ದೇಶವ್ಯಾಪಿ ಸಮರ
ಹೀಗೆ 1857ರ ಕ್ರಾಂತಿ ದೇಶದಲ್ಲೆಲ್ಲ ವ್ಯಾಪಿಸಿರಲಿಲ್ಲವೆಂಬ ವಾದವು ನಿರಾಧಾರ. ಎಲ್ಲೆಲ್ಲ ಹೆಚ್ಚಿನ ಜನಜಾಗೃತಿ ಇತ್ತೋ ಅಲ್ಲೆಲ್ಲ ಜನ ಭಾಗವಹಿಸಿದರು.
ದಕ್ಷಿಣ ಭಾರತದ ಜನ 1857ರ ಸಮರದಲ್ಲಿ ಭಾಗವಹಿಸಲಿಲ್ಲ ಎಂಬುದು ಇನ್ನೊಂದು ಮಿಥ್ಯಪ್ರತಿಪಾದನೆ. ಅನೇಕ ವರ್ಷ ಇಂಥ ಪ್ರಚಾರ ನಡೆದಿತ್ತು. ಈಗಲೂ ಇಲ್ಲದೆ ಇಲ್ಲ. ಆದರೆ ವಸ್ತುಸ್ಥಿತಿ ಹಾಗಿಲ್ಲ.
ಈಗ ನಾಲ್ಕೈದು ವರ್ಷ ಹಿಂದೆ ದಿವೇಕರ್ ಎಂಬ ಪುಣೆಯ ದೊಡ್ಡ ವಿದ್ವಾಂಸರು South India in 1857 ಎಂಬ ಗ್ರಂಥ ಬರೆದಿದ್ದಾರೆ. ಅದನ್ನು ಆಗ್ರಾದೊಬ್ಬರು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. 1857ರ ಸಮರದಲ್ಲಿ ಯಾವಾವ ಊರಿನ ಎಷ್ಟೆಷ್ಟು ಮಂದಿ ಭಾಗವಹಿಸಿದ್ದರೆಂದು ಹೆಸರುಗಳ ಸಮೇತ ವಿವರಗಳನ್ನು ಅದರಲ್ಲಿ ದಾಖಲೆ ಮಾಡಿದ್ದಾರೆ. ಕರ್ನಾಟಕದವರೂ ಗಣನೀಯ ಸಂಖ್ಯೆಯಲ್ಲಿ ಸಮರದಲ್ಲಿ ತೊಡಗಿದ್ದುದು ಅಲ್ಲಿ ನಿರೂಪಿತವಾಗಿದೆ. (ಕರ್ನಾಟಕದವರಾರೂ ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ಇರದಿದ್ದುದರಿಂದ ಕನ್ನಡ ಕಲಿಯಲು ತಮಗೆ ಅವಕಾಶವಾಗಲಿಲ್ಲ ಎಂದು ಸಾವರಕರರು ಧಾರವಾಡದಲ್ಲಾಡಿದ ಹಾಸ್ಯೋಕ್ತಿ ಪ್ರಸಿದ್ಧವಿದೆ.)
ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ ಸೇರಿದಂತೆ ಹತ್ತಾರು ಮಂದಿಯ ಹೆಸರುಗಳನ್ನು ದಿವೇಕರ್ ತಮ್ಮ ಗ್ರಂಥದಲ್ಲಿ ಉಲ್ಲೇಖ ಮಾಡಿದ್ದಾರೆ. ಕಡಪಾ ಮೊದಲಾದೆಡೆಗಳ ಆಂಧ್ರದ ಹೋರಾಟಗಾರರ ವಿವರಗಳು ಅಲ್ಲಿವೆ. ಕಡೆಗೆ ಬ್ರಿಟಿಷರು ಗಲ್ಲಿಗೇರಿಸಿದವರ ಪಟ್ಟಿಯನ್ನು ಅವಲೋಕಿಸಿದಲ್ಲಿ ದಕ್ಷಿಣ ಭಾರತದ ಎಲ್ಲ ಭಾಗಗಳವರ ಹೆಸರುಗಳೂ ಅಲ್ಲಿ ದೊರೆಯುತ್ತವೆ.
