Kavisarvabhaumudu

ನೋರಿ ನರಸಿಂಹಶಾಸ್ತ್ರಿಗಳ “ಕವಿಸಾರ್ವಭೌಮುಡು”: ಒಂದು ಪರಿಚಯ - 3

ಆ ಕಾಲದ ಕವಿಗಳ ರೀತಿ-ನೀತಿಗಳು, ವಿವಿಧಕಲೆ-ಕ್ರೀಡೆಗಳ ವಿವರಗಳು, ವೈದಿಕ-ಲೌಕಿಕವೈಭವ-ವಿಶೇಷಗಳು ಮತ್ತಿತರ ಅನೇಕಸ್ವಾರಸ್ಯಗಳನ್ನು ನೋರಿಯವರು ತಮ್ಮ ಈ ಕಾದಂಬರಿಯಲ್ಲಿ ಹದವರಿತು ಬೆಸೆದಿದ್ದಾರೆ. ಶ್ರೀನಾಥನ ಹೆಂಡತಿಯ ತಮ್ಮನೊಬ್ಬನಿದ್ದ. ದುಗ್ಗನನೆಂಬುದು ಆತನ ಹೆಸರು. ಇವನೂ ತೆಲುಗುಕವಿ. “ನಾಚಿಕೇತೂಪಾಖ್ಯಾನ”ವೆಂಬ ಕಾವ್ಯವನ್ನು ಇವನು ಬರೆದಿದ್ದಾನೆ. ಪೋತನನು ಈ ದುಗ್ಗನನ ಸ್ನೇಹಿತ ಹಾಗೂ ಶ್ರೀನಾಥನ ಹೆಂಡತಿಗೆ ಪ್ರೀತಿಯ ಸೋದರಸದೃಶನೆಂದು ನೋರಿಯವರು ಕಲ್ಪಿಸಿದ್ದಾರೆ. ಇವರೆಲ್ಲ ಶ್ರೀನಾಥನಿಗಿಂತ ಇಪ್ಪತ್ತಿಪ್ಪತ್ತೈದು ವರ್ಷಗಳಿಗೆ ಚಿಕ್ಕವರು. ಕವಿಯಾಗಬೇಕೆಂಬ ಬಯಕೆಯನ್ನು ಹೊಂದಿದ ಯುವಕ ಪೋತನನೂ ವಿಜಯನಗರಕ್ಕೆ ಬಂದಿದ್ದನು. ಅದೇ ಸಮಯದಲ್ಲಿ ವಿಜಯನಗರದಲ್ಲಿ ಕುಮಾರವ್ಯಾಸನೂ (ನಾರಣಪ್ಪ) ವ್ಯಾಸಂಗನಿರತನಾಗಿದ್ದನು.

ನೋರಿ ನರಸಿಂಹಶಾಸ್ತ್ರಿಗಳ “ಕವಿಸಾರ್ವಭೌಮುಡು”: ಒಂದು ಪರಿಚಯ - 1

ಈಚೆಗೆ ನಮ್ಮ ದೇಶದ ಒಳಗೂ ಹೊರಗೂ ಭಾರತೀಯಪರಂಪರೆಯನ್ನು ಕುರಿತು ಕುತೂಹಲ ಮತ್ತು ನವೋತ್ಸಾಹಗಳು ಹೊಮ್ಮಿದಂತೆ ತೋರುತ್ತದೆ. ಈ ಮಾರ್ಪಾಡು ಸ್ವಾಗತಾರ್ಹವೇನೋ ದಿಟ, ಆದರೆ ಅದೆಷ್ಟೋ ಬಾರಿ ಇಂಥ ಕುತೂಹಲ-ಉತ್ಸಾಹಗಳು ಅತಿರೇಕ-ಅವಿವೇಕಗಳಿಂದಲೂ ಅವ್ಯುತ್ಪತ್ತಿ-ಅಸಾಮರ್ಥ್ಯಗಳಿಂದಲೂ ಕೂಡಿರುವುದು ವಿಷಾದಕರ. ವಿಶೇಷತಃ ಪ್ರಾಚೀನಭಾರತೀಯಸಮಾಜ ಮತ್ತು ಇತಿಹಾಸ-ಪುರಾಣಗಳನ್ನು ಆಧರಿಸಿದ ಕಥೆ-ಕಾದಂಬರಿಗಳಂಥ ರಸಪ್ರಧಾನವಾದ ಕಾಲ್ಪನಿಕರಚನೆಗಳನ್ನು ವಿವಿಧಭಾರತೀಯಭಾಷೆಗಳಲ್ಲಿಯೂ — ಎಲ್ಲಕ್ಕಿಂತ ಮಿಗಿಲಾಗಿ ಇಂಗ್ಲಿಷ್ ನಲ್ಲಿಯೂ — ನಡಸುತ್ತಿರುವ ಹೊಸ ಪೀಳಿಗೆಯ ಬರೆಹಗಾರರ ಪೂರ್ವೋಕ್ತರೀತಿಯ ಕುಂದು-ಕೊರತೆಗಳನ್ನು ಕಂಡಾಗ ನನ್ನಂಥವರ ವ್ಯಥೆ ಮತ್ತೂ ಹೆಚ್ಚಾಗುತ್ತದೆ.