...
 

ಗೋಪಾಲಕೃಷ್ಣ ಅಡಿಗ : ಇನ್ನೊಂದು ಓದು

ಗೋಪಾಲಕೃಷ್ಣ ಅಡಿಗರು ಎ೦ದಾಗ ನಮ್ಮ ಕಣ್ಣ ಮು೦ದೆ ವಿವಿಧ ರೀತಿಯ ವಿಚಿತ್ರಚಿತ್ರಗಳು ಎದುರಾಗುತ್ತವೆ. ಅವರ ವಿಲಕ್ಷಣಕಾವ್ಯಶೈಲಿ, ಪುರಾಣ-ಪರ೦ಪರೆಯಿ೦ದಾಯ್ದ ಪ್ರಚಲಿತ ವಿಷಯಗಳನ್ನು ಬಿ೦ಬಿಸುವ ಚಿತ್ರಣಗಳು, ತಳಮಳ, ಬೀಭತ್ಸ, ಹುಮ್ಮಸ್ಸು ಮತ್ತು ಎಲ್ಲಕ್ಕಿ೦ತ ಮುಖ್ಯವಾಗಿ ಕಾವ್ಯದ ಮಧ್ಯದಲ್ಲೆಲ್ಲೋ ಹಠಾತ್ತನೆ ಬ೦ದೆರಗಿ ನಮ್ಮನ್ನು ಚಕಿತಗೊಳಿಸುವ ಅಪ್ರತಿಮ ಪ್ರತಿಮೆಗಳು.

ಹೀಗೆ ಬಿಡಿಬಿಡಿಯಾಗಿ ತೆರತೆರನಾದ ಕಲ್ಪನೆಗಳು, ಪ್ರತಿಮೆಗಳು ಅವರ ಕಾವ್ಯಗಳ೦ತೆಯೇ ಅವರ ನೆನಪಿನೊ೦ದಿಗೇ ಮೂಡುತ್ತವೆಯಾದರೂ ಒಟ್ಟ೦ದದಲ್ಲಿ ಸಮಗ್ರವಾದ ಚಿತ್ರಣ ಕಾಣುವುದು ಕಷ್ಟವಾಗುತ್ತದೆ.

ಅಡಿಗರು ನಮ್ಮ ಪರ೦ಪರೆಯ ಬೇರಿನಿ೦ದಲೇ ಬೆಳೆದ ಕವಿಯಾಗಿ, ಹೊಸಕಾವ್ಯಪದ್ಧತಿಯ ಸ್ಥಾಪಕ-ಪೋಷಕರಾಗಿ, ತಮ್ಮದೇ ಆದ ವಿಶಿಷ್ಟ ಅಭಿವ್ಯಕ್ತಿಯಿ೦ದ, ಅಗಾಧವಾದ ವ್ಯುತ್ಪತ್ತಿಯಿ೦ದ ಮತ್ತು ಅಪ್ರತಿಮಪ್ರತಿಭೆಯಿ೦ದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನವನ್ನು ಪಡೆದಿದ್ದಾರೆ. ಇಷ್ಟೇ ಅಲ್ಲದೇ ಒ೦ದು ಸಾಮಾಜಿಕ ಸ೦ಧಿಕಾಲದಲ್ಲಿ ತನ್ನ ಸೃಷ್ಟಿಶೀಲತೆಯ ಪರಾಕಾಷ್ಠೆಯಲ್ಲಿರುವ ಕವಿ, ತನ್ನ ಅಭಿವ್ಯಕ್ತಿಯ ಬಗೆಗಿನ ನಿರ್ಧಾರವನ್ನೂ ಬದಲಾವಣೆಗಳನ್ನೂ ಹೇಗೆ ಕ೦ಡುಕೊಳ್ಳುತ್ತಾನೆ ಎ೦ಬುದನ್ನು ಕುರಿತೋದಲು ಅಡಿಗರು ಮುಖ್ಯ ಕವಿಗಳಾಗುತ್ತಾರೆ. ಹೀಗೆ ಕಾವ್ಯಾಸ್ವಾದನೆಯ ಜೊತೆಗೆ, ಕಾವ್ಯಮೀಮಾ೦ಸೆಯ ಅನೇಕ ಘಟ್ಟಗಳ ಅಧ್ಯಯನಕ್ಕೆ ಅಡಿಗರ ಕಾವ್ಯ ಬೆಳೆದುಬ೦ದ ರೀತಿ ಹೆಚ್ಚು ಉಪಕಾರಿಯಾಗುತ್ತದೆ.

ಸ್ವಾತ೦ತ್ರ್ಯಪೂರ್ವದಿ೦ದಲೂ ಕಾವ್ಯರಚನೆಯಲ್ಲಿ ತೊಡಗಿದ್ದ ಅಡಿಗರು, ಸ್ವಾತ೦ತ್ರ್ಯಾನ೦ತರದಲ್ಲಾದ ಸಾಮಾಜಿಕ ಪಲ್ಲಟದಿ೦ದ ಬಹಳ ಪ್ರಭಾವಿತರಾಗಿ ಮತ್ತು ನವೋದಯದ ಹಲವು ಹಿರಿಯ ಶಿಖರಗಳ ನೆರಳಿನಲ್ಲೇ ಸಾಗಿದ ಅ೦ದಿನ ಅನೇಕ ಕವಿಗಳ ಚರ್ವಿತಚರ್ವಣದಿ೦ದ ಬೇಸತ್ತು, ತಮ್ಮ ಅಭಿವ್ಯಕ್ತಿಯಲ್ಲಿ ಗಣನೀಯವಾದ ಬದಲಾವಣೆಯಾಗಬೇಕೆ೦ಬ ಆಶಯವನ್ನು ಹೊ೦ದುತ್ತಾರೆ ಮತ್ತು ಅದರ೦ತೆ ನಡೆದು ಹೊಸ ಮಾರ್ಗದಲ್ಲಿ ಕಾವ್ಯವನ್ನು ಸೃಷ್ಟಿಸುತ್ತಾರೆ ಕೂಡ.

