ಅನಪೇಕ್ಷಿತಗುರುವಚನಾ ಸರ್ವಾನ್ಗ್ರಂಥೀನ್ವಿಭೇದಯತಿ ಸಮ್ಯಕ್ |
ಪ್ರಕಟಯತಿ ಪರರಹಸ್ಯಂ ವಿಮರ್ಶಕಶಕ್ತಿರ್ನಿಜಾ ಜಯತಿ ||
ಗುರೂಪದೇಶದ ಅಪೇಕ್ಷೆಯಿಲ್ಲದೆ ಕಗ್ಗಂಟಿನಂಥ ಎಲ್ಲ ತೊಡಕುಗಳನ್ನೂ ಸುಲಭವಾಗಿ ನಿವಾರಿಸಿಕೊಳ್ಳುವ ಹಾಗೂ ಗಹನವಾದ ಪರಮರಹಸ್ಯವನ್ನೂ ಅರ್ಥೈಸಿಕೊಳ್ಳುವ ಸಾಮರ್ಥ್ಯವು ಸ್ವಂತವಿಮರ್ಶಕಶಕ್ತಿಯಿಂದ ಲಭಿಸುವುದು.
ಶ್ರೀಯುತ ಸೇಡಿಯಾಪು ಕೃಷ್ಣಭಟ್ಟರನ್ನು (8.6.1902 – 8.6.1996) ನೆನೆದಾಗಲೆಲ್ಲ ವಲ್ಲಭದೇವನ ಸುಭಾಷಿತಾವಲಿಯ ಪ್ರಕೃತಪದ್ಯವು ನನಗೆ ನೆನಪಾಗುತ್ತದೆ. ಅಕ್ಷರಶಃ ಇದರಂತೆಯೇ ಇತ್ತು ಅವರ ಮೇಧೆ. ಜ್ಞಾನದ ಸಂಪಾದನೆ ಮತ್ತು ಅದರ ಪ್ರಸಾರವನ್ನು ತಪಸ್ಸಿನಂತೆ ನಡೆಸಿದವರು ಕೃಷ್ಣಭಟ್ಟರು. ಮನುಷ್ಯನೊಬ್ಬನಿಗೆ ಎಷ್ಟು ವಿಷಯಗಳಲ್ಲಿ ಪರಿಣತಿಯಿದೆ ಎಂಬುವುದು ಮುಖ್ಯವಲ್ಲ; ಆತನ ತಿಳಿವಳಿಕೆಯ ನಿರ್ದಿಷ್ಟತೆ, ನಿರ್ದುಷ್ಟತೆಗಳಷ್ಟೇ ಮುಖ್ಯ ಎಂಬುದು ಅವರ ನಿಲುವಾಗಿತ್ತು. ಜ್ಞಾನೋತ್ಪಾದನೆಯು ಯಜ್ಞದಂತೆ ಪವಿತ್ರವಾದ ಕ್ರಿಯೆ. ಅವುಗಳಲ್ಲಿ ಭಾಗವಹಿಸುವವರೆಲ್ಲರೂ ಸಮರ್ಪಿತರಾಗಿ, ಸತ್ಯಪ್ರಿಯರಾಗಿರಬೇಕೆಂಬುದೂ ಅವರದ್ದೇ ಅಭಿಪ್ರಾಯ. ನಮ್ಮ ಕಾಲದ ಮಾಹಿತಿಯ ಮಹಾಪ್ರವಾಹದಲ್ಲಿ ಕೊಚ್ಚಿಹೋಗಿ ಅನಾದರಕ್ಕೆ ತುತ್ತಾಗುತ್ತಿರುವ ಜ್ಞಾನನಿಷ್ಠೆಯು ಉಳಿಯುವುದಕ್ಕೆ ಕೃಷ್ಣಭಟ್ಟರಂಥವರ ಆದರ್ಶ ನಮಗೆ ನೆರವಾಗುತ್ತದೆ.
ಪುತ್ತೂರಿನ ಸಮೀಪದ ಸೇಡಿಯಾಪು ಗ್ರಾಮದಲ್ಲಿ ಜನಿಸಿದ ಕೃಷ್ಣಭಟ್ಟರು ಮದರಾಸ್ ವಿಶ್ವವಿದ್ಯಾಲಯದಿಂದ 'ವಿದ್ವಾನ್' ಪದವಿಯನ್ನು ಪಡೆದು ಮಂಗಳೂರಿನ ಎಲೋಸಿಯಸ್ ಹೈಸ್ಕೂಲಿನಲ್ಲಿ ಕನ್ನಡಪಂಡಿತರಾಗಿ ಸೇವೆ ಸಲ್ಲಿಸಿದರು. ಪಾರಂಪರಿಕವಾಗಿ ಬಂದ ಆಯುರ್ವೇದವಿದ್ಯೆಯನ್ನು ಕರಗತಮಾಡಿಕೊಂಡು ವೈದ್ಯವೃತ್ತಿಯನ್ನೂ ಕೆಲಕಾಲ ನಡೆಸಿದರು. ಹೀಗೆ ಮೇಷ್ಟರಾಗಿ, 'ನಾಟೀವೈದ್ಯ'ರಾಗಿ ಕೆಲಸ ಮಾಡಿದ ಸೇಡಿಯಾಪು ಕೃಷ್ಣಭಟ್ಟರು ಕನ್ನಡನಾಡು ಕಂಡಂಥ ಪ್ರಥಮಶ್ರೇಣಿಯ, ಪಂಕ್ತಿಪಾವನರಾದ ವಿದ್ವಾಂಸರಲ್ಲಿ ಒಬ್ಬರೆನಿಸಿಕೊಂಡ ಪರಿ ದಿಟವಾಗಿ ರೋಚಕ, ಸ್ಫೂರ್ತಿದಾಯಕ. “ಪಂಡಿತರೆಂದರೆ ಹೇಗಿರುತ್ತಾರೆಂದು ನಾನು ಸಂತೋಷದಿಂದ ಬೆರಳೆತ್ತಿ ತೋರಿಸಬಹುದಾದವರು ಸೇಡಿಯಾಪು” ಎಂದು ಶಿವರಾಮ ಕಾರಂತರು ಅವರನ್ನು ಕೊಂಡಾಡಿದ್ದಾರೆ.
