“ಮೇಲೆ ನೋಡೆ ಕಣ್ಣ ತಣಿಪ ನೀಲಪಟದಿ ವಿವಿಧ ರೂಪಜಾಲಗಳನು ಬಣ್ಣಿಸಿರ್ಪ ಚಿತ್ರಚತುರನಾರ್?” ಎಂಬ ಪದ್ಯವನ್ನು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿ ಉರುಹೊಡೆದಾಗ ನನಗೆ ಪೂಜ್ಯ ಡಿ.ವಿ.ಜಿ. ಅವರ ಮತ್ತು ಅವರ ಸಾಹಿತ್ಯದ ಬಗೆಗೆ ಅಪಾರ ಆಕರ್ಷಣೆ, ಆಸಕ್ತಿ ಮತ್ತು ಗೌರವಗಳು ಆರಂಭವಾದವು. ನಾನು 1965ರಲ್ಲಿ ಕಾಲೇಜಿನ ವಿದ್ಯಾರ್ಥಿಯಾಗಿ ಬೆಂಗಳೂರು ಸೇರುತ್ತಿದ್ದ ಹಾಗೆಯೇ ಬೆಳಸಿಕೊಂಡ ಒಂದು ಅಭ್ಯಾಸವೆಂದರೆ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಕಾರ್ಯಕ್ರಮಗಳಲ್ಲಿ ತಪ್ಪದೆ ಹಾಜರಿರುವುದು. ಆಗಲೇ ನನಗೆ ಶ್ರೀ ಪದ್ಮನಾಭನ್ ಅವರ ಪರಿಚಯವಾದದ್ದು. ಸಂಸ್ಥೆಯಲ್ಲಿ ನಡೆಯುತ್ತಿದ್ದ ಭಾಷಣ, ಸಂವಾದ, ಸಂಗೀತ ಮೊದಲಾದ ಕಾರ್ಯಕ್ರಮಗಳ ಹೊತ್ತಿನಲ್ಲಿ ಪದ್ಮನಾಭನ್ ಅವರು ನೀಡುತ್ತಿದ್ದ ಪೂರ್ವಪೀಠಿಕೆ (introduction) ಅಥವಾ ವಂದನಾರ್ಪಣೆಯ ವೇಳೆಯಲ್ಲಿ ಆ ವಿಷಯವನ್ನು ಕುರಿತು ಅವರು ಮಾಡುತ್ತಿದ್ದ ಕ್ರೋಡೀಕರಣ (summing up) ಮತ್ತು ಪರಾಮರ್ಶನಗಳನ್ನು ಕೇಳುವುದೆಂದರೆ ನನಗೆ ರಸದೌತಣ. ಹೀಗೆ ಮುಖ್ಯಭಾಷಣದಷ್ಟೇ - ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು – ಸ್ವಾರಸ್ಯಕರವಾಗಿ ಉದ್ದಿಷ್ಟ ವಿಷಯವನ್ನು ನಿರೂಪಿಸುವ ಅದ್ಭುತವಾದ ವಿದ್ವತ್ತೆ ಹಾಗೂ ಕಲೆ ಪದ್ಮನಾಭನ್ ಅವರಿಗೆ ಕರಗತವಾಗಿತ್ತು.
ಅನಂತರದ ವರ್ಷಗಳಲ್ಲಿ ಡಾ|| ಎಚ್. ಕೆ. ರಂಗನಾಥ್ ಅವರು ಭಾರತೀಯ ವಿದ್ಯಾಭವನದ ಕೆಲವು ಕಾರ್ಯಕ್ರಮಗಳ ಆಯೋಜನೆ ಮಾಡುವಾಗ ಹೇಳುತ್ತಿದ್ದರು: “ನಾನು ಈ ಹೊತ್ತು ಭಾಷಣ ಕೇಳದೆ ಹೊರಟುಬಿಡೋಣ ಅಂತಿದ್ದೆ. ಆದರೆ ಟಿ.ಎನ್.ಪಿ. ಅವರು ವಂದನಾರ್ಪಣೆ ಮಾಡುವುದು ಇದ್ದದ್ದರಿಂದ ನಿಂತೆ. ಅವರೇ ಇನ್ನೊಂದು ಹತ್ತು ನಿಮಿಷ ವಂದನಾರ್ಪಣೆ ಮುಂದುವರಿಸಿದ್ದರೆ ಪ್ರೋಗ್ರಾಮಿಗೆ ಕಳೆ ಕಟ್ಟುತ್ತಿತ್ತು, ಕೇಳುಗರಿಗೆ ಉಪಯೋಗವಾಗುತ್ತಿತ್ತು.”
ಇಂಥ ವಿದ್ವಾಂಸರನ್ನು ಮಾತನಾಡಿಸಬೇಕೆಂಬ ಹಂಬಲ ಎಷ್ಟೇ ಅದಮ್ಯವಾಗಿದ್ದರೂ ಬರಿಯ ಕಾಲೇಜು ವಿದ್ಯಾರ್ಥಿಯಾದ ನಾನು - ಯಾವುದೇ ವಿಷಯದಲ್ಲಿ ಪರಿಣತಿ ಇರಲಿ, ಮಾಹಿತಿಯೇ ಇಲ್ಲದಿರುವಾಗ - ಇಂಥ ಸಾಹಸವನ್ನು ಮಾಡುವುದಾದರೂ ಹೇಗೆ? ಹೀಗಾಗಿ ಟಿ.ಎನ್.ಪಿ. ಅವರನ್ನು ಮಾತನಾಡಿಸುವ ಧೈರ್ಯವೇ ಆಗಲಿಲ್ಲ. ಆದರೆ ಅಂಥದ್ದೊಂದು ಸುಯೋಗಕ್ಕಾಗಿ ಎದುರುನೋಡುತ್ತಿದ್ದೆ.
1969ರಲ್ಲಿ ನಾನು ಏ.ಜಿ. ಆಫೀಸಿಗೆ ಸೇರಿದೆ. ಅಲ್ಲಿಯೇ ಪದ್ಮನಾಭನ್ ಅವರು ಉದ್ಯೋಗಿಯಾಗಿದ್ದರು. ಹೀಗಿದ್ದರೂ 1971ರವರೆಗೆ ಅವರನ್ನು ಮಾತನಾಡಿಸುವ ಅವಕಾಶ ದೊರೆಯಲಿಲ್ಲ. ಸಹೋದ್ಯೋಗಿಯೊಬ್ಬರ ಮೂಲಕ ಇದು ಸಾಧ್ಯವಾಯಿತು. ನಾನು ಮತ್ತು ಪದ್ಮನಾಭನ್ ಅವರು ಬೇರೆ ಬೇರೆ ವಿಭಾಗಗಳಲ್ಲಿ, ಬೇರೆ ಬೇರೆ ಕಟ್ಟಡಗಳಲ್ಲಿಯೇ ಕೆಲಸ ಮಾಡುತ್ತಿದ್ದ ಕಾರಣ ಅಕಸ್ಮಾತ್ ಭೇಟಿಯಾದರೂ ಕೇವಲ ಯೋಗಕ್ಷೇಮವಿಚಾರಣೆ ಆಗುತ್ತಿತ್ತೇ ಹೊರತು ಯಾವುದೇ ಬಗೆಯ ವಿಚಾರವಿನಿಮಯಕ್ಕೆ ಅವಕಾಶವಿರಲಿಲ್ಲ. ಡಿ.ವಿ.ಜಿ. ಅವರ ಪ್ರಧಾನ ಶಿಷ್ಯಮಂಡಲಿಯ ಐವರ ಪೈಕಿ – ಅಂದರೆ ಶ್ರೀ ಎಸ್. ಆರ್. ರಾಮಸ್ವಾಮಿ ಅವರನ್ನು ಬಿಟ್ಟು – ನಾಲ್ವರು ಮಹನೀಯರು ಏ.ಜಿ. ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರುಗಳೆಂದರೆ ಶ್ರೀ ಬಿ. ಎಸ್. ಸುಬ್ಬರಾಯರು, ಶ್ರೀ ಡಿ. ಆರ್. ವೆಂಕಟರಮಣನ್, ಶ್ರೀ ಟಿ. ಎನ್. ಪದ್ಮನಾಭನ್ ಮತ್ತು ಶ್ರೀ ರಾಮಚೈತನ್ಯ. ಇವರೆಲ್ಲರ ಬಗೆಗೆ ಆಫೀಸಿನಲ್ಲಿ ಪ್ರತಿಯೊಬ್ಬರಿಗೂ ಆದರಾಭಿಮಾನಗಳಿದ್ದವು. ಅಕೌಂಟೆಂಟ್ ಜನರಲ್ ಸಾಹೇಬರೂ ಸೇರಿದಂತೆ ಎಲ್ಲರಿಗೂ ಇವರನ್ನು ಕುರಿತು ಮೆಚ್ಚುಗೆ. ಇವರು ಎಷ್ಟೋ ಬಾರಿ ವಿಷಯಗಳನ್ನು ಚರ್ಚಿಸಲು, ಸಲಹೆಗಳನ್ನು ಪಡೆದುಕೊಳ್ಳಲು ಸುಬ್ಬರಾಯರನ್ನು ತಮ್ಮ ಕೊಠಡಿಗೆ ಕರೆಸಿಕೊಂಡದ್ದನ್ನು ನಾನೇ ಸ್ವತಃ ಕಂಡಿದ್ದೇನೆ. ಎಷ್ಟೋ ಬಾರಿ ಈ ನಾಲ್ವರ ಪೈಕಿ ಇಬ್ಬರೋ ಮೂವರೋ ಸೇರಿ ಸಂಗೀತ-ಸಾಹಿತ್ಯಗಳ, ಸಮಾಜ-ರಾಜಕೀಯ ಸಮಸ್ಯೆಗಳ ಚರ್ಚೆಗೆ ತೊಡಗಿದರೆ ಅದನ್ನು ಕೇಳುವುದೇ ಒಂದು ಬೋಧಪ್ರದವಾದ ವಿನೋದ.
ಈ ಗೋಷ್ಠಿಗೆ ಶ್ರೀ ಟಿ. ಬಿ. ನರಸಿಂಹಾಚಾರ್ – ಇವರು ಸಾರಗ್ರಾಹಿ ಎಂಬ ಹೆಸರಿನಿಂದ ಸಂಗೀತವಿಮರ್ಶೆ ಬರೆಯುತ್ತಿದ್ದರು - ಮತ್ತು ಶ್ರೀ ರಂಗಯ್ಯಂಗಾರ್ಯರು ಕೂಡ ಸೇರಿಕೊಳ್ಳುತ್ತಿದ್ದರು. ಸಂಸ್ಕೃತಕಾವ್ಯಗಳನ್ನು ಕುರಿತೋ ತ್ಯಾಗರಾಜ-ಕ್ಷೇತ್ರಜ್ಞರ ಕೃತಿಗಳನ್ನು ಕುರಿತೋ Disintegration of USSR and its Impact on India ಮುಂತಾದ ಸಮಕಾಲೀನ ಸಂಗತಿಗಳನ್ನು ಕುರಿತೋ ಚರ್ಚೆಗಳು ಹಬ್ಬುತ್ತಿದ್ದವು. ಇದೇ ರೀತಿ ಟಿ.ಎನ್.ಪಿ. ಅವರಿಗೆ ಪರಿಚಿತರಾಗಿ ನಮ್ಮ ಆಫೀಸಿನಲ್ಲಿದ್ದ ಮತ್ತೊಬ್ಬ ಮಹನೀಯರೆಂದರೆ ಶ್ರೀ ಎಂ. ಶ್ರೀನಿವಾಸರಾಯರು. ಇವರು ನಮ್ಮ ದೇಶದ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಇವರು 1975-76 ರಲ್ಲಿ Institute of Cost Accounts of India ಸಂಸ್ಥೆಯ ಅಧ್ಯಕ್ಷರಾಗಿ, U. B. Group of Companies ಸಂಸ್ಥೆಯ ಅತ್ಯುನ್ನತ ಅಧಿಕಾರಿಯಾಗಿ ಭಾರತ ಸರ್ಕಾರದಿಂದ ಸಮ್ಮಾನಿತರಾಗಿದ್ದರು. Sachar Committee on Company Law, Chokshi Committee on Taxation ಮುಂತಾದ ಸಮಿತಿಗಳ ಸದಸ್ಯರಾಗಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದರು. ಇವರು ಸಂಗೀತ-ಸಾಹಿತ್ಯಗಳ ರಸಜ್ಞರು. ಟಿ.ಎನ್.ಪಿ. ಅವರಿಗೆ ಸಂಗೀತವಿದ್ವಾಂಸ ಎಂ. ಡಿ. ರಾಮನಾಥನ್ ಅವರ ಪರಿಚಯ ಮಾಡಿಸಿದವರು ಇವರೇ. ಶ್ರೀಮತಿ ಎಂ. ಎಸ್. ಸುಬ್ಬಲಕ್ಷ್ಮಿ ಅವರಾಗಲಿ, ರಾಮನಾಥನ್ ಅವರಾಗಲಿ ಬೆಂಗಳೂರಿಗೆ ಬಂದಾಗ ಶ್ರೀನಿವಾಸರಾಯರ ಭವ್ಯ ಬಂಗಲೆಯ ಅತಿಥಿಗಳಾಗಿ ತಂಗುತ್ತಿದ್ದರೆಂದು ಅಂದಿನ ವದಂತಿ. ರಾಯರು ಸುಬ್ಬಲಕ್ಷ್ಮಿ ಅವರ ಕಛೇರಿ ಎಲ್ಲಿ ನಡೆದರೂ ಮೊದಲ ಸಾಲಿನ ವಿ.ಐ.ಪಿ.ಗಳ ಜೊತೆ ಕುಳಿತು ಅವರ ಸಂಗೀತವನ್ನು ಆಸ್ವಾದಿಸುತ್ತಿದ್ದರು. ವಿರಾಮ ದೊರೆತಾಗೆಲ್ಲ ತಮ್ಮ ಕಾರನ್ನು ಕಳುಹಿಸಿ ಟಿ.ಎನ್.ಪಿ. ಅವರನ್ನೂ ಇವರ ಹಾಗೆಯೇ ಆತ್ಮೀಯ ಮಿತ್ರರಾದ ಶ್ರೀ ಯು. ಸೀನಣ್ಣನವರನ್ನೂ ತಮ್ಮ ಮನೆಗೆ ಕರೆಸಿಕೊಂಡು ಸಂಗೀತ-ಸಾಹಿತ್ಯಗಳ ಬಗೆಗೆ ವಿಚಾರವಿನಿಮಯ ಮಾಡುತ್ತಿದ್ದರು. ಇಂಥ ಗೋಷ್ಠಿಗಳಲ್ಲಿ ಸಂಸ್ಕೃತಸಾಹಿತ್ಯದ – ವಿಶೇಷತಃ ಮಹಾಕವಿ ಕಾಳಿದಾಸನ – ಕೃತಿಗಳನ್ನು ಕುರಿತು ಟಿ.ಎನ್.ಪಿ. ಅವರ ವ್ಯಾಖ್ಯಾನ ಕೇಳುವುದೆಂದರೆ ರಾಯರಿಗೆ ಎಣೆಯಿಲ್ಲದ ಉತ್ಸಾಹ, ಸಂತಸ. ಇವರೂ ಸೀನಣ್ಣನವರೂ ಸೇರಿ ಟಿ.ಎನ್.ಪಿ. ಅವರಿಗೆ “ಕಾಳಿದಾಸರು” ಎಂಬ ಬಿರುದನ್ನು ಕೊಟ್ಟು ಅನಂತರ ಕಾಲಕ್ರಮದಲ್ಲಿ ಅದನ್ನು ಮೊಟಕುಮಾಡಿ “ದಾಸರು” ಎಂದೇ ಆತ್ಮೀಯತೆಯಿಂದ ಸಂಬೋಧಿಸುತ್ತಿದ್ದರು.
