ಶ್ರೀಮದ್ರಾಮಾಯಣದ ಉತ್ತರಕಾಂಡದಲ್ಲಿ ಬರುವ ಸೀತಾಪರಿತ್ಯಾಗವು ಹಿಂದಿನಿಂದಲೂ ಹೆಚ್ಚು ಚರ್ಚೆಗೊಳಗಾಗಿರುವ ಭಾಗ. ಉತ್ತರಕಾಂಡವು ವಾಲ್ಮೀಕಿವಿರಚಿತವೋ ಅಲ್ಲವೋ ಎಂಬುದು ಕೂಡ ಅಷ್ಟೇ ಚರ್ಚಾಸ್ಪದವಾಗಿದೆ. ಅದು ವಾಲ್ಮೀಕಿಗಳಿಂದ ರಚಿತವಾಗಿಲ್ಲವೆಂಬ ವಾದವನ್ನು ಡಿ.ವಿ.ಜಿ. ಅವರು ತಳ್ಳಿ ಹಾಕುತ್ತಾರೆ. ವಾಲ್ಮೀಕಿಗಳ ಉದ್ದೇಶವು ರಾಮಚರಿತ್ರೆಯನ್ನು ರಚಿಸುವುದಷ್ಟೇ ಆಗಿರದೆ ಸೀತಾಚರಿತ್ರೆಯನ್ನು ರಚಿಸುವುದೂ ಆಗಿತ್ತು. ಹೀಗಾಗಿ ‘ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್’ (೧-೪-೭) (ಕಾವ್ಯವು ರಾಮನ ಸಮಗ್ರವೃತ್ತಾಂತ ಮತ್ತು ಸೀತೆಯ ಮಹತ್ತ್ವಪೂರ್ಣಚರಿತ್ರೆ) ಎಂಬ ಮಾತು ಬರುತ್ತದೆ. ಇದಲ್ಲದೆ ಬ್ರಹ್ಮನು ವಾಲ್ಮೀಕಿಗಳಿಗೆ ಆದೇಶ ಕೊಡುವ ಸಂದರ್ಭದಲ್ಲಿ ಹೀಗೆನ್ನುತ್ತಾನೆ: ‘ರಾಮಸ್ಯ ಚರಿತಂ ಕೃತ್ಸ್ನಂ ಕುರು ......’ (೧-೨-೩೨) (ರಾಮನ ಚರಿತ್ರೆಯನ್ನು ಸಂಪೂರ್ಣವಾಗಿ ವಿರಚಿಸು), ‘ವೈದೇಹ್ಯಾಶ್ಚೈವ ಯದ್ವೃತ್ತಂ ಪ್ರಕಾಶಂ ......’ (೧-೨-೩೪) (ಸೀತೆಯ ವೃತ್ತಾಂತವನ್ನೂ ಪ್ರಕಾಶಪಡಿಸು). ರಾಮನ ಧರ್ಮನಿಷ್ಠೆ, ಶೌರ್ಯ, ತ್ಯಾಗಗಳು ಎಷ್ಟು ಮೆಚ್ಚತಕ್ಕಂಥವೋ ಸೀತೆಯ ಸಹನೆ, ವ್ರತನಿಷ್ಠೆ, ಧೈರ್ಯ ಮುಂತಾದುವು ಅವಕ್ಕಿಂತ ಕಡಮೆಯಿಲ್ಲದಂತೆ ನಮ್ಮ ಮೆಚ್ಚುಗೆಗೆ ಪಾತ್ರವಾಗತಕ್ಕಂಥವು. ಶ್ರೀಮದ್ರಾಮಾಯಣದಲ್ಲಿ ಸೀತೆಯ ಚಾರಿತ್ರ್ಯವನ್ನು ತೋರಿಸುವಂಥ ಸಂದರ್ಭಗಳು ಮುಖ್ಯವಾಗಿ ಎರಡು. ಒಂದು ರಾವಣನಿಂದಾದ ಸೀತಾಪಹರಣ ಮತ್ತೊಂದು ರಾಮನೇ ಮಾಡಬೇಕಾಗಿ ಬಂದ ಸೀತಾವಿವಾಸನ. ಆಕೆಯು ಈ ಸತ್ತ್ವಪರೀಕ್ಷೆಗಳಲ್ಲಿ ಉತ್ತೀರ್ಣಳಾಗುವುದರಿಂದ ನಮ್ಮ ಮನ್ನಣೆಗೆ ಪಾತ್ರಳಾಗುತ್ತಾಳೆ ಮತ್ತು ಅನುಕರಣೆಗೆ ಯೋಗ್ಯವಾಗುತ್ತಾಳೆ. ಸೀತೆಯ ಅಪಹರಣವಾಗಿದ್ದು ರಾವಣನ ಬಲಾತ್ಕಾರದಿಂದ. ಅದನ್ನು ಸಹಿಸುವುದು ಅವಳಿಗೆ ಅನಿವಾರ್ಯವಾಗಿತ್ತು. ಆದರೆ ವಿವಾಸನವನ್ನು ಅವಳು ಬೇಡವೆನ್ನಬಹುದಾಗಿತ್ತು. ಆದರೆ ರಾಮನ ಸಹಧರ್ಮಚಾರಿಯಾದ ಅವಳು ತನ್ನ ಕರ್ತವ್ಯಸ್ಮರಣೆಯಿಂದ ಅದನ್ನೊಪ್ಪಿಕೊಂಡಳು. ಆಕೆಯ ಮಹತ್ತ್ವ ತೋರುವುದು ಅಲ್ಲಿ. ಉತ್ತರಕಾಂಡವಿಲ್ಲದಿದ್ದಲ್ಲಿ ಸೀತೆಯ ಪಾತ್ರಕ್ಕೆ ಮಹತ್ತ್ವವೂ ಪರಿಪೂರ್ಣತೆಯೂ ಬರುತ್ತಿರಲಿಲ್ಲ. ಹೀಗಾಗಿ ಉತ್ತರಕಾಂಡವು ವಾಲ್ಮೀಕಿಗಳ ರಚನೆ ಎಂಬುದರಲ್ಲಿ ಸಂದೇಹವಿಲ್ಲ.
ಸೀತಾಪರಿತ್ಯಾಗದ ವಿಷಯಕ್ಕೆ ಬಂದಾಗ ನಮ್ಮ ಜನ ರಾಮನ ಮೇಲೆ ಮಾಡುವ ಆಕ್ಷೇಪಗಳು ಹೀಗಿವೆ:
೧. ನಿರಪರಾಧಿಯೂ ಪರಿಶುದ್ಧಳೂ ತುಂಬುಗರ್ಭಿಣಿಯೂ ಆದ ಸೀತೆಯನ್ನು ಕಾಡಿಗೆ ಕಳುಹಿಸಿದ್ದು ಕ್ರೌರ್ಯ.
೨. ಲೋಕಾಪವಾದವನ್ನು ಅವಳಿಗೆ ತಿಳಿಸಿ, ಸಮಾಲೋಚಿಸದೆ ಅವಳನ್ನು ತ್ಯಜಿಸಿದ್ದು ತಪ್ಪು.