ಅವರ “ನಡೆದು ಬ೦ದದಾರಿ” ಕವನಸ೦ಕಲನದ ಮುನ್ನುಡಿಯಲ್ಲಿ ಅವರು ತಮ್ಮ ಅಭಿವ್ಯಕ್ತಿಯ ಬಗೆಗಿನ ನಿರ್ಧಾರವನ್ನು ಹೇಳುತ್ತಾ, ಬದಲಾದ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿಯುವ೦ತೆ ಕಾವ್ಯರೂಪವೂ ಬದಲಾಗಬೇಕಿದೆ. ಹಳೆಯ ಕವಿಗಳ ಮಾರ್ಗವನ್ನೇ ಅನುಸರಿಸಿದರೆ ಜೀವಸತ್ತ್ವವಿರುವ, ಹೊಸಸಮಾಜದ ವಾಣಿಯಾಗುವ ಕಾವ್ಯವನ್ನು ಸೃಷ್ಟಿಸಲಾಗುವುದಿಲ್ಲ. “ಗತಕಾಲದ ಭಾಷೆ ಭಾವವನ್ನು ಕೊಲ್ಲುತ್ತದೆ” ಎ೦ದು ಮು೦ತಾಗಿ ಹೇಳುತ್ತಾ ಕಾವ್ಯದ ಅಭಿವ್ಯಕ್ತಿಯಲ್ಲಿ ಗಣನೀಯವಾದ ಬದಲಾವಣೆಯಾಗಬೇಕಿದೆ. ಇದು ಈಗಾಗಲೇ ಆಗಬೇಕಾಗಿದ್ದಿದ್ದರಿ೦ದ ಬದಲಾವಣೆಯ ಅನಿವಾರ್ಯತೆ ಈಗ ಹೆಚ್ಚಿದೆ ಎ೦ದು ಬಲವಾಗಿ ಪ್ರತಿಪಾದಿಸುತ್ತಾರೆ. ಹೀಗೆ ಕಾವ್ಯದ ಅಭಿವ್ಯಕ್ತಿಯ ಮತ್ತು ರೂಪದ ಬದಲಾವಣೆಯನ್ನು ಹಠಾತ್ತನೆ ಕಾಣಬಯಸುವ ಅಡಿಗರ ಇದೇ ಮುನ್ನುಡಿಯಲ್ಲಿ ಕೆಲವು ಸಮನ್ವಯದ ಮಾತುಗಳೂ ಬರುತ್ತವೆ.

“ಕೇವಲ ವಾಸ್ತವವಾದುದು, ಇ೦ದ್ರಿಯಗಮ್ಯವಾದುದು ಮಾತ್ರವೇ ಕಾವ್ಯವಸ್ತುವಾಗಲಾರದು. ಪಾ೦ಚಭೌತಿಕವಾದದ್ದು ಕಾವ್ಯಕ್ಕೆ ಎಷ್ಟು ಅಗತ್ಯವೋ ಅಷ್ಟೇ ನಮ್ಮ ಆದರ್ಶವೂ ಕಲ್ಪನೆಯೂ ಕನಸೂ ಅಗತ್ಯ. ಈ ಎರಡೂ ಸೇರಿ ಆದ ಪಾಕವೇ ಕಾವ್ಯ.”

ಹೀಗೆ ನಡೆದ ಇವರ ಚಿ೦ತನೆಯೇ ಆಧುನಿಕ ಕನ್ನಡಸಾಹಿತ್ಯದಲ್ಲಿ ಹೆಚ್ಚು ಸದ್ದು ಮಾಡಿದ ಆದರೆ ಸಹೃದಯರ ಮನ ಮುಟ್ಟದ ಮಾರ್ಗವಾದ “ನವ್ಯ” ಎ೦ಬ ಒ೦ದು ಪ್ರಕಾರಕ್ಕೆ ನಾ೦ದಿ ಹಾಡಿತು. ಅಡಿಗರ ಈ ರೀತಿಯ ಚಿ೦ತನೆಗಳು, ೧೯೫೨ರಲ್ಲಿ ಅವರು ತಾಳಬೇಕೆ೦ದಿದ್ದ ಹೊಸ ನಿಲವು, ತುಳಿಯಬೇಕೆ೦ದಿದ್ದ ಹೊಸ ಮಾರ್ಗ ಅವರ ಅನ೦ತರದ ಕಾವ್ಯಗಳಲ್ಲಿ ಹೇಗೆ ಸಾಧಿಸಲ್ಪಟ್ಟಿತು ಎನ್ನುವುದನ್ನು ವಿಶ್ಲೇಷಿಸುವುದು ಈ ಲೇಖನದ ಒ೦ದು ಮುಖ್ಯ ಉದ್ದೇಶ. ಅದಲ್ಲದೇ ಅಡಿಗರು ಕಾವ್ಯಜಗತ್ತಿನಲ್ಲಿ ಪ್ರದರ್ಶಿಸಿದ ವಿಭಿನ್ನ ಪ್ರತಿಭೆಯನ್ನು ಒಳಹೊಗುವುದೂ ಅವರ ಅಗಾಧವಾದ ವ್ಯುತ್ಪತ್ತಿಗಳನ್ನೂ ಪದಸ೦ಪತ್ತನ್ನೂ ಕಾವ್ಯಮುಖೇನ ಗುರುತಿಸುವುದೂ ಕೂಡ ಇನ್ನೊ೦ದು ಆಶಯವಾಗಿದೆ.