ನನ್ನ ಸುಕೃತದ ಕಾರಣ ಶ್ರೀನಿವಾಸರಾಯರ ನಿಕಟ ಸಂಪರ್ಕ ನನಗಿತ್ತು. ಅವರು ICWAI ಸಂಸ್ಥೆಯ ಅಖಿಲಭಾರತ ಅಧ್ಯಕ್ಷರಾಗಿದ್ದರು. ನಾನು ಅದೇ ಸಂಸ್ಥೆಯ ಬೆಂಗಳೂರು ಶಾಖೆಯ ಕಾರ್ಯದರ್ಶಿಯಾಗಿದ್ದೆ. ಒಮ್ಮೆ ಅವರು ಸಾಂದರ್ಭಿಕವಾಗಿ ಹೇಳಿದರು: “ನಾನು ಮೊದಲು ಎಂ.ಡಿ.ಆರ್. ಕಛೇರಿ ಕೇಳಿದ್ದು ಶಂಕರಯ್ಯ ಹಾಲ್ ನಲ್ಲಿ. ಅಂದು ಟಿ.ಎನ್.ಪಿ. ಮತ್ತು ಸೀನಣ್ಣ ನನ್ನ ಜೊತೆ ಇರಲಿಲ್ಲ. ಆ ಹೊತ್ತು ಎಂ.ಡಿ.ಆರ್. ಹಂಸಧ್ವನಿ ರಾಗವನ್ನು ಸೊಗಸಾಗಿ ಹಾಡಿ ವಾಸುದೇವಾಚಾರ್ಯರ ಕೃತಿಯನ್ನು ಆರಂಭಿಸಿದರು. ಬಳಿಕ ಕಲ್ಪನಾಸ್ವರಪ್ರಸ್ತಾರ ಮುಗಿಸಿ ಉತ್ತರಾರ್ಧದಲ್ಲಿ ದೀಕ್ಷಿತರ ಕೃತಿಯೊಡನೆ ಮುಕ್ತಾಯ ಮಾಡಿದರು. ಆ ಹಂಸಧ್ವನಿ ರಾಗವಿನ್ಯಾಸ ಎಷ್ಟು ಅದ್ಭುತವಾಗಿತ್ತೆಂದರೆ - Though everyone there was aware of the blunder, nobody interfered, since both the musician and the audience were so deeply engrossed in Hamsadhvani. ಇಂಥ ಸಂಗೀತನಿಧಿಯಾದ ಎಂ.ಡಿ.ಆರ್. ಅವರ ಪ್ರತಿಭೆಗೆ ಮನಸೋತ ಟಿ.ಎನ್.ಪಿ. ಅವರು ತಮ್ಮ ಗುರುಗಳಾದ ಪೂಜ್ಯ ಡಿ.ವಿ.ಜಿ. ಅವರನ್ನೂ ಒತ್ತಾಯಿಸಿ ಗೋಖಲೆ ಸಂಸ್ಥೆಯಲ್ಲಿ ಕಛೇರಿಯನ್ನು ಏರ್ಪಡಿಸಿದರಂತೆ. ಅದನ್ನು ಕೇಳಿದ ಡಿ.ವಿ.ಜಿ. ಬಹಳ ಆನಂದಿಸಿದರಂತೆ.
ಇಂಥ ಸಂಗೀತ-ಸಾಹಿತ್ಯರಸಿಕ ಟಿ.ಎನ್.ಪಿ. ಅವರ ಜೊತೆಯಲ್ಲಿ ಅನೇಕ ಕಾರ್ಯಕ್ರಮಗಳಿಗೆ ಹೋಗುವ, ಅವರ ಭಾಷಣ-ವ್ಯಾಖ್ಯಾನಗಳನ್ನು ಕೇಳುವ ಸುಯೋಗ ನನ್ನದಾಯಿತು. ಒಂದು ವರ್ಷಕ್ಕೂ ಹೆಚ್ಚಿನ ಅವಧಿ ಈ ಸೌಭಾಗ್ಯ ನನಗೆ ದಕ್ಕಿತು. ನಾನು ನನ್ನ ಕಾರಿನಲ್ಲಿ ಸರ್ವಶ್ರೀಗಳಾದ ಟಿ.ಎನ್.ಪಿ., ಎಸ್. ಕೃಷ್ಣಮೂರ್ತಿ ಮತ್ತು ಎಚ್. ಕೆ. ರಂಗನಾಥ್ ಅವರೊಡನೆ ವಿದ್ಯಾಭವನದಿಂದ ಮರಳುವ ಸಮಯದಲ್ಲಿ ಇವರಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು. 1974ರಲ್ಲಿ “ನಾಸ್ಟಾಲ್ಜಿಯಾ” ಎಂಬ ಹೆಸರಿನಲ್ಲಿ ಹಳೆಯ ಸಿನೆಮಾಗಳ ಚಲನಚಿತ್ರೋತ್ಸವ ಏರ್ಪಟ್ಟಿತ್ತು. ಅನೇಕ ಭಾಷೆಗಳ ಹಳೆಯ ಸಿನೆಮಾಗಳ ಪ್ರದರ್ಶನ ಬೇರೆ ಬೇರೆ ಚಿತ್ರಮಂದಿರಗಳಲ್ಲಿ ವ್ಯವಸ್ಥೆಯಾಗಿತ್ತು. ಆಗ ನನ್ನ ಗೆಳೆಯರೊಬ್ಬರ ನೆರವಿನಿಂದ ಒಂದು ಎಕ್ಸ್ಟ್ರಾ ಪಾಸ್ ಪಡೆದುಕೊಂಡು ನಾನು ಟಿ.ಎನ್.ಪಿ. ಅವರನ್ನು ಖ್ಯಾತ ಚಲನಚಿತ್ರ ನಟ ಚಿತ್ತೂರು ವಿ. ನಾಗಯ್ಯನವರ ಮೂರು ತೆಲುಗು ಚಿತ್ರಗಳಿಗೆ ಕರೆದುಕೊಂಡು ಹೋದೆ. ಆ ಚಿತ್ರಗಳು “ತ್ಯಾಗಯ್ಯ”, “ಭಕ್ತ ಪೋತನ” ಹಾಗೂ “ಭಕ್ತ ರಾಮದಾಸು”. ಟಿ.ಎನ್.ಪಿ. ಅವರ ಆನಂದ ಹೇಳತೀರದು. ನಿರ್ಮಲಹೃದಯದಿಂದ ಆನಂದಿಸಿದರು. ಸಿನೆಮಾಗಳನ್ನು ನೋಡಿ ಮನೆಗೆ ಮರಳುವಾಗ ಅಲ್ಲಿ ಬಳಕೆಯಾಗಿದ್ದ ಅನೇಕ ಕೃತಿಗಳ ಅಂತರರ್ಥ, ವೈಶಿಷ್ಟ್ಯ, ಅಲ್ಲಿಯ ಹಾಡುಗಳ ರಾಗ-ಭಾವಗಳಿಗಿದ್ದ ಸಾಮರಸ್ಯ ಇತ್ಯಾದಿಗಳ ವಿಶ್ಲೇಷಣೆ ಅವರಿಂದ ನನಗೆ ದೊರಕಿದ ಬೋನಸ್.
ಹೀಗೆ ಬೆಳೆದುಬಂದ ಬಾಂಧವ್ಯದ ಸಲುಗೆಯಿಂದ ನಾನು ಟಿ.ಎನ್.ಪಿ. ಅವರನ್ನೊಮ್ಮೆ ವಿನಂತಿಸಿದೆ: “ಸಾರ್, ಡಿ.ವಿ.ಜಿ. ಅವರ ಆಶೀರ್ವಾದವನ್ನು ನನಗೆ ಕೊಡಿಸುತ್ತೀರಾ?” ಎಂದು. ತತ್ಕ್ಷಣ ಅವರು “ಅದಕ್ಕೇನು ಸಾರ್, ಮುಂದಿನ ವಾರ ಕ್ರಿಸ್ಮಸ್ ರಜೆಯ ದಿನ; ಅಂದೇ ಹೋಗೋಣ ಬನ್ನಿ. ನಮ್ಮ ಸಂಸ್ಕೃತಿಯಲ್ಲಿ ಆಸಕ್ತರಾದ ಯುವಕರೆಂದರೆ ಯಜಮಾನರು ತುಂಬಾ ಸಂತೋಷದಿಂದ ಹರಸುತ್ತಾರೆ” ಎಂದರು. ಅಂತೆಯೇ ದಿನಾಂಕ 25.12.1974ರಂದು ಪ್ರಾತಃಸ್ಮರಣೀಯರೂ ಸಂಧ್ಯಾವಂದನೀಯರೂ ಆದ ಪೂಜ್ಯ ಡಿ.ವಿ.ಜಿ. ಅವರ ಹಸ್ತಾಕ್ಷರ-ಆಶೀರ್ವಾದಗಳೊಡನೆ ಅವರ ಕೈಯಿಂದಲೇ ಅವರ ಮೇರುಕೃತಿ “ಜೀವನಧರ್ಮಯೋಗ”ವನ್ನು ಟಿ.ಎನ್.ಪಿ. ನನಗೆ ಕೊಡಿಸಿದರು. ಧರ್ಮಕರ್ಮಸಂಯೋಗದಿಂದ ಅಂದೇ ಆನಂದಸಂವತ್ಸರದ ಮಾರ್ಗಶೀರ್ಷ ಶುದ್ಧ ಏಕಾದಶಿ – ಶ್ರೀಗೀತಾಜಯಂತಿ! ನನ್ನ ಜೀವನದ ಧನ್ಯತಮವಾದ ಘಳಿಗೆ ಅದು. ಇದಾದ ಕೆಲವು ತಿಂಗಳುಗಳಿಗೆ, 1975ರಲ್ಲಿ ಟಿ.ಎನ್.ಪಿ. ಅವರಿಗೆ ಹೃದಯಾಘಾತವಾಯಿತು. ಆಗ ವಿಶ್ರಾಂತಿಯಲ್ಲಿದ್ದ ಅವರನ್ನು ಅವರ ಮನೆಯಲ್ಲಿ ಮೊದಲ ಬಾರಿ ಭೇಟಿಯಾದೆ.
