IV
ಇದಿಷ್ಟೂ ಈ ಮಹಾಕಾವ್ಯದ ಇಡಿಯಾದ ಸ್ವರೂಪಸೌಂದರ್ಯವನ್ನು ಕುರಿತ ಪುಟ್ಟ ಪರಿಚಯವಾಯಿತು. ಇನ್ನುಳಿದದ್ದು ಇಂಥ ಸಮಗ್ರಸೌಂದರ್ಯಕ್ಕೆ ಒದಗಿ ಬಂದ ಬಿಡಿಯಾದ ಚೆಲುವುಗಳ ವಿಶದೀಕರಣ. ಇದು ದಿಟಕ್ಕೂ ಕಷ್ಟ. ಏಕೆಂದರೆ ಇಂಥ ಪರಿಚಯಕ್ಕೆ ಕುಮಾರಸಂಭವಕಾವ್ಯಸಮಸ್ತದ ಸೂಕ್ತಿಸರ್ವಸ್ವವನ್ನೂ ಇಲ್ಲಿ ತಂದು ಜೋಡಿಸಬೇಕಾದೀತು. ಈ ಮಹಾಕೃತಿಯಲ್ಲಿ ನಮ್ಮ ಆಲಂಕಾರಿಕರು ಹೇಳುವ ಲಕ್ಷಣ, ಗುಣ, ರೀತಿ, ಅಲಂಕಾರ, ವಕ್ರತೆ, ಧ್ವನಿ, ಔಚಿತ್ಯ ಮುಂತಾದ ಎಲ್ಲ ತೆರನಾದ ಕಾವ್ಯಶೋಭಾಕರಧರ್ಮಗಳೂ ಪ್ರಾಯಿಕವಾಗಿ ಪ್ರತಿಯೊಂದು ಪದ್ಯದಲ್ಲೆಂಬಂತೆ ಕೋಡಿವರಿದಿವೆ. ಇದೇ ರೀತಿ ಪಾಶ್ಚಾತ್ಯವಿಮರ್ಶನಪದ್ಧತಿಯ ಪ್ರಕಾರ ಕಂಡರೂ ಇಮೇಜ್, ಮೆಟಫರ್, ಸ್ಟೈಲ್, ಡಿಕ್ಷನ್, ಈಡಿಯಮ್, ಸಜೆಷನ್, ಆಬ್ಜೆಕ್ಟಿವ್ ಕೋರಿಲೇಟಿವ್, ಡೀ ಕನ್ಷ್ಟ್ರಕ್ಷನ್ ಮುಂತಾದ ಅವೆಷ್ಟೋ ಪರಿಕಲ್ಪನೆಗಳೆಲ್ಲ ಕಾಳಿದಾಸನಲ್ಲಿ ತಮ್ಮ ಸಾರ್ಥಕ್ಯವನ್ನು ಕಾಣುತ್ತವೆಂದರೆ ಅತಿಶಯವಲ್ಲ. ಹೀಗಿರುವಾಗ ಸದ್ಯದ ಸಮಸ್ಯೆಗೆ ನಿಸ್ತಾರವೆಂತು? ಅಲ್ಲದೆ ಕುಮಾರಸಂಭವಕಾವ್ಯವನ್ನೇ ನೇರವಾಗಿ ಓದದೆ ಇಂಥ ಉಕ್ತಿ-ವರ್ಣನೆಗಳ, ಸಂನಿವೇಶ-ಪಾತ್ರಚಿತ್ರಣಗಳ ಸೊಗಸು ಪೂರ್ಣವಾಗಿ ಮನದಟ್ಟಾಗದು. ಮಿಗಿಲಾಗಿ ಇಂಥ ವಿವೇಚನೆಗಳೆಲ್ಲ ಈಗಾಗಲೇ ಅವೆಷ್ಟೋ ಬರೆಹಗಳಲ್ಲಿ ಮಿಂಚಿ ಮೆರೆದಿರುವ ಕಾರಣ ಇಲ್ಲಿ ಮತ್ತದೇ ಮೀಮಾಂಸೆಯು ಪಿಷ್ಟಪೇಷಣವಾದೀತು. ಆದುದರಿಂದಲೇ ಇದೀಗ ಹೊಸತೊಂದು ಕ್ರಮದಿಂದ ಈ ಮಹಾಕಾವ್ಯದ ರಾಚನಿಕಶಿಲ್ಪಸೌಂದರ್ಯವನ್ನು ಪರಿಭಾವಿಸೋಣ.
