ಇಂದು ಸಂಸ್ಕೃತಭಾಷೆಯ ಅಧ್ಯಯನಕ್ಕೆ ವಿಪುಲ ಅವಕಾಶಗಳಿವೆ. ಅದರ ಪ್ರಚಾರ-ಪ್ರಸಾರಗಳಿಗೆ ಹಲವಾರು ಮಾಧ್ಯಮಗಳು ಲಭ್ಯವಿವೆ. ಸಂಘಟನೆಯ ರೂಪದ ಸಂಭಾಷಣಾಂದೋಲನದಿಂದ ಮೊದಲ್ಗೊಂಡು ಸಾಂಪ್ರದಾಯಿಕವಾದ ಶಾಸ್ತ್ರಾಧ್ಯಯನದವರೆಗೆ ಎಲ್ಲಕ್ಕೂ ಅನೇಕ ವ್ಯಕ್ತಿಗಳ, ಸಂಸ್ಥೆಗಳ ಸಹಕಾರವಿದೆ. ತಂತ್ರಜ್ಞಾನದ ಪ್ರಯೋಜನದಿಂದ ಹೊಸಬಗೆಯ ಪಾಠ್ಯಕ್ರಮಗಳನ್ನು ರಚಿಸಿ, ಅಧ್ಯಯನಕ್ಕೆ ಅನುಕೂಲಿಸುವ ವಿವಿಧ ಉಪಕರಣಗಳನ್ನು ರೂಪಿಸಿ ದೇವವಾಣಿಯನ್ನು ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಹತ್ತಿರವಾಗಿಸುವುದು ಇಂದು ಸರಳವಾಗಿದೆ. ಹಸ್ತಪ್ರತಿಗಳ ಸೂಕ್ಷ್ಮ ಅವಲೋಕನಕ್ಕೆ, ವ್ಯಾಕರಣವೇ ಮೊದಲಾದ ಶಾಸ್ತ್ರಗಳ ಕಲಿಕೆಗೆ ಹಲವು ಬಗೆಯ ತಂತ್ರಾಶಗಳಿಂದ ದೊರೆತಿರುವ ನೆರವು ಅಷ್ಟಿಷ್ಟಲ್ಲ. ಇನ್ನು ನಮ್ಮ ಬಹ್ವಾಯಾಮದ ರಾಷ್ಟ್ರಿಯ ಸಂಪತ್ತಿನ ಬಗೆಗೆ ಹೆಮ್ಮೆ ತಳೆಯಲು ಇತ್ತೀಚೆಗೆ ಎಚ್ಚೆತ್ತುಕೊಂಡಿರುವ ಸರ್ಕಾರದ ಸಹಯೋಗವೂ ದೊರೆತು ಸಂಸ್ಕೃತಕ್ಕೆ ಒಟ್ಟಂದದಲ್ಲಿ ಸುಭಿಕ್ಷದ ಕಾಲವೊದಗಿದೆ.
ಇಪ್ಪತ್ತನೆಯ ಶತಮಾನದಲ್ಲಿ ಸಂಸ್ಕೃತದ ಸ್ಥಿತಿ ಇಷ್ಟು ಆಶಾದಾಯಕವಾಗಿರಲಿಲ್ಲ. ವ್ಯವಸ್ಥಿತವಾದ ಯಾವ ಬೆಂಬಲವೂ ಹೆಚ್ಚಾಗಿ ಇಲ್ಲದ ಆ ಕಾಲದಲ್ಲಿ ನಿಃಸ್ಪೃಹ ವಿದ್ವಾಂಸರೂ ಸ್ವಯಂಪ್ರೇರಿತ ಭಾಷಾಭಿಮಾನಿಗಳೂ ಅವ್ಯಾಜವಾಗಿ ದುಡಿದು ಅದರ ಕಾಂತಿ ಕುಂದದಂತೆ ನೋಡಿಕೊಂಡರು. ಇಂತಹ ವಿರಳ ದೀಪಧಾರಿಗಳ ಪೈಕಿ ಪ್ರಸಿದ್ಧಿ-ಪ್ರತಿಷ್ಠೆಗಳಿಗೆ ಪಾತ್ರರಾದವರು ಇರುವಂತೆಯೇ ಅವಜ್ಞೆ-ಅಪ್ರಚಾರಗಳಿಗೆ ತುತ್ತಾದವರೂ ಇದ್ದಾರೆ. ಭಾಷಾಸೇವೆ ಮಾಡಿದ ಎಲ್ಲರನ್ನೂ ಸಮವಾಗಿ ಗೌರವಿಸುವುದು ಯುಕ್ತವೇ ಆದರೂ ಅನ್ಯಾಯವಾಗಿ ಅವಜ್ಞೆಗೀಡಾದ ಸಾಧಕರನ್ನು ನೆನೆಯುವುದು ನಮ್ಮ ಕರ್ತವ್ಯ.