ಕಿತ್ತುತಿನ್ನುವ ಬಡತನ ಮತ್ತು ಬಾಲ್ಯದಿಂದಲೂ ಅಂಟಿಕೊಂಡು ಬಂದ ಅನಾರೋಗ್ಯ – ಇದಾವುದನ್ನೂ ಲೆಕ್ಕಿಸದೆ ಪ್ರಖರವಾದ ಧೀಶಕ್ತಿಯ ನೆರವಿನಿಂದ ಕೃಷ್ಣಭಟ್ಟರು ತಮ್ಮ ಚಿದ್ರಂಗವನ್ನು ರೂಪಿಸಿಕೊಂಡರು. ಕನ್ನಡ, ಸಂಸ್ಕೃತ, ತುಳು, ತಮಿಳು, ಹಿಂದಿ, ಮಲಯಾಳ, ತೆಲುಗು ಮುಂತಾದ ಭಾಷೆಗಳನ್ನು ಅಭ್ಯಾಸ ಮಾಡಿ ಅವುಗಳಲ್ಲಿನ ಶ್ರೇಷ್ಠಗುಣಗಳನ್ನು ಒಗ್ಗೂಡಿಸಿಕೊಂಡರು. ಅವರು ಜನಿಸಿದ ಸೇಡಿಯಾಪು ಗ್ರಾಮವಾಗಲಿ ಅಥವಾ ಮುಂದೆ ಅವರು ನೆಲೆಸಿದ ಮಣಿಪಾಲವಾಗಲಿ ಸಂಪನ್ಮೂಲಗಳ ದೃಷ್ಟಿಯಿಂದ ಅಭಿವೃದ್ಧಿಯನ್ನೇ ಕಾಣದ ಪ್ರದೇಶಗಳು. ಇಂತಿದ್ದರೂ ಕೃಷ್ಣಭಟ್ಟರ ಶಾಸ್ತ್ರಾಧ್ಯಯನವು ಬಿರುಕಿಲ್ಲದೆ ಸಾಗಿತು. ಅವರ ಲೀಲಾಕ್ಷೇತ್ರವಾದ ಛಂದಸ್ಸಿನಂಲ್ಲಂತೂ ಅವರು ನಿಸ್ಸೀಮರಾದರು. ಈ ದಿಶೆಯಲ್ಲಿನ ಅವರ ಕೊಡುಗೆ ಅಪಾರ, ಅನ್ಯಾದೃಶ. ಅವರಿಗಂಟಿಕೊಂಡು ಬಂದ ಎಷ್ಟೋ ಬೇನೆಗಳಿಗಿಂತಲೂ ಅವರನ್ನು ಹೆಚ್ಚಾಗಿ ಕಾಡಿದ್ದು ಕಣ್ಣಿನ ಬಾಧೆ. ಇದು ಎಷ್ಟು ತೀವ್ರವಾಗಿತ್ತೆಂದರೆ ಅವರು ಸ್ವೇಚ್ಛೆಯಿಂದ ಕಣ್ಣುಗಳನ್ನು ತೆಗೆಸಿಕೊಂಡು ದೃಷ್ಟಿಹೀನರಾದರು. ಆದರೆ ದರ್ಶನಹೀನರಾಗಲಿಲ್ಲ. ಛಂದೋಮಾರ್ಗದಲ್ಲಿ ಸಾಗುವ ಸಮಸ್ತರಿಗೂ ಅನಿವಾರ್ಯವಾದ ದಾರಿದೀವಿಗೆಯಾದರು.
ಸೇಡಿಯಾಪು ಕೃಷ್ಣಭಟ್ಟರ ವ್ಯಕ್ತಿತ್ವದಲ್ಲಿ ಎದ್ದುಕಾಣುವ ಗುಣವೊಂದಿದ್ದರೆ ಅದು ಸ್ವೋಪಜ್ಞತೆ. ವಿಚಾರವು ಯಾವುದೇ ಆಗಲಿ, ಅದನ್ನವರು ತಮ್ಮ ಅನುಭವ-ಯುಕ್ತಿಗಳ ನೆಲೆಯಲ್ಲಿ ಶೋಧಿಸಿ, ಸತತವಾಗಿ ಮನನ ಮಾಡಿ ಅದರ ಬಗೆಗೆ ಸ್ಪಷ್ಟವಾದ ಅಭಿಪ್ರಾಯವನ್ನು ರೂಪಿಸಿಕೊಳ್ಳುವರು. ಇತರಪ್ರಮಾಣಗಳಿಗೆ ಅವರಿಂದ ಸಿಗುತ್ತಿದ್ದುದು ಹೆಚ್ಚೆಂದರೆ ಎರಡನೆಯ ದರ್ಜೆಯ ಮರ್ಯಾದೆ. ಜೀವನದುದ್ದಕ್ಕೂ ಅವರ ಅವಧಾರಣೆಯಿದ್ದದ್ದು ಸ್ವಾನುಭವದ ಮೇಲೆಯೇ. ಆದುದರಿಂದಲೇ ಅವರು ಚಿಕ್ಕವಯಸ್ಸಿನಲ್ಲಿಯೇ ಕುರಾನ್, ಬೈಬಲ್, ಧಮ್ಮಪದ ಮುಂತದ ಗ್ರಂಥಗಳನ್ನು ಅನುವಾದಗಳಲ್ಲಿ ಓದಿಕೊಂಡು ಅವುಗಳ ಸಾರಾಸಾರವನ್ನು ಚೆನ್ನಾಗಿ ಗ್ರಹಿಸಿದ್ದರು. ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಾಗವತ – ಇವುಗಳಂತೂ ಸರಿಯೇ ಸರಿ.
ಇತರರನ್ನು ಮೆಚ್ಚಿಸಲು ಅವರೆಂದೂ ಬರೆದವರಲ್ಲ. ಕವಿತೆ, ಸಣ್ಣಕಥೆ, ಶಾಸ್ತ್ರವಿಚಾರ – ಹೀಗೆ ಹಲವು ಬಗೆಯಲ್ಲಿ ಹಬ್ಬಿರುವ ಸೇಡಿಯಾಪುವಾಙ್ಮಯ ತುಂಬ ಮೌಲಿಕವಾದದ್ದು. ಆದರೆ ಗಾತ್ರದ ಮಾನದಂಡದದಿಂದ ಮಾಪನ ಮಾಡಿದರೆ ಅವರ ಬರವಣಿಗೆ ಅಷ್ಟೇನೂ ವಿಶಿಷ್ಟವಾದದ್ದಲ್ಲವೆಂದು ತೋರುತ್ತದೆ. ಇದಕ್ಕೆ ಕಾರಣವೇನೆಂದರೆ, ತಮ್ಮ ಕೃತಿಯು ಜಗತ್ತಿನ ಜ್ಞಾನರಾಶಿಗೆ ಧನಾತ್ಮಕವಾಗಿ ಸೇರ್ಪಡೆಯಾಗಬೇಕು, ಕೇವಲ ಚರ್ವಿತಚರ್ವಣದಿಂದ ಹೆಚ್ಚು ಪ್ರಯೋಜನವಿಲ್ಲವೆಂಬ ಸೇಡಿಯಾಪು ಕಷ್ಣಭಟ್ಟರ ವಿದ್ಯಾವ್ರತ. ಇದನ್ನೇ ಅವರು ಒಂದು ಕಡೆ ಹೀಗೆ ಹೇಳಿಕೊಂಡಿದ್ದಾರೆ –
ಹೆಚ್ಚು ಬರೆದವನಲ್ಲ
ನಿಚ್ಚ ಬರೆದವನಲ್ಲ
ಮೆಚ್ಚಿಸಲು ಬರೆಯುವಭ್ಯಾಸವಿಲ್ಲ
ಇಚ್ಚೆಗೆದೆಯೊಪ್ಪಿ ಬಗೆ
ಬಿಚ್ಚಿದರೆ ಕಣ್ಗೆ ಮಯ್
ಎಚ್ಚುವಂದದಿ ತಿದ್ದಿ ತೀಡಿ ಬರೆವೆ
ಇದನ್ನೆಲ್ಲ ಗಮನಿಸಿದಾಗ ಸೇಡಿಯಾಪು ಅವರು ಶುಷ್ಕಪಾಂಡಿತ್ಯದ ಪ್ರತಿನಿಧಿಗಳೆಂದು ಕೆಲವರಿಗೆ ತೋರಬಹುದು. ರಸವಿಲ್ಲದ ಪಾಂಡಿತ್ಯಕ್ಕೇನು ಬೆಲೆಯೆಂದು ಹಲವರು ಮೂಗುಮುರಿಯಬಹುದು. ಆದರೆ ವಸ್ತುಸ್ಥಿತಿ ಹೀಗಲ್ಲ. ಘನವಾದ ಪಾಂಡಿತ್ಯವನ್ನು ಎಷ್ಟು ಹಗುರವಾಗಿ ತೆಗೆದುಕೊಳ್ಳಬಹುದೆಂದು ಕೃಷ್ಣಭಟ್ಟರನ್ನು ನೋಡಿ ಕಲಿಯಬೇಕು. ಅವರೆಷ್ಟು ಸರಸಿಗಳೆಂದು ಅವರ ಮಾತಿನಲ್ಲಿಯೇ ನೋಡೊಣ. “ಸಾಹಿತ್ಯದ ಸಂತೆಯಲ್ಲಿ ನನ್ನದು ಚಿಲ್ಲರೆ ಅಂಗಡಿ. ಸ್ವಲ್ಪ ಛಂದಸ್ಸು, ಸ್ವಲ್ಪ ವ್ಯಾಕರಣ, ಸ್ವಲ್ಪ ಕಥೆ, ಸ್ವಲ್ಪ ಕವಿತೆ – ಎಲ್ಲವೂ ಸ್ವಲ್ಪ ಸ್ವಲ್ಪ. ಗಿರಾಕಿಗಳೂ ಸ್ವಲ್ಪವೇ!”
