...
 

ವ್ಯಾಸವಟದ ಬೀಳಲುಗಳ ನಡುವೆ

This article is part of 2 in the series Vyasa Vata


(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ)

ಹಿನ್ನೆಲೆ

ಅರ್ಷಕಾವ್ಯಗಳೆಂದೂ ಇತಿಹಾಸಗಳೆಂದೂ ಹೆಸರಾದ ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಸಾರಸ್ವತಲೋಕವನ್ನು ಪ್ರಭಾವಿಸಿದಂತೆ ಜಗತ್ತಿನ ಮತ್ತಿನ್ನಾವ ಪ್ರಾಚೀನಕಾವ್ಯಗಳೂ ಆಯಾ ಪ್ರಾಂತಗಳ ಸಾಹಿತ್ಯವನ್ನು ಪ್ರೇರಿಸಿಲ್ಲ. ಈ ಮಾತು ರಾಮಾಯಣ-ಮಹಾಭಾರತಗಳಿಂದ ಪ್ರಭಾವಿತವಾದ ಗೀತ-ನೃತ್ಯ-ನಾಟ್ಯ-ಚಿತ್ರ-ಶಿಲ್ಪಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಹೆಚ್ಚೇನು, ನಮ್ಮ ದೇಶದ ಸಮಗ್ರಸಂಸ್ಕೃತಿಯೇ ಇವುಗಳಿಂದ ಉಜ್ಜೀವಿತವಾಗಿದೆ.

ಈ ಭೂಮಕಾವ್ಯಗಳ ಪೈಕಿ ವೇದವ್ಯಾಸರ ದರ್ಶನವೆನಿಸಿದ ಮಹಾಭಾರತವು ಮಿಗಿಲಾದ ಪ್ರಭಾವವನ್ನು ಮಾಡಿರುವುದು ಅನುಭವವೇದ್ಯ. ದಿಟವೇ, ರಾಮಾಯಣ-ಭಾಗವತಗಳು ಮತ್ತು ಶಿವ-ಶಕ್ತಿಯರ ಪುರಾಣಕಥೆಗಳು ನಮ್ಮ ಜನತೆಯನ್ನು ಶ್ರದ್ಧಾದೃಷ್ಟಿಯಿಂದ ವ್ಯಾಪಕವಾಗಿ ಪ್ರಭಾವಿಸಿವೆ. ಆದರೆ ಅಪ್ಪಟ ಮಾನವಸ್ವಭಾವದರ್ಶನವನ್ನು ಮಹಾಭಾರತವು ಮಾಡಿಸಿದಂತೆ ಮತ್ತಾವ ಆರ್ಷಗ್ರಂಥಗಳು ಈ ಮಟ್ಟದ ವ್ಯಾಪ್ತಿಯಲ್ಲಿ ಮಾಡಿಲ್ಲದ ಕಾರಣ ವ್ಯಾಸರ ಸೃಷ್ಟಿ ಸರ್ವಾತ್ಮನಾ ಅಸಮಾನ. ಇಂದಿಗೂ ಕಪ್ಪು-ಬಿಳುಪು ಬಣ್ಣಗಳ ನಡುವಿರುವ ಅದೆಷ್ಟೋ ವರ್ಣಚ್ಛಾಯೆಗಳ ವಿವರಗಳನ್ನು ಮನುಜಲೋಕದ ಮಟ್ಟಿಗೆ ವಿಸ್ತರಿಸಿ ನೋಡಿಕೊಳ್ಳಲು ಮಹಾಭಾರತಕ್ಕಿಂತ ಮಿಗಿಲಾದ ಸಾರಸ್ವತಸೃಷ್ಟಿಯಿಲ್ಲ. ಈ ಕಾರಣದಿಂದಲೇ ಅಲ್ಲಿಯ ಇತಿವೃತ್ತ ತುಂಬ ಸಂಕೀರ್ಣ ಹಾಗೂ ರೋಚಕ. ಯಾವಾಗ ಪಾತ್ರಚಿತ್ರಣ ಮತ್ತು ಕಥಾವಿಸ್ತರಗಳು ಆಕರ್ಷಕವೂ ಆಳವೂ ಆಗುತ್ತವೆಯೋ ಆಗ ಬಗೆಬಗೆಯ ವರ್ಣನೆಗಳಿಗೆ ಎಲ್ಲಿಲ್ಲದ ಅವಕಾಶ ದೊರೆಯುತ್ತದೆ. ಆದರೆ, ಇಂಥ ವರ್ಣನೆಯು ಕೇವಲ ಉದ್ದೀಪನವಿಭಾವವಿಶ್ರಾಂತವಾದ ಸಾಂಪ್ರದಾಯಿಕವಿಧಿಯ (ನಗರ, ಸಮುದ್ರ, ಪರ್ವತ, ಆರಣ್ಯ, ಋತುಗತಿ, ಸೂರ್ಯೋದಯ, ಚಂದ್ರೋದಯ ಇತ್ಯಾದಿ) ಅಷ್ಟಾದಶವರ್ಣನೆಗಳಂಥ ಅಂಶಗಳಿಗೆ ಸೀಮಿತವಾಗದೆ, ಆಲಂಬನವಿಭಾವಗಳ (ಪಾತ್ರಗಳ) ಸ್ವಭಾವಗಳು, ಅವುಗಳ ಸ್ಥಾಯಿ ಮತ್ತು ವ್ಯಭಿಚಾರಿಭಾವಗಳ ತೊಡಕು-ತೋಟಿಗಳು ಮತ್ತು ಇವೆಲ್ಲವುಗಳ ಮೂಲಕ ತೋರಿಕೊಳ್ಳುವ ಅನುಭಾವವಿಶೇಷಗಳು (ವಿವಿಧಪಾತ್ರಗಳ ದೈಹಿಕ-ವಾಚಿಕಪ್ರತಿಕ್ರಿಯಾಭಿವ್ಯಕ್ತಿಗಳು) ಮುಂತಾದ ರಸಸೂತ್ರಪರಿನಿಷ್ಠಿತವಾದ ಚಿತ್ತಲೋಕದ ಕಾರ್ಯ-ಕಾರಣಭಾವಸರಣಿಯ ವಿಶದಚಿತ್ರಣವೇ ಆಗುವ ಕಾರಣ ರಸಸ್ಫೂರ್ತಿಗೆ ಕೊರತೆಯೇ ಆಗದು. ಇನ್ನು ರಸವಾದರೋ ಬೋಧ-ಮೋದಗಳ ಸಮಾಹಾರವಾದ ಕಾರಣ ನಮ್ಮನ್ನೂ ನಮ್ಮೊಳಹೊರಗಿನ ಜೀವಜಗತ್ತನ್ನೂ ನಮಗೆ ಆತ್ಮೀಕರಿಸಿಕೊಡುತ್ತದೆ. ಹೀಗಾಗಿ ಇಲ್ಲಿಯ ಅನುಭವ ಅನ್ಯಾದೃಶ, ಅನುಪದವಾಂಛಿತ.