ಈ ಸಾಲಿನ ಸಾಧಕರಲ್ಲಿ ಅಗ್ರಮಾನ್ಯರು ಪ್ರೊ|| ಎಂ. ರಾಮಕೃಷ್ಣಭಟ್ಟರು.
* * *
ಪ್ರಾಚಾರ್ಯ ರಾಮಕೃಷ್ಣಭಟ್ಟರು (೧೭.೦೪.೧೯೦೭ - ೧೦.೦೫.೧೯೯೦) ದಕ್ಷಿಣಕನ್ನಡದ ಕುಂಬಳ ಸೀಮೆಯ ಕಾನ ಎಂಬ ಗ್ರಾಮದಲ್ಲಿ ಜನಿಸಿದರು (ಮನೆಯ ಹೆಸರು ‘ಮೇಣ’). ತಂದೆ ಬ್ರಹ್ಮಶ್ರೀ ಕೃಷ್ಣಭಟ್ಟರು, ತಾಯಿ ಶ್ರೀಮತಿ ವೆಂಕಮ್ಮನವರು. ನಾಯ್ಕಾಪಿನ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು ಬಳಿಕ ನಾರಾಯಣಮಂಗಲದ ಸಂಸ್ಕೃತಶಾಲೆಯಲ್ಲಿ ಪ್ರೌಢವಿದ್ಯಾಭ್ಯಾಸ ನಡಸಿದರು. ಮದ್ರಾಸ್ ಸರ್ಕಾರವು ಆಯೋಜಿಸುತ್ತಿದ್ದ ಸಂಸ್ಕೃತಪರೀಕ್ಷೆಯ ಅಂಗವಾಗಿ ಸಾಹಿತ್ಯ ಮತ್ತು ವ್ಯಾಕರಣಶಾಸ್ತ್ರಗಳ ಅಧ್ಯಯನವನ್ನು ಉತ್ತಮಶ್ರೇಣಿಯಲ್ಲಿ ಪೂರೈಸಿ ಜ್ಯೋತಿಃಶಾಸ್ತ್ರವನ್ನು ತಮ್ಮ ಕುತೂಹಲದಿಂದ ಅಭ್ಯಸಿಸತೊಡಗಿದರು.ಇಲ್ಲಿಯವರೆಗಿನ ವಿದ್ಯಾಭ್ಯಾಸವನ್ನು ಸಂಸ್ಕೃತದ ಮಾಧ್ಯಮದಲ್ಲಿಯೇ ಮಾಡಿದ ರಾಮಕೃಷ್ಣಭಟ್ಟರು ತಾವಾಗಿಯೇ ಇಂಗ್ಲಿಷ್ ಭಾಷೆಯನ್ನು ರೂಢಿಸಿಕೊಂಡರು. ಸಂಸ್ಕೃತದ ಮೂಲಕ ಇಂಗ್ಲಿಷಿಗೆ ಪ್ರವೇಶ ಪಡೆದ ಇವರಿಗೆ ಆ ಭಾಷೆಯ ಜಾಡನ್ನು ಗ್ರಹಿಸಿ ಅದರಲ್ಲಿ ಪ್ರಭುತ್ವ ಸಂಪಾದಿಸುವುದು ಕಷ್ಟವೆನಿಸಲಿಲ್ಲ. ಮುಂದೆ ಅವರು ಬೃಹತ್ಸಂಹಿತೆಯೇ ಮೊದಲಾದ ಹಲವು ಪ್ರೌಢಗ್ರಂಥಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿ ಆ ನುಡಿಯಲ್ಲಿ ಸ್ವತಂತ್ರ ಕೃತಿಗಳನ್ನೂ ರಚಿಸಿದ ಹಿನ್ನೆಲೆಯಲ್ಲಿ ರಾಮಕೃಷ್ಣಭಟ್ಟರ ಈ ತೆರನಾದ ಭಾಷಾಭ್ಯಾಸ ಅಚ್ಚರಿ ತರಿಸುತ್ತದೆ.
ಅನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂ.ಎ. ಪದವಿಗಾಗಿ ವ್ಯಾಕರಣ, ಅಲಂಕಾರಶಾಸ್ತ್ರ ಮತ್ತು ತೌಲನಿಕ ಭಾಷಾಶಾಸ್ತ್ರಗಳನ್ನು ಅಧ್ಯಯನ ಮಾಡಿ ನಾಲ್ಕು ಚಿನ್ನದ ಪದಕಗಳೊಡನೆ ಉತ್ತೀರ್ಣರಾದರು. ಅವರ ಈ ವಿಕ್ರಮ ವಿಶ್ವವಿದ್ಯಾಲಯದಲ್ಲಿ ಇಂದೂ ದಾಖಲೆಯಾಗಿ ಉಳಿದಿದೆ ಎಂದು ಬಲ್ಲವರು ಹೇಳುತ್ತಾರೆ. ಇದಲ್ಲದೆ ೧೯೪೧ರಲ್ಲಿ ಸಂಸ್ಕೃತ ಮತ್ತು ಕನ್ನಡಗಳ ವಿದ್ವತ್ಪರೀಕ್ಷೆಯಲ್ಲಿ ಪ್ರಥಮಸ್ಥಾನ ಗಳಿಸಿ ಅಲ್ಲಿಯೂ ಸುವರ್ಣಪದಕಗಳನ್ನು ಪಡೆದರು. ಜ್ಯೌತಿಷ ಮತ್ತು ಧರ್ಮಶಾಸ್ತ್ರಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಸಂಶೋಧನಪ್ರಬಂಧವನ್ನೂ ರಚಿಸಿದ್ದ ರಾಮಕೃಷ್ಣಭಟ್ಟರಿಗೆ ತಮ್ಮ ಪ್ರಬಂಧವನ್ನು ಟೈಪ್ ಮಾಡಿಸಲು ಆರ್ಥಿಕ ಅನುಕೂಲತೆ ಒದಗಿಬರದ ಕಾರಣ ಪಿಎಚ್.ಡಿ. ಪದವಿಯನ್ನು ಪಡೆಯಲು ಸಾಧ್ಯವಾಗಲಿಲ್ಲ! (ಇಂದಿಗೂ ಈ ಪ್ರೌಢಪ್ರಬಂಧ ಅಪ್ರಕಟಿತವಾಗಿಯೇ ಉಳಿದಿದೆ.)
