(ಕಳೆದ ಸಂಚಿಕೆಯಿಂದ...)
ನಾಟ್ಯಗಣಪತಿಯ ಹಾಸುಬೀಸಿನಲ್ಲಿ
ನರ್ತನದ್ವಾರವಾಗಿ ಶಿಲ್ಪಕ್ಷೇತ್ರವನ್ನು ಕಾಣಬಹುದಾದ ಕಿರುಗಣ್ಣಿನ ದಿಟ್ಟಿಗಳಾಗಿ ನಾಟ್ಯವರ್ಗಶಿಲ್ಪಗಳೆನಿಸಿದ ನಾಟ್ಯಗಣಪತಿ, ನಾಟ್ಯಸರಸ್ವತಿ, ನಾಟ್ಯಲಕ್ಷ್ಮಿ ಶಿಲ್ಪಗಳ ಬಗ್ಗೆಯೂ ಲೇಖಿಕೆಯ ಅಧ್ಯಯನದ ಕೋನಗಳು ಹರಡಿವೆ. ಈ ಎಲ್ಲ ಶಿಲ್ಪಗಳನ್ನೂ ನರ್ತನಾಭಿಮುಖವಾಗಿ ಗುರುತಿಸಿಕೊಳ್ಳುವ ಯತ್ನಗಳೂ ಪ್ರಯುಕ್ತಿಯಾಗಿವೆ. ಕರ್ನಾಟಕದ ನೂಪುರ (ಗೆಜ್ಜೆ) ಸಂಸ್ಕೃತಿಯ ಕುರಿತು ಲೇಖಿಕೆ ಮಾಡಿರುವ ಅಧ್ಯಯನದಲ್ಲಿ ಶಿಲ್ಪಗಳೂ ಪ್ರಮುಖ ಸಾಕ್ಷಿಗಳೇ ಆಗಿದ್ದು, ಶಿಲ್ಪಗಳು ನೃತ್ಯಸಾಹಿತ್ಯವನ್ನು ಬೆಳೆಸುವಲ್ಲಿ ಸೋಪಾನಪ್ರಾಯವಾಗಿದೆ. ನೂಪುರಾವಲಂಬನೆಯಾಗಿರುವ ಇವುಗಳನ್ನು ನಾಯಿಕಾಭಾವದ ಅಭಿನಯಸಂದರ್ಭಗಳಲ್ಲಿ ಆನುಷಂಗಿಕವಾಗಿ ತರುವ ಅಧ್ಯಯನವೂ ಮುಂದುವರೆದಿದೆ. ಸ್ವತಃ ಲೇಖಿಕೆಯೇ ಈ ಕುರಿತಾದ ನೃತ್ಯಕಾವ್ಯ ರಚನೆಯಲ್ಲಿದ್ದಾರೆ. ಇದು ನರ್ತನಕ್ಷೇತ್ರದಿಂದ ಶಿಲ್ಪಾವರಣದೆಡೆಗೆ ಹೆಜ್ಜೆ ಹಾಕಿದ ಗೆಜ್ಜೆಯ ಪಯಣ. ಪ್ರಕೃತ ಲೇಖನವು ವಿಸ್ತಾರಗೊಳ್ಳುವ ಹಿನ್ನೆಲೆಯಿಂದ ಇಲ್ಲಿ ಅವುಗಳನ್ನು ಉಲ್ಲೇಖಿಸಲಾಗುತ್ತಿಲ್ಲ. ರಸಿಕ-ವಿದ್ವಾಂಸರು, ಕಲಾವಿದರು ಈ ಪ್ರಯತ್ನಗಳನ್ನು ಭವಿಷ್ಯದಲ್ಲಿ ಪರಿಕಿಸಿ ವಿವೇಚಿಸಿ ಕಲಾಕ್ರಮದಲ್ಲಿ ಬೆಳೆಸಿಕೊಳ್ಳಬಹುದು. ಮಹಾನಟನೊಂದಿಗೆ ನರ್ತನಸಹವರ್ತಿಯಾದ ಗಣಪತಿಯೂ ನೃತ್ಯೋಪಚಾರಕ್ಕೆ ಒದಗಬಹುದಾದ ಮತ್ತೊಂದು ದೇವವರ್ಗಶಿಲ್ಪ. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಹೊರಾವರಣದಲ್ಲಿ ನರ್ತನವಾಡುವ ನಾಟ್ಯಗಣಪತಿಯಂತೂ ಮತ್ತೂ ಆಂಗಿಕ-ಸಾತ್ತ್ವಿಕ ಸಮನ್ವಿತನಾಗಿ ಭಾವವ್ಯಂಜಕ. ಗಣಪತಿಯ ಕುರಿತಂತೆ ಸಾಕಷ್ಟು ತತ್ತ್ವ ಜಿಜ್ಞಾsಸೆ, ಗೀತ-ಕಾವ್ಯ-ನೃತ್ಯಪ್ರಸಕ್ತಿಗಳೂ ಹಾಗೆಯೇ ನೃತ್ಯಗಣಪತಿಯ ಕುರಿತೂ ಐತಿಹಾಸಿಕ ವಿವರಗಳು ಇರುವುದರಿಂದ ಅವುಗಳೆಲ್ಲದರ ಬಗೆಗೆ ಮತ್ತೊಮ್ಮೆ ಇಲ್ಲಿ ದಾಖಲಿಸುವ ಗಾತ್ರಭರಿತವಾದ ಕಾರ್ಯವು ಖಂಡಿತವಾಗಿ ಗಣಪತಿಯ ಹೊಟ್ಟೆಯಂತೆಯೇ ಹಿರಿದು. ಇಲ್ಲಿ ಉಲ್ಲೇಖಿಸಲೇಬೇಕಾದದ್ದೆಂದರೆ, ಶಿಲ್ಪ ಮತ್ತು ನರ್ತನವು ಪರಸ್ಪರ ಕೊಡುಕೊಳ್ಳುವಿಕೆಯ ನೆಲೆಯಲ್ಲಿ ಪಡೆಯುವ ಉಪಕಾರಗಳನ್ನು. ಪ್ರಾಚೀನ ಶಿಲ್ಪಕ್ರಮದಲ್ಲಿ ಗಣಪತಿಯ ರೂಪವರ್ಣನೆ ಗಮನಾರ್ಹವಾಗಿ ಸತ್ತ್ವಸೌಂದರ್ಯೋಪಾಸನೆಯ ನೆಲೆಯಿಂದ ಪ್ರತಿಪಾದಿತವಾಗಿದ್ದು ಆಧುನಿಕಕ್ರಮಗಳಲ್ಲಿ ವಿನಾಯಕನ ಶಿಲ್ಪಮಾದರಿಗಳು ಸಮಕಾಲೀನ ನೃತ್ಯಕ್ರಮಗಳ ಆಂಗಿಕ ವಿನ್ಯಾಸಗಳನ್ನನುಸರಿಸಿ ರೂಢಿಸಿಕೊಂಡರೆ ನೃತ್ಯವೂ ತನ್ಮೂಲಕ ಶಿಲ್ಪವೂ ನವೀನ ಆಯಾಮಗಳನ್ನು ಪಡೆಯಬಲ್ಲದು.
ಅಂತೆಯೇ ನೃತ್ಯಾವಹವಾಗಿ ಗಣಪತಿಯನ್ನು ಕಾಣುವುದರಲ್ಲಿಯೂ ಹೊಸತನವು ಅಪೇಕ್ಷಿತ ವಿಚಾರ. ಬಹಳಷ್ಟು ಸಲ ಪ್ರಥಮಪೂಜಿತ, ವಿಘ್ನನಿವಾರಕನೆಂದಷ್ಟೇ ಸ್ತುತಿಗೆ ಮೀಸಲಾಗಿಯೋ ಇಲ್ಲವೇ ಕೆಲವೊಂದು ಜನಪ್ರಿಯ ಕತೆಗಳನ್ನು ಸಂಚಾರಿ ಅಭಿನಯಗಳಷ್ಟಕ್ಕೇ ಅಳವಡಿಸಿಕೊಳ್ಳುವುದಕ್ಕಷ್ಟೇ ಗಣಪತಿ ಸೀಮಿತವಾಗುತ್ತಾನೆ. ಹಸ್ತಗಳಲ್ಲಾದರೋ ಕಪಿತ್ಥ ಸಂಯುತ ಹಸ್ತ (ಕುಕ್ಷಿ ವಿನ್ಯಾಸ), ಅರಾಳ ಹಸ್ತ (ಕರ್ಣಗಾತ್ರ), ಕರಿಹಸ್ತ (ಮುಕುಲ, ಅರಾಳದಿಂದ ಸೊಂಡಿಲ ಮೊಗನೆಂಬ ಸಂಕೇತ), ತಾಮ್ರಚೂಡ (ಪಾಶಾಂಕುಶಧಾರಿ), ಉನ್ಮುಖವಾದ ಊರ್ಣನಾಭ ಮತ್ತು ಅಭಯ ಪತಾಕ ಹಸ್ತ (ಮೋದಕಪ್ರಿಯ) ಮುಂತಾದವುಗಳನ್ನು ಬಳಸಿ ಅಭಂಗದಲ್ಲಿ ಪಾದವಿನ್ಯಾಸವನ್ನು ನಡೆಸುವುದಕ್ಕಷ್ಟೇ ಗಣಪತಿಯ ಆಂಗಿಕ ಮಿತಿಗೊಳ್ಳುತ್ತಿರುವುದು ಸರ್ವವೇದ್ಯ. ಹಸ್ತ-ಮುದ್ರೆಗಳಿಂದಾಚೆಗೆ ಕಲೆಯಲ್ಲಿ ಸಾಧಿಸಬಹುದಾದ ಅಂಶಗಳು ಅನೇಕವಿದೆಯೆಂಬುದು ಬಲ್ಲೆವಷ್ಟೆ. ಹಾಸಸ್ಥಾಯಿಗೂ, ಹಾಸ್ಯರಸಕ್ಕೂ ಆತನೇ ಅಧಿಪತಿ ಎಂಬಲ್ಲಿ ನರ್ತನಸಮಯದಲ್ಲಿ ಆತನನ್ನು ಬಳಸಿಕೊಳ್ಳಬಹುದಾದ ಸೂಕ್ಷ್ಮ ಇನ್ನಷ್ಟು ಸ್ಪಷ್ಟವಾಗುತ್ತದೆ. ಕೇವಲ ಸಂಕೇತರೂಪವಷ್ಟೇ ಅಲ್ಲದೆ ನಾಟ್ಯಶಾಸ್ತ್ರೋಚಿತವಾದ ಅಂಗೋಪಾಂಗ-ಪ್ರತ್ಯಂಗ-ಸಮನ್ವಯದಲ್ಲಿ ನರ್ತನರಂಗದಲ್ಲಿ ಗಣಪತಿಯನ್ನು ಕಟೆದರೆ ಈಗಾಗಲೇ ಶಿಲ್ಪಶಾಸ್ತ್ರದಲ್ಲಿ ಕಾಣುತ್ತಿರುವ ನಾಟ್ಯಗಣಪತಿಯ ಆಂಗಿಕ-ಸಾತ್ವಿಕ ಲೀಲಾವಿಶೇಷ ಸಾಕ್ಷಾತ್ಕಾರಗೊಳ್ಳುತ್ತದೆ.