ಅನಂತರ ಟಿ.ಎನ್.ಪಿ. ಅವರು ರಜೆಯಿಂದ ಹಿಂದಿರುಗಿ ಬಂದಾಗ ನಾವಿಬ್ಬರೂ ಒಂದೇ ವಿಭಾಗದಲ್ಲಿ ಸಹೋದ್ಯೋಗಿಗಳಾಗುವಂಥ ಸುಯೋಗ ನನಗೆ ಲಭಿಸಿತು. ಕಾರಣಾಂತರಗಳಿಂದ ಬಾಕಿ ಬಿದ್ದಿದ್ದ ಕೆಲಸ ಒಂದನ್ನು ಮುಂದಿನ ಎರಡು ತಿಂಗಳಿನ ಅವಧಿಯೊಳಗೆ ಮಾಡಿ ಮುಗಿಸಲೇಬೇಕಾಗಿದ್ದ ಪರಿಸ್ಥಿತಿ ಎದುರಾಗಿತ್ತು. ಇದು ಹೇಗೆ ಸಾಧ್ಯವೆಂದು ಎಲ್ಲರೂ ಯೋಚಿಸುತ್ತಿದ್ದರು. ಈ ಬಿಕ್ಕಟ್ಟನ್ನು ನಿಭಾಯಿಸಲು ಪದ್ಮನಾಭನ್ ಅವರು ಬಂದಿದ್ದರು. ನಮ್ಮ ಹಿರಿಯ ಅಧಿಕಾರಿಗಳ ಎಣಿಕೆಯಂತೆ ಟಿ.ಎನ್.ಪಿ. ಆ ಕೆಲಸವನ್ನು ಅತ್ಯಂತ ನಿಷ್ಠೆಯಿಂದ, ಬಾಧ್ಯತೆಯಿಂದ ನಿಗದಿತ ಅವಧಿಯೊಳಗೇ ಮುಗಿಸಿಬಿಟ್ಟರು. ಆಫೀಸಿನಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದರ ಬಗೆಗೆ ಅವರ ನಿಲವು ಸುಸ್ಪಷ್ಟ. ಕೆಲಸದ ವೇಳೆ ಕಾಲಹರಣ ಸಲ್ಲದು; ಅಲ್ಲಿ ಇಲ್ಲಿ ಓಡಾಡತಕ್ಕದ್ದಲ್ಲ; ಆಫೀಸಿನ ಕೆಲಸಗಳನ್ನು ಆಫೀಸಿನ ವೇಳೆಯೊಳಗೇ ಮಾಡಿ ಮುಗಿಸತಕ್ಕದ್ದು. ಇದು ಸಮರ್ಪಕವಾಗಿ, ನಿಗದಿತವಾಗಿ ಸಾಗಬೇಕು. ಕೆಲಸದ ಒತ್ತಡವಿದ್ದರೆ ಸಂಜೆ ಹೆಚ್ಚು ಹೊತ್ತು ಕುಳಿತು ಅಥವಾ ರಜೆಯ ದಿನಗಳಲ್ಲಿಯೂ ಬಂದು ಡ್ಯೂ ಡೇಟ್ ಒಳಗಾಗಿ ಮಾಡಿ ಮುಗಿಸತಕ್ಕದ್ದು. ಮೇಲಧಿಕಾರಿಗಳನ್ನು ಮೆಚ್ಚಿಸಲು ಸುಮ್ಮನೆ ಹೆಚ್ಚು ಹೊತ್ತು ಕುಳಿತಿರತಕ್ಕದ್ದಲ್ಲ; ಮೊದಲೇ ತಿಳಿಸಿ ಮಂಜೂರಾತಿ ಪಡೆಯದೆ ರಜೆಯ ಮೇಲೆ ಹೋಗತಕ್ಕದ್ದಲ್ಲ. ನಿಯಮಿತ ಸಮಯದಲ್ಲಿ ಕೆಲಸ ಮುಗಿಸಲು ಏನಾದರೂ ಅಡೆತಡೆಗಳಿದ್ದರೆ ಅಥವಾ ಯಾವುದೇ ರೀತಿಯ ನೆರವು ಬೇಕಿದ್ದರೆ ಅದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿ ಕೆಲಸ ಮುಗಿಸತಕ್ಕದ್ದು – ಇತ್ಯಾದಿ. ಎಲ್ಲದರಲ್ಲೂ ಒಪ್ಪ, ಶಿಸ್ತು. Files of TNP are always perfect ಎಂಬ ಖ್ಯಾತಿ ಅವರದು.
ಇಂಥ ಮಹನೀಯರ ಅನುದಿನದ ಸಾಹಚರ್ಯ ಅವರ ಸಹೋದ್ಯೋಗಿಯಾದ ನನಗೆ ಮೂರು ವರ್ಷ ಲಭಿಸಿತ್ತು. ಈ ಸಹವಾಸದ ಲಾಭವನ್ನು ನಾನು ತಕ್ಕಮಟ್ಟಿಗೆ ಪಡೆದೆ. ಆ ದಿನಗಳಲ್ಲಿ ಲಂಚ್ ಬ್ರೇಕ್ ಹೊತ್ತಿನಲ್ಲಿಯೋ ಅಥವಾ ಬೇರೊಂದು ವೇಳೆಯಲ್ಲಿಯೋ ಇವರಿಂದ ಶಿಕ್ಷಣ ಪಡೆಯದ ದಿನವೇ ಇಲ್ಲ ಎನ್ನಬಹುದು. ಸಂಸ್ಕೃತ, ಸಂಗೀತ, ಕನ್ನಡಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ರಾಜಕೀಯ, ವೇದಾಂತ, ಅರ್ಥವ್ಯವಸ್ಥೆ, ಆಫೀಸಿನ ನಿಯಮಾವಳಿಗಳು – ವಿಷಯ ಯಾವುದಾದರೂ ಸರಿ, ಅವರೊಡನೆ ಚರ್ಚೆ ನಡೆಯುತ್ತಿತ್ತು; ಒಳ್ಳೆಯ ವಿಚಾರ ಸಿಗುತ್ತಿತ್ತು. ಆಗ ನನಗೆ ಅವರ ಅಧ್ಯಯನ ಎಷ್ಟು ಗಹನ, ಎಷ್ಟು ಬಹುಮುಖ ಎಂದು ಅನುಭವಕ್ಕೆ ಬಂದಿತು. ಅವರ ವೈದುಷ್ಯ ನಿಷ್ಕೃಷ್ಟವಾಗಿತ್ತು. ಹೀಗೆಯೇ ನನಗೆ ಡಿ.ವಿ.ಜಿ. ಅವರ ಜ್ಞಾನಪಾರಮ್ಯದ ದರ್ಶನವಾಯಿತು. ಇದನ್ನು ನಾನು ಯಾವಾಗಲೂ ಹೇಳುತ್ತ ಬಂದಿದ್ದೇನೆ: “Sri T. N. Padmanabhan is the window through which I had the vision of the Himalayan personality of Dr. DVG.” ಇದು ಅಕ್ಷರಶಃ ಸತ್ಯ.
ವಿದ್ವದ್ವಲಯದಲ್ಲಿಯೂ ವಿರಳವಾಗಿ ಚರ್ಚೆಗೆ ಬರುವ “ನೀಲಕಂಠವಿಜಯಚಂಪೂ”, “ಕಲಿವಿಡಂಬನ”, “ಸೀತಾರಾವಣಸಂವಾದಝರಿ” ಮುಂತಾದ ಕೃತಿಗಳಿಂದ ಟಿ.ಎನ್.ಪಿ. ಅವರು ಸಂದರ್ಭೋಚಿತವಾದ ಶ್ಲೋಕಗಳನ್ನು ನಿರರ್ಗಳವಾಗಿ ಉದ್ಧರಿಸಿ ವ್ಯಾಖ್ಯಾನಿಸುತ್ತಿದ್ದರು. ಪ್ರಖ್ಯಾತರಾದ ಭಾಸ, ಕಾಳಿದಾಸ, ಭವಭೂತಿಗಳ ಕಾವ್ಯಗಳು ಮತ್ತವುಗಳ ರಸಮಯ ಸನ್ನಿವೇಶಗಳು, ಅಲ್ಲಿಯ ಸಂದರ್ಭಗಳ ಕ್ಲಿಷ್ಟ ಸಮಸ್ಯೆಗಳು ಹಾಗೂ ಅವು ನಮ್ಮ ಜೀವನಕ್ಕೆ ಅನ್ವಯವಾಗಬಲ್ಲ ಔಚಿತ್ಯ – ಇವನ್ನೆಲ್ಲ ಅವರ ಬಾಯಿಂದಲೇ ನಾವು ಕೇಳಬೇಕು. ಅವರಲ್ಲಿ ಈ ವರಕವಿಗಳೆಲ್ಲ ನೆಲಸಿದ್ದರು. ಅದರಲ್ಲಿಯೂ ಕಾಳಿದಾಸನೆಂದರೆ ಅವರಿಗೆ ಪಂಚಪ್ರಾಣ. ಡಿ.ವಿ.ಜಿ. ಅವರಲ್ಲಿಯೇ ಕಾಳಿದಾಸನನ್ನು ಓದಿಕೊಂಡಿದ್ದ ಈ ವಿದ್ವದ್ರಸಿಕರ ಬಳಿ ಶಾಕುಂತಲದ ಪಾಠಕ್ಕೆಂದು ಪ್ರಾರ್ಥಿಸಿದ್ದೆ. ಒಂದು ತಿಂಗಳು ಆ ಸೊಗಸಾದ ಅನುಭವ ಪಡೆದೆ. ಆದರೆ ಅನಿವಾರ್ಯ ಕಾರಣಗಳಿಂದ ನಾನು ಬೆಂಗಳೂರು ಬಿಡಬೇಕಾಯಿತು; ಈ ಸುಯೋಗ ತಪ್ಪಿತು. ಆದರೆ ಕಾವ್ಯವೊಂದನ್ನು ಹೇಗೆ ವ್ಯಾಸಂಗ ಮಾಡಬೇಕು ಎಂಬುದರ ತಿಳಿವಳಿಕೆ ನನಗೆ ಈ ಒಂದು ತಿಂಗಳಲ್ಲಿ ದಕ್ಕಿತು. ಇದು ನನಗೆ ಅವರಿಂದಾದ ಒಂದು ಮಹೋಪಕಾರ.
ಭವಭೂತಿಯ “ಉತ್ತರರಾಮಚರಿತ” ಟಿ.ಎನ್.ಪಿ. ಅವರಿಗೆ ಅತ್ಯಂತ ಪ್ರಿಯವಾದದ್ದು. ಅದನ್ನು ಕುರಿತು ಮಾತನಾಡಲು ತೊಡಗಿದರೆ ತಮ್ಮನ್ನೇ ತಾವು ಮರೆತುಬಿಡುತ್ತಿದ್ದರು. “ರೇ ಹಸ್ತ ದಕ್ಷಿಣ” ಎಂಬ ಶ್ಲೋಕವನ್ನು ಹೇಳುವಾಗ ಅವರ ಕೊರಳು ಗದ್ಗದಿತವಾಗಿ ಕಣ್ಣಾಲಿ ತುಂಬಿಬಂದದ್ದನ್ನು ನಾನು ಕಂಡಿದ್ದೇನೆ. ಇದಲ್ಲವೇ “ತನ್ಮಯೀಭವನಯೋಗ್ಯತೆ”! ಇಂಥ ಪ್ರಸಂಗಗಳು ಎಷ್ಟೋ. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯರಾಶಿಯಲ್ಲಿ ಅಡಗಿದ್ದ ರಸಮಯ ಸನ್ನಿವೇಶಗಳು ಎಲ್ಲಿದ್ದರೂ ಟಿ.ಎನ್.ಪಿ. ಅವರ ಸೂಕ್ಷ್ಮ ದೃಷ್ಟಿಗೆ ಸಿಕ್ಕದಿರಲು ಸಾಧ್ಯವೇ ಇಲ್ಲ.
ಇಷ್ಟೆಲ್ಲ ಬಗೆಯಿಂದ ಅವರ ಒಡನಾಟ ನನಗಿದ್ದರೂ ಅವರು ಕವಿಗಳೆಂಬ ವಿಷಯ ಬಹಳ ವರ್ಷ ತಿಳಿದಿರಲಿಲ್ಲ. 1987ರಲ್ಲಿ ಕನ್ನಡ ಲೇಖಕರ ಒಕ್ಕೂಟದ ಆಶ್ರಯದಲ್ಲಿ ಕನ್ನಡ ಅಷ್ಟಾವಧಾನ ಏರ್ಪಾಡಾಯಿತು. ಪ್ರಸಿದ್ಧವಾದ ಯವನಿಕಾ ರಂಗಮಂದಿರದಲ್ಲಿ ಅದರ ವ್ಯವಸ್ಥೆಯಾಗಿತ್ತು. ಅವಧಾನದ ಆಯೋಜನೆ, ನಿರ್ವಹಣೆಗಳು ನನ್ನ ಪಾಲಿಗೆ ಬಂದಿದ್ದವು. ಈ ಬಾಧ್ಯತೆಯನ್ನು ಸಾಗಿಸಲು ನನಗೆ ನೆರವಿತ್ತ ಇಬ್ಬರು ಹಿರಿಯರು ಕೀರ್ತಿಶೇಷ ಲಂಕಾ ಕೃಷ್ಣಮೂರ್ತಿಗಳು ಮತ್ತು ಕೀರ್ತಿಶೇಷ ಪದ್ಮನಾಭನ್ ಅವರು.
ಶ್ರೀ ಲಂಕಾ ಕೃಷ್ಣಮೂರ್ತಿಗಳು ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಪ್ರಕಾಂಡ ಪಂಡಿತರು. ಸ್ವತಂತ್ರಕಾವ್ಯಗಳನ್ನು ಬರೆದಿದ್ದರು; ಭಾಷಾಂತರಗಳನ್ನೂ ಮಾಡಿದ್ದರು. ಅವಧಾನಕಲೆಗೆ ಜೀವವೆರೆದ ಮಹಾನುಭಾವರಿವರು. ಹಲವರು ಅವಧಾನಿಗಳನ್ನು “ತಯಾರು ಮಾಡಿದ” ಗುರುಗಳು ಇವರು. ಶತಾವಧಾನಿ ಆರ್. ಗಣೇಶ್ ಅವರೂ ಸಹ ಇವರಲ್ಲಿ ತರಪೇತಿ ಪಡೆದವರೇ. ಲಂಕಾ ಕೃಷ್ಣಮೂರ್ತಿಗಳ ಸಹಾಯವಿಲ್ಲದೆ ಅವಧಾನ ಏರ್ಪಡಿಸುವುದು ಅಸಾಧ್ಯವಾಗಿತ್ತು. ಆಗಿದ್ದ ಅತ್ಯಂತ ಕಷ್ಟದ ಕೆಲಸವೆಂದರೆ ಪೃಚ್ಛಕರನ್ನು ಹುಡುಕುವುದು. ಹೀಗಾಗಿ ಪದ್ಮನಾಭನ್ ಅವರ ಬಳಿ ಅವರು ಒಂದು ವಿಭಾಗಕ್ಕೆ ಪೃಚ್ಛಕರಾಗಬೇಕೆಂದು ದುಂಬಾಲು ಬಿದ್ದೆ. ಆದರೆ ಅವರು ಒಪ್ಪಿಕೊಳ್ಳಲೇ ಇಲ್ಲ: “ನನ್ನ ಕೈಲಿ ಈಗ ಆಗುವುದಿಲ್ಲ. ಮುಂದೆ ನೋಡೋಣ. ಬೇರೆಯವರ ಬಳಿ ಪ್ರಯತ್ನಿಸಿ” ಎಂದು ಪಟ್ಟುಹಿಡಿದರು. ಅವರ ಮೂಲಕವೇ ವಿದ್ವಾನ್ ಎನ್. ರಂಗನಾಥಶರ್ಮರನ್ನು ಸಂಪರ್ಕಿಸಿದ್ದಾಯಿತು.