ರಾಮಕೃಷ್ಣಭಟ್ಟರ ಅಧ್ಯಾಪನಕೃಷಿ ೧೯೩೩ರಿಂದ ೧೯೭೪ರವರೆಗೆ ಅವಿರತವಾಗಿ ಸಾಗಿತು. ಮೊದಮೊದಲು ತಮ್ಮ ಪ್ರಬುದ್ಧತೆಗೆ ತಕ್ಕ ವೃತ್ತಿ ಸಿಗದೆ ತಾತ್ಕಾಲಿಕವಾಗಿ ಹಲವು ಕೆಲಸಗಳನ್ನು ಮಾಡಿದರು. ಮದ್ರಾಸಿನ ಸರ್ಕಾರಿ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ, ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ದುಡಿದರು. ಅನಂತರ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಹದಿನೇಳು ವರ್ಷಗಳ ಕಾಲ ಸಂಸ್ಕೃತಭಾಷೆಯ ಪ್ರಾಧ್ಯಾಪಕರಾಗಿ, ಇತರ ಭಾರತೀಯ ಭಾಷೆಗಳ ನಿರ್ವಾಹಕರಾಗಿ ದುಡಿದರು. ಆ ಬಳಿಕ ಒಂದು ವರ್ಷ ಪೂರ್ವ ಆಫ್ರಿಕೆಯ ಸಂಸ್ಕೃತಿಯನ್ನು ಅಭ್ಯಾಸ ಮಾಡಲು ಆ ದೇಶಕ್ಕೆ ತೆರಳಿ ಉದ್ದಿಷ್ಟ ಕಾರ್ಯದೊಡನೆ ಭಾರತೀಯ ಸಂಸ್ಕೃತಿಯ ಪ್ರಸಾರವನ್ನೂ ಮಾಡಿ ಹಿಂತಿರುಗಿದರು. ಭಾರತಕ್ಕೆ ಮರಳಿದ ಮೇಲೆ ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರಿದ ಹಿಂದೂ ಕಾಲೇಜಿನಲ್ಲಿ ಸಂಸ್ಕೃತಪ್ರಾಧ್ಯಾಪಕರಾಗಿ ನಿಯಮಿತರಾಗಿ ೧೯೫೬ರಿಂದ ೧೯೭೪ರವರೆಗೆ ಪಾಠ-ಪ್ರವಚನಗಳಲ್ಲಿಯೂ ಸಂಶೋಧನೆ-ಸಂಘಟನೆಗಳಲ್ಲಿಯೂ ತೊಡಗಿದ್ದರು. ದೆಹಲಿಯ ವಿಶ್ವವಿದ್ಯಾಲಯದಲ್ಲಿ, ಹರಿದ್ವಾರದ ವಿಶ್ವವಿದ್ಯಾಲಯವೊಂದರಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪದವಿಯ ಮಾರ್ಗದರ್ಶಕರಾಗಿದ್ದರು. ಕೆನಡಾದ ಒಂಟಾರಿಯೋ ವಿಶ್ವವಿದ್ಯಾಲಯದಲ್ಲಿ ಜ್ಯೌತಿಷ, ಸಂಸ್ಕೃತ ಮತ್ತು ಯೋಗಗಳನ್ನು ಬೋಧಿಸಲು ಆಹ್ವಾನ ಬಂದಿತ್ತಾದರೂ ಆ ವೇಳೆಗೆ ತಮ್ಮ ಜೀವಿತದ ಸಂಧ್ಯಾಕಾಲದಲ್ಲಿದ್ದ ಪ್ರೊ|| ರಾಮಕೃಷ್ಣಭಟ್ಟರು ಅದನ್ನು ಅಂಗೀಕರಿಸಲಿಲ್ಲ.
* * *
ಹವ್ಯಕಬ್ರಾಹ್ಮಣರ ಪಂಗಡದಲ್ಲಿ ಹುಟ್ಟಿದ ರಾಮಕೃಷ್ಣಭಟ್ಟರಿಗೆ ಆ ಜನಾಂಗದ ಹೆಗ್ಗುರುತುಗಳಾದ ಸಜ್ಜನಿಕೆ, ಅನಾಲಸ್ಯ, ಸ್ವಾವಲಂಬನೆ, ವಿದ್ಯಾಕುತೂಹಲ, ದೈವಶ್ರದ್ಧೆ, ರಾಷ್ಟ್ರಭಕ್ತಿ, ಸಮಾಜೋನ್ಮುಖತೆಗಳು ಚೆನ್ನಾಗಿ ಮೈಗೂಡಿದ್ದವು. ಅವರ ಜೀವನದ ಪ್ರತಿಯೊಂದು ಹಂತದಲ್ಲಿಯೂ ಈ ಸದ್ಗುಣಗಳ ಪ್ರತಿಫಲನವನ್ನು ಕಾಣಬಹುದು.
ವಿದ್ಯಾರ್ಥಿಯಾಗಿದ್ದಾಗಲೇ ವಿಹಿತವಾದ ಪಾಠಗಳೊಡನೆ ಸಾಹಿತ್ಯ ಮತ್ತು ಜ್ಯೌತಿಷಗಳನ್ನು ಕಲಿಯತೊಡಗಿದ ಭಟ್ಟರು ಬಹಳ ಬೇಗ ಆಶುವಾಗಿ ಪದ್ಯ ರಚಿಸುವ ಕೌಶಲವನ್ನು ಗಳಿಸಿ ಜ್ಯೋತಿರ್ವಿದ್ಯೆಯ ಅಂತರಂಗವನ್ನು ಬಲ್ಲವರಾದರು. ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ವಿದ್ಯಾರ್ಥಿಗಳನ್ನು ಪ್ರಚೋದಿಸಲು, ಜನಸಮುದಾಯದಲ್ಲಿ ಸಂಸ್ಕೃತದ ಬಗೆಗೆ ಪ್ರೀತಿ-ಜ್ಞಾನಗಳನ್ನು ಹೆಚ್ಚಿಸಲು ‘ಅಮೃತವಾಣಿ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಹದಿಮೂರು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಕಟಿಸಿದರು. ಆಫ್ರಿಕೆಯಲ್ಲಿ ಕಳೆದ ಅಲ್ಪಕಾಲದಲ್ಲಿಯೇ ಅಲ್ಲಿಯ ಸಂಸ್ಕೃತಿಯನ್ನು ಗಾಢವಾಗಿ ಪರಿಶೀಲಿಸಿ ನಮ್ಮ ಜನರಿಗೆ ಅದರ ತಿಳಿವಳಿಕೆ ನೀಡಲು ‘ರಾಷ್ಟ್ರಮತ’ ಎಂಬ ಪತ್ರಿಕೆಗೆ ಪತ್ರಗಳನ್ನು ಬರೆದದ್ದೇ ಅಲ್ಲದೆ ಅಲ್ಲಿಯವರಿಗೆ ಭಾರತದ ಪರಿಚಯ ಮಾಡಿಸಲು ‘ಪರಿಮಲ್ ಅಕಾಡೆಮಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
ತಮಗೊಲಿದ ವಿದ್ಯೆಗಳ ಪ್ರಸಾರಕ್ಕಾಗಿ ಹಲವು ರೀತಿಯಲ್ಲಿ ಶ್ರಮಿಸಿದ ಪ್ರೊ|| ರಾಮಕೃಷ್ಣಭಟ್ಟರು ಅಧ್ಯಾಪಕರಾಗಿ, ಅನುವಾದಕರಾಗಿ, ಕವಿಯಾಗಿ, ಸಂಸ್ಕೃತಿಸೇವಕರಾಗಿ ಉಚ್ಚಸ್ತರದ ಸಾಧನೆ ಮಾಡಿದ್ದಾರೆ. ತಾವು ಮೆಚ್ಚಿದ ಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದೇ ಅಲ್ಲದೆ ಅಭಿಜಾತಕವಿತೆಯ ಪರಿಮಳವನ್ನು ಪಸರಿಸಲು ಸಭೆ-ಸಮಾರಂಭಗಳಲ್ಲಿ, ಗೋಷ್ಠಿ-ಉತ್ಸವಗಳಲ್ಲಿ ಆಶುವಾಗಿ ಪದ್ಯಗಳನ್ನು ರಚಿಸಿ ಎಲ್ಲರೊಡನೆ ಹಂಚಿಕೊಳ್ಳುತ್ತಿದ್ದರು. ಸಂಸ್ಕೃತಕಾವ್ಯದ ಸೊಗಸು ಕನ್ನಡಿಗರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಗೀತ, ನಾಟಕ, ಮುಕ್ತಕ ಮುಂತಾದುವನ್ನು ಭಾಷಾಂತರಿಸಿದರು. ತಮ್ಮ ಮೆಚ್ಚಿನ ವಿದ್ಯೆಯಾದ ಜ್ಯೌತಿಷಕ್ಕೆ ಸೇವೆ ಸಲ್ಲಿಸಲು ಅದರ ಅನೇಕ ಪ್ರಮೇಯಗ್ರಂಥಗಳನ್ನು ಅನುವಾದ ಮಾಡಿದ್ದಲ್ಲದೆ ಫಲಜ್ಯೌತಿಷದ ಮೂಲಕ ಜನರಲ್ಲಿ ನೆಮ್ಮದಿ-ಸತ್ಪ್ರೇರಣೆಗಳನ್ನು ಮೂಡಿಸಿದರು. ಹಲವು ಗ್ರಂಥಗಳ ಅನುವಾದವನ್ನು ಬಹುಭಾಗ ತಾವೇ ಮಾಡಿಯೂ ಕರ್ತೃತ್ವವನ್ನು ಮತ್ತೊಬ್ಬರ ಪಾಲಿಗೆ ಬಿಟ್ಟುಕೊಡಬೇಕಾದ ಕಹಿಯ ಪ್ರಸಂಗಗಳು ರಾಮಕೃಷ್ಣಭಟ್ಟರಿಗೆ ಒದಗಿದವು. ಇಂತಾದರೂ ಅವರು ಜ್ಞಾನಪ್ರಸಾರವನ್ನಷ್ಟೇ ಲೆಕ್ಕಿಸಿ ಮುನ್ನಡೆದರು; ಸರಸ್ವತ್ಯಾರಾಧನೆಯನ್ನು ಸಾರ್ಥಕಗೊಳಿಸಿದರು.
ಸಂಸ್ಕೃತವು ಗ್ರಂಥಗಳಿಗಷ್ಟೇ ಸೀಮಿತವಾದರೆ ಸಾಲದು; ಅದು ಎಲ್ಲ ಜನರ ನಾಲಗೆಗಳ ಮೇಲೆ ನಲಿದಾಡುವಂತಾಗಬೇಕು ಎಂಬ ಸಂಕಲ್ಪದಿಂದ ಸಂಭಾಷಣಪ್ರಕಲ್ಪವನ್ನು ರೂಪಿಸಿ ಅದಕ್ಕಾಗಿ ಹಲವು ಹಂತಗಳ ಪಾಠ್ಯಕ್ರಮವನ್ನೂ ಸಿದ್ಧಪಡಿಸಿದ್ದರು. ಇದನ್ನವರು ೧೯೮೦ರ ದಶಕದಲ್ಲಿ ಹಿಂದು ಸೇವಾಪ್ರತಿಷ್ಠಾನದಿಂದ (ಇಂದಿನ ಸಂಸ್ಕೃತಭಾರತಿ) ಅಂಕುರಗೊಂಡ ಸಂಭಾಷಣಸಂಸ್ಕೃತದ ಆಂದೋಲನಕ್ಕೆ ಮುನ್ನವೇ (೧೯೭೪ಕ್ಕೂ ಮೊದಲು) ಸ್ವಪ್ರೇರಣೆಯಿಂದ ಮಾಡಿದ್ದರೆಂಬುದನ್ನು ಗಮನಿಸಬೇಕು. ಅವರು ರಚಿಸಿದ್ದ ಪಾಠ್ಯಪುಸ್ತಕಗಳು ನಮಗೆ ಉಳಿದುಬರದಿರುವುದು ಒಂದು ದೊಡ್ಡ ನಷ್ಟ.
ಹೀಗೆ ಒತ್ತಡಗಳಿಂದ ಎದೆಗುಂದದೆ, ಹೊರಗಿನ ಅವಕಾಶಗಳಿಗೆ ಕಾಯದೆ, ಅಂತರಂಗದ ಪ್ರೇರಣೆಯಿಂದಲೇ ದುಡಿದು ಧನ್ಯರಾದ ಬೆರಳೆಣಿಕೆಯ ಮಂದಿಯಲ್ಲಿ ಸಲ್ಲುವವರು ಶ್ರೀರಾಮಕೃಷ್ಣಭಟ್ಟರು.