ಡಮರು ಮದ್ದಳೆ ತಾಳ ಕೊಳಲಿನ ನಾದದಿಂಪಿಗೆ ನೋಂತು ನಲಿಯುತ ಬಾಲಗಣಪನ ನೂಪುರದ ಪದ ... ಘಲಿರು ಘಲಿರೆನೆ ಒಲಿದೊಲಿದು ನರ್ತಿಸುತಲಿಹ ಫಲದಾಯಕ ಫಲದಾಯಕ |೩|
(ಲೇಖಿಕೆಯು ನಾಟ್ಯಗಣಪತಿಯನ್ನಾಧರಿಸಿ ರಚಿಸಿದ ವಿನಾಯಕ ಶಬ್ದನೃತ್ಯ (ಭರತನಾಟ್ಯ ಮಾರ್ಗಂ ನೃತ್ಯಕಛೇರಿ ಕಾರ್ಯಕ್ರಮದ ಸ್ತುತಿಗೀತ)ದ ಆಯ್ದಭಾಗ
ಚಿತ್ರಗಳ ನೇಪಥ್ಯದಲ್ಲಿ ಶಿಲ್ಪಗಳ ರಂಗಾರೋಹಣ
ಶಿಲ್ಪಪ್ರಪಂಚಕ್ಕೂ ಮುನ್ನ ಮಾನವನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಕಂಡುಕೊಂಡದ್ದು ಚಿತ್ರ. ಆ ಹೊತ್ತಿಗೆಲ್ಲಾ ಚಿತ್ರಗಳು ಯಥಾಶಕ್ತಿ ವಾಸ್ತವ ಪ್ರಕೃತಿಯ ಅನುಕರಣವೇ ಆಗಿದ್ದವು. ಕ್ರಮೇಣ ರೇಖಾಚಿತ್ರಗಳಿಂದ ಆರಂಭವಾದ ಕಲಾವ್ಯವಸಾಯವು ಚಿರಂತನ ಪ್ರತಿಕೃತಿ ನಿರ್ಮಾಣದೆಡೆಗೆ ಉಜ್ಜುಗಿಸಿ ವರ್ಣಚಿತ್ರಗಳ ನಮೂನೆಗಳಲ್ಲಿ ಆಯ ಹಿಗ್ಗಿಸಿಕೊಂಡಿತು. ಉಬ್ಬು ತಗ್ಗು ಅಂಕುಡೊಂಕುಗಳ ಅತಿಶಯತೆಯಲ್ಲಿ ಮೈಯ್ಯರಳಿದಾಗ ಚೆಲುವೊಂದು ಕಂಡಿತು. ನಾಟ್ಯಧರ್ಮೀಯ ಹೂರಣವನ್ನು ಅಣುಅಣುವಿನಲ್ಲೂ ಚಿಮ್ಮಿಸಿದಾಗ ಶಿಲ್ಪಮಾರ್ಗದಲ್ಲಿ ಆ ಪ್ರತಿಕೃತಿಗಳು ಸಾಕ್ಷಾತ್ಕಾರ ಪಡೆದು ಅನುವ್ಯವಸಾಯ/ಅನುಕೀರ್ತನದ ಸ್ವರೂಪವನ್ನಾಂತು ನಿಂತಿತು. ಅದರಲ್ಲೂ ಕೀರ್ತನಕೇಂದ್ರವಾದ ದೇವಾಲಯಸನ್ನಿಧಾನದಲ್ಲಿ ತಾನೂ ಚಿರಕಾಂತಿಯಿಂದ ಬೆಳಗುವರೊಂದಿಗೆ ತನ್ಮೂಲಕ ಆಯಾ ವರ್ತಮಾನದ ಸಂಗತಿಗಳಿಗೆ ಚಿರಯೌವನ ದಯಪಾಲಿಸುವ ಹಿರಿಯ ಕರ್ತವ್ಯದಿಂದಾಗಿ ಚಿತ್ರರಚನೆಯ ನೇಪಥ್ಯದಲ್ಲಿ ಶಿಲ್ಪಗಳ ರಂಗಾರೋಹಣವೇ ಆಗಿರುವುದನ್ನು ಗಮನಿಸಬಹುದು. ಅಂತೂ ಕಲೆಯು ಅನುಕರಣದಿಂದ ಅನುಕೀರ್ತನವಾಗುವ ಹಾದಿಯಲ್ಲಿ ಆದಿಮೂಲವಾದ ರೇಖಾಚಿತ್ರಗಳ ಕೊಡುಗೆಯನ್ನು ಮರೆಯುವಂತಿಲ್ಲ. ಶಿಲ್ಪಶಾಸ್ತ್ರದೊಳಗೆ ಚಿತ್ರವೂ ಪ್ರಮುಖ ಅಧ್ಯಯನಮಾರ್ಗ. ಕಲಾನಿರ್ಮಾಣಕಾಲಕ್ಕೆ ಶಿಲ್ಪಿಗಳಿಗೆ ಧ್ಯಾನಶ್ಲೋಕದ ಒತ್ತಾಸೆ ಎಷ್ಟೆಂಬುದನ್ನು ಈಗಾಗಲೇ ಬಲ್ಲೆವಷ್ಟೆ. ಮೂಲವಿಗ್ರಹರಚನೆಗಳಿಗೆ ಧ್ಯಾನಶ್ಲೋಕದ ಪ್ರಪತ್ತಿ ಅವಶ್ಯವೆಂಬುದು ಶಿಲ್ಪಶಾಸ್ತ್ರವೂ ಅರುಹುತ್ತದೆ. ಒಂದರ್ಥದಲ್ಲಿ ಅದುವೂ ಮನಸ್ಸಿನಲ್ಲಿಯೂ ಕಣ್ಣುಗಳಲ್ಲಿಯೂ ಮೂಡುವ ರೇಖಾಂಕನವೇ. ಪ್ರಾಚೀನ ಭಾರತದ ವಿಶ್ವಕರ್ಮಸಂಜಾತರು ಧ್ಯಾನಸನ್ನಿಹಿತರಾಗುವುದೇ ತಡ ಅತ್ಯಪೂರ್ವ ರಚನೆಗಳು ಮೈಯರಳುತ್ತಿದ್ದವಂತೆ. ಶಿಲೆಯೊಳಗಿದ್ದ ಸುಂದರ ವಿಗ್ರಹವನ್ನು ಚಾಣದ ಮೊನೆಯಲ್ಲಿ ಹೊರಕಾಣಿಸುತ್ತಿದ್ದ ಶಿಲ್ಪಸಿದ್ಧಿಪುರುಷರು ಅವರು. ಕೆಲವೊಮ್ಮೆ ಅತಿಮಾನುಷವಾದ ಶಿಲ್ಪಗಳ ಕಟೆಯುವಿಕೆಯಲ್ಲಿ ಕಲ್ಪನೆ ಮತ್ತು ಹೊಣೆಗಾರಿಕೆಯದ್ದು ಹೆಚ್ಚಿನ ಕಾಣಿಕೆಯಿದೆ ಎಂದಾದರೆ ನಟರಾಜ ಮತ್ತು ಬಾದಾಮಿಯ ಮಹಾನಟನ ಶಿಲ್ಪದಲ್ಲಾದಂತೆ ಪ್ರಾಯೋಗಿಕ ಪರೀಕ್ಷೆಗಳ ಆಯಾಮದಲ್ಲಿ ಹದಗಳನ್ನು ಪರಾಮರ್ಶಿಸಿ ಮುಂದಡಿಯಿಡುತ್ತಿದ್ದರೆನಿಸುತ್ತದೆ. ಇದನ್ನುಳಿದು ಬಹಿರಾವರಣದ ಅನೇಕ ಶಿಲ್ಪನಿರ್ಮಾಣಗಳಿಗೆ ಒತ್ತಾಸೆಯಾದದ್ದು ರೇಖಾಂಕನಗಳೇ. ಶಿಲ್ಪ ಕಟೆಯುವ ಉದ್ಯೋಗವನ್ನು ಅಪ್ಪಿಕೊಂಡ ಆಧುನಿಕಕಾಲದ ಅನೇಕರಿಗೂ ಪ್ರಾಥಮಿಕ ಅಭ್ಯಾಸವೇ ರೇಖಾಚಿತ್ರಗಳ ಮೂಲಕ ತರಬೇತಿ. ಶಾಸ್ತ್ರಬದ್ಧವಾದ ವಿಗ್ರಹಶಿಲ್ಪ, ಮೂಲವಿಗ್ರಹಗಳಲ್ಲಂತೂ ರೇಖಾಚಿತ್ರವೆಂಬುದು ಚಿಮ್ಮುಹಲಗೆಯೇ ಸರಿ. ಕಲ್ಪನೆಯೊಂದನ್ನು ಮೂರ್ತೀಕರಿಸಲು, ಅಳತೆ ಅಂದಾಜಿಸಲು, ಅಂದಚೆಂದ-ವಿನ್ಯಾಸಗಳಲ್ಲಿ ಒಪ್ಪ ಓರಣ ಮಾಡಿಕೊಳ್ಳಲು ವಿವರವಾದ ರೇಖಾಚಿತ್ರಗಳು ಮಾರ್ಗದರ್ಶಕ. ಇದರಿಂದ ಶಿಲ್ಪನಿರ್ಮಾಣದ ಕೆಲಸ ಸುಲಭಸಾಧ್ಯ ಮತ್ತು ಶಿಲ್ಪಿಗೆ ಪ್ರಯೋಗಪ್ರಾವಣ್ಯವೋ, ಕಲಾಧ್ಯಾನವೋ ಸಾಧಿತವಾಗಿಲ್ಲದಿರುವಾಗ ವೃಥಾ ಶಿಲಾಕ್ಷಯವಾಗುವುದನ್ನು ತಪ್ಪಿಸುವುದಕ್ಕೂ ನೆರವಾಗುತ್ತವೆ. ಹಾಗಾಗಿ ಅನೇಕ ಶಿಲ್ಪಿಗಳು ರೇಖಾಚಿತ್ರಗಳ ಮೊರೆಹೋದ ಸಂಗತಿ ಬೆಳಕಿಗೆ ಬರುತ್ತವೆ. ಇದಕ್ಕೊಂದು ಮಹತ್ತ್ವದ ಸಾಕ್ಷಿಯೆಂದರೆ ನಾಡಕಳಸಿಯ ಮಲ್ಲಿಕಾರ್ಜುನ ದೇವಾಲಯವೆನ್ನಬಹುದು.
