ್ಯಗಳ ವಿಕಾಸಕ್ರಮ ಮತ್ತೂ ಸ್ಪಷ್ಟವಾದೀತು.   

[5] ನಾಟ್ಯಶಾಸ್ತ್ರವು “ಏಕಹಾರ್ಯ” ಮತ್ತು “ಬಹುಹಾರ್ಯ” ಎಂಬ ಪರಿಭಾಷೆಗಳನ್ನು ಬಳಸಿದೆಯಲ್ಲದೆ, “ಏಕಾಹಾರ್ಯ” ಮತ್ತು “ಬಹ್ವಾಹಾರ್ಯ” ಎಂಬ ಶಬ್ದಗಳನ್ನು ಬಳಸಿಲ್ಲ. ಇವೆರಡನ್ನು ನಾನೇ ರೂಪಿಸಿಕೊಂಡಿದ್ದೇನೆ. “ಏಕಹಾರ್ಯ” ಮತ್ತು “ಬಹುಹಾರ್ಯ”ಗಳು ಕ್ರಮವಾಗಿ ಒಂದೇ ಪಾತ್ರ ಮತ್ತು ಅನೇಕಪಾತ್ರಗಳು ರಂಗಕರ್ಮವನ್ನು ಸಾಗಿಸುವಲ್ಲಿ ಬಳಕೆಯಾಗುತ್ತವೆ. ಆದರೆ “ಏಕಾಹಾರ್ಯ” ಮತ್ತು “ಬಹ್ವಾಹಾರ್ಯ”ಗಳ ಉದ್ದೇಶ ಸ್ವಲ್ಪ ವಿಭಿನ್ನ. ಹಲವು ಪಾತ್ರಗಳನ್ನು ಒಂದೇ ವೇಷದಿಂದ ಒಬ್ಬನೇ ನಟ ನಿರ್ವಹಿಸಿದಾಗ ಅದು “ಏಕಾಹಾರ್ಯ.” ಹಾಗಲ್ಲದೆ ಒಬ್ಬನೇ ನಟ ಹಲವು ವೇಷಗಳನ್ನು ತಳೆಯುವ ಮೂಲಕ ಹಲವು ಪಾತ್ರಗಳನ್ನು ನಿರೂಪಿಸಿದಾಗ, ಅದು “ಬಹ್ವಾಹಾರ್ಯ.” ಕೆಲವೊಮ್ಮೆ ಪ್ರಯೋಗಗಳು ಏಕಹಾರ್ಯ ಮತ್ತು ಏಕಾಹಾರ್ಯಗಳೂ ಆಗಿರಬಹುದು; ಅಥವಾ ಬಹುಹಾರ್ಯ ಮತ್ತು ಬಹ್ವಾಹಾರ್ಯಗಳೂ ಆಗಿರಬಹುದು, ಇವುಗಳ ಸಂಭವನೀಯತೆಯೇ ಹೆಚ್ಚು. 

[6] ಮಾನಸೋಲ್ಲಾಸ, ೪.೧೮.೯೫೯

To be continued.

 

   Next>>

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...