ಆದ್ಯಾಲಂಕಾರಿಕರಲ್ಲಿ ಒಬ್ಬನಾದ ಭಾಮಹನು ಮಹಾಕಾವ್ಯವೊಂದರಲ್ಲಿ ಭರತಮುನಿಯ ನಾಟ್ಯಶಾಸ್ತ್ರವು ಒಕ್ಕಣಿಸುವಂಥ ಪಂಚಸಂಧಿಗಳಿರಬೇಕೆಂದು ಹೇಳುತ್ತಾನೆ:
“ಪಂಚಭಿಃ ಸಂಧಿಭಿರ್ಯುಕ್ತಮ್................” (ಕಾವ್ಯಾಲಂಕಾರ, ೧-೨೦)
ಈ ಮೂಲಕ ಅವನು ದೃಶ್ಯಕಾವ್ಯಕ್ಕೂ ಶ್ರವ್ಯಕಾವ್ಯಕ್ಕೂ ನಡುವೆ ಸೊಗಸಾದ ಸಾಮಾನಾಧಿಕರಣ್ಯವನ್ನು ತರುತ್ತಾನೆ. ಇದು ತುಂಬ ಮಹತ್ತ್ವದ ಸಂಗತಿ. ಏಕೆಂದರೆ ರೂಪಕ(ದೃಶ್ಯಕಾವ್ಯ)ವು ವಸ್ತುತಃ ಕವಿಯೊರ್ವನ ರಚನೆಯ ರಂಗರೂಪವೇ ತಾನೆ! ಮಾತ್ರವಲ್ಲ, ಯಾವುದೇ ಶ್ರವ್ಯಕಾವ್ಯವಾಗಲಿ, ಅದರ ಓದುಗನ ಮನೋನೇತ್ರಗಳ ಮುಂದೆ ನೋಟವಾಗಿ ಮೆಯ್ದಾಳಬೇಕಷ್ಟೆ! ಆದುದರಿಂದಲೇ ಅಭಿನವಗುಪ್ತನ ನಾಟ್ಯಶಾಸ್ತ್ರಗುರು ಭಟ್ಟ ತೌತನು ನೋಡುಗಬ್ಬ ಮತ್ತು ಹಾಡುಗಬ್ಬಗಳ ತತ್ತ್ವೈಕ್ಯವನ್ನು ಹೀಗೆ ಒಕ್ಕಣಿಸುತ್ತಾನೆ:
ಅನುಭಾವ-ವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ|
ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಮ್|| (ಮಹಿಮಭಟ್ಟನ ’ವ್ಯಕ್ತಿವಿವೇಕ’ದಿಂದ ಉದ್ಧೃತ; ಪು. ೯೬)
ಈ ಪ್ರಕಾರ ರಸಪ್ರತೀತಿಗೆ ಮುಖ್ಯವೆನಿಸಿದ ಚಿತ್ತವೃತ್ತಿಗಳನ್ನೂ ಅವುಗಳ ಅಭಿವ್ಯಕ್ತಿಯಾಗಿ ಹೊಮ್ಮುವ ದೇಹವೃತ್ತಿಗಳನ್ನೂ ಮತ್ತಿವುಗಳ ಚೋದಕಗಳಾದ ಜಗತ್ತಿನ ವ್ಯಕ್ತಿ-ವಸ್ತು-ವಿಷಯ-ಘಟನೆಗಳೇ ಮುಂತಾದುವನ್ನೆಲ್ಲ ನುಡಿಬೆಡಗಿನ ಮೂಲಕ ಆಕರ್ಷಕವಾಗಿ ಬಣ್ಣಿಸಿದರೆ ಅದು ಶ್ರವ್ಯಕಾವ್ಯ. ಇವುಗಳನ್ನೇ ಹಾಡು, ಕುಣಿತ, ವೇಷ-ಭೂಷಣಗಳ ಮೂಲಕ ಬಿಂಬಿಸಿದರೆ ಆಗ ಅದು ದೃಶ್ಯಕಾವ್ಯ. ಈ ತತ್ತ್ವವನ್ನೇ ಮತ್ತೂ ಮುಂದುವರಿಸಿ ಹೀಗೆ ಸೂತ್ರೀಕರಿಸುತ್ತಾನೆ:
“ಪ್ರಯೋಗತ್ವಮನಾಪನ್ನೇ ಕಾವ್ಯೇ ನಾಸ್ವಾದಸಂಭವಃ” (ಅಭಿನವಗುಪ್ತನ ’ಅಭಿನವಭಾರತಿ’ಯಿಂದ ಉದ್ಧೃತ; ಸಂ. ೧, ಪು. ೨೯೧)
ಇದನ್ನು ಮತ್ತೂ ಸ್ಫುಟೀಕರಿಸುತ್ತಾ ಅಭಿನವಗುಪ್ತನು ಹೀಗೆ ನಿಶ್ಚಯಿಸುತ್ತಾನೆ:
“......ಕಾವ್ಯೇsಪಿ ನಾಟ್ಯಾಯಮಾನ ಏವ ರಸಃ| ಕಾವ್ಯಾರ್ಥವಿಷಯೇ ಹಿ ಪ್ರತ್ಯಕ್ಷಕಲ್ಪಸಂವೇದನೋದಯೇ ರಸೋದಯಃ|” (ಅದೇ)
ಬಹುಶಃ ಈ ಕಾರಣದಿಂದಲೇ ತೌತನಿಗಿಂತ ಹಿಂದಿನವನಾದ ವಾಮನನು ತನ್ನ ’ಕಾವ್ಯಾಲಂಕಾರಸೂತ್ರವೃತ್ತಿ’ಯಲ್ಲಿ ಹೀಗೆ ಸೂತ್ರೀಕರಿಸಿದ್ದಾನೆ:
“ಸಂದರ್ಭೇಷು ದಶರೂಪಕಂ ಶ್ರೇಯಃ” “ತದ್ಧಿ ಚಿತ್ರಂ ಚಿತ್ರಪಟವದ್ವಿಶೇಷಸಾಕಲ್ಯಾತ್” (೧-೩-೩೦,೩೧)
ಈ ಪ್ರಕಾರ ದೃಶ್ಯಕಾವ್ಯವೇ ಕವಿಕರ್ಮದ ಪೈಕಿ ಸುಂದರತಮ. ಏಕೆಂದರೆ ಇಲ್ಲಿ ಎಲ್ಲವೂ ಚಿತ್ರಪಟದ ಹಾಗೆ ದರ್ಶನೀಯವೆನಿಸಿ ಕಲಾನುಭವವನ್ನು ಮತ್ತಷ್ಟು ದಟ್ಟವಾಗಿಸುತ್ತದೆ. ಈ ನಿಟ್ಟಿನಿಂದ ಕಂಡಾಗ ಕುಮಾರಸಂಭವದಷ್ಟು ದೃಶ್ಯಾಯಮಾನವಾದ ಅಭಿಜಾತಮಹಾಕಾವ್ಯವು ಸಂಸ್ಕೃತಸಾಹಿತ್ಯದಲ್ಲಿಯೇ ಮತ್ತೊಂದಿಲ್ಲ. ಹೆಚ್ಚೇನು, ಮಿಕ್ಕ ದೇಶ-ವಿದೇಶಭಾಷೆಗಳಲ್ಲಿಯೂ ವಿರಳವೆಂದರೆ ಯಥಾರ್ಥ.
