“ಚಲೋ ದಿಲ್ಲೀ!”
ಈಗ ಸುಪ್ರಸಿದ್ಧವಾಗಿರುವ “ಚಲೋ ದಿಲ್ಲೀ!” ಎಂಬ ಘೋಷಣೆ ಹುಟ್ಟಿಕೊಂಡದ್ದು ಆ ಸಂದರ್ಭದಲ್ಲಿ. ಅಲ್ಲಿಂದಾಚೆಗೆ ಅದು ಲೆಕ್ಕವಿಲ್ಲದಷ್ಟು ಬಾರಿ ಬಳಕೆಯಾಗಿದೆ. ಸುಭಾಷಚಂದ್ರ ಬೋಸರ ಸೇನಾಭಿಯಾನದಲ್ಲೂ (1944) ಮೊಳಗಿದ್ದು ಅದೇ ಘೋಷಣೆಯೇ.
1857ರಲ್ಲಿ ಎರಡು ಘೋಷಣೆಗಳು ಜೊತೆಜೊತೆಯಾಗಿ ಕೇಳಬಂದವು: ‘ಚಲೋ ದಿಲ್ಲೀ!”; “ಮಾರೋ ಫಿರಂಗೀ ಕೋ!”
ಈ ಮಂತ್ರಘೋಷದೊಂದಿಗೆ ಮೀರಠಿನ ಸೈನಿಕಸಮೂಹಗಳು ದೆಹಲಿ ತಲಪಿದವು.
ಮೊಘಲ ವಂಶದ ಕಡೆಯ ರಾಜ ಬಹದ್ದೂರ್‍ಶಹಾ ಜಫರನನ್ನು (ಅವನು ಔರಂಗಜೇಬನ ವಂಶಿಕ) ಇಡೀ ಭಾರತದ ಚಕ್ರವರ್ತಿ ಎಂದು ಘೋಷಣೆ ಮಾಡಿದರು. ಇದಕ್ಕೆ ಒಂದು ಪರೋಕ್ಷ ಕಾರಣವೂ ಇತ್ತು. ಅದೆಂದರೆ – ಯಾರು ದೆಹಲಿಯಲ್ಲಿ ರಾಜ್ಯಭಾರ ಮಾಡುತ್ತಾನೋ ಅವನು ಇಡೀ ದೇಶಕ್ಕೇ ಚಕ್ರವರ್ತಿ ಎಂಬ ಪರಿಗಣನೆ ಪ್ರಚಲಿತವಾಗಿತ್ತು. ಅವನಿಂದ ಹೊರಟ ಯಾವುದೇ ಆದೇಶಕ್ಕೆ ಇಡೀ ದೇಶದಲ್ಲಿ ಮಾನ್ಯತೆ ಇರುತ್ತಿತ್ತು. ಹೀಗಿರುವುದರಿಂದ ದೆಹಲಿಯ ಪ್ರಭುವಾಗಿರುವಾತನೇ ಈ ಕ್ರಾಂತಿಯ ಪ್ರಮುಖನೂ ಆಗಲಿ – ಎಂದು ನಿಶ್ಚಯಿಸಲಾಯಿತು. ಬಹದ್ದೂರ್‍ಶಹಾನಿಗೆ ವಯಸ್ಸಾಗಿತ್ತು, ಆದರೂ ಅವನನ್ನು ರಾಜನನ್ನಾಗಿ ಘೋಷಿಸಿದರು.