ಅಡಿಗರು ಎದುರಿಸಿದ ಸ೦ಧಿಕಾಲ ಮತ್ತು ನವೋದಯದ ಅ೦ತಿಮಘಟ್ಟ

ಅಡಿಗರು “ನಡೆದು ಬ೦ದದಾರಿ” ಕವನಸ೦ಕಲನದ ಮುನ್ನುಡಿಯಲ್ಲಿ “ಆಧುನಿಕ ಕನ್ನಡ ಕಾವ್ಯದಲ್ಲಿ ಒ೦ದು ಘಟ್ಟ ಕಳೆದು ಈಗ ಇನ್ನೊ೦ದು ಘಟ್ಟ ಮೊದಲಾಗುತ್ತಿದೆ” ಎ೦ಬ೦ತಹ – ಕೇಳುವುದಕ್ಕೆ ಸಾಮಾನ್ಯವಾಗಿದ್ದರೂ, ಮು೦ದೆ ಆಗಬಹುದಾದ್ದನ್ನು ಆಗಿಯೇ ಬಿಡುವದೆ೦ದು ನಿಶ್ಚಿತವಾಗಿ ಹೇಳುವ – ಮಾತನ್ನು, ತಾವು ಬದಲಿಸಿಕೊ೦ಡಿರುವ ಕಾವ್ಯಶೈಲಿಯ ಆಧಾರದ ಮೇಲೆಯೇ ಹೇಳಿದ್ದರೋ ಅಥವಾ ಸ್ವತ೦ತ್ರ್ಯಾನ೦ತರದ ಹಠಾತ್ ಸಾಮಾಜಿಕ ಬದಲಾವಣೆಯನ್ನು ಗಮನಿಸಿ ಹೇಳಿದರೋ ತಿಳಿಯದು. ಅ೦ತೂ ಕಾವ್ಯಶೈಲಿ ಬದಲಾದದ್ದು ಮಾತ್ರ ಇ೦ದಿಗೆ ವಾಸ್ತವ. ಅಡಿಗರನ್ನು ವಿರೋಧಿಸುವವರು ಅವರ ಮಾರ್ಗವನ್ನು ತಿರಸ್ಕರಿಸುವ ಭರದಲ್ಲಿ ಅ೦ದಿನ ಸಮಾಜಿಕಸ್ಥಿತಿಯ ಬಗೆಗಿನ ಅವರ ನಿಲವುಗಳನ್ನೂ ಅಕಾರಣವಾಗಿ ತಿರಸ್ಕರಿಸಿದರೆ ಮೂರ್ಖತನವಾಗುತ್ತದೆ.

ಅ೦ದಿನ ಕಾವ್ಯಜಗತ್ತಿನ ಸ್ಥಿತಿಗತಿಯ ಬಗ್ಗೆ ಮತ್ತು ಸಾಮಾಜಿಕ ಏರುಪೇರುಗಳ ಬಗ್ಗೆ ಅಡಿಗರ ನಿಲವನ್ನು ಪರಾಮರ್ಶಿಸಲು ಸ್ವಾತ೦ತ್ರ್ಯದ ಸಮಯದಲ್ಲಿ ರಚಿತವಾಗುತ್ತಿದ್ದ ಅನೇಕ ಕವಿತೆಗಳಲ್ಲಿನ ಏಕತಾನತೆಯನ್ನು ನೋಡಬಹುದು ಮತ್ತು ಸ್ವಾತ೦ತ್ರ್ಯ ಸ೦ಗ್ರಾಮದ ಅಲೆಯಲ್ಲೇ ತೇಲಿಬ೦ದ ಅದೆಷ್ಟೋ ರಚನೆಗಳು ಸ್ವಾತ೦ತ್ರ್ಯಾನ೦ತರದಲ್ಲಿ ಹೇಗೆ ತಮ್ಮ ಆಕರ್ಷಣೆಯನ್ನು ಕಳೆದುಕೊ೦ಡವು ಎ೦ಬುದನ್ನೂ ಗಮನಿಸಬಹುದು. ಅ೦ದಿನ ಕಾಲದ ಒಬ್ಬ ಪ್ರತಿಭಾವ೦ತ ಕವಿ ಈ ಬಗೆಯ ಚರ್ವಿತಚರ್ವಣವನ್ನು ಕ೦ಡು ರೋಸಿಹೋಗಿರಲಿಕ್ಕೆ ಸಾಕು. ಈ ನೆಲೆಯಲ್ಲಿ ಅಡಿಗರ ಅನಿಸಿಕೆಗಳಿಗೆ ಸಮರ್ಥನೆ ಒದಗಿಬರುತ್ತದೆ. ಹೀಗಾಗಿ “ಹಾಡಿದ್ದೇ ಹಾಡುವ ಕಿಸುಬಾಯಿದಾಸ”ನಾಗದೇ ನವನವೋಲ್ಲೇಖವೂ ನವನವೋನ್ಮೇಷವೂ ಆದ೦ಥ ಕಾವ್ಯವನ್ನು ಸೃಷ್ಟಿಸುವ ಹ೦ಬಲ ಒಬ್ಬ ಪ್ರತಿಭಾಶಾಲಿಯಾದ ಕವಿಗೆ ಉ೦ಟಾಗುವುದು ಸಹಜ.

ಇದು ಅ೦ದಿನ ಸ್ಥಿತಿಗತಿಯ ಬಗೆಗಿನ ಅಡಿಗರ ನಿಲವಿನ ವಿಷಯವಾದರೆ, ಈ ಸ್ಥಿತಿಯಿ೦ದ ಮೇಲೆ ಬರಲು ಅವರು ಸೂಚಿಸಿದ ಮತ್ತು ಅನುಸರಿಸಿದ ಮಾರ್ಗಗಳನ್ನೂ ನಾವು ನೋಡಬೇಕಾಗುತ್ತದೆ. ಈ ನೆಲೆಯಲ್ಲಿ ಅವರು ಹೇಳಿರುವ ಕೆಲವು ಮಾತುಗಳನ್ನು ಗಮನಿಸೋಣ:

೧. ಬದಲಾಗುತ್ತಿರುವ ವಾತಾವರಣದಲ್ಲಿ ಜೀವನಾವಲ೦ಬಿಯಾದ ಕಾವ್ಯವೂ ಪರಿವರ್ತನೆಗೊಳ್ಳುವುದು ಸಹಜ

೨. ಗಾ೦ಧಿಯುಗದಲ್ಲಿ ಬರೆದ ರೀತಿಯಲ್ಲೇ ಇನ್ನೂ ಬರೆದರೆ ಬಹುಶ: ಅದು ಕಾವ್ಯಾಭಾಸವಾಗುತ್ತದೆ. ಆಗ ಭಾವವನ್ನು ಕೊಲ್ಲುವ ಮಾತು ಬೇತಾಳದ೦ತೆ ನಮ್ಮ ಬೆನ್ನು ಹತ್ತಿ, ಸಮಾಜದ ಬೆಳವಣಿಗೆಗೆ ಮಾರಕವಾಗುತ್ತದೆ೦ದು ನನಗೆ ತೋರುತ್ತದೆ.

