ಹಾಸ್ಯರಸ: ಒಂದು ಸ್ವೋಪಜ್ಞಟಿಪ್ಪಣಿ - 1

ಹಾಸ್ಯವು ಸರ್ವಜನಮನೋಭಿರಾಮವಾದ ರಸ. ಇದನ್ನು ಕುರಿತು ಲಕ್ಷಣವಿವೇಚನರೂಪವಾಗಿ ಚಿರಂತನಭಾರತೀಯಕಾವ್ಯಮೀಮಾಂಸೆಯು ಹೆಚ್ಚಾಗಿ ಹೇಳದಿದ್ದರೂ ಇದರ ಪ್ರಾಮುಖ್ಯವನ್ನು ಲಕ್ಷ್ಯಾತ್ಮಕವಾಗಿ ನಮ್ಮ ಸಾಹಿತ್ಯಲೋಕವು ಚೆನ್ನಾಗಿಯೇ ಗುರುತಿಸಿದೆ. ಇದಕ್ಕೆ ಅಭಿಜಾತ-ಅನಭಿಜಾತ-ಆಧುನಿಕ-ಪ್ರಾಚೀನಾದಿ ಭೇದವಿಲ್ಲದೆ ಸರ್ವತ್ರ ಮಾನ್ಯತೆಯೇ ಸಂದಿದೆ. ಪಾಶ್ಚಾತ್ಯಸಾಹಿತ್ಯಜಗತ್ತಿನಲ್ಲಿ ಕೂಡ ಚಿರಂತನರಾದ ಅರಿಸ್ಟಾಟಲ್, ಲಾಂಜೈನಸ್, ಹೊರೇಸ್ ಮುಂತಾದವರು ಹಾಸ್ಯನಿರೂಪಣಕ್ಕೆ ಹೆಚ್ಚಿನ ಅವಧಾರಣೆಯನ್ನು ಹಾಕಿಲ್ಲವಾದರೂ ಅಲ್ಲಿಯ ಸಾಹಿತ್ಯವಿಸ್ತರವಾಗಲಿ, ಆಧುನಿಕರ ವಿವೇಚನೆಗಳಾಗಲಿ ಈ ರಸಕ್ಕೆ ಯುಕ್ತವಾದ ಮನ್ನಣೆಯನ್ನೇ ನೀಡಿವೆಯೆಂಬುದು ನಿಶ್ಚಪ್ರಚ.

ನಮ್ಮಲ್ಲಿ ಮುಖ್ಯವಾಗಿ ಭರತ ಮತ್ತು ಅಭಿನವಗುಪ್ತರೇ ಹಾಸ್ಯವನ್ನು ಕುರಿತು  ಮೌಲಿಕಸಂಗತಿಗಳನ್ನು ತಿಳಿಸಿದ್ದಾರೆ. ಇವರಲ್ಲದೆ ಇನ್ನಿತರರೂ ಕೆಲವೊಂದು ಸಂಗತಿಗಳನ್ನು ಅಷ್ಟಿಷ್ಟು ಒಕ್ಕಣಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಸದ್ಯದ ವಿವೇಚನೆಗೆ ಪೂರ್ವಭಿತ್ತಿಯೆಂಬಂತೆ ಹೀಗೆ ಸಂಗ್ರಹಿಸಬಹುದು:

ಹಾಸ್ಯರಸವು ಹಾಸವೆಂಬ ಸ್ಥಾಯಿಭಾವದಿಂದ ಹುಟ್ಟುತ್ತದೆ. ಇದು ಬಗೆಬಗೆಯ ವ್ಯಕ್ತಿಗಳ ವೇಷ, ಭಾಷೆ, ಚೇಷ್ಟೆಗಳಲ್ಲಿ ತೋರಿಕೊಳ್ಳಬಹುದಾದ ವಿಕಟತೆ, ವಿನೋದ, ವಿಡಂಬನೆ ಮತ್ತು ಅಗ್ಗದ ಅನುಕರಣೆಗಳಂಥವುಗಳ ಮೂಲಕ ಇಂಥವಕ್ಕೆ ಆಸ್ಪದವಾಗಬಲ್ಲ ಸಂದರ್ಭಗಳ ಮೂಲಕ ಹೊಮ್ಮುತ್ತದೆ. ಇಲ್ಲೆಲ್ಲ ಉಕ್ಕುವ ನಗೆಯ ಬಗೆಯನ್ನು ಸ್ಮಿತ, ಹಸಿತ, ಅಪಹಸಿತ, ಅತಿಹಸಿತ ಎಂಬಿವೇ ಮುಂತಾದ ಹಲವು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಇದು ಮುಖ್ಯವಾಗಿ ಅಭಿನಯವನ್ನು ಗಮನದಲ್ಲಿರಿಸಿಕೊಂಡು ಮಾಡಿರುವ ವಿಭಾಗಕ್ರಮ. ಸಭ್ಯ ಅಥವಾ ಸುಸಂಸ್ಕೃತಪಾತ್ರಗಳು ಅಬ್ಬರದ ನಗೆಯಲ್ಲಿ ತೊಡಗದೆ ಕಿರುನಗೆಯ ಮಟ್ಟಿಗೇ ಸೀಮಿತವಾದರೆ ಬಾಲಿಶ, ಅಪ್ರಬುದ್ಧ, ಅಸಂಸ್ಕೃತಪಾತ್ರಗಳಲ್ಲಿ ಹಸಿತದ ಸೆಲೆಯು ಗಹಗಹಿಸಿ ನಗುವ ವರೆಗೂ ಉಕ್ಕೇರುವುದು. ಹಾಸ್ಯವು ಹೆಚ್ಚಾಗಿ ಜನಸಾಮಾನ್ಯರಲ್ಲಿ ವಿಜೃಂಭಿಸುತ್ತದೆ. ವಿಶೇಷದ ಸಂಗತಿಯೆಂದರೆ ಹಾಸ್ಯವು ಆತ್ಮಸ್ಥ ಮತ್ತು ಪರಸ್ಥ ಎಂದು ಇಬ್ಬಗೆಯಾಗಿದೆ. ಆತ್ಮಸ್ಥವು ತಾನೇ ನಗುವುದೆಂದಾದರೆ ಪರಸ್ಥವು ಇತರರನ್ನು ನಗಿಸುವುದೆಂದು ತಾತ್ಪರ್ಯ. ಹಾಸ್ಯವು ಶೃಂಗಾರದಿಂದ ಜನಿಸುತ್ತದೆ; ಅಂದರೆ ಇದು ಶೃಂಗಾರದ ಉಪರಸವೆನ್ನಬಹುದು. ಕಾಮವೆಂಬ ಪುರುಷಾರ್ಥದ ಪ್ರತೀಕವಾಗಿರುವ ಶೃಂಗಾರವು ಸಕಲಜನಸಮ್ಮೋದಕಾರಿಯಾದ ಕಾರಣ ಅದಕ್ಕಂಟಿಬರುವ ಹಾಸ್ಯವೂ ಸಮಸ್ತಹರ್ಷಾಸ್ಪದವೆಂದು ತಾತ್ಪರ್ಯ. ಆದರೆ ಅನೌಚಿತ್ಯವೇ ಹಾಸ್ಯದ ಮೂಲವಾದ ಕಾರಣ ಅನೌಚಿತ್ಯವು ತಲೆದೋರುವ ಎಡೆಯೆಲ್ಲ ನಗೆಗೆ ನೆಲೆಯಾಗುವುದೆಂದು ತೀರ್ಮಾನಿಸಬಹುದು. ಹಾಸ್ಯರಸವು ರಸಧರ್ಮಗಳಲ್ಲಿ ಒಂದಾದ ವಿಕಾಸವನ್ನು ಹೆಚ್ಚಾಗಿ ನೆಮ್ಮುತ್ತದೆ. ಕರುಣರಸವು ಹಾಸ್ಯಕ್ಕೆ ತೀರ ವಿರೋಧಿ. ಇಂತಾದರೂ ವಿವಿಧರಸಗಳ ಆಭಾಸಸಂದರ್ಭದಲ್ಲಿ ಹಾಸ್ಯವು ಹೊಮ್ಮಲು ವಿಪುಲಾವಕಾಶವುಂಟು. ಈ ನಿಟ್ಟಿನಿಂದ ಕಂಡಾಗ ಹಾಸ್ಯದಲ್ಲಿ ಸರ್ವರಸಗಳ ಎಳೆಗಳನ್ನೂ ಕಾಣಿಸಲು ಶಕ್ಯವೆನ್ನಬಹುದು.

