ನಷ್ಟವಾದ ಸ್ವಾಯತ್ತತೆ
ಮೊದಲಿಗೆ ಬ್ರಿಟಿಷರು ಇಡೀ ರಾಜ್ಯವನ್ನು ತಮ್ಮ ಕೈವಶಮಾಡಿಕೊಂಡಿದ್ದರು. ಈಗ್ಗೆ ಐವತ್ತರವತ್ತು ವರ್ಷ ಹಿಂದೆ ಕನ್ನಡದಲ್ಲಿ ಒಂದು ಲಾವಣಿ ಎಲ್ಲಡೆ ಪ್ರಸಿದ್ಧವಾಗಿತ್ತು. ಅದರ ಕೆಲವು ಸಾಲುಗಳು ಹೀಗಿದ್ದವು:
ಮಹಿಳೆಯೊಳು ಭಾರತಭೂಮಿಯ ವೈಭವ-
ಬೆಡಗನು ಕೇಳಿದ ಬ್ರಿಟೀಷರು
ಮಹದಾಕಾಂಕ್ಷದಿ ಬಂದರು ಇಲ್ಲಿಗೆ
ವ್ಯಾಪಾರಕೋಸುಗ ಮೊದಲಿಹರು.
ಕ್ಲೈವನ ಕಪಟಾಚಾರದಿ ಭಾರತ-
ಖಂಡದಿ ನೆಲಸಿದ ಬ್ರಿಟೀಷರು
ದೈವಧರ್ಮವನು ದೃಷ್ಟಿಸದೆಮ್ಮಯ
ದೇಶದ ಸಿರಿಯನು ದೋಚಿದರು…
ಜನಸಾಮಾನ್ಯರಲ್ಲಿ ಎಷ್ಟುಮಟ್ಟಿನ ರೋಷ ಇತ್ತೆಂಬುದನ್ನು ಇದರಿಂದ ಊಹಿಸಬಹುದು.
ಬಹುತೇಕ ರಾಜ್ಯಗಳು ಬ್ರಿಟಿಷರ ಅಧೀನಕ್ಕೆ ಹೊರಟುಹೋಗಿದ್ದವು. ವೆಲ್ಲೆಸ್ಲೀ ಹೆಸರನ್ನು ಕೇಳಿದ್ದೀರಿ. 1797–1805ರಲ್ಲಿ ಅವನು ಗವರ್ನರ್-ಜನರಲ್ ಆಗಿದ್ದ. ಅವನು ತನ್ನ ಸೈನ್ಯವನ್ನು ತಂದು ನಿಮ್ಮ ಮನೆಯಲ್ಲಿ ಇರಿಸಿ ಹೋಗುತ್ತಿದ್ದ. “ನಿಮ್ಮ ಸುರಕ್ಷಣೆಗಾಗಿ ನನ್ನ ಈ ಸೈನ್ಯವನ್ನು ತಂದಿಟ್ಟಿದ್ದೇನೆ” ಎನ್ನುತ್ತಿದ್ದ. ಆದರೆ ಆ ಸೈನ್ಯದ ಖರ್ಚನ್ನೆಲ್ಲ ನೀವು ನೋಡಿಕೊಳ್ಳಬೇಕು; ಏಕೆಂದರೆ ನಿಮ್ಮ ಯೋಗಕ್ಷೇಮಕ್ಕಾಗಿಯೇ ನಾನು ಈ ಸೈನ್ಯವನ್ನು ತಂದಿರುವುದು! ಆದರೆ ಆ ಸೈನ್ಯಕ್ಕೆ ಏನಾದರೂ ಆರ್ಡರ್ ಕೊಡಬೇಕಾದರೆ, ಅದನ್ನು ಕೊಡುವವನು ವೆಲ್ಲೆಸ್ಲಿಯೇ ಹೊರತು ನೀವಲ್ಲ! ನೀವು ಸೈನಿಕರ ಹೊಟ್ಟೆಗೆ ಹಾಕುತ್ತಿರಬೇಕಷ್ಟೆ. ಇದು ಅವನ ನಿಯಮ.
ಹಲವು ರಾಜ್ಯಗಳಲ್ಲಿ ವೆಲ್ಲೆಸ್ಲೀ ತನ್ನ ಸೈನ್ಯವನ್ನಿರಿಸಿದ್ದ. ಈ ಏರ್ಪಾಟಿಗೆ ‘ಅಲಿಯೆನ್ಸ್’ ಮೊದಲಾದ ಅಲಂಕಾರಿಕ ಹೆಸರುಗಳು ಇರುತ್ತಿದ್ದವು: his army at your expense in your capital.
ಅವನ ನಂತರ ಕೆಲವು ವರ್ಷಗಳಾದ ಮೇಲೆ ಗವರ್ನರ್-ಜನರಲ್ ಆಗಿದ್ದ (1848–1856) ಡಾಲ್ಹೌಸೀ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ. ಅವನು ನಿಮ್ಮಿಂದ ತನಗೆ ಬೇಕುಬೇಕಾದ್ದನ್ನೆಲ್ಲ ಕಿತ್ತುಕೊಳ್ಳಲು ಹೊಸ ಹೊಸ ಕಾರಣಗಳನ್ನು ಪೌಂಛಾವಣೆ ಮಾಡಿದ. ಉದಾಹರಣೆಗೆ: ಯಾವ ರಾಜರಿಗೆ ಸಂತಾನ ಇಲ್ಲವೋ ಅಂಥವರ ರಾಜ್ಯಗಳು ಬ್ರಿಟಿಷರಿಗೆ ಸೇರಬೇಕು – ಎಂದು ಶಾಸನ ಮಾಡಿದ! ಇದೇ ಕುಪ್ರಸಿದ್ಧವಾದ Doctrine of Lapse. ಯಾವ ರಾಜನಿಗೆ ಮಕ್ಕಳಿದ್ದಾರೋ ಇಲ್ಲವೋ ಎಂಬುದಕ್ಕೂ, ಬ್ರಿಟಿಷ್ ಸರ್ಕಾರಕ್ಕೂ ಏನು ಸಂಬಂಧ? ಆದರೆ ಕೇಳುವವರಾರು! ಭಾರತದ ಸಂಸ್ಥಾನಾಧಿಪರು ವಾರಸು ಹಕ್ಕನ್ನು ಕಳೆದುಕೊಂಡರು.
ಆದರೆ ಸಂತಾನ ಇದ್ದವರನ್ನಾದರೂ ಡಾಲ್ಹೌಸೀ ಅವರ ಪಾಡಿಗೆ ಬಿಟ್ಟನೆ? ಉಹೂಂ. ಎಲ್ಲಿ ರಾಜರು (ಡಾಲ್ಹೌಸೀ ದೃಷ್ಟಿಯಲ್ಲಿ) ಚೆನ್ನಾಗಿ ಆಳುತ್ತಿಲ್ಲವೋ ಅಲ್ಲೆಲ್ಲ ಬ್ರಿಟಿಷ್ ಆಳ್ವಿಕೆ ನೆಲೆಗೊಳ್ಳಬೇಕು (“good of the governed” ಸಾಧನೆಗಾಗಿ) – ಎಂದು ಸಿದ್ಧಾಂತ ಮಾಡಿದ.
ಅವಧ್ ಪ್ರಾಂತವನ್ನು ಡಾಲ್ಹೌಸೀ ಕಿತ್ತುಕೊಂಡದ್ದು ಈ ಸಬೂಬಿನ ಆಧಾರದ ಮೇಲೆಯೇ. ಝಾನ್ಸಿಯನ್ನು ಕಿತ್ತುಕೊಂಡದ್ದು ಸಂತಾನ ಇಲ್ಲವೆಂಬ ಕಾರಣ ನೀಡಿ. ದತ್ತು ಪುತ್ರರಿಗೆ ಪೆನ್ಶನ್ ಕೊಡುತ್ತಿದ್ದುದನ್ನು ನಿಲ್ಲಿಸಿದ.