ಈ ಕಾರಣದಿಂದಲೇ ಆಧುನಿಕಭಾರತೀಯಸಾಹಿತಿಗಳು ತಮ್ಮ ಪೂರ್ವಸೂರಿಗಳಿಗಿಂತ ಮಿಗಿಲಾಗಿ ಮಹಾಭಾರತಕ್ಕೆ ಒಲಿದಿದ್ದಾರೆ. ದಿಟವೇ, ಮಹಾಭಾರತದಲ್ಲಿ ತೋರಿಕೊಳ್ಳುವ ದಟ್ಟವಾದ ವಾಸ್ತವಪ್ರಜ್ಞೆಯೇ ಅದೇಷ್ಟೋ ಬಾರಿ ನಮ್ಮ ಆಧುನಿಕಲೇಖಕರನ್ನು ಸೆಳೆದಿರುವುದುಂಟು. ಆದರೆ ರಸದೃಷ್ಟಿಗೆ ಪೂರಕವಲ್ಲದ ರೀತಿಯಲ್ಲಿ ವಾಸ್ತವವನ್ನು ಗ್ರಹಿಸಿದರೆ ಅದು ಕಲೆಯೇ ಆಗದ ಕಾರಣ ಅಂಥ ಅವಿಚಾರಿತೋತ್ಸಾಹವನ್ನು ಉಪೇಕ್ಷಿಸಬೇಕು; ಮಾತ್ರವಲ್ಲ, ಈ ಮೂಲಕ ತಲೆದೋರುವ ಪ್ರಯೋಜನಕಾರ್ಪಣ್ಯವನ್ನೂ ನಿರ್ದಯವಾಗಿ ತಿರಸ್ಕರಿಸಬೇಕು. ಒಟ್ಟಿನಲ್ಲಿ ನಮ್ಮ ಕಾಲಕ್ಕೆ ಮಹಾಭಾರತವು ಹಿಂದಿನವರಿಗಿಂತ ಮಿಗಿಲಾಗಿ ವಿಶ್ವಜೀವನದರ್ಶನಸಾಮಗ್ರಿ. ಇದಕ್ಕೆ ಮತ್ತೂ ಒಂದು ಪ್ರಬಲಕಾರಣವಿದೆ: ಹಿಂದಿನವರ ಪಾಲಿಗೆ ಮಹಾಭಾರತವೊಂದು ಇತಿಹಾಸವಾಗಿ, ಧರ್ಮಶಾಸ್ತ್ರವಾಗಿ, ಪುರಾಣವಾಗಿ, ದರ್ಶನವಾಗಿ, ಶ್ರದ್ಧೆಯಾಗಿ ಹಲವು ಬಗೆಯಲ್ಲಿ ಅರ್ಥಪೂರ್ಣವೆನಿಸಿಯೂ ತನ್ನ ಕೇವಲ ಮಾನವಸ್ವಭಾವದ ಪ್ರಗಲ್ಭದರ್ಶನದ ವರ್ಚಸ್ಸನ್ನು ಅದೊಂದು ಮಟ್ಟಿಗೆ ಮರೆಮಾಚಿಕೊಂಡಂತಿತ್ತೆಂದರೆ ಸರಿಯಾದೀತು. ಆದರೆ ಆಧುನಿಕಜನತೆಗೆ ಇಂಥ ಕರ್ತೃತಂತ್ರನಿಷ್ಠಸಂಗತಿಗಳು ಗೌಣವಾಗಿ ವಸ್ತುತಂತ್ರನಿಷ್ಠವಿಚಾರವೆನಿಸಿದ ಚಿತ್ತವೃತ್ತಿವಿಲಾಸವೇ ಮುಖ್ಯವೆನಿಸುವ ಕಾರಣ ಮಹಾಭಾರತದ ಅನನ್ಯಾವಲಂಬನ ಮಿಗಿಲಾಗಿದೆ.

ಇಂಥ ನೆಲೆಯಿಂದ ಕಂಡಾಗಲೇ ಮಹಾಭಾರತವು ಹೆಚ್ಚು ಅರ್ಥಪೂರ್ಣವಾಗುತ್ತದೆ, ಮತ್ತೂ ಹೆಚ್ಚಾಗಿ ರಸಮಯವೆನಿಸುತ್ತದೆ. ವಸ್ತುತಃ ಈ ದೃಷ್ಟಿಯನ್ನು ಕಾವ್ಯ(ಕಲಾ)ಸಾಮಾನ್ಯಕ್ಕೇ ಅನ್ವಯಿಸಬೇಕೆಂಬುದು ಭಾರತೀಯಸೌಂದರ್ಯಮೀಮಾಂಸೆಯ ನಿರ್ಣಯ. ನಮ್ಮ ಹಿಂದಿನವರಲ್ಲಿಯೂ ಯಾವ ಕವಿ/ಕಲಾವಿದನಿಗೆ ಈ ಬಗೆಯ ದೃಷ್ಟಿ ಪ್ರಬಲಿಸಿತ್ತೋ ಅಂಥವನಷ್ಟೇ ರಸಸೃಷ್ಟಿಯನ್ನು ಚೆನ್ನಾಗಿ ಮಾಡಬಲ್ಲನೆಂಬ ತಥ್ಯ ರಸಿಕವೇದ್ಯ. ಹೀಗಾಗಿ ಪ್ರಾಕ್ತನ-ಅದ್ಯತನಭೇದಗಳಿಲ್ಲದೆ ಕಂಡಾಗ ಮಾನವಭಾವಕೇಂದ್ರಿತವಾದದ್ದೇ ಕಲಾಸಾಮಾನ್ಯದ ವ್ಯಾಪಾರಸರ್ವಸ್ವ; ಮತ್ತದು ದೇಶ-ಕಾಲಾತೀತಮೌಲ್ಯವೆಂದು ತಿಳಿಯುತ್ತದೆ.