ಪ್ರಸ್ತುತ ಈ ಹಿನ್ನೆಲೆಯಲ್ಲಿ ಹಲವು ಕಾಲದ ನನ್ನ ಸ್ವೋಪಜ್ಞಚಿಂತನೆಗಳನ್ನಷ್ಟೇ ಸಂಕ್ಷೇಪವಾಗಿ ವಿದ್ವದ್ರಸಿಕರ ಮುಂದಿರಿಸುತ್ತಿದ್ದೇನೆ.

ಮೊದಲಿಗೆ ಹಾಸ್ಯರಸವು ಹಾಸವೆಂಬ ಸ್ಥಾಯಿಭಾವದಿಂದ ಹೊಮ್ಮುವುದೆಂಬ ಅಂಶವನ್ನೇ ಗಮನಿಸುವುದಾದರೆ ಕೆಲವೊಂದು ಸ್ವಾರಸ್ಯಗಳು ಹೊಳೆದಾವು. ಪ್ರಸಿದ್ಧವಾದ ರಸ-ಭಾವಗಳ ಜನ್ಯ-ಜನಕಸಂಬಂಧಪಟ್ಟಿಕೆಯನ್ನು ಕಂಡಾಗ  ನಾಮಸಾಮ್ಯದಿಂದ ಎದ್ದು ಕಾಣುವಂಥವು ಹಾಸ್ಯ ಮತ್ತು ಹಾಸಗಳೇ. ದಿಟವೇ, ಭಯಾನಕ ಮತ್ತು ಭಯಗಳಿಗೂ ರೌದ್ರ ಮತ್ತು ಕ್ರೋಧಗಳಿಗೂ ಕೆಲಮಟ್ಟಿಗೆ ಧ್ವನಿಸಾಮ್ಯಗಳಿವೆಯಾದರೂ ಅವು ಹಾಸ-ಹಾಸ್ಯಗಳ ಮಟ್ಟದಲ್ಲ. ಅಲ್ಲದೆ “ಹಾಸಸ್ಯ ಭಾವಃ ಹಾಸ್ಯಂ” ಎಂದು ತದ್ಧಿತರೂಪದಲ್ಲಿ ವೈಯಾಕರಣಿಕವಾಗಿ ನಿರ್ವಚಿಸುವಷ್ಟು ಶಬ್ದಾರ್ಥಸಾಮ್ಯವಿಲ್ಲಿರುವುದು ಪ್ರಶ್ನಾತೀತ. ಇದರಿಂದ ತಿಳಿದುಬರುವುದೇನೆಂದರೆ ಲೋಕನಿಷ್ಠವಾದ ಹಾಸಭಾವಕ್ಕೂ ಕಲಾನಿಷ್ಠವಾದ ಹಾಸ್ಯರಸಕ್ಕೂ ಅಂಥ ವ್ಯತ್ಯಾಸವಿಲ್ಲ. ಮಾತ್ರವಲ್ಲ, ಈ ಕಾರಣದಿಂದಲೇ  ಸಾಮಾನ್ಯವಾಗಿ ಯಾವುದೇ ವರ್ಗದ ರಸಿಕರು ಲೋಕದಲ್ಲಿ ಒಡಮೂಡುವ ಹಾಸ್ಯಪ್ರಸಂಗಗಳನ್ನೋ ವಿನೋದಕಣಿಕೆಗಳನ್ನೋ (ಜೋಕ್ಸ್) ಯಥಾವತ್ತಾಗಿ ಕಲೆಯಲ್ಲಿಯೂ ಕಂಡಾಗ ವ್ಯತಿರೇಕಿಸುವುದಿಲ್ಲ. ಮಾತ್ರವಲ್ಲ, ಕಲೆ ಮತ್ತು ಲೋಕಗಳಲ್ಲಿ ಕಾಣಸಿಗುವ ಹಾಸ್ಯ/ಹಾಸಗಳನ್ನು ಪರಸ್ಪರ ವಿಭಿನ್ನವೆಂದು ಗ್ರಹಿಸುವುದೂ ಇಲ್ಲ.