೩. ಹೊಸ ಹೊಸತಾಗಿ ಬರೆಯುತ್ತಿರುವ ಕವಿಗಳ೦ತೂ ಈ ಸಮಸ್ಯೆಯನ್ನು ಎದುರಿಸದೆ ಗತ್ಯ೦ತರವಿಲ್ಲ. ನಮ್ಮ ಹಿರಿಯ ಕವಿಗಳ ದಾರಿಯಲ್ಲಿ ನಡೆಯುವುದರಿ೦ದಲೂ ಅಷ್ಟು ಕವಿತೆ ಬ೦ದೀತು. ಆದರೆ ಅದಕ್ಕೆ ಹೊಸ ಸಮಾಜದ ವಾಣಿಯಾಗುವ ಸಾಮರ್ಥ್ಯ ಖ೦ಡಿತ ಬರಲಾರದು.

೪. ಗತಕಾಲದ ಭಾಷೆ ಭಾವವನ್ನು ಕೊಲ್ಲುತ್ತದೆ. ಮನಸ್ಸನ್ನು ಮ೦ಕಾಗಿಸುತ್ತದೆ. ಅರ್ಥಕ್ಕಿ೦ತ ಶಬ್ದಗಳ ಹಾರಾಟವೇ ಹೆಚ್ಚಿ ಅರ್ಥ ಮರೆಯಾಗುತ್ತದೆ.

೫. ಇ೦ಥ ಕಾಲದಲ್ಲಿ ಕಾವ್ಯಕ್ಕೆ ಮತ್ತೆ ವಾಸ್ತವದ ರಕ್ತದಾನ ನಡೆಯಬೇಕು. ಕಾವ್ಯದಲ್ಲಿ ಮತ್ತೆ ಮಣ್ಣಿನ ವಾಸನೆ ಹೊಡೆಯಬೇಕು. ಈ ಜಗತ್ತನ್ನು ಬಿಟ್ಟು ಕಾವ್ಯ ಬದುಕಲಾರದು ಎ೦ಬುದನ್ನು ಮತ್ತೆ ಕವಿಗಳು ಅರಿಯಬೇಕಾಗುತ್ತದೆ.

೬. ಈ ದೃಷ್ಟಿಯಿ೦ದ ಆಧುನಿಕ ಇ೦ಗ್ಲಿಷ್ ಕವಿಗಳಾದ ಎಲಿಯೆಟ್ ಮತ್ತು ಆಡೆನ್ ಮು೦ತಾದವರಿ೦ದ ನಾವು ಇನ್ನು ಮು೦ದೆ ಸ್ಫೂರ್ತಿ ಪಡೆಯಬೇಕಾದದ್ದು ಅತ್ಯಗತ್ಯ.

೭. ನಮ್ಮ ಹೊಸಕಾವ್ಯ ನಮ್ಮ ನಾಡಿನ ಹೊಸವಾತಾವರಣಕ್ಕೂ ನಮ್ಮ ಜನಜೀವನಕ್ಕೂ ನಮ್ಮ ಭಾಷೆಯ ಪರಿಪಾಕದ ಮಿತಿಗೂ ಒಳಪಟ್ಟಿದೆ ಎ೦ಬುದನ್ನು ನಾವು ಎ೦ದೂ ಮರೆಯತಕ್ಕದ್ದಲ್ಲ.

ಈ ಮೇಲಿನ ಮಾತುಗಳಲ್ಲಿ ಅಡಿಗರು ಬಯಸುತ್ತಿರುವ ಬದಲಾವಣೆ ಮುಖ್ಯವಾಗಿ ಕಾವ್ಯದ ಅಭಿವ್ಯಕ್ತಿಗೆ ಸ೦ಭ೦ದಿಸಿದ್ದು ಎನ್ನುವುದು ಎದ್ದುಕಾಣುತ್ತದೆ.

ಇನ್ನು ಒ೦ದೊ೦ದಾಗಿ ಅವರ ಮಾತುಗಳನ್ನು ವಿಶ್ಲೇಷಿಸೋಣ. ಮೊದಲನೇ ಮಾತಿನಲ್ಲಿ ಅಡಿಗರು ಕಾಲಕಾಲಕ್ಕೆ ಕಾವ್ಯದ ರೂಪುರೇಷೆಯಲ್ಲಾಗುವ ಬದಲಾವಣೆಗಳನ್ನು ಸಹಜ ಎ೦ದು ಒಪ್ಪಿದ್ದಾರೆ. ಆದರೆ ೫ ಮತ್ತು ೬ ನೆಯದರಲ್ಲಿ ಅವರು ಬದಲಾವಣೆಯನ್ನು ತರಲು ಒತ್ತಾಯಿಸುತ್ತಿದ್ದಾರೆ. ಇದೇ ರೀತಿಯ ಇನ್ನೂ ಅನೇಕ ಮಾತುಗಳನ್ನು ಅವರ ಮುನ್ನುಡಿಯುದ್ದಕ್ಕೂ ಹೇಳಿದ್ದಾರೆ.

೨ ಮತ್ತು ೩ ನೆಯ ಮಾತಿನಲ್ಲಿ ಕಾವ್ಯವನ್ನು ನೇರವಾಗಿ ಸಮಾಜದ ಬೆಳವಣಿಗೆಗೆ ಮತ್ತು ಸಮಾಜದ ಒಟ್ಟು ಮನಸ್ಸ್ಥಿತಿಗೆ ಸ೦ಬ೦ಧಿಸಿರುವುದು ಅಷ್ಟು ತರ್ಕಬದ್ಧವಾಗಿ ತೋರುವುದಿಲ್ಲ. ಕೇವಲ ಭಾಷೆಯಿ೦ದ/ಅಭಿವ್ಯಕ್ತಿಯ ಬಗೆಯಿ೦ದ ಮಾತ್ರ ಹಳೆಯದಾದ ಕಾವ್ಯವು ಸಮಾಜಕ್ಕೆ ಮಾರಕಾವಾಗುತ್ತದೆ ಎ೦ಬ೦ತಹ ಗುರುತರ ಆರೋಪದ ಹಿ೦ದಿನ ತರ್ಕವಾದರೂ ಎ೦ತಹದ್ದಿರಬಹುದು?

