ದೇವುಡು ನರಸಿಂಹಶಾಸ್ತ್ರಿಗಳು ರಚಿಸಿದ ‘ಮಹಾಬ್ರಾಹ್ಮಣ,’ ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಎಂಬ ‘ಮಹಾತ್ರಯ’ದ ಪ್ರಸ್ತಾವ ಬಂದಾಗಲೆಲ್ಲ ವೇದಮಂತ್ರವೊಂದರ ಭಾಗ ನನಗೆ ನೆನಪಾಗುತ್ತದೆ - “ಮಹೋ ದೇವೋ ಮರ್ತ್ಯಾನಾವಿವೇಶ.” ಮಹಿಮಶಾಲಿಯಾದ ಭಗವಂತ ಮನುಷ್ಯರಲ್ಲಿ ಪ್ರವೇಶಿಸಿದನು ಎಂದು ಅದರ ತಾತ್ಪರ್ಯ. ಸಾಮಾನ್ಯವಾಗಿ ಮನುಷ್ಯಬುದ್ಧಿಗೆ ನಿಲುಕದ, ಅದನ್ನೂ ಮೀರಿದ ಸಂಗತಿಗಳನ್ನು ವಿವರಿಸುವಾಗ ಇದನ್ನು ಉದ್ಧರಿಸಲಾಗುತ್ತದೆ. ಪ್ರಕೃತ ದೇವುಡು ಅವರ ಮೂರು ಕಾದಂಬರಿಗಳನ್ನು ಕುರಿತು ಚಿಂತಿಸುವಾಗ ಈ ಮಂತ್ರವೇ ನಮಗೆ ದಿಕ್ಕು. ಮನುಷ್ಯಮಾತ್ರರಿಂದ ಇಂಥ ಸೃಷ್ಟಿ ಅಸಾಧ್ಯವಷ್ಟೆ! ಈ ಹಿನ್ನೆಲೆಯಲ್ಲಿ ನರಸಿಂಹಶಾಸ್ತ್ರಿಗಳು ‘ದೇವುಡು’ ಮನೆತನದಲ್ಲಿ ಹುಟ್ಟಿದುದು ಅಚ್ಚರಿಯೆನಿಸದು.
ಅವರ ಈ ಮೂರು ಕಾದಂಬರಿಗಳ ಹೆಸರುಗಳಲ್ಲಿಯೂ ಕಾಣುವ ‘ಮಹಾ’ಶಬ್ದವು ಅವರಿಗಿದ್ದ ದೊಡ್ಡದರ ಬಗೆಗಿನ ತುಡಿತವನ್ನು ಸೂಚಿಸುತ್ತದೆ. ಅಲ್ಪ-ಸ್ವಲ್ಪಗಳು ಅವರಿಗೆ ಆಗವು, ಸೇರವು. ಅವರದೇನಿದ್ದರೂ ಹಿರಿದು, ಸಾಹಸ. ಪುರುಷಾರ್ಥಗಳ ವಿಷಯದಲ್ಲಿ ಇಲ್ಲಿರುವುದು ಬೇರೆಡೆಯೂ ಇರಬಹುದು; ಇಲ್ಲಿ ಇಲ್ಲದಿರುವುದು ಬೇರೆಲ್ಲಿಯೂ ಇಲ್ಲ ಎಂಬ ಹೆಗ್ಗಳಿಕೆಯನ್ನುಳ್ಳ ಮಹಾಭಾರತವೂ ಇಂಥ ‘ಮಹತ್ತ್ವದ ಕೃತಿಯೇ. ಉಪನಿಷತ್ತು ಭೂಮವೆಂಬ ಉಪಾಸನಪ್ರಕಾರದ ಮೂಲಕ ನಮಗೆ ಬೋಧಿಸುವುದೂ ಈ ಬಗೆಯ ಮಹತ್ತ್ವವನ್ನೇ. ಕಡೆಗೆ ಸರ್ವಭೂತಾಶಯವಾದ ಬ್ರಹ್ಮದ ಶಬ್ದಾರ್ಥವೂ ಅದೇ, ಅತ್ಯಂತ ಮಹತ್ತ್ವದ್ದು (ಬೃಹಿ-ವೃದ್ಧೌ). ಇಂಥ ಮಹತ್ತಿಗೆ ಮನಸೋತವರು ದೇವುಡು.
* * *
ದೇವುಡು ನರಸಿಂಹಶಾಸ್ತ್ರಿಗಳು (೨೯.೧೨.೧೮೯೬ - ೨೭.೧೦.೧೯೬೨) ನಮ್ಮ ನಾಡಿನ ಸುಪುತ್ರರಲ್ಲಿ ಒಬ್ಬರು. ಜನ್ಮಜಾತವಾದ ಅಸೀಮ ಪ್ರತಿಭೆ, ತಾವು ಶ್ರಮವಹಿಸಿ ಸಂಪಾದಿಸಿದ ಬೆರಗು ಬಡಿಸುವ ಪಾಂಡಿತ್ಯ, ಇವೆರಡನ್ನೂ ಲೋಕಹಿತಕ್ಕಾಗಿ ವಿನಿಯೋಗಿಸುವ ಉದಾರತೆ, ಸಂಕಲ್ಪವನ್ನು ಕಾರ್ಯಗತಗೊಳಿಸುವಲ್ಲಿ ಶ್ರಮವರಿಯದ ದುಡಿಮೆ, ಎಲ್ಲ ಬಗೆಯ ಸೊಗಸುಗಳನ್ನೂ ಸವಿಯಬಲ್ಲ ಭೋಗದಾರ್ಢ್ಯ, ಎಂಥ ಕಷ್ಟ-ನಷ್ಟಗಳಿಗೂ ಕುಗ್ಗದ ಮನಃಸ್ಥೈರ್ಯ, ಲೋಕಜೀವನದ ವಿವಿಧ ಆಯಾಮಗಳಲ್ಲಿ ಭೇದಗಳನ್ನು ಲೆಕ್ಕಿಸದೆ ಸ್ವಯಂ ತೊಡಗಿಕೊಳ್ಳುವ ಅವ್ಯಾಜ ಆಸಕ್ತಿ, ಹೀಗೆ ಮಾಡಿಯೂ ಯಾವುದನ್ನೂ ಅಂಟಿಸಿಕೊಳ್ಳದೆ ಎಲ್ಲವನ್ನೂ ತಮಗೆ ಬೇಕಾದಾಗ ಕೊಡವಿಕೊಳ್ಳಬಲ್ಲ ಅವಧೂತಪ್ರಜ್ಞೆ - ಹೀಗೆ ದೇವುಡು ಅವರ ಗುಣಗಳನ್ನು ಪಟ್ಟಿ ಮಾಡುತ್ತ ಹೋದರೆ ಅದೇ ಒಂದು ಗ್ರಂಥವಾದೀತು. ವರಕವಿ ಬೇಂದ್ರೆ ಅವರು ಹಾಡಿದಂತೆ-
ಬಾಲನಂಥ ದೇವುಡು ಉನ್ಮತ್ತನಂಥ ದೇವುಡು
ಜಡ-ಪಿಶಾಚಿ ದೇವುಡು ಹುಚ್ಚು ಮರುಳು ದೇವುಡು...
ಕುಂಟುಗಾಲಿನಿಂದ ಹೊರಟ ವೈಕುಂಠಕೆ ದೇವುಡು
ಕುರುಡುಗಣ್ಣಿನಿಂದ ಕಂಡ ಕೈಲಾಸವ ದೇವುಡು...
ಎಲ್ಲ ಕ್ಷೇಮ ಎಲ್ಲ ಯೋಗ ಇಂದ್ರಭೋಗ ದೇವುಡು...
