Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...
ಸಂಸ್ಕೃತ-ಸಂಸ್ಕೃತಿ
ಸಾವಿರದ ಒಂಭೈನೂರ ಐವತ್ತಾರು-ಐವತ್ತೇಳರ ಅವಧಿಯಲ್ಲಿ ಕೇಂದ್ರ ಸರ್ಕಾರವು ಸಂಸ್ಕೃತದ ಸರ್ವವಿಧವಾದ ಸ್ಥಿತಿಗತಿಗಳು ಭಾರತದಲ್ಲಿ ಹೇಗಿವೆಯೆಂದು ತಿಳಿಯಲು ಲೋಕವಿಖ್ಯಾತಭಾಷಾತಜ್ಞರಾದ ಡಾ|| ಸುನೀತಿಕುಮಾರಚಟರ್ಜಿಯವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತು. ಇದರಲ್ಲಿ ಡಾ || ವಿ. ರಾಘವನ್, ಪಂಡಿತರಾಜ ವಿ. ಎಸ್. ರಾಮಚಂದ್ರ ಶಾಸ್ತ್ರಿ, ಪ್ರೊ|| ಎಸ್. ಕೆ. ಡೇ ಮುಂತಾದ ಪ್ರಗಲ್ಭಾವಿದ್ವಾಮ್ಸರು ಸದಸ್ಯರಾಗಿದ್ದರು. ಅವರುಗಳೆಲ್ಲ ಇಡಿಯ ದೇಶದ ಉದ್ದಗಲಕ್ಕೂ ಒಂದು ವರ್ಷ ಸುತ್ತಾಡಿ ನೂರಾರು ಸಂಸ್ಥೆಗಳನ್ನು ಸಾವಿರಾರು ವಿದ್ವಾಮ್ಸರನ್ನೂ ಅನೇಕ ಗಣ್ಯರನ್ನೂ ಸಂಪರ್ಕಿಸಿ ಸಂಶೋಧಿಸಿ ಒಪ್ಪಿಸಿದ ಮುನ್ನೂರು ಪುಟಗಳ ಬೃಹದ್ಗಾತ್ರದ ಗ್ರಂಥರೂಪದ ವರದಿಯನ್ನೋದಿದರೆ ಎಂಥ ಸಂಸ್ಕೃತದ್ವೇಷಿಯೂ ಬೆರಗಾಗುತ್ತಾನೆ, ಕರಗಿ ಹೋಗುತ್ತಾನೆ. ಆ ವರದಿ ಹೇಳುತ್ತದೆ: ಇಡಿಯ ಭಾರತದೇಶದಲ್ಲಿ ನಾವು ಕಂಡ ಅತ್ಯಂತ ವಿಸ್ಮಯಾವಹ ಸಂಗತಿಯೆಂದರೆ ಅದೆಂಥ ಅಬೋಧಮಗ್ಧಜನತೆಗೂ ಸಂಸ್ಕೃತ ಬಗೆಗಿರುವ ಪ್ರೀತಿ; ಆರಾಧನೆಯೇಮ್ಬಷ್ಟರ ಮಟ್ಟಿಗೆ ಗುರವ ಹಾಗೂ ಅದರ ಬಗೆಗೆ ಅರಿವಿಲ್ಲದಂತೆಯೇ ಮೆಯ್ಗೂಡಿರುವ ವೈದಿಕಸಂಸ್ಕೃತಿಯ ಸಾರಸರ್ವಸ್ವ -- ಎಂದು. ಇದು ದಿಟ. ಇತ್ತಿಚಿನ ದಿನಗಳಲ್ಲಿ ಕೂಡ ನನ್ನ ದೇಶ ಸಂಚಾರದಲ್ಲಿ, ನನ್ನ ಗೆಳೆಯರನೇಕರ ದೇಶಾಟನ-ಪರಿಶೀಲನಗಳಲ್ಲಿ ಕಂಡುಕೊಂಡ ಸತ್ಯ ಇದೇ ಆಗಿದೆ. ಸವಕಳುಮಾತೆಂಬಂತೆ ಕಂಡರೂ ಭಾರತಸ್ಯ ಪ್ರತಿಷ್ಠೇ ದ್ವೇ ಸಂಸ್ಕೃತಂ ಸಂಸ್ಕ್ರುತಿಸ್ತಥಾ -- (ಭಾರತದ ಪ್ರತಿಷ್ಠೆಗಳು ಎರಡು -- ಅದರ ಸಂಸ್ಕೃತಿ ಮತ್ತು ಸಂಸ್ಕೃತಭಾಷೆ) ಎಂಬುದು ದಿಟ.