ಈ ಮುನ್ನ ಭಾಮಹನು ಒಕ್ಕಣಿಸಿದ ಭರತೋದಿತವೂ ಆದ ಪಂಚಸಂಧಿಗಳ ಪ್ರಸ್ತಾವವನ್ನು ಗಮನಿಸಿದೆವಷ್ಟೆ; ಅವು ಮುಖ, ಪ್ರತಿಮುಖ, ಗರ್ಭ, ಅವಮರ್ಶ ಮತ್ತು ನಿರ್ವಹಣ ಎಂದು ಹೆಸರಾಗಿವೆ. ಇವುಗಳ ಸಮಗ್ರತಾತ್ಪರ್ಯ ಮತ್ತು ಪರಮೋದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ವಿವರಿಸುವುದಾದರೆ ಈ ಐದು ಅಂಶಗಳು ಕಥೆಯ ಹರಿವು ಮುಖ್ಯಪಾತ್ರಗಳ ವರ್ತನೆಯನ್ನೂ ತನ್ಮೂಲಕ ಸಂಭವಿಸುವ ಘಟನೆಗಳನ್ನೂ ಅವಲಂಬಿಸಿ ಕ್ರಿಯೆ, ಪ್ರತಿಕ್ರಿಯೆ, ಸಂಘರ್ಷ, ಸಂಕ್ಷೋಭ ಮತ್ತು ಸಮನ್ವಯಗಳೆಂಬ ಹಂತಗಳಲ್ಲಿ ಸಾಗುತ್ತದೆ.
ಈ ಪ್ರಕಾರ ಕುಮಾರಸಂಭವದಲ್ಲಿ ’ಉಮೋತ್ಪತ್ತಿ’ಯೆಂಬ ಮೊದಲ ಸರ್ಗವು ಮುಖಸಂಧಿಯನ್ನೂ ’ಬ್ರಹ್ಮಸಾಕ್ಷಾತ್ಕಾರ’ವೆಂಬ ಎರಡನೆಯ ಸರ್ಗವು ಪ್ರತಿಮುಖಸಂಧಿಯನ್ನೂ ’ಮದನದಹನ’ವೆಂಬ ಮೂರನೆಯ ಸರ್ಗವು ಗರ್ಭಸಂಧಿಯನ್ನೂ ’ರತಿವಿಲಾಪ’ ಮತ್ತು ’ತಪಃಫಲೋದಯ’ಗಳೆಂಬ ನಾಲ್ಕು ಮತ್ತು ಐದನೆಯ ಸರ್ಗಗಳು ಅವಮರ್ಶಸಂಧಿಯನ್ನೂ ’ಉಮಾಪ್ರದಾನ’, ’ಉಮಾಪರಿಣಯ’ ಮತ್ತು ’ಉಮಾಸುರತ’ಗಳೆಂಬ ಕಡೆಯ ಮೂರು ಸರ್ಗಗಳು ನಿರ್ವಹಣಸಂಧಿಯನ್ನೂ ಒಳಗೊಳ್ಳುತ್ತವೆ. ಈ ವಿಭಾಗಗಳು ತೀರ ನಿರ್ದಿಷ್ಟವಲ್ಲ; ಅಷ್ಟಿಷ್ಟು ವ್ಯತ್ಯಾಸಗಳು ಆಗಿಯೇ ತೀರುತ್ತವೆ. ಆದರೆ ಅವುಗಳ ಸ್ವರೂಪದಲ್ಲಿ ತೋರಿಕೊಳ್ಳುವ ವ್ಯಾವಹಾರಿಕಸಾಮಂಜಸ್ಯವಷ್ಟೇ ಇಲ್ಲಿ ವಿವಕ್ಷಿತ.
ಆನಂದವರ್ಧನನು ಕಾವ್ಯಾಭಿವ್ಯಕ್ತಿಯನ್ನು ಸ್ವತಃಸಂಭವಿ, ಕವಿಪ್ರೌಢೋಕ್ತಿ ಮತ್ತು ಕವಿನಿಬದ್ಧಪ್ರೌಢೋಕ್ತಿಯೆಂದು ಮುಬ್ಬಗೆಯಾಗಿ ಹೇಳುತ್ತಾನೆ. ಇವುಗಳ ಪೈಕಿ ಕವಿನಿಬದ್ಧಪ್ರೌಢೋಕ್ತಿಯೇ ಪರಮರಮಣೀಯವೆಂದೂ ತಿಳಿಯುತ್ತದೆ. ಏಕೆಂದರೆ ಇಲ್ಲಿ ಕವಿಯು ತಾನೇ ನೇರವಾಗಿ ಹೇಳದೆ ವಿವಿಧಪಾತ್ರಗಳ ಮೂಲಕವೇ ಎಲ್ಲವನ್ನೂ ಹೇಳಿಸುತ್ತಾನೆ. ಅದರೆ ಹೀಗೆಸಗುವಾಗ ಔಚಿತ್ಯವನ್ನು ಕುರಿತು ಮೈಯೆಲ್ಲ ಕಣ್ಣಾಗಿ ವರ್ತಿಸಬೇಕು. ಜೊತೆಗೆ ಆಯಾ ಪಾತ್ರಗಳ ಭಾವ, ಬುದ್ಧಿ, ಮನಸ್ಸು, ವಯಸ್ಸು, ಸಾಧನೆ, ಸಂಸ್ಕಾರ, ಸ್ಥಾನ, ಮಾನ ಮುಂತಾದ ಸಾವಿರಸಂಗತಿಗಳ ಅರಿವೂ ಇರಬೇಕು. ಹೀಗಾಗಿ ಕವಿನಿಬದ್ಧಪ್ರೌಢೋಕ್ತಿನಿರ್ವಾಹವೊಂದು ಬಗೆಯ ಅಸಿಧಾರಾವ್ರತ. ಶ್ರವ್ಯಕಾವ್ಯಗಳಲ್ಲಿ ಇದೊಂದೇ ಸರ್ವತ್ರ ಸಲ್ಲಬೇಕೆಂಬ ಅನಿರ್ವಾರ್ಯತೆಯಿಲ್ಲ. ಆದರೆ ದೃಶ್ಯಕಾವ್ಯದಲ್ಲಿ ಇದಿಲ್ಲದೆ ಬೇರೊಂದಕ್ಕೆ ಆಸ್ಪದವೇ ಇಲ್ಲ. ಅತ್ಯುತ್ತಮಶ್ರವ್ಯಕಾವ್ಯಗಳ ಯಶಸ್ಸಿಗೆ ಒಳ್ಳೆಯ ಇತಿವೃತ್ತ ಮತ್ತು ಉಜ್ಜ್ವಲಪಾತ್ರಚಿತ್ರಣಗಳೆಂತೋ ಅಂತೆಯೇ ಉತ್ತಮಸಂವಾದವೂ ಕಾರಣವಾಗುತ್ತದೆ. ಇವೆಲ್ಲ ಪರಸ್ಪರ ಪೂರಕಗಳು ಕೂಡ. ಇಂಥ ಸೊಗಸಾದ ಸಂಭಾಷಣಶಾಲೀನತೆಯು ಕವಿನಿಬದ್ಧಪ್ರೌಢೋಕ್ತಿಯಲ್ಲದೆ ಬೇರೊಂದಲ್ಲ. ವಸ್ತುತಃ ನಾಟ್ಯಾಯಮಾನತ್ವವಿಲ್ಲದೆ ಯಾವುದೇ ಕಥನಕಾವ್ಯಕ್ಕೆ ಹೆಚ್ಚಿನ ಸಾಫಲ್ಯವಿಲ್ಲವೆಂಬ ಮಾತನ್ನು ನಾವೀ ಮುನ್ನವೇ ಕಂಡಿದ್ದೇವೆ. ಇದು ಹೆಚ್ಚಾಗಿ ಸಾಧ್ಯವಾಗವುದು ಸರಸೋದಾರಸಂಭಾಷಣೆಗಳಿಂದ. ಕುಮಾರಸಂಭವವು ತನ್ನ ಒಟ್ಟಾರೆ ಗಾತ್ರಕ್ಕೆ ಹೋಲಿಸಿದರೆ ಮಿಕ್ಕ ಯಾವುದೇ ಅಭಿಜಾತವರ್ಗದ ಮಹಾಕಾವ್ಯಗಳಿಗಿಂತ ಮಿಗಿಲಾಗಿ, ಸೊಗಸಾದ ಸಂವಾದಗಳನ್ನೊಳಗೊಂಡಿದೆ. ಈ ಮಾತಿನ ತಥ್ಯವನ್ನು ಅಶ್ವಘೋಷ, ಭಾರವಿ, ಮಾಘ, ಮಂಖ, ರತ್ನಾಕರ, ಶಿವಸ್ವಾಮಿ, ಅಮರಚಂದ್ರಸೂರಿ, ವೇದಾಂತದೇಶಿಕ, ನೀಲಕಂಠದೀಕ್ಷಿತ ಮುಂತಾದ ಹಲವು ಲಬ್ಧಪ್ರತಿಷ್ಠರ ಗಣ್ಯಕೃತಿಗಳ ತೌಲನಿಕಾಧ್ಯಯನದಿಂದ ತಿಳಿಯಬಹುದು. ಶ್ರೀಹರ್ಷನಂಥ ಒಬ್ಬಿಬ್ಬರು ಕೆಲಮಟ್ಟಿಗೆ ಹೆಚ್ಚಿನ ಸಂವಾದಗಳನ್ನು ತಂದಿರುವರಾದರೂ ಪಾಂಡಿತ್ಯಪ್ರದರ್ಶನಕ್ಕಾಗಿಯೇ ಮೀಸಲಿಟ್ಟ ಅವರ ಶೈಲಿಯ ಜಿಗುಟು ಮತ್ತು ಭಾಷೆ-ಭಾವಗಳ ತೊಡಕಿನ ಕಾರಣ ಅಲ್ಲಿಯ ಸಂವಾದಗಳು ಪಾತ್ರಸಹಜವೂ ವೈವಿಧ್ಯಪೂರ್ಣವೂ ಆಗದೆ ಬಲುಬಾರಿ ಸೋಲುತ್ತವೆ. ಆದರೆ ಕಾಳಿದಾಸನ ಪರಿ ಹಾಗಲ್ಲ. ಅವನ ಕುಮಾರಸಂಭವಕಾವ್ಯವು ತನ್ನ ಸಹೋದರಕೃತಿ ರಘುವಂಶಕ್ಕಿಂತಲೂ ಹೆಚ್ಚಿನ ಪ್ರಮಾಣದ ಸಂವಾದಗಳನ್ನು ರಸೋಚಿತವೂ ಪಾತ್ರಪೋಷಕವೂ ಆದ ರೀತಿಯಲ್ಲಿ ಹೊಂದಿದೆ. ಹೀಗಾಗಿಯೇ ಈ ಕಾವ್ಯದ ಮೊದಲ ಸರ್ಗವನ್ನುಳಿದು ಹೆಚ್ಚು-ಕಡಮೆ ಮಿಕ್ಕೆಲ್ಲ ಸರ್ಗಗಳೂ ಕಮನೀಯಕವಿನಿಬದ್ಧಪ್ರೌಢೋಕ್ತಿಗಳಿಂದ ಕೂಡಿವೆ. ನಿಡಿದಾದ ಸಂವಾದಗಳಿಗೆ ಬ್ರಹ್ಮ-ಇಂದ್ರ-ಬೃಹಸ್ಪತಿಗಳ ಸಂವಾದ (ಎರಡನೆಯ ಸರ್ಗ), ಇಂದ್ರ-ಕಾಮರ ಸಂವಾದ (ಮೂರನೆಯ ಸರ್ಗ), ರತಿ-ವಸಂತರ ಸಂವಾದ (ನಾಲ್ಕನೆಯ ಸರ್ಗ), ವಟು-ಸಖಿ-ಪಾರ್ವತಿಯರ ಸಂವಾದ (ಐದನೆಯ ಸರ್ಗ), ಶಿವ-ಸಪ್ತರ್ಷಿಗಣ-ಹಿಮವಂತರ ಸಂವಾದ (ಆರನೆಯ ಸರ್ಗ), ಪುಟ್ಟ ಪುಟ್ಟ ಸಂಭಾಷಣೆಗಳಿಗೆ ಏಳನೆಯ ಸರ್ಗದ ವಿವಾಹಪ್ರಸಂಗವೂ ಸುದೀರ್ಘಸ್ವಗತಕ್ಕೆ ನಾಲ್ಕನೆಯ ಸರ್ಗದ ರತಿವಿಲಾಪವೂ ವಿಸ್ತೃತವ್ಯಾಖ್ಯಾನಕ್ಕೆ ಎಂಟನೆಯ ಸರ್ಗದ ಮಧುಚಂದ್ರಪ್ರವಾಸಿ ಶಿವನ ಕಥನವೂ ಮನೋಹರನಿದರ್ಶನಗಳೆನ್ನಬಹುದು.