ಮೀರಠ್ ಮೊದಲಾದೆಡೆಗಳ ಸೈನಿಕರು ತಮ್ಮ ಕೆಲಸ ಬಿಟ್ಟು ಆಂದೋಲನದಲ್ಲಿ ಸೇರಿ ದೆಹಲಿಗೆ ಬಂದಿದ್ದುದು ದೆಹಲಿಯಲ್ಲಿದ್ದ ಬ್ರಿಟಿಷ್ ಅಧಿಕಾರಿಗಳನ್ನು ವಿಚಲಿತಗೊಳಿಸಿತು. ಅವರು ವೃದ್ಧ ಬಹದ್ದೂರ್‍ಶಹಾನ ಇಬ್ಬರು ಮಕ್ಕಳನ್ನು ಕೊಂದುಹಾಕಿದರು. ಒಬ್ಬ ಮೊಮ್ಮಗನನ್ನೂ ಕೊಂದರು. ಹೀಗೆ ಕೊಂದು ಆ ಮಕ್ಕಳ ಶವಗಳನ್ನು ದೆಹಲಿಯ ಬೀದಿಯಲ್ಲಿ ಬಿಸಾಡಿದರೆಂದು ವರದಿಯಿದೆ. ಈ ವರ್ತನೆ ಬ್ರಿಟಿಷ್ ಅಧಿಕಾರಿಗಳಲ್ಲೇ ಹಲವರಿಗೆ ಅಸಭ್ಯ, ಅನಾಗರಿಕವೆನಿಸಿ ಹಾಗೆ ಮಾಡಿದ ಸೈನಿಕರನ್ನು ಶಿಕ್ಷಿಸುವ ಪ್ರಸ್ತಾವವೂ ಬಂತೆಂದು ಹೇಳಿಕೆಯಿದೆ. ಇದಾದ ಮೇಲೆ ಬಹದ್ದೂರ್‍ಶಹಾನನ್ನು ಬರ್ಮಾದ ರಂಗೂನಿಗೆ ಕಳಿಸಿದರು.
ಕುತ್ಸಿತ ಪ್ರಚಾರ
ದೆಹಲಿ ಪ್ರದೇಶದ ಸಿಖ್ ಸಮುದಾಯದವರನ್ನು ಒಲಿಸಿಕೊಳ್ಳಲು ಬಗೆಬಗೆಯ ಪ್ರಚಾರವನ್ನು ಬ್ರಿಟಿಷರು ಉಪಕ್ರಮಿಸಿದರೆಂದು ಹಲವರು ಇತಿಹಾಸಕಾರರು ಹೇಳಿದ್ದಾರೆ. ಆ ಪ್ರಚಾರ ಹೀಗಿತ್ತು: “ನಿಮ್ಮ ಗುರು ತೇಗಬಹಾದ್ದೂರನನ್ನು ಕೊಲೆ ಮಾಡಿದ್ದು ಈ ಮೊಗಲರೇ. ಹಾಗೆ ಕೊಂದು ಆ ಗುರಿವಿನ ಶವವನ್ನು ದೆಹಲಿಯಲ್ಲಿ ತೋರಣ ಕಟ್ಟಿದಂತೆ ನೇತುಹಾಕಿದ್ದರು. ಹೀಗೆ ಸಿಖ್ ಸಮಾಜಕ್ಕೆ ಮೊಘಲರು ಅಪಮಾನ ಮಾಡಿದರು, ತೇಜೋಭಂಗ ಮಾಡಿದರು, ಜನಮಾನಸವನ್ನು ಅಸೀಮ ದುಃಖಕ್ಕೆ ಗುರಿ ಮಾಡಿದರು. ಆ ಅಮಾನುಷತೆಗೆ ಸೇಡು ತೀರಿಸುವುದಕ್ಕಾಗಿ ಈಗ ಬಹದ್ದೂರ್‍ಶಹಾನ ಸಂತನವನ್ನು ನಾವು ಕೊಂದು ತೋರಣ ಕಟ್ಟಿದ್ದೇವೆ.” ಈ ಕಥನ ಕೆಲವು ಇತಿಹಾಸಗ್ರಂಥಗಳಲ್ಲಿ ಲಭ್ಯವಿಲ್ಲ. ಆದರೆ 1857ಕ್ಕೆ ಸಂಬಂಧಿಸಿದ ಎಷ್ಟೋ ಹಾಡು ಲಾವಣಿಗಳಲ್ಲಿ ಈ ಪ್ರಸ್ತಾವವಿದೆ.
