ಪರಾಭವಕ್ಕೆ ಕಾರಣಗಳು
ಪರಾಭವಕ್ಕೆ ವಿಶ್ಲೇಷಕರು ಏನೇನೊ ಕಾರಣಗಳನ್ನು ಸೂಚಿಸಿದ್ದಾರೆ. ಭಾರತೀಯರಲ್ಲಿದ್ದ ಶಸ್ತ್ರಾಸ್ತ್ರಗಳು ಹಿಂದಿನವು, ಅದಕ್ಷವಾದವು (antiquated) ಎಂದು ಒಂದು ಗತಾನುಗತಿಕ ವಾದ. ಆಧುನಿಕ ತಂತ್ರಜ್ಞಾನವನ್ನು ಬಳಸಲು ಭಾರತೀಯರು ಉತ್ಸಾಹಿತರಾಗಿರಲಿಲ್ಲ ಮಾತ್ರವಲ್ಲ, ಆಧುನಿಕ ಯುದ್ಧವಿಧಾನಗಳ ಬಗ್ಗೆ ಅವರಲ್ಲಿ ಒಂದಷ್ಟು ಭೀತಿಯೇ ಇತ್ತು – ಎಂದೂ ವಾದವಿದೆ. ತಲೆಯ ಮೇಲೆ ಎತ್ತರದಲ್ಲಿ ಉದ್ದಕ್ಕೂ ಕಾಣುವ ಟೆಲೆಗ್ರಾಫ್ ತಂತಿ ಕೂಡ ನಮ್ಮವರಿಗೆ ಭಯಕಾರಣವಾಗಿತ್ತು – ಎನ್ನಲಾಗಿದೆ. “ನಾವು ಎಲ್ಲಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ – ಎಲ್ಲ ಮಾಹಿತಿಯೂ ಬ್ರಿಟಿಷರಿಗೆ ರವಾನೆಯಾಗುತ್ತಿದ್ದುದು ಈ ತಂತಿಗಳ ಮೂಲಕವೇ.” ಇಂತಹ ಕಾರಣಗಳೂ ಸೂಚಿಸಿದ್ದಾರೆ.
ಹೆಚ್ಚಿನವರು ಸೂಚಿಸಿರುವ ಇನ್ನೊಂದು ಕಾರಣ ಇಡೀ ಹೋರಾಟ ಒಂದು ಕೇಂದ್ರೀಕೃತ ನಿಯಂತ್ರಣಕ್ಕನುಸಾರವಾಗಿ ನಡೆಯಲಿಲ್ಲವೆಂಬುದು. ಯೋಜಿತ ವ್ಯವಸ್ಥೆಯು ಕೆಟ್ಟಿತು. ಅದು ಒಮ್ಮೆ ಕೆಟ್ಟಮೇಲೆ ಜನರ ಪ್ರಯಾಸವೆಲ್ಲ ಹರಿದು ಹಂಚಿಹೋಯಿತು. ಬೇರೆಬೇರೆ ಸಮೂಹಗಳವರು ತಮತಮಗೆ ತೋರಿದಂತೆ ಸಂಘರ್ಷ ಮಾಡತೊಡಗಿದರು. ಬ್ರಿಟಿಷರದಾದರೋ ಸುಸಂಘಟಿತ ವಿಧಾನ. ಸಂಘಟನೆಯ ಅಭಾವದಿಂದಾಗಿ ಭಾರತೀಯರು ಸೋಲಬೇಕಾಯಿತು.