ಕಂಬಕಂಬವೂ ಕತೆಯನೊರೆಯುತಿವೆ ಕಾಂಬ ಕಣ್ಣ ಹುಡುಕಿ ಕುಶಲಿ ಕಂಡ ಕೈಚಳಕ ತಂದ ಹೃತ್ಕಲೆಯ ಕುಸುರಿ ಗೆಳತಿ
ನಾಡಕಳಸಿಯ ಮಲ್ಲಿಕಾರ್ಜುನ ದೇವಾಲಯ ಕೇವಲ ಶಿಲ್ಪಪ್ರೇರಣೆಗೆಂದಷ್ಟೇ ರೇಖಾಚಿತ್ರಗಳನ್ನು ಬಿಡಿಸಿಕೊಂಡಂತೆ ತೋರುವುದಿಲ್ಲ. ಕಾರಣ, ಇಲ್ಲಿನ ಬಹಿರಾವರಣದಲ್ಲಾಗಲೀ, ಕಂಬಗಳಲ್ಲಾಗಲೀ ಶಿಲ್ಪಗಳ ಪಾತ್ರ ಗಮನಾರ್ಹವಾಗಿಲ್ಲ. ಹಾಗೆಂದು ಅಭ್ಯಾಸಕ್ಕೆಂದು ಈ ಚಿತ್ರಗಳನ್ನು ಕೆತ್ತಿದಂತೆಯೂ ಕಾಣುವುದಿಲ್ಲ. ಏಕೆಂದರೆ ಕಂಬಗಳ ಸುತ್ತಲೂ ಕಣ್ಣಳತೆಗೆ ನಿಲುಕುವಂತೆ ರಂಗಭೋಗ ಮತ್ತು ಸಾಂಸ್ಕೃತಿಕ ಜೀವನದ ಮಾಹಿತಿ ಸ್ಪಷ್ಟವಾಗಿ ಚಿತ್ರಿತವಾಗಿದೆ. ಹಾಗೆಂದೇ ಹೊಯ್ಸಳರ ಕಾಲದ ಅನೇಕ ದೇವಾಲಯಗಳಲ್ಲಿ ಕಂಡುಬರುವ ಕಂಬಗಳ ಸೌಂದರ್ಯ ಹೆಚ್ಚಿಸುವ ಕಲಾವಿನ್ಯಾಸಗಳಷ್ಟಕ್ಕೇ ತೃಪ್ತವಾಗದೆ ನಾಡಕಳಸಿ ಸ್ವಯಂ ಪ್ರತಿಷ್ಠಿತ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಹೃದಯದಾಕಾರದ ರೇಖೆಗಳೊಳಗೆ ಅವುಚಿಕೊಂಡಿರುವ ನರ್ತನ, ಸಂಗೀತ, ವಾದ್ಯಗಳನ್ನು ನುಡಿಸುವ ಚಿತ್ರಣ ಇಲ್ಲಿನ ವೈಶಿಷ್ಟ್ಯ. ಇಲ್ಲಿ ಚಿತ್ರರಚನಕಾರರಿಗೇ ಮಹತ್ತ್ವವಿದ್ದಿರಬಹುದು ಇಲ್ಲವೇ ಸ್ಥಳೀಯ ಚಿತ್ರಕಲಾವಿದರೇ ಮುತುವರ್ಜಿಯಿಂದ ಕಲಾಕ್ಷೇಪವನ್ನು ವೀಕ್ಷಿಸಿ ಬರೆದಿರಬಹುದು.
ಕಲಾರಾಧನಕ್ಕಾಗಿ ಶಿಲ್ಪಗಳಾಗುವ ನೂತನ ಪ್ರಸಕ್ತಿ: ಕಾಲ್ಪನಿಕ ನೋಟದಲ್ಲಿ ಎರಡು ಪ್ರಾಯೋಗಿಕ ಸಾಧ್ಯತೆ
ರೇಖಾಚಿತ್ರಗಳ ಜಾಡನ್ನು ಬೆಂಬತ್ತಿ ಆಧುನಿಕ ಕಾಲಕ್ಕೆ ಶಿಲ್ಪಸಾಧ್ಯತೆಗಳ ಬೀಜಗಳು ಸಾಕಷ್ಟು ಮೊಳೆತಿವೆ. ಹಾಗೆಂದು ಪ್ರಾಚೀನ ಶಿಲ್ಪವಿದ್ಯಾಪ್ರಾವೀಣ್ಯಕ್ಕೆ ಸರಿಸಾಟಿಯೆಂಬುದಿಲ್ಲ. ಸಾಮ್ರಾಜ್ಯಗಳಲ್ಲಿ ಬಾಳಿಬದುಕಿದ ಶಿಲ್ಪಶಾಸ್ತ್ರಜ್ಞರು ಕಟೆಯದೆ ಬಿಟ್ಟದ್ದೆಂಬ ಶಿಲ್ಪದ ವಿಭಾಗಕ್ರಮವೂ ಇರಲಿಕ್ಕಿಲ್ಲ. ಆದರೂ ಈ ಹೊತ್ತಿನಲ್ಲಿರುವ ಕಲಾವಿದರ ಪ್ರತಿಭಾವ್ಯುತ್ಪತ್ತಿಯನ್ನು ಲಕ್ಷಿಸಿ ಕಾಲ್ಪನಿಕವಾಗಿ ಪ್ರಾಯೋಗಿಕ ಪ್ರಯತ್ನಗಳೂ ನಡೆಯುತ್ತಲೇ ಬಂದಿವೆ. ಆ ಪೈಕಿ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ನಿರ್ದೇಶನದಂತೆ ಪಡಿಮೂಡಿದ ಭರತಮಹಾಮುನಿ ಉಪಾಸನಾವಿಗ್ರಹವು ಉಲ್ಲೇಖಾರ್ಹ. ಸಾಮಾನ್ಯವಾಗಿ ಪ್ರಾಚೀನ ದೇವಾಲಯಗಳು ನಾಟ್ಯಕಲೆಯನ್ನು ತನ್ನ ಅಂಗಭಾಗವಾಗಿ ಪರಿಗಣಿಸಿ ರಂಗಭೋಗದಲ್ಲಿಯೋ ಅಥವಾ ಶಿಲ್ಪಮುಖವಾಗಿಯೋ ಪ್ರಾತಿನಿಧ್ಯ ನೀಡಿದರೆ, ಇದೇ ಪ್ರಪ್ರಥಮವೋ ಎಂಬಂತೆ ಭರತಕಲೆಗೆಂದೇ ಈ ಆಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ರಂಗಭೋಗವಿಲ್ಲ. ಆದರೂ ಇಲ್ಲಿ ನರ್ತನವೇ ಧ್ಯಾನ, ನರ್ತನಕ್ಕೇ ಪೂಜೆ. ಹಾಗೆಂದು ಭರತಮುನಿಯ ರೂಪವನ್ನು ಕಂಡವರಿಲ್ಲ, ಕೇಳಿದವರಿಲ್ಲ. ಡಾ. ಪದ್ಮಾ ಸುಬ್ರಹ್ಮಣ್ಯಂ ಅವರೇ ಉಲ್ಲೇಖಿಸುವಂತೆ ಥೈಲಾಂಡ್ನ ‘ರಾಯಲ್ ಥಾಯ್ ಒಪೆರಾ’ ರಂಗಭೂಮಿಯಲ್ಲಿ ಫ್ರೋಟ್ ಋಷಿ/ಕ್ರೂಮುನಿ ಎಂಬ ಹೆಸರಿನಲ್ಲಿ ಭರತಮುನಿಯನ್ನು ಪೂಜಿಸುವ ಮುಖವಾಡವನ್ನು ಹೊರತುಪಡಿಸಿದರೆ ಸ್ವತಃ ಭಾರತದಲ್ಲಿಯೂ ಭರತನನ್ನು ಪೂಜಿಸುವ ದೇವಾಲಯವಾಗಲೀ, ಪೂಜಾಪದ್ಧತಿಯಾಗಲೀ, ವಿಗ್ರಹಗಳಾಗಲೀ ಇಲ್ಲ. ಥೈಲ್ಯಾಂಡ್ನ ಈ ಪೂಜಾವಿಶೇಷವನ್ನು ಗಮನಿಸಿ ಭಾರತದಲ್ಲಿ ಮರೆತುಹೋದ ಸಂಸ್ಕೃತಿಯ ಕೊಂಡಿಗಳನ್ನು ನೆನೆದು ಖೇದಪಟ್ಟು ಅವುಗಳನ್ನು ಮತ್ತೆ ಸ್ಥಾಪಿಸುವ ಸಂಕರ್ದ ಫಲವಾಗಿಯೇ ಮೂಡಿದ್ದು ಈ ದೇವಾಲಯ. ೨೦೧೮ರ ಏಪ್ರಿಲ್ ನಲ್ಲಿ ದೇವಾಲಯ ಕಲಶಸ್ಥಾಪನೆ, ಫೌಂಡೇಶನ್ ಉದ್ಘಾಟನೆಯೂ ನೆರವೇರಿದೆ. ತಮಿಳುನಾಡಿನ ಪ್ರಾಚೀನ ದೇವಾಲಯಗಳಲ್ಲಿ (ಮಹಾಬಲಿಪುರಂನ ಧರ್ಮರಾಜರಥ) ಭರತನೆದ್ದೆನಿಸುವ ಎರಡು ಶಿಲ್ಪಗಳು ಅಸ್ಪಷ್ಟವಾಗಿ ಗುರುತಿಸಲ್ಪಟ್ಟಿದ್ದು ಬಿಟ್ಟರೆ ಪೂರ್ಣವಿಗ್ರಹಗಳೆಂಬುದೂ ಈವರೆಗೂ ಯಾವ ಶಿಲ್ಪಿಯಿಂದಲೂ ಪಡಿಮೂಡಿರಲಿಕ್ಕಿಲ್ಲ. ಈ ನಿಟ್ಟಿನಲ್ಲಿ ಭರತಮುನಿಪ್ರೀತ್ಯರ್ಥವಾಗಿ ಸರ್ವಕಲೆಗಳಿಗೂ ಮಾತೃಕಾಸ್ವರೂಪವಾದ ನಾಟ್ಯಶಾಸ್ತ್ರವನ್ನೇ ಜೀವನಧ್ಯೇಯವಾಗಿ ಆರಿಸಿ ಆದರಿಸಿಕೊಂಡು ಬಂದ ಡಾ. ಪದ್ಮಾ ಮತ್ತು ಅವರ ಕುಟುಂಬವು ಭರತ ಇಳಂಗೋ ಫೌಂಡೇಶನ್ ಫಾರ್ ಏಷ್ಯನ್ ಕಲ್ಚರ್ನ ಅಧ್ವರ್ಯುತನದಲ್ಲಿ ತಮಿಳುನಾಡು ಸರ್ಕಾರ ನೀಡಿದ ಸುಮಾರು ಐದು ಎಕರೆ ವ್ಯಾಪ್ತಿಯಲ್ಲಿ ಹಲವು ದಾನಿಗಳ ಆರ್ಥಿಕ ಸಹಕಾರದೊಂದಿಗೆ ಭರತ ದೇವಾಲಯ, ಮೆಮೋರಿಯಲ್, ಸಭಾಂಗಣ, ಮ್ಯೂಸಿಯಂ, ಗ್ರಂಥಾಲಯ ಹಾಗೂ ಸಂಶೋಧನ ಕೇಂದ್ರವನ್ನು ನಿರ್ಮಿಸಿದೆ. ಗಣೇಶ, ಸುಬ್ರಹ್ಮಣ್ಯ, ಪತಂಜಲಿ, ತಮಿಳುಕವಿ ತಿರುಮೂಲರ ವಿಗ್ರಹಗಳೂ ಇಲ್ಲಿವೆ. ಮಹಾಬಲಿಪುರಂನಿಂದ ಚೆನ್ನೈಗೆ ಬರುವ ೩೬ ಕಿ.ಮೀ ಅಂತರದಲ್ಲಿ ಹುಲಿಗುಹೆಯ ಸನಿಹ ನಿರ್ಮಿಸಿದ ಈ ದೇವಾಲಯ ಇಡಿಯ ವಿಶ್ವದಲ್ಲೇ ಪ್ರಪ್ರಥಮ. ಏಳನೇ ಶತಮಾನಕ್ಕೆ ಸಲ್ಲುವ ಭರತಮುನಿಯ ಕುರಿತ ಶಾಸನವೊಂದು ಇದೇ ಸ್ಥಳದಲ್ಲಿ ಈ ಮೊದಲು ದೊರಕಿತ್ತೆನ್ನಲಾಗಿದೆ.
ಶಿಲ್ಪಗಳಲ್ಲಿ ಮುನಿಗಳು ಸಾಮಾನ್ಯವಾಗಿ ಸಮಸ್ಥಾನಕದಲ್ಲೋ, ಏಕಪಾದದಲ್ಲಿಯೋ ಜಟಾವಲ್ಕಲದಲ್ಲಿ ತಪಶ್ಚರ್ಯೆಗೈಯ್ಯುವ ಇಲ್ಲವೇ ಪೂಜಿಸುವ ರೀತಿಯಲ್ಲಿ ಪ್ರಕಟಗೊಂಡಿರುವುದಿದೆ. ಆದರಿಲ್ಲಿ ಆರಾಧ್ಯದೈವವಾಗಿ ಮುನಿಯೇ ದೇವನ ರೂಪ ತಾಳಿದ್ದಾನೆ. ಮುನಿಯೊಬ್ಬಾತ ಚತುರ್ಬಾಹುಸಂಯುತನಾಗಿ ನಾಟ್ಯವರ್ಗಕ್ಕೆ ಸೇರಿದ ಶಿಲ್ಪವಾಗಿ ಮೂಡಿದ ಈ ಪ್ರಸಕ್ತಿಯೇ ಇಡಿಯ ಶಿಲ್ಪಪ್ರಪಂಚಕ್ಕೆ ಹೊಸತು. ಪರಿಪೂರ್ಣ ಕಲ್ಪನೆಯಲ್ಲಿಯೇ ಸುಮಾರು ಅರ್ಧ ಟನ್ ನ್ನಷ್ಟು ತೂಗುವ ಕೃಷ್ಣಶಿಲೆಯಲ್ಲಿ ಮೈದಾಳಿರುವ ಈ ವಿಗ್ರಹಕ್ಕೆ ನರ್ತನದ ಸ್ಥಾನ, ಚಲನೆಗಳೇ ಪ್ರೇರಣೆ. ಆ ಮೂಲಕವಾಗಿ ಭರತಮುನಿಯನ್ನು ನರ್ತನರಂಗಕ್ಕೂ ಮೂರ್ತೀಕರಿಸುವ ಅನುಕೂಲವೂ ದಕ್ಕಿದೆ. ಮುನಿಯು ಜಟಾಧಾರಿಯಾಗಿದ್ದರೂ ಜಟೆ ಭರತಾಚಾರ್ಯರಿಗೊಪ್ಪುವಂತಿದೆ. ಪಂಚೆಯನ್ನುಟ್ಟ ಈತ ಯಜ್ಞೋಪವೀತ ರುದ್ರಾಕ್ಷಧಾರಿ. ಇನ್ನು ನಾಟ್ಯಾಯಮಾನ ಸ್ಥಾನಕದಲ್ಲಿ ಮೂಲವಿಗ್ರಹವಿರುವುದೇ ಅತ್ಯಪರೂಪ. ಆದರೆ ಭರತಮುನಿಯು ನಾಟ್ಯಪೋಷಕವಾಗುವಂತೆ ಪುರುಷರಿಗೊಪ್ಪುವ ವೈಷ್ಣವಸ್ಥಾನಕದಲ್ಲಿ ನಿಂತಿದ್ದಾನೆ. ಭಾವಸಹಿತವಾದ ಪ್ರಸನ್ನವದನ ಅವನದ್ದು. ಬಲಗೈಯಲ್ಲಿ ಗುರುಸೂಚಕವಾಗಿ ಹಂಸಾಸ್ಯ ವ್ಯಾಖ್ಯಾನಮುದ್ರೆಯನ್ನು, ಎಡಗೈಯಲ್ಲಿ ಶಾಸ್ತ್ರವಿದನಾಗಿರುವುದಕ್ಕೆ ನಾಟ್ಯಶಾಸ್ತ್ರ ತಾಡಗ್ರಂಥವನ್ನೂ ಧರಿಸಿದ್ದಾನೆ. ಹಿಂಬದಿಯ ಬಲಗೈಯಲ್ಲಿ ಶ್ರುತಿಸೂಚಕವಾಗಿ ವೀಣೆಯಿಂದ, ಎಡಗೈಯಲ್ಲಿ ತಾಂಡವ ಮತ್ತು ಶಬ್ದಸೂಚಕವಾದ ಡಮರುವಿನಿಂದ ಅಲಂಕೃತನಾಗಿದ್ದಾನೆ. ಕರ್ನಾಟಕದ ಸ್ಥಪತಿ ರಾಜಶೇಖರ ಎಂಬುವರು ಇದರ ನಿರ್ಮಾರ್ತೃ ಎನ್ನಲಾಗಿದೆ. ಭರತಶಿಲ್ಪವು ಇಲ್ಲಿ ಸ್ಥಿತಿಶೀಲ ಸನಿಧ್ಯದಿಂದ ಪ್ರತಿಷ್ಠಾಪಿತನಾದರೂ ಆತ ಸ್ವಯಂ ಗತಿಶೀಲ. ಅದನ್ನು ಸ್ವತಃ ವಿಗ್ರಹವೇ ಸ್ಪಷ್ಟಪಡಿಸಿದೆ. ಆತನಿಂದ ದಕ್ಕಿದ ಗತಿಸೂಚಕವಾದ ೧೦೮ ಕರಣಗಳು ಶಿವ ಮತ್ತು ಪಾರ್ವತಿ ನರ್ತನವಾಡುವಂತೆ ದೇವಾಲಯಾವರಣದಲ್ಲಿ ಮತ್ತೆರ್ಸೃಷ್ಟಿಗೊಂಡು ಕರಿ ಗ್ರಾನೈಟ್ ಕಲ್ಲುಗಳಿಂದ ಭಿತ್ತಿಗಳನ್ನು ಅಲಂಕರಿಸಿವೆ. ಪದ್ಮಾ ಅವರ ಶಾಸ್ತ್ರ-ಪ್ರಯೋಗ ಸಮನ್ವಯದ ಅಧ್ಯಯನಚಕ್ಷುವಿನಿಂದ ಮೊದಲಿಗೆ ತೋರುವ ಎರಡು ಮುಖ್ಯಹಸ್ತಗಳಲ್ಲಿ ಕರಣದ ಸ್ಥಿತಿಯನ್ನು ಹಿಂದಿನ ಕೈಗಳು ಗತಿಯನ್ನೂ ಪ್ರತಿಪಾದಿಸುವಂತೆ ಮೂಡಿಬಂದಿದ್ದು ಪ್ರಾಚೀನ ದೇವಾಲಯಗಳ