ಬ್ರಹ್ಮ-ಕ್ಷತ್ರ ಕುರುಕ್ಷೇತ್ರ ಅದು ಪವಿತ್ರ ದೇವುಡು
ಇವು ಕವಿಸಹಜವಾದ ಅತ್ಯುಕ್ತಿ-ಅತಿಶಯೋಕ್ತಿಗಳಲ್ಲ, ವಾಸ್ತವ; ದೇವುಡು ಅವರ ಜೀವನದ ಹತ್ತಾರು ಸರಸ-ವಿಷಮ ಸಂದರ್ಭಗಳು ದೃಢಗೊಳಿಸಿದ ವಾಸ್ತವ. ಅವರು ಒಮ್ಮೆ ಉಡುಪಿಯಲ್ಲಿ ಭಗವದ್ಗೀತೆಯ ಬಗೆಗೆ ಉಪನ್ಯಾಸ ಮಾಡುವಾಗ ತಮ್ಮ ಮಗನ ಮರಣದ ದುರ್ವಾರ್ತೆ ಬಂದರೂ ವಿಚಲಿತರಾಗದೆ ಭಾಷಣವನ್ನು ಪೂರ್ಣಗೊಳಿಸಿ ಸ್ಥಿತಪ್ರಜ್ಞೆಯನ್ನು ಮೆರೆದಿದ್ದರು. ತಮಗೆ ಮಧುಮೇಹ ಉಲ್ಬಣಗೊಂಡು ಕಾಲನ್ನು ತೆಗೆಯಬೇಕಾಗಿ ಬಂದಾಗ ವೈದ್ಯರಿಗೇ ಧೈರ್ಯ ಹೇಳಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಶ್ರೀಚಂದ್ರಶೇಖರಭಾರತೀಸ್ವಾಮಿಗಳಿಂದ ದತ್ತಾತ್ರೇಯಮಂತ್ರದೀಕ್ಷೆಯನ್ನು ಸ್ವೀಕರಿಸಿಯೂ ಮನೆಗೆ ಬಂದ ಕ್ರೈಸ್ತ ಮಹನೀಯರಾದ ರೆ|| ಚೆನ್ನಪ್ಪ ಉತ್ತಂಗಿ ಅವರನ್ನು ಕಾಲು ತೊಳೆದು ಸತ್ಕರಿಸಿದ್ದರು. ಒಮ್ಮೆ ನ್ಯಾಯಾಧೀಶರು “ನಿಮ್ಮ ವೃತ್ತಿ ಏನು?” ಎಂದು ಕೇಳಿದಾಗ, “ರಾಜ-ಮಹಾರಾಜರಿಗೆ ಸುವರ್ಣಾಕ್ಷತೆ ಕೊಟ್ಟು ಆಶೀರ್ವಾದ ಮಾಡುವ ವೃತ್ತಿ” ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದ್ದರು. ಇನ್ನೊಮ್ಮೆ ಭಾರತದ ಅಧ್ಯಾತ್ಮಪರಂಪರೆಯನ್ನು ಅರಿಯಲು ಅಮೆರಿಕೆಯಿಂದ ಬೆಂಗಳೂರಿಗೆ ಬಂದು ಸರ್ಕಾರದ ಅತಿಥಿಗಳಾಗಿದ್ದ ವಿದ್ಯಾರ್ಥಿಗಳಿಗೆ ತಿಳಿಹೇಳಲು ಅಧಿಕಾರಿಗಳು ಕೇಳಿಕೊಂಡಾಗ, ಅವರಿದ್ದಲ್ಲಿಗೆ ಹೋಗದೆ “ಗುರೂಪಸದನ ಶಿಷ್ಯನ ಪ್ರಥಮ ಕರ್ತವ್ಯ” ಎಂದು ಹೇಳಿ ಅವರನ್ನೇ ತಮ್ಮಲ್ಲಿಗೆ ಕರಿಸಿಕೊಂಡಿದ್ದರು. ಇಂಥವರು ದೇವುಡು ನರಸಿಂಹಶಾಸ್ತ್ರಿಗಳು.
ಹತ್ತಾರು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಅವರು ನಡಸಿದ ನೂರಾರು ಕೆಲಸಗಳಲ್ಲಿ ಒಂದೊಂದೂ ಅನನ್ಯ. ಮಕ್ಕಳಿಗಾಗಿ ಒಂದು ನಿಯತಕಾಲಿಕೆಯನ್ನು ಪ್ರಾರಂಭಿಸಿ ಹಲವು ಕಾಲ ಯಶಸ್ವಿಯಾಗಿ ಪ್ರಕಟಿಸಿದರು. ನಮ್ಮ ಶಿಕ್ಷಣವ್ಯವಸ್ಥೆ ಸರಿಯಾಗಬೇಕೆಂದು ಆರ್ಯವಿದ್ಯಾಶಾಲೆಯಲ್ಲಿ ಬೋಧಕರಾಗಿದ್ದಾಗ ಶ್ರಮಿಸಿದ್ದಲ್ಲದೆ ತಾವೇ ಗಾಂಧಿನಗರ ಪ್ರೌಢಶಾಲೆಯನ್ನು ಸ್ಥಾಪಿಸಿದರು. ನಮ್ಮ ನಾಡಿನ ಸಾಂಪ್ರದಾಯಿಕ ರಂಗಭೂಮಿಯಲ್ಲಿ ಆದರವಿರಿಸಿ ಅದರ ಏಳ್ಗೆಗಾಗಿ ಹಲವು ಬಗೆಯಲ್ಲಿ ದುಡಿದರು; ಸ್ವಯಂ ನಟಿಸಿದರು; ‘ರಂಗಭೂಮಿ’ ಪತ್ರಿಕೆಯ ಸಂಪಾದಕರೂ ಆಗಿದ್ದರು. ಸಿನೆಮಾಗಳಲ್ಲಿ ನಟಿಸಿ ನಿರ್ದೇಶನವನ್ನೂ ಮಾಡಿದರು. ವಯಸ್ಕರ ಶಿಕ್ಷಣಕ್ಕಾಗಿ ಸರ್ಕಾರವು ಕೆಲಸ ಪ್ರಾರಂಭಿಸುವ ಮೊದಲೇ ‘ಅಕ್ಷರಪ್ರಚಾರಮಾಲೆ’ಗೆ ಶ್ರೀಕಾರ ಹಾಕಿದ್ದರು. ಎಲ್ಲರೂ ಸಂಸ್ಕೃತಭಾಷೆಯನ್ನು ಕಲಿಯುವಂತೆ ಆಗಬೇಕೆಂದು ‘ಮೂಲಸಂಸ್ಕೃತ’ ಎಂಬ ಅಧ್ಯಯನಪ್ರಣಾಲಿಯನ್ನು ಕಲ್ಪಿಸಿದ್ದರು. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಚಿರಕೃತಿಗಳನ್ನು ಸರಳ-ಸಂಕ್ಷಿಪ್ತ ಶೈಲಿಯಲ್ಲಿ ಬರೆದು ಪ್ರಕಾಶಿಸಿದರು. ಇಡಿಯ ‘ಯೋಗವಾಸಿಷ್ಠ’ವನ್ನು ಕನ್ನಡಕ್ಕೆ ಭಾಷಾಂತರಿಸಿ ವಿಕ್ರಮವನ್ನು ಮೆರೆದರು. ಕನ್ನಡದಲ್ಲಿ ಪ್ರಾಯಶಃ ಮೊದಲ ಬಾರಿಗೆ ಮೀಮಾಂಸಾಶಾಸ್ತ್ರವನ್ನು ಅಧಿಕೃತವಾಗಿ ಪರಿಚಯಿಸುವ ‘ಮೀಮಾಂಸಾದರ್ಪಣ’ ಗ್ರಂಥವನ್ನು ಬರೆದರು. ನಮ್ಮ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಜಾನಪದ ಸ್ವಾರಸ್ಯಗಳನ್ನೂ ಪ್ರಚುರಪಡಿಸುವ ಉದ್ದೇಶದಿಂದ ಉಪನ್ಯಾಸಗಳನ್ನು ನೀಡಿ ಅವನ್ನು ‘ಕರ್ಣಾಟಕ ಸಂಸ್ಕೃತಿ’ ಎಂಬ ಹೆಸರಿನ ಪುಸ್ತಕವಾಗಿ ಪ್ರಕಟಿಸಿದರು. ಅಲ್ಲದೆ ಪ್ರಜಾಪ್ರತಿನಿಧಿಸಭೆ, ಬೆಂಗಳೂರು ಪುರಸಭೆ ಮುಂತಾದುವುಗಳ ಸದಸ್ಯರಾಗಿ ಸಮಾಜಹಿತವನ್ನು ಕಾಪಿಟ್ಟರು.