ಈ ಅವಧಾನವನ್ನು ನಡೆಸಿಕೊಟ್ಟವರು ಶ್ರೀ ಜೋಸ್ಯಂ ಸದಾನಂದಶಾಸ್ತ್ರಿಗಳು. 8.2.1987ರಂದು ನಡೆದ ಈ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು. ಜನಮನವನ್ನು ತುಂಬ ಆಕರ್ಷಿಸಿತು. ಒಳ್ಳೆಯ ಪತ್ರಿಕಾ ವರದಿಗಳೂ ಬಂದವು. ಕಲೆ, ಸಾಹಿತ್ಯಗಳಲ್ಲಿ ಆಸಕ್ತರಾದವರು ಅವಧಾನವನ್ನು ಕುರಿತು ಉತ್ಸುಕರಾದರು. ಇದಾದ ಎಂಟು-ಹತ್ತು ದಿನಗಳಿಗೆ ಭಾರತೀಯ ವಿದ್ಯಾಭವನದಲ್ಲಿ ವಿದ್ವಾನ್ ರಂಗನಾಥಶರ್ಮರ ಒಂದು ಉಪನ್ಯಾಸ ಏರ್ಪಟ್ಟಿತ್ತು. ಅಲ್ಲಿ ನಾನು ಮೊದಲ ಬಾರಿಗೆ ಶತಾವಧಾನಿ ಡಾ|| ಆರ್. ಗಣೇಶ್ ಅವರನ್ನು ಭೇಟಿಯಾದೆ. ಆಗ ಅವರ ಹೆಸರಿಗೆ ಈ ಸಾರ್ಥಕ ವಿಶೇಷಣಗಳು ಇನ್ನೂ ಸೇರ್ಪಡೆಯಾಗಿರಲಿಲ್ಲ. ಅಂದು ನಾವಿಬ್ಬರೂ ಒಂದು, ಒಂದೂವರೆ ಘಂಟೆಗಳ ಕಾಲ ವಿಚಾರವಿನಿಮಯ ಮಾಡಿಕೊಂಡೆವು. ಅಲ್ಲಿಂದ ಎರಡು-ಮೂರು ದಿನಗಳೊಳಗೆ ನಾನು ಪದ್ಮನಾಭನ್ನರ ಬಳಿ ಶ್ರೀ ಗಣೇಶ್ ಅವರನ್ನು ಕುರಿತು ಪ್ರಸ್ತಾವಿಸಿದೆ. ಆಗ ಅವರು “ಅವರನ್ನು ಭವನದಲ್ಲಿ ನೋಡಿದ್ದೇನೆ. ಆದರೆ ಇಂಥ ಪ್ರತಿಭಾಶಾಲಿ ಎಂದು ತಿಳಿದಿರಲಿಲ್ಲ. ಮುಂದಿನ ಕಾರ್ಯಕ್ರಮದಲ್ಲಿ ನಾನೇ ಪ್ರಸ್ತಾವಿಸುತ್ತೇನೆ” ಎಂದರು. ಇಂಥದ್ದು ಅವರ ಪ್ರತಿಭಾಪಕ್ಷಪಾತ.
ಯವನಿಕಾದಲ್ಲಿ ಅವಧಾನ ನಡೆದ ಕೆಲವು ದಿನಗಳ ಬಳಿಕ ರಸಿಕರ ಒತ್ತಾಯದ ಮೇರೆಗೆ ಸದಾನಂದಶಾಸ್ತ್ರಿಗಳ ಮತ್ತೊಂದು ಅವಧಾನ ಏರ್ಪಾಟಾಯಿತು – ಜಯನಗರದ ನಾಲ್ಕನೆಯ ಬ್ಲಾಕಿನ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ. ನಾನು ಪಟ್ಟುಹಿಡಿದು ಪದ್ಮನಾಭನ್ನರನ್ನು ನ್ಯಸ್ತಾಕ್ಷರೀವಿಭಾಗಕ್ಕೆ ಪೃಚ್ಛಕರಾಗಲು ಒಪ್ಪಿಸಿದೆ. ನನಗೆ ತಿಳಿದ ಮಟ್ಟಿಗೆ ಅಲ್ಲಿಯವರೆಗೂ ಗುಪ್ತಗಾಮಿನಿಯಾಗಿದ್ದ, ಕೇವಲ ಅತ್ಯಾಪ್ತ ವರ್ಗಕ್ಕೆ ಸೀಮಿತವಾಗಿದ್ದ ಅವರ ಪದ್ಯರಚನಾಸಾಮರ್ಥ್ಯದ ಪರಿಚಯ ಈ ಮೂಲಕ ಎಲ್ಲರಿಗೂ ಲಭ್ಯವಾಯಿತು. ಅವರು ಅಂದು ಮಾಡಿದ್ದು ಶಾರದಾಸ್ತುತಿಯ ಪದ್ಯ.
ಅನಂತರದ ದಿನಗಳಲ್ಲಿ ಬೆಂಗಳೂರಿನ ಬೇರೆ ಬೇರೆ ಬಡಾವಣೆಗಳಲ್ಲಿ, ಕೋಲಾರ, ಚಿಂತಾಮಣಿ, ಮಾಲೂರು ಮುಂತಾದ ಸುತ್ತಮುತ್ತಲ ಊರುಗಳಲ್ಲಿ, ಕರ್ನಾಟಕಡ ಬೇರೆ ಬೇರೆ ಪ್ರಾಂತಗಳಲ್ಲಿ ಹಂತಹಂತವಾಗಿ ಗಣೇಶ್ ಅವರ ಅವಧಾನಪ್ರತಿಭೆ ಪಸರಿಸಿತು. ಅವರಿಗೆ ಗುರುಸ್ಥಾನದಲ್ಲಿದ್ದ ಲಂಕಾ ಕೃಷ್ಣಮೂರ್ತಿ ಮತ್ತು ಪದ್ಮನಾಭನ್ ಅವರ ಪಾತ್ರ ಪೃಚ್ಛಕವರ್ಗದಲ್ಲಿ ಅವಿಭ್ಯಾಜ್ಯ ಅಂಗವಾಗಿತ್ತು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಟಿ.ಎನ್.ಪಿ. ಅವರ ಪದ್ಯಗಳ ಸವಿಯನ್ನು ಆಸ್ವಾದಿಸದ ಶ್ರೋತೃಗಳೇ ಇರಲಿಲ್ಲ. ಇವರು ಕೊಡುತ್ತಿದ್ದ ಒಂದೊಂದು “ಸಮಸ್ಯೆ” ಕೂಡ ವಿನೂತನವಾಗಿರುತ್ತಿತ್ತು; ಸ್ವಾರಸ್ಯಪೂರ್ಣವಾಗಿರುತ್ತಿತ್ತು. ಇದಲ್ಲದೆ ದತ್ತಪದಿ, ನ್ಯಸ್ತಾಕ್ಷರಿ ಮತ್ತು ಆಶುಕವಿತೆಗಳಲ್ಲಿ ಕೂಡ ಅವರ ಪ್ರತಿಭೆ ಹೊಮ್ಮುತ್ತಿತ್ತು. ತಮ್ಮ ಸುಪುತ್ರ ಶ್ರೀ ಶಶಿಧರನ ಮುಖಾಂತರ ಕಾವ್ಯವಾಚನವನ್ನು ಸೊಗಸಾಗಿ ಮಾಡಿಸುತ್ತಿದ್ದರು. ಶೃಂಗಗಿರಿಯ ಶಾರಧಾಪೀಠಾಧೀಶರಾದ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳಂಥ ವಿದ್ವನ್ಮಣಿಗಳೂ ಪದ್ಮನಾಭನ್ ಅವರ ಪದ್ಯಗಳಿಗೆ ಮೆಚ್ಚುಗೆ ಸೂಚಿಸಿದ್ದರು. ಇಂಥ ಮನ್ನಣೆ ಗಳಿಸಿದ್ದರೂ “ಸಾಹಿತ್ಯಕ್ಷೇತ್ರಕ್ಕೆ ನಾನು ಕೇವಲ ಆಗಂತುಕ” ಎಂದು ತುಂಬಿದ ಸಭೆಗಳಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಿದ್ದುದು ಇವರ ಸರಳತೆ ಮತ್ತು ನಿರಹಂತೆಗಳಿಗೆ ಹಿಡಿದ ಕೈಗನ್ನಡಿ.
ಪದ್ಮನಾಭನ್ ಅವರು ಸಾಹಿತ್ಯದಲ್ಲಿ ಯಾವ ಬಗೆಯ ತಿಳಿವನ್ನು ಹೊಂದಿದ್ದರೋ ಅದೇ ಬಗೆಯ ತಿಳಿವನ್ನು ಸಂಗೀತದಲ್ಲಿ ಕೂಡ ಹೊಂದಿದ್ದರು. ಅವರಿಗೆ ಸಂಗೀತಕಲೆ ಪಂಚಪ್ರಾಣವಾಗಿತ್ತು. ಅವರು ಹಾಡಿದ್ದನ್ನು ನಾನೆಂದೂ ಕೇಳಿಲ್ಲ. ಆದರೆ ಅವರ ಶ್ರುತಿ-ಲಯಜ್ಞಾನ, ರಾಗಪರಿಜ್ಞಾನ, ವಾಗ್ಗೇಯಕಾರರ ವಿವರಗಳ ತಿಳಿವಳಿಕೆ ಅಸಾಧಾರಣವಾಗಿತ್ತು. ವಿದ್ವಾನ್ ಎಂ. ಡಿ. ರಾಮನಾಥನ್ ಅವರೊಡನೆ ಟಿ.ಎನ್.ಪಿ. ಅವರಿಗಿದ್ದ ಬಳಕೆ ಈ ಮುನ್ನವೇ ಪ್ರಸ್ತಾವಗೊಂಡಿದೆ. ಇವರಲ್ಲದೆ ಮತ್ತೂ ಹಲವರು ಗಾಯಕ-ವಾದಕರು ಇವರಿಗೆ ನಿಕಟವರ್ತಿಗಳಾಗಿದ್ದರು. ಬೆಂಗಳೂರಿನ ಗಾಯನಸಮಾಜದ ಕಲಾವಿದರೆಲ್ಲ ಇವರಿಗೆ ಚಿರಪರಿಚಿತರು. ತಮ್ಮ ಮಕ್ಕಳಿಬ್ಬರಿಗೂ ಬಾಲ್ಯದಿಂದಲೇ ಸಂಗೀತಾಭ್ಯಾಸ ಮಾಡಿಸಿದ್ದರು. ಮಕ್ಕಳೂ ಸಹ ಚೆನ್ನಾಗಿ ಕಲಿತು ಒಳ್ಳೆಯ ಗಾಯಕರಾದರು. ಇವರ ಪುತ್ರ ಶ್ರೀ ಪಿ. ಶಶಿಧರ್ ಗಣೇಶ್ ಅವರ ಅನೇಕ ಅವಧಾನಗಳಲ್ಲಿ ಕಾವ್ಯವಾಚನದ ವಿಭಾಗವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅದಕ್ಕೆ ಟಿ.ಎನ್.ಪಿ. ಅವರದೇ ಮಾರ್ಗದರ್ಶನ. ಪದ್ಮನಾಭನ್ ಅವರ ಆತ್ಮೀಯ ಮಿತ್ರರ ಪೈಕಿ ಸಂಗೀತವಿದ್ವಾನ್ ಎಸ್. ಶಂಕರ್ ಅವರು ತುಂಬ ಮುಖ್ಯರು. ಇವರಲ್ಲಿಯೇ ಶಶಿಧರ್ ಸಂಗೀತ ಕಲಿತದ್ದು.