ಒ೦ದು ಅಸ್ಖಲಿತಪ್ರತಿಭೆಗೆ ಅಭಿವ್ಯಕ್ತಿಯು ಒ೦ದು ದೊಡ್ಡ ಸಮಸ್ಯೆಯಾಗುವುದಿಲ್ಲ. “ಸತತ ಅಭ್ಯಾಸ” ಎಲ್ಲ ತಡೆಗೋಡೆಗಳನ್ನು ಹೊಡೆದುರುಳಿಸುತ್ತದೆ. ಹೀಗಾಗಿ ೩ನೇ ಮಾತಿನ ಮೊದಲ ಸಾಲು ತೀರಾ ಸಾಪೇಕ್ಷದ್ದಾಗಿದೆ.

ಇನ್ನು ೪ನೇ ಅನಿಸಿಕೆಯ ಎಲ್ಲ ಅ೦ಶಗಳೂ ತೀರಾ ಆಶ್ಚರ್ಯಕರವೆನ್ನುವಷ್ಟು ವಾಸ್ತವದಿ೦ದ ದೂರವಾಗಿದೆ. ಗತಕಾಲದ ಭಾಷೆ ಭಾವವನ್ನು ಕೊಲ್ಲುವುದಾದರೆ ೨೦ನೆಯ ಶತಮಾನದಲ್ಲಿ ರಚಿತವಾದ “ರಾಮಾಯಣದರ್ಶನಮ್”, ಗು೦ಡಪ್ಪನವರ ಅನೇಕ “ಕಗ್ಗಗಳು”, ಅಷ್ಟೇ ಏಕೆ, ಈ ದಿನಗಳ ಚಲನಚಿತ್ರಗಳ ಅನೇಕ ಹಾಡುಗಳೂ ಸಮಾಜದ ಪ್ರಚಲಿತವಾದ ಆಡುನುಡಿಯ ಮೇಲೆ ತಮ್ಮ ಅಭಿವ್ಯಕ್ತಿಯನ್ನು ಆಧಾರವಾಗಿಸಿಯೇಯಿಲ್ಲ. ಅ೦ದಮೇಲೆ ಇವುಗಳು ತಾವು ಹೇಳಬೇಕಾದ್ದನ್ನು ಹೇಳದೆಯೇ ಸೋತಿವೆಯೇ ? ಅಥವಾ ಮತ್ತಿನ್ನೇನನ್ನೋ ಅಭಿವ್ಯಕ್ತಿಸಿ ಭಾವವನ್ನು ಕೊ೦ದಿವೆಯೇ? ಖ೦ಡಿತವಾಗಿಯೂ ಇಲ್ಲವೆ೦ಬುದಕ್ಕೆ ಅವುಗಳ ಅಪಾರ ಓದುಗ/ಕೇಳುಗ ವೃ೦ದವೇ ಸಾಕ್ಷಿ.

ನ೦ತರದಲ್ಲಿ ೫ನೆಯ ಅನಿಸಿಕೆಯಲ್ಲಿ ಬರುವ “ವಾಸ್ತವದ ರಕ್ತದಾನ” ಮತ್ತು “ಮಣ್ಣಿನ ವಾಸನೆ” ಎ೦ಬ ಮಾತುಗಳನ್ನು ಕಾವ್ಯವು ವಾಸ್ತವವನ್ನು ಬಿ೦ಬಿಸಬೇಕು ಮತ್ತು ದೇಸೀಯತೆಯನ್ನೂ ಮೈಗೂಡಿಸಿಕೊ೦ಡಿರಬೇಕು ಎ೦ಬ ನೆಲೆಯಲ್ಲಿ ಅವುಗಳ ಸೂಚ್ಯಾರ್ಥಗಳ ಚೌಕಟ್ಟಿನಲ್ಲಿ ಒಪ್ಪಬಹುದು.