ದೆಹಲಿಯ ನಂತರ ಸೈನಿಕರು ಲಖ್ನೌ ಮೇಲೆ, ಆಮೇಲೆ ಕಾನ್‍ಪುರದ ಮೇಲೆ ದಾಳಿ ಮಾಡಿದರು. ಹೀಗೆ ಪ್ರಮುಖ ಪಟ್ಟಣಗಳು ದಾಳಿಗೊಳಗಾದವು. ಲಖ್ನೌದಲ್ಲಿ ದರ್ಬಾರ್ ಭವನ ರೆಸಿಡೆನ್ಸಿಯ ಮೇಲೆಯೇ ಆಕ್ರಮಣ ನಡೆಯಿತು. ಸೈನಿಕರು ಎಷ್ಟು ಕ್ರೌರ್ಯದಿಂದ ವರ್ತಿಸಿದರೆಂದು ಚಿತ್ರಿಸಹೊರಟ ಬ್ರಿಟಿಷ್ ಲೇಖಕರು ಕಾನ್‍ಪುರ ದಾಳಿಯನ್ನು ತಪ್ಪದೆ ಉಲ್ಲೇಖಿಸುತ್ತಾರೆ.
“ನಾನಾಸಾಹೇಬ್, ತಾತ್ಯಾಟೋಪೆ ಮತ್ತು ಅಜೀಮುಲ್ಲಾಖಾನ್ – ಇವರು ಆಶ್ವಾಸನೆ ಕೊಟ್ಟಿದ್ದರು – ಬ್ರಿಟಿಷ್ ಮಹಿಳೆಯರನ್ನೂ ಎಳೆಮಕ್ಕಳನ್ನೂ ಸುರಕ್ಷಿತ ಸ್ಥಳಕ್ಕೆ ತಲಪಿಸಲಾಗುವುದೆಂದು. ಆದರೂ ಸೈನಿಕರೆಲ್ಲ ಸೇರಿದಾಗ ಕಾನ್‍ಪುರದಲ್ಲಿ ಬ್ರಿಟಿಷರನ್ನು ಕ್ರೂರವಾಗಿ ಕೊಂದರು.” ಈ ಪಲ್ಲವಿ ಎಲ್ಲ ಬ್ರಿಟಿಷ್ ವರ್ಣನೆಗಳಲ್ಲೂ ಎದ್ದುಕಾಣುತ್ತದೆ. ಆದರೆ ಕಾನ್‍ಪುರದಲ್ಲಿ ಏನಾಗುತ್ತಿತ್ತೆಂದು ನಾನಾಸಾಹೇಬನ ಅರಿವಿಗೇ ಬಂದಿರಲಿಲ್ಲ ಎಂಬ ಕಥನವೂ ಇದೆ. ತಾತ್ಯಾಟೋಪೆಯ ಒಂದು ಪ್ರಸಿದ್ಧ ಹೇಳಿಕೆಯಿದೆ: “Except in a just war (ಎಂದರೆ ಎಲ್ಲ ಯುದ್ಧಗಳಲ್ಲೂ ಸಹಜವಾಗಿ ನಡೆಯುವ ಪ್ರಸಂಗಗಳನ್ನು ಹೊರತುಪಡಿಸಿ) ನಮ್ಮಿಂದ ಎಲ್ಲಿಯೂ ಹಿಂಸಾಚರಣೆ ಆಗಿಲ್ಲ.” ಆದರೂ ಈ ಆರೋಪ ಸತತವಾಗಿ ಪುನರುಚ್ಚಾರಗೊಳ್ಳುತ್ತ ಹೋಯಿತು.
ಝಾನ್ಸಿ, ಜಗಧೀಶ್‍ಪುರ
ಇನ್ನು ಝಾನ್ಸಿಯ ವಿಷಯಕ್ಕೆ ಬಂದರೆ ಅಲ್ಲಿ 1858ರಲ್ಲಿ ನಡೆದ ಯುದ್ಧದ ವಿವರಗಳು ಪ್ರಸಿದ್ಧವಾದವು. ಕಾಲ್ಪಿ ಮೊದಲಾದೆಡೆ ಶೌರ್ಯಭರಿತ ಹೋರಾಟ ನಡೆಯಿತು. ಹೋರಾಡುತ್ತಲೇ ಝಾನ್ಸಿರಾಣಿ ಲಕ್ಷ್ಮೀಬಾಯಿಯ ಪ್ರಾಣತ್ಯಾಗವೂ ಆಯಿತು. ಬ್ರಿಟಿಷ್ ಅಧಿಕಾರಿಗಳೇ ಕಂಠೋಕ್ತವಾಗಿ ಹೇಳಿರುವಂತೆ, “She was the best and bravest among the mutineers.” (“ಆ ಹೋರಾಟಗಾರರ ಪೈಕಿ ಶ್ರೇಷ್ಠಳೂ ಅತ್ಯಂತ ಶೌರ್ಯವಂತಳೂ ಆದವಳು ಝಾನ್ಸಿ ರಾಣಿ ಲಕ್ಷ್ಮೀಬಾಯಿ.”)
1857ರ ಸಂದರ್ಭದಲ್ಲಿ ಹೆಸರಿಸಲೇಬೇಕಾದ ಇನ್ನೊಂದು ಸ್ಥಳವೆಂದರೆ ಬಿಹಾರದ ಜಗದೀಶ್‍ಪುರ. ಅಲ್ಲಿ 80 ವರ್ಷದ ಕುವರಸಿಂಹ ಮತ್ತು ಅವನ ತಮ್ಮ ಅಮರಸಿಂಹ – ಇವರು ಎಂಟು ತಿಂಗಳಷ್ಟು ದೀರ್ಘಕಾಲ ಮಣಿಯದೆ ಬ್ರಿಟಿಷರ ವಿರುದ್ಧ ಕೆಚ್ಚಿನಿಂದ ಹೋರಾಡಿದರು. ಅಂತಿಮವಾಗಿ ಕುವರಸಿಂಹ ತೀರಿಕೊಂಡ. ಇದಲ್ಲದೆ ಅಸಂಖ್ಯ ಸಣ್ಣಪುಟ್ಟ ಊರುಗಳವರೂ ವೀರೋಚಿತವಾಗಿ ಹೋರಾಡಿದರು. ಇದರ ಬಗ್ಗೆ ಸಾಕಷ್ಟು ವರ್ಣನೆಗಳಿವೆ. ಹಿಂದೆ ಸ್ಮರಿಸಿದ ಕನ್ನಡದ ಲಾವಣಿಕಾರ ಹೀಗೆ ಹಾಡಿದ್ದಾನೆ:
ಗತ್ತಿನ ಝಾನ್ಸಿ ಲಕ್ಷ್ಮೀಬಾಯ್ ಕೈ-
ಕತ್ತಿಗೆ ಬೆದರಿದ ಬ್ರಿಟೀಷರು
ತತ್ತರಪಡುತಲಿ ತಾತ್ಯಾಟೋಪೆಯ
ತೋಫಿನ ಬಾಯಿಗೆ ಕಟ್ಟಿದರು.
ಸತ್ತರು ಬಹು ಜನ ಸಿಪಾಯಿ ಯುದ್ಧದಿ;
ಸರ್ವಕ್ಕು ಕಾರಣ ಬ್ರಿಟೀಷರು.
ಸ್ವಾತಂತ್ರ್ಯ ಘೋಷಣೆ ಸಾರಿದ ವೀರರ
ಸಾಲುಮರಕೆ ನೇಣೆತ್ತಿದರು.
ವಿರಾಟ ವಿಕ್ರಮ ಮರಾಠ ಪೇಶ್ವೆಯ
ಭರಾಟಕಂಜಿದ ಬ್ರಿಟೀಷರು. . . .
ಈಗ್ಗೆ ಐವತ್ತರವತ್ತು ವರ್ಷ ಹಿಂದೆ ಕರ್ನಾಟಕದಲ್ಲಿ ಜನಜನಿತವಾಗಿದ್ದ ಈ ಲಾವಣಿಯನ್ನು ನಾವು ಶಾಲೆಯ ಬಾಲಕರಾಗಿದ್ದಾಗ ಹಾಡುತ್ತಿದ್ದೆವು.