ಯಾರಾರನ್ನು ಕೋರ್ಟ್ಮಾರ್ಷ್ಲ್ಗೆ ಒಳಪಡಿಸಲಾಯಿತೆಂಬ ಪಟ್ಟಿಗಳೂ ಲಭ್ಯವಿವೆ. ಬ್ರಿಟಿಷರು ದಾಖಲೆಗಳನ್ನು ಬಹಳ ಪರಿಷ್ಕಾರವಾಗಿ ಬರೆದಿರಿಸುತ್ತಿದ್ದರು. ಆ ಕೋರ್ಟ್ಮಾರ್ಷಲ್ ಪಟ್ಟಿಗಳಲ್ಲಿ ಬಹುತೇಕ ಎಲ್ಲ ಪ್ರಾಂತಗಳವರ ಹೆಸರುಗಳನ್ನೂ ಕಾಣಬಹುದು.
ಹೀಗೆ 1857ರ ಸಮರದಲ್ಲಿ ಎಲ್ಲ ದೇಶ ಭಾಗಗಳವರೂ ಸೇರಿದ್ದರೆಂಬುದು ನಿರ್ವಿವಾದ.
1857ರ ಸಮರಕ್ಕೆ ದೇಶವನ್ನೆಲ್ಲ ಸಿದ್ಧಪಡಿಸಲಾಗಿತ್ತು. ಸಿದ್ಧತೆ ಎಂದರೆ ಏನು? ಯಾವ ಬಗೆಯ ಸಿದ್ಧತೆ?
ಧೀರೋದಾತ್ತ ನೇತೃತ್ವ
ಯಾವುದೇ ಹೋರಾಟದಲ್ಲಿ ಕೆಲವು ಕ್ರಾಂತಿಕಾರಿ ನಾಯಕರ ಹೆಸರುಗಳು ಎದ್ದು ಕಾಣುತ್ತವೆ. ಹಾಗೆ 1857ರ ಸಂಘರ್ಷದಲ್ಲಿ ಎದ್ದು ಕಾಣುವ ಹೆಸರು ನಾನಾಸಾಹೇಬ್ (ಧೋಂಡೋಪಂತ್) ಪೇಶ್ವೆಯದು. ಆಗಿನ ಪೇಶ್ವೆಯ ದತ್ತುಮಗ ಆತ. ಆತನಿಗೆ ಆಂಗ್ಲ ಸರ್ಕಾರವು ಪೆನ್ಶನ್ ಕೊಟ್ಟಿರಲಿಲ್ಲವೆಂದು ಆತ ಹೋರಾಟಕ್ಕಿಳಿದ ಎಂಬುದು ಬ್ರಿಟಿಷರ ವಾದ. ಅಷ್ಟು ಅಗಾಧ ಪ್ರಮಾಣದ ಮತ್ತು ದೇಶವ್ಯಾಪಿ ಸಂಘಟನೆಯನ್ನು ನಾನಾಸಾಹೇಬ ತನ್ನ ಪೆನ್ಶನಿನ ಸಲುವಾಗಿ ಕಟ್ಟಿದ – ಎಂಬುದಕ್ಕಿಂತ ಹಾಸ್ಯಾಸ್ಪದವಾದ ವಿಶ್ಲೇಷಣೆ ಬೇರೆ ಇದ್ದೀತೆ? ಬ್ರಿಟಿಷ್ ಆಡಳಿತಗಾರರು ಮಾತ್ರ ಹೀಗೆ ಪೆನ್ಶನ್ ಕೇಂದ್ರಿತವಾಗಿ ಯೋಚಿಸಬಹುದಷ್ಟೆ.
ತಾತ್ಯಾಟೋಪೆಗೆ ಇಷ್ಟೆಲ್ಲ ಶ್ರಮದಿಂದ ಏನು ಲಾಭ ಸಿಗುವುದಿತ್ತು? ಬ್ರಿಟಿಷರೇ ಅವನ ಬಗ್ಗೆ ಬರೆಯುತ್ತಾರೆ: “If there were four more Tatya Topes, the war’s future would have been entirely different.” (ತಾತ್ಯಾಟೋಪೆಯಂಥ ಇನ್ನು ನಾಲ್ಕೇ ಜನ ಮುತ್ಸದ್ದಿಗಳು ಇದ್ದಿದ್ದರೆ ಯುದ್ಧದ ಗತಿಯೇ ಬೇರೆಯಾಗುತ್ತಿತ್ತು”). ಇಂಥ ತಾತ್ಯಾಟೋಪೆ ಹಣಕ್ಕೋಸ್ಕರ ಹೋರಾಡಲು ಮುನ್ನುಗ್ಗುತ್ತಿದ್ದನೆ? ಅವನು ಅತ್ಯಂತ ಧೀರೋದಾತ್ತವಾಗಿ ಗಲ್ಲಿಗೇರಿದ (18 ಏಪ್ರಿಲ್ 1859).