ಉಪಕ್ರಮ

ವ್ಯಾಸಮಹಾಭಾರತವನ್ನು ಈ ನೆಲೆಗಟ್ಟಿನಿಂದ ಸ್ವೀಕರಿಸಿ ರೂಪಿತವಾದ ಮೂರು ಸಾಹಿತ್ಯಕೃತಿಗಳನ್ನು ಮೂಲದೊಡನೆ ತೌಲನಿಕವಾಗಿ ಪರಿಶೀಲಿಸುವುದು ಪ್ರಕೃತಪ್ರಯತ್ನ. ಆದರೆ ಸ್ಥಳಪರಿಮಿತಿಯ ಕಾರಣ ಈ ತೌಲನಿಕಾಧ್ಯಯನ ಕೇವಲ ತಾತ್ತ್ವಿಕದಿಕ್ಸೂಚಿಯಲ್ಲದೆ ವಿಸ್ತೃತವಿಮರ್ಶೆಯಲ್ಲ. ಅದರೆ ಈ ಸೂತ್ರವನ್ನು ಹಿಡಿದು ಕೃತವಿದ್ಯರು ಯಾರೇ ಅಗಲಿ ಪ್ರಬುದ್ಧವೂ ರಮಣೀಯವೂ   ಆದ ಭಾಷ್ಯವನ್ನು ರಚಿಸಬಹುದೆಂಬುದರಲ್ಲಿ ಸಂದೇಹವಿಲ್ಲ.

ವ್ಯಾಸಮಹಾಭಾರತವನ್ನು ವಿಜಯನಗರಸಾಮ್ರಾಜ್ಯಾವಧಿಯ ಅತ್ಯುಚ್ಚಸಾರಸ್ವತಸಾಧನೆಯೆನ್ನಬಹುದಾದ ಕುಮಾರವ್ಯಾಸನ “ಕರ್ಣಾಟಭಾರತಕಥಾಮಂಜರಿ”, ಭಾರತೀಯನವೋತ್ಥಾನದಲ್ಲಿ ಬಹುಮುಖಸಾಧನೆ ಮಾಡಿದ ಗುಜರಾತಿನ ಕನ್ಹಯ್ಯಲಾಲ್ ಮಾಣಿಕ್ಯಲಾಲ್ ಮುನ್ಷಿ ಅವರ “ಕೃಷ್ಣಾವತಾರ” ಕಾದಂಬರಿಶ್ರೇಣಿ ಮತ್ತು ನಮ್ಮ ಕಾಲದಲ್ಲಿ ದಂತಕಥೆಯೇ ಆದ ಮಹಾಲೇಖಕ ಎಸ್. ಎಲ್. ಭೈರಪ್ಪನವರ “ಪರ್ವ” ಕಾದಂಬರಿಯೊಡನೆ ತೌಲನಿಕವಾಗಿ ಚಿಂತಿಸಲಿರುವ ಈ ಲೇಖನದ ಉದ್ದೇಶ ಮಹತ್ತ್ವಾಕಾಂಕ್ಷೆಯದೇ ಹೌದಾದರೂ ಈ ಮೊದಲೇ ನಿವೇದಿಸಿದಂತೆ ಸೂತ್ರಮಾತ್ರದ್ದು.

ಇಲ್ಲಿ ಪರಿಶೀಲನೀಯವಾದ ನಾಲ್ಕೂ ಕೃತಿಗಳು ಒಂದೇ ಇತಿವೃತ್ತವನ್ನು ಆಶ್ರಯಿಸಿದ್ದರೂ ಪರಿಣಾಮತಃ ಬೇರೆಯೇ ಆದ ನಾಲ್ಕು ಬಗೆಯವೆಂದೇ ಹೇಳಬೇಕು. ವ್ಯಾಸಭಾರತವು ಇವೆಲ್ಲಕ್ಕೂ ಮೂಲ ಮತ್ತದು ಸಂಸ್ಕೃತದಲ್ಲಿರುವ ಶ್ಲೋಕಬದ್ಧವಾದ ಆರ್ಷಕಾವ್ಯ. ಇದರಲ್ಲಿ ಉಕ್ತಿವೈಚಿತ್ರ್ಯಕ್ಕಿಂತ ಒಟ್ಟಂದದ ಪ್ರವಾಹರೂಪವಾಗ್ಧೋರಣೆಯೇ ಪ್ರಧಾನ. ಅಲ್ಲದೆ ಇಲ್ಲಿ ಅಪ್ಪಟ ಕಾವ್ಯಕ್ಕಿಂತ ಹೊರಚ್ಚಾದ ವ್ಯುತ್ಪತ್ತಿಭಾಗದ ಶಾಸ್ತ್ರಾಂಶಗಳೂ ಶ್ರದ್ಧಾಂಶಗಳೂ ಅನೇಕ. ಇವುಗಳಲ್ಲಿ ಆಧಿಭೌತಿಕ, ಆಧಿದೈವಿಕ ಮತ್ತು ಆಧಿಯಾಜ್ಞಿಕವಾದ ಎಷ್ಟೋ ಸಂಗತಿಗಳು ಸೇರಿವೆ. ಇಷ್ಟಾದರೂ ಇಲ್ಲಿಯ ಪ್ರಸ್ಫುಟಪಾತ್ರಚಿತ್ರಣವೈವಿಧ್ಯ, ಮನುಷ್ಯಸ್ವಭಾವದ ಶಾಂತೋಗ್ರ-ನೃಶಂಸೋದಾರ-ಮಧುರಭೀಕರಸಂಗತಿಗಳನ್ನೆಲ್ಲ ಅನೂಹ್ಯವಾದ ನಿರ್ಮಮತಾಟಸ್ಥ್ಯದ ಸಹಾನುಭೂತಿಯಿಂದಲೇ ಚಿತ್ರಿಸುವ ದಾರ್ಶನಿಕದೀಪ್ತಿ ಮತ್ತು ಪುರುಷಾರ್ಥಸಮಗ್ರತೆಯ ಮೌಲ್ಯಮೀಮಾಂಸೆಯನ್ನು ರಸಧ್ವನಿಯ ಮಟ್ಟದಲ್ಲಿ ನಿರ್ವಹಿಸುವ ಋಷಿಪ್ರತಿಭೆಗಳು ಎಂಥವರನ್ನೂ ಜುಮುಗುಟ್ಟಿಸುತ್ತವೆ.