* * *
ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ರಾಮಕೃಷ್ಣಭಟ್ಟರ ಗುರುಗಳಾಗಿದ್ದ ಮಹಾಮಹೋಪಾಧ್ಯಾಯ ಎಸ್. ಕುಪ್ಪುಸ್ವಾಮಿಶಾಸ್ತ್ರಿಗಳನ್ನು ಕುರಿತು ಹೇಳುವುದು ಇಲ್ಲಿ ಅಪ್ರಸ್ತುತವಾಗಲಾರದು. ಹಿಂದಿನ ಪೀಳಿಗೆಯ ಸಂಸ್ಕೃತವಿದ್ವಾಂಸರನ್ನು ನಾವು ಎರಡು ವರ್ಗಗಳಲ್ಲಿ ಗಣಿಸಬಹುದು: ಸಾಂಪ್ರದಾಯಿಕ ಶೈಲಿಯಲ್ಲಿ ಅಧ್ಯಯನ ಮಾಡಿದವರು, ಆಧುನಿಕ ಕ್ರಮದಲ್ಲಿ ಓದಿಕೊಂಡವರು. ಎರಡೂ ಧಾರೆಗಳ ಗುಣಾಂಶಗಳನ್ನು ಮೈಗೂಡಿಸಿಕೊಂಡಿದ್ದ ಪಂಡಿತರ ಪೈಕಿ ಪ್ರಥಮಗಣ್ಯರು ಕುಪ್ಪುಸ್ವಾಮಿಶಾಸ್ತ್ರಿಗಳು. ಹಲವು ಶಾಸ್ತ್ರಗಳನ್ನು ತಳಮುಟ್ಟಿ ತಿಳಿದುಕೊಂಡಿದ್ದ ಶಾಸ್ತ್ರಿಗಳು ನಿಜಕ್ಕೂ ವಿದ್ವದ್ದಿಗ್ಗಜರು. ಅವರ ಪಾಂಡಿತ್ಯವನ್ನು ಪರಿಚಯಿಸಲು ಸಂಸ್ಕೃತದ ಆನರ್ಸ್ ಪದವಿಗೆ ಅವರು ರೂಪಿಸಿದ್ದ ಪಾಠಾವಲಿಯನ್ನು ಗಮನಿಸಿದರೆ ಸಾಕು - ಅದು ತೌಲನಿಕ ಭಾಷಾಶಾಸ್ತ್ರವನ್ನಲ್ಲದೆ ಎಂಟು ಶಾಸ್ತ್ರಗಳ ಆಧಾರಗ್ರಂಥಗಳನ್ನು ಸಂಪೂರ್ಣವಾಗಿ ಒಳಗೊಂಡಿತ್ತು! ಶಾಸ್ತ್ರಿಗಳು ವಿದ್ಯಾಪಕ್ಷಪಾತಿಗಳು, ವಿದ್ಯಾರ್ಥಿವತ್ಸಲರು. ಅವರು ಬರೆದದ್ದು ಕಡಮೆಯಾದರೂ ಬರೆದದ್ದೆಲ್ಲ ಬಹಳ ಬೆಲೆಬಾಳುವಂಥದ್ದು. ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಹಸ್ತಪ್ರತಿಗಳ ಸೂಚಿಯೇ ಮೊದಲಾದ ವಿದ್ವತ್ಕಾರ್ಯಗಳು ಇಂದಿಗೂ ಆಯಾ ಕ್ಷೇತ್ರಗಳಲ್ಲಿ ಪ್ರಮುಖವಾಗಿವೆ. ತಮ್ಮ ಕೆಲಸಗಳನ್ನು ಮುನ್ನಡಸಬಲ್ಲ ಹತ್ತಾರು ಉತ್ತಮಶಿಷ್ಯರನ್ನು ತಯಾರಿಸಿದುದೇ ಕುಪ್ಪುಸ್ವಾಮಿಶಾಸ್ತ್ರಿಗಳ ಹೆಗ್ಗಳಿಕೆ ಎನ್ನಬಹುದು. ಅವರನ್ನು ‘ಕುಲಪತಿ’ಗಳೆಂದು ಕರೆದರೆ ಸರಿಯಾದೀತು. ವಿ. ರಾಘವನ್, ಎಸ್. ಸುಬ್ರಹ್ಮಣ್ಯಶಾಸ್ತ್ರೀ, ಕೆ. ಕುಂಜುಣ್ಣಿರಾಜ, ಸಿ. ಶಿವರಾಮಮೂರ್ತಿ ಮೊದಲಾದ ಘಟಾನುಘಟಿಗಳೆಲ್ಲ ಅವರ ಶಿಷ್ಯರೇ.