ದೇವುಡು ಅವರ ಸಾಹಿತ್ಯಕೃಷಿ ನವೋದಯದ ಕಾಲದಲ್ಲಿ ನಡೆದ ಕಾರಣ ಆಗಿನ ಬಲುಪಾಲು ಸಾಹಿತಿಗಳಂತೆ ಇವರೂ ಎಲ್ಲ ಸಾಹಿತ್ಯಪ್ರಕಾರಗಳಲ್ಲಿಯೂ ಕೃತಿಗಳನ್ನು ರಚಿಸಿದರು. ಕಥೆ, ಸಣ್ಣಕತೆ, ಪ್ರಬಂಧ, ನಾಟಕ, ಕಾದಂಬರಿ, ಮಕ್ಕಳ ಸಾಹಿತ್ಯ, ವಿಚಾರಸಾಹಿತ್ಯ, ವಿಮರ್ಶೆ, ಅನುವಾದ ಮುಂತಾದುವು ಅವರ ಯೋಗದಾನದಿಂದ ಸಮೃದ್ಧಗೊಂಡಿವೆ. ಕಥೆ-ಕಾದಂಬರಿಗಳನ್ನು ರಚಿಸುವಾಗ ಸಾಮಾಜಿಕ, ಐತಿಹಾಸಿಕ, ಪೌರಾಣಿಕವೇ ಮೊದಲಾದ ವಿಷಯಗಳನ್ನು ಆಧರಿಸಿ ಎಲ್ಲೆಡೆ ಯಶಸ್ಸನ್ನು ಕಂಡರು. ಪತ್ತೇದಾರಿ ಕಾದಂಬರಿಯಾದ ‘ಕಳ್ಳರ ಕೂಟ,’ ಚರಿತ್ರೆಯನ್ನು ಆಧರಿಸಿದ ‘ಮಯೂರ,’ ಐತಿಹಾಸಿಕ ನೇಪಥ್ಯದಲ್ಲಿ ತೆರೆದುಕೊಳ್ಳುವ ಕಾಲ್ಪನಿಕ ಕಥಾನಕವನ್ನುಳ್ಳ ‘ಚಿನ್ನಾ’ ಅಥವಾ ‘ಅವಳ ಕಥೆ,’ ಸಾಮಾಜಿಕ ಸಮಸ್ಯೆಗಳನ್ನು ಪಾತ್ರಗಳ ಮೂಲಕ ಶೋಧಿಸುವ ‘ಎರಡನೆಯ ಜನ್ಮ,’ ಕನ್ನಡದ ಮೊದಲ ಮನೋವಿಶ್ಲೇಷಣಾತ್ಮಕ ಕಾದಂಬರಿ ಎನಿಸಿದ ‘ಅಂತರಂಗ’ - ಒಂದೊಂದೂ ಅಪೂರ್ವ.
* * *
ಇಷ್ಟು ವಿಶಾಲವಾದ ಜೀವನಾನುಭವದ, ಸಾಹಿತ್ಯಸಪರ್ಯೆಯ ಸಂಸ್ಕಾರಬಲದಿಂದ ರೂಪುಗೊಂಡವು ‘ಮಹಾಬ್ರಾಹ್ಮಣ,’ ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ (ಮೊದಲ ಮುದ್ರಣ ಕ್ರಮವಾಗಿ ೧೯೫೨, ೧೯೬೨ ಮತ್ತು ೧೯೬೭). ‘ಮಹಾಬ್ರಾಹ್ಮಣ’ ವಸಿಷ್ಠ ಮತ್ತು ವಿಶ್ವಾಮಿತ್ರರ ಘರ್ಷಣೆಯ ಕಥೆ; ಕ್ಷತ್ತ್ರಿಯನಾದ ರಾಜನೊಬ್ಬ ಅಮೋಘ ಸ್ವಪರಿಶ್ರಮದಿಂದ ಬ್ರಹ್ಮರ್ಷಿಯಾದ ಕಥೆ. ‘ಮಹಾಕ್ಷತ್ರಿಯ’ ಮಾನವನಾದ ನಹುಷ ದೇವೇಂದ್ರನಾಗುವ ಕಥೆ. ಇನ್ನು ‘ಮಹಾದರ್ಶನ’ ಮಹರ್ಷಿ ಯಾಜ್ಞವಲ್ಕ್ಯರ ಜೀವನಗಾಥೆ. ಪ್ರತಿಯೊಂದು ಕೃತಿಯಲ್ಲಿಯೂ ವೇದ-ಪುರಾಣಗಳ ಗಾಢ ಪರಿವೇಷವಿದೆ. ಹೊರನೋಟಕ್ಕೆ ಕಾದಂಬರಿಗಳಾಗಿ ಕಂಡರೂ ಇವುಗಳು ಉಪನಿಷದ್ವಿದ್ಯೆಗಳ ವ್ಯಾಖ್ಯಾನಗಳಾಗಿ, ತಾಂತ್ರಿಕ-ಆಗಮಿಕ ಸಂಕೇತಗಳ ವಿವರಣೆಗಳಾಗಿ, ಪೌರಾಣಿಕ ಪ್ರತೀಕಗಳ ವಿಶ್ಲೇಷಣೆಗಳಾಗಿ ಸಲ್ಲುತ್ತವೆ. ಬರಿಯ ಕಥೆಗಳಾಗಿ ಓದಿದರೂ ಸಂಭಾಷಣೆಗಳ ಸ್ವಾರಸ್ಯದಿಂದ, ವರ್ಣನೆಗಳ ವೈಭವದಿಂದ, ಪಾತ್ರ-ಸನ್ನಿವೇಶಗಳ ಸಂಕೀರ್ಣತೆಯಿಂದ ಆಪ್ಯಾಯಕ ಎನಿಸುತ್ತವೆ. ‘ಮಹಾಬ್ರಾಹ್ಮಣ’ದ ಪ್ರಸ್ತಾವನೆಯಲ್ಲಿ ಬರುವ ಕೆಲವು ಮಾತುಗಳು ಮೂರು ಕಾದಂಬರಿಗಳಿಗೂ ಅನ್ವಯಿಸುತ್ತವೆ: “ಈ ಕಥೆಯಲ್ಲಿ ಚಿತ್ರಿತವಾಗಿರುವುದು ಭರತಖಂಡದ ಆತ್ಮ ... ಈ ಗ್ರಂಥ ಕಥೆಯೆಂದವರಿಗೆ ಕಥೆ, ಶಾಸ್ತ್ರವೆಂದವರಿಗೆ ಶಾಸ್ತ್ರ, ವಿದ್ಯೆಯೆಂದವರಿಗೆ ವಿದ್ಯೆ.” ಇಲ್ಲಿಯೇ ದೇವುಡು ಅವರಾಡಿರುವ ಮಾತುಗಳು ಮೈ ಜುಮಗುಟ್ಟಿಸುವಂತಿವೆ: “ವಿದ್ಯಾಪ್ರತೀಕಗಳಲ್ಲಿ ಕೆಲವು ಸ್ವಾನುಭವ, ಕೆಲವು ಪರಾನುಭವ. ಕೆಲವು ಬರೆಯುತ್ತಿದ್ದಾಗ ತಾವಾಗಿ ಬಂದುವು. ರುದ್ರನು ಪ್ರತ್ಯಕ್ಷವಾಗುವುದು, ದೇವತೆಗಳು ಬಂದು ಮಾತನಾಡುವುದು, ಇವೆಲ್ಲ ಸ್ವಾನುಭವ ... ಇದು ಎಲ್ಲಿಂದಲೋ, ಯಾರಿಗೋ ಬಂದಿದೆ. ಲೇಖಕನು ಫಲಭೋಕ್ತೃವು ತಾನಾದ್ದರಿಂದ ಕರ್ತೃತ್ವವೂ ಸ್ವನಿಷ್ಠವಾಗಿರಬಹುದು ಎಂದುಕೊಂಡು ಇದನ್ನು ಕೊಟ್ಟವರಿಗೆ ಕೃತಜ್ಞನಾಗಿದ್ದಾನೆ.” ಈ ಸಾಲುಗಳು ನಮ್ಮ ಪರಂಪರೆ ಹೇಳುವ “ನಾನೃಷಿಃ ಕುರುತೇ ಕಾವ್ಯಮ್” ಎಂಬುದರ ನಿದರ್ಶನಗಳಂತಿವೆ. ಒಟ್ಟಿನಲ್ಲಿ ಈ ಮೂರು ಕಾದಂಬರಿಗಳು ಕನ್ನಡ ಬರುವವರೆಲ್ಲ ಓದಲೇಬೇಕಾದುವು. ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ|| ಆರ್. ಗಣೇಶ್ ಅವರು ಹೇಳುವಂತೆ, ಈ ಮೂರು ಕೃತಿಗಳನ್ನು ಓದುವುದಕ್ಕಾಗಿಯೇ ಯಾರಾದರೂ ಕನ್ನಡವನ್ನು ಕಲಿತರೆ ಅವರ ಶ್ರಮ ಸಾರ್ಥಕವಾಗುತ್ತದೆ.