ಸಾಮಾನ್ಯವಾಗಿ ಹೇಳುವ ಮೂರನೆಯ ಕಾರಣ – ಭಾರತೀಯರಲ್ಲಿ ಹೋರಾಟವನ್ನು ನಿರ್ದೇಶಿಸಬಲ್ಲ ಸಮರ್ಥ ಸೇನಾನಾಯಕರಿರಲಿಲ್ಲ ಎಂಬುದು. ಬ್ರಿಟಿಷರಲ್ಲಿ ಹ್ಯಾವೆಲಾಕ್, ಔಟ್ರಾಮ್, ಲಾರೆನ್ಸ್ ಮೊದಲಾದ ಮುತ್ಸದ್ದಿ ಸೇನಾಪತಿಗಳು ಇದ್ದರು. ಅನೇಕ ಯುದ್ಧಗಳಲ್ಲಿ ಗೆದ್ದಿದ್ದ ಅನುಭವಿಗಳು ಅವರು. ನಮ್ಮಲ್ಲಿದ್ದವರಿಗೆ ಸಣ್ಣಪುಟ್ಟ ಸ್ಥಳೀಯ ಯುದ್ಧಗಳ ಅನುಭವ ಮಾತ್ರವಿತ್ತು. ಇಂಥವರಿಂದ ದೊಡ್ಡ ಸಮಯವೊಂದರ ನಿಯಂತ್ರಣ ಸಾಧ್ಯವಿರಲಿಲ್ಲ.
ವ್ಯಾಖ್ಯಾನಕಾರರು ಹೆಸರಿಸುವ ನಾಲ್ಕನೆಯ ಕಾರಣವೆಂದರೆ ಭಾರತೀಯರಲ್ಲಿ ಸಾಮೂಹಿಕ ಪ್ರಜ್ಞೆಯ ಕೊರತೆ. ವೈಯಕ್ತಿಕವಾಗಿ ಶಕ್ತರಾದರೂ ಇವರು ಒಟ್ಟಿಗೆ ಸೇರಿ ಕೆಲಸ ಮಾಡಲಾರರು. ಇದು ಭಾರತೀಯ ಸಮಾಜಕ್ಕೆ ಬಹುಕಾಲದಿಂದ ತಟ್ಟಿರುವ ಶಾಪ. ಬ್ರಿಟಿಷರು ಏನೇನೋ ಕಥೆ ಕಟ್ಟಿ ಭಾರತೀಯ ಸೈನಿಕರನ್ನು ತಮ್ಮ ಕಡೆಗೆ ಎಳೆದುಕೊಂಡಿದ್ದರು. ಆದರೆ ತಮ್ಮದೇ ಸಿಖ್ ಸಮಾಜದ ವಿಶ್ವಾಸ ಗಳಿಸುವುದು ಭಾರತೀಯರಿಂದ ಆಗಲಿಲ್ಲ. 1848ರಲ್ಲಿ ಬ್ರಿಟಿಷರಿಗೂ ಸಿಖ್ಖರಿಗೂ ನಡುವೆ ಆದ ಯುದ್ಧದಲ್ಲಿ ನಮ್ಮ ದೇಶದ ಅನ್ಯ ಸಮುದಾಯಗಳವರು ಸಿಖ್ಖರಿಗೆ ಸಹಾಯ ಮಾಡಲಿಲ್ಲವಂತೆ. ಈ ಹಿನ್ನೆಲೆಯಲ್ಲಿ 1857ರಲ್ಲಿ ಸಿಖ್ಖರು “ನೀವು ಆಗ ನಮಗೆ ಸಹಾಯ ಮಾಡಲಿಲ್ಲ, ಆದ್ದರಿಂದ ಈಗ ನಾವು ನಿಮ್ಮೊಂದಿಗೆ ಸೇರುವುದಿಲ್ಲ” ಎಂಬ ನಿಲವು ತಳೆದರಂತೆ. ಇಂಥ ಆರೋಪವನ್ನು ಸಿಖ್ ಸಮುದಾಯದ ಮೇಲೆ ಟೀಕಾಕರರು ಹೊರಿಸಿದ್ದಾರೆ.
ಮೇಲಣ ವಿವಿಧ ಕಾರಣಗಳಿಂದಾಗಿ ಪರಾಜಯ ಭಾರತೀಯರ ಪಾಲಾಯಿತು – ಎನ್ನಲಾಗಿದೆ.
ದೂರಗಾಮಿ ಪರಿಣಾಮ
ಇದೆಲ್ಲ ಒತ್ತಟ್ಟಿಗಿರಲಿ. 1857ರ ಹೋರಾಟದ ಪಶ್ಚಾತ್ಪರಿಣಾಮಗಳು ಏನೇನಾದವೆಂದು ನೋಡೋಣ.
ಮೊದಲನೆಯದಾಗಿ, 1857ರ ಘಟನಾವಳಿ ನಡೆಯದೆ ಹೋಗಿದ್ದಿದ್ದರೆ ಈ ದೇಶದಲ್ಲಿ ಸಶಸ್ತ್ರ ಕ್ರಾಂತಿ ಪ್ರಸ್ಥಾನವು ಆರಂಭಗೊಳ್ಳುತ್ತಲೆ ಇರಲಿಲ್ಲ. ಈ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗಮಾಡುವ ಆತ್ಯಂತಿಕ ಧ್ಯೇಯಾದರ್ಶವನ್ನು ಪ್ರಕಟಪಡಿಸಿದುದು ಇಡೀ ದೇಶದ ಹಾಗೂ ಆಳುತ್ತಿದ್ದವರ ಕಣ್ಣನ್ನು ಕೋರೈಸಿತು; ಕ್ರಾಂತಿಕಾರಿ ಪರಂಪರೆಯನ್ನೇ ನಿರ್ಮಿಸಿತು. 1909ರಲ್ಲಿ ಲಂಡನ್ನಿನ ಜಹಾಂಗೀರ್ ಹಾಲ್‍ನಲ್ಲಿ ಬ್ರಿಟಿಷ್ ಉಪಸಚಿವ ಕರ್ಜನ್ ವೈಲೀಯನ್ನು ಮದನ್‍ಲಾಲ್ ಧಿಂಗ್ರಾ ಗುಂಡಿಟ್ಟು ಕೊಂದ ಸಂದರ್ಭದಲ್ಲಿ “ನೀನೇಕೆ ಈ ಕೊಲೆ ಮಾಡಿದೆ?” ಎಂದು ಕೇಳಿದಾಗ ಧಿಂಗ್ರಾ ಕೊಟ್ಟ ಉತ್ತರ ಇಲ್ಲಿ ಸಂಗತವಿದೆ. ಆತ ನ್ಯಾಯಾಧೀಶನಿಗೆ ಹೇಳಿದ: “The only lesson required in India at present is to learn how to die, and the only way to teach it is by dying ourselves. And therefore I die, for there is glory in my martyrdom.” ದೇಶಕ್ಕೋಸ್ಕರ ಹೇಗೆ ಸಾಯಬೇಕು ಎನ್ನುವುದನ್ನು ಜನರಿಗೆ ಈಗ ಕಲಿಸಬೇಕಾಗಿದೆ – ಎಂದ ಮದನಲಾಲ ಧಿಂಗ್ರಾ, ಮತ್ತು ಅದನ್ನು ಹೇಳಿಕೊಡಲು ಇರುವ ಏಕೈಕ ಮಾರ್ಗವೆಂದರೆ ನಾವೇ ಸ್ವತಃ ಸಾಯುವುದು – ಎಂದೂ ಹೇಳಿದ. ಜಗತ್ತಿನಲ್ಲಿ ಪ್ರಾಣವೆಂಬುದು ಎಲ್ಲಕ್ಕಿಂತ ಬೆಲೆ ಬಾಳತಕ್ಕದ್ದು. ಆ ಬೆಲೆಯನ್ನು ನಾವು ತೆರಲು ಸಿದ್ಧರಾದಾಗ ಗುರಿಯ ಶ್ರೇಷ್ಠತೆ ಮನದಟ್ಟಾಗುತ್ತದೆ. ಇದು ಕ್ರಾಂತಿಕಾರಿಗಳ ಸಿದ್ಧಾಂತ, ತತ್ತ್ವಜ್ಞಾನ. ಸ್ವಾತಂತ್ರ್ಯಾರ್ಜನೆಗೆ ಸಲ್ಲಬೇಕಾದದ್ದು ಗರಿಷ್ಠ ಬೆಲೆಯೇ. ಹೀಗೆ ನಂಬಿಕೆ ತಳೆದ ಕ್ರಾಂತಿಕಾರಿಗಳ ಪರ್ವ ಈ ದೇಶದಲ್ಲಿ ಆರಂಭವಾದ್ದು 1857ರ ಮಹಾಸಮರದಲ್ಲಿ.
