ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ—ಉಪಸಂಹಾರ
ಶೇಷಣ್ಣನವರ ಜೀವನದ ಕಡೆಯ ದಶಕಗಳಲ್ಲಿ ಬಂದೆರಗಿದ ಆಘಾತವೆಂದರೆ ಅವರ ಧರ್ಮಪತ್ನಿ ಶಾರದಮ್ಮನವರ ವಿಸ್ಮೃತಿರೋಗ. ಎಷ್ಟೆಲ್ಲ ಸಂಪ್ರದಾಯದ ಹಾಡು, ಸ್ತೋತ್ರ, ಗೀತಗಳನ್ನು ವಾಚೋ ವಿಧೇಯವಾಗಿ ಇರಿಸಿಕೊಂಡಿದ್ದ ಅವರಿಗೆ ಒಂದು ಅಕ್ಷರವನ್ನೂ ಮಾತನಾಡಲಾಗದಂಥ ಭೀಕರವಿಸ್ಮೃತಿ ಬಂದೆರಗಿತ್ತು. ಅವರಿಗೆ ತಮ್ಮ ದೇಹದ ಮೇಲೆಯೇ ನಿಯಂತ್ರಣವಿರುತ್ತಿರಲಿಲ್ಲ. ಮನೆಯಿಂದ ಹೊರಟರೆ ಮತ್ತೆ ಬರುವ ದಾರಿ ಗೊತ್ತಾಗುತ್ತಿರಲಿಲ್ಲ. ಅನುದಿನದ ಗೃಹಕೃತ್ಯಗಳಿರಲಿ, ವೈಯಕ್ತಿಕವಾದ ಕೆಲಸಗಳನ್ನು ನಿರ್ವಹಿಸಲು ಕೂಡ ಅರಿವಾಗುತ್ತಿರಲಿಲ್ಲ. ಇದೊಂದು ಬಗೆಯಲ್ಲಿ ಬೆಳೆದ ಮಗುವಿನ ಪರಿಸ್ಥಿತಿ. ಇಂಥ ಅನಾರೋಗ್ಯದ ತೊಂದರೆ ಎಂಥದ್ದೆಂಬುದನ್ನು ನಾನು ಆ ಬಳಿಕ ನನ್ನ ತಾಯಿಗೆ ಇದೇ ರೀತಿಯ ಸ್ಥಿತಿ ಬಂದಾಗಲೇ ಅರಿತದ್ದು, ಅನುಭವಿಸಿದ್ದು.