ಹೀಗೆ ಈ ದೇಶದವರ ಕೈಯಲ್ಲಿದ್ದ ಸಮಸ್ತ ಆಸ್ತಿ-ಅಧಿಕಾರಗಳನ್ನೂ ಬ್ರಿಟಿಷರು ಏನೇನೋ ವಿಧಾನಗಳ ಮೂಲಕ ಕಿತ್ತುಕೊಂಡಿದ್ದರು. ಹೀಗೆ ಸ್ವಾಭಾವಿಕವಾಗಿ ಈ ದೇಶದ ಜನರೆಲ್ಲರ ಮನಸ್ಸಿನಲ್ಲಿ ಆಕ್ರೋಶ ತುಂಬಿಕೊಂಡಿತ್ತು.”
ಧರ್ಮದ ಮೇಲೆ ವಿಘಾತ
ಇದು ಸಾಲದೆಂಬಂತೆ ಈ ದೇಶದ ಧರ್ಮದ ಬಗ್ಗೆ ಸಡಿಲವಾಗಿ ಮಾತನಾಡುವುದು, ಇಲ್ಲಿಯ ಧರ್ಮ-ಸಂಸ್ಕೃತಿಗಳನ್ನು ಕುಚೋದ್ಯಮಾಡುವುದು – ಇದೆಲ್ಲ ಗಾಯದ ಮೇಲೆ ಬರೆ ಎಳೆದಂತೆ ಆಗಿತ್ತು.
ಒಂದು ಉದಾಹರಣೆ: ಬಂಗಾಳದಲ್ಲಿ ಶಿಕ್ಷಣಸಂಸ್ಥೆಗಳು ಚೆನ್ನಾಗಿ ನಡೆಯುತ್ತಿದ್ದವು. ಅಲ್ಲಿಗೆ ಬ್ರಿಟಿಷರು ಡೆರೆಜಿಯೋ ಎಂಬ ಪ್ರೊಫೆಸರನನ್ನು ನಿಯುಕ್ತಿ ಮಾಡಿದರು. ಅವನು ಅರ್ಧ ಪೋರ್ಚುಗೀಸ್, ಅರ್ಧ ಬ್ರಿಟಿಷ್. ಅವನ ವಿದ್ಯಾರ್ಥಿತಂಡ ತನ್ನನ್ನು ‘ಯಂಗ್ ಬೆಂಗಾಲ್’ ಎಂದು ಕರೆದುಕೊಳ್ಳುತ್ತಿತ್ತು. ಈ ‘ತರುಣ ಬೆಂಗಾಲ್’ ಸದಸ್ಯರ ಮನಸ್ಸಿನಲ್ಲಿ ನಮ್ಮ ಧರ್ಮ-ಸಂಸ್ಕೃತಿಗಳ ಬಗ್ಗೆ ಎಷ್ಟು ಕ್ಷುದ್ರ ಭಾವನೆಗಳು ತುಂಬಿದ್ದವೆಂದರೆ ಪೂಜೆ-ಉತ್ಸವಗಳಂಥ ಪವಿತ್ರ ದಿನಗಳಲ್ಲಿ ಈ ಕಾಲೇಜು ವಿದ್ಯಾರ್ಥಿಗಳು ದೇವಾಲಯಗಳೊಳಕ್ಕೆ ಹೋಗಿ ಕೈಯಲ್ಲಿ ಹೊತ್ತಿಸಿದ ಸಿಗರೇಟನ್ನು ಹಿಡಿದು ದೇವಿಯನ್ನು ಕುರಿತು ಹೀಗೆನ್ನುತ್ತಿದ್ದರು: “Hullo Miss Kali! How do you do? Can you join us…?” ಹೀಗೆ ಬಂಗಾಳಿಗಳೇ ಆಗಿದ್ದ ತರುಣರು ದೇವಿಯನ್ನು ಕುಚೋದ್ಯ ಮಾಡುತ್ತಿದ್ದರು. ಇದನ್ನೆಲ್ಲ ಸಾಮಾನ್ಯ ಜನರು ಸಹಿಸಬೇಕಾಗುತ್ತಿತ್ತು. ಈ ವಿಕೃತಿಗಳನ್ನು ಆ ತರುಣರ ತಲೆಯಲ್ಲಿ ತುಂಬಿದ್ದವನು ಆ ಅರೆ-ಪೋರ್ಚುಗೀಸ್ ಡೆರೆಜಿಯೋ.