ಹಿಂದೊಮ್ಮೆ ಆಚಾರ್ಯ ಬಿ.ಎಂ,ಶ್ರೀ,ಯವರು ಸಂಸ್ಕೃತಿಯು ಸಂಸ್ಕೃತದ ಹೆಂಡತಿಯೇನಲ್ಲ ಎಂಬಂಥ ಮೂದಲೆಯ ಮಾತನ್ನಾದಿದ್ದುಂಟು. ಆದರೂ ಇದು ಸತ್ಯ -- ಸಂಸ್ಕೃತದಲ್ಲಿ ಅಡಕವಾಗಿರುವ ಬಹಳಷ್ಟು ವಿಚಾರಗಳು ನಮ್ಮ ಸಮಗ್ರಭಾರತೀಯ ಸಂಸ್ಕೃತಿಯ ಮೂಲಸೂತ್ರಸ್ಸುಗಳಾಗಿವೆ. ಇದಕ್ಕೆ ಯಾವ ಪ್ರಾಂತೀಯಸಂಸ್ಕೃತಿಯೂ ಭಾಷೆಯೂ ಹೊರತಲ್ಲ. ಅಷ್ಟೇಕೆ, ಈಚೆಗೆ ಹೇಳುವ ಉಪಸಂಸ್ಕ್ರುತಿ, ಪ್ರತಿಸಂಸ್ಕೃತಿ, ಯಜಮಾನಸಂಸ್ಕೃತಿ, ಅಧೀನಸಂಸ್ಕೃತಿ ಮುಂತಾದ ಸಕಲಾಂಶಗಳಿಗೂ ಆಡಿಮೂಲವಾದ ಅಪಾರತತ್ತ್ವ-ಪ್ರಯೋಗಗಳು ನಮಗೆಲ್ಲ ಬೆರಗು ತರಿಸುವಷ್ಟು ಮೌಲಿಗಗುಣ-ಗಾತ್ರ ಪ್ರಮಾಣಗಳಲ್ಲಿ ಸಂಸ್ಕ್ರುತಭಾಷೆಯೊಳಗೆ ನಿಕ್ಷಿಪ್ತವಾಗಿವೆ. ನನ್ನ ಈ ಮಾತನ್ನು ಸರ್ವವಿಧದಿಂದಲೂ ಸರಿಯೆಂದು ಸಾಕ್ಷ್ಯಸಂಪನ್ನವೆಂದೂ ನಾನು ಎಂಥ ವಿರೋಧದ ಎದುರೂ ಯಾವ ವೇದಿಕೆಯಲ್ಲಾದರೂ ಸಾಬೀತುಗೋಳಿಸಬಲ್ಲೆನೆಂದು ದೃಢವಿಶ್ವಾಸದಿಂದ ಹೇಳುತ್ತಿದ್ದೇನೆ. ಈ ಶಕ್ತಿಯಾದರೂ ನನಗೆ ದಕ್ಕಿರುವುದು ಸಂಸ್ಕೃತದಿಂದಲೇ. ಇಂಥವರು ಮತ್ತೂ ಸಹಸ್ರಸಹಸ್ರಸಂಖ್ಯಾಕರು ಇದ್ದಾರೆಂದು ನನ್ನ ನಂಬುಗೆ.
ತುಂಬ ಮುನ್ನವೇ ಮಹಾತ್ಮ ಗಾಂಧಿಯವರು ಹೇಳಿದ್ದರು: ಕರ್ಣಾಟಕವು ಕನ್ನಡಿಗರಿಗೆ ಗುಜರಾತ್ ಗುಜರಾತಿಗಳಿಗೆ, ಬಂಗಾಳವು ಬಂಗಾಳಿಗಳಿಗೆ ಸೇರಿದರೆ ಭಾರತವು ಯಾರಿಗೆ ಸೇರಬೇಕು? ಎಂದು. ಇದೇ ಮಾತಿನ ವಿಸ್ತರಣವಾಗಿ ಎಲ್ಲ ಪ್ರಾಂತೀಯಭಾಷೆಗಳೂ ಆಯಾ ಪ್ರಾಂತೀಯರಿಗೆ ಸೇರಿದರೆ ಸಂಸ್ಕೃತವು ಯಾರಿಗೆ ಸೇರಬೇಕು? ಎಂದೆನ್ನಬಹುದು. ಕುಹಕಿಗಳು ಯಾರಿಗೂ ಸೇರಿಲ್ಲ, ಸೇರಬೇಕಿಲ್ಲ ಎನ್ನಬಹುದು. ಆದರೆ ವಸ್ತುತಃ ಸಂಸ್ಕೃತವು ಭಾರತಕ್ಕೆ ಸೇರುತ್ತದೆ. ಭಾರತವೆಂಬ ರಾಷ್ಟ್ರವಿಶೇಷದ ಕಲ್ಪನೆಯು ಸಂಸ್ಕೃತವಿಲ್ಲದೆ ಇಲ್ಲ. ಇದನ್ನೂ ಗಾಂಧೀಜಿ ಹೇಳಿದ್ದಾರೆ -- without the study of Sanskrit one cannot become a true Indian and a true learned man.