ವಿದ್ವತ್ತಿಗೆ ಹೆಸರಾದ ಮನೆತನದಲ್ಲಿ ಹುಟ್ಟಿ ಬಾಲ್ಯದಲ್ಲಿಯೇ ನಮ್ಮ ಇತಿಹಾಸ-ಪುರಾಣಗಳನ್ನು ಓದಿಕೊಂಡಿದ್ದ ದೇವುಡು ಮುಂದೆ ಎಂ. ಹಿರಿಯಣ್ಣ, ಎಸ್. ರಾಧಾಕೃಷ್ಣನ್ ಮುಂತಾದ ಪ್ರಾಚಾರ್ಯರ ಮಾರ್ಗದರ್ಶನದಲ್ಲಿ ಭಾರತೀಯ ಸಂಸ್ಕೃತಿಯ ಹೃದಯವನ್ನು ಅರಿತುಕೊಂಡರು. ‘ಮಹಾಬ್ರಾಹ್ಮಣ’ದ ವಸ್ತು ಅವರಿಗೆ ೧೯೨೬ರಷ್ಟು ಹಿಂದೆಯೇ ಹೊಳೆದಿತ್ತು; ವಿಶ್ವಾಮಿತ್ರನನ್ನು ಕುರಿತು ಬರೆಯುವ ಬಯಕೆ ಉದಿಸಿತ್ತು. ಆದರೂ “ಸಚ್ಛಾಸ್ತ್ರವೊಂದನ್ನು ಸಂಪ್ರದಾಯಶುದ್ಧವಾಗಿ ಓದಿ ಆರ್ಷರ್ಣವನ್ನು ತೀರಿಸುವವರೆಗೂ ಆ ಮಹಾಮಹಿಮನ ಕಥೆಯನ್ನು ಬರೆಯುವುದು ಸರಿಯಲ್ಲ” ಎಂದು ಭಾವಿಸಿ, ಬೆಂಗಳೂರಿನ ಶಂಕರಮಠದಲ್ಲಿ ಅಧ್ಯಾಪಕರಾಗಿದ್ದ ‘ಮೀಮಾಂಸಾಕಂಠೀರವ’ ವೈದ್ಯನಾಥಶಾಸ್ತ್ರಿಗಳಲ್ಲಿ ಶಿಷ್ಯವೃತ್ತಿ ನಡಸಿ ಪೂರ್ವಮೀಮಾಂಸೆಯನ್ನು ಅಭ್ಯಸಿಸಿದರು. ಈ ಅವಧಿಯಲ್ಲಿ ಶಂಕರಮಠದ ಪರಿಸರದಲ್ಲಿಯೇ ಉಳಿದು ಅಗ್ನಿಪರಿಚರ್ಯೆ ಮಾಡುತ್ತ ಶಾಸ್ತ್ರವು ವಿಧಿಸುವ ನಿಯಮಗಳನ್ನೆಲ್ಲ ಪಾಲಿಸಿದರು; ಮನೆಯ ಹೊರಗೆ ಒಂದು ತೊಟ್ಟು ನೀರನ್ನೂ ಸೇವಿಸುತ್ತಿರಲಿಲ್ಲ. ಅಧ್ಯಯನ ಸಂಪನ್ನವಾದ ಬಳಿಕ ೧೯೪೬ರಲ್ಲಿ ಬರೆಯುವ ಪ್ರವೃತ್ತಿ ಬಲಿತು, ಲೇಖನಕಾರ್ಯ ಮೊದಲಾಗಿ ೧೯೫೦ರಲ್ಲಿ ಮುಗಿಯಿತು. ಹೀಗೆ ದೀರ್ಘಕಾಲದ ಅಧ್ಯಯನ, ಅನುಷ್ಠಾನ ಮತ್ತು ಅಂತರನುಭವಗಳ ಫಲವಾಗಿ ‘ಮಹಾಬ್ರಾಹ್ಮಣ’ ರೂಪುಗೊಂಡಿತು.
ಐತಿಹಾಸಿಕವಾಗಿ ನೋಡುವುದಾದರೆ, ಅಂದಿನ ಕಾಲಘಟ್ಟದಲ್ಲಿ ಒಂದೆಡೆ ಅ.ನ.ಕೃ., ಶಿವರಾಮ ಕಾರಂತ ಮುಂತಾದವರು ವಾಸ್ತವದ ನೆಲೆಯ ಕಾದಂಬರಿಗಳನ್ನು ರಚಿಸುತ್ತಿದ್ದರು; ಮತ್ತೊಂದೆಡೆ ನಾಟಕಕಾರರೂ ಅವರ ರಚನೆಗಳನ್ನು ಜನರಿಗೆ ಮುಟ್ಟಿಸುವ ಕಂಪೆನಿಗಳವರೂ ಪೌರಾಣಿಕ ವಸ್ತುಗಳನ್ನು ಎತ್ತಿಹಿಡಿಯುತ್ತಿದ್ದರು. ದೇವುಡು ಮೊದಲಿಗೆ ವಾಸ್ತವಭೂಮಿಕೆಯಲ್ಲಿ ಕಥೆ-ಕಾದಂಬರಿಗಳನ್ನು ರಚಿಸಿ ಆ ಬಳಿಕ ಪೌರಾಣಿಕ ವಸ್ತುಗಳನ್ನು ಕಾದಂಬರೀಮಾಧ್ಯಮಕ್ಕೆ ಒಗ್ಗಿಸಲು ಉದ್ಯುಕ್ತರಾದರು. ಇಂಥ ವಸ್ತುಗಳ ‘ನ್ಯಾರಟಿವ್ ಪೊಟೆನ್‌ಶಿಯಲ್’ ದೇವುಡು ಅವರಿಗೆ ನಿಚ್ಚಳವಾಗಿತ್ತು. ಇದನ್ನು ಅವರಿಗೆ ಪ್ರಿಯವಾದ ‘ಉಪಬೃಂಹಣ’ ಎಂಬ ಶಬ್ದದಿಂದ ಬಣ್ಣಿಸಬಹುದು. ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ ಕೂಡ ಕನ್ನಡದಲ್ಲಿ ಮಾತ್ರವಲ್ಲ, ಇನ್ನಿತರ ಭಾರತೀಯ ಭಾಷೆಗಳಲ್ಲಿಯೂ ದೇವುಡು ಅವರ ಈ ನಿಟ್ಟಿನ ಕಾದಂಬರಿಗಳನ್ನು ಮೀರಿಸುವ ರಚನೆಗಳು ಬಂದಿಲ್ಲವೆಂದು ತಜ್ಜ್ಞರು ಹೇಳುತ್ತಾರೆ.