ಇದೇ ರೀತಿ ಕಣ್ಣಿಗೆ ಕಟ್ಟುವಂಥ ರಮ್ಯೋಜ್ಜ್ವಲವರ್ಣನೆಗಳೂ ಕುಮಾರಸಂಭವದ ನಾಟ್ಯಾಯಮಾನತ್ವವನ್ನು ಹೆಚ್ಚಿಸಿವೆಯೆಂದರೆ ಅನೇಕರು ಹುಬ್ಬೇರಿಸಬಹುದು. ಏಕೆಂದರೆ ಮಾತಿನ ಮಂಡಪವೆನಿಸುವ ವಿಸ್ತೃತವರ್ಣನೆಗಳು ದೃಶ್ಯಕ್ಕೂ ಕ್ರಿಯೆಗೂ ಒಟ್ಟಂದದ ಕಥನಕ್ಕೂ ತುಂಬ ಮುಳುವಾಗುವಂಥವೆಂದು ವಸ್ತುಸ್ಥಿತಿ. ಹೀಗಿರುವಾಗ ಪ್ರಕೃತಕಾವ್ಯದ ವರ್ಣನೆಗಳ ವೈಲಕ್ಷಣ್ಯವಾದರೂ ಹೇಗೆಂಬ ಪ್ರಶ್ನೆ ಬಾರದಿರದು. ದಿಟವೇ, ಈ ಬಗೆಗೆ ಆನಂದವರ್ಧನನೇ ಮಾರ್ಮಿಕವಾದ ಎಚ್ಚರಿಕೆಯನ್ನೂ ನೀಡಿದ್ದಾನೆ. ಆದರೆ ಕುಮಾರಸಂಭವದ ವರ್ಣನೆಗಳಾವುವೂ ಕಥಾರೋಧಕವಾಗಿಲ್ಲ, ಪಾತ್ರಪ್ರಸ್ಫುಟೀಕರಣಕ್ಕೆ ತೊಡಕನ್ನು ತಂದಿಲ್ಲ. ಪ್ರತ್ಯುತ ಇಲ್ಲಿಯ ವರ್ಣನೆಗಳೆಲ್ಲ ಇತಿವೃತ್ತಕ್ಕೆ ಪೂರಕವಾಗಿವೆ; ಪಾತ್ರನಿರ್ಮಾಣಕ್ಕೆ ಸಹಕಾರಿಗಳಾಗಿವೆ.
ಸರ್ಗಾನುಸಾರವಾಗಿ ಇಲ್ಲಿಯ ವರ್ಣನೆಗಳನ್ನು ಗಮನಿಸಿದಾಗ ಯಾವೊಂದು ಬಣ್ಣನೆಯೂ ವ್ಯರ್ಥವೆನಿಸುವುದಿಲ್ಲ. ಮುಖ್ಯವಾಗಿ ಹಿಮಾಲಯದ ವರ್ಣನೆ, ಪಾರ್ವತೀದೇವಿಯ ಯೌವನೋದಯದಲ್ಲಿ ಆಕೆಯ ರೂಪ-ಲಾವಣ್ಯಗಳ ವರ್ಣನೆ, ಚಿಕ್ಕದಾಗಿ ಬಂದರೂ ಆಕರ್ಷಕವೆನಿಸುವ ಶಿವನ ತಪಸ್ಸಿನ ವರ್ಣನೆ ಹಾಗೂ ಉಮೆಯ ಶಿವಪರಿಚರ್ಯಾವರ್ಣನೆಗಳು (ಸರ್ಗ ೧), ತಾರಕಾಸುರತ್ರಸ್ತರಾದ ಸುರರು ಮಾಡುವ ಭವ್ಯವೂ ತತ್ತ್ವಭಾಸುರವೂ ಆದ ಬ್ರಹ್ಮಸ್ತುತಿ, ದೀನರಾಗಿ ಬಂದ ದಿಕ್ಪಾಲಕರನ್ನು ಬ್ರಹ್ಮನು ಬಣ್ಣಿಸುವ ಬಗೆ, ಇಂದ್ರನ ಸೂಚನೆಯ ಅನುಸಾರ ಬೃಹಸ್ಪತಿಯು ತಾರಕಾಸುರನ ದಾಂಧಲೆಗಳನ್ನು ಬ್ರಹ್ಮನಿಗೆ ತಿಳಿಸುವ ಪರಿ (ಸರ್ಗ ೨), ಮಹೋಜ್ಜ್ವಲವಾಗಿ ಅಕಾಲವಸಂತವಿಜೃಂಭಣೆ ಮತ್ತದರ ಪರಿಣಾಮ, ನಂದೀಶ್ವರನ ಎಚ್ಚರಿಕೆ, ತಪೋಮಗ್ನನಾದ ಮಹಾದೇವನ ದಿವ್ಯಗಂಭೀರಮೂರ್ತಿಯ ವರ್ಣನೆ, ಆ ಹೊತ್ತಿಗೆ ಅಲ್ಲಿಗೆ ಬಂದ ಪಾರ್ವತಿಯ ವರ್ಣನೆ ಹಾಗೂ ಮನ್ಮಥನ ದಹನದಲ್ಲಿ ಪರ್ಯವಸಿಸುವ ಆತನ ಬಾಣಪ್ರಯೋಗದ ಬಣ್ಣನೆಗಳು (ಸರ್ಗ ೩), ರತಿಯ ಪ್ರಲಾಪದಲ್ಲಿಯೇ ಪ್ರಸ್ಫುಟವಾಗುವ ಆಕೆ ಮತ್ತು ಮದನರಿಬ್ಬರ ನಡುವೆ ಇದ್ದ ಪ್ರೇಮ ಮತ್ತದರ ಅಭಿವ್ಯಕ್ತಿಮಾಧುರ್ಯದ ವರ್ಣನೆಗಳು ಹಾಗೂ ಅವಳ ಸಂತಸದ ಕ್ಷಣಗಳು ಸದ್ಯದ ದಾರುಣದುಃಖಸಂದರ್ಭಕ್ಕೆ ವಿಸಂವದಿಸುವ ಮೂಲಕ ಒದಗಿಬರುವ ವೈಷಮ್ಯವೈಕಟ್ಯಗಳ ವರ್ಣನೆ (ಸರ್ಗ ೪) ಪಾರ್ವತಿಯ ತಪಸ್ಸಿದ್ಧತೆ ಮತ್ತು ತನ್ಮೂಲಕ ಸೂಚಿತವಾಗುವ ಆಕೆಯ ಸೌಂದರ್ಯ, ಅವಳ ಕಠೋರತಪೋವರ್ಣನೆ ಹಾಗೂ ಅಲ್ಲಿ ಆನುಷಂಗಿಕವಾಗಿ ಧ್ವನಿಸುವ ಎಲ್ಲ ಋತುಗಳ ವರ್ಣನೆ, ವಟುವಿನ ಗೇಲಿಯ ಮಾತುಗಳಲ್ಲಿ ತೋರಿಕೊಳ್ಳುವ ಶಿವಾಪಹಾಸ್ಯದ ಮೂಲಕವೇ ಅತಿಸೂಕ್ಷ್ಮವಾಗಿ ಗಮ್ಯವಾಗುವ ಶಂಭುವಿನ ಲೋಕೋತ್ತರತ್ವದ ವರ್ಣನೆ, ಪಾರ್ವತಿಯ ಪರಶಿವಸಮರ್ಥನರೂಪದಲ್ಲಿ ತೋರಿಕೊಳ್ಳುವ ಶಂಕರೋತ್ಕರ್ಷವರ್ಣನೆ (ಸರ್ಗ ೫), ಸಪ್ತರ್ಷಿಗಳ ಚಿಕ್ಕದಾದರೂ ಚೊಕ್ಕ ಬಣ್ಣನೆ, ಅವರು ಮಾಡುವ ವೇದಾಂತಮಯವಾದ ಶಿವಸ್ತುತಿ, ಓಷಧಿಪ್ರಸ್ಥದ ವರ್ಣನೆ, ಪಾರ್ವತಿಯ ವಧ್ವಲಂಕರಣವರ್ಣನೆ, ಶಿವನ ವರಾಲಂಕಾರವರ್ಣನೆ, ಶಿವನ ದಿಬ್ಬಣದ ಬಣ್ಣನೆ, ಮೆರವಣಿಗೆಯಲ್ಲಿ ಬರುವ ವರನನ್ನು ಕಾಣಲೆಳಸಿದ ನಗರನಾರಿಯರ ಸಂಭ್ರಮವರ್ಣನೆ, ವಿವಾಹವರ್ಣನೆ (ಸರ್ಗ ೭), ಶಿವ-ಪಾರ್ವತಿಯರ ಮೊದಲ ರಾತ್ರಿಯ ವರ್ಣನೆ, ಮರುದಿನದ ಮಧುರಸಂದರ್ಭಗಳ ವರ್ಣನೆ, ಶಿವನಲ್ಲಿ ಸಲುಗೆ ಹೆಚ್ಚಿ ಲಜ್ಜೆಯಳಿದ ಗೌರಿಯ ಪ್ರಣಯವರ್ಣನೆ, ಮೇರು-ಗಂಧಮಾದನಾದಿಗಶಿಖರಗಳಲ್ಲಿ ನವದಂಪತಿಗಳ ಮಧುಚಂದ್ರವಿಹಾರದ ವೇಳೆಯಲ್ಲಿ ಅಲ್ಲಿಯ ಸುಂದರಪರಿಸರಗಳ ವರ್ಣನೆ, ಸಂಧ್ಯೆ ಮತ್ತು ಚಂದ್ರೋದಯಗಳ ವರ್ಣನೆ (ಸರ್ಗ ೮) : ಹೀಗೆ ಪ್ರತಿಯೊಂದು ವರ್ಣನೆಯೂ ಕಥೆ ಮತ್ತು ಪಾತ್ರಗಳನ್ನು ಬಲುಚೆನ್ನಾಗಿ ನಡಸಿದೆ; ಯಾವುದು ವರ್ಣನೆ ಮತ್ತಾವುದು ನಿರೂಪಣೆ ಇನ್ನಾವುದು ಸಂಭಾಷಣೆ ಮತ್ತೆಲ್ಲಿ ಕಥಾವಿಸ್ತರ ಎಂಬ ವಿಭಾಗಕ್ಕೇ ಅವಕಾಶವೀಯದಂತೆ ಎಲ್ಲವೂ ಸಮರಸವಾಗಿ ಸಾಗಿದೆ.