ಕರಣಶಿಲ್ಪಗಳಿಗಿಂತ ಭಿನ್ನವೆನಿಸಿವೆ. ಇದಕ್ಕೆ ಕಂಚಿ ಪರಮಾಚಾರ್ಯರ ಸಾರಥ್ಯದಲ್ಲಿ ಮಹಾರಾಷ್ಟ್ರದ ಸತಾರದಲ್ಲಿ ಕಟ್ಟಿಸಲಾದ ಉತ್ತರ ಚಿದಂಬರಂ ದೇವಾಲಯದಲ್ಲಿ ಮೊದಲಬಾರಿಗೆ ಆಧುನಿಕ ಕಾಲದಲ್ಲಿ ಕರಣಗಳನ್ನು ಕೆತ್ತುವ ನಿರ್ದೇಶನಕ್ಕೆ ಸ್ವತಃ ಡಾ. ಪದ್ಮಾ ಅವರು ಇಂಬಾದದ್ದೇ ಪ್ರೇರಣೆಯಾಗಿತ್ತು ಎಂದೂ ಮತ್ತು ಭರತಮುನಿ ದೇವಾಲಯದಲ್ಲಿ ಕೆತ್ತಿಸಲಾದ ಒಂದು ಕರಣ ಶಿಲ್ಪಕ್ಕೆ ಮೂರು ತಿಂಗಳ ಸತತ ಕೆಲಸ ಬೇಕಾಗಿತ್ತು ಎಂಬುದನ್ನು ಸ್ವತಃ ಪದ್ಮಾ ಅವರೇ ದೃಢಪಡಿಸುತ್ತಾರೆ. ಹಾಗೆ ನೋಡಿದರೆ ವರ್ತಮಾನದಲ್ಲಿ ಈ ಮಟ್ಟಿಗೆ ದೊಡ್ಡ ನೆಲೆಯಲ್ಲಿ ಸನಾತನ ಸಂಸ್ಕೃತಿಯನ್ನು ಕಲಾಮುಖವಾಗಿ ಪುನರ್ದರ್ಶಿಸುವಂತೆಯೂ ಮತ್ತು ಪ್ರಕೃತದಲ್ಲಿರುವ ನರ್ತನದ ನೆಲೆಗಳನ್ನು ದಾಖಲೆ ಮಾಡುವಂತೆ ಏಕಕಾಲಕ್ಕೆ ಎರಡೂ ಕಾರ್ಯಗಳನ್ನು ಮನಗಾಣಿಸುವ ಶಿಲ್ಪೋದ್ಯೋಗವೇ ಆಗಿಲ್ಲವೆನ್ನಬಹುದು. ನಾಟ್ಯಕಲಾಪ್ರಪಂಚಕ್ಕೆ ಸರ್ವದಾ ಆದರಣೀಯವೂ, ಪೂಜ್ಯವೂ, ಆರಾಧನೀಯವೂ ಆದ ಈ ವಿಗ್ರಹಸ್ವರೂಪಿಯು ಮತ್ತು ಆಲಯವು ಭವಿಷ್ಯದಲ್ಲಿ ಭರತನೃತ್ಯಕಲಾವಿದರ ಮನೆದೇವರಾಗುವುದರಲ್ಲಿ ಸಂದೇಹವಿಲ್ಲ. ಪ್ರಕೃತ, ಲೇಖಿಕೆಯು ಅಧ್ಯಯನಮುಖವಾಗಿ ಕಂಡುಕೊಂಡ ಒಂದು ಪ್ರಾಯೋಗಿಕ ನಿದರ್ಶನವನ್ನು ಇಲ್ಲಿ ನಮ್ರವಾಗಿ ಉಲ್ಲೇಖಿಸಲಾಗುತ್ತಿದೆ. ಬೆಂಗಳೂರಿನ ಕಲಾಜೀವಿ ಶ್ರೀಮತಿ ಶಾಲಿನಿ ವಿಠಲ್ ಅವರು ತಮ್ಮ ‘ಕಲಾಗೌರಿ’ ಎಂಬ ಕಲಾಕಾರ್ಯಕ್ರಮಸರಣಿಗೆ ಸೂಕ್ತವಾದ ಪ್ರತಿಕೃತಿಯ ಆಲೋಚನೆಯಲ್ಲಿದ್ದಾಗ ಪ್ರಕೃತ ಲೇಖಿಕೆಯ ಸೂಚನೆಯ ಮೇರೆಗೆ ಚಿತ್ರಕಲಾವಿದ ಶ್ರೀಯುತ ಸತೀಶ್ ಹೆಗಡೆ ಯಲ್ಲಾಪುರ ಅವರು ತಮ್ಮ ಕಲ್ಪನೆಯಲ್ಲಿ ರೂಪಿಸಿದ ‘ಕಲಾಗೌರಿ’ಯು ಮೂಲತಃ ವರ್ಣಚಿತ್ರ. ಇದು ಸಂಸ್ಥೆಯ ಪ್ರಾತಿನಿಧಿಕ ಚಿತ್ರ (ಲೋಗೋ) ಆಗಿ ಮೊದಲು ಮೂಡಿಬಂದರೂ ನೃತ್ಯಸಮಯಕ್ಕೆ ಪೂಜಾರ್ಹವಾದ ಶಿಲ್ಪವನ್ನಾಗಿಸುವ ನಿರ್ದೇಶನದಂತೆ ವ್ಯಸ್ತರಾಗಿದ್ದು ಸದ್ಯಭವಿಷ್ಯದಲ್ಲಿ ಇದು ಉಪಾಸನಾಮೂರ್ತಿಯಾಗಲಿದೆ. ನಟರಾಜ ಶಿವನ ಮಡದಿಯಾಗಿ ಲಾಸ್ಯನರ್ತನಕ್ಕೆ ಗೌರಿಯು ಉಪಾಧೇಯವಾದರೂ ಪಾರ್ವತಿದೇವಿ ಶಕ್ತಿಸ್ವರೂಪಿಣಿಯಾಗಿ ಪ್ರಕಟಗೊಂಡದ್ದಿದೆಯೇ ಹೊರೆತು ಕಲಾಧಿದೇವತೆಯೆಂಬ ಅಭಿಧಾನಕ್ಕೆ ಪಾತ್ರವಾಗಿರಲಿಲ್ಲ. ಬದಲಾಗಿ ಸರಸ್ವತಿಯೇ ಕಲೆಗೆ ಅನ್ಯೋನ್ಯ ಸಂಬಂಧಿಯಾಗಿ ಶಿಲ್ಪ-ಗಾನ-ನೃತ್ಯಗಳಲ್ಲಿ ಚಿತ್ರಿತವಾದದ್ದು ಅಧಿಕ. ಈ ಪೈಕಿ ಕರ್ನಾಟಕದ ನುಗ್ಗೇಹಳ್ಳಿಯಲ್ಲಿರುವ ನಾಟ್ಯಸರಸ್ವತಿಯಂತೂ ಆರಾಧನೆಗೂ, ನಾಟ್ಯಸಮಯಕ್ಕೂ ಏಕಕಾಲಕ್ಕೆ ಒದಗಿ ಬರುವಂತೆ ಅರ್ಧಪುರಾಟಿಕಾ ದೇಶೀಚಾರಿಣಿಯಾಗಿ ನಾಟ್ಯವರ್ಗಕ್ಕೆ ಕೊಡುಗೆ ನೀಡಿದ ದೇವಶಿಲ್ಪ ಪ್ರಕಾರದ್ದು. ಆಲಯಗಳಲ್ಲಾದರೆ ದೇವತಾಶಿಲ್ಪಗಳು ಧ್ಯಾನಶ್ಲೋಕವನ್ನಾಧರಿಸಿ ಶಿಲೆಯಲ್ಲಿ ಚೈತನ್ಯ ಪಡೆಯುತ್ತವೆ. ಇಲ್ಲಿಯೋ ವ್ಯುತ್ಕ್ರಮದಲ್ಲಿ ಅಂದರೆ ಪ್ರಥಮತಃ ಕಲಾವಿದನ ಕಲ್ಪನೆಯಲ್ಲಿಯೇ ಮೂರ್ತಿವೆತ್ತು ನಂತರ ಧ್ಯಾನಶ್ಲೋಕವೊಂದನ್ನು ಬರೆಸಿಕೊಂಡ ಪ್ರಯೋಗವಾಗಿದೆ. ಹಾಗೆ ನೋಡುವುದಿದ್ದರೆ ಪ್ರತಿಕೃತಿಗಳು ರೇಖಾಚಿತ್ರಗಳಾದ ನಂತರವೇ ಶಿಲಾಮಾಧ್ಯಮವನ್ನು ಪ್ರವೇಶಿಸುವುದು ಹೊಸತಲ್ಲ. ಲೋಹಶಿಲ್ಪಗಳಲ್ಲಾದರೆ ವಿಗ್ರಹರೂಪವು ಅಚ್ಚಿನೊಳಗೇ ಮೈದಾಳುತ್ತದೆ. ಅದಾಗ್ಯೂ ಭವಿಷ್ಯದ ಶಿಲ್ಪಪಾರೀಣರಿಗೆ ಧ್ಯಾನಶ್ಲೋಕದ ಕೊರತೆಯೇ ನ್ಯೂನತೆಯೆಂದಾಗಬಾರದೆಂದೆಣಿಸಿ ವಿನಮ್ರವಾಗಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಂದ ಧ್ಯಾನಶ್ಲೋಕವನ್ನೂ ಬರೆಸಿಕೊಳ್ಳಲಾಗಿದ್ದು; ಭವಿಷ್ಯದಲ್ಲಿ ಶಿಲ್ಪಶಾಸ್ತ್ರದ್ವಾರಾ ಪರಿಷ್ಕೃತರೂಪಗಳನ್ನು ‘ಕಲಾಗೌರಿ’ಯಲ್ಲಿ ಕಂಡುಕೊಳ್ಳಬಹುದು.
ಸತ್ತ್ವಾಶ್ರಿತಾಂ ಸತ್ತ್ವದಾತ್ರೀಂ ಲಯನಾದಾಧ್ವಚಾರಿಣೀಮ್ ರಸನಾಂದಮಯೀಂ ಸೌಮ್ಯಾಂ ಕಲಾಗೌರೀಮುಪಾಸ್ಮಹೇ
ಇಲ್ಲಿ ರೇಖಾಚಿತ್ರದಲ್ಲಿ ಕಾಣಿಸಲಾಗಿರುವ ಕಲಾಗೌರಿಯ ರೂಪ ಚತುರ್ಬಾಹುಸಮನ್ವಿತವಾದದ್ದು. ಪ್ರಾಚೀನ ಮತ್ತು ಆಧುನಿಕವೆನಿಸಿಕೊಂಡಿರುವ ಸಕಲ ವಾದ್ಯ ಸಂಕೇತಸಮಾಹೃತವಾಗಿದ್ದು ಪ್ರಾಚೀನ ಆಧುನಿಕ ಎಂಬ ಶ್ರೇಣಿಯನ್ನು ಬದಿಗೊತ್ತಿ ಭಾರತೀಯ ಸಂಸ್ಕೃತಿಯು ಸರ್ವಜನಾಶ್ರಿತ, ಸರ್ವವರ್ಗಪೋಷಕವೆನಿಸುವ ಸೂಚನೆಯನ್ನಿತ್ತಿದೆ. ವೀಣೆ, ಕೊಳಲು, ಮೃದಂಗ, ತಬಲ, ನೂಪುರ, ತಬಲ, ಪಿಟೀಲುಗಳಿಂದ ಸುತ್ತುವರಿದಿರುವ ಕಲಾಗೌರಿಯು ನಾಟ್ಯಹಸ್ತಮುದ್ರೆಗಳ ಪ್ರಭಾವಳಿಯನ್ನು ಹೊಂದಿದ್ದಾಳೆ. ಬಲಗೈಗಳಲ್ಲಿ ಅಕ್ಷಮಾಲೆ, ಅಭಯಮುದ್ರೆಯನ್ನೂ, ಎಡಗೈಗಳಲ್ಲಿ ಕಮಲ, ವರದಕುಂಭವನ್ನು ಹಿಡಿದಿದ್ದು ಜ್ಞಾನಪ್ರವಾಹವೇ ಕುಂಭದಿಂದ ಹರಿದುಬರುವಂತಿದೆ.
ಕಲಾಗೌರಿಯ ರೇಖಾಚಿತ್ರವನ್ನು ಪರಿಷ್ಕರಿಸಲಾಗಿದ್ದು ಶಿಲ್ಪನಿರ್ಮಾಣವು ಅಷ್ಟಭುಜೆಯ ರೂಪವನ್ನು ತಾಳಿದೆ. ಶಬ್ದ-ಲಯ ಸೂಚಕ ಡಮರು, ನಾದಸೂಚಕವಾಗಿ ವೀಣೆ, ಶಕ್ತಿಸ್ವರೂಪದ ತ್ರಿಶೂಲ, ಶಾಸ್ತ್ರಸೂಚಕವಾಗಿ ಗ್ರಂಥಗಳು ಮತ್ತೂ ನಾಲ್ಕು ಕೈಗಳಲ್ಲಿ ವಿರಾಜಮಾನವಾಗಲಿವೆ. ಹಸ್ತಮುದ್ರೆಗಳು ಆಕೆಯ ನೃತ್ತಪ್ರಭಾವಳಿಯಾಗಿ, ತಾಳ-ನೂಪುರಗಳು ಆಕೆಯ ಪಾದಯುಗ್ಮದ ಬಳಿಯ ಪೂಜಾಸ್ಥಾನವನ್ನು ಅಲಂಕರಿಸಿವೆ
ಸಮಾರೋಪ
ಆಯಾಯ ಕಲಾಮಾಧ್ಯಮದ ಆಯ-ಅನುಕೂಲಕ್ಕನುಗುಣವಾಗಿ ಶಿಲ್ಪದಿಂದ ಕಾವ್ಯವನ್ನೂ, ಕಾವ್ಯದಿಂದ ಶಿಲ್ಪವನ್ನೂ, ಶಿಲ್ಪದಿಂದ ನರ್ತನವನ್ನೂ, ನರ್ತನದಿಂದ ಶಿಲ್ಪವನ್ನೂ ನೋಡುವ ರೀತಿ ಬೇರೆ ಬೇರೆಯಾಗಿರುತ್ತದೆ. ಭೌತಿಕವಾಗಿ ವ್ಯತ್ಯಾಸಗಳಿಲ್ಲವೆನಿಸಿದರೂ ಆಂತರ್ಯದಲ್ಲಿ ಕವಿ-ಕಲಾವಿದರ ಮನೋವ್ಯಾಪಾರದಲ್ಲಿ, ಸ್ವಾತಂತ್ರ್ಯ-ಸಂವಹನಕ್ರಮದಲ್ಲಿ ವ್ಯತ್ಯಾಸವಿರುತ್ತದೆ. ಶಿಲ್ಪವು ಕಾವ್ಯಾನ್ವಿತವಾಗಿ ಬೆಳೆದು ಆನಂತರ ತಳೆದ ನರ್ತನವನ್ನು ಗಮನಿಸುವುದಕ್ಕೂ, ನರ್ತನವೊಂದು ಶಿಲ್ಪರೂಪಕ್ಕೆ ಪ್ರೇರಣೆ ನೀಡುವುದಕ್ಕೂ, ನರ್ತನದ ರೂಪವೇ ಶಿಲ್ಪಾಕೃತಿಯಾಗುವುದಕ್ಕೂ, ನರ್ತನವು ಕವಿಮನಸ್ಸನ್ನು ಚೋದಿಸಿದ ನಂತರಕ್ಕೆ ಅದು ಶಿಲ್ಪಿಯ ಕಲ್ಪನೆಯಲ್ಲ್ಲಿ ತಳೆದು ಮೈಮೂಡುವುದಕ್ಕೂ ಕಲಾಕ್ರಿಯೆಯಲ್ಲಿಯೇ ಸಾಕಷ್ಟು ಭಿನ್ನತೆಯಿದೆ. ಧಾರ್ಮಿಕ, ಬೌದ್ಧಿಕ, ಭಾವನಾತ್ಮಕ, ಆಲಂಕಾರಿಕ, ಐತಿಹಾಸಿಕ- ಹೀಗೆ ನರ್ತನದ ಯಾವುದೇ ಆಯಾಮಗಳನ್ನು ಲಕ್ಷಿಸುವುದಿದ್ದರೂ ಶಿಲ್ಪಗಳು ತೋರುಗೈ. ಅಧಿಕೃತವಾಗಿ ಮುದ್ರಣಮಾಧ್ಯಮದ ಅನುಕೂಲತೆ ಇಲ್ಲದಿದ್ದ ಕಾಲದಲ್ಲಿ ಇದ್ದಿರಬಹುದಾದ ನೃತ್ಯವಿಶೇಷತೆಗಳನ್ನು ತಿಳಿಯಲು, ಇತಿಹಾಸವನ್ನು