ಅಧ್ಯಾತ್ಮ ಎಂದರೆ ಸೃಷ್ಟಿಯಲ್ಲಿ ಅಭಿವ್ಯಕ್ತಗೊಂಡಿರುವ ಚೆಲುವು, ಬದುಕಿನಲ್ಲಿ ಅಂತರ್ಗವಾಗಿರುವ ಚೆಲುವು, ಒಲವು ಮತ್ತು ಇತರ ರಾಗ ಭಾವಗಳಿಗೆಲ್ಲ ವಿಮುಖವಾಗಿ ಧ್ಯಾನ-ತಪಸ್ಸುಗಳಲ್ಲಿ ನಿರತರಾಗಿ, ವೈಯಕ್ತಿಕ ಮೋಕ್ಷಕ್ಕೆ ಪ್ರಯತ್ನಿಸುವುದು ಮಾತ್ರವಲ್ಲ. ಬದುಕಿನ ಜಂಜಡಗಳಿಂದ ಜರ್ಜರಿತವಾದ ಮಾನವ ಚೇತನವನ್ನು ಉನ್ನತ ಸ್ತರಕ್ಕೆ ಏರಿಸಿ ಈ ಸೃಷ್ಟಿಯಲ್ಲಿನ ವ್ಯಕ್ತ ಮತ್ತು ಅವ್ಯಕ್ತ ಚಲುವನ್ನು , ಇದರ ಹಿಂದಿರುವ ಸೃಷ್ಟಿಕರ್ತನ ಅದ್ಭುತ ಚೆಲುವು-ಚೈತನ್ಯಗಳನ್ನು ಅರಗಳಿಗೆಯಾದರೂ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವ ರಸದೃಷ್ಟಿಯನ್ನು ಜಾಗೃತಗೊಳಿಸುವ ಅದ್ಭುತಶಕ್ತಿಯೇ ಅಧ್ಯಾತ್ಮ ಎನಿಸುತ್ತದೆ. ಇಂತಹ ಅಧ್ಯಾತ್ಮ ರಸ-ದರ್ಶನ ಪು.ತಿ. ನರಸಿಂಹಾಚಾರ್ಯರ ಕಾವ್ಯದಲ್ಲಿ ಓತ-ಪ್ರೋತವಾಗಿ ಕಂಡುಬರುತ್ತದೆ.
ಬೆಳಗು ಬೈಗುಗಳಲ್ಲಿ ಸೂರ್ಯೋದಯ,ಸೂರ್ಯಾಸ್ತ, ಚಂದ್ರೋದಯಗಳಿಂದ ಪ್ರಕೃತಿ ಚಲುವನ್ನು ನಮ್ಮ ಕಣ್ಣೆದುರು ತೆರೆದಿಡುತ್ತಾಳೆ. ನೂರು ನೂರು ಮರಗಳಿಂದ ಸಾವಿರ ಸಾವಿರ ಹಕ್ಕಿಗಳು ವಿಧವಿಧವಾದ ಇನಿದನಿಯಲ್ಲಿ ಹಾಡುತ್ತವೆ. ನದಿಗಳು ಕಲ-ಕಲ ನಿನದಿಸುತ್ತಾ ಪ್ರವಹಿಸುತ್ತವೆ. ಸುಳಿಗಾಳಿಗೆ ಮರದೆಲೆಗಳು ಮರ್ಮರ ಧ್ವನಿಗೈಯ್ಯುತ್ತವೆ. ಒಂದೊಂದು ಪ್ರಾಣಿಯೂ ಒಂದೊಂದು ರೀತಿಯ ಸ್ವರ ಮೂಡಿಸುತ್ತದೆ. ನಮ್ಮ ಶ್ರವಣೇಂದ್ರಿಯಗಳಿಗೆ ಕೇಳಿಸುವ ಆಹತ-ನಾದ, ಕೇಳಿಸದೆಯೇ ವಿಶ್ವವ್ಯಾಪಿಯಾಗಿರುವ ಅನಾಹತ-ನಾದ, ಜಗತ್ತಿನ ಚರಾಚರಗಳಲ್ಲಿ ತಾವೇ ತಾವಾಗಿ ಆವರಿಸಿಕೊಂಡಿರುವ ಚೆಲುವು, ಕುರೂಪ, ರೌದ್ರ, ರಮಣೀಯತೆಗಳಿಗೆ ಸಂವೇದನಾಶೀಲರಾಗಿ ಸ್ಪಂದಿಸುವುದರಿಂದ ಮಾನವ ಚೇತನದಲ್ಲಿ ರಸಾನುಭೂತಿಯುಂಟಾಗುತ್ತದೆ. ಹೀಗೆ ಸೃಷ್ಟಿಯಲ್ಲಿ ಅನಾವರಣಗೊಂಡಿರುವ ಚೆಲುವು, ನಾದ-ಮಾಧುರ್ಯಗಳಿಗೆ ಸ್ಪಂದಿಸುವ ಪು.