ಆದರೆ ಮಿಕ್ಕ ರಸ-ಭಾವಗಳ ವಿಷಯದಲ್ಲಿ ಹೀಗಾಗದು. ಉದಾಹರಣೆಗೆ ಸುಖೈಕಸ್ವರೂಪವಾದ ಲೋಕದ ರತಿಭಾವವು ತೀರ ಖಾಸಗಿ; ಮತ್ತಿದು ಸಾರ್ವಜನಿಕವಾದಾಗ ಸಭ್ಯರಾದ ರಸಿಕರು ಅದರತ್ತ ಔದಾಸೀನ್ಯವನ್ನೋ ಜುಗುಪ್ಸೆಯನ್ನೋ ತೋರುವರಲ್ಲದೆ ಆಸ್ವಾದಶೀಲತೆಯನ್ನಲ್ಲ. ಇನ್ನು ದುಃಖೈಕಸ್ವರೂಪವಾದ ಲೋಕದ ಶೋಕಭಾವವನ್ನು ಕಂಡಾಗಲಂತೂ ಯಾರಿಗಾಗಲಿ ಖೇದವೇ ಆಗುವುದಲ್ಲದೆ ಆಸ್ವಾದಶೀಲತೆಯಲ್ಲ.  ಅದೆಷ್ಟು ಬೇಗ ಪ್ರಕೃತ ಎದುರಾದ ಶೋಕವನ್ನು ದಾಟಿಕೊಳ್ಳೋಣವೆಂದಿರುವರಲ್ಲದೆ ಅದರಲ್ಲಿಯೇ ಚರ್ವಣೆಯನ್ನು ಕಾಣುವುದಿಲ್ಲ. ದಿಟವೇ, ಯಾವ ಯಾವ ಸ್ಥಾಯಿಭಾವಗಳು ಸುಖಸ್ವರೂಪಿಗಳೋ (ಉದಾ: ಉತ್ಸಾಹ, ವಿಸ್ಮಯ ಮತ್ತು ಪೂರ್ವೋಕ್ತ ರತಿ) ಅಲ್ಲೆಲ್ಲ ಅವುಗಳ ಭಾವಮಾತ್ರತ್ವದಲ್ಲಿಯೇ, ಲೋಕಸ್ತರದಲ್ಲಿಯೇ ಆಸ್ವಾದಶೀಲತೆಯುಂಟೆಂದು ಹೇಳಬಹುದು. ಅಂತೆಯೇ ಮತ್ತಾವ ಸ್ಥಾಯಿಭಾವಗಳು ದುಃಖಸ್ವರೂಪಿಗಳೋ (ಉದಾ: ಭಯ, ಕ್ರೋಧ, ಜುಗುಪ್ಸೆ ಮತ್ತು ಪೂರ್ವೋಕ್ತ ಶೋಕ) ಅಲ್ಲೆಲ್ಲ ಅವುಗಳ ಭಾವಮಾತ್ರತ್ವದಲ್ಲಿ ಅಂದರೆ ಲೋಕಸ್ತರದಲ್ಲಿ ಆಸ್ವಾದಶೀಲತೆಯಿಲ್ಲವೆಂದು ನಿಶ್ಚಯಿಸಬಹುದು. ಹೀಗಾಗಿ ಹಾಸಭಾವದ್ದೇನು ಹೆಚ್ಚುಗಾರಿಕೆಯೆಂಬ ಪ್ರಶ್ನೆ ಬಂದೀತು. ಅದರೆ ಪ್ರಕೃತಸಂದರ್ಭವಿಷ್ಟು ಸರಳವಲ್ಲ. ಲೋಕಸ್ತರದಲ್ಲಿಯೂ ಉತ್ಸಾಹ, ವಿಸ್ಮಯ, ರತಿಗಳಂಥ ಭಾವಗಳು ಆಸ್ವಾದ್ಯವೆನಿಸಿವೆಯೆಂಬ ನಿಲುಮೆಗೆ ಪ್ರತಿಕೋಟಿಯಾಗಿ ನಾವು ಈಗಾಗಲೇ ರತಿಭಾವಕ್ಕೆ ಬಂದೊದಗಿದ ಸಮಸ್ಯೆಯನ್ನು ಕಂಡಿದ್ದೇವೆ. ಇನ್ನು ಉತ್ಸಾಹವಾದರೋ ಕ್ರಿಯಾತ್ಮಕವಾಗದೆ ಫಲಕಾರಿಯಾಗದ ಕಾರಣ ಅದಕ್ಕೆ ಲೋಕದಲ್ಲಿ ಫಲಕಾರ್ಪಣ್ಯ ಅನಿವಾರ್ಯ. ಹೀಗಾಗಿ ಅದೂ ಹೆಚ್ಚಿನ ಆಸ್ವಾದವನ್ನುಂಟುಮಾಡದು.