ಕುಮಾರವ್ಯಾಸಭಾರತವು ಕನ್ನಡಸಾಹಿತ್ಯದ ಮಧ್ಯಯುಗದಲ್ಲಿ, ನಡುಗನ್ನಡದ ಷಟ್ಪದೀಮಾಧ್ಯಮದಲ್ಲಿ, ವರ್ಣಕರೂಪದಲ್ಲಿ ರಚಿತವಾದ ಹಾಡುಗಬ್ಬ. ಆದರೆ ಇಲ್ಲಿಯ ಉಕ್ತಿವೈಚಿತ್ರ್ಯ, ವಕ್ರತಾವಿಲಾಸ, ನಿರರ್ಗಳನಿರೂಪಣಕ್ರಮ ಮತ್ತು ಇವೆಲ್ಲವನ್ನೂ ಕಥನ ಹಾಗೂ ಪಾತ್ರಚಿತ್ರಣಗಳಿಗಾಗಿ ಮೀಸಲಿಡುವ ಸಮಷ್ಟಿದೃಷ್ಟಿಗಳ ಕಾರಣ ಎಣೆಯಿಲ್ಲದ ಭಾವತೀವ್ರತೆಯ ನಡುವೆಯೂ ಊಹಿಸಲಾಗದಂಥ ಆಭಿಜಾತ್ಯವು ಸಾಕ್ಷಾತ್ಕರಿಸಿದೆ. ಮೂಲದ ಆಧಿದೈವಿಕಾಂಶಗಳನ್ನು ಯಥಾವತ್ತಾಗಿ ಅಂಗೀಕರಿಸಿ ಅತಿಮಾನುಷಸಂನಿವೇಶಗಳನ್ನೆಷ್ಟನ್ನೋ ಚಿತ್ರಿಸಿಯೂ ದಿಟವಾದ ಅಧ್ಯಾತ್ಮದ ಜೀವನಾಡಿಯಾದ ಮಾನುಷಚಿತ್ತವೃತ್ತಿಗಳನ್ನು ಹೃದಯಂಗಮವಾಗಿ ನಿರೂಪಿಸಿರುವುದು ಈ ಕಾವ್ಯದ ರಸಪಕ್ಷಪಾತಕ್ಕೆ ಮಹಾನಿದರ್ಶನ.

ಕೃಷ್ಣಾವತಾರವು ಇಂಗ್ಲಿಷ್ ಭಾಷೆಯಲ್ಲಿ ರೂಪುಗೊಂಡ ಏಳು ಸುದೀರ್ಘಸಂಪುಟಗಳ ಕಾದಂಬರೀಮಾಲೆ. ಇಷ್ಟಾಗಿಯೂ ಇದು ಅಪೂರ್ಣ. ಮೂಲಕಥೆಯ ಅಲೌಕಿಕಾಂಶಗಳನ್ನು ಪಕ್ಕಕ್ಕಿರಿಸಿ ವಾಸ್ತವೇತಿವೃತ್ತವನ್ನಷ್ಟೇ ಪುನರ್ನಿರೂಪಿಸಲು ತೊಡಗುವ ಈ ಕೃತಿಯು ಭಾರತೀಯೇತರಭಾಷೆಯಲ್ಲಿ ರಚಿತವಿದ್ದೂ ಅಪ್ಪಟ ಭಾರತೀಯಗದ್ಯಕಾವ್ಯವೆಂಬಂತೆ ಪ್ರತೀತಗೊಳ್ಳುವುದು ಇಲ್ಲಿಯ ಸ್ತುತ್ಯಸಾರಸ್ವತಸಾಧನೆ. ಹಾಗೆಂದ ಮಾತ್ರಕ್ಕೆ ಇದು ತೀರ ಕಾವ್ಯಮಯವಾದ ಶೈಲಿಯಲ್ಲಿ ರೂಪುಗೊಂಡಿದೆಯೆಂದಲ್ಲ. ದಿಟವೇ, ಇಲ್ಲಿಯ ಹಲವು ಭಾಗಗಳು ಕಾವ್ಯಸ್ಪರ್ಶದಿಂದ ಕೂಡಿವೆಯಾದರೂ ಪ್ರಧಾನವಾಗಿ ನಿರಲಂಕೃತವಾದರೂ ಚಿತ್ತಾಕರ್ಷಕವಾದ ಓಜಸ್ವಿಶೈಲಿ ತನ್ನ ಮೇಲ್ಮೆಯನ್ನು ತೋರಿದೆ. ಇಲ್ಲಿಯ ಕಥಾವಿಸ್ತರವು ಮುಖ್ಯವಾಗಿ ಮಹಾಭಾರತವನ್ನಾಧರಿಸಿದ್ದರೂ ತನ್ನ ಇತಿವೃತ್ತವ್ಯಾಪ್ತಿಗಾಗಿ ಹರಿವಂಶ, ವಿಷ್ಣುಪುರಾಣ, ಬ್ರಹ್ಮವೈವರ್ತಪುರಾಣ, ಭಾಗವತಪುರಾಣ ಮುಂತಾದ ಇತರ ಆಕರಗಳನ್ನು ಆಶ್ರಯಿಸಿದೆ. ಅಲ್ಲದೆ, ಲೇಖಕರೇ ಸ್ವಾತಂತ್ರ್ಯ ವಹಿಸಿ ತಮ್ಮ ಕಲ್ಪನೆಯನುಸಾರ ರೂಪಿಸಿರುವ ಕಥಾಸಂದರ್ಭಗಳೂ ಪಾತ್ರಗಳೂ ಅಸಂಖ್ಯ. ಇಷ್ಟಾಗಿಯೂ ಇದು ವ್ಯಾಸದರ್ಶನಕ್ಕೆ ವಿರುದ್ಧವಾಗಿಲ್ಲವೆಂಬುದು ಗಮನಾರ್ಹ.