ಪದ್ಮನಾಭನ್ ಅವರ ಶ್ರೀರಾಮಭಕ್ತಿ ಮತ್ತು ತ್ಯಾಗರಾಜರ ಕೃತಿಗಳಲ್ಲಿ ಅವರಿಗಿದ್ದ ಆಸಕ್ತಿ ಬೀಜವೃಕ್ಷನ್ಯಾಯದಂತಿದ್ದವು. ಇವೆರಡರಲ್ಲಿ ಯಾವುದು ಮೊದಲು ಅವರಲ್ಲಿ ಹುಟ್ಟಿತೆಂದು ಹೇಳಲು ಸಾಧ್ಯವಿಲ್ಲ. ತ್ಯಾಗರಾಜರ ಎಷ್ಟೋ ಅಪೂರ್ವ ಕೃತಿಗಳ ವಿವರಗಳನ್ನಾಗಲಿ, ಪರಿಚಿತ ಕೃತಿಗಳ ಪೈಕಿ ಗಾಯಕರು ಸಾಮಾನ್ಯವಾಗಿ ಹಾಡದೆ ಬಿಟ್ಟುಹೋಗಿರುವ ಚರಣಗಳ ಸ್ವಾರಸ್ಯಗಳನ್ನೇ ಆಗಲಿ ಟಿ.ಎನ್.ಪಿ. ಅವರ ಮಾತುಗಳಲ್ಲಿ ಕೇಳುವುದೇ ಒಂದು ರಸಸಮಾರಾಧನೆ. ತ್ಯಾಗರಾಜರ ಹೃದಯ ಇವರಿಗೆಷ್ಟು ಹತ್ತಿರವಾಗಿತ್ತೆಂದರೆ ಪಂಚರತ್ನ ಕೃತಿಗಳ ಪೈಕಿ ಮೊದಲನೆಯದಾದ “ಜಗದಾನಂದಕಾರಕ”ದಲ್ಲಿ ಶ್ರೀರಾಮದೇವರ ನೂರೆಂಟು ನಾಮಗಳು ಬರುತ್ತವೆ ಎಂಬ ಸಂಗತಿ ಇವರಿಂದಲೇ ನನಗೆ ತಿಳಿದದ್ದು. ಪಂಚರತ್ನ ಕೃತಿಗಳಿಗೆ ಇವರು ಬರೆದ ವ್ಯಾಖ್ಯಾನ ಮತ್ತು ಶ್ರೀ ಎಸ್. ಕೃಷ್ಣಮೂರ್ತಿಗಳ ಸಹಯೋಗದಲ್ಲಿ ಹೊರತಂದ “ತ್ಯಾಗರಾಜಯೋಗವೈಭವಂ” ಸಂಪುಟಗಳು ಇವರ ಈ ನಿಟ್ಟಿನ ವಿದ್ವತ್ತೆಗೆ ಸಾಕ್ಷಿ. ತ್ಯಾಗರಾಜರ ಕೃತಿಗಳನ್ನಾಧರಿಸಿ ಇವರು ಪ್ರಸ್ತುತಪಡಿಸಿದ “ಶ್ರೀಸೀತಾಕಲ್ಯಾಣ” ಮತ್ತು “ಶ್ರೀರಾಮಸುಧಾ” ಎಂಬ ಸಂಗೀತರೂಪಕಗಳು ಅನೇಕ ವೇದಿಕೆಗಳಲ್ಲಿ ರಾಜಿಸಿವೆ. ಸೀತಾಕಲ್ಯಾಣಕ್ಕಾಗಿ ಟಿ.ಎನ್.ಪಿ. ಅವರೇ ರಚಿಸಿದ ಸಂಸ್ಕೃತದ ಚೂರ್ಣಿಕೆ ತುಂಬ ಚೆನ್ನಾಗಿದೆ. ಇಲ್ಲಿಯ ಪದಗುಂಫನ ಮೃದುಮಧುರವಾಗಿದೆ; ಮನೋಜ್ಞವಾಗಿದೆ. ಇವಲ್ಲದೆ “ತ್ಯಾಗರಾಜರ ಕೃತಿಗಳಲ್ಲಿ ವೇದಾಂತ”, “ತ್ಯಾಗರಾಜರ ಹಾಸ್ಯಪ್ರವೃತ್ತಿ” ಮುಂತಾದ ಸೋದಾಹರಣ ಭಾಷಣಗಳು ಉಲ್ಲೇಖನೀಯ.
ಪದ್ಮನಾಭನ್ ಅವರ ಆರಾಧ್ಯ ದೈವ ಹಾಗೂ ಜೀವನಾದರ್ಶ ಶ್ರೀರಾಮಚಂದ್ರಮೂರ್ತಿ. ಅಂತೆಯೇ ಶ್ರೀಮದ್ರಾಮಾಯಣ ಅವರ ಹೃದಯಕ್ಕೆ ಹತ್ತಿರ. ಆದಿಕಾವ್ಯವನ್ನು ಕುರಿತ ಅವರ ತಿಳಿವಳಿಕೆಯೂ ದೊಡ್ಡದು. ಈ ಮಹಾಗ್ರಂಥದ ಒಂದೊಂದು ಪ್ರಸಂಗವೂ ಅವರಿಗೆ ಕರತಲಾಮಲಕ. ಅನೇಕ ಭಾಗಗಳು ವಾಚೋವಿಧೇಯ. ರಘುವಂಶ, ಉತ್ತರರಾಮಚರಿತ, ಪ್ರತಿಮಾನಾಟಕ, ಚಂಪೂರಾಮಾಯಣ ಮುಂತಾದ ಬೇರೆ ಬೇರೆ ರಾಮಾಯಣಕಾವ್ಯಗಳನ್ನೆಲ್ಲ ಅಧ್ಯಯನ ಮಾಡಿ ವಾಲ್ಮೀಕಿಗಳ ಮಾತಿನೊಡನೆ ತುಲನಾತ್ಮಕವಾಗಿ ಎಷ್ಟೋ ವಿಷಯಗಳನ್ನು ತಿಳಿಸುತ್ತಿದ್ದರು. ಅವರ ಸಂಭಾಷಣೆಯಲ್ಲಿ ಒಂದೆರಡಾದರೂ ರಾಮಾಯಣದ ಶ್ಲೋಕಗಳು ಸಂದರ್ಭಶುದ್ಧಿಯೊಡನೆ ಬಾರದೆ ಇರುತ್ತಿರಲಿಲ್ಲ. ಮೂವತ್ತು ವರ್ಷಗಳ ಹಿಂದೆ ನಾನು ಗುಜರಾತಿನಲ್ಲಿದ್ದಾಗ ಶ್ರೀರಾಮನ ಚಿತ್ರವಿರುವ ಶುಭಾಶಯಪತ್ರವೊಂದನ್ನು ಅವರಿಗೆ ಕಳುಹಿದ್ದೆ. ಅದನ್ನವರು ಸದಾಕಾಲ ಉಳಿಸಿಕೊಂಡಿದ್ದರು. ಅವರ ಮನೆಯ ಹೆಸರು “ಶ್ರೀರಾಮಾಲಯ”. ಅವರ ಮೊದಲ ಮೊಮ್ಮಗನ ಹೆಸರು ಶ್ರೀರಾಮ. ಅವರ ಈ ರಾಮಭಕ್ತಿಗೆ ಕಾರಣ ಅವರ ಗೋತ್ರಪ್ರವರ್ತಕರಾದ ವಿಶ್ವಾಮಿತ್ರರೇ ಇರಬೇಕು. ಪದ್ಮನಾಭನ್ ಅವರು ತಾವು ರಚಿಸಿದ ಕೀರ್ತನೆಗಳಲ್ಲೆಲ್ಲ “ಕೌಶಿಕ” ಅಥವಾ “ಕುಶಿಕ” ಎನ್ನುವ ಅಂಕಿತವನ್ನು ಬಳಸಿರುವುದು ಇಲ್ಲಿ ಸ್ಮರಣೀಯ.
ಅವರ ಮಿತ್ರರೊಬ್ಬರು ಪ್ರತಿದಿನ ಶ್ರೀಮದ್ರಾಮಾಯಣದ ಒಂದು ಸರ್ಗವನ್ನು ಪಾರಾಯಣ ಮಾಡುವ ಪರಿಪಾಟಿ ಇಟ್ಟುಕೊಂಡಿದ್ದರಂತೆ. ಆ ರೀತಿ ಅವರು ಆ ಗ್ರಂಥವನ್ನು ಏಳು ಬಾರಿ ಮುಗಿಸಿದ್ದರಂತೆ. “ನೋಡಿ, ಇಂಥ ವ್ರತನಿಯಮ ನನ್ನ ಕೈಲಿ ಆಗಲಿಲ್ಲ” ಎಂದು ಅವರು ಹೇಳಿಕೊಳ್ಳುತ್ತಿದ್ದರು. ಪದ್ಮನಾಭನ್ ರಾಮಾಯಣವನ್ನು ಪಾರಾಯಣ ಮಾಡುವಾಗಲೂ ರಸಿಕತೆಯನ್ನು ಬಿಟ್ಟವರಲ್ಲ. ತಿಲಕ, ಗೋವಿಂದರಾಜೀಯ ಮೊದಲಾದ ವ್ಯಾಖ್ಯಾನಗಳನ್ನೂ ರೈಟ್ ಆನರಬಲ್ ವಿ. ಎಸ್. ಶ್ರೀನಿವಾಸಶಾಸ್ತ್ರಿಗಳ ರಾಮಾಯಣಪ್ರವಚನಗಳನ್ನೂ ಅವರು ಆಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಅವರು ಭಾಗವಹಿಸಿದ ಸಭೆಗಳಲ್ಲಿ, ಅವಧಾನಗಳಲ್ಲಿ ಶೇಕಡ ಎಪ್ಪತ್ತರಿಂದ ಎಂಬತ್ತು ಭಾಗದ ಅವರ ಪ್ರಶ್ನೆಗಳೂ ರಚನೆಗಳೂ ಶ್ರೀರಾಮನನ್ನೇ ಕುರಿತಿರುತ್ತಿದ್ದವು. ತಮ್ಮ ಸುಪುತ್ರಿ ಶ್ರೀಮತಿ ಸರೋಜಾ ಅವರಿಗೂ ರಾಮಾಯಣದೀಕ್ಷೆ ಕೊಟ್ಟಿದ್ದರು. ಆಕೆ ಸುಂದರಕಾಂಡದ ಬಹುಭಾಗವನ್ನು ಕಂಠಸ್ಥ ಮಾಡಿದ್ದರು. ಪೂಜ್ಯರಾದ ಡಿ.ವಿ.ಜಿ. ಅವರು ಇದನ್ನು ತಿಳಿದು ತುಂಬ ಸಂತೋಷ ಪಟ್ಟಿದ್ದರು. ಆಗ ಹತ್ತು-ಹನ್ನೆರಡು ವರ್ಷಗಳ ಬಾಲಕಿಯಾಗಿದ್ದ ಸರೋಜಾ ಅವರನ್ನು ಕುರಿತು “ಕಾ ನು ಪದ್ಮಪಲಾಶಾಕ್ಷೀ” ಎಂದೇ ವಿಚಾರಿಸುತ್ತಿದ್ದರಂತೆ. ಈ ಮಾತು ಆಂಜನೇಯಸ್ವಾಮಿಯು ಸೀತಾದೇವಿಯನ್ನು ಅಶೋಕವನದಲ್ಲಿ ಕಂಡಾಗ ತಾನು ತನಗೇ ಕೇಳಿಕೊಂಡ ಪ್ರಶ್ನೆ. ಹೀಗೆ ಶ್ರೀಮದ್ರಾಮಾಯಣ ಪದ್ಮನಾಭನ್ನರ ಜೀವನದಲ್ಲಿ ಹಾಸುಹೊಕ್ಕಾಗಿತ್ತು.
ಪದ್ಮನಾಭನ್ನರು ವೈದಿಕಧರ್ಮಾಚರಣೆಯಲ್ಲಿ ಅಚಲ ಶ್ರದ್ಧೆ ಹೊಂದಿದ್ದರು. ಅದು ಮನಃಪರಿಪಾಕದಿಂದ, ಅಂತರಂಗಶುದ್ಧಿಯಿಂದ ಕೂಡಿದ ಕರ್ಮಶ್ರದ್ಧೆಯಾಗಿತ್ತೇ ಹೊರತು ಅಂಧಶ್ರದ್ಧೆಯಲ್ಲ. ಹೀಗಾಗಿ ಅವರಲ್ಲಿ ಮಡಿ-ಹುಡಿಗಳ ಅವಾಂತರ ಇರಲಿಲ್ಲ. ಹಾಗೆಂದು ಸದಾಚಾರಕ್ಕಾಗಲಿ, ಶುಚಿತ್ವಕ್ಕಾಗಲಿ ಎಂದೂ ಧಕ್ಕೆತಂದವರಲ್ಲ. “ಆಚಾರಹೀನಂ ನ ಪುನಂತಿ ವೇದಾಃ” ಎನ್ನುತ್ತಿದ್ದರು. ವೇದಮಂತ್ರಗಳನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಲಿಸುತ್ತಿದ್ದರು. ವೇದಘೋಷ ಮಾಡುವಾಗ ಉದಾತ್ತ, ಅನುದಾತ್ತ, ಸ್ವರಿತಾದಿಗಳಿಗೆ ಎಷ್ಟು ಪ್ರಾಮುಖ್ಯ ಕೊಡಬೇಕೋ ಅಷ್ಟೇ - ಇನ್ನೂ ಹೆಚ್ಚಿನ ಗಮನ - ಯತಿ, ಪದಚ್ಛೇದ, ಅಲ್ಪಪ್ರಾಣ-ಮಹಾಪ್ರಾಣಗಳ ಸರಿಯಾದ ಉಚ್ಚಾರಣೆ, ಅರ್ಥಗ್ರಹಣ, ಸರಿಯಾದ ವೇಗ ಮತ್ತು ಸ್ಥಾಯಿಗಳಿಗೂ ಕೊಡಬೇಕು ಎಂಬುದು ಅವರ ಇಂಗಿತ. ಈ ದೃಷ್ಟಿಕೋನ ಅವರಿಗೆ ಬಂದದ್ದು ಬಹುಶಃ ಅವರಿಗಿದ್ದ ಹಿನ್ನೆಲೆಯಿಂದ. ಅಂದರೆ, ಅವರಿಗಿದ್ದ ಸಾಹಿತ್ಯ-ಸಂಗೀತಗಳ ಪರಿಜ್ಞಾನ ಮತ್ತು ಅನೇಕ ವಿದ್ವಾಂಸರ ವೇದಘೋಷಗಳ ಶ್ರವಣದಿಂದ. ಇಷ್ಟಾದರೂ ಅಕಸ್ಮಾತ್ತಾಗಿ ಲೋಪ-ದೋಷಗಳು ತಲೆದೋರಿದರೆ ಅವರು ಎಂದೂ ಬೇರೆಯವರ ತೇಜೋವಧೆ ಮಾಡುತ್ತಿರಲಿಲ್ಲ.