ವಿಸ್ಮಯವೊಂದಕ್ಕೆ ಮಾತ್ರ ಇಂಥ ಆಕ್ಷೇಪದಿಂದ ವಿನಾಯಿತಿಯುಂಟು. ಇದಕ್ಕೆ ಕಾರಣ ಹಾಸದಂತೆ ಇದು ಕೂಡ ಉಭಯತ್ರ ಸಲ್ಲುವುದೊಂದೇ ಅಲ್ಲ; ಸಕಲರಸ-ಭಾವಗಳಲ್ಲಿಯೂ—ಅರ್ಥಾತ್ ಕಲೆ ಮತ್ತು ಲೋಕಗಳೆರಡರಲ್ಲಿಯೂ—ವಿಸ್ಮಯವು ಚಮತ್ಕಾರವೆಂಬ ವಿಶಾಲಾರ್ಥದಲ್ಲಿ ಓತಪ್ರೋತವಾಗುವ ಮೂಲಕ ಸರ್ವತ್ರ ಸಮಾಸ್ವಾದ್ಯವೆನಿಸಿದೆ. ಅಲ್ಲದೆ ವಿಸ್ಮಯ/ಅದ್ಭುತವೂ ಹಾಸ/ಹಾಸ್ಯದಂತೆ ಸಹಸಾ ದೀಪ್ತ (ಒಡನೆಯೇ ಸ್ಫುರಿಸಿ ಅಸ್ತಂಗತಿಸುವಂಥದ್ದು). ಹೀಗಾಗಿ ಉಭಯಸಾಮ್ಯವುಂಟು. ದಿಟವೇ, ಇಂಥ ಸಾಮ್ಯಗಳ ನಡುವೆಯೂ ಮೂಲಭೂತವೂ ಮಹತ್ತರವೂ ಆದ ಒಂದು ವ್ಯತ್ಯಾಸವಿದೆ: ಹಾಸ/ಹಾಸ್ಯದಲ್ಲಿ ಆಸ್ವಾದವು ನಮ್ಮ ಹೆಮ್ಮೆಯ ಹೆಚ್ಚಳದಿಂದ ಹೊಮ್ಮಿದರೆ ವಿಸ್ಮಯ/ಅದ್ಭುತದಲ್ಲಿದು ನಮ್ಮ ಹೆಮ್ಮೆಯ ಹುಟ್ಟಡಗುವುದರಿಂದ ಚಿಮ್ಮುತ್ತದೆ, ಮತ್ತಿದು ನಮ್ಮ ಅಂಗೀಕಾರದಿಂದಲೇ ಆಗುವ ಕಾರಣ ಯಾವುದೇ ಬಗೆಯ ಸ್ವಾಭಿಮಾನವಿನಾಶದ ಖೇದವಿರದು. ಆದುದರಿಂದ ವಿಸ್ಮಯ ಮತ್ತು ಅದ್ಭುತಗಳ ವಿವೇಚನೆಯು ಪ್ರತ್ಯೇಕವಾಗಿ ಮತ್ತೂ ವಿಶದವಾಗಿ ಸಾಗಬೇಕಿದೆ. ಸದ್ಯದಲ್ಲಿಯಾದರೋ ಆ ವಿಸ್ತರಕ್ಕೆ ಅವಕಾಶವಿಲ್ಲ. ಹೀಗಾಗಿ ಪ್ರಕೃತವನ್ನೇ ಮುಂದುವರಿಸೋಣ.