ಪರ್ವವು ನಾವೆಲ್ಲ ಬಲ್ಲಂತೆ ಹೊಸಗನ್ನಡದಲ್ಲಿ ರಚಿತವಾದ ಸುದೀರ್ಘಕಾದಂಬರಿ. ಮುನ್ಷಿಯವರ ಕೃತಿಯಂತೆಯೇ ಇದು ಕೂಡ ಮೂಲಮಹಾಭಾರತವನ್ನು ವಾಸ್ತವನೇಪಥ್ಯದಲ್ಲಿ ಪುನಾರೂಪಿಸುವ ಪ್ರಯತ್ನ. ಇಲ್ಲಿ ಕೂಡ ಲೇಖಕರು ಇತಿವೃತ್ತನಿರ್ಮಾಣದಲ್ಲಿ ಅನ್ಯಪ್ರಾಚೀನಮೂಲಗಳನ್ನು ಕೆಲಮಟ್ಟಿಗೆ ಆಶ್ರಯಿಸಿರುವುದಲ್ಲದೆ ಸ್ವತಂತ್ರಕಲ್ಪನೆಗೂ ವಿಪುಲಾವಕಾಶ ನೀಡಿದ್ದಾರೆ. ಮುನ್ಷಿಯವರ ಮಾಧ್ಯಮದಂತೆಯೇ ಭೈರಪ್ಪನವರದೂ ಗದ್ಯವೇ ಆದರೂ ಇಲ್ಲಿರುವುದು ರೊಮ್ಯಾಂಟಿಕ್ ಭಾವದ ಲೇಶವೂ ಇಲ್ಲದ ಶೀತಲೋಜಸ್ವಿಶೈಲಿ. ಆಡುಮಾತಿನ ವ್ಯಾಪಕಪ್ರಯೋಗವಿದ್ದರೂ ಮತ್ತೆ ಮತ್ತೆ ಆವರಿಸಿಕೊಳ್ಳುವ ಧ್ವನಿಪೂರ್ಣಭಾಷೆ ತನ್ನ ರಚನಾಸಂಕೀರ್ಣತೆ ಮತ್ತು ಆವರಣನಿರ್ಮಾಣಶಾಲೀನವಾದ ವ್ಯುತ್ಪತ್ತಿಗಳ ಕಾರಣ ವಿಶಿಷ್ಟವಾಗಿದೆ.

ಇದಿಷ್ಟು ಸಾಮಾನ್ಯಪರಿಚಯದ ಬಳಿಕ ತೌಲನಿಕಾಧ್ಯಯನದ ಸಾಂಕೇತಿಕಪೂರ್ಣತೆಗಾಗಿ ನಾವು ಇನ್ನಷ್ಟು ಆಳಕ್ಕಿಳಿದು ಕೃತಿಗಳನ್ನು ಪರಿಕಿಸೋಣ.