ಹೀಗೆ ಈ ದೇಶ ತನ್ನವೆಂದು ಯಾವಾವ ಸಂಗತಿಗಳನ್ನು ಗೌರವಿಸುತ್ತ ಬಂದಿದ್ದಿತೋ ಅವೆಲ್ಲ ಈ ತರುಣರಿಗೆ ಲೇವಡಿಯ ವಿಷಯಗಳಾಗಿದ್ದವು. ಇಂಥ ಹತ್ತಾರು ಉದಾಹರಣೆಗಳನ್ನು ಕೊಡಬಹುದು.
ಇಂಥ ಸನ್ನಿವೇಶವಿದ್ದಾಗ ಜನರ ಮನಸ್ಸಿನಲ್ಲಿ ವಿದ್ವೇಷ ಏಳದಿರುತ್ತದೆಯೆ?
1857ರ ಮಹಾಸಮರದ ಬೀಜವಿದ್ದದ್ದು ಇಲ್ಲಿ.
ಮಿಥ್ಯಾಕಥನ
ಇದರ ಬಗ್ಗೆ ಬ್ರಿಟಿಷರು – ಇತಿಹಾಸಕಾರರು ಹಾಗೂ ಸೇನಾಧಿಕಾರದ ಹಿನ್ನಲೆಯವರು – ಎಷ್ಟೋ ಪುಸ್ತಕಗಳನ್ನು ಬರೆದಿದ್ದಾರೆ. ಕಾಯ್ (John William Kaye: ‘History of the Sepoy War in India 1857–1858), ಮ್ಯಾಲೆಸನ್ (G. B. Malleson: ‘A History of the Indian Mutiny 1857–1858’) ಮೊದಲಾದವರು. 1857ರ ಮಹಾಸಂಗ್ರಾಮದಿಂದ ಭಾರತದ ಆಗಿನ ಮತ್ತು ಮುಂದಿನ ಪೀಳಿಗೆಗೆ ಎಷ್ಟು ಮಾತ್ರವೂ ಪ್ರೇರಣೆ ಸಿಗಬಾರದು, ಸ್ಫೂರ್ತಿ ಸಿಗಬಾರದು, ಅದು ಅನುಕರಣೀಯವಾಗಬಾರದು, ಆದರ್ಶವಾಗಬಾರದು, ಅಭಿಮಾನಾಸ್ಪದವೆನಿಸಬಾರದು – ಎಂಬ ದೃಷ್ಟಿಯಿಂದ, ಆ ಬೃಹತ್ ಸಮರದ ಭವ್ಯತೆಯನ್ನು ಅಲ್ಲಗಳೆಯುವ, ತುಂಡು ತುಂಡು ಮಾಡುವ ಪ್ರಯತ್ನವನ್ನು ಬ್ರಿಟಿಷ್ ಇತಿಹಾಸಕಾರರು ಮಾಡಿದರು. ಅವರನ್ನು ಅನುಕರಿಸಿ ಎಷ್ಟೊ ಜನ ನಮ್ಮವರೂ ಅದೇ ಧಾಟಿಯಲ್ಲಿ ಬರೆದರು. ಈ ಬಣದವರ ಕೆಲವು ವಾದಗಳು ಹೀಗಿದ್ದವು:
೧. ಈ ಕ್ರಾಂತಿ ಇಡೀ ದೇಶದಲ್ಲಿ ಹರಡಿರಲಿಲ್ಲ; ಕೆಲವೇ ಸ್ಥಾನಗಳಲ್ಲಿ ಮಾತ್ರ ಹರಡಿತ್ತು.
೨. ಇಡೀ ಜನತೆಯ ಸಮರ್ಥನೆ ಅದಕ್ಕೆ ಇರಲಿಲ್ಲ; ಮಿತ ಸಂಖ್ಯೆಯ ಒಂದಷ್ಟು ಜನರಷ್ಟೆ ಅದರಲ್ಲಿ ಪಾತ್ರವಹಿಸಿದ್ದರು.
೩. ಅದು ಕೆಲವು ಸಂಸ್ಥಾನಿಕರೂ ಸಾಮಂತ ರಾಜರೂ ತಮ್ಮ ರಾಜ್ಯ ಹೋಯಿತೆಂದೊ ಪೆನ್ಶನ್ ಸಿಗಲಿಲ್ಲವೆಂದೊ ನಡೆಸಿದ ಹೋರಾಟ ಆಗಿತ್ತೇ ಹೊರತು ಅದು ರಾಷ್ಟ್ರದ ಎಂದರೆ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವಾಗಿರಲಿಲ್ಲ.
ಬ್ರಿಟಿಷರು 1857ರ ಘಟನಾವಳಿನ್ನು ಕುರಿತು ತಯಾರು ಮಾಡಿದ ಸಾಹಿತ್ಯವೆಲ್ಲ ಈ ಜಾಡಿನದು.
ಮೌಲ್ಯಮಾಪನ
ಈ ಧೋರಣೆಯ ಮಿಥ್ಯಾತ್ವ ಒತ್ತಟ್ಟಿಗೆ ಇರಲಿ. ಬ್ರಿಟಿಷರೇ ಒಪ್ಪಿ ಸ್ವೀಕರಿಸಿದ ಕೆಲವು ಮಾನದಂಡಗಳನ್ನು ಅನ್ವಯಿಸಿ ಪರಿಶೀಲಿಸೋಣ. ಫ್ರಾನ್ಸಿನಲ್ಲಿ ಒಂದು ‘ಮಹಾಕ್ರಾಂತಿ’ಯಾಯಿತು – 1789ರಲ್ಲಿ. ‘ಸ್ವಾತಂತ್ರ್ಯ, ಸಮಾನತೆ, ಸೌಭ್ರಾತ್ರ’ ಎಂಬ ಘೋಷಣೆಯನ್ನು ಜಗತ್ತಿಗೆ ಇತ್ತದ್ದು ಆ ಕ್ರಾಂತಿ ಎಂದು ಹೇಳುತ್ತಾರೆ. ಐತಿಹಾಸಿಕವೆಂದು ವರ್ಣಿಸುವ ಆ ಕ್ರಾಂತಿಯಲ್ಲಿ ತೊಡಗಿದ್ದವರ ಸಂಖ್ಯೆ 1857ರ ಸಮರದಲ್ಲಿ ಭಾಗವಹಿಸಿದವರ ಕಾಲುಭಾಗದಷ್ಟೂ ಇರಲಿಲ್ಲ. ಹಾಗೆಯೇ ಇಂಗ್ಲೆಂಡಿನಲ್ಲಿ 1688ರಲ್ಲಿ ನಡೆದದ್ದನ್ನು ‘ಗ್ಲೋರಿಯಸ್ ರೆವೊಲ್ಯೂಷನ್’ ಎಂದು ಅಲ್ಲಿಯವರು ವರ್ಣಿಸುತ್ತಾರೆ. ಪಾಪ, ಕರೆದುಕೊಳ್ಳಲಿ ಬಿಡಿ. ಆದರೆ ಒಬ್ಬ ರಾಜ ಹೋಗಿ ಇನ್ನೊಬ್ಬ ರಾಜ ಬಂದ – ಇಷ್ಟೆ ಅಲ್ಲಿ ನಡೆದದ್ದು. ಆ ‘ರೆವೊಲ್ಯೂಷನ್’ನಲ್ಲಿ ಇದ್ದವರೆಷ್ಟು ಮಂದಿ? ಒಬ್ಬ ಶಾಲಾಬಾಲಕ ಒಂದೆರಡು ಕ್ಷಣಗಳಲಿ ಎಣಿಸಬಹುದಾದಷ್ಟು ಜನರೇ ಅದರಲ್ಲಿ ಇದ್ದುದು.