ಇಂತಹ ಉದ್ದಾಮ ಪಂಡಿತರ ಶಿಷ್ಯರಾದ ರಾಮಕೃಷ್ಣಭಟ್ಟರ ವಿದ್ವತ್ತೆ ಮೇಲ್ಮಟ್ಟದ್ದಾಗಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶಾಸ್ತ್ರಿಗಳು ಶ್ರಮವಹಿಸಿ ಕಲ್ಪಿಸಿದ್ದ ಉನ್ನತಾಧ್ಯಯನದ ಪರಿಸರ ಮತ್ತು ಮೇಧಾವಿಗಳಾದ ಸಹಪಾಠಿಗಳ ಸಾಹಚರ್ಯ ಅವರ ತಿಳಿವಿನ ತಳಿರಿಗೆ ತಿಳಿನೀರಾಗಿ ಒದಗಿಬಂದವು. ರಾಮಕೃಷ್ಣಭಟ್ಟರಿಗೆ ತಮ್ಮ ಗುರುಗಳಲ್ಲಿ ಅತಿಶಯವಾದ ಭಕ್ತಿ. ಅವರ ಸಂಸ್ಮರಣಗ್ರಂಥಕ್ಕಾಗಿ ‘ಅಷ್ಟಾಧ್ಯಾಯಿಯಲ್ಲಿ ಜ್ಯೋತಿಃಶಾಸ್ತ್ರದ ವಿಚಾರಗಳು’ ಎಂಬ ಲೇಖನವನ್ನು ಬರೆದುಕೊಟ್ಟಿದ್ದಲ್ಲದೆ ಕುಪ್ಪುಸ್ವಾಮಿಶಾಸ್ತ್ರಿಗಳನ್ನು ಕುರಿತು ‘ಶ್ರೀಗುರುಸ್ಮರಣಮ್’ ಎಂಬ ನಾಲ್ಕು ಸರ್ಗಗಳ ಸಂಸ್ಕೃತಕಾವ್ಯವನ್ನು ರಚಿಸಿದ್ದಾರೆ. ಸಂದರ್ಭಗಳು ಕೂಡಿಬಂದು ರಾಮಕೃಷ್ಣಭಟ್ಟರಿಗೆ ಪಿಎಚ್.ಡಿ. ಪದವಿ ಲಭಿಸಿದ್ದರೆ ಪ್ರಾಯಶಃ ಅವರು ತಮಗೆ ಅರ್ಹವೇ ಆದ ಇನ್ನಷ್ಟು ಖ್ಯಾತಿ, ಪ್ರತಿಷ್ಠೆಗಳನ್ನು ಗಳಿಸಬಹುದಿತ್ತು. ಏನೇ ಆಗಲಿ, ಮುಂದೆ ಅವರು ಮಾಡಲಿದ್ದ ಕೆಲಸಗಳಿಗೆ ಬೇಕಿದ್ದ ಶಾಸ್ತ್ರಾಧ್ಯಯನದ ಭದ್ರವಾದ ಬುನಾದಿ ಕುಪ್ಪುಸ್ವಾಮಿಶಾಸ್ತ್ರಿಗಳಿಂದ ಸಿದ್ಧವಾಯಿತು.