ಅಷ್ಟೇಕೆ, ಭಾರತೀಯ ಸಂಸ್ಕೃತಿಯ ಬಗೆಗೆ ಅನುದಾರಿಯೇ ಆಗಿದ್ದು ಪಾಷ್ಚಾತ್ಯಚಿಂತನೆಗೆ ಹೆಚ್ಚಾಗಿ ಮನದೆತ್ತವರೆಂದು ಹೆಸರಾದ ನೆಹರೂ ಅವರೇ If I was asked what is the greatest treasure which India possesses and what is her finest heritage, I would answer unhesitatingly that it is the Sanskrit language and literature and all that it contains. This is a magnificent inheritence and so long as this endures and influences the life of our people, so long the basic genius of India continues ಎಂದಿದ್ದಾರೆ.
ತುಂಬ ಜನರಿಗೆ ತಿಳಿಯದು, ಭಾರತರತ್ನ ಡಾ|| ಬಿ. ಆರ್. ಅಂಬೇಡ್ಕರರು ೧೯೪೯ರಲ್ಲಿ ಭಾರತದ ಕಾನೂನು ಸಚಿವರಾಗಿದ್ದಾಗ ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕೆಂದು ತೀವ್ರಯತ್ನನಡೆಸಿದ್ದು! ಇದಕ್ಕೆ ತಮಿಳುನಾದಿನಂಥ 'ಸಂಸ್ಕೃತವಿರೋಧಿ' ರಾಜ್ಯದಿಂದಲೂ ತುಂಬ ಸಹಕಾರ ದೊರೆತಿತ್ತು. ಸೆಪ್ಟೆಂಬರ್ ಹನ್ನೊಂದು, ೧೯೪೯ರಂದು ಸ್ವಯಂ ಅಂಬೇಡ್ಕರರು 'What is wrong with Sanskrit?' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ದಾಖಲೆಗಳಿವೆ. ಮಾತ್ರವಲ್ಲ, ಈ ಬಗೆಗೆ ಸಂವಿಧಾನದ ತಿದ್ದುಪಡಿಗೆ ಕರಡನ್ನೂ ಸಿದ್ಧಪಡಿಸಿದ್ದರು. ಆದರೆ ಅವರ ಕೆಲವರು ಅನುಯಾಯಿಗಳಿಂದಲೇ ವಿರೋಧ ಬಂದಿತು. ಇಂಥ ವಿರೋಧಿಗಳಲ್ಲಿ ಅಗ್ರಣಿಗಳಾಗಿದ್ದ ಶ್ರೀ ಬಿ. ಪಿ. ಮೌರ್ಯ ಅವರು ಇತ್ತೀಚಿಗೆ ತಮ್ಮ ಪತ್ರವೊಂದರಲ್ಲಿ (ದಿನಾಂಕ ೧೪.೨.೨೦೦೧) ಈ ಬಗೆಗೆ ಪ್ರಸ್ತಾವಿಸುತ್ತಾ 'Because of my inexperience I opposed the resolution' (ನನ್ನ ಅನನುಭವದ ಕಾರಣ ನಾನು ಈ ಗೊತ್ತುವಳಿಯನ್ನು ವಿರೋಧಿಸಿದೆ) ಎಂದಿರುವುದಲ್ಲದೆ ಸಂಸ್ಕೃತದ ಹಿರಿಮೆಗರಿಮೆಗಳನ್ನು ಕೊಂಡಾಡಿ ನಡೆದುಹೋದ ಘಟನೆಯ ಮಹತ್ತ್ವವನ್ನು ನೆನೆದಿದ್ದಾರೆ. ಭಾರತವು ಸ್ವಾತಂತ್ರ್ಯಾನಂತರ ರಾಷ್ಟ್ರಭಾಷೆ ಯಾವುದಾಗಬೇಕೆಂದು ಪರದಾಡುತ್ತಿದ್ದಾಗ ಅನೇಕ ವಿದೇಶೀವಿದ್ವಾಂಸರು ಬೆರಗಾಗಿ ಕೇಳಿದ್ದರು -- ಸಂಸ್ಕೃತವಿರುವಾಗ ಇದೇಕಿಂಥ ಹಾಸ್ಯಾಸ್ಪದವೂ ಅರ್ಥಹೀನವೂ ಆದ ಹುಡುಕಾಟ? ಎಂದು.