ಅವರ ಸಹಜವಿನೋದಶೀಲತೆಯ ನಿದರ್ಶನವಾಗಿ ತಮ್ಮ ಪ್ರಿಯಶಿಷ್ಯ ಎಂ. ರಾಮಚಂದ್ರ ಅವರಿಗೆ ಸೇಡಿಯಾಪು ಬರೆದ ಪತ್ರವನ್ನು ಗಮನಿಸೋಣ. ಗದಗಿನಲ್ಲಿ ನಡೆದ ಸಮ್ಮೇಳನವೊಂದನ್ನುದ್ದೇಶಿಸಿ ಬರೆಯುತ್ತ ಅವರೆನ್ನುತ್ತಾರೆ –
“ಸಂಮೇಳನದ ’ಕವಿಗೋಷ್ಠಿ’ಯಲ್ಲಿ ಉಪನ್ಯಾಸಕನಾಗಬೇಕೆಂದು ನನಗೆ ಕರೆ ಬಂದಿದೆ. ವಾಡಿಕೆಯಂತೆ, ತಿರಸ್ಕರಿಸುವ ನಿಶ್ಚಯ ಮಾಡಬೇಕಾಗಿದೆ. ಉಪನ್ಯಾಸ ಮಾಡುವ ಶಕ್ತಿ ಇನ್ನೂ ನನಗೆ ಬಂದಿಲ್ಲ. ಆದರೆ, ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಓದುತ್ತಿದ್ದೇನೆ. ಏನೂ ತೊಂದರೆ ಕಂಡುಬರಲಿಲ್ಲ. ಆಳ್ವರು ಊರಿಗೆ ಬಂದ ಮೇಲೆ, ಅವರ ಜತೆ ಸಿಕ್ಕಿದರೆ, ಉತ್ಸಾಹ ಉಂಟಾದರೆ, ದುಡ್ಡಿನ ಕೊರತೆ ಬಾರದಿದ್ದರೆ, ಗದಗಿನ ಮೇಳಕ್ಕೋ ನಿಮ್ಮ ಪಾಳೆಯಕ್ಕೋ ಬಿಜಯಂಗೈಯುವ ಆಲೋಚನೆ ಅಂಕುರಿಸಬಹುದೆಂಬ ಭರವಸೆಯನ್ನು ತಾಳುವುದಕ್ಕಾಗಿ ಪ್ರಯತ್ನ ಮಾಡತೊಡಗಬೇಕೆಂದು ಯೋಚಿಸುತ್ತಿದ್ದೇನೆ.”
ಕೃಷ್ಣಭಟ್ಟರು ತಮ್ಮ ಜೀವನದ ಹಲವು ವರ್ಷಗಳನ್ನು ಅಂಧರಾಗಿ ಕಳೆದರೆಂದು ಗಮನಿಸಿದೆವಷ್ಟೆ. ಇದನ್ನು ಅವರು ದೊಡ್ಡಬಾಧೆಯೆಂದು ಪರಿಗಣಿಸಲೇ ಇಲ್ಲ. ತದ್ವ್ಯತಿರಿಕ್ತವಾಗಿ ತಮ್ಮ ದೃಷ್ಟಿಹೀನತೆಯ ಬಗೆಗೆ ಸತತವಾಗಿ ಹಾಸ್ಯ ಮಾಡುತ್ತಿದ್ದರು. ಅನೇಕವರ್ಷಗಳ ಕಾಲ ಸೇಡಿಯಾಪು ಅವರ ಉಕ್ತಲೇಖನವನ್ನು ಬರೆದುಕೊಂಡು, ಅವರ ಗ್ರಂಥಗಳ ಪ್ರಕಟನೆಯಲ್ಲಿ ಶ್ರದ್ಧೆಯಿಂದ ದುಡಿಯುತ್ತಿದ್ದ ಶ್ರೀ ಪಾದೆಕಲ್ಲು ವಿಷ್ಣುಭಟ್ಟರು ಅದೊಮ್ಮೆ ತಮ್ಮ ಪುಟ್ಟಮಗಳನ್ನು ಸೇಡಿಯಾಪು ಅವರ ಬಳಿಗೆ ಕರೆದುಕೊಂಡು ಹೋದರು. ಮಗುವನ್ನು ಅಪ್ಪಿಕೊಂಡು ಕೃಷ್ಣಭಟ್ಟರು ಹೀಗೆಂದರು, “ನಾನು ಕಣ್ಣಿನಿಂದ ನೋಡುವ ಅಜ್ಜನಲ್ಲ, ಕೈಯಿಂದ ನೊಡುವ ಅಜ್ಜ.” ಮತ್ತೊಮ್ಮೆ ಶ್ರೀಯುತ ಜಿ. ವೆಂಕಟಸುಬ್ಬಯ್ಯನವರು ಅವರ ಮನೆಗೆ ಬಂದು “ಉಡುಪಿಗೆ ಬಂದಾಗಲೆಲ್ಲ ನಾನು ತಪ್ಪದೆ ಕೃಷ್ಣದೇಗುಲಕ್ಕೂ ನಿಮ್ಮ ಮನೆಗೂ ಬಂದೇ ಬರುತ್ತೇನೆ.” ಎಂದರು. ಮರುಕ್ಷಣವೇ ಸೇಡಿಯಾಪು ಅವರು “ಸರಿಯಾಯಿತು ಬಿಡಿ. ಆ ಕೃಷ್ಣನೂ ನಿಮ್ಮನ್ನು ನೋಡುವುದಿಲ್ಲ, ಈ ಕೃಷ್ಣಭಟ್ಟನೂ ನಿಮ್ಮನ್ನು ಕಾಣುವುದಿಲ್ಲ” ಎಂದರು. ಮಗದೊಮ್ಮೆ ಶತಾವಧಾನಿ ಗಣೇಶರು ಅವರನ್ನು ಕಾಣಲೆಂದು ಹೋದಾಗ ಆರೋಗ್ಯ ಹೇಗಿದೆಯೆಂದು ಪ್ರಶ್ನಿಸಿದರು. ಅದಕ್ಕೆ ಕೃಷ್ಣಭಟ್ಟರ ಉತ್ತರ ಬಹಳ ಸ್ವಾರಸ್ಯಕಾರಿ. ಶೃಂಗಾರಪರವಾದ ಪದ್ಯವೊಂದನ್ನು ಉದ್ಧರಿಸಿ, ಹತ್ತಿರವೇ ಇದ್ದ bedpan ಕಡೆಗೆ ಬೆಟ್ಟು ಮಾಡಿ, “ಅದು ಹಾಸಿಗೆಗೆ ಎಷ್ಟೆಷ್ಟು ಹತ್ತಿರವಾಗುತ್ತದೆಯೋ ನನ್ನ ಆರೋಗ್ಯ ಅಷ್ಟಷ್ಟು ದೂರವಾಗುತ್ತದೆ” ಎಂದರು. ಎಲ್ಲಿಯ ಶೃಂಗಾರ ಎಲ್ಲಿಯ ಬೀಭತ್ಸ! ಹೀಗೆ ಮಕ್ಕಳೊಂದಿಗೆ ಮಕ್ಕಳಾಗಿ, ವಿದ್ವಾಂಸರೊಂದಿಗೆ ವಿದ್ವಾಂಸರಾಗಿ ತಮ್ಮನ್ನು ತಾವು ಯಥೋಚಿತವಾಗಿ ಹಾಸ್ಯ ಮಾಡಿಕೊಳ್ಳುತ್ತಿದ್ದರು. ಅವರ ಜೀವನೋಲ್ಲಾಸ ಎಂದೂ ಕುಗ್ಗಲಿಲ್ಲ. ಕೊನೆಯ ಕಾಲದಲ್ಲಿ ಅತ್ಯಂತ ಜೀರ್ಣಶೀರ್ಣರಾಗಿದ್ದಾಗ ಅವರೆನ್ನುತ್ತಿದ್ದ ಮಾತು, “ನನಗೆ ಪಾಸ್ಪೋರ್ಟ್ ಸಿಕ್ಕಿದೆ; ಇನ್ನೂ ವೀಸಾ ಸಿಕ್ಕಿಲ್ಲ.”