ತಿ.ನ ರಸಾವಿಷ್ಟಚೇತನರಾಗುತ್ತಾರೆ. ಹಾಗೆಯೇ ಬದುಕಿನ ರಾಗ-ದ್ವೇಷಗಳಿಗೂ ಸ್ಪಂದಿಸುತ್ತಾರೆ. ಇವುಗಳೊಡನೆ ತಮ್ಮ ಆರಾಧ್ಯ ದೈವ ಶ್ರೀಹರಿಯ, ಚೆಲುವನಾರಾಯಣನ ಅವ್ಯಯ, ಅಪ್ರತಿಮ ಚಲುವಿಗೆ, ಭವಭೀತಿಯನ್ನು ಪರಿಹರಿಸುವ ಅವನ ಮುರಳೀ-ಗಾನಕ್ಕೆ ಅನನ್ಯ ಭಕ್ತಿ, ಪ್ರಪತ್ತಿಗಳಿಂದ ಶರಣಾಗತರಾಗುತ್ತಾರೆ. ಇವು ಮೂರೂ ಎಳೆಗಳು ಪು.ತಿ.ನ ಅವರ ರಸದರ್ಶನವನ್ನು ತ್ರಿವೇಣೀ-ಸಂಗಮದಂತೆ ರೂಪಿಸಿವೆ ಎನ್ನಬಹುದು.
ಪ್ರಕೃತಿಯಲ್ಲಿ ವ್ಯಕ್ತಗೊಂಡಿರುವ ಚಲುವಿನ ವೈವಿಧ್ಯದ ಬಗೆಗೆ ಪು.ತಿ.ನರ ನಿಲುವು ಆಂಗ್ಲ ಅನುಭಾವಿ ಕವಿ ಜೆರಾಲ್ಡ್ ಮ್ಯಾನ್ಲಿ ಹಾಪ್ಕಿನ್ಸ್ ನನ್ನು ನನಪಿಸುತ್ತದೆ. 'ಪೈಡ್ ಬ್ಯೂಟಿ' (Pied Beauty) ಎಂಬ ಸಣ್ಣ ಕವನದಲ್ಲಿ (curtal sonnet) ಅವನು ಈ ಸೃಷ್ಟಿಯಲ್ಲಿನ ಪ್ರತಿಯೊಂದು ವಿರುದ್ಧ ಗುಣದ ವಸ್ತುವಲ್ಲಿಯೂ ಸೌಂದರ್ಯ ಕಾಣುತ್ತಾನೆ. ಸಹಜ ಮತ್ತು ಕೃತಕವಾದದ್ದು, ವಿಚಿತ್ರವಾದದ್ದು , ಸಾಧಾರಣವಾದದ್ದು, ಮೃದು ಮತ್ತು ಕಠಿಣವಾದದ್ದು, ಮಂದಗತಿ ಉಳ್ಳದ್ದು, ವೇಗವಾದದ್ದು, ಸಿಹಿ, ಹುಳಿ, ಕಹಿ, ಉಜ್ಜ್ವಲವಾದದ್ದು ಮತ್ತು ಮಬ್ಬಾದದ್ದು, ಉಳುಮೆಮಾಡಿರುವ ಭೂಮಿ, ಉಳುಮೆಮಾಡದ ಭೂಮಿ, ಬೀಜ ಬಿತ್ತಿ ಮೊಳಕೆ ಬಂದು ಹಸಿರಾಗಿರುವ ಭೂಮಿ, ಹಸುವಿನ ಮೈಮೇಲಿನ ಮಚ್ಚೆಗಳು - ಇಂತಹ ಎಲ್ಲಾ ವೈವಿಧ್ಯಗಳಲ್ಲಿಯೂ ಮತ್ತು ಸೃಷ್ಟಿಯ ಎಲ್ಲಾ ಬದಲಾವಣೆಗಳಲ್ಲಿಯೂ ಸೌಂದರ್ಯ ಕಾಣುತ್ತಾನೆ. ಅವನು ಇಂತಹ ಪರಿವರ್ತನಶೀಲ ವೈವಿಧ್ಯಕ್ಕೆ ಜನ್ಮ ನೀಡಿರುವ ಆ ಸೃಷ್ಟಿಕರ್ತನ ಬದಲಾಗದಿರುವ ಅವ್ಯಯ ಶಾಶ್ವತ ಸೌಂದರ್ಯವನ್ನು ಆರಾಧಿಸು - ಎನ್ನುತ್ತಾನೆ. 