ನಮ್ಮ ಮನೆಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಶತರುದ್ರಾಭಿಷೇಕ ಮತ್ತು ಉಪಾಕರ್ಮಗಳಲ್ಲಿ ಪದ್ಮನಾಭನ್ನರು ತಪ್ಪದೆ ಭಾಗವಹಿಸುತ್ತಿದ್ದರು. ಅರುಣಪ್ರಶ್ನ, ಮಹಾನ್ಯಾಸ, ರುದ್ರಾಧ್ಯಾಯ, ತೈತ್ತಿರೀಯೋಪನಿಷತ್ತುಗಳ ಮಂತ್ರಘೋಷ ಅವರಿಗೆ ಅತ್ಯಂತ ಪ್ರಿಯ. ತತ್ರಾಪಿ ಮಹಾನ್ಯಾಸದಲ್ಲಿ ಬರುವ ಪರಮೇಶ್ವರನ ಪಂಚಮುಖಗಳ ವರ್ಣನೆಯ ಐದು ಶಾರ್ದೂಲವಿಕ್ರೀಡಿತಗಳನ್ನು ಅವರಂತೆ ಕೇಳಿ ಆನಂದಿಸಿದವರು ಬಲು ವಿರಳ. ಉಪಾಕರ್ಮದ ಕಲಾಪಗಳೆಲ್ಲ ಮುಗಿದ ಮೇಲೆ “ಸರಿ; ನಮಗೆ ಬರಬೇಕಾದ್ದನ್ನು ನೀವುಗಳು ಕೊಟ್ಟುಬಿಡಿ. ಹೊತ್ತಾಯಿತು. ಹೊರಡೋಣ” ಎನ್ನುತ್ತಿದ್ದರು. ಅದೇನೆಂದರೆ ನಾವು ಮೂರು-ನಾಲ್ಕು ಜನ – ಕೀರ್ತಿಶೇಷ ವೇದಬ್ರಹ್ಮಶ್ರೀ ಚಂದ್ರಶೇಖರಭಟ್ಟರ ಶಿಷ್ಯರು – ಒಟ್ಟಿಗೆ ವೇದಘೋಷ ಮಾಡಬೇಕು. “ಪೃಥಿವೀ ಶಾಂತಾ ಸಾಗ್ನಿನಾ ಶಾಂತಾ” ಎಂಬ ಶಾಂತಿಮಂತ್ರವನ್ನೋ ಮಹಾನಾರಾಯಣೋಪನಿಷತ್ತಿನ “ಜ್ಞಾನಯಜ್ಞಪ್ರಕರಣ” ಎಂಬ ಕೊನೆಯ ಅನುವಾಕ “ತಸ್ಯೈವಂ ವಿದುಷೋ ಯಜ್ಞಸ್ಯಾತ್ಮಾ ಯಜಮಾನಃ” ಎಂಬುದನ್ನೋ ಹೇಳಬೇಕು. ಈ ಎರಡೂ ಅವರಿಗೆ ಮಿಗಿಲಾಗಿ ಇಷ್ಟವಾದವು. ಹೀಗಾಗಿ ಇವನ್ನೇ ಹೇಳಬೇಕು. ಬೇರೆ ಯಾವುದನ್ನೂ ಅಲ್ಲ. ಈ ಮಂತ್ರಗಳನ್ನು ಕೇಳುವಾಗ ಅವರ ಮುಖದಲ್ಲಿ ಕಾಣುತ್ತಿದ್ದ ಶಾಂತಿ-ಆನಂದಗಳು ಅವಿಸ್ಮರಣೀಯ. ಇವು ನಮ್ಮನ್ನು ಧನ್ಯತೆಯತ್ತ ಸೆಳೆದೊಯ್ಯುತ್ತಿದ್ದವು.
ಕಾವ್ಯ-ಕಲೆಗಳ ರಸಾನುಭೂತಿಯಲ್ಲಿ ಮುಳುಗಿದ್ದರೂ ಪದ್ಮನಾಭನ್ ಅವರ ಅಂತರಂಗದಲ್ಲಿ ವೇದಾಂತಚಿಂತನೆ ನಿರಂತರವಾಗಿತ್ತು. ಅವರಲ್ಲಿದ್ದ ಒಂದು ಪರತ್ರ ದುರ್ಲಭವಾದ ವೈಶಿಷ್ಟ್ಯವೆಂದರೆ - ತಮ್ಮ ಚಿಂತನ-ಮಂಥನಗಳ ಫಲವಾಗಿ ಲಭಿಸಿದ್ದ ಸೂಕ್ಷ್ಮಜ್ಞತೆಯಿಂದ ಕಾವ್ಯಗಳಲ್ಲಿ ಬರುವ ವೇದಾಂತವಿಷಯಗಳನ್ನೂ ವೇದ-ವೇದಾಂತಗ್ರಂಥಗಳಲ್ಲಿ ಬರುವ ಕಾವ್ಯಮಯ ಭಾಗಗಳನ್ನೂ ಗುರುತಿಸಿ ಅರ್ಥೈಸುವ ಚತುರತೆ.
ಒಮ್ಮೆ ಪ್ರಾಸಂಗಿಕವಾಗಿ ಒಂದು ವಿಷಯ ಚರ್ಚೆಗೆ ಬಂದಿತು: ಶ್ರೀಲಲಿತಾಸಹಸ್ರನಾಮದ ಮೊದಲ ಐವತ್ತು-ಅರವತ್ತು ನಾಮಗಳು ಕಾವ್ಯಶೈಲಿಯಲ್ಲಿದ್ದು ಶ್ರೀಮಾತೆಯ ದೇಹಸೌಂದರ್ಯದ ವರ್ಣನೆಯನ್ನು ಮಾಡುತ್ತವೆ. ಇದು ಪೂಜೆಗೆ ಕುಳಿತ ಭಕ್ತನ ಪಾಲಿಗೆ ಹೇಗೆ ಸುಸಂಗತ? ಎಂದು. ಆಗ ಟಿ.ಎನ್.ಪಿ. ಅವರು ತಮ್ಮ ಅಭಿಪ್ರಾಯ ತಿಳಿಸಿದರು: “ಸಹಸ್ರ ನಾಮಗಳಲ್ಲಿ ಈ ಐವತ್ತು-ಅರವತ್ತಕ್ಕೇ ಏಕೆ ನಿಂತಿರಿ? ಮತ್ತೂ ಮುಂದುವರಿಯಿರಿ. ಜಗನ್ಮಾತೆ “ಮಿಥ್ಯಾಜಗದಧಿಷ್ಠಾನಾ”, “ಸರ್ವೋಪಾಧಿವಿನಿರ್ಮುಕ್ತಾ”, “ಹೇಯೋಪಾದೇಯವರ್ಜಿತಾ” ಹಾಗೂ “ಸ್ವಸ್ಥಾ”. ಇದಕ್ಕಿಂತಲೂ ಮಿಗಿಲಾದ ವೇದಾಂತತತ್ತ್ವ ನಿಮಗೆ ಬೇಕೇ?”
ಇನ್ನೊಮ್ಮೆ “ಎಲ್ಲಾ ಸರಿ ಸಾರ್. ಶ್ರೀಶಂಕರಭಗವತ್ಪಾದರು “ಕಾವ್ಯಾಲಾಪಾಂಶ್ಚ ವರ್ಜಯೇತ್” ಎಂಬಂತೆ ಹೇಳಿಬಿಟ್ಟಿದ್ದಾರಲ್ಲ” ಎಂದು ನಾನು ಪೇಚಾಡಿದಾಗ ಟಿ.ಎನ್.ಪಿ. ಹೇಳಿದರು: “ಗುರುವಾಕ್ಯದಂತೆ ನಡೆಯಬೇಕಾದ್ದೇ. ಆದರೆ ರಘುವಂಶದಲ್ಲಿ ಕಾಳಿದಾಸ ಹೇಳುತ್ತಾನಲ್ಲ – “ಮಾರುತಿಃ ಸಾಗರಂ ತೀರ್ಣಃ ಸಂಸಾರಮಿವ ನಿರ್ಮಮಃ” (ಮಮಕಾರವನ್ನು ಬಿಟ್ಟವನು ಸಂಸಾರವನ್ನು ಸುಲಭವಾಗಿ ದಾಟುವಂತೆ ಮಾರುತಿ ಸಮುದ್ರವನ್ನು ದಾಟಿದ) – ಇದು ಯಾವ ಉಪನಿಷದ್ವಾಕ್ಯಕ್ಕಿಂತ ಕಡಮೆ? ಇಂಥ ಕಾವ್ಯಾಲಾಪವನ್ನು ನಾವು ಬಿಡುವುದಾದರೂ ಹೇಗೆ?” ಹಾಗೆಯೇ ಮುಂದುವರಿದು “ಇಷ್ಟೆಲ್ಲಾ ಕಟ್ಟುನಿಟ್ಟಾಗಿ ಅಪ್ಪಣೆ ಕೊಡಿಸಿದ ಶ್ರೀಮದಾಚಾರ್ಯರ ಗ್ರಂಥಗಳಲ್ಲಿ ಕಾವ್ಯಾಂಶ ಕಡಮೆಯಿದೆಯೇನು? ಶಿವಾನಂದಲಹರಿ, ಸೌಂದರ್ಯಲಹರಿಗಳನ್ನು ಬಿಡಿ. ಅವರ ಪ್ರಕರಣಗ್ರಂಥಗಳಲ್ಲೂ ಭಾಷ್ಯಗಳಲ್ಲೂ ಕಾವ್ಯಾಂಶಕ್ಕೆ ಕೊರತೆಯಿಲ್ಲ” ಎಂದು ಗೀತಾಭಾಷ್ಯ, ಶಾರೀರಕಭಾಷ್ಯಗಳ ಕೆಲವು ಭಾಗಗಳನ್ನು ಪ್ರಸ್ತಾವಿಸಿದರು. ಬಳಿಕ ಉಪಸಂಹಾರಾತ್ಮಕವಾಗಿ ಹೀಗೆಂದರು: “If only Sri Shankara had not chosen to be a philosopher he would have shone as a great poet far superior to many famous poets. It is only he who can pack the most serious philosophical thoughts into beautiful and attractive poetry.”
ಇನ್ನೊಮ್ಮೆ ಆಚಾರ್ಯರ ದಕ್ಷಿಣಾಮೂರ್ತಿಸ್ತೋತ್ರದ ಒಂದು ಶ್ಲೋಕ “ನಾನಾಛಿದ್ರಘಟೋದರಸ್ಥಿತಮಹಾದೀಪಪ್ರಭಾಭಾಸ್ವರಂ” ಎಂಬುದನ್ನು ಅವರು ವ್ಯಾಖ್ಯಾನಿಸಿದ ಪರಿ ಅಸಾಧಾರಣವಾಗಿತ್ತು. ಇದನ್ನು ಆಲಿಸಿದ್ದು ನನ್ನ ಸೌಭಾಗ್ಯ. ಗಹನವಾದ ತತ್ತ್ವದ ದರ್ಶನ ಸರಸಾವಾದ ಕಾವ್ಯದ ಶೈಲಿಯಲ್ಲಿ – ಯಾರಿಗುಂಟು ಯಾರಿಗಿಲ್ಲ! ಅದ್ವೈತತತ್ತ್ವದ ಸಮ್ಯಗ್ದರ್ಶನಕ್ಕೆ ಈ ಸ್ತೋತ್ರ ಮುಖ್ಯ ಎಂಬುದನ್ನವರು ಮನಗಾಣಿಸಿದ್ದರು.
ತಾವು ತತ್ತ್ವವಿವರಣೆ ಮಾಡುವುದಲ್ಲದೆ ಹಾಗೆ ವಿವರಿಸುವುದನ್ನು ಕೇಳಿದಾಗಲೂ ಮೈಮರೆಯುತ್ತಿದ್ದರು. ಒಮ್ಮೆ ಚಿಂತಾಮಣಿಯಲ್ಲಿ ಗಣೇಶ್ ಅವರ ಅವಧಾನ ಮುಗಿಸಿಕೊಂದು ಬರುತ್ತಿದ್ದಾಗ ಲಂಕಾ ಕೃಷ್ಣಮೂರ್ತಿಗಳು ಆಚಾರ್ಯರ ಕವಿತಾಚಾತುರ್ಯವನ್ನು ಮೆಚ್ಚಿಕೊಳ್ಳುತ್ತ ಶಿವಾನಂದಲಹರಿಯ “ಅಂಕೋಲಂ ನಿಜಬೀಜಸಂತತಿಃ” ಎಂಬ ಶ್ಲೋಕದ ಅಂತರರ್ಥವನ್ನು ಬಿಡಿಸಿ ವಿಸ್ತರಿಸಿದರು. ಇದನ್ನು ಕೇಳಿ ಎಷ್ಟೋ ವರ್ಷಗಳಾದ ಬಳಿಕವೂ ಪದ್ಮನಾಭನ್ ಅವರು ಆ ವಿವರಣೆಯನ್ನು ಪದೇ ಪದೇ ನೆನೆಯುತ್ತಿದ್ದರು; ಕೃಷ್ಣಮೂರ್ತಿಗಳನ್ನು ಕೊಂಡಾಡುತ್ತಿದ್ದರು.