ಕ್ರಾಂತಿಕಾರಿ ಪರಂಪರೆ
ಆ ಸ್ವಾತಂತ್ರ್ಯೋದ್ಯಮವೆಂಬ ನಭವನ್ನು ದೇದೀಪ್ಯಮಾನಗೊಳಿಸಿದ ತಾರೆಗಳೆಷ್ಟೊ! ವಾಸುದೇವ ಬಲವಂತ ಫಡಕೆ ಅವರಲ್ಲೊಬ್ಬ. ತಾತ್ಯಾಟೋಪೆಯನ್ನು ಬ್ರಿಟಿಷರು ಗಲ್ಲಿಗೆ ಹಾಕಿದಾಗ ಫಡಕೆ ಹದಿನೈದು ವರ್ಷದ ಹುಡುಗ. ಅವನು ದೇಶದ ವಿದ್ಯಮಾನಗಳನ್ನು ಕುರಿತು ಅವರಿವರಿಂದ ಕೇಳುತ್ತಿದ್ದ, ಪತ್ರಿಕೆಗಳಲ್ಲಿ ಓದುತ್ತಿದ್ದ. ದೇಶಕ್ಕಾಗಿ ನಡೆಸಿದ ಕಾಯಕದ ಕಾರಣದಿಂದ ತಾತ್ಯಾಟೋಪೆ ಗಲ್ಲಿಗೆ ಹೋಗಬೇಕಾಯಿತು – ಎಂಬ ಅರಿವಿನಿಂದ ಫಡಕೆಯ ವ್ಯಕ್ತಿತ್ವ ನಿರ್ಮಾಣ ಮೊದಲಾಯಿತು. ಉತ್ತರೋತ್ತರ 1883ರಲ್ಲಿ ಏಡನ್ನಿನ ಸೆರೆಯಲ್ಲಿ ಅವನ ದೇಹಾವಸಾನವಾಯಿತು. ನಮ್ಮ ದೇಶದ ಆದ್ಯ ಕ್ರಾಂತಿಕಾರಿ ಎಂಬ ಪ್ರಶಂಸೆಗೆ ಪಾತ್ರನಾಗಿದ್ದಾನೆ ಫಡಕೆ.
ಫಡಕೆಯೊಂದಿಗೆ ನಮ್ಮ ದೇಶದಲ್ಲಿ ಕ್ರಾಂತಿಕಾರಿಗಳ ದೊಡ್ಡ ಪರಂಪರೆಯೇ ಆರಂಭವಾಯಿತು. ತಾತ್ಯಾಟೋಪೆಯ ಹೌತಾತ್ಮ್ಯದಿಂದ ಪ್ರೇರಣೆ ಪಡೆದ ಫಡಕೆ ತಾನೆ ಕ್ರಾಂತಿಕಾರಿಯಾದದ್ದು, ಇತರ ಜೊತೆಗಾರರನ್ನು ಸೇರಿಸಿಕೊಂಡು ಸಂಘರ್ಷ ನಡೆಸಿದ್ದು – ಇದೆಲ್ಲ ಇತಿಹಾಸ.