ಅಪರವಯಸ್ಸಿನಲ್ಲಿಯೂ – ಬೇನೆಗಳ ತೀರದ ತೀವ್ರತೆಯ ಮಧ್ಯದಲ್ಲಿಯೂ – ಕೃಷ್ಣಭಟ್ಟರ ಧಿಷಣಾಶಕ್ತಿ ಎಷ್ಟು ಜಾಗರೂಕವಾಗಿದ್ದಿತೆಂದು ತಿಳಿಯುವುದಕ್ಕೆ ಕೆಲವು ಸಂಗತಿಗಳನ್ನು ಗಮನಿಸಬಹುದು. ಪ್ರತಿದಿನವೂ ರೇಡಿಯೋ ಕೇಳುವ ಹವ್ಯಾಸವಿದ್ದ ಸೇಡಿಯಾಪು ಅವರು ಅದನ್ನು ಬರಿಯ ಮನೋರಂಜನೆಗೆಂದು ಬಳಸಿಕೊಳ್ಳದೆ ಅದರಲ್ಲಿ ಪ್ರಸಾರವಾಗುತ್ತಿದ್ದ ಸಂಸ್ಕೃತಕಾರ್ಯಕ್ರಮಗಳನ್ನು ಕೇಳಿ ಭಾರತದ ಬೇರೆ ಬೇರೆ ಪ್ರಾಂತಗಳಲ್ಲಿನ ಸಂಸ್ಕೃತಭಾಷೋಚ್ಚಾರಣದ ವ್ಯತ್ಸಾಸಗಳು ಯಾವ ತೆರನಾದವೆಂದು ಗ್ರಹಿಸುತ್ತಿದ್ದರು. ಇದು ಅವರ 'ಸೂಕ್ಷ್ಮೇಕ್ಷಿಕೆ'ಗೆ ಹಿಡಿದ ಕನ್ನಡಿಯಾದರೆ ಅವರ ಗ್ರಂಥಸ್ವಾಧೀನತೆ ಮತ್ತೂ ಊಹಾತೀತವಾದುದು. ವಿ. ಎಸ್. ಆಪ್ಟೆ ಅವರ ಸಂಸ್ಕೃತ-ಇಂಗ್ಲಿಷ್ ಶಬ್ದಕೋಶವನ್ನು ಅವರು ಎಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದ್ದರೆಂದರೆ, ಅವರಿಗೆ ಕಣ್ಣು ಹೋಗಿ ಎಷ್ಟೋ ವರ್ಷಗಳ ನಂತರವೂ ಶಬ್ದವೊಂದರ ಬಗೆಗೆ ಕುತೂಹಲವುಂಟಾದಾಗ ಗ್ರಂಥವನ್ನು ಕೈಗೆತ್ತುಕೊಂಡು ಅದರ ಗಾತ್ರಾನುಸಾರವಾಗಿ ಹಲಕೆಲವು ಪುಟಗಳನ್ನು ತಿರುಗಿಸಿ, ಮುಂದಿರುವವರಿಗೆ ಹೀಗೆನ್ನುತ್ತಿದ್ದರಂತೆ. “ಈ ಪುಟದ ಆಚೆ-ಈಚೆ ಬಲಗಡೆಯ column ನಲ್ಲಿ ಕೆಳಗಡೆ ನಮಗೆ ಬೇಕಾದ ಶಬ್ದವಿದೆ ನೋಡಿ.” ಇದನ್ನು ಕಂಡು ವಿಸ್ಮಯಗೊಂಡವರು ಅದೆಷ್ಟು ಜನರೋ! “ವಿಸ್ಮಯೋ ಯೋಗಭೂಮಿಕಾ” ಅಲ್ಲವೇ? ಹೀಗೆ ಯೋಗದ ಯೋಗವನ್ನು ದಯಪಾಲಿಸಿದ ಕೃಷ್ಣಭಟ್ಟರಿಗೆ ಅವರ ವಾಚಕವೃಂದ ಸದಾ ಆಭಾರಿ.
ಕವಿಯಾಗಿ ಸೇಡಿಯಾಪು ಅವರ ಸಾಧನೆ ಅಷ್ಟೇನೂ ಮೇಲ್ಮಟ್ಟದ್ದಲ್ಲ. ಆದರೆ ಅವರ ಕಲ್ಪನೆಗಳು ಸದಾ ನೂತನವಾಗಿರುತ್ತಿದವು. ಗತಾನುಗತಿಕವಾದ ಉಪಮೆಗಳನ್ನಾಗಲೀ ರೂಪಕಗಳನ್ನಾಗಲೀ ಅವರೆಂದೂ ಬಳಸುತ್ತಿರಲಿಲ್ಲ. ಉದಾಹರಣೆಗೆ ಅವರ 'ಬೆಳಗಿನ ತಂಗಾಳಿ'ಯ ಕೆಲವು ಸಾಲುಗಳನ್ನು ನೋಡಬಹುದು.
“ಕನಸನು ಮುಸುಕನು ತೊಲಗಿಸಿ ಬರುತಿದೆ ಬೆಳಗಿನ ತಂಗಾಳಿ
ಮುಗಿಲ ಕೆಸರ ತುಳಿದಾಡುವ ಬೆಳ್ಮಗು! ಓವೋ ತಿಳಿಗಾಳಿ.
ಉಷೆಯ ಪಥಕೆ ಬೆಳ್ಳಿಯ ಕೈದೀವಿಗೆ ಹಿಡಿದೈತರುವಾಳಿ
ಗಿರಿಮುನಿಯ ವನಶ್ಮಶ್ರುಗಳೆಡೆಯಿಂದೊಗೆವೋಂಕಾರಾಳಿ.