ಜರ್ನಾ ಎಂಬ ಪುಟ್ಟ ರಾಜ್ಯದ ರಾಜಕುಮಾರನಿಗೂ ತಾತ್ಯಾಟೋಪೆಯಂತೆ ಗಲ್ಲು ಶಿಕ್ಷೆಯಾಯಿತು. ಆ ಎಳೆ ವಯಸ್ಸಿನವ ಬ್ರಿಟಿಷ್ ಅಧಿಕಾರಿಗಳಿಗೆ ಹೇಳಿದ: “ಸಾಮಾನ್ಯ ಕೊಲೆಪಾತಕನಂತೆ, ಕಳ್ಳನಂತೆ ನನ್ನನ್ನು ಗಲ್ಲಿಗೆ ಹಾಕಬೇಡಿ. ನಾನು ಯಾವ ಅಪರಾಧವನ್ನೂ ಮಾಡಿಲ್ಲ. ನನ್ನನ್ನು ನಿಮ್ಮ ತೋಫಿನ ಬಾಯಿಗೆ ಬಿಗಿದು ಕಟ್ಟಿ ಗುಂಡು ಹಾರಿಸಿ ಕೊಲ್ಲಿರಿ. ನನ್ನ ದೇಹ ಚಿಕ್ಕ ಚಿಕ್ಕ ತುಂಡುಗಳಾಗುವಂತೆ ಅತ್ಯಂತ ಬಲಯುತ ಸಿಡಿಮದ್ದನ್ನು ಬಳಸಿರಿ. ಇದು ನಿಮ್ಮಲ್ಲಿ ನನ್ನ ಅಂತಿಮ ಬೇಡಿಕೆ.” ಈ ರೀತಿಯ ಮರಣವನ್ನು ಅವನು ಡಿಮ್ಯಾಂಡ್ ಮಾಡುತ್ತಾನೆ. “Blow me to pieces and see how an Indian faces his death.” (“ಮೃತ್ಯುವನ್ನು ನಾನು ಹೇಗೆ ಎದುರಿಸುತ್ತೇನೆಂದು ನೀವು ನೋಡಿರಿ.”)
ಸಾವಿಗೇ ಆಗಿತ್ತು ಮರಣ
ಹೀಗೆ ವೀರಮರಣವನ್ನು ಆಹ್ವಾನಿಸುವ ವ್ಯಕ್ತಿಗಳು ಪೆನ್ಶನ್ ಪುಡಿಗಾಸುಗಳ ಆಸೆಯಿಂದ ಪ್ರೇರಿತರಾದಾರೆ? ಸುಳ್ಳು ಹೇಳುವುದರಲ್ಲಿಯೂ ಅರ್ಧದಷ್ಟಾದರೂ ಸಂಭವನೀಯತೆ ಇರಬೇಡವೆ?
ಇಂಥ ವ್ಯಕ್ತಿಗಳೂ ಘಟನೆಗಳೂ 1857ರ ಸಂಘರ್ಷದಲ್ಲಿ ಅಸಂಖ್ಯ. ಹಲವಾರು ವಿವರಗಳು ಲಭ್ಯವಿವೆ. ಎಲ್ಲರೂ ಓದಬೇಕಾದ್ದು ಸಾವರಕರರ ಗ್ರಂಥ. ತಾತ್ಯಾಟೋಪೆಯನ್ನು ಗಲ್ಲಿಗೇರಿಸುವಾಗ ಪದ್ಧತಿಯಂತೆ ತಲೆಗೆ ಗವುಸು ಹೊದಿಸಲು ಬಂದಾಗ ಅವನು “ಇದರ ಅವಶ್ಯಕತೆ ಇಲ್ಲ” ಎಂದು ಹೇಳಿ ತನ್ನ ಕೈಯಲ್ಲಿಯೆ ನೇಣು ಕುಣಿಕೆ ಹಗ್ಗವನ್ನು ತೆಗೆದುಕೊಂಡು ತನ್ನ ಕುತ್ತಿಗೆಗೆ ಪೋಣಿಸಿಕೊಂಡು “ನಿಮ್ಮ ಕೆಲಸ ಮುಂದುವರಿಯಲಿ. ಕೆಳಗಿರುವ ಮೇಜನ್ನು ಸರಿಸಿರಿ” ಎಂದ. “ನಾನು ನಿಮ್ಮಿಂದ ಏನನ್ನೂ ಬೇಡುವುದಿಲ್ಲ. ಗ್ವಾಲೇರದಲ್ಲಿ ನನ್ನ ವೃದ್ಧ ತಂದೆ ಇದ್ದಾರೆ. ನನ್ನ ಅಪರಾಧಕ್ಕಾಗಿ ಆ ಹಣ್ಣು ಹಣ್ಣು ಮುದುಕರಿಗೆ ದಯವಿಟ್ಟು ಯಾವ ಉಪದ್ರವವನ್ನೂ ಕೊಡಬೇಡಿರಿ. ಇದೊಂದೆ ನನ್ನ ಕೋರಿಕೆ.”