ಸೀತಾವಿವಾಸನದ ವಿಷಯದಲ್ಲಿ ಶ್ರೀರಾಮನು ಅನುಸರಿಸಿದ್ದು ಪ್ರಜಾಭಿಪ್ರಾಯವನ್ನು. ಹಾಗಾದರೆ ರಾಮನು ಪ್ರಜೆಗಳ ಬೀದಿಮಾತನ್ನು ನಂಬಿ ಸೀತಾದೇವಿಯನ್ನು ಕಾಡಿಗೆ ಕಳುಹಿಸಿದ್ದು ಸರಿಯೇ ಎಂಬ ಪ್ರಶ್ನೆಯೇಳುತ್ತದೆ. ರಾಜನಾದವನು ತನ್ನ ಇಚ್ಛೆಯಂತೆ ನಿರ್ಣಯ ಕೈಗೊಳ್ಳುವಂತಿಲ್ಲ. ಅದರಿಂದ ಕೆಲವರಿಗೆ ಅನುಕೂಲವಾಗಬಹುದು ಅಥವಾ ಪ್ರತಿಕೂಲವೇ ಆಗಬಹುದು. ಅದು ರಾಜನಿಂದ ತ್ಯಾಗವನ್ನೂ ಬಯಸಬಹುದು. ಸಮಗ್ರ ಪ್ರಜಾಸಂತೃಪ್ತಿ ಯಾವುದರಿಂದ ಆಗುತ್ತದೆಯೋ ಅದು ರಾಜನಿಗೆ ಕರ್ತವ್ಯವಾಗುತ್ತದೆ. ಇಂಥ ಕರ್ತವ್ಯಪರಿಪಾಲನೆಯಿಂದ ನಿರ್ದೋಷಿಯಾದ ಸೀತೆಗೆ ಅನ್ಯಾಯವೂ ರಾಮನಿಗೆ ಸ್ವಸುಖತ್ಯಾಗವೂ ಅನಿವಾರ್ಯವಾದವು.
ಸಮಗ್ರ ಪ್ರಜಾವರ್ಗವು ಸೀತೆಯ ಮೇಲೆ ಅಪವಾದ ಹೊರಿಸಿದಾಗ ರಾಮನಿಗೆ ಬೇರೆ ಯಾವ ರೀತಿಯ ಪರಿಹಾರಗಳಿತ್ತೆಂಬುದನ್ನು ನೋಡಬಹುದು:
ರಾಮನು ಪ್ರಜೆಗಳ ಅಸಮಾಧಾನವನ್ನು ಲೆಕ್ಕಿಸದೆ ಸೀತೆಯನ್ನು ತನ್ನರಮನೆಯಲ್ಲಿಯೇ ಇರಿಸಿಕೊಂಡು ತ್ಯಾಗಕ್ಕೆ ಮನಸ್ಸು ಮಾಡದಿದ್ದಿದ್ದರೆ ಅವನ ವಿಷಯದಲ್ಲಿ ಪ್ರಜೆಗಳಿಗೆ ಅಸಹನೆ, ಅಗೌರವಗಳುಂಟಾಗುತ್ತಿದ್ದವು. ಅದು ರಾಜ್ಯಕ್ಕೆ ಕೆಡುಕು.
ರಾಮನು ರಾಜಪದವಿಯನ್ನು ತ್ಯಜಿಸಿ, ಸೀತೆಯೊಡನೆ ತಾನೂ ವನವಾಸ ಮಾಡುತ್ತೇನೆಂದು ಹೊರಟಿದ್ದಿದ್ದರೆ ಅವನ ತಮ್ಮಂದಿರಾರೂ ಸಿಂಹಾಸನವನ್ನೇರುತ್ತಿರಲಿಲ್ಲ. ಅದರಿಂದ ದೇಶದಲ್ಲಿ ಅರಾಜಕತೆಯುಂಟಾಗುತ್ತಿತ್ತು. ಇದನ್ನು ರಾಮನು ಚನ್ನಾಗಿ ಅರ್ಥಮಾಡಿಕೊಂಡಿದ್ದನು. ಅದಲ್ಲದೆ ಆ ಕ್ರಮದಿಂದ ಸೀತೆಯೇನೂ ಅಪವಾದಮುಕ್ತಳಾಗುತ್ತಿರಲಿಲ್ಲ.