ಹಾಸಭಾವವು ತನ್ನಂತೆಯೇ ಲೋಕದಲ್ಲಿ ಆಸ್ವಾದ್ಯವೆನಿಸಿ, ಕಲೆಯಲ್ಲಿ ಆವಿರ್ಭವಿಸುವ ಹಾಸ್ಯರಸದಷ್ಟೇ ಚರ್ವಣಯೋಗ್ಯವೆನಿಸಲು ಕಾರಣ ಉಭಯತ್ರ ಸಲ್ಲುವ ಸುಖೈಕಸ್ವರೂಪವೆಂಬ ಅಂಶವನ್ನು ನಾವೀಗಾಗಲೇ ಕಂಡೆವಷ್ಟೆ; ಇದು ಸಾಧ್ಯವಾಗಿರುವುದು ಮುಖ್ಯವಾಗಿ ಹಾಸತ್ವದ ಮೂಲಸ್ವಭಾವದಿಂದಾಗಿಯೇ. ಯಾವುದೇ ಸಂದರ್ಭದಲ್ಲಿ ನಮಗೆ ನಗೆಯುಕ್ಕಬೇಕೆಂದರೆ ನಾವು ಆ ಸಂನಿವೇಶದಿಂದ ನಮ್ಮನ್ನು ಆ ಮಟ್ಟಿಗೆ ಹೊರಗಿರಿಸಿಕೊಳ್ಳಬೇಕಷ್ಟೆ! ಇದೊಂದು ರೀತಿಯಲ್ಲಿ “ವದತೋ ವ್ಯಾಘಾತಃ” (ನುಡಿಯಲು ಮೊದಲಿಡುವಾಗಲೇ ನಡೆಗೇಡು) ಎಂದು ತೋರುವುದಾದರೂ ವಾಸ್ತವ; ಸಕಲರ ಅನುಭವಸಿದ್ಧಸತ್ಯ ಕೂಡ. ಆಯಾ ಸಂದರ್ಭಗಳಲ್ಲಿ ತೋರಿಕೊಳ್ಳುವ ಅಪಸವ್ಯಗಳಿಗೆ, ವೈಕಟ್ಯಗಳಿಗೆ ಸಾಕ್ಷಿಯಾಗಬೇಕೆಂದರೆ ಅಲ್ಲಿ ಆ ಮುಂದೆ ಪರಿಣಮಿಸಬಹುದಾದ ಯಾವುದೇ ಬಗೆಯ ಹಿತಾಹಿತಫಲಗಳಿಗೂ ತಾನು ಬಾಧ್ಯನಲ್ಲ, ಭಾಗಿಯೂ ಅಲ್ಲವೆಂಬ ಪ್ರಜ್ಞೆಯುದಿಸಬೇಕು. ಇದು ಸಹೃದಯರಿಗೆ ಯಾವುದೇ ಕಲೆಯ ರಸಾಸ್ವಾದಕಾಲದಲ್ಲಿ ತಾನೇತಾನಾಗಿ ಸಿದ್ಧಿಸುವ ಸ್ಥಿತಿ. ಹೀಗಾಗಿ ಹಾಸವೆಂಬ ಭಾವವಾಗಲಿ, ತನ್ಮೂಲಕ ಜನಿಸುವ ಹಾಸ್ಯವೆಂಬ ರಸವಾಗಲಿ ತಮ್ಮಂತೆ ತಾವೇ ಆಸ್ವಾದ್ಯವಾಗುವುದೊಂದು ಲೋಕಲೀಲೆ, ಕಲಾಚೋದ್ಯ. ಅಂದರೆ ಅದೊಂದರ್ಥದಲ್ಲಿ ನಗೆಯು ಯಾವುದೇ ರಸಸೂತ್ರಸಿದ್ಧಿಗೆ ಕಾಯುವುದಿಲ್ಲ; ಅದು ಸರ್ವತಂತ್ರಸ್ವತಂತ್ರವೆಂದಾಯಿತು!