ಉದಯೋತ್ಸವರಥವೆಳೆಯೆ ಬಿಚ್ಚುತಿದೆ ಹೊಸ ನೇಣಿನ ಸುರುಳಿ!
ಶಿವದರ್ಶನ ಸಂಕಲ್ಪದಿ ಕುಳಿತಿವೆ ಹುಲ್ಲಲಿ ಹನಿಯೋಳಿ – ಓವೋ
ಬೆಳಗಿನ ತಂಗಾಳಿ – ಸೂಸುತ
ಬರುತಿದೆ ಮುದದಾಳಿ!”
ತಮ್ಮ ಅದ್ಭುತವಾದ ಧೀಶಕ್ತಿಯ ಮೂಲಕ ಸೇಡಿಯಾಪು ಅವರು ಸಾಧಿಸಿದ್ದು ಅಪಾರ. ಸಂಸ್ಕೃತವ್ಯಾಕರಣವನ್ನು ಕುರಿತು ಪಾಣಿನಿಮುನಿಗಳು ರಚಿಸಿದ 'ಆಷ್ಟಾಧ್ಯಾಯೀ' ಲೋಕವಿಖ್ಯಾತವಾದ ಗ್ರಂಥ. ಸೂತ್ರರೂಪದಲ್ಲಿರುವ ಈ ಗ್ರಂಥಕ್ಕೆ ಭಗವಾನ್ ಪತಂಜಲಿಗಳು 'ಮಹಾಭಾಷ್ಯ'ವನ್ನು ರಚಿಸಿದ್ದಾರೆ. ಅತ್ಯಂತಪ್ರೌಢವಾದ ಈ ಗ್ರಂಥವನ್ನು ವ್ಯಾಸಂಗ ಮಾಡಬೇಕಾದರೆ ಸಾಮಾನ್ಯವಾದ ಭಾಷಾಜ್ಞಾನ ಸಾಲುವುದಿಲ್ಲ; ಗಟ್ಟಿಯಾದ ತಿಳಿವಳಿಕೆಯೇ ಬೇಕಾಗುತ್ತದೆ. ಇಂಥ ಜಟಿಲಗ್ರಂಥವನ್ನು ಸ್ವತಂತ್ರವಾಗಿ ಓದಿಕೊಂಡಿದ್ದರು ಸೇಡಿಯಾಪು ಕೃಷ್ಣಭಟ್ಟರು. ಈ ತೆರನಾದದ್ದು ಅವರ ಸರ್ವಂಕಷಪಾಂಡಿತ್ಯ. ಆ ಗ್ರಂಥವನ್ನು ಸಂಪೂರ್ಣವಾಗಿ ಅಭ್ಯಸಿಸಿ ಸ್ವಾಯತ್ತಮಾಡಿಕೊಳ್ಳಲಾಗಲಿಲ್ಲವೆಂಬ ಖೇದ ಅವರಲ್ಲಿ ಕೊನೆಕಾಲದ ವರೆಗೂ ಇತ್ತು. ಲೋಕವೀಕ್ಷಣೆಯ ಅಗಾಧತೆಯಿಂದಲೂ ಅನುಪಮವಾದ ಅಂತರ್ದೃಷ್ಟಿಯ ಬಲದಿಂದಲೂ ಅವರು ವ್ಯಾಕರಣ, ಛಂದಸ್ಸು, ಭಾಷಾಶಾಸ್ತ್ರ, ಇತಿಹಾಸ, ಸಾಂಪ್ರದಾಯಿಕ ಸಂಗೀತ, ಯಕ್ಷಗಾನ – ಇವೇ ಮುಂತಾದ ಕ್ಷೇತ್ರಗಳಲ್ಲಿ ಕೃಷಿ ಮಾಡಿ ಆ ವಿಷಯಗಳಲ್ಲಿ ಹೊಸಹೊಳಹುಗಳನ್ನು ಕಂಡುಕೊಂಡರು; ಇತರರಿಗೂ ಕಾಣಿಸಿದರು.
ತಮ್ಮ 'ತಥ್ಯದರ್ಶನ' ಕೃತಿಯಲ್ಲಿ ಆರ್ಯ, ವರ್ಣ, ಜಾತಿ, ಲಿಂಗ – ಈ ನಾಲ್ಕು ಶಬ್ದಗಳ ಅರ್ಥವ್ಯಾಪ್ತಿಯ ಬಗೆಗೆ ಜಿಜ್ಞಾಸೆ ನಡೆಸಿ ತನ್ಮೂಲಕ ವೇದಕಾಲದ ಭಾರತವನ್ನು ಚಿತ್ರಿಸಿದ್ದು ಮಾತ್ರವಲ್ಲದೆ ಆರ್ಯಾಕ್ರಮಣವಾದ (Aryan Invasion Theory) ಹೇಗೆ ಬುಡವಿಲ್ಲದ್ದೆಂದು ತೋರ್ಪಡಿಸಿದ್ದಾರೆ. ಈ ಪರಿಯ ಬೌದ್ಧಿಕವಿಕ್ರಮ ಅನ್ಯದುರ್ಲಭ.
ಚಾತುರ್ವರ್ಣ್ಯದ ಬಗೆಗೆ ಶತಮಾನಗಳಿಂದ ನಡೆದಿರುವ ಕೋಲಾಹಲವು ಸರ್ವವಿದಿತ. ಎಷ್ಟೋ ಮಂದಿ ದುರಾಗ್ರಹಪೀಡಿತರು 'ವರ್ಣ'ಶಬ್ದವನ್ನು ಹಿಗ್ಗಾಡಿ ಜಗ್ಗಾಡಿ ಅದರ ಮೂಲಾರ್ಥವೇ ಮರೆತುಹೋಗುವಂತೆ ಮಾಡಿದ್ದಾರೆ. ಇದನ್ನು ಕುರಿತು ಸೇಡಿಯಾಪು ಅವರು ಹೀಗೆ ಬರೆದಿದ್ದಾರೆ –
“ವರ್ಣಭೇದವು ವೃತ್ತಿಭೇದವನ್ನು ಮಾತ್ರ ಸೂಚಿಸುವ 'ಹೆಸರು' ಎಂಬುದು ನಿಸ್ಸಂಶಯ. ಆದಕಾರಣ 'ಚಾತುರ್ವರ್ಣ್ಯ' ಎಂಬ ಶಬ್ದದಲ್ಲಿ ಅಡಕವಾಗಿರುವ ’ವರ್ಣ’ ಎಂಬ ಶಬ್ದಕ್ಕೆ (ವೃತ್ತಿಸೂಚಕವಾದ) ’ಹೆಸರು’ ಎಂಬುದೇ ಅರ್ಥವೆಂದು ತಿಳಿಯುವುದೇ ನ್ಯಾಯವಾಗಿದೆ.”
ಕಾವ್ಯವಿಮರ್ಶಕರಾಗಿ ಸೇಡಿಯಾಪು ಅವರದ್ದು ಎಂಥ ಋಜುದೃಷ್ಟಿಯೆಂಬುದನ್ನು ಕೆಳಗಿನ ವಾಕ್ಯಗಳು – ತಮ್ಮ ಶಿಷ್ಯ ಶ್ರೀ ಎಂ. ರಾಮಚಂದ್ರ ಅವರು ವಿಮರ್ಶಾತ್ಮಕಪ್ರಬಂಧವೊಂದನ್ನು ಬರೆಯುತ್ತಿದ್ದಾಗ ಅವರು ಹೇಳಿದ ಕಿವಿಮಾತುಗಳು – ಸ್ಫುಟಗೊಳಿಸುತ್ತವೆ.