ಕೆಳಗೆ ಇರಿಸಿದ್ದ ಮೇಜನ್ನು ಸರಿಸಿದಾಗ ತಾತ್ಯಾಟೋಪೆಯ ಕುತ್ತಿಗೆ ಜೋತುಬಿದ್ದಿತು. ನಾಲ್ಕೈದು ಹನಿ ರಕ್ತ ವಧಸ್ತಂಭದ ಮೇಲೆ ಬಿದ್ದಿತು. “The gallows became wet with blood. The country became wet with tears.” ಎಂದು ಸಾವರಕರರು ವರ್ಣಿಸುತ್ತಾರೆ. ಓ ತಾತ್ಯಾಟೋಪೆ! ಇಂಥ ದ್ರೋಹಿಗಳ ನಾಡಿನಲ್ಲಿ ನೀನೇಕೆ ಹುಟ್ಟಿದೆ! – ಎಂದು ಉದ್ಗರಿಸುತ್ತಾರೆ (ಒಬ್ಬ ದ್ರೋಹಿಯಿಂದಾಗಿಯೇ ತಾತ್ಯಾಟೋಪೆ ಬ್ರಿಟಿಷರಿಗೆ ವಶನಾದದ್ದು).
ಎಲ್ಲ ಕ್ರಾಂತಿವೀರರೂ ಹೀಗೆ ಧೀರೋದಾತ್ತ ರೀತಿಯಲ್ಲಿಯೆ ಮರಣವನ್ನು ಸ್ವಾಗತಿಸಿದರು. ಸಾವಿರಾರು ಜನರು ಕೋರ್ಟ್ಮಾರ್ಷಲ್ಗೆ ತುತ್ತಾದರು. ಸಾವಿರಾರು ಜನ ಗಲ್ಲಿಗೆ ಹೋದರು. ಒಂದೊಂದು ಪ್ರಾಂತದ ಸ್ಮಾರಕಗಳಲ್ಲೂ ದಾಖಲೆಯಾಗಿರುವ ಹುತಾತ್ಮರ ಸಂಖ್ಯೆ ಸಾವಿರಕ್ಕೂ ಹೆಚ್ಚೇ ಇದೆ. ಹೀಗೆ ಇವರೆಲ್ಲ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಸ್ಥಾಪನೆಗಾಗಿ ಮುನ್ನುಗ್ಗಿ ಬಂದರೇ ಹೊರತು ಚಿಕ್ಕಪುಟ್ಟ ಐಹಿಕ ವ್ಯಾವಹಾರಿಕ ಪ್ರಯೋಜನಗಳಿಗಾಗಿ ಅಲ್ಲ.
ಸ್ಫೂರ್ತಿಸ್ರೋತ
ಈ ದೇಶದ ಜನರಿಗೆ ಸ್ಫೂರ್ತಿಯ ಮತ್ತು ಪ್ರೇರಣೆಯ ಸ್ಥಾನ ಉಳಿಯಬಾರದು ಎಂಬ ದೃಷ್ಟಿಯಿಂದ ಬ್ರಿಟಿಷ್ ಲೇಖಕರು ಮಿಥ್ಯೆಗಳನ್ನು ಮಂಡಿಸಿದರಷ್ಟೆ.
ಕೆ. ಎಂ. ಪಣಿಕ್ಕರ್ ಎಂಬ ಇತಿಹಸಕಾರರಿದ್ದಾರೆ. ವಾಮಪಂಥೀಯರು, ಚೀಣದಲ್ಲಿ ರಾಯಭಾರಿಯಾಗಿದ್ದವರು. ಅವರೂ ತಮ್ಮ ಗ್ರಂಥದಲ್ಲಿ ಈ ಘಟನಾವಳಿಯನ್ನೆಲ್ಲ ವಿಶ್ಲೇಷಿಸಿದ್ದಾರೆ. ವೈಯಕ್ತಿಕ ಆದರ್ಶಗಳು ರಾಷ್ಟ್ರೀಯ ಸ್ವರೂಪ ತೆಗೆದುಕೊಂಡವು ಎಂದಿರುವ ಅವರ ನಿರ್ಣಯ ಹೀಗಿದೆ: “It was nothing short of a national resurgence.”