ಕ್ರಾಂತಿ ಎಂಬ ಪ್ರಕ್ರಿಯೆಯೇ ಇತಿಹಸದಲ್ಲಿ ನಡೆಯುವುದು ಪ್ರಾತಿನಿಧಿಕವಾಗಿ. ಅದರಲ್ಲಿ ಲಕ್ಷಾಂತರ ಜನರೇನು ಸೇರಿರುವುದಿಲ್ಲ. ಹೀಗಿರುವಾಗ, ವಿದೇಶಗಳಲ್ಲಾದುದರ ನಾಲ್ಕರಷ್ಟು, ಎಂಟರಷ್ಟು ಜನರಿದ್ದ ಭಾರತದ ಹೋರಾಟ ಸ್ವಾತಂತ್ರ್ಯದ ಮಹಾಸಮರ ಅಲ್ಲವೆ?
ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗೋಣ. ಈ ಘಟನಾವಳಿ ನಡೆದದ್ದು 1857ರಲ್ಲಿ. ಒಂದೇ ವರ್ಷ ಹಿಂದೆ (1856) ಯೂರೋಪಿನಲ್ಲಿ ಒಂದು ದೊಡ್ಡ ಯುದ್ಧವಾಗಿತ್ತು. ‘ಕ್ರಿಮಿಯನ್ ವಾರ್’ ಎಂದು ಅದನ್ನು ಕರೆಯುತ್ತಾರೆ. ಇಟಲಿ, ಟರ್ಕಿ ಮೊದಲಾದವೆಲ್ಲ ಸೇರಿಕೊಂಡು ರಷ್ಯದಲ್ಲಿದ್ದ ಕ್ರಿಮಿಯಾ ಎಂಬ ದೇಶವನ್ನು ಒಳಗೆ ಹಾಕಿಕೊಳ್ಳುವುದಕ್ಕಾಗಿ ನಡೆಸಿದ ಯುದ್ಧ ಅದು. ಆ ಯುದ್ಧ ಎಷ್ಟು ಭವ್ಯವಾದದ್ದೆಂದು ಅದರ ಬಗ್ಗೆ ಕವನಗಳನ್ನೇ ಬರೆದಿದ್ದಾರೆ. Home they brought the warrior dead ಕವನ ಆ ಯುದ್ಧದಲ್ಲಿ ಮಡಿದ ಸೈನಿಕರನ್ನು ಕುರಿತದ್ದು. ಹೀಗೆ ಇಂಗ್ಲಿಷರು ಅಷ್ಟೊಂದು ಕೀರ್ತಿಸುವ ಆ ‘ಕ್ರಿಮಿಯನ್ ವಾರ್’ ಬಗ್ಗೆ ರಷ್ಯದ ವಿದೇಶಾಂಗ ಮಂತ್ರಿಯೊಬ್ಬ ಬರೆಯುತ್ತಾನೆ – ‘ಬ್ರಿಟಿಷರು ಗೌರವದಿಂದ ಹಾಡಿ ಹೊಗಳುವ ಆ ಯುದ್ಧದಲ್ಲಿ ತೊಡಗಿದ್ದವರ ಎಂಟರಷ್ಟು ಅಧಿಕ ಮಂದಿ 1857ರಲ್ಲಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದರು’ – ಎಂದು.
ಮುಂದುವರೆಯುವುದು...
(ಈ ಲೇಖನವು 'ಉತ್ಥಾನ' ಮಾಸಪತ್ರಿಕೆಯ ಜುಲೈ ೨೦೦೭ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಡಿಜಿಟೈಜೇಷನ್ (ಟಂಕನ) ಮಾಡಿಸಿದ್ದ ಶ್ರೀ ವಿಘ್ನೇಶ್ವರ ಭಟ್ಟರಿಗೂ ಕರಡುಪ್ರತಿ ತಿದ್ದಿದ್ದ ಶ್ರೀ ಕಶ್ಯಪ್ ನಾಯ್ಕ್ ಅವರಿಗೂ ಧನ್ಯವಾದಗಳು.)