ಇವನ್ನೆಲ್ಲ ಪರಿಕಿಸಿದಾಗ ಮೇಲ್ನೋಟಕ್ಕೆ ಬರಿಯ ಶ್ರವ್ಯಕಾವ್ಯವೆಂಬಂತಿರುವ ಕುಮಾರಸಂಭವವು ತನ್ನೊಳಗೆ ಅತಿಶಯವಾದ ನಾಟ್ಯಾಯಮಾನತ್ವವನ್ನು ಹೊಂದಿ ತನ್ಮೂಲಕ ಸೊಗಸಾದ ದೃಶ್ಯಕಾವ್ಯದ ಹದವನ್ನು ಹೊಂದಿದೆಯೆಂದರೆ ಯುಕ್ತವಾದೀತು. ಇದನ್ನು ನಾವು ದಶರೂಪಕಪ್ರಕಾರಗಳ ಪೈಕಿ ಶ್ರೇಷ್ಠವೆನಿಸಿದ ನಾಟಕವೆಂಬ ಪ್ರಕಾರಕ್ಕೂ ಅಕೃತಕವಿಧಿಯಿಂದ ಸಮೀಕರಣವನ್ನು ಮಾಡಲು ಸಾಧ್ಯ. ನಾಟಕವು ಪ್ರಖ್ಯಾತವಸ್ತುವನ್ನು ಹೊಂದಿ, ಉದಾತ್ತನಾಯಕನಿಂದಲೂ ಮಿಗಿಲಾದ ಜೀವನಮೌಲ್ಯಗಳಿಂದಲೂ ಕೂಡಿರಬೇಕೆಂದು ಭರತಮಹರ್ಷಿಯೇ ಮೊದಲಾದ ಮಹಾಲಾಕ್ಷಣಿಕರು ಒಕ್ಕಣಿಸುತ್ತಾರೆ. ಅಲ್ಲದೆ ಇದು ವೀರ ಇಲ್ಲವೇ ಶೃಂಗಾರಗಳನ್ನು ಅಂಗಿರಸವಾಗಿ ಹೊಂದಿರಬೇಕು. ಸಂಧಿ-ಸಂಧ್ಯಂಗಗಳು, ಪಂಚಾವಸ್ಥೆಗಳು, ಅರ್ಥಪ್ರಕೃತಿಗಳೇ ಮೊದಲಾದ ಎಲ್ಲ ಅಂಶಗಳಿಂದಲೂ ಯಥೋಚಿತವಾಗಿ ಕ್ಲಪ್ತವೆನಿಸಿರಬೇಕು. ಶೃಂಗಾರಕ್ಕೆ ಅಂಗವಾಗಿ ವೀರ, ಹಾಸ್ಯ, ಕರುಣ, ಅದ್ಭುತ ಮುಂತಾದ ಇನ್ನಿತರರಸಗಳು ಕೂಡಿಕೊಂಡು ಬರಬೇಕೆಂದೂ ನಿಯಮವಿದೆ. ಐದಕ್ಕೆ ಕಡಮೆಯಲ್ಲದ, ಹತ್ತಕ್ಕಿಂತ ಹೆಚ್ಚಾಗದ ಸಂಖ್ಯೆಯ ಅಂಕಗಳು ಇಲ್ಲಿರಬೇಕು. ಇಡಿಯ ರಚನೆಯು ಪ್ರಸನ್ನಗಂಭೀರಶೈಲಿಯಲ್ಲಿ ರೂಪುಗೊಳ್ಳಬೇಕು ಎಂಬಿವೇ ಮತ್ತೂ ಹತ್ತಾರು ಲಕ್ಷಣನಿಬಂಧನೆಗಳು ನಾಟಕಕ್ಕುಂಟು. ಇವೆಲ್ಲವೂ ಶುಷ್ಕನಿಷ್ಠುರನಿಯಮಗಳಾಗಿ ಶಬ್ದಶಾರಣ್ಯದ ವಿಧಿಯಿಂದ ಬರುವುದಿಲ್ಲ. ಇವುಗಳ ತಾತ್ಪರ್ಯವಷ್ಟೇ ತತ್ತ್ವತಃ ವಿವಕ್ಷಿತ.
ಆದರೆ ಕುಮಾರಸಂಭವವು ಅಕ್ಷರಶಃ ಈ ನಿಯಮಗಳಿಗೆ ಬದ್ಧವಾಗಿ ನಿರ್ಮಿತವಾದಂತೆ ತೋರುತ್ತದೆ. ಮಾತ್ರವಲ್ಲ, ಈ ವರ್ಗದಲ್ಲಿ ಅತ್ಯುಚ್ಚಸ್ತರದ ಕೃತಿಯಾಗುವ ಸಾಧ್ಯತೆಯೂ ಇದೆಯೆಂಬಂತೆ ಕಾಣುತ್ತದೆ. ಹೀಗಾಗಿಯೇ ಇದನ್ನು ಬಲುಮಟ್ಟಿಗೆ ಅನುಸರಿಸಿ ಹದಿನೈದನೆಯ ಶತಮಾನದಲ್ಲಿದ್ದ ಆಂಧ್ರಮೂಲದ ಕೊಂಡವೀಡಿನ ಸಂಸ್ಕೃತಕವಿ ವಾಮನಭಟ್ಟನು (ಈತನಿಗೆ ಅಭಿನವಬಾಣಭಟ್ಟನೆಂಬ ಬಿರುದಿತ್ತು) “ಪಾರ್ವತೀಪರಿಣಯ”ವೆಂಬ ಹೆಸರಿನ ನಾಟಕವನ್ನೇ ರಚಿಸಿದನು. ಆತನಿಗೆ ಅಂಥ ಪ್ರತಿಭೆಯಿರಲಿಲ್ಲವೆಂಬುದು ಬೇರೆ ಮಾತು. ಆದರೆ ಕುಮಾರಸಂಭವದ ರೂಪಕಸಾಧ್ಯತೆ ಮಾತ್ರ ಅತ್ಯುತ್ಕೃಷ್ಟ.