'Fathers forth' ಎಂಬ ಪದವನ್ನು ಉಪಯೋಗಿಸಿ ಈ ಪರಿವರ್ತನಶೀಲ ಸೌಂದರ್ಯದ ಜನ್ಮದಾತನದು ಎಂದೂ ಬದಲಾಗದ ಸೌಂದರ್ಯ - ಎನ್ನುತ್ತಾನೆ. ಹಾಗೆಯೇ ಈ ಸಂದರ್ಭದಲ್ಲಿ ಕೀಟ್ಸ್ ಕವಿಯ ಸೌಂದರ್ಯಪ್ರಜ್ಞೆಯೂ ನೆನಪಾಗುತ್ತದೆ. ಕಟಾವು ಮುಗಿಸಿ ಕೂಳೆಬಿಟ್ಟಿರುವ ಹೊಲದ ಮೇಲೆ ಸಂಜೆ ಸೂರ್ಯನ ಬೆಳಕು ಬಿದ್ದಾಗ ಅಲ್ಲಿ ಅದ್ಭುತ ಸೌಂದರ್ಯ ಕಾಣುತ್ತಾನೆ ಕೀಟ್ಸ್. ಪು.ತಿ.ನ ಅಂತಹ ರಸಸ್ನಾತಚೇತನರ.
ಕೇವಲ ಪ್ರಕೃತಿಯ ಚೆಲುವು ಮಾತ್ರಕ್ಕಲ್ಲದೆ, ಮನುಷ್ಯಸ್ವಭಾವದಲ್ಲಿ ಅಡಗಿರುವ ರಾಗ ದ್ವೇಷಗಳಿಗೆ ಪು.ತಿ.ನ ಅತ್ಯಂತ ಆಳವಾಗಿ, ಸೂಕ್ಷ್ಮವಾಗಿ ಸ್ಪಂದಿಸುತ್ತಾರೆಂಬುದು ಶ್ರೀಹರಿಚರಿತೆಯ ಹಲವಾರು ಸನ್ನಿವೇಶಗಳಿಂದ ಕಂಡುಬರುತ್ತದೆ. ತಂಗಿ ದೇವಕಿಯ ವಿವಾಹದ ನಂತರ ಸಂತಸದಿಂದ ದೇವಕಿ-ವಸುದೇವರನ್ನು ರಥದಲ್ಲಿ ಕೂಡಿಸಿಕೊಂಡು ಬರುತ್ತಿದ್ದ ಕಂಸನ ಮನಸ್ಸು ಆಕಾಶವಾಣಿಯ 'ನಿನ್ನ ಸಾವಿಗೆ ಕಾರಣವಾಗುವ ಶಿಶುವು ದೇವಕಿಯ ಹೊಟ್ಟೆಯಲ್ಲಿ ಹುಟ್ಟಿಬರುತ್ತದೆ' ಎಂಬ ಮಾತುಗಳಿಂದ ಸಂಪೂರ್ಣವಾಗಿ ಬದಲಾಗಿ ಬಿಡುತ್ತದೆ. ತನ್ನ ಸಾವಿನ ಭೀತಿ ಅವನಲ್ಲಿ ಅತೀವ ಕ್ರೌರ್ಯ, ಹಿಂಸೆಗಳನ್ನು ಮೂಡಿಸುತ್ತದೆ. ವಸುದೇವ-ದೇವಕಿಯರನ್ನು ತತ್ಕ್ಷಣ ಕಾರಾಗೃಹಕ್ಕೆ ಹಾಕುವುದಲ್ಲದೆ, ಅವರಿಗೆ ಜನಿಸಿದ ಹಸುಗೂಸುಗಳನ್ನೂ ತತ್ಕ್ಷಣವೇ ಕೊಲ್ಲುವ ಮಟ್ಟ ಮುಟ್ಟುತ್ತದೆ ಅವನ ಕ್ರೌರ್ಯ.