ವೇದಗಳಲ್ಲಿ ವಾಕ್ಕು ಹೇಳುತ್ತದೆ -- ಅಹಂ ರಾಷ್ಟ್ರೀ ಸಂಗಮನೀ ವಸೂನಾಂ (ಋಗ್ವೇದ ಸಂಹಿತಾ ೧೦.೧೨೫.೩) -- ಎಂದು. ಇದರರ್ಥವಿಷ್ಟೇ, ಸುಸಂಸ್ಕೃತವಾಣಿಯೇ ರಾಷ್ಟ್ರ. ಅದೇ ಎಲ್ಲ ಸೌಭಾಗ್ಯಗಳ ಸಾಧನ. ತಮಿಳಿನ ಆದಿಮಗ್ರಂಥ ತೊಲ್ಕಾಪ್ಪಿಯಂನ ವ್ಯಾಖ್ಯೆಯು ವಡಸೊಲ್ ಎಲ್ಲಾತ್ ತೆಯತ್ತಿರ್ಕುಂ ಪೂದುವಾಕಲಾಣುಂ (ಸಂಸ್ಕೃತವು ದೇಶದ ಎಲ್ಲ ಪ್ರಾಂತಗಳಿಗೂ ಸಮಾನವಾಗಿದೆ) ಎಂದು ಸಾರಿದೆ. ಇಂಥ ಉದ್ಧರಣಗಳಿಂದ, ಘಟನಾವಳಿಗಳಿಂದ ಹತ್ತಾರು ಗ್ರಂಥಗಳನ್ನೇ ತುಂಬಬಹುದಾದರೂ ನಮ್ಮ ಹೆಮ್ಮೆಯ ಕನ್ನಡದ ಕವಿವರ್ಯ ಕುವೆಂಪು ಅವರ 'ಸಂಸ್ಕೃತಮಾತೆ' ಎಂಬ ಕವಿತೆಯ ಕೆಲವು ಸಾಲುಗಳನ್ನು ಉದ್ಧರಿಸಿ ಮುಗಿಸುವೆ: ಪೃಥಿವಿಯಾ ಪ್ರಥಮಪ್ರಭಾತದಲಿ, ಇತಿಹಾಸದೃಷ್ಟಿಗಸ್ಪಷ್ಟ ಅಜ್ಞಾತಪ್ರಾಚೀನದಲಿ, ಚಿರಧವಲಹಿಮಶೈಲ ಪೃಥುಲೋರುಪ್ರೇಂಖದಲಿ ನವಜಾತಶಿಶುವಾಗಿ ನಲಿದ ಮಂಗಲಮಯೀ! ಆರ್ಯಮಾತೆಯ ಮೊದಲ ತೊದಲ ನಾಗರಿಕತೆಯ ಸಾಮಗಾನದ ವಾಣಿಯಿಂದ ಮೂಡಿನ ಮೂರ್ತಿ ನೀನೆಲೌ ಸಂಸ್ಕೃತದ ವಾಗ್ದೇವಿ! ... ಆರ್ಯರಾಗಿಹ ನಾವು ನಿನ್ನ ಮೊಲೆವಾಲ ಸವಿಯಿಲ್ಲದೆಯೆ ಬದುಕುವೆವೆ? ನೀನಿಲ್ಲದೆಲ್ಲಿಯದು ಭಾರತಖಂಡದ ಬದುಕು?