ಪೌರಾಣಿಕ ವಸ್ತುಗಳನ್ನು ಆಧರಿಸಿ ಕಾದಂಬರಿಗಳನ್ನು ರಚಿಸುವವರಿಗೆ ದೇವುಡು ಎಲ್ಲ ಕಾಲಕ್ಕೂ ಆದರ್ಶವಾಗಿ ನಿಲ್ಲಬಲ್ಲರು. ಕಾದಂಬರಿಯ ಮಾಧ್ಯಮದಲ್ಲಿ ವಾಸ್ತವದ ನೆಲೆಗಟ್ಟನ್ನು ಬಿಟ್ಟ ಕೂಡಲೇ ಎದುರಾಗುವ ತೊಡಕೆಂದರೆ, ಆಯ್ಕೆ ಮಾಡಿಕೊಂಡ ನೇಪಥ್ಯವನ್ನು - ಐತಿಹಾಸಿಕವಾಗಲಿ, ಪೌರಾಣಿಕವಾಗಲಿ - ಪುಷ್ಟಿಗೊಳಿಸುವುದು. ಇಲ್ಲಿ ಕೃತಿಕಾರರ ವ್ಯಾಸಂಗ ಮುಖ್ಯವಾಗುತ್ತದೆ. ಹಾಗೆಂದು ಒಂದು ವಿಷಯವನ್ನು ಕುರಿತು ಬರೆಯಲು ಅದನ್ನೇ ಏಕದೇಶೀಯವಾಗಿ ಅಭ್ಯಾಸ ಮಾಡಿ ಬರೆಯಹೊರಟರೆ ಒಟ್ಟಂದದ ಪರಿಣಾಮ ಸೊರಗುತ್ತದೆ. ಆಯಾ ವಿಷಯಗಳನ್ನು ಮತ್ತು ಅವಕ್ಕೆ ಸಂಬಂಧಿಸಿದ ಇತರ ಸಂಗತಿಗಳನ್ನು ಕುರಿತು ವರ್ಷಗಳುದ್ದಕ್ಕೂ ಅಧ್ಯಯನ ನಡಸಿ, ಆಲೋಚಿಸಿ, ಕಥೆಗೆ ಸರಿಯಾಗಿ ಹೊಂದಿಕೊಳ್ಳಬಲ್ಲ ವಿವರಗಳನ್ನು ಗಟ್ಟಿಮಾಡಿಕೊಂಡು ಬರೆಯಬೇಕಾಗುತ್ತದೆ. ಹೀಗೆ ಮಾಡುವಲ್ಲಿ ಹೊಸತನ್ನು ಕಲ್ಪಿಸಲು ಪ್ರತಿಭೆ ನೆರವಿತ್ತರೆ, ಹಾಗೆ ಕಲ್ಪಿಸಿದ ಹೊಸತು ವಿರಸವಾಗದಂತೆ ಔಚಿತ್ಯ ನೋಡಿಕೊಳ್ಳುತ್ತದೆ. ಈ ಎಲ್ಲ ಸಾಹಿತ್ಯಕ ಮೌಲ್ಯಗಳೂ ದೇವುಡು ಅವರ ಮೂರು ಕಾದಂಬರಿಗಳಲ್ಲಿ ಸರಿಮಿಗಿಲಾಗಿ ಪಾಲಿತವಾಗಿವೆ. ಹೀಗಾಗಿಯೇ ಅವು ಪ್ರಕಟವಾದ ನಾಲ್ಕಾರು ದಶಕಗಳ ಬಳಿಕವೂ ವ್ಯಾಪಕವಾದ ವಾಚಕಾದರವನ್ನು ಉಳಿಸಿಕೊಂಡಿವೆ. ಜಟಿಲ ವಿಷಯಗಳನ್ನು ಕುರಿತು ಪ್ರೌಢ ಶೈಲಿಯಲ್ಲಿ ರಚಿತವಾದ ಕಾದಂಬರಿಗಳು ಇಷ್ಟು ಜನಪ್ರಿಯವಾಗಿರುವುದು ನಮ್ಮ ಸಾಹಿತ್ಯಸ್ವಾಸ್ಥ್ಯಕ್ಕೊಂದು ನಿದರ್ಶನ.
ಭಾರತೀಯರಿಗೆ ಎಷ್ಟೋ ಬಾರಿ ತಮ್ಮ ಸುತ್ತಲಿನ ವ್ಯಕ್ತಿಗಳಿಗಿಂತ ಹೆಚ್ಚಾಗಿ ಇತಿಹಾಸ-ಪುರಾಣಗಳ ವ್ಯಕ್ತಿಗಳೇ ಮುಖ್ಯರಾಗಿರುತ್ತಾರೆ, ಆಪ್ತರಾಗಿರುತ್ತಾರೆ. ಈ ಮಾತು ವಸ್ತು-ಘಟನೆಗಳಿಗೂ ಅನ್ವಯಿಸುತ್ತದೆ. ಇಂಥ ಸೌಲಭ್ಯವನ್ನು ಸದುಪಯೋಗಗೊಳಿಸಿಕೊಂಡ ಶ್ರೇಯಸ್ಸು ದೇವುಡು ನರಸಿಂಹಶಾಸ್ತ್ರಿಗಳದ್ದು. ವಸಿಷ್ಠ, ವಿಶ್ವಾಮಿತ್ರ, ಇಂದ್ರ, ಬೃಹಸ್ಪತಿ, ಯಾಜ್ಞವಲ್ಕ್ಯ, ಅರುಂಧತಿ, ಗಾರ್ಗಿ, ಮೇನಕೆ ಮುಂತಾದ ಪಾತ್ರಗಳು ಅನೇಕ ವರ್ಷಗಳ ಕಾಲ ದೇವುಡು ಅವರ ಅಂತರಂಗದ ಒಡನಾಡಿಗಳಾಗಿದ್ದರು ಎಂದು ನೆನೆದರೆ ರೋಮಾಂಚವಾಗುತ್ತದೆ! ಈ ಒಡನಾಟವನ್ನು ತಮ್ಮ ಮಟ್ಟಿಗೆ ಮಾತ್ರ ಉಳಿಸಿಕೊಳ್ಳದೆ ಕೃತಿರೂಪದಲ್ಲಿ ವಾಚಕರಿಗೂ ಒದಗಿಸಿಕೊಟ್ಟಿರುವುದು ನಮ್ಮೆಲ್ಲರ ಭಾಗ್ಯ.
* * *
ದೇವುಡು ಪೌರಾಣಿಕ ವಸ್ತುಗಳನ್ನು ಆಧರಿಸಿಯೂ ಮಾನುಷ ಚಿತ್ತವೃತ್ತಿಗಳಿಗೆ ಮಿಗಿಲಾದ ಬೆಲೆ ಕೊಟ್ಟಿದ್ದಾರೆ. ಹೀಗಾಗಿ ಅವರ ಕೃತಿಗಳು ಉತ್ತಮ ಸಾಹಿತ್ಯವಾಗಿ ಸಂದಿವೆ. ಕಥೆಯಲ್ಲಿ ರೋಚಕತೆಯನ್ನು ಸಾಧಿಸಲು ಮಾತ್ರ ಸಂಘರ್ಷವನ್ನು ಚಿತ್ರಿಸದೆ ಲೋಕಜೀವನದ ಹಲವು ತೆರದ ಸಂಕೀರ್ಣತೆಗಳನ್ನು ಸೂಚಿಸಲು ಬಳಸಿಕೊಂಡಿದ್ದಾರೆ. ಇದರ ಆಳದಲ್ಲಿರುವ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ತ್ರಿಗುಣಗಳ ಮೇಲಾಟವನ್ನೂ ವರ್ಣಿಸಿದ್ದಾರೆ. ಇದರಿಂದ ಕಾದಂಬರಿಗಳು ಅಗ್ಗವಾಗಿಲ್ಲ, ಕೃತಕವೆನಿಸಿಲ್ಲ. ಬದಲಿಗೆ ಉದಾತ್ತತೆಯನ್ನು ಉಸಿರಿಸಿವೆ. ಪೌರಾಣಿಕ ಕಥಾನಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ‘ರೂಢ,’ ‘ಮಾತೃಕೀಕೃತ’ ಎಂಬಂಥ ಶೈಲಿ ಇಲ್ಲಿ ಸುಳಿಯುವುದಿಲ್ಲ. ಹತ್ತಾರು ಸಂದರ್ಭಗಳು ತಿರುವುಗಳನ್ನು ಪಡೆದುಕೊಂಡು ಸ್ವರಸವಾಗಿ ಸಾಗುತ್ತವೆ. ಅಲ್ಲಲ್ಲಿ ಬರುವ ವರ್ಣನೆಗಳು ಕೃತಿಗೊಂದು ಕಾವ್ಯಲೇಪವನ್ನು ನೀಡುತ್ತವೆ. ನಡುನಡುವೆ ತಾತ್ತ್ವಿಕ ಸಂಗತಿಗಳು ಪ್ರಸ್ತಾವಗೊಂಡು ಓದುಗರ ಭಾವ-ಬುದ್ಧಿಗಳನ್ನು ಬೆಸೆಯುತ್ತವೆ. ಲೇಖಕರು ಮೂರೂ ಕೃತಿಗಳಲ್ಲಿ ಬಗೆಬಗೆಯ ದೇವ-ಋಷಿಗಳನ್ನು ಚಿತ್ರಿಸಿದ್ದರೂ ಮನುಷ್ಯತ್ವದ ಮೇಲ್ಮೆಯನ್ನೇ ಎತ್ತಿಹಿಡಿದಿದ್ದಾರೆ.