“... ನೋಡಿದರೆ ಪ್ರತಿಯೊಬ್ಬ ಕವಿಯೂ ಒಂದೊಂದು ವರ್ಗದವನು. ಕವಿಗಳ ಸ್ವಾಭಿಮಾನಕ್ಕೆ ಆಘಾತ ಮಾಡಲು ವಿಮರ್ಶಕರಿಗೆ ನಾವು ಅಧಿಕಾರ ಕೊಡುವಂತಿಲ್ಲ. ಕವಿಗಳಿಗೆ ತಂತಮ್ಮ ಕಾವ್ಯ – ಸಾಮಾನ್ಯವಾಗಿ – ಇತರರದಕ್ಕಿಂತ ಕಡಮೆಯೆಂಬ ಭಾವವಿಲ್ಲ. ಅದನ್ನು ವಿಮರ್ಶಕರು ಗಮನಿಸಬೇಕು. ವಿಮರ್ಶಕನಿಗೆ ಅದೊಂದು ಕೆಳಗಿನ ದರ್ಜೆಯದೆಂದು ಕಂಡರೆ ಚಿಂತೆಯಿಲ್ಲ. ಹಾಗೇ ಹೇಳಿದರೂ ಒಂದು ವೇಳೆ ಕ್ಷಮ್ಯವೆಂದಾಗಬಹುದು – ತುಲನಾತ್ಮಕವಾಗಿ. ಆದರೆ ಅವರನ್ನು ಅವಮಾನಿಸಲಿಕ್ಕಾಗಿಯೇ ಕರೆತಂದು ಕೂರಿಸಬಾರದು. ಬೇಡದಿದ್ದರೆ ಅವರನ್ನು ಬಿಟ್ಟೇ ಬಿಡಬಹುದು. ಇದೆಲ್ಲ ಹೇಳಿದುದೇಕೆಂದರೆ, ನೀನು ಆರಿಸಿಕೊಂಡ ನಾಲ್ಕು ಮಂದಿ ಕವಿಗಳೂ ಜೀವಿಸಿಕೊಂಡಿದ್ದಾರೆ; ಇದನ್ನು ಗಮನಿಸಬೇಕು. ನನ್ನ ಅಭಿಪ್ರಾಯದಲ್ಲಿ ನಾಲ್ವರದನ್ನೂ ಒಂದೇ ಸಾಲಿನಲ್ಲಿ ವಿಮರ್ಶನ ಮಾಡುವುದು ಒಳ್ಳೆಯದು. ನಿನ್ನ ಅಭಿಪ್ರಾಯಗಳನ್ನು ಸ್ಪಷ್ಟವಾಗಿ – ಆದರೆ ಕಟುವಾಗಿದ್ದಲ್ಲಿ ಆದಷ್ಟು ನುಣ್ಣಗೆ ಮಾಡಿ, ಮಧುರವಾಗಿದ್ದರೆ ಅತ್ಯುಕ್ತಿಯಿಲ್ಲದೆ, ಆದರೂ ತಲಸ್ಪರ್ಶಿಯಾಗಿ ಪ್ರಕಟಿಸುವುದಕ್ಕೆ ಪ್ರಯತ್ನಮಾಡು.”
ಭಾಷಾಶಾಸ್ತ್ರಕ್ಕೂ ಕೃಷ್ಣಭಟ್ಟರಿಂದ ಸಂದ ಕೊಡುಗೆ ಅಪಾರ. ಅನೇಕ ಶಬ್ದಗಳಿಗೆ ನೈರುಕ್ತಿಕಾರ್ಥವನ್ನು (etymological meaning) ಅವರು ಮೊದಲಬಾರಿಗೆ ತೋರ್ಪಡಿಸಿದರು. ಹೀಗೆ ಯಾವ ವಿಚಾರವನ್ನು ಕುರಿತು ಬರೆದರೂ ಅದರ ಮೇಲೆ ಹೊಸ ಬೇಳಕನ್ನು ಚೆಲ್ಲಿ ಇತರರ ಪಾಲಿಗೆ ಶಾಸ್ತ್ರವ್ಯಾಸಂಗವನ್ನು ಸರಳಮಾಡಿಕೊಡುತ್ತಿದ್ದರು.
ಇನ್ನು ಈ ಲೇಖನದ ಪರಿಮಿತಪರಿಧಿಯಲ್ಲಿ ಸೇಡಿಯಾಪು ಅವರಿಗೆ ಪ್ರಿಯತಮವಾದ ಛಂದಶ್ಶಾಸ್ತ್ರದ ಬಗೆಗಿನ ಕೆಲವು ಸ್ವಾರಸ್ಯಗಳನ್ನು ಗಮನಿಸಬಹುದು. ಈ ವಿಚಾರವಾಗಿ ಹೆಚ್ಚಿನ ಕುತೂಹಲವುಳ್ಳವರು ಕೃಷ್ಣಭಟ್ಟರ ಮೂಲಗ್ರಂಥಗಳನ್ನೇ ಓದಿಕೊಳ್ಳಬಹುದು. ಮೊದಲನೆಯದಾಗಿ, ತಿಳಿಯೂ ಉಜ್ಜ್ವಲವೂ ಆದ ಶಾಸ್ತ್ರಗದ್ಯಶೈಲಿಗೆ ಅವರ 'ಛಂದೋಗತಿ'ಯಿಂದ ಒಂದು ಪುಟ್ಟ ಉದಾಹರಣೆ –
“ತಾತ್ತ್ವಿಕವಾಗಿ ಹೇಳುವುದಾದರೆ 'ಛಂದಸ್' ಎಂಬುದು ಗುರುಲಘುಗಳ 'ವಿನ್ಯಾಸ'. ಇದು ಸಮಸ್ತವಾಙ್ಮಯಕ್ಕೆ ಅನ್ವಯಿಸುವ, ಎಂದರೆ ಪದ್ಯದಲ್ಲಿಯೂ ಗದ್ಯದಲ್ಲಿಯೂ ಅರ್ಥಾತ್ ಸಕಲಶಬ್ದಗಳಲ್ಲೂ ಇರುವ ಒಂದು ಗುಣ ಅಥವಾ ಲಕ್ಷಣ. ಶಬ್ದದಿಂದ ಇದನ್ನು ವಾಸ್ತವಿಕವಾಗಿ ಪ್ರತ್ಯೇಕಿಸುವುದಕ್ಕಾಗುವುದಿಲ್ಲ; ವೈಚಾರಿಕವಾಗಿ ಮಾತ್ರ ಭೇದಿಸಬಹುದಾಗಿದೆ. ಅಕ್ಷರಸಂಖ್ಯಾಸಮತ್ವದಿಂದ, ಅಥವಾ ಅಕ್ಷರಪುಂಜಗಳ ಉಚ್ಚಾರದ ಮಾತ್ರಾಸಮತ್ವದಿಂದ ಮರ್ಯಾದಿತವಾದ ಖಂಡಗಳಾಗಿ ’ಛಂದಸ್’ ಪ್ರಕಟವಾದಾಗ, ಅದು 'ಪದ್ಯ'ವೆನಿಸಿಕೊಳ್ಳುತ್ತದೆ. ಹೀಗೆ ಮರ್ಯಾದಿತವಾಗದೆ, ಛಂದಃಸ್ರೋತಸ್ಸು ಸ್ವಚ್ಛಂದವಾಗಿ ಹರಿದರೆ ಅದು 'ಗದ್ಯ' ಎನಿಸಿಕೊಳ್ಳುತ್ತದೆ. ಗದ್ಯಕ್ಕೆ ಅವಯವಪರಿಮಾಣ ನಿಯಮವಿಲ್ಲದಿರುವ ಕಾರಣ, ಮತ್ತು ಅದರಿಂದಾಗಿ ಗದ್ಯದ ಛಂದೋರೂಪಭೆದಗಳು ವಸ್ತುತಃ ಅನಂತವಾಗಿ ’ಅಗಣ್ಯ’ವಾಗಿರುವ ಕಾರಣ, ಅದು ನಿಷ್ಕೃಷ್ಟವಾದ ಛಂದೋರೂಪವ್ಯವಸ್ಥೆಗೆ ಆಸ್ಪದವೀಯುವುದಿಲ್ಲ. ಪದ್ಯವೆಂಬುದಕ್ಕೆ ಅವಯವಪರಿಮಾಣ ನಿಯಮವಿರುವ ಕಾರಣ, ಛಂದೋರೂಪಾನುಗುಣವಾದ ವಿಭಾಗವ್ಯವಸ್ಥೆಗೆ ಅದು ಅಳವಡುತ್ತದೆ.”