ಅರಿಯಲು ಹಾಗೂ ಕಾಲದ ಮಥನದಲ್ಲಿ ಕಳೆದುಕೊಂಡ ಸ್ವಾದವನ್ನು ಸವಿಯಲೂ ಶಿಲ್ಪಪ್ರಪಂಚವೇ ಏಕೈಕ ಮಾಧ್ಯಮ. ಶಿಲ್ಪದ ನರ್ತನಾನ್ವಯಕ್ಕೆ ಕಾವ್ಯ-ನಾಟಕ ಅಥವಾ ಲಕ್ಷಣಗ್ರಂಥಗಳ ಸಾಹಚರ್ಯವನ್ನೂ ಅಧ್ಯಯನಯುಕ್ತವಾಗಿ ಕಂಡುಕೊಂಡಾಗ ನಡೆ ಸುಲಿತ. ದರ್ಶನದ ದಿವ್ಯಾನುಭವವನ್ನು ಮೆರೆಯಿಸುವ ದಾರಿಗಳಲ್ಲಿ ಅಲಂಕಾರವು ಯುಕ್ತವೇ ಹೌದು. ಪ್ರಾಚೀನರಲ್ಲೂ ಬಣ್ಣ ಲೇಪಿಸಿ ಶಿಲ್ಪಾಕೃತಿಗಳನ್ನು ಸೊಗಯಿಸುವ ನಡೆ ಕಂಡುಬರುತ್ತದೆ. ಆದರೆ ಪುಷ್ಪ-ವಸ್ತ್ರ-ಆಭರಣಾಲಂಕೃತಿಯುವಿಗ್ರಹಸೌಂದರ್ಯವನ್ನು ಮರೆಸದಂತಿದ್ದರೆ ಕ್ಷೇಮ. ಇದು ದೇವಾಲಯಗಳ ಬಹಿರಾವರಣದ ಶಿಲ್ಪಗಳ ತೋರಿಕೆಯ ವಿಷಯದಲ್ಲೂ ಅನುಸರಣೀಯ. ಅತಿಯಾಗಿ ಸುಣ್ಣ-ಬಣ್ಣ ಬಳಿದೋ ಅಥವಾ ಇನ್ನಿತರ ರಚನೆ-ವಿನ್ಯಾಸಗಳನ್ನು ಮಾಡುವ ಭರದಲ್ಲಿ ಶಿಲ್ಪದ ನೈಜಸೌಂದರ್ಯವನ್ನು ಕೆಡಿಸಿದರೆ ಅದು ಕಲಾಕಲ್ಪದ ದೃಷ್ಟಿಯಿಂದ ನಷ್ಟವೇ ಹೌದು. ಆಯಾಯ ದೇವಾಲಯ ಮತ್ತು ಪ್ರದೇಶದ ಸಂಪ್ರದಾಯ, ಅನುಕೂಲ-ಲಭ್ಯತೆಗನುಗುಣವಾಗಿ ಶಿಲ್ಪದ ಆಕರಸಾಮಗ್ರಿಗಳು ವ್ಯತ್ಯಾಸವಾಗುವುದು ಸಹಜ. ಆದರೆ ಇವಿಷ್ಟೂ ಆಕರವಸ್ತುಗಳ ಪೈಕಿ ಕೃಷ್ಣಶಿಲೆಯಿಂದ ಮೂಡಿದ ಶಿಲ್ಪಗಳಿಗೆ ನೆಲೆ-ಬೆಲೆ-ಆಯುಷ್ಯ-ಆನಂದ ಹೆಚ್ಚು ಎನ್ನುವುದು ಲೇಖಿಕೆಯ ನಂಬಿಕೆ. ಕಾಷ್ಠ, ಮೃತ್ತಿಕೆ, ಸುಣ್ಣದ ಕಲ್ಲು, ಅಮೃತಶಿಲೆ, ಕಡುಶರ್ಕ ಪಾಕ, ಲೋಹ, ರತ್ನ, ಸ್ಪಟಿಕ ಇತ್ಯಾದಿಗಳಿಂದ ಪ್ರತಿಮೆಗಳನ್ನು ಮಾಡುವ ಪದ್ಧತಿಯನ್ನು ಶಿಲ್ಪಶಾಸ್ತ್ರವು ತಿಳಿಸುತ್ತದೆಯಾದರೂ ಶಿಲ್ಪ ಎಂದಾಗ ನೆನಪಿಗೆ ಬರುವುದು ಕೃಷ್ಣಶಿಲೆಯೇ. ಕಾವ್ಯ-ನೃತ್ಯಾದಿ ಕಲೆಗಳಿಗೆ ಆಕರವಾದವೂ ಕೃಷ್ಣಶಿಲೆಗಳೇ. ಅತಿಮಾನುಷತೆ, ಏಕಾಗ್ರತೆ, ಊಹಾತೀತತೆ, ಶ್ರದ್ಧಾಭಕ್ತಿಯ ಆಲಂಬನವಾಗಬಲ್ಲ ಅನುಬಂಧವೂ ಕೃಷ್ಣಶಿಲೆಯಲ್ಲಿ ಹೆಚ್ಚು. ಅಮೃತಶಿಲಾಮೂರ್ತಿ, ಪ್ಲಾಸ್ಟರ್ ಪ್ಯಾರಿಸ್ ಮೂರ್ತಿಗಳು ಮುದ್ದಾಗಿ ಕಾಣಬಹುದು. ಆದರೆ ಭಕ್ತಿ-ಶರಣಾಗತಿಯ ಆತ್ಯಂತಿಕ ಭಾವವನ್ನು ಸುಲಭಕ್ಕೆ ತರಲಾರವು. ಸಮಗ್ರವಾಗಿ ಹೇಳುವುದಾದರೆ, ಕೇವಲ ಆಹಾರ್ಯಪರಿಪುಷ್ಟವಾಗಿ ಆಕೃತಿನಿಷ್ಠವಾದಲ್ಲಿಗೇ ಯಾವುದೇ ಕಲೆ ಆಯುಷ್ಯವಂತವಾಗಲಾರದು. ಸಾತ್ವಿಕದ ಪರಿಪಾಕದಲ್ಲಿ ಆಂಗಿಕಾದಿಗಳು ಆಶಯಕ್ಕೆ ನಿಷ್ಠರಾದರೇನೇ ಕಲೆಗೆ ಚಿರಂಜೀವಿತ್ವ ಪ್ರಾಪ್ತಿ. ಚೆಲುವಿರುವುದು ಅಲಂಕರಣದಲ್ಲೋ, ಆಂಗಿಕದಲ್ಲೋ ಅಲ್ಲ. ಸತ್ತ್ವದಲ್ಲಿ, ಅಂತರಂಗದಲ್ಲಿ. ಹೆಚ್ಚೆಂದರೆ ಅಲಂಕರಣವು ಹೆಸರೇ ಹೇಳುವಂತೆ ಸೊಗಸನ್ನು ಹೆಚ್ಚಿಸೀತಷ್ಟೇ ವಿನಾ ಅದುವೇ ಪರಮಾರ್ಥವಾಗಲಾರದು. ಇದು ನೃತ್ಯದ ಅನ್ವಯ ಮತ್ತು ಅಧ್ಯಯನದ ದೃಷ್ಟಿಯಿಂದಲೂ ಗ್ರಹಣೀಯವಾದ ವಿಚಾರ. ನರ್ತನಶಿಲ್ಪಗಳ ರಕ್ಷಣೆ ಮತ್ತು ಮುತುವರ್ಜಿ ವಹಿಸಬೇಕಾದದ್ದು ದೇಶದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಇತಿಹಾಸದ ದೃಷ್ಟಿಯಿಂದ ಮಹತ್ತ್ವದ ವಿಚಾರ. ಭಾರತದ ನರ್ತನಶಿಲ್ಪಗಳ ಬಗ್ಗೆ ಸಮಗ್ರ ಅಧ್ಯಯನಸಮೀಕ್ಷೆಯೂ ಜಾಗತಿಕಮಟ್ಟದಲ್ಲಿ ಗಮನಾರ್ಹವಾಗಿ ಆಗಬೇಕಾದ್ದೂ ಅವಶ್ಯ. ವೈಯಕ್ತಿಕ ವಿದ್ವದಾಸಕ್ತಿಗಳೊಂದಿಗೆ ಸಾಂಸ್ಥಿಕ ಪ್ರಯತ್ನ, ಸಾಮಾಜಿಕರ ಸಹಕಾರ, ಸರ್ಕಾರದ ಪೋಷಕತ್ವವೆಲ್ಲವೂ ಒಟ್ಟ್ಟಾದರೆ ಈ ಕಾರ್ಯ ಸಾರ್ಥಕವಾಗುತ್ತದೆ. ಪ್ರಾಚೀನ ಪರಂಪರೆಯು ತನ್ನ ಅಳಿದುಳಿದ ರೂಪದಲ್ಲಾದರೂ ಸಂಸ್ಕೃತಿಯನ್ನು, ಸನಾತನೀಯರನ್ನು ಜೀವಂತವಾಗಿರಿಸಲಿ.