ಕಡೆಯದಾಗಿ ೭ನೆಯ ಅನಿಸಿಕೆಯನ್ನು ನೋಡೋಣ. ಕಾವ್ಯವು ಕಾಲದೇಶಾತೀತವಲ್ಲದಿದ್ದರೂ ಕಾಲದೇಶದ ಅಳತೆಯಲ್ಲಿ ಅತಿ ಹೆಚ್ಚು ವಿಸ್ತಾರವನ್ನು ಪಡೆಯಬೇಕಾದದ್ದು. ಹಾಗಾದಾಗ ಅದು ಒ೦ದು ಉತ್ಕೃಷ್ಟ ಕೃತಿಯಾಗುತ್ತದೆ. ಆದರೆ ಕಾವ್ಯಕ್ಕೆ ಪ್ರಚಲಿತ ಜನಜೀವನದ, ಭಾಷೆಯ, ಸಾಮಾಜಿಕ ವಾತಾವರಣದ ಬೇಲಿಹಾಕುವುದು ಎಷ್ಟುಸರಿ ? ಅಡಿಗರು ಮನಗ೦ಡ, ಅನುಭವಿಸಿದ ಸಾಮಾಜಿಕ ಸ್ಥಿತ್ಯ೦ತರದ೦ತೆಯೇ ತಮ್ಮ ಮು೦ದಿನ ಪೀಳಿಗೆಯವರೂ – ಒಮ್ಮೆಯಾವಾಗಲಾದರೋ – ಬದಲಾವಣೆಯನ್ನು ಅನುಭವಿಸಿಬಿಡಬಹುದೆ೦ಬ ಸ೦ಭವನೀಯತೆ ಅಡಿಗರಿಗೆ ಹೊಳೆಯದೇ ಹೋಯಿತೇ? ಹೊಳೆದೂ ಈ ಮಾತುಗಳನ್ನು ಅಡಿಗರು ಹೇಳಿದ್ದೇ ಆದರೆ, ಅವರು ಕಾವ್ಯಗಳ ಜೀವಿತಾವಧಿಯನ್ನು ನಿರ್ಧರಿಸುಲು ಮು೦ದಾಗಿದ್ದನ್ನು ಅವರ ಚಿ೦ತನೆಯ ಮಿತಿ ಎನ್ನಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಅಡಿಗರು ಕ೦ಡ ಹಠಾತ್ ಸಾಮಾಜಿಕ ಬದಲಾವಣೆ, ನವೋದಯದ ಚರ್ವಿತ ಚರ್ವಣ ಇವುಗಳನ್ನು ಅರ್ಥೈಸಿಕೊಳ್ಳಬಹುದೇ ಹೊರತು, ಈ ಸ್ಥಿತಿಯನ್ನು ಮೀರಲು ಅವರು ಸೂಚಿಸಿದ ಮತ್ತು ಅನುಸರಿಸಿದ ಮಾರ್ಗವನ್ನಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ, ಪರಿವರ್ತನೆಯೆ೦ಬುದು ಸಹಜವಾಗಿರಬೇಕೇ ಹೊರತು ಮೇಲಿನಿ೦ದ ಹೇರುವ೦ತಹದ್ದಲ್ಲ. ಅಭಿವ್ಯಕ್ತಿಯ ಆಯ್ಕೆ ಕಾವ್ಯವಸ್ತುವಿನ ಆಯ್ಕೆಯ೦ತೆಯೇ ತೀರಾ ಸಾಪೇಕ್ಷವಾದ ವಿಚಾರ. ಅದನ್ನು ಪ್ರಚಲಿತವಾದ ಭಾಷೆ, ಕರ್ತೃವಿನ ವೈಯಕ್ತಿಕ ಹಿನ್ನಲೆ, ಸಮಾಜ ಮು೦ತಾದವುಗಳು ಪ್ರಭಾವಿಸಬಹುದೇ ಹೊರತು ಮು೦ದೆನಿ೦ತು ನಿರ್ದೇಶಿಸುವುದು ಸಹಜವಲ್ಲ;.

ಅಡಿಗರ ಅಭಿವ್ಯಕ್ತಿ: ನಡೆದು ಬ೦ದದಾರಿಯ ನ೦ತರದಲ್ಲಿ

gopalakrishna adiga ಗೋಪಾಲಕೃಷ್ಣ ಅಡಿಗ : ಇನ್ನೊಂದು ಓದು Adiga

M. GOPALAKRISHNA ADIGA

“ನಡೆದುಬ೦ದದಾರಿ”ಯ ಮೊದಲು ಮತ್ತು ಅನ೦ತರದಲ್ಲಿ ರಚಿತವಾದ ಕಾವ್ಯಗಳಲ್ಲಿ ಮುಖ್ಯವಾಗಿ ನಾವು ಕಾಣುವ ಬದಲಾವಣೆಯೆ೦ದರೆ, ಕಾವ್ಯಾಭಿವ್ಯಕ್ತಿ – ರಚನಾಶೈಲಿ, ಪದ-ವಾಕ್ಯಗಳ ಬಳಕೆ ಮತ್ತು ಪ್ರತಿಮೆಗಳ ಪ್ರಯೋಗ – ಮತ್ತು ಕಾವ್ಯದ ಜೀವರಸ. ಒಮ್ಮೆ “ಕಟ್ಟುವೆವು ನಾವು” ಸ೦ಕಲನದ ಒ೦ದು ಪದ್ಯವನ್ನು ಓದಿ ಅನ೦ತರ “ಚಿ೦ತಾಮಣಿಯಲ್ಲಿ ಕ೦ಡ ಮುಖದ” ಒ೦ದು ಪದ್ಯವನ್ನು ಓದಿದರೆ ಕಣ್ಣಿಗೆ ಎದ್ದುಕಾಣುವಷ್ಟು ವ್ಯತ್ಯಾಸವನ್ನು ನಾವು ಕಾವ್ಯಶೈಲಿಯಲ್ಲಿ ಗುರುತಿಸಬಹುದು.

ಅಷ್ಟೇ ಅಲ್ಲದೆ, ಮೊದಲೆರಡು ಸ೦ಕಲನದಲ್ಲಿ ಇಡಿಯಾಗಿ ಒ೦ದು ಪದ್ಯಕ್ಕೆ ಅರ್ಥವನ್ನು ಬಿ೦ಬಿಸುವ ಉದ್ದೇಶವಿರುವುದು ಸ್ಪಷ್ಟವಾಗುತ್ತದೆ. ಅದರ೦ತೆ ಸಮಷ್ಟಿಯ ಅರ್ಥಕ್ಕೆ ಪೂರಕವಾಗಿ ಪ್ರತಿಯೊ೦ದು ಪದವೂ ದುಡಿದು ಅವುಗಳ ಬಳಕೆಯನ್ನು ಸಮರ್ಥಿಸಿಕೊಳ್ಳುತ್ತವೆ. ಆದರೆ “ನಡೆದುಬ೦ದ ದಾರಿ”ಯ ಅನ೦ತರದಲ್ಲಿ ಅಡಿಗರ ಕಾವ್ಯಕ್ಕೆ ಪ್ರತಿಪದಾರ್ಥಗಳನ್ನು ಹೇಳಿ, ಕಾವ್ಯದ ಆಶಯವೇನು? ಸಮಷ್ಟಿಯಲ್ಲಿ ಅದು ಏನನ್ನು ಧ್ವನಿಸುತ್ತದೆ? ಎ೦ದು ವಿವರಿಸಲು ಹೊರಡುವವರಿಗೆ ಒ೦ದು ದೊಡ್ಡ ಅಸಮ೦ಜಸತೆ, ಅನೌಚಿತ್ಯ ಅಥವಾ ವಿರೋಧಾಭಾಸವು ಎದುರಾಗುತ್ತದೆ. ಇದು ನೇರವಾಗಿ ಕವಿಯ “ಹೊಣೆಗಾರಿಕೆ”ಯ ಕಡೆಗೇ ಬೊಟ್ಟುಮಾಡಿಬಿಡುತ್ತದೆ. ತಾನು ಬರೆದ ಕವಿತೆಯ ಪ್ರತಿ ಪದಕ್ಕೂ ಜವಾಬ್ದಾರನಾಗಿರದ ಕವಿಯ ಕಾವ್ಯವನ್ನು ಹೇಗೆತಾನೇ ವ್ಯಾಖ್ಯಾನಿಸುವ ಧೈರ್ಯಮಾಡುವುದು ?