ಇಂಥ ಸಂಸ್ಕೃತದ ಸಂಸ್ಮರಣದಿನವೆಂದು ಶೀಮತಿ ಇಂದಿರಾಗಾಂಧಿಯವರ ನೇತೃತ್ವದಲ್ಲಿ ಕೇಂದ್ರಸರ್ಕಾರವು ಹಿಂದೆಯೇ ಶ್ರಾವಣಪೂರ್ಣಿಮೆಯನ್ನು 'ಸಂಸ್ಕೃತದಿವಸ' ಎಂದು ಸಾರಿದೆ. ಇದು ಬರಿಯ ಸಂಸ್ಮರಣದಿನವಲ್ಲ, ಸಂಸ್ಕೃತದೀಕ್ಷಾದಿನ. ಇಡಿಯ ಬಾಳೆಲ್ಲ ಅದರ ಸಂವಿದಾನಂದದಲ್ಲಿ ಸಾಗಲೆಂದು ಬದ್ಧಕಂಕಣರಾಗಿ ಸಿದ್ಧಸಂಕಲ್ಪರಾಗಿ ಪ್ರಸಿದ್ಧವಾದ ಶ್ರಾವಣಿ ಎಂಬ ಈ ತಿಥಿಯು ಮಹಾರ್ಥಪೂರ್ಣಪುಣ್ಯದಿನ. ಶ್ರವಣ ಅಥವಾ ಕೇಳ್ಮೆಯ ದಿನವಿದು. ಉಪಾಕೃತಾ ವೈ ವೇದಾಃ (ತಿಳಿವಿನ ಆರಂಭಕ್ಕೆ ತೊಡಗಿದೆವು) ಎಂದು ಜ್ಞಾನರಾಶಿಯನ್ನು ನಮ್ಮದನ್ನಾಗಿಸಿಕೊಳ್ಳುವ ಧೀಯಜ್ಞದ ಶುಭದಿವಸವಿದು. ಇದೀಗ ಕೇಂದ್ರಸರ್ಕಾರವು ಇಡಿಯ ಈ ಸಪ್ತಾಹವನ್ನೇ ಸಂಸ್ಕೃತಸಪ್ತಾಹವೆಂದು ಘೋಷಿಸಿದೆ. ದೇಶಾದ್ಯಂತ ಸಂಸ್ಕ್ರುತೋತ್ಸವ, ಸಂಸ್ಕೃತಸೇವೆ, ಸಂಸ್ಕೃತಸಂಸ್ಕೃತಿ ತಾಂಡವಿಸಬೇಕಿದೆ.
ಇಂದು ಸಂಸ್ಕೃತವನ್ನು ಶಾಲಾಸ್ತರದಲ್ಲಿ ಓದುವ ಮೂರು ಕೋಟಿ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ಹನ್ನೊಂದು ಸಂಸ್ಕೃತವಿಶ್ವವಿದ್ಯಾಲಯಗಳೇ ಇವೆ, ಇನ್ನೂರೈವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತದ ಸ್ನಾತಕ-ಸ್ನಾತಕೋತ್ತರವ್ಯಾಸಂಗ-ಸಂಶೋಧನೆ ಸಾಗುತ್ತಿವೆ, ನಮ್ಮ ದೇಶದಲ್ಲಿ ಮಾತ್ರವಲ್ಲ, ನಲವತ್ತಕ್ಕೂ ಹೆಚ್ಚು ವಿದೇಶಗಳಲ್ಲಿ ಸಂಸ್ಕೃತಾಭ್ಯಾಸ ಸಾಗಿದೆ, ಸುಮಾರು ಅರವತ್ತು ದೈನಿಕ-ಸಾಪ್ತಾಹಿಕ-ಪಾಕ್ಷಿಕ-ಮಾಸಿಕಪತ್ರಿಕೆಗಳು ಸಂಸ್ಕೃತದಲ್ಲಿಂದು ಪ್ರಚಲಿತವಾಗಿವೆ. ಹತ್ತುಸಾವಿರಕ್ಕೂ ಹೆಚ್ಚು ಸಂಸ್ಕೃತಲೇಖಕರು ಇಂದು ಇದ್ದಾರೆ! ಸುಮಾರು ಐದು ಸಾವಿರಕ್ಕೂ ಮಿಕ್ಕ ಸಂಸ್ಕೃತಪಾಠಶಾಲೆಗಳಿವೆ. ಲಕ್ಷಾಂತರ ಜನರು ಈ ಭಾಷೆಯನ್ನು ಮಾತೃಭಾಷೆಯಂತೆ ಲೀಲಾಜಾಲವಾಗಿ ಬಳಸುತ್ತಿದ್ದಾರೆ. ಇಂತಿರಲು ಸಂಸ್ಕೃತ -- ನಮ್ಮ ಹೆಮ್ಮೆ; ಅಳಿದೀತೇ? ಇಲ್ಲ, ಖಂಡಿತವಾಗಿ ಇಲ್ಲ!
From the anthology ಭಾಷಾಭೃಂಗದ ಬೆನ್ನೇರಿ.