ರಾಮನು ಸೀತೆಯನ್ನು ಕಂಡು ಲೋಕಾಪವಾದದ ವಿಚಾರವನ್ನು ಅವಳೊಡನೆ ಚರ್ಚಿಸಲು ಬಯಸಲಿಲ್ಲ. ಏಕೆಂದರೆ ಅವಳು ನಿರಪರಾಧಿಯೆಂದು ಅಗ್ನಿಪರೀಕ್ಷೆಯ ಮೂಲಕ ಮೊದಲೇ ಸಾಬೀತಾಗಿತ್ತು. ಪುನಃ ಅದೇ ವಿಷಯವನ್ನಿಟ್ಟುಕೊಂಡು ಅವಳ ಮುಂದೆ ಹೋದರೆ ಅವನ ಮನಸ್ಸು ಕರಗಿ ಪತ್ನೀತ್ಯಾಗವು ಸಾಧ್ಯವಾಗದೆ ಹೋಗಬಹುದಾಗಿತ್ತು. ಹಾಗೆ ಅವನು ಕೌಟುಂಬಿಕ ಸುಖಕ್ಕೆ ಮನಸ್ಸು ಮಾಡಿದ್ದಿದ್ದರೆ ರಾಜಧರ್ಮಕ್ಕಿಂತ ಪತಿಧರ್ಮಕ್ಕೇ ಪ್ರಾಧಾನ್ಯ ದೊರೆತಂತಾಗುತ್ತಿತ್ತು. ಸ್ವಸುಖ ಮತ್ತು ಲೋಕಕ್ಷೇಮವೆಂಬೆರಡನ್ನು ಧರ್ಮದ ತಕ್ಕಡಿಯಲ್ಲಿಟ್ಟು ತೂಗಿ ನೋಡಿದಾಗ ತೂಕವುಳ್ಳದ್ದು ಲೋಕಕ್ಷೇಮವೇ. ರಾಜನಾದವನಿಗೆ ಅವನ ರಾಜ್ಯವೇ ಕುಟುಂಬ ಮತ್ತು ಪ್ರಜೆಗಳೇ ಅವನ ಕುಟುಂಬದವರು. ಅವರು ಪಂಡಿತರಾಗಲಿ, ಪಾಮರರಾಗಲಿ ಪರಿಪಾಲನೆಗೆ ಅರ್ಹರು. ರಾಜನು ಗುರು ಮತ್ತು ಮನೆಯೊಡೆಯನ ಸ್ಥಾನದಲ್ಲಿದ್ದು ಪ್ರಜೆಗಳು ತಮ್ಮ ಧರ್ಮವನ್ನು ಅರಿತು ನಡಸುವಂತೆ ನೋಡಿಕೊಳ್ಳಬೇಕು. ಪ್ರಜೆಗಳ ಕೌಟುಂಬಿಕ ಜೀವನಕ್ಕೆ ರಾಜನ ಕೌಟುಂಬಿಕ ಜೀವನವೇ ಮೇಲ್ಪಂಕ್ತಿ. ಹಾಗಾಗಿ ಜನರ ದಾಂಪತ್ಯಜೀವನವು ಸುಖವಾಗಿ ನಡೆಯಬೇಕಾದರೆ ರಾಜರಾಣಿಯರು ತಮ್ಮ ದಾಂಪತ್ಯಜೀವನವನ್ನು ಬಲಿಕೊಡುವುದಕ್ಕೂ ಸಿದ್ಧರಿರಬೇಕು. ಪ್ರಜಾವಿಶ್ವಾಸಕ್ಕೆ ಕುಂದಾಗದಂತೆ ನಡೆಯಬೇಕಾದುದು ರಾಜನ ಧರ್ಮ. ಪತಿಧರ್ಮಪಾಲನೆಗಿಂತ ರಾಜಧರ್ಮಪಾಲನೆಯು ರಾಮನಿಗೆ ಆದ್ಯ ಕರ್ತವ್ಯವಾಗಿತ್ತು. ಅದಲ್ಲದೆ ಸಹಧರ್ಮಚಾರಿಯಾದ ಸೀತೆಯು ತನ್ನನ್ನು ಪ್ರಶ್ನಿಸುವುದಿಲ್ಲವೆಂಬ ನಂಬಿಕೆಯಿತ್ತು. ಅದರಂತೆ ಸ್ವಸುಖತ್ಯಾಗವನ್ನು ಮಾಡಿ ಸೀತೆಯಂತೆ ತಾನೂ ವಿರಹಕ್ಲೇಶವನ್ನನುಭವಿಸಿದ ಮಹಾತ್ಯಾಗಿ ಅವನು. ಅವನು ಅಷ್ಟು ನಿಷ್ಕರುಣಿಯಾಗಿ ನಡೆದುಕೊಂಡಿದ್ದಕ್ಕೆ ಕಾರಣ ಅವನ ಕರ್ತವ್ಯಸ್ಮರಣೆಯೇ ಹೊರತು ಹೃದಯಕಾಠಿನ್ಯವಲ್ಲ. ಧರ್ಮಸಂಕಟದ ಸಂದರ್ಭ ಬಂದಾಗ ರಾಮನು ಹೇಗೆ ವರ್ತಿಸುತ್ತಾನೆಂಬುದನ್ನು ತೋರಿಸುವುದು ವಾಲ್ಮೀಕಿಗಳ ಮುಖ್ಯ ಉದ್ದೇಶ. ಅವರು ರಾಮನ ವಿಷಯದಲ್ಲಿ ಸಾವಿರ ಸಲ ಉಪಯೋಗಿಸಿರುವ ವಿಶೇಷಣ ಪದ ‘ಧರ್ಮಾತ್ಮಾ’ ಎಂಬುದು. ಧರ್ಮಿಷ್ಠನಾದೊಬ್ಬ ರಾಜನ ನಡತೆ ಹೇಗಿರಬೇಕೆಂಬುದನ್ನು ಸೀತಾಪರಿತ್ಯಾಗದ ಸಂದರ್ಭದ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ.
ಬ್ರಹ್ಮಜ್ಞಾನಿಯಾದ ಜನಕನು ಸೀತೆಯನ್ನು ರಾಮನಿಗೆ ಮದುವೆ ಮಾಡಿಕೊಡುವಾಗ ‘ಸಹಧರ್ಮಚರೀ ತವ’ (ನಿನ್ನ ಸಹಧರ್ಮಚಾರಿಣಿ) ಎಂದಿದ್ದನು. ಅದರಂತೆ ಸೀತೆಯು ಸತಿಯಾದ ತನಗೆ ಬೇರೆಯದಾದ ಧರ್ಮವಿಲ್ಲ, ಪತಿಯ ಧರ್ಮವೇ ತನಗೆ ಧರ್ಮವೆಂದು ಭಾವಿಸಿ ಅವನ ರಾಜಧರ್ಮಪಾಲನೆಗೆ ಸಂಪೂರ್ಣ ಸಹಕಾರವನ್ನು ನೀಡಿದಳು. ‘ಯಥಾಪವಾದಂ ಪೌರಾಣಾಂ ತಥೈವ ರಘುನಂದನ | ಪತಿರ್ಹಿ ದೇವತಾ ನಾರ್ಯಾಃ ಪತಿರ್ಬಂಧುಃ ಪತಿರ್ಗುರುಃ’ (ಉತ್ತರಕಾಂಡ ೪೮-೧೭) (ಜನರ ಅಪವಾದವು ಹೇಗಿದೆಯೋ ಹಾಗೆಯೇ ಅದನ್ನು ಹೊರುತ್ತೇನೆ. ನಾರಿಗೆ ಪತಿಯೇ ದೇವತೆ, ಪತಿಯೇ ಬಂಧು, ಪತಿಯೇ ಗುರು) ಎಂಬ ಮಾತನ್ನು ಹೇಳಿದವಳು ಸೀತೆ. ಹೀಗಾಗಿ ಅವಳು ರಾಮನ ತ್ಯಾಗಕ್ಕೆ ಸಮನಾದ ಅಥವಾ ಅದಕ್ಕೂ ಮಿಗಿಲಾದ ತ್ಯಾಗವನ್ನೇ ಮಾಡಿ ನಷ್ಟಸ್ವೀಕಾರಕ್ಕೆ ಮುಂದಾದಳು. ಪತಿಯ ರಾಜಧರ್ಮಕ್ಕೆ ತನ್ನ ನಿರ್ಮಲವಾದ ಬದುಕನ್ನು ಸಮರ್ಪಿಸಿಕೊಂಡಳು.
ಲೇಖನ: ಸುನೀತಾ ಗಣಪತಿ