‘ಮಹಾಬ್ರಾಹ್ಮಣ’ ವಿಶ್ವಾಮಿತ್ರನ ಸಂತತವಾದ ಏರುವಿಕೆಯ ಕಥೆ. ‘ಮಹಾಕ್ಷತ್ರಿಯ’ ಇಂದ್ರಾದಿ ದೇವತೆಗಳೂ ಕಡೆಗೆ ಮಾನವೇಂದ್ರ ನಹುಷನೂ ಬೀಳನ್ನು ಅನುಭವಿಸುವ ಕಥೆ. ‘ಮಹಾದರ್ಶನ’ ಯಾಜ್ಞವಲ್ಕ್ಯ ಮಹರ್ಷಿಗಳ ಅಚಂಚಲ ಸ್ವತೋವಿಕಾಸದ ಕಥೆ. ಹೀಗೆ ವಿಶಾಲವಾದ ಅರ್ಥದಲ್ಲಿ ಈ ಮೂರು ಕಾದಂಬರಿಗಳು ಸೃಷ್ಟಿ, ಲಯ ಮತ್ತು ಸ್ಥಿತಿಗಳನ್ನು ಬಣ್ಣಿಸುತ್ತವೆ. ವಿಶ್ವಾಮಿತ್ರನ ಕಥೆ ಕಾದಂಬರಿಗೆ ಹೇಳಿಮಾಡಿಸಿದಂತಿದೆ. ರಾಜಾ ಕೌಶಿಕ ನಂದಿನಿಯ ಬಗೆಗಿನ ಕಾಮವನ್ನೂ ವಸಿಷ್ಠರ ಬಗೆಗಿನ ಕ್ರೋಧವನ್ನೂ ತಪಸ್ಸಿನ ಮೂಲಕ ನೀಗಿಕೊಂಡು, ವಿಶ್ವಮೈತ್ರಿಯನ್ನು ಮೈಗೂಡಿಸಿಕೊಂಡು ಆತ್ಮಾರಾಮನಾಗಿ ಬ್ರಹ್ಮರ್ಷಿಯಾಗುತ್ತಾನೆ; ಮಹಾಬ್ರಾಹ್ಮಣ ಎನಿಸುತ್ತಾನೆ. ಮೊದಲಿಗೆ ಬ್ರಹ್ಮದಂಡದೊಡನೆ ಸೆಣಸಿದವನು ಕಡೆಗೆ ಪಾಯಸಕ್ಕೆ ತನ್ನ ಪ್ರಾಣಶಕ್ತಿಯನ್ನು ನೀಡುವ ಮೂಲಕ ಅದರೊಡನೆ ಅಭೇದವನ್ನು ಸಾಧಿಸುತ್ತಾನೆ. ‘ಮಹಾಕ್ಷತ್ರಿಯ’ದ ಕಥಾಬೀಜ ಅಭ್ಯುನ್ನತ ಸ್ಥಾನಗಳು ತಂದೀಯುವ ಮಾನಕಷಾಯದಲ್ಲಿ ಮತ್ತದು ಆಹ್ವಾನಿಸುವ ಪತನದಲ್ಲಿ ಅಡಗಿದೆ. ಋಷಿಗಳು ಇಂದ್ರನಲ್ಲಿಗೆ ಬಂದು ಕೇಳಿದ ಪ್ರಶ್ನೆ ಅವನ ಹಾಗೂ ದೇವಗುರುವಿನ ಅಹಂಕಾರವನ್ನು ವಿಚಿತ್ರವಾಗಿ ಕೆರಳಿಸುತ್ತದೆ. ಹೀಗೆ ಅಹಂಕಾರ ಕೆರಳಿದಾಗ ದೇವತೆಗಳು ದಾನವರಿಂದಲೂ ಸೋಲುತ್ತಾರೆ; ಕಡೆಗೆ ಮಾನವರೂಪದಲ್ಲಿ ಬಂದ ಪರಿಹಾರವನ್ನೂ ಉಳಿಸಿಕೊಳ್ಳಲಾಗದೆ ಹೋಗುತ್ತಾರೆ. ‘ಮಹಾದರ್ಶನ’ದಲ್ಲಿ ಸಂಘರ್ಷವೇ ಇಲ್ಲ. ದೇವುಡು ಅವರಿಗೆ ಪ್ರಿಯವಾದ ‘ತಾನೇ ತಾನಾಗಿರುವುದು’ ಎಂಬ ಪದಪುಂಜ ಈ ಕಾದಂಬರಿಯ ಹೂರಣಕ್ಕೆ ಹಾಳತವಾಗಿ ಹೊಂದಿಕೊಳ್ಳುತ್ತದೆ.
* * *
ದೇವುಡು ಅನೇಕ ಪಾತ್ರಗಳನ್ನು ಸೊಗಸಾಗಿ ಕಲ್ಪಿಸಿದ್ದಾರೆ. ಹಳೆಯ ಮಾತೃಕೆಗಳನ್ನು ಔಚಿತ್ಯವರಿತು ಬಳಸಿಕೊಂಡಿದ್ದಾರೆ, ಅವಕ್ಕೆ ಎಷ್ಟೋ ಬಾರಿ ಕಾಯಕಲ್ಪ ನೀಡಿದ್ದಾರೆ, ಇನ್ನೂ ಹಲವನ್ನು ಸ್ವಯಂ ರೂಪಿಸಿದ್ದಾರೆ. ಇವುಗಳಿಗೆ ಉದಾಹರಣೆಗಳಾಗಿ ಮೂರೂ ಕಾದಂಬರಿಗಳ ಪ್ರಮುಖ ಪಾತ್ರಗಳು ಇದ್ದೇ ಇವೆ. ಇವಲ್ಲದೆ ಬೇರೆಯ ಕೆಲವನ್ನು ಗಮನಿಸಬಹುದು. ‘ಮಹಾಬ್ರಾಹ್ಮಣ’ದಲ್ಲಿ ಬರುವ ವಾಮದೇವನ ಪಾತ್ರ ವಸಿಷ್ಠ ಮತ್ತು ವಿಶ್ವಾಮಿತ್ರರ ನಡುವಣ ಸಂಪರ್ಕಸೂತ್ರವಾಗಿ ಸಲ್ಲುತ್ತದೆ. ಬ್ರಹ್ಮದಂಡದ ಕೈಯಲ್ಲಿ ಸೋಲುಂಡ ಮೇಲೆ ವಸಿಷ್ಠರನ್ನು ಎದುರಿಸಲಾಗದೆ ಪರಿತಪಿಸುತ್ತಿದ್ದ ವಿಶ್ವಾಮಿತ್ರನಿಗೆ ವಾಮದೇವ ಶ್ರೇಯೋಮಾರ್ಗವನ್ನು ಬೋಧಿಸುತ್ತಾನೆ. ಈ ಪಾತ್ರ ಇಲ್ಲದಿದ್ದ ಪಕ್ಷದಲ್ಲಿ ವಿಶ್ವಾಮಿತ್ರನು ಮತ್ತೆ ದುಡುಕಿ ವಸಿಷ್ಠರ ಮೇಲೆರಗಿ ಪರಾಭವಗೊಂಡು ಹತಾಶನಾಗಬೇಕಿತ್ತು; ಅಥವಾ ಅವರನ್ನು ಎಂದಿಗೂ ಎದುರಿಸಲಾಗದೆ, ಅವರ ಮೇಲ್ಮೆಯನ್ನು ಅಂಗೀಕರಿಸಲೂ ಆಗದೆ ದಿಙ್ಮೂಢನಾಗಬೇಕಿತ್ತು. ಹೀಗಾಗದಂತೆ ಎಚ್ಚರ ವಹಿಸಿ, ಪೆಟ್ಟು ತಿಂದ ಅಹಂಕಾರವನ್ನು ಉಪಶಮಿಸಿ ಅದನ್ನು ಶಮದತ್ತ ಕೊಂಡೊಯ್ದ ಶ್ರೇಯಸ್ಸು ವಾಮದೇವನದು. ‘ಮಹಾಕ್ಷತ್ರಿಯ’ದಲ್ಲಿ ಹಾಗೆ ಸುಳಿದು ಹೀಗೆ ಮಾಯವಾಗುವ ಪಾತ್ರ ದಧೀಚಿಯದು. ಅಷ್ಟರಲ್ಲಿ ಅದು ಸಾಧಿಸುವ ಕಾರ್ಯ ಮಾತ್ರ ಹಿರಿದಾದುದು. ಒಂದು ಕಡೆ ಇಂದ್ರಾದಿಗಳ ಪ್ರಾರ್ಥನೆಯಂತೆ ಸಜೀವವಾಗಿ ಇದ್ದಾಗಲೇ ತನ್ನ ಬೆನ್ನುಮೂಳೆಯನ್ನು ದಾನವಾಗಿ ಕೊಟ್ಟು ವಜ್ರಾಯುಧ ನಿರ್ಮಾಣವಾಗುವುದಕ್ಕೆ ಅಣಿಯಾದನು; ಮುಂದೆ ವೃತ್ರಾಸುರನ ವಧೆಗೆ ಕರಣ, ಕಾರಣ ಎರಡೂ ಆದನು. ಇನ್ನೊಂದು ಕಡೆ ತನ್ನ ಮೇಲೆ ಕೋಪಿಸಿಕೊಂಡು ಬಂದ ತ್ವಷ್ಟೃವಿಗೆ - ‘ನೀನು’, ‘ನಾನು’ ಎಂಬ ಭೇದವನ್ನೂ ಕಷ್ಟ ಪಟ್ಟು ಆರೋಪಿಸಿಕೊಳ್ಳಬೇಕಾದ ಎತ್ತರದ ನೆಲೆಯಲ್ಲಿ ತಾನಿದ್ದರೂ - ದ್ವೇಷಾಸೂಯೆಗಳನ್ನು ಬಿಟ್ಟುಬಿಡುವಂತೆ ಉಪದೇಶಿಸಿದನು. ದಧೀಚಿ ಸ್ವದೇಹತ್ಯಾಗದ ಮಹಾಕೃತ್ಯವನ್ನು ಎಸಗದಿದ್ದರೆ ವೃತ್ರಾಸುರನೇ ವಿಜೃಂಭಿಸಿ ದೇವಲೋಕ ದಿಕ್ಕೆಡುತ್ತಿತ್ತು. ಅಥವಾ ಉಪದೇಶ ಮಾಡದಿದ್ದಲ್ಲಿ ತ್ವಷ್ಟೃ ವೃತ್ರನಂಥ ಇನ್ನೂ ಹಲವು ‘ಕೃತ್ಯ’ಗಳನ್ನು ಕಲ್ಪಿಸಬಹುದಿತ್ತು. ಹೀಗೆ ಸ್ವಯಂ ಸಂನ್ಯಸ್ತಸಂಕಲ್ಪನಾದರೂ ಭೂತ, ವರ್ತಮಾನ ಮತ್ತು ಭವಿಷ್ಯಗಳ ಕೇಡನ್ನು ಪರಿಹರಿಸಿದ ಮಹಾತ್ಮಾ ದಧೀಚಿ. ‘ಮಹಾದರ್ಶನ’ದಲ್ಲಿ ಬರುವ ಬುಡಿಲ ಪ್ರಾಯಶಃ ದೇವುಡು ಅವರೇ ಸೃಜಿಸಿದ ಪಾತ್ರ. ಈತ ರಾಜಾಶ್ರಯವನ್ನು ಬಯಸದೆ ‘ಯಥಾ ಯಥಾ ಇದ್ದುಕೊಂಡು’ ಅಪರಿಗ್ರಹದ ಅನುಪಮ ನಿದರ್ಶನವಾಗಿ ನಿಲ್ಲುತ್ತಾನೆ. ಇವನಿಂದಲೂ ಪರಸ್ಪರ ಪೂರಕವಾದ ಎರಡು ಉಪಕಾರಗಳಾಗುತ್ತವೆ. ಮೊದಲು, ಕರ್ಮಕಾಂಡಕ್ಕೆ ಅಂಟಿಕೊಂಡಿದ್ದ ದೇವರಾತನು ತನ್ನ ಮಗ ಯಾಜ್ಞವಲ್ಕ್ಯ ಜ್ಞಾನಕಾಂಡವನ್ನು ಎತ್ತಿಹಿಡಿಯುವುದನ್ನು ಜೀರ್ಣಿಸಿಕೊಳ್ಳುವಂತೆ ಮಾಡಿದನು. ಆ ಬಳಿಕ ಸಂಹಿತೆ, ಬ್ರಾಹ್ಮಣ ಮತ್ತು ಉಪನಿಷತ್ತುಗಳನ್ನು ಕಂಡುಕೊಳ್ಳುವ ಅನನ್ಯಲಭ್ಯ ಪ್ರಕಲ್ಪದ ಪ್ರಾರಂಭಿಕ ಸ್ತರದಲ್ಲಿ ಯಾಜ್ಞವಲ್ಕ್ಯನಿಗೆ ನೆರವಿತ್ತನು. ಮೊದಲನೆಯದನ್ನು ಮಾಡದಿದ್ದರೆ ಹೊಸ ಹೊಸ ಯಜ್ಞಗಳನ್ನು ಕಲ್ಪಿಸಿ ಕರ್ಮದಲ್ಲಿ ಅಪಾರ ಆದರವಿದ್ದ ದೇವರಾತನು ಮಗನನ್ನು ತನ್ನ ದಾರಿಗೇ ತರಲು ವೃಥಾ ಶ್ರಮಿಸುತ್ತಿದ್ದನು. ಎರಡನೆಯದನ್ನು ಮಾಡದಿದ್ದರೆ ಆಗಬೇಕಾದ ಕೆಲಸ ಸೂಕ್ತ ಮಾರ್ಗದರ್ಶನ ಸಿಗದೆ ಮಂದವೇಗದಲ್ಲಿ ನಡೆಯಬೇಕಾಗುತ್ತಿತ್ತು. ಹೀಗೆ ನಿರ್ಣಾಯಕ ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸುವ ಅನೇಕ ಪಾತ್ರಗಳನ್ನು ದೇವುಡು ನಿರ್ಮಿಸಿದ್ದಾರೆ.