ಪದ್ಮನಾಭನ್ ಅವರು ತಮ್ಮೊಳಗೆ ಪೋಷಿಸುತ್ತಿದ್ದ ತತ್ತ್ವದೃಷ್ಟಿ ಹೊರಬಿದ್ದ ಇನ್ನೊಂದು ಪ್ರಸಂಗವೆಂದರೆ ಗಣೇಶ್ ಅವರ ಒಂದು ಅವಧಾನದಲ್ಲಿ ಅವರಿಗೆ ಇವರು ಕೊಟ್ಟ ಸಮಸ್ಯೆ: “ಷಂಡಷಂಡರು ಸೇರಿರಲ್ ಸುಖಶಾಂತಿದಂ ಪರಮಾರ್ಥದಂ”. ಇದನ್ನು ಅವರು ಪೂರಣ ಮಾಡಿದ ರೀತಿ ಅತ್ಯದ್ಭುತ. ನನಗೆ ತಿಳಿದಿರುವ ಮಟ್ಟಿಗೆ ಅವರ ಎಲ್ಲ ರಚನೆಗಳಿಗೂ ಇದು ಮುಕುಟಪ್ರಾಯವಾಗಿತ್ತು. ಅದರ ಭಾವಾರ್ಥ ಹೀಗೆ: “ಮನಸ್ಸು ನಪುಂಸಕಲಿಂಗದಲ್ಲಿದೆ. ಬ್ರಹ್ಮಶಬ್ದವೂ ನಪುಂಸಕಲಿಂಗಕ್ಕೇ ಸೇರಿದೆ. ಹೀಗಾಗಿ ಮನಸ್ಸನ್ನು ಬ್ರಹ್ಮಕ್ಕೆ ಸೇರಿಸಿದರೆ ಅದು ನಮಗೆ ಸುಖವೂ ಹೌದು, ಶಾಂತಿಯೂ ಹೌದು.” ಅವಧಾನದ ಕೊನೆಗೆ ಅವರು ತಮ್ಮ ಪೂರಣವನ್ನು ವಾಚನ ಮಾಡಿದಾಗ ಸಭೆಯಲ್ಲಿದ್ದ ರಸಿಕರೆಲ್ಲ ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಅವಧಾನಿ ಗಣೇಶ್ ಅವರು ಆನಂದತುಂದಿಲರಾದರು. ಮುಕ್ತಕಂಠದಿಂದ ಈ ರಚನೆಯನ್ನೂ ಅದು ನಮಗೆ ಮನದಟ್ಟು ಮಾಡಿಸುವ ತತ್ತ್ವವನ್ನೂ ಕೊಂಡಾಡಿದರು. “ವಿದ್ವಾನೇವ ವಿಜಾನಾತಿ ವಿದ್ವಜ್ಜನಪರಿಶ್ರಮಮ್” ಅಲ್ಲವೇ!
ಈ ರೀತಿ ಆಹ್ಲಾದಕರವಾದ, ಬೋಧಪ್ರದವಾದ ಪ್ರಸಂಗಗಳು ಪದೇ ಪದೇ ಸಂಭವಿಸುತ್ತಿದ್ದವು. ಇಂಥ ಶುದ್ಧಾಂತಃಕರಣರೂ ಪಂಕ್ತಿಪಾವನರೂ ವಿದ್ಯಾವಿನಯಸಂಪನ್ನರೂ ಆದ ಗುಣಗ್ರಾಹಿಗಳ ಬಗೆಗೆ ನನಗಿದ್ದ ಅತಿಶಯವಾದ ಗೌರವಾದರಗಳ ಫಲವಾಗಿ ಒಮ್ಮೆ ನಾನು ಒಂದು ಪದ್ಯವನ್ನು ರಚಿಸಿ ಅವರಿಗೆ ಅರ್ಪಿಸಿದೆ:
ಶ್ರೀಮದ್ರಾಘವಪಾದಪದ್ಮಯುಗಲೀಭೃಂಗಂ ಕವಿಂ ಮದ್ಗುರುಂ
ಡೀವೀಜೀಪ್ರಿಯಶಿಷ್ಯಮುಖ್ಯಮಮಲಂ ಶ್ರೀಪದ್ಮನಾಭಂ ಸದಾ |
ತೃಪ್ತಂ ಗಾನರಸಾಬ್ಧಿಮಂಥನರತಂ ಸದ್ವಂಶಜಂ ಸಾತ್ತ್ವಿಕಂ
ವಂದೇ ಕಾವ್ಯರಸಾನುಭೂತಿಚತುರಂ ಗೀರ್ವಾಣಭಾಷಾಪಟುಮ್ ||
(ಶ್ರೀರಾಮನ ಪಾದಕಮಲಗಳಲ್ಲಿ ಸದಾ ನೆಲಸಿದ ದುಂಬಿಯಂಥವರೂ ಕವಿಗಳೂ ನನಗೆ ಪೂಜ್ಯರಾದ ಡಿ.ವಿ.ಜಿ. ಅವರ ಪ್ರಿಯಶಿಷ್ಯರೂ ಆದ ಪದ್ಮನಾಭನ್ನರಿಗೆ ವಂದನೆಗಳು. ಸದಾ ಸಂತೃಪ್ತರಾಗಿ, ಗಾನಸಾಗರವನ್ನು ಮಥಿಸುತ್ತ, ಸಾತ್ತ್ವಿಕರಾಗಿ, ಸತ್ಕುಲಪ್ರಸೂತರಾಗಿ ಇವರಿದ್ದಾರೆ. ಕಾವ್ಯರಸವನ್ನು ಆಸ್ವಾದಿಸುವಲ್ಲಿ ಇವರು ಪ್ರವೀಣರು. ಸಂಸ್ಕೃತಭಾಷೆಯನ್ನು ಚೆನ್ನಾಗಿ ಬಲ್ಲವರು. ಇವರಿಗೆ ನಾನು ನಮಿಸುತ್ತೇನೆ.)
ಇದನ್ನು ಅವರಿಗೆ ತೋರಿಸಿದೆ. ಅವರು ಒಮ್ಮೆ ನೋಡಿ ಹೀಗೆಂದರು: “ನೀವು ಆಯ್ಕೆ ಮಾಡಿಕೊಂಡ ವಿಷಯ ಅಷ್ಟು ಸರಿಯಾಗಿಲ್ಲ. ಆದರೆ ಪದ್ಯ ಛಂದೋಬದ್ಧವಾಗಿ, ಸರಿಯಾಗಿ ಬಂದಿದೆ. ನಿಮ್ಮ ಈ ಶಕ್ತಿಯನ್ನು ನಾನು ಗುರುತಿಸಿರಲಿಲ್ಲ. ಶ್ರೀರಾಮಚಂದ್ರನನ್ನೋ ಶ್ರೀಕೃಷ್ಣಪರಮಾತ್ಮನನ್ನೋ ಕುರಿತು ಇಂಥ ಶ್ಲೋಕಗಳನ್ನು ರಚಿಸಿ. ನಮಗೆ ಸಾಧ್ಯವೆಂದು ತಿಳಿದ ಮೇಲೆ ಈ ಬಗೆಯ ರಚನೆಗಳನ್ನು ಮುಂದುವರಿಸದೆ ಬಿಡಬಾರದು. ಖಂಡಿತ ಮುನ್ನಡೆಯಿರಿ.” ಅಷ್ಟಕ್ಕೇ ಬಿಡದೆ ಇದನ್ನು ಗಣೇಶ್ ಅವರ ಬಳಿಯೂ ಹೇಳಿದರು. ಇವರಿಬ್ಬರೂ ಸೇರಿ ಮುಂದಿನ ಅವಧಾನದಲ್ಲಿ ನನ್ನನ್ನು ಶ್ರೋತೃಗಣದಿಂದ ಮೇಲಕ್ಕೆ ಏರಿಸಿ ಪೃಚ್ಛಕಗಣದಲ್ಲಿ ಸೇರಿಸಿದರು. ವೇದಿಕೆಯಲ್ಲಿದ್ದ ಹಿರಿಯರೊಡನೆ ಕುಳಿತಾಗ ನನಗೆ ನೆನಪಾದ ವಾಕ್ಯ “ಹಂಸಮಧ್ಯೇ ಬಕೋ ಯಥಾ” ಎಂಬುದು. ಹೇಗೋ ಸ್ವಲ್ಪ ಧೈರ್ಯ ತಂದುಕೊಂಡು ಮುಂದುವರಿದದ್ದಾಯಿತು. ಹೀಗೆ ಹೂವಿನಿಂದ ನಾರು ಸ್ವರ್ಗಕ್ಕೆ ಸೇರಿದಂತಾಯಿತು.
“ಪರಗುಣಪರಮಾಣೂನ್ ಪರ್ವತೀಕೃತ್ಯ ನಿತ್ಯಂ ನಿಜಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ” ಎಂಬ ಸತ್ಪುರುಷಲಕ್ಷಣಕ್ಕೆ ಸಾಕ್ಷಿಯಾಗಿದ್ದವರು ಪದ್ಮನಾಭನ್. ಅವರೆಂದೂ ಇನ್ನೊಬ್ಬರ ಅವಗುಣಗಳ ಬಗೆಗೆ ಮಾತನಾಡಿದವರೇ ಅಲ್ಲ. ಅವರೊಡನೆ ಇಪ್ಪತ್ತು ವರ್ಷಗಳಷ್ಟು ದೀರ್ಘ ಕಾಲ ಒಡನಾಟದಲ್ಲಿದ್ದು ಅವರನ್ನು ಸನಿಹದಿಂದ ನೋಡಿ ಬಲ್ಲವನಾದರೂ ಒಂದೇ ಒಂದು ದಿನ ಕೂಡ, ಯಾವುದೇ ಸಂದರ್ಭದಲ್ಲಿ ಕೂಡ ಅವರು ಸಿಟ್ಟು ಮಾಡಿ ಎತ್ತರದ ದನಿಯಲ್ಲಿ ಮಾತನಾಡಿದ್ದನ್ನಾಗಲಿ, ಮುಖ ಸಿಂಡರಿಸಿಕೊಂಡದ್ದನ್ನಾಗಲಿ ನೋಡಲೇ ಇಲ್ಲ. ಶಾಂತಿ-ಸಮಾಧಾನಗಳಿಗೆ ಅವರು ತವರಾಗಿದ್ದರು. ತೀರ ಪರಿಚಿತರಿಗೆ ಮಾತ್ರ ಅವರ ಮುಖಭಾವದಿಂದ ಅವರಿಗೆ ಅಸಮಾಧಾನವಾಗಿದೆಯೆಂದು ತಿಳಿಯುತ್ತಿತ್ತು. ಆದರೆ ಅದೂ ಕ್ಷಣಿಕವಾಗಿರುತ್ತಿತ್ತು. ಎಲ್ಲರ ಬಗೆಗೂ ಎಲ್ಲ ಸಂದರ್ಭಗಳಲ್ಲಿಯೂ ಅವರದು “positive attitude and approach” ಎಂಬ ಧೋರಣೆ. ಅವರಂಥ ಗುಣಗ್ರಾಹಿಗಳು ತುಂಬ ವಿರಳ. ತಮ್ಮ ಆರಾಧ್ಯದೈವ ಶ್ರೀರಾಮನ ಗುಣಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದ ಧನ್ಯರವರು: “ಸ ತು ನಿತ್ಯಂ ಪ್ರಶಾಂತಾತ್ಮಾ ಮೃದು ಪೂರ್ವಂ ಚ ಭಾಷತೇ | ಉಚ್ಯಮಾನೋಽಪಿ ಪರುಷಂ ನೋತ್ತರಂ ಪ್ರತಿಪದ್ಯತೇ ||”
ಅದೊಮ್ಮೆ ಪದ್ಮನಾಭನ್ ಅವರು ಒಂದು ಪ್ರಸಂಗವನ್ನು ಪ್ರಸ್ತಾವಿಸಿದರು. ಯಾವಾಗಲೋ ಅವರು ದೆಹಲಿಗೆ ಹೋಗಿದ್ದಾಗ ಅಲ್ಲಿ ಗಿರಿಧರಶಾಸ್ತ್ರಿಗಳನ್ನು ಭೇಟಿ ಮಾಡಿದರಂತೆ. ಇವರು ಶೃಂಗಗಿರಿ ಶಾರದಾಪೀಠದ ಶ್ರೀ ಶ್ರೀ ವಿದ್ಯಾತೀರ್ಥಮಹಾಸ್ವಾಮಿಗಳ ಕಾರ್ಯದರ್ಶಿಗಳಾಗಿದ್ದರು. ಇಂಥವರ ಮನೆಗೆ ಹೋದ ಪದ್ಮನಾಭನ್ ಶಾಸ್ತ್ರಿಗಳು ಶ್ರೀಮದ್ರಾಮಾಯಣವನ್ನು ಪಾರಾಯಣ ಮಾಡುತ್ತಿದ್ದುದನ್ನು ಕಂಡರಂತೆ. ಪಾರಾಯಣ ಮುಗಿದ ಬಳಿಕ ಶಾಸ್ತ್ರಿಗಳು ಶ್ರೀರಾಮನಿಗೂ ಗ್ರಂಥಕ್ಕೂ ನೀರಾಜನ ಸಲ್ಲಿಸಿ ಬಳಿಕ ತಮ್ಮ ಎದುರಲ್ಲಿದ್ದ ಖಾಲಿಯ ಮಣೆಯೊಂದಕ್ಕೂ ಆರತಿ ಎತ್ತಿದರಂತೆ. ಪದ್ಮನಾಭನ್ ಕುತೂಹಲದಿಂದ ಪ್ರಶ್ನಿಸಿದಾಗ ಶಾಸ್ತ್ರಿಗಳು ಹೇಳಿದರಂತೆ: “ಯತ್ರ ಯತ್ರ ರಘುನಾಥಕೀರ್ತನಮ್” ಎಂಬ ಶ್ಲೋಕದಂತೆ ಎಲ್ಲೆಲ್ಲಿ ಶ್ರೀಮದ್ರಾಮಾಯಣದ ಪಾರಾಯಣ ಸಾಗುವುದೋ ಅಲ್ಲೆಲ್ಲ ಶ್ರೀಮದಾಂಜನೇಯಸ್ವಾಮಿ ಬಂದಿರುವನಷ್ಟೆ. ಆತನಿಗಾಗಿ ಈ ಆಸನ. ಆತನಿಗೆ ಈ ನೀರಾಜನ”.