ಆದರೆ ಇಲ್ಲಿವುದು ಒಂದೇ ತೊಡಕು; ಅದೆಂದರೆ ಲೋಕಸ್ತರದಲ್ಲಿಯ ಹಾಸಭಾವವನ್ನಾಸ್ವಾದಿಸಲು ಅವಶ್ಯವಾದ ಇಂಥ ಸಾಕ್ಷಿಪ್ರಜ್ಞೆಯ ಹುಟ್ಟಿಗಾಗಿ ನಮ್ಮಲ್ಲಿ—ಈ ಮುನ್ನವೇ ಹೇಳಿದಂತೆ—ಮಿಗಿಲಾದ ಹೆಮ್ಮೆಯು ಹೊಮ್ಮಬೇಕು. ಅಂದರೆ ನಾವು—ಪ್ರಕೃತ ಹಾಸಾಸ್ಪದವಾದ ಆ ಸಂನಿವೇಶದಲ್ಲಿ ಸಕ್ರಿಯವಾಗಿ, ಸಾವೇಶವಾಗಿ  ಪಾಲ್ಕೊಂಡ—ಮಿಕ್ಕೆಲ್ಲರಗಿಂತಲೂ ಮಿಗಿಲಾಗಿ ವಿಶಿಷ್ಟರಾದ ವ್ಯಕ್ತಿಗಳೆಂಬ ಪ್ರಜ್ಞೆಯು ನಮ್ಮಲ್ಲಿ ಆವಿರ್ಭವಿಸಬೇಕು. ಈ ಅರ್ಥದಲ್ಲಿ ಕಂಡಾಗ ನಗೆಯೆನ್ನುವುದು ಅದೆಷ್ಟೇ ಸೊಗಸಾದ ಅನುಭವವಾದರೂ ಅದು ಆತ್ಯಂತಿಕವಾಗಿ ನಮ್ಮ ಹೆಮ್ಮೆ-ಹೆಚ್ಚಳಗಳ, ಮಾನಾಭಿಮಾನಗಳ ಮೂಲದಿಂದಲೇ ಹೊಮ್ಮುವ ಹರ್ಷದ ಚಿಲುಮೆಯಾದ ಕಾರಣ ಅಲ್ಲಿ ಅಹಂಕಾರದ ಪಾರಮ್ಯ ಅಧಿಕಾಧಿಕ. ಆದುದರಿಂದಲೇ ಸಾಹಿತ್ಯದಲ್ಲಿ ನಗೆಯನ್ನುಂಟುಮಾಡುವ ಸಾಮಗ್ರಿಗಳ ಪೈಕಿ ಕಟಕಿ, ಅಣಕು, ಗೇಲಿ, ಲೇವಡಿ, ವಿಡಂಬನೆ, ವಿಕಟಾನುಕರಣೆ, ಗಾಂಭೀರ್ಯಾಭಾಸಗಳೇ ಮುಂತಾದ “ನಿನಗಿಂತ ನಾನು ಮೇಲು” ಎಂಬ ಗೂಢಸಂದೇಶಗರ್ಭಿತವಾದ ವರಸೆಗಳೇ ಮೆರೆಯುತ್ತವೆ; ಪರಮಯಶಸ್ವಿಯೂ ಆಗುತ್ತವೆ.

ಈ ಅರ್ಥದಲ್ಲಿ ಕಂಡಾಗ ಹಾಸಭಾವವು ಹಾಸ್ಯವೆಂಬ ರಸತ್ವಕ್ಕೆ ಏರುವುದೇ ಇಲ್ಲವೇ ಎಂಬ ಸಂದೇಹವೂ ಬರುವುದುಂಟು!  ಯಾವುದೇ ಭಾವವು ರಸತ್ವವನ್ನು ಗಳಿಸಬೇಕೆಂದರೆ ಅದಕ್ಕೆ ಆಸ್ವಾದತ್ವವು ಸಿದ್ಧಿಸಬೇಕು. ಹಾಸವಾದರೋ ತನ್ನ ಭಾವಸ್ತರದಲ್ಲಿಯೇ ಇಂಥ ಆಸ್ವಾದಸಾಧ್ಯತೆಯ ಕಾರಣ ಸ್ಥಾನ-ಮಾನಬಲಗರ್ವಿತನಾದ ನಟನೋ, ನಿರ್ಮಾಪಕನೋ ತನ್ನ ಮಗನನ್ನು ಬೆಳ್ಳಿಯ ತೆರೆಯ ಮೇಲೆ ಅವಲೀಲೆಯಿಂದ ಮಿಂಚಿಸುವ ಹಾಗೆ ತನ್ನಿಂದ ಹುಟ್ಟಿದ ಹಾಸ್ಯವನ್ನು ರಸದ ಮಟ್ಟಕ್ಕೆ ಮುಟ್ಟಿಸುತ್ತದೆ; ಅಥವಾ ಅದು ಹಾಸ್ಯವೆಂಬ ಸ್ಥಿತಿಯನ್ನೇ ಸೇರುವ ಗೋಜಿಲ್ಲದೆ ತನ್ನಂತೆ ತಾನೇ ರಸವೆಂಬ ಆಗ್ಗಳಿಕೆಯನ್ನು ಗಳಿಸುತ್ತದೆ.