ಅನ್ಯಾನ್ಯ ಸ್ರೋತಗಳಿಂದ ತಾವು ಪರಿಗ್ರಹಿಸಿದ ಪಾತ್ರ-ವೃತ್ತಾಂತಗಳನ್ನು ದೇವುಡು ಉದಾತ್ತೀಕರಿಸಿದ್ದಾರೆ. ನಿದರ್ಶನವಾಗಿ ಕೆಲವನ್ನು ಪರಿಶೀಲಿಸಬಹುದು. ಮೊದಲಿಗೆ ‘ಮಹಾಬ್ರಾಹ್ಮಣ’ವನ್ನು ನೋಡೋಣ. ವೇದವಾಙ್ಮಯ, ರಾಮಾಯಣ ಮುಂತಾದ ಮೂಲಗಳಲ್ಲಿ ವಸಿಷ್ಠ-ವಿಶ್ವಾಮಿತ್ರರಿಗೆ ತೀರದ ವೈರವಿರುವಂತೆ ತೋರುತ್ತದೆ. ದೇವುಡು ಹಾಗೆ ಮಾಡದೆ ಇಬ್ಬರನ್ನೂ ಉನ್ನತವಾಗಿ ಕಾಣಿಸಿದ್ದಾರೆ. ಮೇನಕೆಯನ್ನು ವಿಶ್ವಾಮಿತ್ರನ ತಪೋಭಂಗ ಮಾಡುವ ‘ಫಂಕ್ಷನಲ್’ ಪಾತ್ರವಾಗಿ ಸೀಮಿತಗೊಳಿಸದೆ ಸಮಾರ್ದ್ರವಾಗಿ, ಉದಾರವಾಗಿ ತೋರಿಸಿದ್ದಾರೆ. ಗಾಯತ್ರೀಮಂತ್ರದ ಸಾಕ್ಷಾತ್ಕಾರದಲ್ಲಿ ಋಷಿಸಮುದಾಯದ ನೇರ ನೆರವು ದೊರೆತಂತೆ ಕಲ್ಪಿಸುವ ಮೂಲಕ ಮಹಾಜನರ ಪುಣ್ಯ-ಪರಿಶ್ರಮಗಳು ಒಟ್ಟುಗೂಡಿದಾಗಲೇ ಮಹೋದ್ಯಮಗಳು ನಡೆಯಲು ಸಾಧ್ಯವೆಂದು ಸೂಚಿಸಿದ್ದಾರೆ. ‘ಮಹಾಕ್ಷತ್ರಿಯ’ದಲ್ಲಿ ನಹುಷನನ್ನು ಶಚೀಜಾರನನ್ನಾಗಿ ಮಾಡದೆ, ಆತ ಸಪ್ತರ್ಷಿಗಳು ಹೊರುವ ಶಿಬಿಕೆಯಿಂದ ಜಾರುವುದಕ್ಕೆ ನಿಯತಿ ಉಲ್ಲಂಘಿತವಾಗಬಾರದೆಂಬ ಬೇರೊಂದು ಕಾರಣವನ್ನು ಒದಗಿಸಿದ್ದಾರೆ; ಆ ಮೂಲಕ ಉದಾತ್ತತೆಯನ್ನು ಉಳಿಸಿಕೊಂಡಿದ್ದಾರೆ. ‘ಮಹಾದರ್ಶನ’ದಲ್ಲಿ ಕಾತ್ಯಾಯಿನಿ, ಮೈತ್ರೇಯಿ ಮತ್ತು ಗಾರ್ಗಿ ಎಂಬ ಮೂರು ಸ್ತ್ರೀಪಾತ್ರಗಳನ್ನು ಕೆತ್ತಿಟ್ಟ ಶಿಲ್ಪಗಳಂತೆ ಸ್ಪಷ್ಟಾಕೃತಿಗಳಾಗಿ ಬಿಂಬಿಸಿದ್ದಾರೆ. ಕಾತ್ಯಾಯಿನಿ ಅಪ್ಪಟ ಗೃಹಿಣಿ; ಗಂಡನ ಏಳ್ಗೆಗೆ ಕ್ರಿಯಾರೂಪದಲ್ಲಿ ಸ್ಪಂದಿಸಲಾಗದಿದ್ದರೂ ಅದನ್ನು ಕಂಡು ಹಿಗ್ಗುವವಳು. ಮೈತ್ರೇಯಿ ಯಾಜ್ಞವಲ್ಕ್ಯನ ಮೋಕ್ಷಪತ್ನಿ; ತತ್ತ್ವಸಂಕಥೆಯಲ್ಲಿ ಗಂಡನಿಗೂ ಮನೆವಾರ್ತೆಯಲ್ಲಿ ಕಾತ್ಯಾಯಿನಿಗೂ ನೆರವಾಗಲು ಬಲ್ಲವಳು. ಗಾರ್ಗಿಯಂತೂ ಬ್ರಹ್ಮವಾದಿನಿ; ವಿದಗ್ಧ ಶಾಕಲ್ಯರ ಶಿಷ್ಯೆಯಾಗಿ ಯಾಜ್ಞವಲ್ಕ್ಯನನ್ನು ಹದಹಾಕಲೆಂದು ವಿದ್ಯಾರಾಜಸವನ್ನು ಮೆರೆಸಿದರೂ ಗುರುವಿನ ಅವಸಾನದ ಬಳಿಕ ಯಾಜ್ಞವಲ್ಕ್ಯನ ಉನ್ನತಿಗೆ ಶರಣಾಗಿ ಸತ್ತ್ವಾಶ್ರಿತಳಾದವಳು.
ಈ ಕಾದಂಬರಿಗಳಲ್ಲಿ ಅತಿಮಾನುಷವೆಂದು ತೋರುವ ಪಾತ್ರಗಳಷ್ಟೇ ಅಲ್ಲದೆ ಸಾಮಾನ್ಯ ಮಾನವರೂ ಅಲ್ಲಲ್ಲಿ ಸೊಗಸಾಗಿ ಸುಳಿದಿದ್ದಾರೆ. ‘ಮಹಾಬ್ರಾಹ್ಮಣ’ದಲ್ಲಿ ಶುನಶ್ಶೇಫನು ಯಜ್ಞಪಶುವಾಗಿ ನಿಯುಕ್ತನಾಗುವುದನ್ನೂ ವಿಶ್ವಾಮಿತ್ರ ತರಣೋಪಾಯವನ್ನು ಬೋಧಿಸಿ ಆತನನ್ನು ಕಾಪಾಡುವುದನ್ನೂ ಪ್ರತ್ಯಕ್ಷದರ್ಶಿಗಳಾಗಿ ಕಂಡ ಅಯೋಧ್ಯೆಯ ಪ್ರಜೆಗಳು ಆ ವಿವರಗಳನ್ನೆಲ್ಲ ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುವಂತೆ ಒಂದು ಅಧ್ಯಾಯವಿಡೀ ಲೇಖಕರು ಚಿತ್ರಿಸಿದ್ದಾರೆ. ಇದು ತನ್ನಂತೆಯೇ ಒಳ್ಳೆಯ ಕಥನತಂತ್ರವಾಗಿದ್ದು ಒಂದು ವಿಲಕ್ಷಣ ಘಟನೆಗೆ ಸಾಮಾನ್ಯ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತೋರ್ಪಡಿಸುತ್ತದೆ. ‘ಮಹಾಕ್ಷತ್ರಿಯ’ದಲ್ಲಿ ಚ್ಯವನ ಮಹರ್ಷಿ ಸಮುದ್ರದಿಂದ ಮೇಲೆದ್ದು ಬರುವ ಸನ್ನಿವೇಶದಲ್ಲಿ ಬೆಸ್ತರ ಗುಂಪು ಚೆನ್ನಾಗಿ ಚಿತ್ರಿತವಾಗಿದೆ. ಅವರ ಹಾವ-ಭಾವಗಳೂ ಮಾತು-ಕತೆಗಳೂ ಸಹಜವಾಗಿ ಮೈದಳೆದಿವೆ. ‘ಮಹಾದರ್ಶನ’ದಲ್ಲಿ ಬಾಲಕ ಯಾಜ್ಞವಲ್ಕ್ಯನ ದೇಹದಿಂದ ತೇಜೋವಿಕಿರಣವಾಗುವುದನ್ನು ನೋಡಿ ಗಾಬರಿಗೊಂಡ ಗೊಲ್ಲರು ಆತನ ತಾಯಿಯ ಬಳಿ ಬಂದು ಅದನ್ನು ಹೇಳುತ್ತಾರೆ. ಅವರ ಮಾತುಗಳಲ್ಲಿ ಗ್ರಾಮೀಣ ಸೊಗಡಿನ ನುಡಿಜಾಡು ಚೆಲುವಾಗಿ ತೋರಿದೆ. ಇಲ್ಲಿಯೇ ಯಾಜ್ಞವಲ್ಕ್ಯ ಗುರುಕುಲವನ್ನು ಸೇರಿದ ಬಳಿಕ ಅವನ ವಿಷಯವಾಗಿ ಆಶ್ರಮದ ಹೆಂಗಸರೆಲ್ಲರೂ ನದೀತೀರದಲ್ಲಿ ಒಟ್ಟುಸೇರಿ ಆಪ್ತವಾಗಿ ಮಾತನಾಡಿಕೊಳ್ಳುವ ಸಹಜ ಚಿತ್ರಣವಿದೆ.
To be continued.