“ಶ್ರೀಮದ್ರಾಮಾಯಣದ ಪಾರಾಯಣವನ್ನು ಇಂಥ ಪರಾಯಣತೆಯಿಂದ, ಇಂಥ ತಾದಾತ್ಮ್ಯದಿಂದ ನಾವು ನಡಸಬೇಕಲ್ಲವೇ” ಎಂದು ಪದ್ಮನಾಭನ್ ಹೇಳಿದ್ದರು.
ಹೀಗೆ ಮಹನೀಯರ ಪಂಕ್ತಿಗೆ ಸೇರಿದ ಟಿ.ಎನ್.ಪಿ. ಅವರನ್ನು ನಾನು ನನ್ನ ಆತ್ಮಗುರುಗಳೆಂದು ಮನಸಾ ಒಪ್ಪಿಕೊಂಡಿದ್ದೇನೆ. ಯಾರಾದರೂ ಅವರನ್ನು ಕುರಿತು ಪ್ರಸ್ತಾವಿಸುವಾಗ “ನಿಮ್ಮ ಸ್ನೇಹಿತರು” ಎಂದಾಗಲೆಲ್ಲ ನನಗೆ ಅನ್ನಿಸುತ್ತಿತ್ತು: “ಇದು ಧಾರ್ಷ್ಟ್ಯ; ಅವರೆಲ್ಲಿ, ನಾನೆಲ್ಲಿ? ಅವರು ಗುರುಪಾದರು” ಎಂದು. ನನಗೆ ಮಾತಾಪಿತೃವಿಯೋಗವಾದಾಗ, ವೈಯಕ್ತಿಕವಾದ ಕೆಲವು ಸಮಸ್ಯೆಗಳು ಎದುರಾದಾಗ ಈ ಮಹನೀಯರ ವಾತ್ಸಲ್ಯದ ನೆರಳಿನಲ್ಲಿ, ಮಾತಿನ ತಂಪಿನಲ್ಲಿ ನೆಮ್ಮದಿ ಕಂಡಿದ್ದೇನೆ. ಡಿ.ವಿ.ಜಿ. ಅವರ “ಮರುಳ ಮುನಿಯನ ಕಗ್ಗ”ಕ್ಕೆ ಪದ್ಮನಾಭನ್ ವ್ಯಾಖ್ಯಾನವೊಂದನ್ನು ಬರೆಯುತ್ತಿದ್ದರು. ಅದು ಪೂರ್ಣವಾಗದೆಯೇ ಅವರು ನಮ್ಮನ್ನು ಅಗಲಿದ್ದು ನಮ್ಮ ದುರದೃಷ್ಟ. ಆದರೇನು; ನಮ್ಮ ಜೀವೋತ್ಕರ್ಷಕ್ಕೆ ಬೇಕಾದ ಸಾಮಗ್ರಿಯನ್ನು ಇವರು ಈಗಾಗಲೇ ಒದಗಿಸಿದ್ದಾರೆ. ಅದನ್ನು ನಾವು ಸಾರ್ಥಕಪಡಿಸೋಣ.
ಇಂಗ್ಲಿಷಿನಲ್ಲಿ ಒಂದು ವಾಕ್ಯ ಬಹು ಪ್ರಚಾರದಲ್ಲಿದೆ: “Tell me your friends, I will tell you”. ಇದು ಎಷ್ಟು ಸತ್ಯ ಎಂಬುದು ಪದ್ಮನಾಭನ್ ಅವರ ಮಿತ್ರಗೋಷ್ಠಿಯಿಂದ ಸ್ವಯಂವೇದ್ಯ. ಅವರ ಮಿತವೃಂದ ಅಂದಿನ ಬೆಂಗಳೂರಿನ “Who’s who” ಪಟ್ಟಿಯಂತಿತ್ತು. ಸಮಾಜದ ಎಲ್ಲ ಬಗೆಯ ಗಣ್ಯರನ್ನೂ ಒಳಗೊಂಡಿತ್ತು. ಶ್ರೀಶ್ರೀ ರಂಗಪ್ರಿಯ ಮಹಾದೇಶಿಕರು, ವಿದ್ವಾನ್ ಎನ್. ರಂಗನಾಥಶರ್ಮರು, ಡಾ|| ಕೆ. ಎಸ್. ನಾಗರಾಜನ್, ಶ್ರೀ ಲಂಕಾ ಕೃಷ್ಣಮೂರ್ತಿ ಮುಂತಾದ ಸಂಸ್ಕೃತವಿದ್ವಾಂಸರಿದ್ದರು. ಶ್ರೀ ಜಿ. ವಿ. ಕೆ. ರಾವ್, ಶ್ರೀ ಎಂ. ಶ್ರೀನಿವಾಸರಾವ್, ಡಾ|| ಬಿ. ಪಿ. ರಾಧಾಕೃಷ್ಣ, ಡಾ|| ಎಚ್. ಕೆ. ರಂಗನಾಥ್ ಮೊದಲಾದ ಉನ್ನತೋನ್ನತ ಅಧಿಕಾರಿಗಳಿದ್ದರು. ವಿದ್ವಾನ್ ಆರ್. ಕೆ. ಶ್ರೀಕಂಠನ್, ವಿದ್ವಾನ್ ಎಸ್. ಶಂಕರ್, ವಿದ್ವಾನ್ ಆನೂರು ರಾಮಕೃಷ್ಣ, ವಿದ್ವಾನ್ ಆರ್. ಕೆ. ಪದ್ಮನಾಭ ಮೊದಲಾದ ಗಾಯಕ-ವಾದಕರಿದ್ದರು. ಡಿ.ವಿ.ಜಿ. ಅವರ ಶಿಷ್ಯವರ್ಗವಂತೂ ಸರಿಯೇ ಸರಿ. ಕನ್ನಡದ ಖ್ಯಾತ ಲೇಖಕರಾದ ಮಾಸ್ತಿ, ರಾಜರತ್ನಂ, ವಿ.ಸೀ., ಎಂ.ವಿ.ಸೀ. ಮೊದಲದ ಹಿರಿಯರಿದ್ದರು. ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಟಿ.ಎನ್.ಪಿ. ಅವರ ಮಿತ್ರವೃಂದದಲ್ಲಿ ಅನೇಕರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದರು. ಶ್ರೀನಿವಾಸರಾವ್ ಅವರ ಬಗೆಗೆ ಈಗಲೇ ಹೇಳಿಯಾಗಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಜಿ. ವಿ. ಕೆ. ರಾಯರು ಪದ್ಮನಾಭನ್ ಅವರ ಮನೆಗೆ ಬಂದುಹೋಗುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ನಾನೂ ಅಲ್ಲಿದ್ದೆ. ರಾಯರ ಮನೆಯಲ್ಲಿ ಟಿ.ಎನ್.ಪಿ. ಅವರ ಕಗ್ಗ, ರಘುವಂಶ ಮೊದಲಾದ ಗ್ರಂಥಗಳ ಅಧ್ಯಯನಗೋಷ್ಠಿ ಸಾಗುತ್ತಿತ್ತು. ಡಾ|| ನೀಲಕಂಠರಾವ್ ಮುಂತಾದವರು ಅಖಿಲಭಾರತದ ಖ್ಯಾತಿ ಗಳಿಸಿದ್ದರು. ಇಂಥ ಯಾರೊಬ್ಬ ಮಿತ್ರರ ಪ್ರಭಾವ-ವರ್ಚಸ್ಸುಗಳನ್ನು ಟಿ.ಎನ್.ಪಿ. ಯಾವುದೇ ರೀತಿಯಿಂದ ಸ್ವಪ್ರಯೋಜನಕ್ಕಾಗಿ ಬಳಸಿಕೊಳ್ಳಲಿಲ್ಲ. ಇದು ಹಾಗಿರಲಿ. ಎಂದೂ ಕೂಡ ಯಾರ ಬಳಿಯೂ ಇಂಥ ದೊಡ್ಡ ವ್ಯಕ್ತಿಗಳು ತಮಗೆ ತುಂಬ ಆತ್ಮೀಯರು, ನಿಕಟವರ್ತಿಗಳು ಎಂದು ಹೇಳಿಕೊಳ್ಳಲಿಲ್ಲ. ಡಿ.ವಿ.ಜಿ. ಅವರಿಗೆ ನಿಜವಾದ ಅರ್ಥದಲ್ಲಿ ಸಚ್ಛಿಷ್ಯರಾಗಿ ಬಾಳಿದರು. “ಯದೃಚ್ಛಾಲಾಭಸಂತುಷ್ಟಃ” ಎಂದು ನಡೆದುಕೊಂಡು “ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರಪೂಜನಮ್” ಎಂಬ ವಾಕ್ಯಕ್ಕೆ ಅನುಸಾರವಾಗಿ ಬದುಕಿದ ಪುಣ್ಯಶ್ಲೋಕರು ಟಿ.ಎನ್.ಪಿ.
ನನ್ನ ಒಂದು ದುರದೃಷ್ಟವೆಂದರೆ 1990ರಲ್ಲಿ ಉದ್ಯೋಗನಿಮಿತ್ತ ಬೆಂಗಳೂರು ಬಿಟ್ಟು ಹೊರಗೆ ಹೋದ ಮೇಲೆ ಈ ಮಹನೀಯರ ಒಡನಾಟ ಬಲುಮಟ್ಟಿಗೆ ತಪ್ಪಿಹೋಯಿತು. ನಾನು ಮತ್ತೆ ಬೆಂಗಳೂರಿಗೆ ಹಿಂದಿರುಗುವ ಹೊತ್ತಿಗೆ ಅವರೇ ನಮ್ಮನ್ನು ಅಗಲಿದ್ದರು. ಆದರೆ ಇಂದಿಗೂ ಅವರ ಮನೆಯ ನಂಟು ಮುಂದುವರಿದಿದೆ. ಅವರ ಶ್ರೀಮತಿ ಸುಬ್ಬಲಕ್ಷಮ್ಮನವರು, ಅವರ ಸುಪುತ್ರ ಮತ್ತಿತರ ಕುಟುಂಬದವರು ನನ್ನ ಸಂಪರ್ಕದಲ್ಲಿದ್ದಾರೆ.
ತಮ್ಮ ನಿಃಸ್ಪೃಹತೆ, ನಿರಹಂತೆ, ಸದಾಚಾರ, ಜೀವನರಾಸಿಕ್ಯ, ವೈದುಷ್ಯ, ಲೋಕಹಿತಾಸಕ್ತಿ ಮತ್ತು ದಯಾರ್ದ್ರ ಸ್ವಭಾವಗಳಿಂದ ಎಲ್ಲರ ಮೆಚ್ಚುಗೆ ಗಳಿಸಿ “ಎಲ್ಲರೊಳಗೊಂದಾಗುವ” ಸದ್ಗುಣಿ ಪದ್ಮನಾಭನ್. ತಮ್ಮ ಗುರುಗಳಾದ ಡಿ.ವಿ.ಜಿ. ಅವರ ಗರಡಿಯಲ್ಲಿ ಪಳಗಿ ಅವರ ಮಾತೊಂದನ್ನೇ ಬಾಳಿಗೆ ಬೆಳಕಾಗಿಸಿಕೊಂಡಿದ್ದರು:
ಗೌರವಿಸು ಜೀವನವ ಗೌರವಿಸು ಚೇತನವ
ಆರದೋ ಜಗವೆಂದು ಭೇದವೆಣಿಸದಿರು |
ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ
ದಾರಿಯಾತ್ಮೋನ್ನತಿಗೆ – ಮಂಕುತಿಮ್ಮ ||
ಈ ಪದ್ಯ ಪದ್ಮನಾಭನ್ನರಿಗೆ ತುಂಬ ಪ್ರಿಯವಾಗಿತ್ತು. ಯಾವಾಗಲೂ ಹೇಳಿಕೊಳ್ಳುತ್ತಿದ್ದರು.
ವಿಜ್ಞಾನವಿಷಯದಲ್ಲಿ ಪದವೀಧರರಾಗಿ ಸರ್ಕಾರದ ಉದ್ಯೋಗ ನೋಡುತ್ತಿದ್ದ ಇವರು ಸಾಹಿತ್ಯ-ಸಂಗೀತಗಳ ಜಗತ್ತಿಗೆ ಬಂದದ್ದೊಂದು ವಿಸ್ಮಯ. ಈ ಕ್ಷೇತ್ರಗಳ ಪ್ರಬುದ್ಧರು ನನ್ನ ಬಳಿ ಹೇಳುದ್ದುಂಟು: “ನಮಗೆ ಪದ್ಮನಾಭನ್ ಗುರುಸ್ಥಾನದಲ್ಲಿರಲು ತಕ್ಕವರು” ಎಂದು. ಇಂಥ ಹೃತ್ಪೂರ್ವಕವಾದ ಅಭಿಮಾನದ ಆದರವನ್ನು ಅನೇಕರಿಂದ ಗಳಿಸಿದ ಪುಣ್ಯ ಪದ್ಮನಾಭನ್ನರದು. ಧನ್ಯತೆಯ ಬಾಳು ಎಂದರೆ ಏನೆಂದು ನಮಗೆಲ್ಲ ತೋರಿಸಿಕೊಟ್ಟ ದಾರಿದೀಪ ಟಿ. ಎನ್. ಪದ್ಮನಾಭನ್. ಆ ಮಹಾಚೇತನಕ್ಕೆ “ಪುನಶ್ಚ ಭೂಯೋಽಪಿ ನಮೋ ನಮಸ್ತೇ”.