ಶ್ರೀಮನ್ಮಹಾಭಾರತ

ಮೊದಲಿಗೆ ವ್ಯಾಸಭಾರತವನ್ನೇ ಕಂಡರೆ ಅದು  ಸಮಗ್ರಭಾರತೀಯಸಂಸ್ಕೃತಿಯ ವಿಶ್ವಕೋಶವಾಗಿ, ಸನಾತನಧರ್ಮದ ಸಾಹಿತ್ಯರೂಪವಾಗಿ, ಇತಿಹಾಸ-ಪುರಾಣ-ಶಾಸ್ತ್ರ-ಕಾವ್ಯಗಳೇ ಮೊದಲಾದ ಸಕಲರೀತಿಯ ವಾಙ್ಮಯಗಳ ಸಮಷ್ಟಿಸತ್ತ್ವವಾಗಿ ಹರಳುಗಟ್ಟಿರುವುದೇ ಅದಕ್ಕೊಂದು ಮಹಾರ್ಹತೆಯೆನಿಸುತ್ತದೆ. ಆದರೆ ಇವೆಲ್ಲ ಭಾರತೀಯರಾದ ನಮಗೂ ಭಾರತೀಯತೆಯ ವಿಚಾರದಲ್ಲಿ ಆಸ್ಥೆ ವಹಿಸಿದ ಇನ್ನಿತರರಿಗೂ ಮುಖ್ಯವೆನಿಸಬಲ್ಲುವಲ್ಲದೆ ಅಪ್ಪಟವಾಗಿ ಮನುಜಹೃದಯದ ಭಾವಸರ್ವಸ್ವವನ್ನಷ್ಟೇ ಅರಿಯಬೇಕೆಂಬವರಿಗಲ್ಲ. ಮಹತ್ತ್ವದ ಸಂಗತಿಯೆಂದರೆ ಮಹಾಭಾರತವು ಇಂಥವರ ಅಭೀಪ್ಸೆಯನ್ನು ವಿಶೇಷವಾಗಿ ಅನುಲಕ್ಷಿಸಿದೆಯೆಂಬುದಕ್ಕೆ ಸಾಕ್ಷಿಯಾಗಿ “ಲೋಕಗರ್ಭಗೃಹಂ ಕೃತ್ಸ್ನಂ ಯಥಾವತ್ಸಂಪ್ರಕಾಶಿತಮ್” ಎಂಬ ಅದರದೇ ಮಾತನ್ನು ಗಮನಿಸಬಹುದು. ಅಂತೆಯೇ ಇದನ್ನು ಅಸಮಾನವಾಗಿ ಸಾಧಿಸುವಲ್ಲಿ ಅದು ತನ್ನ ಉಳಿದೆಲ್ಲ ಅಧಿಭೂತ-ಅಧಿದೈವ-ಅಧಿಯಜ್ಞಸಾಮಗ್ರಿಯನ್ನು ಬಲುಮಟ್ಟಿಗೆ ಬಳಸಿಕೊಳ್ಳುತ್ತದೆಂಬುದು ಸಂತೋಷದ ಮಾತು. ಹೀಗಾಗಿಯೇ ಕೇವಲ ವಾಸ್ತವದೃಷ್ಟಿಯಿಂದ ಭಾರತಕಥೆಯನ್ನು ನಿರ್ವಹಿಸಲೆಳಸುವವರಿಗೆ ಎಟುಕಲಾಗದ ಸೌಂದರ್ಯ-ಸ್ವಾರಸ್ಯಗಳೆಷ್ಟೋ ಈ ಕ್ರಮದಲ್ಲಿ ಬಿತ್ತರಗೊಳ್ಳುತ್ತವೆ. ಉದಾಹರಣೆಗೆ ಕುರುಕ್ಷೇತ್ರಯುದ್ಧಾನಂತರ ತನಗೆ ನಮಸ್ಕರಿಸಲು ಬಂದಿದ್ದ ಪಾಂಡವರ ಪೈಕಿ ತನ್ನ ನೂರ್ವರು ಮಕ್ಕಳನ್ನೂ ನುಂಗಿನೊಣೆದಿದ್ದ ಭೀಮನನ್ನು ಅಪ್ಪಿಕೊಂಡು ಕೊಲ್ಲಲೆಂದು ಹೊಂಚಿದ್ದ ಅಂಧನೃಪ ಧೃತರಾಷ್ಟ್ರನ ಸೇಡು-ಸಂಕಟಗಳೊಡವರಿದ ಕಬಂಧಬಾಹುಗಳಿಗೆ ಸಿಲುಕಿದ ಉಕ್ಕಿನ ವೃಕೋದರಮೂರ್ತಿಯೇ ಪುಡಿಪುಡಿಯಾಯಿತೆಂಬ ಅತಿಮಾನುಷಸಂನಿವೇಶವಾಗಲಿ, ಕುಂತಿಗೆ ಮಕ್ಕಳಾದರೆಂಬ ಸುದ್ದಿ ತಿಳಿದೊಡನೆಯೇ ಅಸೂಯೆಯಿಂದ ತನ್ನ ಗರ್ಭವನ್ನು ತಾನೇ ಘಾತಿಸಿಕೊಂಡು ಚೂರುಚೂರಾಗಿಸಿಕೊಂಡ ಗಾಂಧಾರಿಯ ಶತಧಾ ವಿದೀರ್ಣಗರ್ಭಪಿಂಡಗಳೇ ದುರ್ಯೋಧನಾದಿ ಶತಸೋದರಸಂತತಿಯೆಂಬ ಅಲೌಕಿಕಸಂಗತಿಯಾಗಲಿ, ದ್ರುಪದನ ದ್ರೋಣದ್ವೇಷದಾವಾನಲವೇ  ಅವನ ಪರಾಭವಕ್ಕೆ ತಕ್ಕ ಪ್ರತೀಕಾರವನ್ನೆಸಗಲು ಯಾಗಾಗ್ನಿಯಲ್ಲಿ ಹುಟ್ಟಿಸಿಕೊಂಡ ಸಂತಾನವಾಗಿ ದ್ರೌಪದೀ-ಧೃಷ್ಟದ್ಯುಮ್ನರು ಹೊಮ್ಮಿದರೆಂಬ ದೈವಿಕಸಂದರ್ಭವಾಗಲಿ ಸಹೃದಯರಿಗೆ ಅತ್ಯದ್ಭುತವಾದ ಮಾನವಸ್ವಭಾವದರ್ಶನವನ್ನು ಮಾಡಿಸುತ್ತವೆ. ಆದರೆ ಇಂಥ ಸ್ವಾರಸ್ಯಗಳು ನಮ್ಮ ಅಂತರಂಗವನ್ನು ಮುಟ್ಟಬೇಕೆಂದರೆ ಇವುಗಳನ್ನು ಕಾವ್ಯಕಲೆಯ ವಿವಿಧಾಂಗಗಳಾದ ಧ್ವನಿ (ವಸ್ತುಧ್ವನಿ, ಅಲಂಕಾರಧ್ವನಿ, ಅತ್ಯಂತತಿರಸ್ಕೃತವಾಚ್ಯಧ್ವನಿ ಇತ್ಯಾದಿ), ಅಲಂಕಾರ (ರೂಪಕ, ಅನ್ಯಾಪದೇಶ, ಪರ್ಯಾಯೋಕ್ತ ಇತ್ಯಾದಿ), ಕವಿಸಮಯ (ಸಂಕೇತ, ಪ್ರತೀಕ, ತತ್ತ್ವ ಇತ್ಯಾದಿ) ಮುಂತಾದುವುಗಳ ಮೂಲಕ ಹಾಯಿಸಬೇಕು. ಇದು ಅಕೃತಕವಾಗಿ  ಅನುಕೂಲಿಸಬೇಕೆಂದರೆ ಮೂಲಕವಿಯಲ್ಲಿಯೇ ಅಂಥ  ಸಂವಿಧಾನಕೌಶಲವೂ ರಚನಾಪಾಟವವೂ ದರ್ಶನವೂ ಇರಬೇಕು. ಇಲ್ಲವಾದಲ್ಲಿ ಇಂಥ ಅಲೌಕಿಕ-ಆಧಿದೈವಿಕಪ್ರಕಲ್ಪಗಳೆಲ್ಲವೂ ಬರಿಯ ಅವಾಸ್ತವಗಳಾಗಿ, ಕ್ಷುದ್ರಾದ್ಭುತಗಳಾಗಿ, ಕೇವಲ ಮತೋನ್ಮತ್ತರಿಗೂ ಬಾಲಭಾವದವರಿಗೂ ಉಪಾದೇಯವೆನಿಸುತ್ತವೆ. ಈ ಪರಿಯ ಅಗ್ಗದ ಸರಕಿಗೆ ನಮ್ಮ ಮತ-ಪುರಾಣ-ಜಾನಪದವಾಙ್ಮಯವೆಷ್ಟೋ ಸಾಕ್ಷಿಯಾಗಿದೆ.

ಮಹಾಭಾರತವು ಮಾನವಸ್ವಭಾವದ ವಿಶ್ವರೂಪವಾಗಿ, ನಿರ್ಮಮತಾಟಸ್ಥ್ಯದ ನಿರೂಪಣೆಯಾಗಿ, ರಾಗ-ದ್ವೇಷಗಳ ಮತ್ತು ವಿಕಟವಿಷಮಸಂದರ್ಭಗಳ ಸುಳಿಯಲ್ಲಿ ಸಿಲುಕಿದ ಯಾವುದೇ ಜೀವದ ದಯನೀಯದುರ್ಭರವಾಸ್ತವಚಿತ್ರಣವಾಗಿ ಅದೆಷ್ಟೇ ಮಹತ್ತ್ವವನ್ನು ಗಳಿಸಿದ್ದರೂ ಇವಕ್ಕೆಲ್ಲ ಹೆಗಲೆಣೆಯಾಗಿ ನಿಲ್ಲುವಂಥದ್ದು ಅಲ್ಲಿಯ ಜೀವನಪ್ರೀತಿ ಮತ್ತು ಮಾನುಷೋನ್ನತಿ. ಜೊತೆಗೆ, ಅಂತರ್ಗಾಮಿಯಾಗಿ ಅನಿರೀಕ್ಷಿತಸಂದರ್ಭಗಳಲ್ಲಿಯೂ ಮಿಂಚುವ ಮಾನುಷೌದಾರ್ಯ ಈ ಮಹಾಕಾವ್ಯದ ಜೀವಾತುವೆನ್ನಬೇಕು. ಏಕೆಂದರೆ ಇದೇ ಭಾವಜಗತ್ತಿಗೆ ಶಾಶ್ವತವಾಗಿ ದಕ್ಕಿರುವ ಭರವಸೆ. ತಾನೇ ಹಿಂದಿನ ದಿನ ಸೆಣಸಿ ಹಾಳುಬಾವಿಗೆ ನೂಕಿದ ತನ್ನ ಗೆಳತಿಗೆ ಮರುದಿನ ಸ್ವಕುಲಹಿತಕ್ಕಾಗಿ ದಾಸಿಯಾಗುವಂಥ ತೀರ್ಮಾನವನ್ನು ಮಾಡಿದ ಶರ್ಮಿಷ್ಠೆಯಾಗಲಿ, ತಂದೆಯ ಆಸೆಗಾಗಿ ತಾನಾಗಿ ಬಲವದ್ಬ್ರಹ್ಮಚರ್ಯವನ್ನು ಕಠೋರದೀಕ್ಷೆಯಾಗಿ ನೆಮ್ಮಿದ ಭೀಷ್ಮನಾಗಲಿ, ಸವತಿಯ ಮೇಲೆ ಮತ್ಸರವಿದ್ದೂ ಆಕೆಯ ಮಕ್ಕಳಲ್ಲಿ ತಾನು ಹೆತ್ತ ಸುತರಿಗಿಂತ ಹೆಚ್ಚಿನ ಪ್ರೀತಿಯನ್ನು ತೊರಿದ ಕುಂತಿಯಾಗಲಿ, ಇಂದ್ರನ ಕೈಹಿಡಿದು ಅಮರಳಾಗುವುದಕ್ಕಿಂತ ತಾನೊಲಿದ ನಳನ ಮಡದಿಯಾಗಿ ಮಣ್ಣಿಗೇ ಮಿಗುವೆನೆಂದು ನಿಶ್ಚಯಿಸುವ ದಮಯಂತಿಯಾಗಲಿ, ಯಾವುದೇ ಗುಣಲೋಪಗಳಿಲ್ಲದಿದ್ದರೂ ದಾಸೀಪುತ್ರನೆಂಬ ಒಂದೇ ಕಾರಣದಿಂದ ಸಿಂಹಾಸನವಂಚಿತನಾಗಿದ್ದೂ ಆ ಬಗೆಗೆ ಲವಲೇಶವೂ ಚಿಂತೆಯಿಲ್ಲದೆ ಆತ್ಮಧರ್ಮವನ್ನು ಅನನ್ಯವಾಗಿ ನಿರ್ವಹಿಸಿದ ವಿದುರನಾಗಲಿ, ಯಾವುದೇ ಮಹಾವೀರನ ಪರಾಕ್ರಮಪ್ರದರ್ಶನದ ಚಿರವಾಂಛಿತಮಧರಸ್ವಪ್ನವೆನ್ನಬಹುದಾದ ಕುರುಕ್ಷೇತ್ರಸಂಗ್ರಾಮದಲ್ಲಿ ಸಮಗ್ರಸಮರಾಧ್ವರದ ಬ್ರಹ್ಮಸ್ಥಾನದಲ್ಲಿದ್ದೂ ನೈರಾಯುಧ್ಯನಿಶ್ಚಯಕ್ಕೆ ನಿಂತು ತಾನೊಲಿದ ಗೆಳೆಯನಿಗೆ ಮಹಾವೀರನ ಪಟ್ಟವನ್ನು ಯಾವುದೇ ವಾಚ್ಯತೆಯ ದೋಷವಿರದೆ ಬಿಟ್ಟುಕೊಟ್ಟ ಶ್ರೀಕೃಷ್ಣನಾಗಲಿ, ತಾನು ನರಕದಲ್ಲಿದ್ದರೆ ತನ್ನವರಿಗೆ ಸ್ವಲ್ಪ ಹಿತವೆಂದು ತಿಳಿದೊಡನೆ ಸಶರೀರಲಬ್ಧಸ್ವರ್ಗವನ್ನೂ ತಿರಸ್ಕರಿಸಿದ ಯುಧಿಷ್ಠಿರನಾಗಲಿ ಜಗತ್ತಿನಲ್ಲಿ ಆಗೀಗ ಮಿಂಚಿ ಮರೆಯಾಗುವ ಮಾನುಷೋನ್ನತಿಯ ದೀಪಧಾರಿಗಳು. ಈ ಕಾರಣದಿಂದಲೇ ಮಹಾಭಾರತವು ಮತ್ತೆ ಮತ್ತೆ ನೆನೆಪಿಸಿಕೊಡುವ ಸಾರೋಕ್ತಿಗಳಲ್ಲೊಂದು: “ಆನೃಶಂಸ್ಯಂ ಪರೋ ಧರ್ಮಃ” (ಇದು ರಾಮಾಯಣದ ಪಲ್ಲಿವಿಯೂ ಆಗಿದೆಯೆಂಬುದು ಗಮನಾರ್ಹ).

ಸ್ವಧರ್ಮವನ್ನು ಅರಿಯದೆ ಸದ್ಯಕ್ಕೆ ಸಂಗ್ರಾಮವನ್ನು ತೊರೆದು ಸಂನ್ಯಸ್ತನಾದರೂ ಆ ಬಳಿಕ ಮತ್ತೆ ಪ್ರವೃತ್ತಿಗೆ ತೊಡಗುವ ತುಡಿತವಾದೀತೆಂದು ಅರ್ಜುನನನ್ನು ಎಚ್ಚರಿಸುವ ಶ್ರೀಕೃಷ್ಣನ ಮಾತಾಗಲಿ, ಪಾಂಡವರ ಮೇಲೆ ಯುದ್ಧಕ್ಕೇ ಸಿದ್ಧವಾಗುವುದು ಅನಿವಾರ್ಯವಾದಾಗಲೂ ಅವರಲ್ಲಿ ಅನುದಾರವಾದ ವೈರವನ್ನು ತೋರದೆ ಶುದ್ಧಕ್ಷಾತ್ರಪೌರುಷದಿಂದಷ್ಟೇ ಸೆಣಸುವುದು ಸಮುಚಿತವೆಂದು ಕರ್ಣನಿಗೆ ತಿಳಿಯಹೇಳಿದ ಶರತಲ್ಪಗತ ಶಾಂತನವನ ಸಲಹೆಯಾಗಲಿ, ತನ್ನ ಕಾನೀನಪುತ್ರ ಕರ್ಣನಿಗೆ ಸಂದರ್ಭಗಳ ಒತ್ತಡದಿಂದ ತನ್ನಿಂದಲೇ ಅನ್ಯಾಯವಾಯಿತೆಂಬ ಅಸಹಾಯಕಸಂಕಟದಿಂದ ಸಂತಪ್ತಳಾದ ತೊಂಬತ್ತರ ವೃದ್ಧೆ ಕುಂತಿಗೆ “ಮಗಳೆ, ಆತ್ಮವಂತರು ಮಾಡಿದ್ದೆಲ್ಲ ಸರಿ; ಮಾಡಿದ್ದೆಲ್ಲ ಶುಭ. ನೀನು ಅಂಥವಳು. ಈ ಬಗೆಗೆ ಶೋಕ ಬೇಕಿಲ್ಲ” ಎಂದು ಸಂತೈಸಿದ ವಿಶಾಲಬುದ್ಧಿಗಳಾದ ಭಗವಾನ್ ವೇದವ್ಯಾಸರ ವಾಣಿಯಾಗಲಿ—ದುರ್ಭರಸಂನಿವೇಶಗಳಲ್ಲಿ ನಾವು ನಚ್ಚಬಹುದಾದ ನಡೆ ಏನೆಂಬುದನ್ನು ನಿರೂಹ್ಯಸಾರಳ್ಯದಿಂದ ಮನದಟ್ಟಾಗಿಸುತ್ತವೆ.