ಅಷ್ಟೇಕೆ. ಕ್ರಾಂತಿಕಾರಿಗಳನ್ನು ಗಲ್ಲಿಗೆ ಹಾಕುವ ಕೆಲಸದಲ್ಲಿ ನಿಯುಕ್ತನಾಗಿದ್ದ ಓರ್ವ ಬ್ರಿಟಿಷನೇ ಹೀಗೆ ಬರೆದಿದ್ದಾನೆ: “The soldiers of Meerut got a cause (ದೇಶಸ್ವಾತಂತ್ರ್ಯ); they got a flag; and they got a leader.” ಇದೆಲ್ಲದರ ಪರಿಣಾಮ ಏನಾಯಿತು? “Mutiny became a veritable war.” ದಂಗೆಯೆಂದು ಕರೆಯಲಾಗುತ್ತಿದ್ದುದು ಯುದ್ಧವಾಗಿ ಪರ್ಯವಸಾನವಾಯಿತು.
ಹೀಗೆ ದೀರ್ಘಕಾಲದವರೆಗೆ ನಮ್ಮ ದೇಶೀಯರಿಗೆ ಸ್ಫೂರ್ತಿಯನ್ನು ನೀಡುತ್ತ ಹೋದ ಮಹತ್ತ್ವದ ಘಟನೆಯೆಂದು 1857ರ ಸಂಗ್ರಾಮವನ್ನು ಗುರುತಿಸಲಾಗಿದೆ.
ನಾನಾಸಾಹೇಬ್ ಪೇಶ್ವೆ ಮತ್ತಿತರ ಕ್ರಾಂತಿಕಾರಿಗಳು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದರು. ಬ್ರಿಟಿಷರ ಗಮನ ತಪ್ಪಿಸುವುದಕ್ಕಾಗಿ ಅವರಲ್ಲನೇಕರು ‘ತೀರ್ಥಯಾತ್ರೆ’ ಮಾಡುತ್ತಿದ್ದರು. ಮಿಲಿಟರಿ ಕಂಟೋನ್ಮೆಂಟುಗಳಿಗೆ ಅವರು ಹೋಗುತ್ತಿರಲಿಲ್ಲ. ತೀರ್ಥಕ್ಷೇತ್ರಗಳಲ್ಲುಳಿದುಕೊಂಡೇ ಅವರು ಸೈನಿಕರನ್ನು ಸಂಘಟಿಸುತ್ತಿದ್ದರು. ದಂಗೆಯೆದ್ದ ಕೂಡಲೆ ಏನೇನು ಕೆಲಸಗಳನ್ನು ಮಾಡಬೇಕು ಎಂದು ನಿರ್ದೇಶನವಿತ್ತು: ಮೊದಲನೆಯದಾಗಿ ಸರ್ಕಾರಿ ತಿಜೋರಿಯನ್ನು ವಶಪಡಿಸಿಕೊಳ್ಳಬೇಕು. ಅದಾದ ಮೇಲೆ ಸರ್ಕಾರದ ಶಸ್ತ್ರಾಸ್ತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು. ಮೂರನೆಯದಾಗಿ ಅವರ ನಾಯಕರನ್ನು, ನಿರ್ಣಾಯಕ ಸ್ಥಾನಗಳಲ್ಲಿರುವವರನ್ನು ಮುಗಿಸಬೇಕು. ಈ ಮೂರು ಕೆಲಸಗಳಿಗೆ ಕ್ರಾಂತಿಯ ಮೊದಲ ಪರ್ವದಲ್ಲಿ ಆದ್ಯತೆ ನೀಡಬೇಕು.
ಮುಂದುವರೆಯುವುದು...
(ಈ ಲೇಖನವು 'ಉತ್ಥಾನ' ಮಾಸಪತ್ರಿಕೆಯ ಜುಲೈ ೨೦೦೭ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಡಿಜಿಟೈಜೇಷನ್ (ಟಂಕನ) ಮಾಡಿಸಿದ್ದ ಶ್ರೀ ವಿಘ್ನೇಶ್ವರ ಭಟ್ಟರಿಗೂ ಕರಡುಪ್ರತಿ ತಿದ್ದಿದ್ದ ಶ್ರೀ ಕಶ್ಯಪ್ ನಾಯ್ಕ್ ಅವರಿಗೂ ಧನ್ಯವಾದಗಳು.)