ಸ್ವಾತಂತ್ರ್ಯ ಸಾಧನೆಗಾಗಿ ವಾಸುದೇವ ಬಲವಂತ ಪಡಕೆ ಕೈಯಲ್ಲಿ ಖಡ್ಗ ಹಿಡಿಯುವ ವೇಳೆಗೆ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಇನ್ನೂ ಪ್ರಾರಂಭವಾಗಿರಲಿಲ್ಲ. ಫಡಕೆ ನಿಧನದ ನಂತರವೇ ಕಾಂಗ್ರೆಸ್ ಹುಟ್ಟಿಕೊಂಡದ್ದು. ಇನ್ನೊಂದು ಸಂಗತಿ ಗಮನಿಸಬೇಕಾದದ್ದಿದೆ. ಕಾಂಗ್ರೆಸಿನ ಸ್ಥಾಪಕನಾದ ಆ್ಯಲನ್ ಆಕ್ಟೇವಿಯೊ ಹ್ಯೂಮ್ ಪ್ರೇರಣೆ ಪಡೆದಿದ್ದುದೂ 1857ರ ಘಟನಾವಳಿಯಿಂದಲೇ! ಸಂಯುಕ್ತ ಪ್ರಾಂತಗಳ (ಈಗಿನ ಉತ್ತರಪ್ರದೇಶ) ಎಟಾವಾದಲ್ಲಿ ಅಧಿಕಾರಿಯಗಿದ್ದಾತ ಹ್ಯೂಮ್ (ಎಟಾವಾ ಮುಲಾಯಂಸಿಂಹರ ಊರು). ಕ್ರಾಂತಿಕಾರಿಗಳ ನಡುವೆ ನಡೆಯುತ್ತಿದ್ದ ಪತ್ರವ್ಯವಹಾರ ಮೊದಲಾದವೆಲ್ಲ ಹ್ಯೂಮ್‍ನ ಗಮನಕ್ಕೆ ಬಂದಿತ್ತು. ಆಗಿನ ಬೆಳವಣಿಗೆಗಳ ಸ್ಫೋಟಕತೆ ಹೀಗೆ ಅವನ ಅರಿವಿಗೆ ಬಂದಿತ್ತು. ಜನಶಕ್ತಿ ಈ ಮಾರ್ಗದಲ್ಲಿ ಹೋಗಲು ಬಿಡಬಾರದು, ಜನಶಕ್ತಿಯ ಅಭಿವ್ಯಕ್ತಿಗೆ ಬೇರೊಂದು ಮಾಧ್ಯಮವನ್ನು ನಿರ್ಮಿಸಬೇಕು – ಎಂಬ ಹ್ಯೂಮ್‍ನ ಅನಿಸಿಕೆ ಕಾಂಗ್ರೆಸಿನ ಉಗಮಕ್ಕೆ ಕಾರಣವಾಯಿತು – ಎಂಬ ಕಥನವಿದೆ. ಮರಳುಗಾಡಾದ ಏಡನ್ನಿನಲ್ಲಿ ಫಡಕೆ 1883ರಲ್ಲಿ ತೀರಿಕೊಂಡದ್ದು ಕಾಂಗ್ರೆಸ್ ಸ್ಥಾಪನೆಯ ಪ್ರಯತ್ನವನ್ನು ತೀವ್ರಗೊಳಿಸಿರಬಹುದು.