ಹತ್ತುಸಾವಿರ ಗಂಧಸಿಂಧುರಗಳ ಬಲವುಳ್ಳ ಭೀಮಸೇನನು ತನ್ನವರನ್ನು ಅರಗಿನ ಮನೆಯಿಂದ ಏಕಾಂಗಿಯಾಗಿ ಹೊತ್ತು ಹಿಡಿಂಬವನಕ್ಕೆ ತಂದು ವಿಶ್ರಮಿಸಿಕೊಳ್ಳುವಂತೆ ಮಾಡಿದ ಬಳಿಕ, ಅವರ ಪರಿಸ್ಥಿತಿಗಾಗಿ ನೀರವಕಾಂತಾರದಲ್ಲಿ ಅಸಹಾಯನೆಂಬಂತೆ ತಾನೊಬ್ಬನೇ ಕಂಬನಿ ಮಿಡಿಯುವುದಾಗಲಿ, ಮುಂದೆ ಇವನೇ ಕೀಚಕಸಂತ್ರಸ್ತೆಯಾಗಿ ಬಂದು ಬೇಡಿದ ದ್ರೌಪದಿಯ ಸೇವಾವೃತ್ತಿಪರಿಕ್ಲಿಷ್ಟಕರಗಳ ದುಸ್ಸ್ಥಿತಿಯನ್ನು ಕಂಡು ಕಂಬನಿದುಂಬಿದ್ದಾಗಲಿ—ಎಂಥ ಮಹಾಬಲಿಷ್ಠರಿಗೆ ಏನೆಂಥ ಅಸಹಾಯಕತೆಗಳು ಒದಗುತ್ತವೆಂಬುದನ್ನೂ ಅಂಥ ಕಠೋರಬಲಿಷ್ಠರ ಅಂತರಂಗವೂ ಅದೆಷ್ಟು ಕೋಮಲವೆಂಬುದನ್ನೂ ಹೃದಯಭೇದಕವಾಗಿ ತಿಳಿಸುತ್ತವೆ. ಇದು ಸ್ವಯಂ ಧೀರತೆಯಿಂದ ಅಂಧತ್ವವನ್ನು ಆರೋಪಿಸಿಕೊಂಡಿದ್ದರೂ ತಾನು ಶತಪುತ್ರಪ್ರಸವಿನಿಯಲ್ಲ, ಶತದುಃಖಪ್ರಸವಿನಿಯೆಂದು ಸಂಕಟಪಡುವ ಗಾಂಧಾರಿಯ ಬಗೆಗೂ ಸಲ್ಲುವ ಮಾತು; ಪಾಂಡವರನ್ನು ಗೆಲ್ಲಿಸಿದ ಕೃಷ್ಣನ ಜನರೆಂಬ ಬಲ್ಮೆ-ಮೇಲ್ಮೆಗಳಿದ್ದೂ ಪರಸ್ಪರ ಸೆಣಸಾಡಿಕೊಂಡು ಸಪ್ತಾಹಾಂತದಲ್ಲಿ ತಮ್ಮ ಸಮಸ್ತಾಸ್ತಿತ್ವವನ್ನೂ ನಿರ್ಣಾಮ ಮಾಡಿಕೊಂಡ ಯಾದವರಿಗೂ ಅನ್ವಯಿಸುವ ತಥ್ಯ. ಹೆಚ್ಚೇನು, ಪಾಂಡವರಿಂದ ಸಾಮ್ರಾಜ್ಯವನ್ನೇ ಕಸಿದು ಅವರಿಗೆ ಸೂಜಿಮೊನೆಯೂರುವಷ್ಟರ ನೆಲವನ್ನೂ ಕೊಡೆನೆಂದು ಆಗ್ರಹಿಸಿ ಕಡೆಗೆ ಅರ್ಧ ಸತ್ತು ಬದುಕಿದ್ದಾಗಲೇ ನಾಯಿ-ನರಿಗಳ ಪಾಲಾದ ದುರ್ಯೋಧನನಿಗೂ ದಕ್ಕುವ ತೀರ್ಮಾನ.

ಹೀಗೆ ಯಾವ ನಿಟ್ಟಿನಲ್ಲಿ ಕಂಡರೂ ಭಾವನೆಗಳ ಭೂ-ವ್ಯೋಮ-ಪಾತಾಳಗಳನ್ನು ಶ್ರೀಮದ್ಭೀಕರಮಾರ್ಗದಿಂದ ಮನಮುಟ್ಟಿಸಬಲ್ಲ ಮಹನೀಯತೆ ಮಹಾಭಾರತದ್ದು. ತಾತ್ಪರ್ಯತಃ, ಅಧಿರಸವಾದ ಶಾಂತವಲ್ಲದೆ ಮತ್ತೇನನ್ನೂ ಕಡೆಗೆ ನಮ್ಮೊಳಗುಳಿಸದ ಲಯಲೀಲೆಯ ನಿರ್ದಯೌದಾರ್ಯ ಈ ಕವಿಬ್ರಹ್ಮನ ಸೃಷ್ಟಿಯದು.

To be continued.

Series Navigation
Shatavadhani Dr. R. Ganesh Vyasa ವ್ಯಾಸವಟದ ಬೀಳಲುಗಳ ನಡುವೆ r ganesh

Shatavadhani Dr. R. Ganesh

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.
Shatavadhani Dr. R. Ganesh Vyasa ವ್ಯಾಸವಟದ ಬೀಳಲುಗಳ ನಡುವೆ r ganesh