ಛಂದೋವಿವೇಕ

ಛಂದೋವಿವೇಕವು ವರ್ಣವೃತ್ತ, ಮಾತ್ರಾಜಾತಿ ಮತ್ತು ಕರ್ಷಣಜಾತಿ ಎಂದು ವಿಭಕ್ತವಾದ ಎಲ್ಲ ಬಗೆಯ ಛಂದಸ್ಸುಗಳನ್ನೂ ವಿವೇಚಿಸುವ ಪ್ರಬಂಧಗಳ ಸಂಕಲನ. ಲೇಖಕರ ದೀರ್ಘಕಾಲಿಕ ಆಲೋಚನೆಯ ಸಾರವನ್ನು ಒಳಗೊಂಡ ಈ ಹೊತ್ತಗೆ ಪ್ರಧಾನವಾಗಿ ಛಂದಸ್ಸಿನ ಸೌಂದರ್ಯವನ್ನು ಲಕ್ಷಿಸುತ್ತದೆ. ತೌಲನಿಕ ವಿಶ್ಲೇಷಣೆ ಮತ್ತು ಅಂತಃಶಾಸ್ತ್ರೀಯ ಅಧ್ಯಯನಗಳ ತೆಕ್ಕೆಗೆ ಬರುವ ಬರೆಹಗಳೂ ಇಲ್ಲಿವೆ. ಶಾಸ್ತ್ರಕಾರನಿಗಲ್ಲದೆ ಸಿದ್ಧಹಸ್ತನಾದ ಕವಿಗೆ ಮಾತ್ರ ಸ್ಫುರಿಸಬಲ್ಲ ಎಷ್ಟೋ ಹೊಳಹುಗಳು ಕೃತಿಯ ಮೌಲಿಕತೆಯನ್ನು ಹೆಚ್ಚಿಸಿವೆ. ಈ ಗ್ರಂಥವು ತನ್ನ ಹೆಸರಿಗೆ ತಕ್ಕಂತೆ ಸಾವಿರಾರು ವರ್ಷಗಳ ಇತಿಹಾಸವುಳ್ಳ ಛಂದಃಶಾಸ್ತ್ರವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಬಗೆಯನ್ನೂ ಬೇರೆ ಬೇರೆ ಕಾರಣಗಳಿಂದ ಅದರಲ್ಲಿ ಏರ್ಪಟ್ಟ ಅಗ್ರಹಣ, ದುರ್ಗ್ರಹಣ, ಅನ್ಯಥಾಗ್ರಹಣ ಮುಂತಾದ ಲೋಪ-ದೋಷಗಳನ್ನೂ ವಿವರಿಸಿ ಯುಕ್ತಾಯುಕ್ತವಿವೇಕವನ್ನು ಮೂಡಿಸುತ್ತದೆ.