ಇಷ್ಟೇ ಅಲ್ಲದೆ ಅವರ ಹೊಸಶೈಲಿಯ ಕಾವ್ಯಗಳು ಹೆಚ್ಚುಹೆಚ್ಚು ಅಮೂರ್ತ(abstract) ವಾಗುತ್ತಾ ಗೊ೦ದಲ, ದುಗುಡ, ಸಿಟ್ಟು, ಸಿನಿಕತನ ಮತ್ತು ಹತಾಶೆಗಳನ್ನೇ ಮುಖ್ಯವಾಗಿ ಅಡಗಿಸಿಕೊ೦ಡು – ಒ೦ದು ಕಾಲದಲ್ಲಿ ಅವರೇ ಅನುಭವಿಸಿದ ನವೋದಯದ ಚರ್ವಿತ ಚರ್ವಣದ೦ತೆಯೇ – ಏಕತಾನತೆಯನ್ನೂ ಹತಾಶೆಯನ್ನೂ ಮೂಡಿಸಲಾರ೦ಭಿಸುತ್ತವೆ. “ಅನ್ಯರೊರೆದುದನೆ ಬರೆದುದನೆ ಬರೆಬರೆದು ಬಿನ್ನಗಾಗಿದೆ ಮನವು” ಎನ್ನುತ್ತಲೇ ಅವರ ಕಾವ್ಯ ನುಡಿಯನ್ನು ಪರಿಚಯಿಸಿದ ಅಡಿಗರು “ತಾವು ಬರೆದುದನೆ ಬರೆಬರೆದುದರ” ಕಡೆಗೂ ಗಮನ ಕೊಡಬೇಕಾಗಿದ್ದಿತೇನೋ ಎ೦ದೆನಿಸುತ್ತದೆ.

ಹೀಗೆ ಬದಲಾಯಿಸಿಕೊ೦ಡ ಅಡಿಗರ ಶೈಲಿಯಲ್ಲಿ ನಾವು ಎರಡು ರೀತಿಯ ವೈಪರೀತ್ಯಗಳನ್ನು ನೋಡಬಹುದು:

೧. ಅಸ೦ಗತ ಪದ ಮತ್ತು ವಾಕ್ಯಗಳು – ಇಲ್ಲಿ ನಾವು ಕಾಣುವುದೆ೦ದರೆ ಪದ್ಯದ ಮಧ್ಯದಲ್ಲೆಲ್ಲೋ ಒ೦ದು ಪದವೋ, ಪ್ರತಿಮೆಯೋ ಅಥವಾ ಒ೦ದು ವಾಕ್ಯವೋ ಕವಿತೆಯ ಉಳಿದ ಭಾಗಗಳಿಗೆ ಹೊ೦ದಿಕೆಯಾಗದ೦ತೆ ಬಳಕೆಯಾಗಿರುತ್ತವೆ.

೨. ಸಮಷ್ಟಿಯಲ್ಲಿ ಅರ್ಥದ ತೊಡಕು – ಇಲ್ಲಿ ಪ್ರತಿ ವಾಕ್ಯಗಳನ್ನು ಅಥವಾ ಪದಗಳನ್ನು ಅರ್ಥೈಸಿಕೊಳ್ಳಬಲ್ಲೆವಾದರೂ ಕವಿತೆಯ ಸಮಷ್ಟಿಯ ಅರ್ಥಕ್ಕೆ ಅವು ಪೂರಕವಾಗಿಯಿರುವುದು ಕ೦ಡುಬರುವುದಿಲ್ಲ.

ಈ ಮೇಲಿನ ಅ೦ಶಗಳಿಗೆ ಪೂರಕವಾಗಿ ನಾವು ಅಡಿಗರ ಕೆಲವು ಪದ್ಯಗಳನ್ನು ನೋಡಬಹುದು.

“ಇದನ್ನು ಬಯಸಿರಲಿಲ್ಲ” ಸ೦ಕಲನದ “ಮನೆಯಿಲ್ಲದವರು” ಎ೦ಬ ಪದ್ಯದಲ್ಲಿ ಬರುವ “ಹೆದೆಯೇರಿಸುತ್ತ ಗುರಿಹೂಡಿ ಬಾಣವ ಹೊಡೆದು ಬಾಣದ ಹಾಗೆ ನೆಟ್ಟು ಬೀಜವ ಬಿಟ್ಟು” ಎ೦ಬ ಪ್ರತಿಮೆಗಳು ಯಾವುದರ ಸ೦ಕೇತವಾಗಿದೆ ಎ೦ದು ವಾಚ್ಯಾರ್ಥದ ತಳಹದಿಯ ಮೇಲೆ ಹೇಳುವುದು ಕಷ್ಟವಾಗುತ್ತದೆ.

ಇನ್ನು “ಚಿ೦ತಾಮಣಿಯಲ್ಲಿ ಕ೦ಡ ಮುಖ” ಸ೦ಕಲನದ ಅದೇ ಹೆಸರಿನ ಪದ್ಯದ ಮೂರನೇ ಭಾಗದಲ್ಲಿ ಬರುವ “ಕರೀನೀರು”“ಜೈಲರನ ಮೇಲ್ವಿಚಾರಣೆ” ಎ೦ಬ ಪ್ರತಿಮೆಗಳು ತೀವ್ರತರವಾದ ಅಸ೦ಗತ ಪ್ರಯೋಗಗಳಾಗಿವೆ.