ಕೇವಲ ದಿಕ್ಸೂಚಿಯಾಗಿ ಅದರ ಸರ್ಗಗಳನ್ನು ಅಂಕಗಳ ರೀತಿಯಲ್ಲಿ ಜೋಡಿಸಿದರೆ ಹೇಗಾದೀತೆಂದು ನೋಡಿ ನಾವು ಮುಂದೆ ಸಾಗಬಹುದು:
ಪ್ರಥಮಸರ್ಗ : ಮೊದಲನೆಯ ಅಂಕ
ದ್ವಿತೀಯಸರ್ಗ : ಎರಡನೆಯ ಅಂಕ
ತೃತೀಯಸರ್ಗ ಮತ್ತು ಚತುರ್ಥಸರ್ಗ : ಮೂರನೆಯ ಅಂಕ
ಪಂಚಮಸರ್ಗ ಮತ್ತು ಷಷ್ಠಸರ್ಗ : ನಾಲ್ಕನೆಯ ಅಂಕ
ಸಪ್ತಮಸರ್ಗ ಮತ್ತು ಅಷ್ಟಮಸರ್ಗ : ಐದನೆಯ ಅಂಕ
ಈ ಪಟ್ಟಿಯನ್ನು ಕೇವಲ ಯಾಂತ್ರಿಕವಾದ ಲೆಕ್ಕದಂತೆ ರಚಿಸಿಲ್ಲ. ರೂಪಕಕ್ಕೆ ಬೇಕಾದ ಕಲಾತ್ಮಕದೃಷ್ಟಿಯಿಂದಲೇ ಇದನ್ನು ರೂಪಿಸಿರುವುದಾಗಿದೆಯೆಂಬುದು ಸಹೃದಯರಿಗೆಲ್ಲ ಸುವೇದ್ಯ. ಇಲ್ಲಿ ನಾಟ್ಯಶಾಸ್ತ್ರವು ಹೇಳುವ ಅಂಕವೊಂದರ ಐಚ್ಛಿಕವಿಭಾಗಗಳಾದ ವಿಷ್ಕಂಭಕ, ಪ್ರವೇಶಕ, ಅಂಕಾಸ್ಯ, ಅಂಕಾವತಾರ ಮುಂತಾದುವುಗಳ ಒತ್ತಡ ಹೆಚ್ಚಿರದು. ಕೇವಲ ಮುಖ್ಯಾಂಕದಲ್ಲಿಯೇ ಆಗೀಗ ಬರಬಹುದಾದ ಒಂದೆರಡು ದೃಶ್ಯಗಳ ಆವಶ್ಯಕತೆಯಷ್ಟೇ ಉಳಿಯುತ್ತದೆ. ಇದೇ ರೀತಿ ವಿದೂಷಕ, ಚೇಟಿ, ಚಾರ, ಕಂಚುಕಿ, ಭಟ, ಪ್ರತೀಹಾರಿ ಮುಂತಾದ ಮೂಲಕಾವ್ಯೇತರಪಾತ್ರಗಳ ಗೋಜೂ ಇಲ್ಲ. ಎಲ್ಲವೂ ಕವಿ ಕಾಳಿದಾಸನ ದರ್ಶನಾನುಸಾರ, ಇರುವ ಪಾತ್ರಗಳಲ್ಲಿಯೇ ಅಡಕವಾಗುತ್ತದೆ. ಹೀಗಾಗಿ ಮೂಲಕೃತಿಯನ್ನು ಮನಸ್ವೀ ತಿರಿಚುವ ಪ್ರಮೇಯ ಬರುವುದೇ ಇಲ್ಲ. ಸಂಸೃತರೂಪಕಗಳಲ್ಲಿ ಗದ್ಯ-ಪದ್ಯಗಳ ಮಿಶ್ರಣವಿರುವಂತೆ ಪ್ರಕೃತಕೃತಿಯಲ್ಲಿ ಸಾಧ್ಯವಿಲ್ಲವೆಂದು ಚಿಂತಿಸಬೇಕಿಲ್ಲ. ಕಾಳಿದಾಸನ ಪದ್ಯವು ಉತ್ಕೃಷ್ಟವೂ ಸಹಜಸುಂದರವೂ ಆದ ಸರಳೋದಾರಗದ್ಯದ ಭಾಗ್ಯವೆನಿಸಿದ ನುಡಿಗಟ್ಟಿನ ಸೊಗಡನ್ನು ಅಮಿತವಾಗಿ ಹೊಂದಿದ ಸಾರಸ್ವತಸಿದ್ಧಿ. ಪದ್ಯಬದ್ಧವಾದ ಆತನ ಮಾತುಗಳು ಅನ್ವಯಾನುಸಾರ ಪುನಾರೂಪಿಸಲ್ಪಟ್ಟಾಗ ಚೆಲುವಾದ ಗದ್ಯವು ತಾನಾಗಿ ಉನ್ಮೀಲಿಸುವುದರಲ್ಲಿ ಸಂಶಯವಿಲ್ಲ. ಹೀಗೆ ಸಮಸ್ತವೂ ಸಂಪನ್ನ. ಇನ್ನು ಸಂಸ್ಕೃತರೂಪಕಗಳಿಗೆ ಅನಿವಾರ್ಯವಾದ, ಆಪ್ಯಾಯನವೂ ಆದ ಪರಿಪರಿಯ ಗೀತ-ನೃತ್ಯ-ವಾದಿತ್ರಗಳ, ಆಹಾರ್ಯವೈಭವದ ಅಂದ-ಚಂದಗಳು ಸೇರಿ ಸಮವಾಯಗೊಂಡಾಗಲಂತೂ ಕುಮಾರಸಂಭವದ ದರ್ಶನೀಯತೆ ಮತ್ತಷ್ಟು ಮಿಂಚದಿರದು. ಈ ಬಗೆಯ ಬೆರಗು, ಬೆಡಗು, ಸೊಗಸುಗಳನ್ನು ನಾವು ಮತ್ತಾವ ಸಂಸ್ಕೃತಮಹಾಕಾವ್ಯವು ನಾಟಕೀಕೃತವಾದಾಗಲೂ ಕಾಣಲು ಸಾಧ್ಯವಾಗದು. ಅಷ್ಟೇಕೆ, ಕಾಳಿದಾಸನದೇ ಆದ ಮತ್ತೊಂದು ಮಹಾಕೃತಿ ರಘುವಂಶಕ್ಕೆ ಕೂಡ ದಕ್ಕದ ಸೌಭಾಗ್ಯ. ಇನ್ನು ಮುಂದೆ ನಾವು ರೂಪಕದ ಸಾಧ್ಯತೆಯನ್ನೂ ಮೀರಿ ಚಲನಚಿತ್ರದ ಆಯಾಮದತ್ತ ಸಾಗಬಹುದು.
Concluded in the next part