ವೃತ್ತ ಮತ್ತು ಜಾತಿಗಳ ಭೇದವು ಅವುಗಳ ಲಕ್ಷಣದಲ್ಲಿರುವ 'ಸರ್ವದೇಶಸ್ಥಿರತೆ' ಮತ್ತು 'ಏಕದೇಶಸ್ಥಿರತೆ'ಗೆ ಸಂಬಂಧಪಟ್ಟಿದ್ದೆಂದು ಸ್ಪಷ್ಟೀಕರಿಸಿ ಅನುಷ್ಟುಪ್ ಶ್ಲೋಕವನ್ನು 'ಅಕ್ಷರಜಾತಿ'ಯೆಂಬ ನೂತನವಿಭಾಗದಲ್ಲಿ ಸೇರಿಸಬೇಕೆಂದು ಸೇಡಿಯಾಪು ಕೃಷ್ಣಭಟ್ಟರು ತೋರ್ಪಡಿಸಿದ್ದಾರೆ. ಇಷ್ಟೇ ಅಲ್ಲದೆ ಪದ್ಯ ಮತ್ತು ಗದ್ಯಗಳನ್ನು ಕ್ರಮವಾಗಿ ’ನಿಬದ್ಧ’ ಮತ್ತು ’ಅನಿಬದ್ಧ’ ಎಂಬ ವಿಭಾಗಗಳೊಳಗೆ ಸೇರಿಸಿಕೊಳ್ಳಬಹುದೆಂದು ಯುಕ್ತಿಯುಕ್ತವಾಗಿ ಪ್ರತಿಪಾದಿಸಿದ್ದಾರೆ.
'ಲಯ' ಶಬ್ದವು ಇಂಗ್ಲಿಷ್ ಭಾಷೆಯ ‘rhythm’ ಎಂಬ ಶಬ್ದದೊಂದಿಗೆ ಸಮೀಕೃತವಾಗಿ ಬಳಕೆಯಾಗುತ್ತಿದ್ದನ್ನು ಗಮನಿಸಿದ ಸೇಡಿಯಾಪು ಅವರು ಇದರ ಅಸಾಧುತ್ವವನ್ನು ತೋರಿಸಲು ಬರವಣಿಗೆಯನ್ನು ಮೊದಲುಮಾಡಿದರು. ಇದರ ಸುತ್ತಲೂ ಹರಡಿಕೊಂಡ ಶಾಸ್ತ್ರಚರ್ಚೆಯು ಬೆಳೆಯುತ್ತಾ ಹೋದಾಗ ಹೊರಹೊಮ್ಮಿದ ಮಹಾಕೃತಿಯೇ 'ಛಂದೋಗತಿ'. ಸಂಗೀತಲಯ ಮತ್ತು ಛಂದೋಲಯಗಳಿಗಿರುವ ಭೇದವನ್ನು ಮನಗಂಡ ಕೃಷ್ಣಭಟ್ಟರು ವಾಸ್ತವಿಕವಾಗಿ ಲಯವೆಂದರೆ ಧ್ವನಿಪುಂಜಗಳ ಕಾಲಸಮತ್ವವೆಂದು ಹೇಳಿ ‘metrical rhythm’ ಗೆ ಸಂವಾದಿಯಾಗಬಲ್ಲ ಶಬ್ದ 'ಛಂದೋಗತಿ'ಯೇ ಹೊರತು ’ಲಯ’ ಸರ್ವಥಾ ಅಲ್ಲವೆಂದು ಸ್ಪಷ್ಟಪಡಿಸಿದರು.
ಸಾಮಾನ್ಯವಾಗಿ ವೃತ್ತಗಳಲ್ಲಿ 'ಯತಿಸ್ಥಾನ'ವೊಂದು ಇರುತ್ತದೆಯಷ್ಟೆ. ಇದರ ವಿಷಯವಾಗಿ ಸೇಡಿಯಾಪು ಅವರು ಬರೆಯುವ ತನಕ ಬರಿಯ ಗೊಂದಲವೇ ಉಳಿದಿತ್ತು. ಇದನ್ನವರು ಅನ್ಯಾದೃಶವಾಗಿ ಪರಿಹರಿಸಿದರು. ಅವರು ತೋರ್ಪಡಿಸಿದಂತೆ,
“ಯಾವುದೊಂದು ಪದ್ಯದ ಪದರಚನೆ ನಿರ್ದುಷ್ಟವಾಗಿರುವಲ್ಲಿಯೂ – ಆ ಪದ್ಯವನ್ನು ಅದರ ಛಂದೋಗತಿಗನುಗುಣವಾಗಿ ಪಠಿಸುವಾಗ ತದ್ಗತಪದಸ್ವರೂಪವು ಹೊಳೆಯದಂತಿದ್ದರೆ, ಆ ರಚನಾದೋಷವು ’ಯತಿಭಂಗ’ವೆನಿಸಿಕೊಳ್ಳುತ್ತದೆ.”
'ಕನ್ನಡ ಛಂದಸ್ಸು' ಎಂಬ ಮತ್ತೊಂದು ಕೃತಿಯಲ್ಲಿ ಅಕ್ಕರ, ಗೀತಿಕೆ, ಸೀಸ, ಚೌಪದಿ, ಛಂದೋವತಂಸ, ತ್ರಿಪದಿ, ಸಾಂಗತ್ಯ ಮುಂತಾದ ಬಂಧಗಳನ್ನು ಕೃಷ್ಣಭಟ್ಟರು ತಲಸ್ಪರ್ಶಿಯಾಗಿ ವಿವೇಚಿಸಿದ್ದಾರೆ. ಈ ಗ್ರಂಥದಲ್ಲಿ ಮುಖ್ಯವಾಗಿ ಪರಾಮರ್ಶಿತವಾಗಿರುವುವು ತ್ರಿಮೂರ್ತಿಗಣಾತ್ಮಕಚ್ಛಂದಸ್ಸುಗಳೇ. ಇದೂ ’ಛಂದೋಗತಿ’ಯಂತೆಯೇ ವಿನೂತನವಾದ ಸ್ವೋಪಜ್ಞಕೃತಿ.