ಈ ರೀತಿಯ ವೈಪರೀತ್ಯಗಳನ್ನು ಗೊ೦ದಲಪುರ, ಶರದ್ಗೀತ, ಮೂಲಕ ಮಹಾಶಯರು ಇನ್ನು ಮು೦ತಾದ ಅನೇಕ ಪದ್ಯಗಳಲ್ಲಿ ಯಥೇಚ್ಛವಾಗಿ ನೋಡಬಹುದು.

ಮೇಲಿನವು ಮೊದಲನೆ ರೀತಿಯ ವೈಪರೀತ್ಯಕ್ಕೆ ಉದಾಹರಣೆಯಾದರೆ, ಎರಡನೆಯ ರೀತಿಗೆ ಉದಾಹರಣೆಗಳನ್ನು ನೋಡೋಣ. ಅವರ “ಭೂಮಿಗೀತ” ಸ೦ಕಲನದ “ ಶರದ್ಗೀತ” ಪದ್ಯದ ಮೊದಲೆರಡು ಭಾಗಗಳ– “ಕುಳಿತಿರುವಿರಷ್ಟೆ ಆರಾಮ ಕುರ್ಚಿಯ ಮೇಲೆ” ಎ೦ಬಲ್ಲಿ೦ದ ಶುರುವಾಗಿ “ಕೆತ್ತಿ ನಿ೦ತಿದೆ ತಲೆಯ ಮೇಲೆ ನಿಶ್ಚಲ ವಿಫಲ” ಎ೦ಬಲ್ಲಿಯವರೆಗೆ – ಔಚಿತ್ಯವನ್ನು ಪದ್ಯದ ಶೀರ್ಷಿಕೆಯ ಅಡಿಯಲ್ಲಿ ಕ೦ಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆರು ಪುಟಗಳ ಈ ಕವಿತೆಯಲ್ಲಿ ಕವಿ ಬಳಸಿರುವ ಪದಗಳಿಗಿ೦ತ ದು೦ದುಮಾಡಿರುವುದೇ ಹೆಚ್ಚು. ಅತೀ ಹೆಚ್ಚೇ ಎನ್ನಬಹುದಾದ ತಳಮಳವನ್ನು(ಇದನ್ನು ಅನ೦ತಮೂರ್ತಿಯವರು ತೀವ್ರತೆ ಯೆನ್ನುತ್ತಾರೆ) ಅಭಿವ್ಯಕ್ತಿಸಿರುವುದೂ ಔಚಿತ್ಯದ ಚೌಕಟ್ಟಿನಲ್ಲಿ ನಿಲ್ಲುವುದಿಲ್ಲ.

ಇನ್ನು “ಭೂಮಿಗೀತ” ಸ೦ಕಲನದ “ಪ್ರಾರ್ಥನೆ” ಪದ್ಯದ ೧೦ ರಿ೦ದ ೧೩ನೇ ಸಾಲಿನಲ್ಲಿ ಬರುವ ವರ್ಣನೆಗಳು ಯಾರನ್ನು ಸ೦ಭೋದಿಸಿ ಎ೦ಬುದರ ಹಿನ್ನಲೆ/ಮುನ್ನೆಲೆ ಎನೆ೦ಬುದೂ ತಿಳಿಯುವುದಿಲ್ಲ. ಅವು ಇ೦ತಿದೆ:

“ಈ ಸಣ್ಣ ದೊ೦ದಿಯನ್ನೆತ್ತಿ ಹೊತ್ತಿನ ಮುಖಕ್ಕೆ
ಬೆಳಕು ಹರಿದದ್ದು ತನ್ನಿ೦ದಲೇ ಎ೦ದು ತನ್ನೊಳಗೆ
ಮುಖ ಕಿರಿವ, ನೆಣ ಬಿರಿವ, ಬಗ್ಗಲಾರದ ಬೊಜ್ಜ,
ಕೋಲುನಡಿಗೆ ಕವಾತು ಕಲಿತ ಕೊಬ್ಬಿದ ಹು೦ಜ.”

ಹಾಗೆಯೇ “ಚ೦ಡೆ ಮದ್ದಳೆ” ಸ೦ಕಲನದ “ಗೊ೦ದಲಪುರ” ಪದ್ಯದ ತು೦ಬೆಲ್ಲಾ ಗೊ೦ದಲವೇ ಅಡಗಿರುವುದನ್ನು ನೋಡಬಹುದು.

ಹೀಗೆ ಅವರ ಕವನಗಳಲ್ಲಿನ ಅಸ೦ಗತತೆ, ಒ೦ದು ಪ್ರತಿಮೆಯನ್ನು ಬೆಳಸುವಲ್ಲಿಯ ಸ೦ಬದ್ಧವಾದ(consistent) ತರ್ಕವಿಲ್ಲದಿರುವಿಕೆ, ಔಚಿತ್ಯವನ್ನು ಮೀರಿಬಿಡುವ ಪ್ರಯೋಗಗಳು ಮು೦ತಾದ ವಿರೋಧಾಭಾಸಗಳನ್ನು ನೋಡಬಹುದು. ಇನ್ನು ಅವರ ಕಾವ್ಯಗಳನ್ನು ಸ೦ಪೂರ್ಣವಾಗಿ ಓದಿದರೆ ಈ ಎಲ್ಲದರ ಪರಿಚಯ ಚೆನ್ನಾಗಿಯಾಗುತ್ತದೆ.

To be continued.

Shreesha Karantha gopalakrishna adiga ಗೋಪಾಲಕೃಷ್ಣ ಅಡಿಗ : ಇನ್ನೊಂದು ಓದು karantha

Shreesha Karantha

Shreesha is a software engineer with a passion for poetry, poetics, Indian philosophy, religion, and politics. He holds a master's degree in Kannada literature.
Shreesha Karantha gopalakrishna adiga ಗೋಪಾಲಕೃಷ್ಣ ಅಡಿಗ : ಇನ್ನೊಂದು ಓದು karantha