ಪರಾಮರ್ಶನ ಗ್ರಂಥಗಳು
ಗಣೇಶ್, ಆರ್. (೨೦೦೬). ಕಲಾಕೌತುಕ. ಬೆಂಗಳೂರು : ವಸಂತ ಪ್ರಕಾಶನ. ಗಣೇಶ್, ಆರ್.(೨೦೦೭). ಹೊಕ್ಕುಳ ಬಳ್ಳಿಯ ಸಂಬಂಧ. ಬೆಂಗಳೂರು : ವಸಂತ ಪ್ರಕಾಶನ. ಗಣೇಶ್, ಆರ್. (೨೦೦೯). ಹಾಸುಬೀಸು. ಬೆಂಗಳೂರು : ವಸಂತ ಪ್ರಕಾಶನ. ಡಿವಿಜಿ (೨೦೦೨). ಅಂತಃಪುರ ಗೀತೆಗಳು. ಮೈಸೂರು : ಕಾವ್ಯಾಲಯ ಪ್ರಕಾಶನ. ಡಿವಿಜಿ (೨೦೦೨). ಮಂಕುತಿಮ್ಮನ ಕಗ್ಗ. ಮೈಸೂರು : ಪ್ರಕಾಶನ. ಮನೋರಮಾ ಬಿ.ಎನ್ (೨೦೧೧). ನೃತ್ಯಮಾರ್ಗಮುಕುರ. ಮಡಿಕೇರಿ : ನೂಪುರ ಭ್ರಮರಿ-ಸಾನ್ನಿಧ್ಯ ಪ್ರಕಾಶನ. ಮನೋರಮಾ ಬಿ.ಎನ್ (೨೦೧೩). “ಆಲಯನೃತ್ಯಪದ್ಧತಿಯಾಗಿ ಅಳಿದುಳಿದ ಕೊಂಡಿ: ಕೌತ್ವ”- ಸಂಸ್ಕೃತ ರಂಗಭೂಮಿಯಡಿಯಲ್ಲಿ ಯಕ್ಷಗಾನ- ರಾಷ್ಟ್ರೀಯ ವಿಚಾರಸಂಕಿರಣದ ಸಮಗ್ರ ಸಂಪುಟದಲ್ಲಿ. ಜಿ.ಎಸ್.ಹೆಗಡೆ (ಸಂ). ಧಾರವಾಢ: ವಿಚಾರಸಂಕಿರಣ ಸಮಿತಿ. ಮನೋರಮಾ ಬಿ.ಎನ್ (೨೦೧೫). “ಆಗಮೋಕ್ತ ದೇವಾಲಯಗಳಲ್ಲಿ ನೃತ್ಯ ಮತ್ತು ದರ್ಶನಬಲಿ(ನರ್ತನಬಲಿ)ಯೆಂಬ ಅಳಿದುಳಿದ ಕೊಂಡಿ”-ಚಿಂತನ ಬಯಲು ಸಂಶೋಧನ ಚತುರ್ಮಾಸಿಕದಲ್ಲಿ, ರೇಶ್ಮಾ. ಜಿ ಭಟ್ (ಸಂ). ಸಂಪುಟ ೪ ಸಂಚಿಕೆ ೧ (ಜುಲೈ ಸೆಪ್ಟೆಂಬರ್ ೨೦೧೫). ಬಂಟ್ವಾಳ: ಚಿಂತನ ಬಯಲು ಪ್ರಕಾಶನ. ವೆಂಕಟಾಚಾರ್ಯ, (ಸಂ). (೧೯೫೩ -ಪುಸ್ತಕ ಆವೃತ್ತಿ; ೨೦೦೯-ಡಿಜಿಟಲ್ ಆವೃತ್ತಿ). ವಿಷ್ಣುಧರ್ಮೋತ್ತರ ಪುರಾಣ ತೃತೀಯ ಖಂಡ, ಭಾಗ ೧- ಸಾಯಣ ಭಾಷ್ಯ ಸಮೇತ ಋಗ್ವೇದಸಂಹಿತಾ ಮತ್ತು ಪುರಾಣಗಳ ಸಂಪುಟದಲ್ಲಿ. ಮೈಸೂರು: ಶ್ರೀ ಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸತ್ಯನಾರಾಯಣ, ರಾ, ಮಹಾಮಹೋಪಾಧ್ಯಾಯ (೧೯೮೬). ಭಾರತೀಯ ಸಂಗೀತದಲ್ಲಿ ಪರಿಭಾಷಾ ಪ್ರಯೋಗ. ಮೈಸೂರು : ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. Rao, Gopinatha, T, A (1914). Elements of Hindu Iconography. Vol.1, Part 1. Travancore: Government of Maharaja of Travancore. Santhanam, Sundari (2012). Desi Karana-sequential link. Bangalore : Bharata nrityashala. Subhramaniam, Padma (2004). Karanas. Chennai : Nrityodaya. Vatsayan, Kapila (1968). Classical Indian dance in literature and the arts. New Delhi : Sangeet Natak Akademi. Vijayendra, Karuna ( 2013). “Mahanata” in Noopuraagama. Edited by in Manorama B.N. Vol 1, Issue 1. Page . Bangalore : Noopura Bhramari Dance Researchers Forum. ಗಣೇಶ್, ಆರ್. ಭಾರತೀಯ ಮೂರ್ತಿಶಿಲ್ಪ- ಒಂದು ರಸಾಸ್ವಾದನೆ. ಬೆಂಗಳೂರು : ಪ್ರೇಕ್ಷಾ ಅಂತರ್ಜಾಲ. http://prekshaa.in/indian-sculpture-harappa-mohenjodaro-dance/#.Wh0mqEqWbIU ೨೯ಸೆಪ್ಟೆಂಬರ್ ೨೦೧೭
ಅನುಬಂಧ
ಈ ಅಧ್ಯಯನಲೇಖನದ ಆವಶ್ಯಕತೆಯ ಬಗ್ಗೆ ಸ್ಪಷ್ಟವಾಗಿ ಪ್ರತಿಪಾದಿಸಿ, ಲೇಖನವನ್ನು ಪರಾಮರ್ಶಿಸಿ ಸಲಹೆ-ಸೂಚನೆಗಳನ್ನು ನೀಡಿದ ಶತಾವಧಾನಿ ಡಾ. ಆರ್.ಗಣೇಶ್ ಅವರಿಗೆ ಮತ್ತು ಲೇಖನಕ್ಕೆ ಇಂಬಾಗಿ ನಿಂತ ಅವರ ಅಧ್ಯಯನಲೇಖನಗಳಿಗೆ ಲೇಖಿಕೆ ನತಮಸ್ತಕಳಾಗಿದ್ದಾರೆ. ಲೇಖನವಿನ್ಯಾಸದ ವೇಳೆ ಅದು ಸಾಗಬೇಕಾದ ರೀತಿನೀತಿಗಳಿಗೆ ದೀವಟಿಗೆಯಾಗಿ ಒದಗುವುದರೊಂದಿಗೆ ಲೋಕಮುಖವಾಗಿ ತಲುಪಿಸಿದ ನೃತ್ಯಗುರು ಡಾ. ಶೋಭಾ ಶಶಿಕುಮಾರ್; ಅವರಿಗೆ ನತಿಶತಗಳನ್ನು ಸಮರ್ಪಿಸಿದ್ದಾರೆ. ಕಾವ್ಯಸಮಯಕ್ಕೆ ಮಾರ್ಗದರ್ಶನ ನೀಡಿ ಲೇಖನವನ್ನು ಆಮೂಲಾಗ್ರವಾಗಿ ಓದಿ ಲೇಖಿಕೆಯ ಎಲ್ಲಾ ಅಧ್ಯಯನಗಳಿಗೆ ನೆರವಾಗುತ್ತಲೇ ಬಂದಿರುವ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಸರ್ವದಾ ವಂದ್ಯರು. ಲೇಖಿಕೆಯ ಪತಿ ವಿಷ್ಣುಪ್ರಸಾದ್, ಪುತ್ರ ಆನಂದವರ್ಧನ, ಮತ್ತು ತಾಯಿ ತಂದೆ ಬಿ.ಜಿ. ನಾರಾಯಣ ಭಟ್ ಮತ್ತು ಸಾವಿತ್ರಿಯವರ ಸಹಕಾರವೂ ಸ್ಮರಣೀಯ. ಲೇಖನದ ಪ್ರಕಾಶನಕ್ಕೆ ಬೆನ್ನೆಲುಬಾಗಿ ನಿಂತು ಬರೆಸುವುದರೊಂದಿಗೆ ಮುಖ್ಯ ಭಾಗಗಳನ್ನು ಇಂಗ್ಲೀಷ್ ಗೆ ಭಾಷಾನುವಾದ ಮಾಡುತ್ತಿರುವ ವಿದ್ವದ್ಸಹೋದರ ಅರ್ಜುನ್ ಭಾರದ್ವಾಜ್ ಮತ್ತು ಶಿಲ್ಪಾಧ್ಯಯನಕ್ಕೆ ನಿರಂತರವಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡ ಕಾಂಚನ ಮನೆತನದ ವಿದುಷಿ ರೋಹಿಣೀ ಸುಬ್ಬರತ್ನಂ, ನೂತನ ಶಿಲ್ಪರಚನೆಗೆ ಇಂಬಾದ ಸ್ನೇಹಿತೆ ಶಾಲಿನಿ ವಿಠಲ್ ಅವರಿಗೂ ಲೇಖಿಕೆ ಋಣಿಯಾಗಿದ್ದಾರೆ.