ಈ ಕಾರಣದಿಂದಲೇ ಕೆಲವರು ಹಾಸ್ಯವೆಂಬುದೊಂದು ಬೌದ್ಧಿಕರಂಜನೆಯೆಂದೂ ಅದಕ್ಕೆ ಹಾರ್ದಿಕಸತ್ತ್ವವಿಲ್ಲವೆಂದೂ ತರ್ಕಿಸುತ್ತಾರೆ. ಮತ್ತೆ ಕೆಲವರು ಹಾಸ್ಯವು ಬಾಳು ಮತ್ತು ಕಲೆಗಳ ಮಧ್ಯದಲ್ಲೆಲ್ಲಿಯೋ ಕಳೆದುಹೋದ ಸಂಗತಿಯೆಂದೂ ಬಗೆಯುತ್ತಾರೆ. ಇನ್ನು ಕೆಲವರು ಹಾಸ್ಯವೆಂಬುದು ಕಲೆಯೇ ಅಲ್ಲವೆಂಬ ತೀರ್ಮಾನಕ್ಕೂ ಬರುತ್ತಾರೆ. ಆದರೆ ಇವರ ಅಭಿಪ್ರಾಯಗಳಲ್ಲಿ ಅದೆಷ್ಟೇ ಸತ್ಯವಿದ್ದರೂ ಒಂದಂತೂ ದಿಟ, ಹಾಸ/ಹಾಸ್ಯಕ್ಕೆ ಆಸ್ವಾದವಿರುವುದು ಸರ್ವಾನುಭೂತಸತ್ಯ. ಇಂಥ ಹಾಸ/ಹಾಸ್ಯವು ಯಾವುದೇ ಕಲಾಮಾಧ್ಯಮದ ಮೂಲಕ ಹೊಮ್ಮುವಾಗ ಯಾವೆಲ್ಲ ಎಡೆಗಳಲ್ಲಿ ಆಸ್ವಾದವುಂಟೋ ಅಲ್ಲೆಲ್ಲ ರಸಸಂಭವನೀಯತೆಯು ಉಂಟೇ ಉಂಟೆಂಬುದು ನಿರ್ವಿವಾದ. ಮಾತ್ರವಲ್ಲ, ಹಾಸ್ಯವೆಂಬುದು ಕಲೆಯೇ ಅಲ್ಲವೆಂಬ ನಿಲವಿಗೆ ಪ್ರತಿಯಾಗಿ ಸಕಲಭಾವಗಳ ಪೈಕಿ ಅದೊಂದು ಮಾತ್ರ ತಾನು ಲೋಕಸತ್ತೆಯಲ್ಲಿದ್ದರೂ ಅಲೋಕಸತ್ತೆಯ ಸ್ವರೂಪವೆನಿಸಿದ ಆಸ್ವಾದವನ್ನು ಆವಿಷ್ಕರಿಸಿ, ತನ್ಮೂಲಕ ಇಹಜಗತ್ತಿನಲ್ಲಿದ್ದೇ ರಸತ್ವವನ್ನು ಸಾಧಿಸಿಕೊಂಡಿದೆಯೆಂದು ಸಮರ್ಥಿಸಬಹುದು!

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...