ಏನೆಲ್ಲಾ ನಡೆದ ಮೇಲೆ ಪ್ರಜ್ವಲ ಅಗ್ನಿಯೂ ಒಮ್ಮೆ ಶಾಂತವಾಗುವಂತೆ ಈ ಕ್ರಾಂತಿಯೂ ಶಾಂತವಾಯಿತು.
ಶೌರ್ಯಸರಣಿ
ಸಹಜವಾಗಿಯೆ ಈ ವ್ಯಾಪಕ ಸಂಘರ್ಷದಲ್ಲಿ ಹಲವರ ಹೆಸರುಗಳು ಎದ್ದುಕಾಣುತ್ತವೆ: ನಾನಾಸಾಹೇಬ ಪೇಶ್ವೆ, ಅವನ ಪ್ರಮುಖ ಸಹಕಾರಿ ತಾತ್ಯಾಟೋಪೆ, ನಾನಾಸಾಹೇಬನ ದಾಯಾದಿಯ ಮಗ ರಾವ್‍ಸಾಹೇಬ ಪೇಶ್ವೆ. ರಾವ್‍ಸಾಹೇಬನನ್ನೂ ಆಮೇಲಿನ ದಿನಗಳಲ್ಲಿ ಬ್ರಿಟಿಷರು ಗಲ್ಲಿಗೆ ಹಾಕಿದರು.
ಕೋರ್ಟ್‍ಮಾರ್ಷಲ್‍ಗೆ ಒಳಪಡಿಸುವುದು, ಅಪರಾಧಿಗಳೆಂದು ಘೋಷಿಸಿ ಗಲ್ಲಿಗೆ ಹಾಕುವುದು – ಇದು ದಿನನಿತ್ಯದ ಕಟ್ಟಳೆಯೇ ಆಗಿಬಿಟ್ಟಿತು. ಮದರಾಸಿನಲ್ಲಿ ಕೋರ್ಟ್ ಮಾರ್ಷಲ್‍ಗೊಳಗಾದ ಸುಮಾರು ಒಂದುಸಾವಿರ ಮಂದಿ ಹೋರಾಟಗಾರರನ್ನು ಬೆಂಗಳೂರಿಗೊಯ್ದು ನೇಣುಹಾಕಿದರು – ಎಂದು ವರದಿಯಾಗಿದೆ. ದೇಶದ ದಕ್ಷಿಣಭಾಗದಲ್ಲೂ ವ್ಯಾಪಕ ಹೋರಾಟ ನಡೆದಿತ್ತೆಂದು ಇದರಿಂದ ಊಹಿಸಬಹುದು.
ಕ್ರಾಂತಿಯ ಕಿಚ್ಚು ಆರಲು ಸುಮಾರು ಮೂರು ವರ್ಷ ಹಿಡಿಯಿತು. ಇಡೀ ಹೋರಾಟದಲ್ಲಿ ಮಡಿದವರು ಎಷ್ಟು ಮಂದಿ ಎಂಬ ಬಗ್ಗೆ ಬೇರೆಬೇರೆ ಹೇಳಿಕೆಗಳಿವೆ. ಲಕ್ಷಾಂತರ ಮಂದಿ ಸತ್ತರೆಂಬ ಕಥನಗಳೂ ಇವೆ; ಅದು ಉತ್ಪ್ರೇಕ್ಷೆಯಿದ್ದೀತು. ಹತ್ತಾರು ಸಾವಿರ ಮಂದಿಯ ಆಹುತಿಯಾದುದಕ್ಕಂತೂ ದಾಖಲೆಗಳಿವೆ.
ಬ್ರಿಟಿಷರ ಅಧಿಕಾರಾವಧಿಯಲ್ಲಿ ಅವರನ್ನು ಅತ್ಯಂತ ಅಧೀರರಾಗಿಸಿದ ಘಟನೆಯೆಂದರೆ 1857ರ ಹೋರಾಟ – ಎಂದು ಹಲವಾರು ಮಂದಿ ಬ್ರಿಟಿಷರೂ ಹೇಳಿದ್ದಾರೆ. ಮೂರನೆ ಪಾಣಿಪತ್ ಯುದ್ಧದ ನಂತರದ ಅತ್ಯಂತ ಮಹತ್ತ್ವದ ಐತಿಹಾಸಿಕ ಘಟನೆ ಇದು ಎಂದೂ ಹೇಳಿದ್ದಾರೆ. ಅಹಮದ್‍ಶಹಾ ಅಬ್ದಾಲಿ ಮತ್ತು ಮರಾಠರ ನಡುವೆ 1761ರಲ್ಲಿ ನಡೆದ ಯುದ್ಧದ ಪರಿಣಾಮದ ಬಗ್ಗೆ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ನುಡಿ – ಆ ಯುದ್ಧವಾದ ಮೇಲೆ ವಿಧವೆಯಿಲ್ಲದ ಒಂದು ಮನೆಯೂ ಮಹಾರಾಷ್ಟ್ರದಲ್ಲಿ ಇರಲಿಲ್ಲ – ಎಂದು. ಆ ಘೋರ ಯುದ್ಧದ ನಂತರ ನಡೆದ ವ್ಯಾಪಕ ಸಮರವೆಂದರೆ 1857ರದು.
1857ರ ಸಮರದಲ್ಲಿ ಭಾರತೀಯರಿಗೆ ಪರಾಭವವಾದದ್ದು ಹೌದು. ಸೋತ ಘಟನೆಯನ್ನು ಏಕೆ ವೈಭವೀಕರಿಸಬೇಕು ಎಂದು ಪ್ರಶ್ನಿಸಿದವರೂ ಇದ್ದಾರೆ. ಆದರೆ ಕೆಲವು ‘ಸೋಲು’ಗಳು ಗೆಲವುಗಳಿಗಿಂತ ಅಮೂಲ್ಯವಾಗಿರುತ್ತವೆ ಎಂದು ಇತಿಹಾಸದಲ್ಲಿ ನೋಡುತ್ತೇವೆ. Certain defeats are more glorious than victories. ನಾಡಿನ ಭವಿಷ್ಯದ ಮೇಲೆ ಕೆಲವು ಸೋಲುಗಳೇ ಹೆಚ್ಚು ಗಾಢ ಪರಿಣಾಮ ಬೀರಿರುವ ಇತಿಹಾಸದ ನಿದರ್ಶನಗಳಿಗೆ ಕೊರತೆಯಿಲ್ಲ. ಅಂಥ ಒಂದು ಚರಿತ್ರಾರ್ಹ ಘಟನೆ ಭಾರತೀಯ ಸೈನಿಕರಿಂದಾದ 1857ರ ಹೋರಾಟ.
ಅಂಥ ದೀರ್ಘ ಹೋರಾಟದಲ್ಲಿ ಸ್ಮರಣಾರ್ಹ ಘಟನೆಗಳು ಹತ್ತಾರು ಇರುತ್ತವೆ. ವಿವರಗಳನ್ನು ಬದಿಗಿರಿಸಿ, 1857ರ ಮಹಾಸಮರದ ದೀರ್ಘಕಾಲಿಕ ಪರಿಣಾಮ ಏನಾಯಿತೆಂದು ನೆನಪಿಸಿಕೊಳ್ಳುವುದು ಲಾಭಕಾರಿಯಾದೀತು.
ಮುಂದುವರೆಯುವುದು...
(ಈ ಲೇಖನವು 'ಉತ್ಥಾನ' ಮಾಸಪತ್ರಿಕೆಯ ಜುಲೈ ೨೦೦೭ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಡಿಜಿಟೈಜೇಷನ್ (ಟಂಕನ) ಮಾಡಿಸಿದ್ದ ಶ್ರೀ ವಿಘ್ನೇಶ್ವರ ಭಟ್ಟರಿಗೂ ಕರಡುಪ್ರತಿ ತಿದ್ದಿದ್ದ ಶ್ರೀ ಕಶ್ಯಪ್ ನಾಯ್ಕ್ ಅವರಿಗೂ ಧನ್ಯವಾದಗಳು.)