ಫಡಕೆಯ ನಂತರ ಅನೇಕ ಕ್ರಾಂತಿಕಾರಿಗಳು ಆಗಿಹೋದರು: ಮುವರು ಚಾಫೇಕರ ಸೋದರರು ರ್ಯಾಂಡ್, ಆಯಸ್ರ್ಟ್ ಎಂಬ ಬ್ರಿಟಿಷ್ ಅಧಿಕಾರಿಗಳನ್ನು ಕೊಲೆ ಮಾಡಿದರು. ಅನಂತರ ವಿನಾಯಕ ದಾಮೋದರ ಸಾವರಕರರ ಪರ್ವ ಪ್ರಾರಂಭವಾಯಿತು. ಕ್ರಮೇಣ ಈ ಜ್ವಾಲೆ ಬಂಗಾಳ ಮೊದಲಾದೆಡೆಗಳಿಗೂ ಹರಡಿತು. ಅರವಿಂದ ಘೋಷ್ ಮೊದಲಾದವರು ಕ್ರಾಂತಿಯ ಹರಿಕಾರರಾದರು. ಅದಾದ ಇಪ್ಪತ್ತು ವರ್ಷಗಳ ನಂತರ ಚಂದ್ರಶೇಖರ ಆಜಾದ್, ಭಗತ್‍ಸಿಂಗ್ ಮುನ್ನೆಲೆಗೆ ಬಂದರು. ‘ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ’ ಘಟಿತವಾಯಿತು. ಆ ಪರಂಪರೆಯ ಪರ್ಯವಸಾನವಾದದ್ದು ನೇತಾಜಿ ಸುಭಾಷಚಂದ್ರ ಬೋಸರ ‘ಇಂಡಿಯನ್ ನ್ಯಾಷನಲ್ ಆರ್ಮಿ’ ಅಭಿಯಾನದೊಡನೆ. ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಟ್ಟಕಡೆಯ ನಿರ್ಣಾಯಕ ಮಜಲು.
ಹೀಗೆ 1857ರಲ್ಲಿ ಆರಂಭವಾದ ಸ್ವಾತಂತ್ರ್ಯ ಸಂಘರ್ಷ ಸತತವಾಗಿ ಮುನ್ನಡೆದು ಮುಕ್ತಾಯಗೊಂಡದ್ದು 1945ರಲ್ಲಿ. It is one unbroken record of successive revolutionaries. ದೇಶದ ವಿವಿಧ ಪ್ರಾಂತಗಳನ್ನು ಆವರಿಸಿದ ಈ ಸಶಸ್ತ್ರ ಅಭಿಯಾನದ್ದು ನಮ್ಮ ಸ್ವಾತಂತ್ರ್ಯ ಸಂಘರ್ಷದಲ್ಲಿ ಒಂದು ಪ್ರತ್ಯೇಕ ವೈಶಿಷ್ಟ್ಯಪೂರ್ಣ ಅಧ್ಯಾಯ. ಇದಕ್ಕೆಲ್ಲ ಮೂಲ ಪ್ರೇರಣಾಸ್ರೋತ 1857ರ ಸಮರ.
ಬದಲಾದ ಚಿತ್ರ
ಈ ಘಟನೆಯಿಂದ ಇನ್ನೊಂದು ಅಸಾಮಾನ್ಯ ಪರಿಣಾಮವೂ ಆಯಿತು. ಜನರ ಮನಃಸ್ಥಿತಿಯನ್ನು ಬ್ರಿಟಿಷರು ಕಣ್ಣಾರ ನೋಡಿದರು. ಬ್ರಿಟಿಷ್ ಸರ್ಕಾರದ ಮೇಲೆ ತುಂಬಾ ಒತ್ತಾಯವೂ ಬರುತ್ತಿತ್ತು. ಹಿಂದೆ ಪ್ರಸ್ತಾವಿಸಿದ ಪ್ರಭಾವಿಯಾಗಿದ್ದ ಇವ್ಯಾಂಜೆಲಿಕಲ್ ಪಾರ್ಟಿ ಎಲ್ಲೆಡೆ ಕ್ರೈಸ್ತ ರಾಜ್ಯವನ್ನು ತರುವ ಆಕಾಂಕ್ಷೆ ಹೊಂದಿತ್ತು. ಅದರ ಸಮರ್ಥಕರು ಬಹುಮಂದಿ ಇದ್ದರು. ಆ ಗುರಿಯ ಈಡೇರಿಕೆಗೆ ಎಲ್ಲೆಡೆಗಳಂತೆ ಭಾರತದಲ್ಲಿಯೂ ಪ್ರಯತ್ನಗಳು ನಡೆದಿದ್ದವು. ಇಂಗ್ಲೆಂಡಿನಲ್ಲಿ ಕೆಲಸವಿಲ್ಲದಿದ್ದ ಅನೇಕರನ್ನು ಧರ್ಮಪ್ರಸಾರಕರಾಗಿ (ಮಿಶನರೀಸ್) ಭಾರತಕ್ಕೆ ರವಾನಿಸುತ್ತಿದ್ದರು. ಇಂಗ್ಲೆಂಡಿನೊಳಗಡೆಯಂತೂ ಆ ಪ್ರಯತ್ನಗಳಲ್ಲಿ ನಿರತರಾದ ಅನೇಕರು ಇದ್ದರು. ಅವರಲ್ಲಿ ಕೆಲವು ಹೆಸರುಗಳು ಪ್ರಸಿದ್ಧವಾದವು: ಚಾಲ್ರ್ಸ್ ಗ್ರ್ಯಾಂಟ್, ವಿಲಿಯಂ ವಿಲ್ಬರ್ಫೋರ್ಸ್, ಇತ್ಯಾದಿ. ಸ್ವಾರಸ್ಯಕರ ಸಂಗತಿ ಇದು: 1857ಕ್ಕೆ ಹಿಂದೆ ಭಾರತದ ಕ್ರೈಸ್ತೀಕರಣ ಪ್ರಯತ್ನಗಳು ಅವ್ಯಾಹತವಾಗಿ ನಡೆದಿದ್ದವು. ಆದರೆ ತಮ್ಮ ಧರ್ಮದ ಮೇಲಣ ಆಕ್ರಮಣಕ್ಕೆ 1857ರ ಸಮರದ ಮೂಲಕ ಭಾರತೀಯರ ಉಗ್ರಪ್ರತಿಭಟನೆ ಹೊಮ್ಮಿತು. ಇದಾದ ಮೇಲೆ ಹಿಂದೆ ಸತ್ವರರಾಗಿದ್ದ ‘ಧರ್ಮಪ್ರಸಾರಕ’ರೆಲ್ಲ ಇದ್ದಕ್ಕಿದ್ದಂತೆ ಮೌನವಾಗಿಬಿಟ್ಟರು! ಭಾರತವಷ್ಟನ್ನೂ ಕ್ಷಿಪ್ರವಾಗಿ ಕ್ರೈಸ್ತೀಕರಿಸುವ ಸುಂದರ ಸ್ವಪ್ನ ಏಕಾಏಕಿ ಭಗ್ನವಾಯಿತು. ಭಾರತದ ಕ್ರೈಸ್ತೀಕರಣವೆಂಬುದು ಒಂದು ಅಸಾಧ್ಯ ಯೋಜನೆ ಎಂಬ ಮನವರಿಕೆ ಅವರಿಗೆ ಆಯಿತು. ಹೀಗೆ ಧರ್ಮಾಂತರಣ ಸಮಸ್ಯೆಗೆ ಪರಿಹಾರವಿತ್ತದ್ದು 1857ರ ಸಂಘರ್ಷ.
ಮುಂದುವರೆಯುವುದು...
(ಈ ಲೇಖನವು 'ಉತ್ಥಾನ' ಮಾಸಪತ್ರಿಕೆಯ ಜುಲೈ ೨೦೦೭ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಡಿಜಿಟೈಜೇಷನ್ (ಟಂಕನ) ಮಾಡಿಸಿದ್ದ ಶ್ರೀ ವಿಘ್ನೇಶ್ವರ ಭಟ್ಟರಿಗೂ ಕರಡುಪ್ರತಿ ತಿದ್ದಿದ್ದ ಶ್ರೀ ಕಶ್ಯಪ್ ನಾಯ್ಕ್ ಅವರಿಗೂ ಧನ್ಯವಾದಗಳು.)