ಶ್ರೀಹರಿಚರಿತೆಯಂತಹ ಕಾವ್ಯ, ಮಲೆದೇಗುಲದಂತಹ ಕವನಗುಚ್ಛದಲ್ಲಲ್ಲದೆ ಪು.ತಿ.ನ ರ ಹಲವಾರು ಬಿಡಿ ಕವನಗಳಲ್ಲಿಯೂ ಅವರ ರಸದೃಷ್ಟಿ ಅನುಭವವೇದ್ಯವಾಗುತ್ತದೆ. ಕೇವಲ ಅಧ್ಯಾತ್ಮ ಮತ್ತು ಭಕ್ತನ ದೃಷ್ಟಿಯಲ್ಲದೆ, ಒಂದು ರೀತಿಯ ಶಿಶು ಹೃದಯದ ಅಚ್ಚರಿ ಮತ್ತು ಕುತೂಹಲಗಳನ್ನು ನಾವಲ್ಲಿ ಕಾಣಬಹುದು. ರಂಗವಲ್ಲಿ ಕವನದಲ್ಲಿ ಇದು ವ್ಯಕ್ತಗೊಳ್ಳುತ್ತದೆ. 'ಜಗತ್ತಿನ ಬಗೆಗೆ, ಬದುಕಿನ ಬಗೆಗೆ ಎಂದೂ ಅಚ್ಚರಿ, ಕುತೂಹಲಗಳನ್ನು ಕಳೆದುಕೊಳ್ಳಬೇಡಿ' - ಎಂದು ಹೇಳುವ ಆಂಗ್ಲ ಲೇಖಕನ ಮಾತುಗಳು ನೆನಪಿಗೆ ಬರುತ್ತವೆ. ರಂಗವಲ್ಲಿ ಕವನದಲ್ಲಿ ಇದು ಸಿದ್ದವಾಗುತ್ತದೆ. ಅಂದು ಬೆಟ್ಟವನ್ನು ಹತ್ತಿ ದೇಗುಲಕ್ಕೆ ಹೋಗುವಾಗ ಪು.ತಿ.ನ ಬಾಲಕನೊಬ್ಬನನ್ನು ಜೊತೆಯಲ್ಲಿ ಕರೆದುಕೊಂಡು ಹೋದರೋ ಇಲ್ಲವೋ - ಇಂದು ನಮಗೆ ಇದು ತಿಳಿದಿಲ್ಲವಾದರೂ, ಅವರೊಡನೆ ಬೆಟ್ಟವೇರಿ ಹೋದದ್ದು ಅವರಲ್ಲಿ ಸದಾ ಜಾಗೃತವಾಗಿರುತ್ತಿದ್ದ ಶಿಶುಹೃದಯ - ಎನ್ನಬಹುದು. ಬೆಟ್ಟವನ್ನೇರಿ ದೇಗುಲಕ್ಕೆ ಪ್ರದಕ್ಷಿಣೆ ಬಂದು, ದೇಗುಲದ ಬಾಗಿಲು ತೆರೆದ ನಂತರ ಅಲ್ಲಿನ ಸುಂದರ ವಿಗ್ರಹ ಹೊಳೆಹೊಳೆಯುತ್ತಿದ್ದ ಕಿರೀಟ-ಕುಂಡಲ-ಭುಜಕೀರ್ತಿಗಳನ್ನು ನೋಡುತ್ತಿದ್ದ ಭಕ್ತಹೃದಯವನ್ನು ತತ್ಕ್ಷಣೆ ಶಿಶುಹೃದಯ ಆವರಿಸುತ್ತದೆ. ದೇಗುಲದೆದುರು ಮುದುಕಿಯೊಬ್ಬಳು ರಂಗೋಲಿಯಲ್ಲಿ ಸೃಷ್ಟಿಸುತ್ತಿದ್ದ ಸುಂದರ ವಿನ್ಯಾಸದ ಜೀವಂತ ಕಲೆಗೆ ಆ ಶಿಶುಹೃದಯವು ಆಕೃಷ್ಟವಾಗಿ ಮಂತ್ರಮುಗ್ಧವಾಗಿ ನಿಲ್ಲುತ್ತದೆ. ರಂಗೋಲಿಯಲ್ಲಿ ಬಿಡಿಸಿದ್ದ ಸಹಸ್ರದಳ ಪದ್ಮವು, ಸುಂದರ ವಿನ್ಯಾಸ ರೇಖೆಗಳು, ಗಿಳಿಗಳು, ಈ ವಿನ್ಯಾಸದ ಚೆಲುವು ಅವರನ್ನು ಸೆಳೆದುಕೊಳ್ಳುವಂತೆಯೇ, ಮಲೆದೇಗುಲದಲ್ಲಿ ದೇಗುಲದ ವಾಸ್ತುಶಿಲ್ಪ, ಸೌಂದರ್ಯವಿನ್ಯಾಸಗಳು ಅವರನ್ನು ಆಕರ್ಷಿಸುತ್ತವೆ.
ಶ್ರೀಕೃಷ್ಣ ಬಲರಾಮರು ತಮ್ಮ ಎಳವೆಯಲ್ಲಿ ಗೋಕುಲದ ಹಳ್ಳಿಗರ ನಡುವೆ ಬೆಳೆದದ್ದು, ಅವರ ಬಾಳಿನಲ್ಲಿ ಮತ್ತು ನಮ್ಮ ಭಾರತದೇಶದಲ್ಲಿ ಸಂಭವಿಸಿದ ಮಹತ್ತರ ಘಟನೆ ಎಂಬುದು ಪು.ತಿ.ನ.ರ ನಂಬಿಕೆ. ಕೃಷ್ಣನ ವ್ಯಕ್ತಿತ್ವ ವಿಕಸಿಸಿ ರೂಪುಗೊಳ್ಳಲು ಗೋಕುಲವಾಸ ಭದ್ರ ಬುನಾದಿ ಆಯಿತು - ಎನ್ನುತ್ತಾರೆ.
ಶ್ರೀಹರಿಚರಿತೆಯ ಅರಿಕೆಯಲ್ಲಿ ಕರ್ಮಯೋಗವನ್ನು ಪು.ತಿ.ನ ವಿಶಿಷ್ಟ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಸಂಕ್ಷೇಪವಾಗಿ ಹೇಳುವುದಾದರೆ - ಅಸಂಗ್ರಹದದಿಂದ ಲೋಕಸಂಗ್ರಹ, ಹಿತವರಿತ ವಿತರಣೆ, ತ್ಯಾಗದಿಂದ ಭೋಗ, ಕರ್ಮರತಿಯಿಂದ ನೈಷ್ಕರ್ಮ್ಯ. "ವ್ಯಕ್ತ್ಯರ್ಪಿತ-ಕರ್ಮಫಲ-ಪರಿಚಲನ-