ಸೇಡಿಯಾಪು ಕೃಷ್ಣಭಟ್ಟರು ಛಂದಸ್ಸಿನ ವಿಷಯವಾಗಿ ಕಂಡುಕೊಂಡ ಎಷ್ಟೋ ವಿವರಗಳನ್ನು ಶತಾವಧಾನಿ ಗಣೇಶರೂ ಸ್ವತಂತ್ರವಾಗಿ ಕಂಡುಕೊಂಡಿದ್ದರು. 'ಛಂದೋಗತಿ'ಯನ್ನು ಓದಿದ ನಂತರ ಕೃಷ್ಣಭಟ್ಟರಿಗೆ ಪತ್ರ ಬರೆದು ಈ ವಿಷಯವನ್ನು ತಿಳಿಸಿ ತಮ್ಮ ಸಂತೋಷವನ್ನೂ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಗಣೇಶರ ಶಾಸ್ತ್ರಸ್ಪಷ್ಟತೆ ಸೇಡಿಯಾಪು ಅವರ ಆದರಾಭಿಮಾನಗಳಿಗೆ ಕಾರಣವಾಯಿತು. ಅವರ ಸಾಹಿತ್ಯಸಮೀಕ್ಷೆಯನ್ನು ಕುರಿತು ನಡೆದ ಒಂದು ವಿಚಾರಸಂಕಿರಣದಲ್ಲಿ ಗಣೇಶರನ್ನು ಆಹ್ವಾನಿಸಬೇಕೆಂದು ಶ್ರೀ ಎಂ. ರಾಮಚಂದ್ರ ಅವರಿಗೆ ಕೃಷ್ಣಭಟ್ಟರು ಪತ್ರ ಬರೆದರು. ಇದು ಅವರ ನಿರ್ಮಾತ್ಸರ್ಯದ, ಗುಣಗ್ರಹಣಶಕ್ತಿಯ ದ್ಯೋತಕವಾಗಿದೆ.
“... ನೀನು ಏರ್ಪಡಿಸಲಿರುವ ವಿಚಾರಸಂಕಿರಣಕ್ಕೆ ಬೆಂಗಳೂರಿನ ಆರ್. ಗಣೇಶರನ್ನು ಅವಶ್ಯವಾಗಿ ಆಹ್ವಾನಿಸು. ನನ್ನ 'ಛಂದೋಗತಿ'ಯನ್ನು ಸಂಪೂರ್ಣವಾಗಿ ತಳಮುಟ್ಟಿ ತಿಳಿದುಕೊಂಡವರು ಬಹುಶಃ ಬೇರೆ ಯಾರೂ ಇಲ್ಲ. ಒಬ್ಬಬ್ಬರು ಒಂದೊಂದು ಭಾಗವನ್ನು ಮಾತ್ರ ಕೂಲಂಕಷವಾಗಿ ತಿಳಿದುಕೊಂಡಿರಬಹುದು; ಪೂರ್ಣವಾಗಿ ತಿಳಿದವರು ಅವರೊಬ್ಬರು ಮಾತ್ರವೆಂಬುದರಲ್ಲಿ ನನಗೆ ಸಂದೇಹವಿಲ್ಲ. ಅವರಿಂದ ಒಂದು ಪ್ರಬಂಧವನ್ನೂ ಬರೆಯಿಸಿ ಓದಿಸಿದರೆ ನಿನ್ನ ಪ್ರಯತ್ನಕ್ಕೆ ಶೋಭೆ ಹೆಚ್ಚುವುದು. ... ಅಂತಹ ಎಳೆಯ ಮೇಧಾವಿಗಳನ್ನು ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ.”
ಆಗ ಗಣೇಶರಿಗಿನ್ನೂ ಇಪ್ಪತ್ತಾರು-ಇಪ್ಪತ್ತೇಳು ವಯಸ್ಸು. ಇದನ್ನು ನೆನೆದಾಗ ಸೇಡಿಯಾಪು ಕಷ್ಣಭಟ್ಟರ ವಿದ್ಯಾವಾತ್ಸಲ್ಯ, ಗುಣಪಕ್ಷಪಾತ ಎಷ್ಟು ಹಿರಿದಾದುದೆಂದು ತಿಳಿಯದಿರದು.
ಸೇಡಿಯಾಪು ಕೃಷ್ಣಭಟ್ಟರ ಬಗೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥ ಶರ್ಮರು ಹೇಳಿದ ಮಾತುಗಳು ಸೇಡಿಯಾಪು ಅವರ ವ್ಯಕ್ತಿತ್ವ-ಪಾಂಡಿತ್ಯಗಳ ಹಿರಿತನವನ್ನು ಚೆನ್ನಾಗಿ ಬಿಂಬಿಸುತ್ತವೆ. “ಪುರಾಣಗಳಲ್ಲಿ ’ಅಷ್ಟದಿಗ್ಗಜಗಳು’ ಎನ್ನುವುದುಂಟು. ಆದರೆ ನಾನು ಕಂಡಿದ್ದು ಎರಡೇ ದಿಗ್ಗಜಗಳನ್ನು. ಒಬ್ಬರು ಬೆಂಗಳೂರಿನ ಡಿ. ವಿ. ಗುಂಡಪ್ಪನವರು, ಮತ್ತೊಬ್ಬರು ಮಣಿಪಾಲದ ಸೇಡಿಯಾಪು ಕೃಷ್ಣಭಟ್ಟರು.”
ತಮ್ಮ ಜೀವನದ ಸಾರವನ್ನು ಪದ್ಯವೊಂದರಲ್ಲಿ ಸ್ವಯಂ ಕೃಷ್ಣಭಟ್ಟರೇ ಕಂಡರಿಸಿದ್ದಾರೆ. ಅದನ್ನುದ್ಧರಿಸಿ ಈ ಲೇಖನವನ್ನು ಸಂಪನ್ನಗೊಳಿಸಬಹುದು.
“ಮನದೊಳೊಂದೆ ಮಾತಿನೊಳಗೊಂದೆ, ನಡೆವಳಿಯಳೊಂದೆ ಎಂದೆಂಬುದೇ
ಭವದರಣ್ಯದಲಿ ತೆರೆದ ರಾಜಪಥ, ಶಿವದ ಗೆಲವಿನೊಳ್ ಶ್ರದ್ಧೆಯೇ
ತಮಕೆ ದೀಪ, ಸತ್ಪುರುಷರಮಲಚಾರಿತ್ರ್ಯ ಮನನಪಾಥೇಯಕ;
ಮೊಗವನೆತ್ತಿ ನಡೆ, ಭಯವನೊತ್ತಿ ನಡೆ, ಸಫಲತಾತೀರ್ಥಯಾತ್ರಿಕ!”
~
ಪ್ರಮಾಣಗ್ರಂಥಾವಳಿ
- “ಸೇಡಿಯಾಪು ಛಂದಸ್ಸಂಪುಟ”. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರ, ಉಡುಪಿ. ೨೦೦೬
- “ಪತ್ರಾವಳಿ”. ವಿ.ಸೀ.ಸಂಪದ, ಬೆಂಗಳೂರು. ೨೦೧೧
- “ಕವಳಿಗೆ”. ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು. ೨೦೧೪
- “ನಂದಾದೀವಿಗೆ”. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರ, ಉಡುಪಿ. ೧೯೯೭
- “ಶತಾಂಜಲಿ”. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರ, ಉಡುಪಿ. ೨೦೦೨
- “ತುರಾಯಿ”. ದಕ್ಷಿಣಕನ್ನಡ ಜಿಲ್ಲಾ ಒಂಬತ್ತನೆಯ ಸಾಹಿತ್ಯಸಮ್ಮೇಳನ ಪ್ರಕಟನಸಮಿತಿ, ಕಾರ್ಕಳ. ೧೯೯೬
- “ವಿಚಾರ ಪ್ರಪಂಚ”. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ೨೦೧೧